ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಹೊಟ್ಟೆಯೊಳಗಿನ ಬೆಂಕಿ: ಕೆರೊಲಾಯಿ ಕಿಪಲೂದಿ ಅವರ ಹಂಗೇರಿಯನ್‌ ಕಥೆ

ಹಂಗೇರಿಯನ್ ಮೂಲ: ಕೆರೊಲಾಯಿ ಕಿಪಲೂದಿ ಕನ್ನಡಕ್ಕೆ: ಎಚ್.ಆರ್. ಸುರೇಶ Updated:

ಅಕ್ಷರ ಗಾತ್ರ : | |

Prajavani

ಆತ ಅಲ್ಲಿನ ಹೆಸರಾಂತ ಚಿಕಿತ್ಸಕ. ಶಲ್ಯ ಚಿಕಿತ್ಸೆಯಲ್ಲಿ ಆತನದು ಎತ್ತಿದ ಕೈ. ಅಂತಲೇ ಅವನ ಹೆಸರು ದೂರದೂರದವರೆಗೂ ಹರಡಿತ್ತು; ಮಾತ್ರವಲ್ಲ ಸುತ್ತಮುತ್ತಲಿನಲ್ಲಿ ಆತನಿಗೆ ಸರಿಸಮಾನರಾದ ಶಸ್ತ್ರಚಿಕಿತ್ಸಕರ‍್ಯಾರೂ ಇರಲಿಲ್ಲ.

ಅದೊಂದು ದಿನ, ಎಂದಿನಂತೆ ತನ್ನ ಕರ್ತವ್ಯವನ್ನು ಪೂರೈಸಿ ಚಿಕಿತ್ಸಾಲಯ ಮುಚ್ಚಲು ಸಹಾಯಕನಿಗೆ ಹೇಳಿ ಹೊರಡಲು ಅಣಿಯಾಗುತ್ತಿದ್ದ. ಆಗ ಯಾರೋ ಒಬ್ಬ ಬಾಗಿಲು ಬಡಿದ. ಅನುಮತಿಗೂ ಕಾಯದೇ ಒಳಬಂದು ‘ತಾನು ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿರುವುದರಿಂದ ಅವರನ್ನು ಭೇಟಿ ಆಗಲೇಬೇಕು’ ಎಂದು ಸಹಾಯಕನೆದುರು ಹೇಳಿಕೊಂಡ. ಸ್ವಲ್ಪ ಇರಿ, ಒಳಗೆ ಕಳುಹಿಸಬಹುದೇ ಎಂದು ವೈದ್ಯರನ್ನು ಕೇಳುತ್ತೇನೆ ಎಂದ ಸಹಾಯಕ. ಆದರೆ ‘ನನ್ನಿಂದ ಒಂದರೆಕ್ಷಣವೂ ತಡೆದುಕೊಳ್ಳುವುದು ಸಾಧ್ಯವಿಲ್ಲ’ ಎಂದ ಬಂದವ. ಹೊರಗಿನ ಈ ಮಾತುಗಳನ್ನು ಇದ್ದಲ್ಲಿಂದಲೇ ಕೇಳಿಸಿಕೊಂಡ ವೈದ್ಯ ಸಮವಸ್ತ್ರ ಧರಿಸಿ ‘ಅವರನ್ನು ಒಳಗೆ ಕಳುಹಿಸು’ ಎಂದು ಸಹಾಯಕನಿಗೆ ಹೇಳಿದ.

ಸಹಾಯಕ ಒಳಗೆ ಹೋಗುವಂತೆ ಹೇಳುವ ಮುನ್ನವೇ ಬಂದ ವ್ಯಕ್ತಿ ವೈದ್ಯರಿದ್ದ ಕೊಠಡಿಯೊಳಗೆ ನುಗ್ಗಿದ. ಒಳಗೆ ಬಂದವ ಉತ್ತಮ ಕುಲದವನಂತೆ ಕಂಡುಬರುತ್ತಿದ್ದ. ಬಣ್ಣಗೆಡುತ್ತಿದ್ದ ಮುಖ, ಭೀತಿಯ ಹಾವ-ಭಾವ ಆತನ ಶಾರೀರಿಕ ಸ್ಥಿತಿ-ಗತಿಯನ್ನು ತೆರೆದಿಡುತ್ತಿದ್ದವು. ಆತ ತನ್ನ ಬಲಗೈಯನ್ನು ಪಟ್ಟಿಯೊಂದರಿಂದ ಕೊರಳಿಗೆ ಜೋತುಬಿಟ್ಟುಕೊಂಡಿದ್ದ. ನೋವನ್ನು ಸಹಿಸಲು ಪ್ರಯಾಸಪಡುತ್ತಿದ್ದ. ತನ್ನನ್ನು ತಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಆತನಿಂದ ಆಗುತ್ತಿರಲಿಲ್ಲ. ಬೆಚ್ಚಿ ಬೀಳಿಸುವಂಥ ಚೀತ್ಕಾರವನ್ನು ಆತ ಹೊರಡಿಸುತ್ತಿದ್ದ.

‘ದಯವಿಟ್ಟು ಕುಳಿತುಕೊಳ್ಳಿ. ನನ್ನಿಂದ ಏನಾಗಬೇಕು ಹೇಳಿ’ ಶಸ್ತ್ರಚಿಕಿತ್ಸಕ ಕೇಳಿದ.

‘ಕಳೆದ ಒಂದು ವಾರವಾಯ್ತು; ನಿದ್ರೆ ಎಂಬುದೇ ನನ್ನ ಬಳಿ ಸುಳಿದಿಲ್ಲ. ಬಲಗೈ ತೊಂದರೆಗೆ ಈಡಾಗಿದೆ. ಆ ತೊಂದರೆ ಏನೆಂದು ಹೇಳುವುದು ನನ್ನಿಂದ ಸಾಧ್ಯವಿಲ್ಲ. ಬಹುತೇಕ ಇದು ಕ್ಯಾನ್ಸರ್‌ನಂಥ ಭಯಾನಕ ರೋಗವೇ ಇರಬೇಕು ಎನಿಸುತ್ತದೆ. ಮೊದಲೆಂದೂ ಈ ತೊಂದರೆ ನನ್ನನ್ನು ಇಷ್ಟು ಕಾಡಿರಲಿಲ್ಲ. ಆದರೆ ಈಗ ಬಲಗೈಗೆ ಬೆಂಕಿ ಬಿದ್ದ ಅನುಭವ ಆಗುತ್ತಿದೆ. ಇದರಿಂದಾಗಿ ಒಂದರೆಕ್ಷಣವೂ ನೆಮ್ಮದಿ ಇಲ್ಲದಂತಾಗಿದೆ. ನೋವು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದ್ದು ಅಸಹನೀಯವಾಗುತ್ತಿದೆ. ಹಾಗಾಗಿ ನಾನು ನಿಮ್ಮಲ್ಲಿಗೆ ಬಂದಿದ್ದೇನೆ. ಈ ನೋವು ಇನ್ನು ಒಂದು ತಾಸು ಹೀಗೆಯೇ ಇದ್ದರೆ ನನಗೆ ಹುಚ್ಚೇ ಹಿಡಿಯುತ್ತದೆ. ತಾವು ದಯವಿಟ್ಟು ಈ ಕೈಯನ್ನು ಸುಟ್ಟುಬಿಡಿ ಇಲ್ಲವೇ ಕತ್ತರಿಸಿ ಎಸೆಯಿರಿ ಅಥವಾ ಕೈ ಇಲ್ಲದಂತೆ ಆಗಲು ಏನನ್ನಾದರೂ ಮಾಡಿ....’ ಒಂದೇ ಉಸಿರಿನಲ್ಲಿ ಎಲ್ಲವನ್ನೂ ಹೇಳಿ ಕೈಗೆ ಶಸ್ತ್ರಚಿಕಿತ್ಸೆ ನಡೆಸುವಂತೆ ವೈದ್ಯರಲ್ಲಿ ಅಂಗಲಾಚಿದ.

‘ನಿಮಗೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯವೇನೂ ಎದುರಾಗಲಿಕ್ಕಿಲ್ಲ’ ಎಂದು ವೈದ್ಯ ಸಮಾಧಾನ ಮಾಡಲು ಯತ್ನಿಸುತ್ತಿದ್ದಂತೆ ‘ಇಲ್ಲ, ಇಲ್ಲ, ನೀವು ಶಸ್ತ್ರಚಿಕಿತ್ಸೆ ಮಾಡಲೇಬೇಕು. ರೋಗಪೀಡಿತ ಭಾಗವನ್ನು ಕತ್ತರಿಸುವುದರ ಹೊರತಾಗಿ ಬೇರೆ ಉಪಾಯವೇ ಇಲ್ಲ. ನೀವು ಶಸ್ತ್ರಚಿಕಿತ್ಸೆ ಮಾಡದಿದ್ದಲ್ಲಿ ನಾನು ನಿಮ್ಮಲ್ಲಿಗೆ ಬಂದುದಕ್ಕೆ ಔಚಿತ್ಯವಾದರೂ ಏನು ಉಳಿಯುತ್ತದೆ. ಆದ್ದರಿಂದ ನೀವು ಶಸ್ತ್ರಚಿಕಿತ್ಸೆ ಮಾಡಲೇಬೇಕು. ಇದರ ಹೊರತಾಗಿ ಬೇರೆ ಯಾವುದರಿಂದಲೂ ನನಗೆ ಗುಣ ಕಾಣದು’ ಎಂದು ರೋಗಿ ಚೀರಿದ.

ಕೊರಳಿಗೆ ಜೋತುಬಿದ್ದಿದ್ದ ಪಟ್ಟಿಯೊಳಗೆ ಅವಿತಿದ್ದ ಕೈಯನ್ನು ಕಷ್ಟಪಟ್ಟು ಮೇಲೆ ಆಡಿಸಿದ.

‘ವೈದ್ಯರೇ, ನಿಮಗೆ ನನ್ನ ಕೈ ಮೇಲೆ ಗಾಯವೇನೂ ಕಾಣಿಸಲಿಕ್ಕಿಲ್ಲ. ಗಾಯ ಕಾಣದಿದ್ದರಿಂದ ನೀವು ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಇದು ಅಂಥ ಅಸಾಧಾರಣವಾದ ಆಂತರಿಕ ಗಾಯ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಚಿಸುವೆ.’

‘ಪತ್ತೆಯೇ ಆಗದ ರೋಗಕ್ಕೆ ಚಿಕಿತ್ಸೆ ನೀಡಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವ ಇಷ್ಟ ನನಗಿಲ್ಲ’ ಸರ್ಜನ್ ಖಡಾಖಂಡಿತವಾಗಿ ಹೇಳಿದ. ಕೈಯನ್ನು ಪರೀಕ್ಷಿಸಿ ಚಕಿತನಾದ. ಆ ಕೈಯಲ್ಲಿ ರೋಗಿ ಹೇಳಿದಂಥ ನೋವನ್ನು ತೆರೆದಿಡುವ ಯಾವುದೇ ಕುರುಹೂ ಇರಲಿಲ್ಲ. ಅದು ಸಂಪೂರ್ಣ ಆರೋಗ್ಯಕರ ಸ್ಥಿತಿಯಲ್ಲಿಯೇ ಇರುವಂತೆ ಕಾಣಿಸಿತು. ಆದರೆ ಮತ್ತೊಂದು ದಿಶೆಯಿಂದ ನೋಡಿದಾಗ ಈ ಅಪರಿಚಿತ ವ್ಯಕ್ತಿ ಭಯಾನಕ ನೋವಿನಿಂದ ಬಳಲುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು.

‘ನಿಮಗೆ ನೋವೆಲ್ಲಿದೆ?’ ವೈದ್ಯ ಕೇಳಿದ.

ರೋಗಪೀಡಿತ ವ್ಯಕ್ತಿ ಕೈನ ಎರಡೂ ರಕ್ತ ನಾಳಗಳ ನಡುವಿನ ಭಾಗವೊಂದರಲ್ಲಿ ವೃತ್ತಾಕಾರವಾಗಿ ಬೆರಳನ್ನಾಡಿಸಿ ಸ್ಥಳವನ್ನು ತೋರಿಸಿದ. ಆ ಭಾಗದ ಮೇಲೆ ಸರ್ಜನ್ ಬೆರಳು ಇಟ್ಟಾಕ್ಷಣ ರೋಗಿ ಒಮ್ಮೆಲೇ ಕೈಯನ್ನು ಎಳೆದುಕೊಂಡ.

‘ನೋವು ಇದೇ ಭಾಗದಲ್ಲಿದೆಯೇ?’

‘ಹೌದು, ಅದೇ ಭಾಗದಲ್ಲಿದೆ ನೋವು. ತಡೆಯಲು ಸಾಧ್ಯವಾಗದ ನೋವು.’

‘ನೀವು ತೋರಿಸಿದ ಭಾಗದಲ್ಲಿ ನಾನು ಬೆರಳು ಇಟ್ಟಾಗ ಜೋರಾಗಿ ಒತ್ತಿದ ಅನುಭವ ಆಯಿತೆ?’

ಸರ್ಜನ್‍ನ ಈ ಪ್ರಶ್ನೆಗೆ ರೋಗಿ ಉತ್ತರವನ್ನೇನೂ ಕೊಡಲಿಲ್ಲ. ಆದರೆ ಆತನ ಕಣ್ಣಿನಿಂದ ಸುರಿದ ನೀರು ಎಲ್ಲವನ್ನೂ ತೆರೆದಿಟ್ಟಿತು.

‘ಅಚ್ಚರಿ ಆಗುವಂತಿದೆ. ಏನೊಂದೂ ಅರ್ಥವಾಗುತ್ತಿಲ್ಲ’ ಸರ್ಜನ್ ಬಾಯಿಂದ ಅರಿವೇ ಇಲ್ಲದೇ ಹೊರಬಿತ್ತು ಈ ಮಾತು.

‘ನನಗೆ ಬಡಿದುಕೊಂಡಿರುವ ಬಾಧೆ ಎಂಥದು ಎಂಬುದನ್ನು ಗುರುತಿಸಲು ನನಗೇ ಸಾಧ್ಯವಾಗಿಲ್ಲ. ಆದರೂ ನೋವು ಈಗಲೂ ಇದೆ. ಹೀಗೆ ನೋವು ಅನುಭವಿಸುತ್ತ ಬದುಕುವುದಕ್ಕಿಂತ ಸಾಯುವುದೇ ಲೇಸು ಎನ್ನಿಸುತ್ತಿದೆ. ನೋವಿನ ದೆಸೆಯಿಂದಲೇ ನಾನು ಎಂದಾದರೊಂದು ದಿನ ಸಾಯುವುದು ನಿಶ್ಚಿತ ಡಾಕ್ಟ್ರೆ’ ರೋಗಿ ಕೀರಲು ಧ್ವನಿಯಲ್ಲಿ ಹೇಳಿದ.

ರೋಗಿಯ ಮಾತನ್ನು ಕೇಳಿದ ವೈದ್ಯ ತನ್ನಲ್ಲಿದ್ದ ವಿಶೇಷ ಉಪಕರಣದಿಂದ ಮತ್ತೊಮ್ಮೆ ಆತನನ್ನು ಪರೀಕ್ಷಿಸಿದ. ರೋಗಿಯ ದೇಹದ ಉಷ್ಣಾಂಶವನ್ನು ತಪಾಸಣೆ ನಡೆಸಿದ. ಕೈಯನ್ನು ಜಗ್ಗಿದ, ಕಾಲುಗಳನ್ನು ಒತ್ತಿದ, ಕುತ್ತಿಗೆಯನ್ನು ತಿರುಗಿಸಿದ. ಹೀಗೆಯೇ ಪ್ರತ್ಯೇಕ ಅಂಗವನ್ನೂ ಮುಟ್ಟಿ ತಟ್ಟಿ ಇಡೀ ದೇಹವನ್ನು ಅಂಗುಲಂಗುಲವಾಗಿ ಅವಲೋಕಿಸಿದ. ದೇಹದ ಚರ್ಮದ ಬಣ್ಣ ಉಳಿದ ಆರೋಗ್ಯವಂತ ಮನುಷ್ಯರಿಗೆ ಇರುವಂತೆಯೇ ಇತ್ತು. ರಕ್ತನಾಳಗಳೂ ಸಾಮಾನ್ಯವಾಗೇ ಇದ್ದವು. ಇಷ್ಟು ಮಾಡಿದರೂ ಅಂತಿಮವಾಗಿ ಈತನಿಗೆ ಆಗಿರುವುದಾದರೂ ಏನು ಎಂಬುದನ್ನು ತಿಳಿಯಲು ಸರ್ಜನ್‍ಗೆ ಸಾಧ್ಯವೇ ಆಗಲಿಲ್ಲ.

ವೈದ್ಯನ ಪರೀಕ್ಷೆ ಮುಗಿದ ನಂತರ ‘ಡಾಕ್ಟ್ರೆ, ಗಾಯವಾಗಿರುವ ಜಾಗವೀಗ ಕೆಂಪಾಗುತ್ತಿರುವಂತೆ ಕಾಣುತ್ತಿದೆ’ ರೋಗಿ ಗೊಣಗಿದ.

‘ಎಲ್ಲಿ?’ ತಕ್ಷಣ ಕೇಳಿದ ಸರ್ಜನ್.

ಆಗ ರೋಗಿ ಬಲಗೈ ಹಿಂಭಾಗದ ಒಂದು ಭಾಗದಲ್ಲಿ ವೃತ್ತಾಕಾರವಾಗಿ ಬೆರಳನ್ನು ಆಡಿಸುತ್ತ ‘ಇಲ್ಲಿ’ ಎಂದ.

ರೋಗಿ ತೋರಿಸಿದ ಭಾಗವನ್ನು ವೈದ್ಯ ಪರೀಕ್ಷಿಸಿದ. ಕೆಂಪಾದ ಭಾಗವೇನೂ ಕಾಣಲಿಲ್ಲ. ಎಂಥ ಹುಚ್ಚು ಸ್ವಭಾವದ ರೋಗಿಯಿಂದ ಪಾರಾಗಬೇಕಾದ ಪರಿಸ್ಥಿತಿ ತನಗೆ ಬಂದಿದೆಯಲ್ಲ ಎಂದು ಸರ್ಜನ್ ಯೋಚಿಸಿದ. ರೋಗಿಯನ್ನೇ ದಿಟ್ಟಿಸುತ್ತ ‘ನೀವು ಮೂರ್ನಾಲ್ಕು ದಿನವಾದರೂ ಇಲ್ಲಿಯೇ ಇರಬೇಕಾಗುತ್ತದೆ. ಆಗ ಮಾತ್ರ ನಾನು ಸಂಪೂರ್ಣ ತಪಾಸಣೆ ಮಾಡಬಹುದು; ಏನಾದರೂ ಚಿಕಿತ್ಸೆ ನೀಡಬಹುದು’ ಎಂದ ಸರ್ಜನ್.

‘ಮೂರ್ನಾಲ್ಕು ದಿನ!’ ಗಾಬರಿಗೊಂಡವನಂತೆ ಅಚ್ಚರಿಯ ಧ್ವನಿಯಲ್ಲಿ ಕೇಳಿದ ರೋಗಿ ‘ಡಾಕ್ಟ್ರೇ, ಮೂರ್ನಾಲ್ಕು ದಿನವಿರಲಿ ಶಸ್ತ್ರಕ್ರಿಯೆಗಾಗಿ ಒಂದೇ ಒಂದು ನಿಮಿಷವೂ ಕಾಯುವುದು ನನ್ನಿಂದ ಸಾಧ್ಯವಿಲ್ಲ. ನನ್ನ ಈ ಮಾತಿನಿಂದ ಇವನೆಲ್ಲೋ ಹುಚ್ಚನಿರಬೇಕು ಎನಿಸಬಹುದು. ನೀವು ಹಾಗೆ ಯೋಚಿಸಬೇಕಾದ ಅಗತ್ಯವೇನಿಲ್ಲ. ಇದು ದೇಹದ ಒಳಗೆ ಆಗಿರುವ ಗಾಯ. ಆದ್ದರಿಂದ ಸಹಿಸಲಸಾಧ್ಯವಾದ ತೊಂದರೆ ನೀಡುತ್ತಿದೆ. ಕೂಡಲೇ ಶಸ್ತ್ರಕ್ರಿಯೆ ನಡೆಸಿ, ಘಾಸಿಗೊಂಡ ಭಾಗವನ್ನು ಕಿತ್ತೆಸೆಯಿರಿ. ಇದೊಂದನ್ನು ಮಾತ್ರ ನಾನು ನಿಮ್ಮಿಂದ ಬಯಸುತ್ತೇನೆ’ ಎಂದು ವೈದ್ಯನ ಮನಸ್ಸನ್ನು ಓದಿದವನಂತೆ ಒಂದೇ ಉಸಿರಿನಲ್ಲಿ ರೋಗಿ ಹೇಳಿದ. ಅವನ ಸ್ವರದಲ್ಲಿ ಬಣ್ಣಿಸಲಸಾಧ್ಯವಾದ ಆಗ್ರಹವಿತ್ತು.

‘ಸನ್ಮಾನ್ಯರೆ, ಇಲ್ಲ, ನಾನು ಈ ಕೆಲಸವನ್ನು ಮಾಡಲಾರೆ’ ಸರ್ಜನ್ ಸಹ ಅಷ್ಟೇ ಆವೇಗ ಭರಿತನಾಗಿ ಹೇಳಿದ.

‘ಯಾಕಾಗುವುದಿಲ್ಲ?’

‘ಯಾಕೆಂದರೆ ನಿಮ್ಮ ಕೈಯಲ್ಲಿ ಕತ್ತರಿಸಿ ಎಸೆಯಬಹುದಾದಂಥ ಗಂಭೀರ ಸ್ವರೂಪದ ಸಮಸ್ಯೆಯೇನೂ ನನಗೆ ಗೋಚರಿಸುತ್ತಿಲ್ಲ. ನಿಮ್ಮ ಆ ಕೈ ನನ್ನ ಕೈನಷ್ಟೇ ಸ್ವಸ್ಥವಾಗಿದೆ.’

ವೈದ್ಯನ ಈ ಮಾತನ್ನು ಕೇಳಿದ ರೋಗಿ ಹೆಗಲಿಗೆ ಜೋತುಬಿಟ್ಟುಕೊಂಡಿದ್ದ ಚೀಲದಿಂದ ಸಾವಿರ ರೂ.ಗಳ ಕಟ್ಟೊಂದನ್ನು ತೆಗೆದು ಮೇಜಿನ ಮೇಲಿಡುತ್ತ-

‘ನಾನೊಬ್ಬ ಹುಚ್ಚನಿರಬೇಕು. ನಿಮ್ಮನ್ನು ಕೆಣಕುವುದಕ್ಕೆಂದೇ ನಾನು ಈ ರೀತಿ ಮಾಡುತ್ತಿರಬೇಕು ಎಂದು ನೀವು ಯೋಚಿಸುತ್ತಿರಬಹುದು. ಈ ವಿಷಯವಾಗಿ ನಾನು ಗಂಭೀರವಾಗಿಯೇ ಚಿಂತಿಸಿದ್ದೇನೆ. ನಿಮ್ಮ ಕೆಲಸಕ್ಕಾಗಿ ನಿಮಗೆ ಸಾವಿರ ರೂಪಾಯಿಗಳ ಫೀಸನ್ನು ಕೊಡಲು ಸಿದ್ಧನಿದ್ದೇನೆ. ಆದ್ದರಿಂದ ದಯವಿಟ್ಟು ವಿಳಂಬ ಮಾಡದೆ ನನ್ನ ಕೈಗೆ ಶಸ್ತ್ರಕ್ರಿಯೆ ನಡೆಸಿ’ ಎಂದು ಒತ್ತಾಯಿಸಿದ.

ಸರ್ಜನ್‍ನ ಸಿಟ್ಟು ಇನ್ನೂ ಇಳಿದಿರಲಿಲ್ಲ. ಕ್ರೋಧಭರಿತ ಸ್ವರದಲ್ಲಿ ‘ನೀವು ಜಗತ್ತಿನ ಎಲ್ಲ ಐಶ್ವರ್ಯವನ್ನು ನನ್ನ ಕಾಲ ಬಳಿ ಸುರಿಯುತ್ತೇನೆಂದರೂ ನಾನು ಆರೋಗ್ಯ ಪೂರ್ಣವಾದ ಕೈಯನ್ನು ಕತ್ತರಿಸುವುದಿರಲಿ ಚಾಕುವಿನಿಂದ ಮುಟ್ಟುವ ಕೆಲಸವನ್ನೂ ಮಾಡಲಾರೆ, ತಿಳಿಯಿತೆ’ ಎಂದ.

‘ಯಾಕೆ ಮುಟ್ಟಲ್ಲ?’

‘ಯಾಕೆಂದರೆ ಇದು ನನ್ನ ವೃತ್ತಿಗೌರವಕ್ಕೆ ಅಪಮಾನ ಮಾಡುವಂಥ ಕೆಲಸ. ನಾನೇನಾದರೂ ನಿಮ್ಮ ಆ ಆರೋಗ್ಯವಂತ ಕೈಗೆ ಶಸ್ತ್ರಚಿಕಿತ್ಸೆ ಮಾಡಿದ್ದೇ ಆದರೆ ನನ್ನನ್ನು ಇಡೀ ಜಗತ್ತು ಮೂರ್ಖನೆನ್ನುತ್ತದೆ; ಅಷ್ಟೇ ಅಲ್ಲ ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಂಡು ಹಣ ಸುಲಿದವನೆಂಬ ಕಳಂಕವನ್ನೂ ನನಗೆ ಕಟ್ಟುತ್ತದೆ. ನಾನೊಬ್ಬ ಮಂದಬುದ್ಧಿಯ ವೈದ್ಯ, ಅಸ್ತಿತ್ವದಲ್ಲೇ ಇಲ್ಲದ ರೋಗವನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿದ ದಡ್ಡ ಎಂದು ಇಡೀ ಜನಸಮೂಹ ನನ್ನ ಹೆಸರಿನಲ್ಲಿ ಬೊಬ್ಬೆ ಹೊಡೆಯುತ್ತದೆ.’

ಸರ್ಜನ್‍ನ ಈ ಮಾತುಗಳಿಂದ ರೋಗಿ ಖಿನ್ನನಾದ.

‘ಒಳ್ಳೆಯದು ಸಾರ್, ಇದೇ ನಿಮ್ಮ ಅಂತಿಮ ತೀರ್ಮಾನವಾದರೆ ನನ್ನ ಮೇಲೊಂದಿಷ್ಟು ಕೃಪೆ ತೋರಿದರೆ ಸ್ವತಃ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತೇನೆ. ಆ ಶಸ್ತ್ರಚಿಕಿತ್ಸೆಗೆ ನನ್ನ ಎಡಗೈ ಸಹಕರಿಸದಿದ್ದರೂ ಸರಿ. ಆದರೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತರ ಅದಕ್ಕೆ ಮುಲಾಮು ಹಚ್ಚಿ ಪಟ್ಟಿಯನ್ನು ಕಟ್ಟಿಬಿಡಿ, ಅಷ್ಟು ಸಾಕು. ನಿಮ್ಮಿಂದ ಆಗಬೇಕಾದ ಉಪಕಾರ ಇದೊಂದೆ’ ಎಂದು ಹೇಳಿ ತನ್ನ ಕಿಸೆಯೊಳಗಿನಿಂದ ಚಾಕುವನ್ನು ತೆಗೆದ. ಎದುರಿಗಿದ್ದ ವೈದ್ಯ ಪ್ರತಿಕ್ರಿಯಿಸುವ ಮುನ್ನವೇ ಬಲಗೈಯನ್ನು ಕೊಯ್ದುಕೊಂಡುಬಿಟ್ಟ.

ಇದನ್ನು ಕಂಡು ‘ನಿಲ್ಲು!' ಸರ್ಜನ್ ಚೀರಿದ. ಹಿಡಿದಿದ್ದ ಚಾಕುವಿನಿಂದ ತನ್ನನ್ನು ತಾನು ಇರಿದುಕೊಂಡರೆ ಮುಂದೇನು ಎಂಬ ಭೀತಿ ಅವನದಾಗಿತ್ತು.

‘ಶಸ್ತ್ರಚಿಕಿತ್ಸೆ ಆಗಲೇಬೇಕೆಂಬ ಇಚ್ಛೆ ನಿಮ್ಮದಾಗಿದ್ದರೆ ಸರಿ, ಮಾಡುತ್ತೇನೆ’ ಎಂದು ಹೇಳಿ ಶಸ್ತ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳತೊಡಗಿದೆ. ರೋಗಿ ತೋರಿಸಿದ ಜಾಗವನ್ನು ಕೊಯ್ಯಲು ಅರಿವಳಿಕೆಯನ್ನು ನೀಡಿದ. ರಕ್ತವನ್ನು ನೋಡಿ ರೋಗಿ ವಿಚಲಿತನಾಗಬಾರದು ಎನ್ನುವ ಉದ್ದೇಶದಿಂದ ಮುಖವನ್ನು ತಿರುಗಿಸುವಂತೆ ಸರ್ಜನ್ ಹೇಳಿದ.

‘ಅದರ ಅಗತ್ಯವೇನಿಲ್ಲ’ ಎಂದು ದೃಢವಾಗಿ ಹೇಳಿದ ರೋಗಿ ‘ನೀವು ಎಲ್ಲಿ ಎಷ್ಟು ಕತ್ತರಿಸಬೇಕೆಂಬುದಕ್ಕೆ ನಾನು ನಿಮಗೆ ಮಾರ್ಗದರ್ಶನ ನೀಡಬೇಕಾಗುತ್ತದೆ’ ಎಂದ. ಶಸ್ತ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತದೇಕಚಿತ್ತನಾಗಿ ನೋಡುತ್ತ ವೈದ್ಯನ ಕಾರ್ಯಗಳಿಗೆ ಸಹಕರಿಸಿದ. ಈ ಸಂದರ್ಭದಲ್ಲಿ ಆತನ ಕೈಯೇನೂ ನಡುಗಲಿಲ್ಲ; ಅಷ್ಟೇ ಅಲ್ಲ ಹೇಗೆ, ಎಲ್ಲಿ, ಎಷ್ಟು ಕತ್ತರಿಸಬೇಕೆಂಬ ಬಗೆಗೆ ವೈದ್ಯನಿಗೇ ಮಾರ್ಗದರ್ಶನ ನೀಡಿದ ರೋಗಿ. ಗುರುತು ಮಾಡಲ್ಪಟ್ಟ ಭಾಗ ಕತ್ತರಿಸಲ್ಪಟ್ಟಾಗ ಹೆಗಲ ಮೇಲಿನಿಂದ ಭಾರ ಇಳಿಸಿದವನಂತೆ ನಿರಾಳವಾಗಿ ರೋಗಿ ಉಸಿರುಬಿಟ್ಟ.

‘ಈಗ ನೋವಾಗುತ್ತಿಲ್ಲವೆ?’ ಸರ್ಜನ್ ಕೇಳಿದ.

‘ಇಲ್ಲ. ಸ್ವಲ್ಪವೂ ಇಲ್ಲ’ ಎಂದು ನಗುತ್ತ ಹೇಳಿದ ರೋಗಿ ‘ನೀವು ಕತ್ತರಿಸಿ ತೆಗೆದ ಭಾಗದಲ್ಲಿ ಅದೆಷ್ಟು ಆರಾಮವೆನ್ನಿಸುತ್ತಿದೆ ಎಂದರೆ ರಣಗುಡುವ ಬಿಸಿಲಿನ ನಂತರ ಕೆಲಕಾಲ ತಂಗಾಳಿ ಬೀಸಿದಾಗ ಆಗುವ ಅನುಭವದಷ್ಟು. ಕೊಯ್ದ ಭಾಗದಿಂದ ರಕ್ತವನ್ನು ಹರಿಯಲು ಬಿಡಿ. ಅದರಿಂದ ನನಗೆ ಇನ್ನಷ್ಟು ಆರಾಮ ದೊರೆಯುತ್ತದೆ.’

ಶಸ್ತ್ರಕ್ರಿಯೆ ಆದ ನಂತರ ಆ ವ್ಯಕ್ತಿ ಬದಲಾಗಿಬಿಟ್ಟಿದ್ದ. ಅತ್ಯಂತ ಸಂತಸದಿಂದ ಸರ್ಜನ್‍ನ ಕೈಯನ್ನು ತನ್ನ ಎಡಗೈನಿಂದ ಹಿಡಿದೊತ್ತಿ ಅಭಿನಂದಿಸಿದ. ನಂತರ ತಾನು ಉಳಿದುಕೊಂಡಿದ್ದ ವಸತಿಗೃಹಕ್ಕೆ ತೆರಳಿದ. ಮುಂದಿನ ಕೆಲದಿನಗಳವರೆಗೆ ವೈದ್ಯ ಅವನಿದ್ದಲ್ಲಿಗೇ ಹೋಗಿ ಚಿಕಿತ್ಸೆ ನೀಡಿಬರುತ್ತಿದ್ದ. ಆ ವ್ಯಕ್ತಿಯೊಂದಿಗೆ ಒಡನಾಟ ಹೆಚ್ಚಿದಂತೆಲ್ಲ ಆತನ ಬಗೆಗೆ ಸರ್ಜನ್ ಆಕರ್ಷಿತನಾಗತೊಡಗಿದ. ಆತನಲ್ಲಿದ್ದ ವಿದ್ವತ್ತು, ಸೌಜನ್ಯಗಳನ್ನು ಗೌರವದಿಂದ ಕಾಣತೊಡಗಿದ. ಆತನ ನಡೆ-ನುಡಿಗಳಿಂದಾಗಿ ಆತ ಸಮೀಪದ ಪ್ರದೇಶದಲ್ಲೇ ಇರುವ ಶೀಲವಂತ, ಪ್ರತಿಷ್ಠಿತ ಪರಿವಾರಕ್ಕೆ ಸೇರಿದವನಿರಬೇಕು ಎನ್ನಿಸತೊಡಗಿತು ಸರ್ಜನ್‍ನಿಗೆ.

ಕೆಲದಿನಗಳಲ್ಲಿಯೇ ಗಾಯ ವಾಸಿಯಾಯಿತು. ರೋಗಿ ತನ್ನ ಊರಿಗೆ ತೆರಳಿದ.

**       **       **

ಮೂರು ವಾರ ಕಳೆದಿರಬೇಕು. ಆ ರೋಗಿ ಮತ್ತೊಮ್ಮೆ ವೈದ್ಯನೆದುರು ಪ್ರತ್ಯಕ್ಷನಾದ. ಆತನ ಕೈ ಮೊದಲಿನಂತೆಯೇ ಪಟ್ಟಿಯೊಂದರ ಸಹಾಯದಿಂದ ಕುತ್ತಿಗೆಗೆ ಜೋತುಬಿದ್ದಿತ್ತು. ಅದೇ ಕೈ. ಅದೇ ಭಾಗ. ಅದೇ ಬಾಧೆ. ಅದೇ ಚೀತ್ಕಾರ. ಅವನ ಮುಖ ಮೇಣದಂತಾಗಿತ್ತು. ಮುಖದ ತುಂಬ ಪ್ರೇತಕಳೆ ತುಂಬಿತ್ತು. ಸರ್ಜನ್‍ನನ್ನು ಸಮೀಪಿಸುತ್ತಿದ್ದಂತೆಯೇ ಎದುರಿಗಿದ್ದ ಕುರ್ಚಿಯೊಂದರಲ್ಲಿ ಧಸಕ್ಕನೆ ಕುಸಿದು ಕುಳಿತ. ಮಾತನ್ನೇ ಆಡದೆ ತನ್ನ ಬಲಗೈಯನ್ನು ಸರ್ಜನ್‍ನೆಡೆಗೆ ಚಾಚಿದ.

‘ಹಾ! ಸನ್ಮಾನ್ಯರೇ, ಹೇಳಿ, ಏನಾಯಿತು?’ ಸರ್ಜನ್ ಕೇಳಿದ.

‘ನಾನು ತೋರಿಸಿದ ಭಾಗವನ್ನು ನೀವು ಸರಿಯಾಗಿ ಕತ್ತರಿಸಿ ತೆಗೆದಿಲ್ಲ’ ಎಂದು ಗೋಳಾಡುತ್ತ ‘ಮತ್ತೆ ನೋವು ಆರಂಭವಾಗಿದೆ. ನನ್ನ ಸ್ಥಿತಿಯೀಗ ಮೊದಲಿಗಿಂತಲೂ ದುಸ್ತರವಾಗಿದೆ. ಬಹುತೇಕ ನಾನು ಚಿಂದಿ ಬಟ್ಟೆಯಂತಾಗಿದ್ದೇನೆ. ನಿಮಗೆ ಮತ್ತೊಮ್ಮೆ ತೊಂದರೆ ಕೊಡಬಾರದೆಂದು ಇಷ್ಟು ದಿನ ಸಹಿಸಿಕೊಂಡೆ. ಆದರೆ ನನ್ನಿಂದ ಯಾತನೆ ಅನುಭವಿಸುವುದು ಸಾಧ್ಯವಾಗಲಿಲ್ಲ. ಆದ್ದರಿಂದ ಮತ್ತೊಮ್ಮೆ ಶಸ್ತ್ರಕ್ರಿಯೆ ಮಾಡಿ’ ಎಂದು ಅಲವತ್ತುಕೊಂಡ ರೋಗಿ.

ಈ ಮುಂಚೆ ಆಪರೇಷನ್ ಮಾಡಿದ ಭಾಗವನ್ನು ವೈದ್ಯ ಪರೀಕ್ಷಿಸಿದ. ಗಾಯ ಮಾಯ್ದಿತ್ತು. ಹೊಸ ಚರ್ಮ ಬೆಳೆದಿತ್ತು. ನಾಡಿಬಡಿತ ಸಾಮಾನ್ಯವಾಗೇ ಇತ್ತು. ಜ್ವರವೂ ಇರಲಿಲ್ಲ. ಆದರೂ ಅವನ ದೇಹ ಕಂಪಿಸುತ್ತಿತ್ತು.

ಶಸ್ತ್ರಕ್ರಿಯೆಯ ಪುನರಾವರ್ತನೆ ಆಯಿತು. ಪ್ರತಿಯೊಂದೂ ಮೊದಲಿನಂತೆಯೇ ನಡೆಯಿತು. ಸರ್ಜನ್ ಶಸ್ತ್ರಕ್ರಿಚಿಕಿತ್ಸೆ ನಡೆಸುತ್ತಿದ್ದ. ರೋಗಿ ಹೇಗ್ಹೇಗೆ, ಎಲ್ಲೆಲ್ಲಿ, ಎಷ್ಟೆಷ್ಟು ಕತ್ತರಿಸಬೇಕೆಂಬ ನಿರ್ದೇಶನ ನೀಡುತ್ತಿದ್ದ. ಅದರಂತೆಯೇ ಎಲ್ಲ ನಡೆಯಿತು. ರೋಗಿಗೆ ಆರಾಮವಾದ ಅನುಭವವಾಯಿತು. ಆದರೆ ಈ ಬಾರಿ ಆತ ನಗಲಿಲ್ಲ. ಸರ್ಜನ್‍ಗೆ ಧನ್ಯವಾದವನ್ನು ಅರ್ಪಿಸುವಲ್ಲಿ ಮೊದಲಿದ್ದ ಅತ್ಯುತ್ಸಾಹ ತೋರಲಿಲ್ಲ. ರೋಗಿ ಅತ್ಯಂತ ಉದಾಸ ಭಾವನೂ, ದುಃಖಿಯೂ ಆಗಿದ್ದ.

‘ಇನ್ನೊಂದು ತಿಂಗಳಲ್ಲಿ ನಾನು ಮತ್ತೊಮ್ಮೆ ನಿಮ್ಮಲ್ಲಿಗೆ ಬಂದರೆ ನಿಮಗೆ ಅಚ್ಚರಿಯಾಗಬಾರದು’ ಹೊರಗೆ ಹೋಗುತ್ತ ಆತ ಹೇಳಿದ.

‘ನೀವು ಆ ರೀತಿ ಯೋಚಿಸಕೂಡದು’ ಅಷ್ಟೇ ಉದಾಸೀನ ಭಾವದಿಂದ ಸರ್ಜನ್ ಹೇಳಿದ.

‘ಇಲ್ಲ. ನನ್ನ ಮಾತು ನಿಜ. ನನ್ನ ಊಹೆ ಅದೆಷ್ಟು ನಿಶ್ಚಿತವೆಂದರೆ ಸ್ವರ್ಗಲೋಕದಲ್ಲಿ ದೇವರಿದ್ದಾನೆ ಎಂದು ಹೇಳುವ ಆಸ್ತಿಕರ ನಂಬುಗೆಯಷ್ಟು’ ಎಂದು ಅಷ್ಟೇ ಖಡಾಖಂಡಿತ ಧ್ವನಿಯಲ್ಲಿ ಹೇಳಿದ.

‘ಒಂದು ತಿಂಗಳು ಕಳೆಯಿತು. ರೋಗಿ ಬರಲಿಲ್ಲ. ಏತನ್ಮಧ್ಯೆ ಈ ವಿಲಕ್ಷಣ ರೋಗಿಯ ಕಾಯಿಲೆಗೆ ಸಂಬಂಧಿಸಿದಂತೆ ತನ್ನ ವೈದ್ಯಮಿತ್ರರಲ್ಲಿ ವಿಚಾರ-ವಿನಿಮಯ ನಡೆಸಿದ್ದ. ಪ್ರತಿಯೊಬ್ಬರೂ ವಿಭಿನ್ನ ಪರಿಹಾರಗಳನ್ನು ನೀಡಿದ್ದರು. ಆದರೆ ಇವರ್ಯಾರ ಪರಿಹಾರವೂ ಸರ್ಜನ್‍ಗೆ ತೃಪ್ತಿ ಕೊಡಲಿಲ್ಲ.

ಮತ್ತೆ ಕೆಲ ವಾರ ಕಳೆಯಿತು. ರೋಗಿ ಬರಲಿಲ್ಲ. ಬದಲಾಗಿ ಅವನಿಂದ ಪತ್ರವೊಂದು ಬಂದಿತ್ತು. ತನ್ನ ರೋಗಿಯ ಸ್ಥಿತಿ ಶಾಶ್ವತವಾಗಿ ಸುಧಾರಿಸಿರಬಹುದು ಎಂದುಕೊಂಡು ವೈದ್ಯ ಪತ್ರವನ್ನು ಓದತೊಡಗಿದ. ಪತ್ರದಲ್ಲಿನ ಒಕ್ಕಣೆ ಇಂತಿತ್ತು-

‘ಪ್ರಿಯ ಡಾಕ್ಟರ್, ನಾನು ನನ್ನ ಕಾಯಿಲೆ ಬಗೆಗೆ ನಿಮ್ಮನ್ನು ಕತ್ತಲಿನಲ್ಲಿ ಇಡಲು ಇಚ್ಛಿಸುವುದಿಲ್ಲ. ಇದರ ರಹಸ್ಯವನ್ನು ನನ್ನ ಸಾವಿನೊಡನೆ ಕೊಂಡೊಯ್ಯಬೇಕೆಂದು ಇಷ್ಟಪಡುವುದಿಲ್ಲ. ನನ್ನ ಭಯಾನಕ ರೋಗದ ಕಥೆಯನ್ನು ನಾನು ನಿಮಗೆ ತೆರೆದಿಡುತ್ತೇನೆ. ಈವರೆಗೆ ಮೂರು ಬಾರಿ ಈ ರೋಗದ ಆಕ್ರಮಣ ನನ್ನ ಮೇಲಾಗಿದೆ. ಇನ್ನಷ್ಟು ದಿನ ಇದರೊಡನೆ ಹೋರಾಡುವ ಸಾಮರ್ಥ್ಯ ನನ್ನಲ್ಲಿ ಉಳಿದಿಲ್ಲ. ಈಗಲೂ ಈ ಪತ್ರವನ್ನು ಏಕೆ ಬರೆಯುತ್ತಿದ್ದೇನೆಂದರೆ ನೀವು ಶಸ್ತ್ರಕ್ರಿಯೆ ಮಾಡಿ ತೆಗೆದು ಹಾಕಿದ ಭಾಗದ ಮಾಂಸಖಂಡಗಳ ಮೇಲೆ ಪ್ರತ್ಯೌಷಧಿಯಾಗಿ ಸುಟ್ಟು ಕರಕಲಾದ ಕಥೆಯ ಬೂದಿ ಲೇಪನಗೊಂಡಿದೆ’.

‘ಆರು ತಿಂಗಳ ಹಿಂದೆ ನಾನು ಅತ್ಯಂತ ನೆಮ್ಮದಿಯ ಮನುಷ್ಯನಾಗಿದ್ದೆ. ಸಂಪನ್ನನೂ, ಆರೋಗ್ಯವಂತನೂ ಆಗಿದ್ದೆ. ಪ್ರಾಯದವರನ್ನೂ ಆಕರ್ಷಿಸಬಲ್ಲ ಪ್ರತಿಯೊಂದು ವಸ್ತುವಿನಿಂದಲೂ ನನಗೆ ಸಂತಸ ದೊರೆಯುತ್ತಿತ್ತು. ಒಂದು ವರ್ಷದ ಹಿಂದಷ್ಟೇ ನನ್ನ ವಿವಾಹವಾಗಿತ್ತು; ಅದೂ ಪ್ರೇಮ ವಿವಾಹ. ನನ್ನ ಪತ್ನಿ ಬಹಳ ಸುಂದರಳೂ, ವಿನಮ್ರಳೂ, ಒಳ್ಳೆಯ ನಡತೆಯವಳೂ, ಸೌಜನ್ಯಶೀಲಳೂ ಆಗಿದ್ದಳು. ನಮ್ಮೂರಿನ ಜಹಗೀರದಾರರ ಮನೆಯಲ್ಲೇ ಆಕೆ ಕೆಲಸ ಮಾಡುತ್ತಿದ್ದಳು. ನನ್ನನ್ನಾಕೆ ಅಪಾರವಾಗಿ ಪ್ರೀತಿಸುತ್ತಿದ್ದಳು ಮತ್ತು ಅವಳ ಹೃದಯದಲ್ಲಿ ನನ್ನ ಬಗ್ಗೆ ಕೃತಜ್ಞತೆಯಿತ್ತು. ಆರು ತಿಂಗಳ ಸಮಯ ಅದೆಷ್ಟು ಚೆನ್ನಾಗಿತ್ತೆಂದರೆ ನನ್ನಿಂದ ಬಣ್ಣಿಸಲು ಸಾಧ್ಯವೇ ಇಲ್ಲ. ಪ್ರತಿಯೊಂದು ದಿನವೂ ಹಿಂದಿನ ದಿನಕ್ಕಿಂತ ಸಂತಸಭರಿತವಾಗಿರುತ್ತಿತ್ತು.’

‘ಕಾಲ ಉರುಳಿದಂತೆ ಇದೆಲ್ಲ ತೋರಿಕೆ ಎಂದು ನನಗೇಕೆ ಎನ್ನಿಸತೊಡಗಿತೋ ತಿಳಿಯದು. ಸಂತಸಮಯ ಕ್ಷಣದ ನಡುವೆಯೂ ದುಃಖವನ್ನೇ ಅರಸುವ ಮೂರ್ಖತನವನ್ನು ಮನುಷ್ಯರೇಕೆ ಮಾಡುತ್ತಾರೋ ಗೊತ್ತಿಲ್ಲ.’

‘ನನ್ನ ಪತ್ನಿ ಬಟ್ಟೆ ಹೊಲಿಯುವ ಚಿಕ್ಕದೊಂದು ಮೇಜನ್ನು ಇಟ್ಟುಕೊಂಡಿದ್ದಳು. ಅದರ ಸೆಳಖಾನೆಗೆ ಯಾವಾಗಲೂ ಕೀಲಿ ಹಾಕುತ್ತಿದ್ದಳು. ಇದನ್ನು ಕಂಡು ಮೊದಮೊದಲು ಈ ಮೋಡಕಾ ಮೇಜಿನ ಸೆಳಖಾನೆಯಲ್ಲಿ ಈಕೆ ಏನನ್ನು ಇಟ್ಟಿರಬಹುದು ಎಂಬ ಕುತೂಹಲ; ಕ್ರಮೇಣ ಅನುಮಾನ. ಕಾಲ ಉರುಳಿದಂತೆ ಮಾನಸಿಕ ಕ್ಷೋಭೆ ಶುರುವಾಯಿತು. ಸೆಳಖಾನೆ ಬಗೆಗಿನ ಈ ದುರ್ವ್ಯಸನ ಬರುಬರುತ್ತ ನನ್ನಲ್ಲಿ ವಿಪರೀತ ಕಿರಿಕಿರಿ ಉಂಟುಮಾಡತೊಡಗಿತು. ಆಕೆಯ ವರ್ತನೆಯನ್ನು ಸೂಕ್ಷ್ಮವಾಗಿ ಅಭ್ಯಸಿಸತೊಡಗಿದೆ. ಯಾವುದೇ ಸಂದರ್ಭದಲ್ಲಿಯೂ ಸೆಳಖಾನೆಗೆ ಕೀಲಿ ಹಾಕುವುದನ್ನು ಆಕೆ ಮರೆಯುತ್ತಿರಲಿಲ್ಲ. ಅಷ್ಟೇ ಅಲ್ಲ, ಕೀಲಿಕೈಯನ್ನು ಅತ್ಯಂತ ಜೋಪಾನವಾಗಿ ತನ್ನೊಡನೆ ಇಟ್ಟುಕೊಳ್ಳುತ್ತಿದ್ದಳು. ಎಲ್ಲಿಗಾದರೂ ಹೋಗುವುದಿದ್ದರೆ ಕೀಲಿಕೈಯನ್ನು ಮರೆಯದೆ ಕೊಂಡೊಯ್ಯುತ್ತಿದ್ದಳು. ಆ ಸೆಳಖಾನೆಯ ಬಗೆಗಿನ ಅವಳ ವರ್ತನೆ ನನ್ನನ್ನು ವಿಪರೀತ ಚಿಂತೆಗೆ ಈಡು ಮಾಡತೊಡಗಿತು. ನನ್ನೆಡೆಗೆ ಆಕೆ ಪ್ರೇಮಪೂರ್ವಕ ದೃಷ್ಟಿ ಬೀರಿದರೂ ಅನುಮಾನಿಸತೊಡಗಿದೆ. ಅವಳ ನಡವಳಿಕೆಯನ್ನೇ ಶಂಕಾಸ್ಪದ ರೀತಿಯಲ್ಲಿ ಗ್ರಹಿಸತೊಡಗಿದೆ. ಆಕೆಯ ಒಂದೊಂದು ವರ್ತನೆಯೂ ಸೋಗು ಎನ್ನಿಸತೊಡಗಿತು.’

‘ಅದೊಂದು ದಿನ ಪಕ್ಕದೂರಿನ ಜಮೀನ್ದಾರನ ಹೆಂಡತಿ ನನ್ನ ಪತ್ನಿಯನ್ನು ಕರೆದೊಯ್ಯಲು ಬಂದಿದ್ದಳು. ಅವರಿಬ್ಬರ ನಡುವೆ ಅತ್ಯಂತ ಆತ್ಮೀಯತೆಯಿತ್ತು. ಆದರೆ ನನ್ನ ಪತ್ನಿ ಬಹಳ ಸಮಯದವರೆಗೆ ಮನೆಯಿಂದ ದೂರ ಇರುತ್ತಿರಲಿಲ್ಲ. ಜಮೀನ್ದಾರನ ಹೆಂಡತಿ ಪರಿಪರಿಯಾಗಿ ಬೇಡಿಕೊಂಡಳು. ಒಂದು ದಿನದ ಮಟ್ಟಿಗೆ ತನ್ನ ವಾಡೇದಲ್ಲಿ ಬಂದು ಇರುವಂತೆ ಒಪ್ಪಿಸಿ ನನ್ನ ಹೆಂಡತಿಯನ್ನು ಕರೆದೊಯ್ದಳು. ಮಧ್ಯಾಹ್ನದ ಹೊತ್ತಿಗೆ ಮತ್ತೆ ತಮ್ಮ ವಾಡೇಕ್ಕೆ ವಾಪಸು ಬರುವ ಭರವಸೆಯನ್ನು ಜಮೀನ್ದಾರನ ಹೆಂಡತಿ ನೀಡಿದ್ದರಿಂದ ನನ್ನ ಹೆಂಡತಿ ಒಪ್ಪಿದಳು. ನಂತರ ಅವರಿಬ್ಬರೂ ಹೊರಟರು.’

‘ಅವರನ್ನು ಹೊತ್ತಿದ್ದ ಬಂಡಿ ನನ್ನ ಮನೆಯ ಓಣಿಯನ್ನು ದಾಟುತ್ತಲೇ ಹೊಲಿಗೆಯ ಮೇಜಿನ ಸೆಳಖಾನೆ ತೆರೆಯುವ ಪ್ರಯತ್ನಕ್ಕೆ ತೊಡಗಿದೆ. ಮೂಲ ಕೀಲಿಕೈ ಮನೆಯಲ್ಲಿ ಇರಲಿಲ್ಲ. ಬೇರೆ ಕೀಲಿಕೈಗಳನ್ನು ಹುಡುಕಿ ಎತ್ತಿಕೊಂಡು ಕೀಲಿ ತೆಗೆಯಲು ಮೊದಲುಮಾಡಿದೆ. ನನ್ನ ಪ್ರಯತ್ನ ಅಂತಿಮವಾಗಿ ಸಫಲವಾಯಿತು. ಆ ಸೆಳಖಾನೆ ತುಂಬ ಮಹಿಳೆಯರಿಗೆ ಸಂಬಂಧಿಸಿದ ಸಣ್ಣಪುಟ್ಟ ವಸ್ತುಗಳಿದ್ದವು. ಇವುಗಳ ನಡುವೆ ರೇಶ್ಮೆ ವಸ್ತ್ರವೊಂದರಲ್ಲಿ ಸುತ್ತಿಡಲಾಗಿದ್ದ ಪತ್ರಗಳ ಕಟ್ಟೊಂದು ಸಿಕ್ಕಿತು. ಮೇಲ್ನೋಟಕ್ಕೇ ಈ ಪತ್ರಗಳು ಯಾವುದಕ್ಕೆ ಸಂಬಂಧಪಟ್ಟವು ಎಂಬುದು ಗೋಚರಿಸುತ್ತಿತ್ತು. ಗುಲಾಬಿ ಬಣ್ಣದ ದಾರದಿಂದ ಕಟ್ಟಲಾಗಿದ್ದ ಪತ್ರಗಳನ್ನು ಒಂದೊಂದಾಗಿ ಓದಿದೆ.’

‘ಈ ಪತ್ರಗಳ ಸಹಾಯದಿಂದ ನನ್ನ ಪತ್ನಿಯ ಯೌವ್ವನದ ದಿನಗಳ ರಹಸ್ಯ ಪತ್ತೆಹಚ್ಚಲು ಯತ್ನಿಸುವುದು ಅವಿವೇಕದ ಮತ್ತು ಮಾನಗೇಡಿ ಕೆಲಸ ಎಂಬುದು ನನಗೂ ಗೊತ್ತಿತ್ತು. ಆದರೂ ಆ ಪತ್ರಗಳು ನನ್ನನ್ನು ಪತ್ತೆ ಕಾರ್ಯಕ್ಕೆ ತೊಡಗುವಂತೆ ಪ್ರೇರೇಪಿಸತೊಡಗಿದವು. ಇವೆಲ್ಲ ವಿವಾಹಾನಂತರದ ಪ್ರೇಮ ವ್ಯವಹಾರಕ್ಕೆ ಸಂಬಂಧಿಸಿದ ಪತ್ರಗಳಾಗಿರಬೇಕು ಎಂಬ ಯೋಚನೆಯೂ ಮನದಲ್ಲಿ ಸುಳಿದಿತ್ತು. ದಾರದಿಂದ ಕಟ್ಟಲಾಗಿದ್ದ ಪತ್ರಗಳನ್ನೆಲ್ಲ ಓದಿದ ಸಮಯ ನನ್ನ ಜೀವನದಲ್ಲಿಯೇ ಅತ್ಯಂತ ಯಾತನಾಮಯ ಸಂದರ್ಭವಾಗಿತ್ತು.’

‘ಈ ಪತ್ರಗಳಲ್ಲಿದ್ದ ಒಕ್ಕಣೆ ಬೇರಾವುದೋ ಪುರುಷನ ಕಡೆಗೆ ಬೆರಳು ತೋರದೆ ವಿಶ್ವಾಸಘಾತವನ್ನು ಎಸಗಿದ ವ್ಯಕ್ತಿಯೆಡೆ ಗುರಿಯಾಗಿದ್ದವು. ನನ್ನ ಆಶ್ಚರ್ಯಾಘಾತಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಈ ಪತ್ರಗಳನ್ನು ಬರೆದವ ನನ್ನ ಆತ್ಮೀಯ ಮಿತ್ರರಲ್ಲಿ ಒಬ್ಬನಾಗಿದ್ದ. ಇದು ಆ ಪತ್ರಗಳಿಂದ ತಿಳಿದುಬರುತ್ತಿತ್ತು. ಇನ್ನೊಂದು ಆಘಾತಕರ ಸಂಗತಿಯೇನೆಂದರೆ ಈ ಇಬ್ಬರೂ ಪ್ರೇಮಿಗಳ ನಡುವೆ ಒಪ್ಪಂದವೇರ್ಪಟ್ಟಿದ್ದು ಗೋಪ್ಯತೆಯನ್ನು ಕಾಪಾಡಿಕೊಳ್ಳುವಂತೆ ಪತ್ರ ಬರೆದವ ಪ್ರತಿ ಪತ್ರದಲ್ಲೂ ಹೇಳಿದ್ದ. ಅಲ್ಲದೆ ತಾವಿಬ್ಬರೂ ಸೇರಿ ಪತಿ ಎನ್ನಿಸಿಕೊಂಡವನನ್ನು ಮೂರ್ಖನನ್ನಾಗಿ ಮಾಡುತ್ತಿದ್ದೇವೆ ಎನ್ನುವಂತೆ ಆತ ಕೆಲ ಪತ್ರಗಳಲ್ಲಿ ಬರೆದಿದ್ದ. ಕೆಲವು ಪತ್ರಗಳಲ್ಲಿ ಆ ಮೂರ್ಖ ಪತಿಯ ಕುರಿತು ಮನಸ್ಸಿಗೆ ಬಂದುದನ್ನೆಲ್ಲ ಕಾರಿಕೊಂಡಿದ್ದ. ತನ್ನ ಪತಿಯಿಂದ ಈ ವಿಷಯವನ್ನು ಮುಚ್ಚಿಡಲು ಏನೇನು ಮಾಡಬೇಕು ಎಂಬ ಸಲಹೆಗಳನ್ನೂ ನೀಡಿದ್ದ. ಆ ಎಲ್ಲ ಪತ್ರಗಳೂ ನಮ್ಮ ಮದುವೆ ನಂತರದಲ್ಲೇ ಬರೆದವಾಗಿದ್ದವು. ಪತ್ರಗಳನ್ನು ಓದುವವರೆಗೆ ನಾನು ಎಂಥ ಅದೃಷ್ಟವಂತನೆಚಿದು ಭಾವಿಸಿಕೊಂಡಿದ್ದೆನೆಂದರೆ ಆ ನನ್ನ ಭಾವನೆಗಳನ್ನು ಮತ್ತೊಮ್ಮೆ ವರ್ಣಿಸಲು ಇಚ್ಛಿಸುವುದಿಲ್ಲ. ಏಕೆಂದರೆ ನಾನು ಅನುಮಾನದ ವಿಷವನ್ನು ಕಟ್ಟಕಡೆಯ ಹನಿಯವರೆಗೂ ಗುಟುಕರಿಸಿದ್ದೆ. ಪತ್ರಗಳನ್ನು ಓದಿದ ಸಂದರ್ಭದಲ್ಲಿ ಉಕ್ಕಿದ ಕೋಪವನ್ನು ಎದೆಯೊಳಗೇ ಅಡಗಿಸಿಟ್ಟುಕೊಂಡು ಮೊದಲಿನಂತೆಯೇ ಅವನ್ನು ಕಟ್ಟಿದೆ. ಮುಂಚಿನಷ್ಟೇ ಗೋಪ್ಯವಾಗಿ ಅವುಗಳನ್ನು ಸೆಳಖಾನೆಯಲ್ಲಿ ಇಟ್ಟು ಕೀಲಿ ಹಾಕಿದೆ.

ಸಂಜೆ ವೇಳೆಗೆ ನನ್ನ ಪತ್ನಿ ಮನೆಗೆ ವಾಪಸಾದಳು. ಎಂದಿನ ಸರಸದೊಂದಿಗೆ ಪ್ರೀತಿಯಿಂದ ನನ್ನೊಡನೆ ಮಾತನಾಡಿದಳು. ನಾನು ಸಹ ಏನೂ ಆಗಿಲ್ಲ ಎಂಬಂತೆ ತೋರಿಸಿಕೊಂಡೆ.

ರಾತ್ರಿಯ ಊಟದ ಹೊತ್ತಿನವರೆಗೂ ಹಿಂದಿನಂತೆಯೇ ಲಲ್ಲೆಗರೆದೆವು. ಇಬ್ಬರೂ ಜೊತೆಗೂಡಿಯೇ ಊಟ ಮಾಡಿದೆವು. ನಂತರ ನಮ್ಮ ಮಲಗುವ ಕೋಣೆಗೆ ಹೋದೆವು. ಆ ವೇಳೆಗೆ ನನ್ನ ಯೋಜನೆಯನ್ನು ಸಿದ್ಧಗೊಳಿಸಿಕೊಂಡಿದ್ದೆ. ನನ್ನ ಯೋಜನೆ ಸಫಲವಾಗಬೇಕಾದರೆ ಓರ್ವ ಉನ್ಮತ್ತ ವ್ಯಕ್ತಿಯಂತೆ ನಿಷ್ಕರುಣೆಯಿಂದ ಸಾಕಾರಗೊಳಿಸಬೇಕೆಂದು ನಿರ್ಧರಿಸಿದ್ದೆ. ನನ್ನ ಕಣ್ಣೆದುರಿನಲ್ಲಿಯೇ ಎಲ್ಲ ನಡೆದಿದ್ದರೂ ಸ್ವಲ್ಪವೂ ತಿಳಿಯಲಿಲ್ಲ ಎಂದರೆ ಖಂಡಿತವಾಗಿಯೂ ನನಗೆ ಮೋಸ ಮಾಡಿದೆ ಎಂದು ಯೋಚಿಸುತ್ತ ಅವಳ ಮಂಚದತ್ತ ಹೆಜ್ಜೆ ಹಾಕಿದೆ. ಅದಾಗಲೇ ನಿದ್ರೆಯ ವಶಕ್ಕೆ ಜಾರಿದ್ದ ಆಕೆಯ ಮುದ್ದಾದ ಮುಗ್ಧ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದೆ. ನಾನು ಕುಡಿದಿದ್ದ ಅನುಮಾನದ ವಿಷ ನನ್ನ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿತ್ತು. ನಿಧಾನವಾಗಿ ಬಲಗೈಯನ್ನು ಅವಳ ಕುತ್ತಿಗೆ ಮೇಲಿಟ್ಟೆ. ನನ್ನೆಲ್ಲ ಬಲವನ್ನು ಹಾಕಿ ಅದುಮಿದೆ. ಒಂದು ಕ್ಷಣ ಆಕೆ ಕಣ್ಣುಗಳನ್ನು ತೆರೆದಳು. ಅಚ್ಚರಿಯಿಂದ ನನ್ನೆಡೆ ನೋಡಿದಳು. ಶಾಂತಳಾದಳು. ತನ್ನ ಆತ್ಮರಕ್ಷಣೆಯಾಗಿ ಆಕೆ ಸ್ವಲ್ಪವೂ ಪ್ರಯತ್ನಿಸಲಿಲ್ಲ; ಮಾತ್ರವಲ್ಲ ತಾನು ಯಾವುದೋ ಸ್ವಪ್ನಾವಸ್ಥೆಯಲ್ಲಿ ಇದ್ದೇನೆಂಬಂತಿದ್ದು ಕೊನೆಯುಸಿರು ಎಳೆದಳು. ಕುತ್ತಿಗೆಯನ್ನು ಅದುಮಿದ ಬಲದಿಂದಾಗಿ ಆಕೆಯ ಬಾಯಿಂದ ಒಸರಿದ ಒಂದು ಹನಿ ರಕ್ತ ನನ್ನ ಬಲಗೈನ ಮೇಲೆ ಬಿತ್ತು. ರಕ್ತಬಿದ್ದ ಭಾಗ ಯಾವುದೆಂಬುದು ನಿಮಗೆ ಚೆನ್ನಾಗಿ ಗೊತ್ತಿದೆ ಸರ್ಜನ್; ಮರುದಿನ ಬೆಳಗ್ಗೆ ವೇಳೆಗೆ ಆ ಹನಿ ಒಣಗಿ ಹೋಗಿತ್ತು.’

‘ಹೆಚ್ಚು ಜನರನ್ನು ಸೇರಿಸದೆ ಶವಸಂಸ್ಕಾರ ಮುಗಿಸಿದೆ. ಅವಳ ಸಂಬಂಧಿಕರ‍್ಯಾರೂ ಈ ಸಂದರ್ಭದಲ್ಲಿ ಇರಲಿಲ್ಲ. ಅಂದರೆ ನಾನು ಯಾರಿಗೇ ಆಗಲಿ ಆಕೆಯ ಸಾವು ಹೇಗೆ ಸಂಭವಿಸಿತು ಎಂಬುದನ್ನು ವಿವರಿಸಬೇಕಾಗಲಿಲ್ಲ. ಆ ಕುರಿತು ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಮೊದಲನೆಯದಾಗಿ ಆಕೆ ಪತ್ನಿಯಾಗಿದ್ದಳು. ಎರಡನೆಯದಾಗಿ ನಮ್ಮಿಬ್ಬರ ಸಂಬಂಧ ಬೇರೆಯವರು ಈಷ್ರ್ಯೆ ಪಡುವಷ್ಟು ಚೆನ್ನಾಗಿತ್ತು. ಅಲ್ಲದೆ ಅವಳ ಅಂತ್ಯಸಂಸ್ಕಾರದ ನಂತರವಷ್ಟೇ ನಾನು ಸಾವಿನ ಸುದ್ದಿ ಹರಡುವಂತೆ ನೋಡಿಕೊಂಡಿದ್ದೆ.’

‘ಇಷ್ಟಾದರೂ ನನ್ನ ಮನದಲ್ಲಿ ಪರಿತಾಪವೇನೂ ಇರಲಿಲ್ಲ. ಏಕೆಂದರೆ ನಾನು ಪರಮಾತಿ ಪರಮ ನಿರ್ದಯಿಯಾಗಿದ್ದೆ. ನಾನು ಕೊಡುವ ಶಿಕ್ಷೆಗೆ ಆಕೆ ಅರ್ಹಳೆನಿಸಿದ್ದಳು. ಆ ಬಗ್ಗೆ ನನಗೆ ಸ್ವಲ್ಪವೂ ದುಃಖವಾಗಲಿ, ಅಸಹ್ಯವಾಗಲಿ ಆಗಲಿಲ್ಲ. ಸುಲಭವಾಗೇ ನಾನವಳನ್ನು ಮರೆಯತೊಡಗಿದ್ದೆ. ಯಾವ ಕೊಲೆಗಾರನೂ ಉಪೇಕ್ಷಿಸದಿರುವ ರೀತಿಯಲ್ಲಿ ನಾನು ಎಸಗಿದ ಕೃತ್ಯವನ್ನು ಉಪೇಕ್ಷಿಸಿದ್ದೆ.’

‘ಪಕ್ಕದ ಊರಿನ ಜಮೀನ್ದಾರನ ಹೆಂಡತಿ ನನ್ನ ಮನೆಗೆ ಬಂದಾಗ ಘಟನೆ ಜರುಗಿ ಹಲವು ದಿನಗಳೇ ಕಳೆದಿದ್ದವು. ನಾನೂ ಅದನ್ನೇ ಬಯಸಿದ್ದೆ. ಆಕೆ ಬಹಳ ಗಲಿಬಿಲಿಗೊಂಡಿದ್ದಳು. ಖಿನ್ನತೆ ಆವರಿಸಿದವಳಂತೆ ಇದ್ದಳು. ಹೆಂಡತಿಯ ಸಾವಿನ ಸುದ್ದಿ ಆಕೆಗೆ ಬರಸಿಡಿಲೆರಗಿದಂತೆ ಆಗಿತ್ತು. ನನ್ನ ಮನೆಗೆ ಬಂದವಳು ಮೆಲುದನಿಯಲ್ಲಿ ಸಾಂತ್ವನ ಹೇಳಿದಳು. ಅತ್ಯಂತ ಆತ್ಮೀಯತೆಯಿಂದ ನನ್ನ ಕೈಗಳನ್ನು ಹಿಡಿದು ‘ನಿಮಗೆ ಅತಿಗೋಪ್ಯವಾದ ಮಾತನ್ನು ನಾನು ಹೇಳಲು ಇಚ್ಛಿಸುತ್ತೇನೆ. ಆದರೆ ಆ ವಿಷಯದಿಂದ ನೀವು ಯಾವುದೇ ವಿಧದ ಅನುಚಿತ ಲಾಭ ಪಡೆಯುವುದಿಲ್ಲವೆಂದು ಮಾತು ಕೊಡಬೇಕು’ ಎಂದಳು.

ನನ್ನಲ್ಲಿ ಪೂರ್ಣ ವಿಶ್ವಾಸ ಮೂಡಿದ ನಂತರ, ‘ನಿಮ್ಮ ಮೃತಪತ್ನಿಯ ಕಡೆ ಪತ್ರಗಳ ಒಂದು ಕಟ್ಟನ್ನು ಕೊಟ್ಟಿದ್ದೆ.... ಅವುಗಳನ್ನು ನನ್ನ ಬಳಿ ಇರಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದ್ದರಿಂದ ನಿಮ್ಮ ಹೆಂಡತಿ ಬಳಿ ಇರಿಸಿದ್ದೆ. ದಯವಿಟ್ಟು ಆ ಪತ್ರಗಳನ್ನು ನನಗೆ ವಾಪಸು ಮಾಡಿ ಎಂದು ಕೇಳಿದಳು. ಅವಳ ಆ ಮಾತನ್ನು ಕೇಳಿದೊಡನೆ ನನ್ನ ಹೃದಯ ಒಂದು ಕ್ಷಣ ಸ್ತಬ್ಧಗೊಂಡಂತಾಯಿತು. ಇಡೀ ದೇಹ ಕಂಪಿಸಿತು. ನನ್ನನ್ನು ಕತ್ತರಿಸಿ ತುಂಡು ಮಾಡಿದರೂ ಕೊಲೆ ಎನ್ನಿಸಿಕೊಳ್ಳುವುದಿಲ್ಲ ಎಂಬ ಭಾವನೆ ಮೂಡಿತು. ಆದರೂ ನನ್ನನ್ನೇ ನಾನು ಸಂಭಾಳಿಸಿಕೊಳ್ಳುತ್ತ ಸ್ವಲ್ಪ ಧೈರ್ಯ ತಂದುಕೊಂಡು ‘ಆ ಪತ್ರಗಳಲ್ಲಿ ಅಂಥದ್ದೇನಿತ್ತು?’ ಎಂದು ಕೇಳಿದೆ.

ನನ್ನ ಈ ಪ್ರಶ್ನೆಯಿಂದ ಆಕೆ ಕುಗ್ಗಿಹೋದಳು. ಸಾವರಿಸಿಕೊಂಡು ‘ನಿಮ್ಮ ಪತ್ನಿ ನನ್ನ ಪಾಲಿಗೆ ಅತ್ಯಂತ ವಿಶ್ವಾಸಪಾತ್ರಳಾಗಿದ್ದಳು. ಅಷ್ಟೇ ಅಲ್ಲ ನಿಷ್ಠಾವಂತಳೂ ಆಗಿದ್ದಳು. ನಾನು ಪತ್ರಗಳನ್ನು ತಂದುಕೊಟ್ಟಾಗಿನಿಂದ ಆಕೆ ಸಾಯುವ ಮುಂಚಿನ ಭೇಟಿಯ ದಿನದವರೆಗೆ ಒಮ್ಮೆಯಾದರೂ ಆ ಪತ್ರಗಳಲ್ಲಿ ಏನು ಬರೆದಿದೆ ಎಂದು ಕೇಳಲಿಲ್ಲ. ಅವನ್ನು ತೆರೆದು ನೋಡುವುದಿಲ್ಲವೆಂದೂ ಆಕೆ ವಚನ ನೀಡಿದ್ದಳು’ ಆಕೆ ಒಂದೇ ಉಸಿರಿನಲ್ಲಿ ಬಡಬಡಿಸಿದಳು.

‘ನಿನ್ನ ಪತ್ರವನ್ನು ಆಕೆ ಎಲ್ಲಿಟ್ಟಿದ್ದಳು ಎಂಬುದು ಗೊತ್ತೆ?’

‘ಬಟ್ಟೆ ಹೊಲಿಯುವ ಮೇಜಿನ ಸೆಳಖಾನೆಯಲ್ಲಿ ಇಟ್ಟಿದ್ದಳು. ಗುಲಾಬಿ ದಾರವೊಂದರಿಂದ ಅವು ಕಟ್ಟಲ್ಪಟ್ಟಿದ್ದವು. ಅವನ್ನು ನೀವು ಸುಲಭವಾಗಿ ಗುರುತಿಸಬಹುದಾಗಿದ್ದು, ಒಟ್ಟು 30 ಪತ್ರಗಳಿದ್ದವು.’

‘ಪತ್ರಗಳನ್ನು ಸೆಳಖಾನೆಯಿಂದ ತೆಗೆದು ಕೊಡಲು ಮುಂದಾಗುತ್ತಿದ್ದಂತೆಯೇ ಆತುರಾತುರವಾಗಿ ಮುಂದೆ ನುಗ್ಗಿದ ಆಕೆ ಪತ್ರಗಳ ಕಟ್ಟನ್ನು ನನ್ನ ಕೈಯಿಂದ ಕಿತ್ತುಕೊಂಡಳು. ಆಕೆ ಕಿತ್ತುಕೊಂಡ ರಭಸದಿಂದ ಪತ್ರಗಳು ಕೆಳಗೆ ಬಿದ್ದಾವೆಂಬ ಹೆದರಿಕೆಯಿಂದ ಅವುಗಳತ್ತ ಕಣ್ಣೆತ್ತಿಯೂ ನಾನು ನೋಡಲಿಲ್ಲ. ಪತ್ರಗಳು ಸಿಕ್ಕಿದ್ದೊಂದೇ ತಡ ಆಕೆ ಬಿರಬಿರನೆ ನಡೆದುಬಿಟ್ಟಳು.’

‘ಇದಾಗಿ ಒಂದು ವಾರ ಕಳೆದಿರಬೇಕು. ರಕ್ತದ ಹನಿಬಿದ್ದ ಬಲಗೈನ ಭಾಗದಲ್ಲಿ ಸರ್ಪ ಕಚ್ಚಿದಾಗ ಆಗುವಂಥದ್ದೇ ಬಾಧೆ ಆರಂಭವಾಯಿತು. ಮೊದಮೊದಲು ನಾನದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಬಾಧೆ ಕ್ರಮೇಣ ಹೆಚ್ಚಾಗತೊಡಗಿತು. ನಿದ್ರೆ ಎಂಬುದು ಗಾವುದ ಗಾವುದ ದೂರ ಓಡಿಹೋಯಿತು. ಹಗಲಿನಲ್ಲೂ ದುಃಸ್ವಪ್ನಗಳು ಕಾಡತೊಡಗಿದವು. ಇಲ್ಲಿಂದ ಮುಂದಿನ ಕಥೆಯೆಲ್ಲ ನಿಮಗೆ ತಿಳಿದೇ ಇದೆ. ನನ್ನನ್ನು ಕಾಡುತ್ತಿರುವ ಬಾಧೆಯೊಡನೆ ಇನ್ನಷ್ಟು ದಿನ ಸಂಘರ್ಷ ನಡೆಸುವ ಸಾಹಸವನ್ನು ನಾನು ಮಾಡುವುದಿಲ್ಲ. ಯಾವ ವ್ಯಗ್ರತೆಯಿಂದ ನಿರ್ದಯಿಯಾಗಿ ನಾನು ಹತ್ಯೆಗೈದಿದ್ದೇನೋ ಅದೇ ರೀತಿ ಅವಳ ಬಳಿಗೆ ಹೋಗುತ್ತಿದ್ದೇನೆ. ನಾನು ಹೋಗುತ್ತಿದ್ದೇನೆ. ನಾನು ನಿಮಗೆ ಕೊಟ್ಟ ತೊಂದರೆಗಾಗಿ ಕ್ಷಮೆ ಯಾಚಿಸುತ್ತೇನೆ.’

ಈ ಪತ್ರವನ್ನು ಓದಿ ಮುಗಿಸುತ್ತಿದ್ದಂತೆಯೇ ಅವರ್ಣನೀಯ ಅನುಭವವೊಂದು ವೈದ್ಯನಿಗಾಯಿತು. ಈ ವರೆಗಿನ ದೊಡ್ಡದೊಡ್ಡ ಶಸ್ತ್ರಚಿಕಿತ್ಸೆಗಳೂ ನೀಡಲಾರದಂಥ ಅನುಭವವನ್ನು ಆ ಪತ್ರ ನೀಡಿದಂತೆನಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು