ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಲಾಕಿ ಕೋಳಿ

Last Updated 23 ಜುಲೈ 2022, 19:30 IST
ಅಕ್ಷರ ಗಾತ್ರ

ಆಚೆ‌ಮನೆ ಬೋಜಪ್ಪನ ಕೊಬ್ಬಿದ ಹುಂಜ ಯಾವ‌ ನೆಂಟ್ರು ಬಂದರೂ ಅಳಗೆಲಿ ಬೇಯದೆ ಹಾಂಗೇ ಉಳಿಯೋಕುತಾದರೆ ಏನೋ ಬಲವಾದ ಕಾರಣ ಇದ್ದೇ ಇರೋಕು.. ಅಂತ ನೆರೆಕರೆಯವರು ಗುಸು ಗುಸು ಪಿಸ ಮಾತಾಡುವುದು‌ ನನಗೆ ಕೇಳಿಸಿತ್ತು.‌ ಆದರೆ ನಾವೆಲ್ಲ ಪೊಡಿ ಮಕ್ಕಳು ಅದನ್ನು ಧೈರ್ಯವಾಗಿ ಯಾರಲ್ಲೂ ಕೇಳುವ ಹಾಗಿಲ್ಲ,‌ ಹೇಳುವ ಹಾಗಿಲ್ಲ.

ಬೋಜಪ್ಪನಿಗೂ ಅಣ್ಣ‌ ಈರಪ್ಪನಿಗೂ ಆಸ್ತಿ‌ಕಲಹ, ಅವರ ಅಪ್ಪ‌ ಪಾಲು ಪಟ್ಟಿ ಮಾಡಿದಾಗಿನಿಂದ‌ ಬಂದಿದೆ. ‘ಅವಂಗೆ‌ ಇರ್‌ದು ಒಂದೇ ಒಂದು‌ ಹೆಣ್ಣ್ ಗೂಡೆ. ಅದಿಕ್ಕೆ ಯಾಕೆ ಆಸ್ತಿ‌ಪಾಸ್ತಿ? ಕೊಟ್ಟು‌ ಹೋವ ಗೂಡೆ ಅದ್’. ಆದರೂ ಅವನಿಗೆ ಫಲ ಬರುವ ತೋಟಗಳು‌ ಎಲ್ಲ ‌ಜಾಸ್ತಿ ಹೋಗಿದೆ ಅನ್ನುವುದು ಇಬ್ಬರು‌ ಬೆಳೆದ‌ ಗಂಡು‌ ಮಕ್ಕಳಿರುವ ಈರಪ್ಪನ ತಕರಾರು. ಈರಪ್ಪನ ಇಬ್ಬರೂ ಗಂಡು ಹುಡುಗರು ಅಪ್ಪನ‌ ಎಲ್ಲ‌ ಗುಣಗಳನ್ನು ಅವಾಹಿಸಿಕೊಂಡು‌ ಬಂದಂತೆ ಇದ್ದರು.‌ ಈಗಾಗಲೇ ಸಣ್ಣ ಪುಟ್ಟ ಪೆಟ್ಟು ಕೂಟದಲ್ಲಿ ಭಾಗಿಯಾಗಿ‌ ಊರಿನಲ್ಲಿ ತಕ್ಕ ಮಟ್ಟಿಗೆ ಪ್ರಸಿದ್ಧಿಯನ್ನು‌ ಪಡೆದವರು.‌ ಹಾಗಾಗಿ‌ ಭುಜ ಬಲ ಇಲ್ಲದ ಬಲ ಹೀನರಿಗೆ ದೈವ ದೇವರುಗಳೇ ಗತಿ ಅಂತ ಬೋಜಪ್ಪ ಎಷ್ಟೋ ‌ಸಾರಿ ಹೇಳುತ್ತಾ‌‌ ನಿಡುಸುಯ್ದಿದ್ದರು.

ಬೋಜಪ್ಪನ ನಿಟ್ಟುಸಿರು ತಾಕಿಯೋ ಅಥವಾ ಈರಪ್ಪನ‌ ಅದೃಷ್ಟ ಸರಿ ಇರಲಿಲ್ವೋ ಗೊತ್ತಿಲ್ಲ, ಹಿಂದಿನ ಸಂಜೆ ಗದ್ದೆ ಪುಣಿಯ‌ ಮೇಲೆ ಬರುವಾಗ ‌ಕಾಲು ಜಾರಿ ಬಿದ್ದದ್ದೊಂದು ಗೊತ್ತು, ಕಾಲು ಮೂಳೆ‌ ಮುರಿದು ಪೆಟ್ಟು ಸ್ವಲ್ಪ ‌ಬಲವೇ‌ ಆಗಿದೇ ಅನ್ನುವುದ್ದಕ್ಕೆ ಡಾಕ್ಟರು‌ ಕಟ್ಟಿದ ಮೊಣಕಾಲು ಉದ್ದದ‌ ಬ್ಯಾಂಡೇಜೇ ಸಾಕ್ಷಿ.‌ ನಾನೂ ಅಪ್ಪನ ಜೊತೆ ಬ್ರೆಡ್, ‌ಹಣ್ಣು ಹಿಡಿದುಕೊಂಡು ಅವರನ್ನು ನೋಡಿ‌ ಬಂದಿದ್ದೆ.

ಇದಾಗಿ ಒಂದು ‌ವಾರ ಕಳೆದಿರಬಹುದು ಆ ದಿನ‌ ಚೌಂಡಿಗೆ ಇಡುವ ಕ್ರಮ. ‌ವರುಷಕ್ಕೊಂದಾವರ್ತಿಯಾಗಿ ಕುಟುಂಬದವರೆಲ್ಲ ಸೇರಿ ಪೂಜೆ ಸಲ್ಲಿಸುತ್ತಾರೆ. ಏನಾದರೂ ಈಡೇರಬೇಕೆಂದು ಕೋರಿಕೆ ಇದ್ದವರು ಮಾತ್ರ‌ ವಿಶೇಷವಾಗಿ ತಮ್ಮ‌ ಹರಕೆಯನ್ನು ಪ್ರಾರ್ಥನೆಯೊಂದಿಗೆ ಸಂದಾಯ ಮಾಡುತ್ತಾರೆ.‌ ಉಳಿದಂತೆ ಪ್ರತೀ ವರ್ಷ‌ ಒಂದೊಂದು‌ ಮನೆಯವರಂತೆ ಕೋಳಿಯನ್ನು ಆ ಕಲ್ಲಿಗೆ ಒಪ್ಪಿಸುವುದು ರೂಢಿ.

ಆದರೆ ಈ ಸಲ‌ ಬೋಜಪ್ಪನ ಪಾಳಿ ಅಲ್ಲದಿದ್ದರೂ ಆ ಕೋಳಿಯನ್ನು ಚೌಂಡಿ ಕಲ್ಲಿಗೆ ‌ಹರಕೆಗೆ ಒಪ್ಪಿಸಿ,‌ ತಾನು ಅಂದು ಕೊಂಡ ಕಾರ್ಯ ಆಗಿದೆ ಅಂತ ಬಿನ್ನಹ‌ ಮಾಡಿಕೊಂಡ‌ ಮೇಲೆ ಅಲ್ಲಿ ನೆರೆದವರು ಒಂದಕ್ಕೊಂದು ಕೊಂಡಿ ಜೋಡಿಸಿಕೊಂಡು,‌ ಊಹೆಗೆ ರೆಕ್ಕೆ ಪುಕ್ಕ ಸಿಕ್ಕಿಸಿಕೊಂಡು ಹೋಗಿದ್ದರು. ಆ ದಿನ ಪ್ರಸಾದದ‌ ಕೋಳಿ ಸಾರು ಊಟ ಮಾಡಲು ನನ್ನ ಕೂಡ ಕರೆದಿದ್ದರು.

ಕಡಂಬಿಟ್ಡು‌,‌ ಪೊಕ್ಕಳ ರೊಟ್ಟಿ, ಕೋಳಿ ಸಾರು‌ ನಾನು ಗಡದ್ದಾಗಿ ತಿಂದು‌ ಬಂದರೂ‌ ಚೌಂಡಿ‌ ಕಲ್ಲು, ಹರಕೆ, ವಿಲ ವಿಲ ಒದ್ದಾಡುವ ಕುರಿ, ಕೋಳಿ, ಹಂದಿ ನನ್ನ ಎಳೆಯ ಮನಸಿನೊಳಗೆ ಒಂದು‌ ಅವ್ಯಕ್ತ ಭೀತಿಯನ್ನ ಹೂತು ಹಾಕಿ ಬಿಟ್ಟಿತು. ಅದೆಷ್ಟೆಂದರೆ‌ ರಾತ್ರೆ ಬಾಗಿಲು ಹಾಕಿ‌ ಮಲಗಿದರೆ ಕಳ್ಳ ಕಾಕರ ಭಯ ಇಲ್ಲ. ಆದರೆ ಅದೃಶ್ಯ‌ರೂಪಿ ಕುಲೆ ದೈವಗಳ ಬಗ್ಗೆ ಹೇಳ ತೀರದ ‌ಭಯ. ಬಾಗಿಲು ತೆರೆದು ಬಂದಂತೆ,‌ ಗಾಳಿ‌ ಬೀಸಿದಂತೆ, ಪಕ್ಕ ಬಂದು‌ ಕೂತಂತೆ. ಒಂದು ಕ್ಷಣ ಉಸಿರೇ ನಿತ್ತು ಹೋದಂತೆ. ಅದು ಅರೆ ಕ್ಷಣ ಅಷ್ಟೇ, ಆಮೇಲೆ ಏನೂ ಆಗಿಲ್ಲವೆನ್ನುವಂತಹ ಸಹಜ ಸ್ಥಿತಿ. ಇದನ್ನೆಲ್ಲ ಮನೆಯವರ ‌ಬಳಿ ಹೇಳಿದರೆ ‌ಗದರುತ್ತಾರೆ ಅನ್ನುವ ಕಾರಣಕ್ಕೆ ಏನೂ ಹೇಳುತ್ತಿರಲಿಲ್ಲ.

ನಾವು ತೋಟಕ್ಕೆ ಹೋಗುವ ಹಾದಿಯಲ್ಲಿ ಅದೇ ಚೌಂಡಿ ಕಲ್ಲು ಸಿಗುತ್ತದೆ.‌ ದಾರಿ ಕರೆಯಲ್ಲಿ ತುಸು ಮೇಲೆ ಒಂದು‌ ದೊಡ್ಡ ಮರದ ಬುಡದಲ್ಲಿ ‌ಅದನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ದೊಡ್ಡ ಹುಡುಗಿಯರು ಎಲ್ಲ ಸಂದರ್ಭದಲ್ಲಿ ಅದರ ಅಡಿಗೆ ಹೋಗಬಾರದು ಅಂತ ಕಟ್ಟು ನಿಟ್ಟು ಮಾಡಿದ್ದರು.‌‌ ನಾ ಇನ್ನೂ ಸಣ್ಣ‌ಹುಡುಗಿ ಆಗಿದ್ದೆ. ನನಗೆ ಅಂತ ಕಟ್ಟು ಪಾಡುಗಳು ಇಲ್ಲದಿದ್ದರೂ ನನ್ನ ಅಕ್ಕಪಕ್ಕದ ಮನೆಯ ಹುಡುಗಿಯರು ನಿರ್ಭೀತಿಯಿಂದ‌ ಹೋಗುತ್ತಿದ್ದರೆ ನನಗೆ ಮಾತ್ರ ಎಲ್ಲಿಲ್ಲದ ಆತಂಕ. ನಾನು ಒಬ್ಬಳೇ ಆ‌ ದಾರಿಯಲ್ಲಿ ಹೋಗಬೇಕಾದ ಸಂದರ್ಭಗಳಲ್ಲಿ ಮುಕ್ಕೋಟಿ ದೇವರುಗಳಿಗೆ ನಮಿಸುತ್ತಾ ಉಸಿರು‌ ಬಿಗಿ ಹಿಡಿದು ಓಡಿ‌ ಮನೆ ಸೇರುತ್ತಿದ್ದೆ.‌ ನಾನು ಹೀಗೆಲ್ಲ ಹೆದರುವುದ್ದಕ್ಕೆ ಒಂದು‌ ದೊಡ್ಡ‌ ಕಾರಣವಿತ್ತು. ಅದನ್ನು ಆಕೆ ಯಾರ‌‌ ಬಳಿಯೂ ಹೇಳಬಾರದು ಅಂತ ಕೇಳಿಸಿಕೊಂಡ ಮೇಲೆಯೂ ನಾನು ಹೆದರಿಕೆಯ ನಿವಾರಣೆಗಾಗಿ ಹೇಳಿಕೊಂಡು ಮತ್ತಷ್ಟು‌ ಭಯ ಭೀತಳಾಗಿದ್ದೆ.

ನಾನು ಶಾಲೆಗೆ ಹೋಗಬೇಕೆಂದರೆ ಗೆಳತಿಯ ಕಾಪಿ ತೋಟವನ್ನು ಹಾದು ಹೋಗ‌ಬೇಕು.‌ ಅವಳ ತೋಟದಲ್ಲಿ ಗೊಂಚಲು ಗೊಂಚಲು ‌ಕಿತ್ತಲೆ ಹಣ್ಣುಗಳು ತೂಗಿಕೊಂಡು ಗಾಳಿ ಬಂದಾಗ ಜೋಕಾಲಿಯಾಡುತ್ತಿದ್ದವು. ನನ್ನ ಜೊತೆಗೆ ಬರುವ ಓರಗೆಯ ಪದ್ದು‌ ಮತ್ತೆ‌ ರುಕ್ಕು ಸರ ಸರ ಮರ ಹತ್ತಿ ಹಣ್ಣು ಕೀಳುವುದರಲ್ಲಿ ನಿಸ್ಸೀಮರು.‌ ನನಗೆ ‌ಕಿತ್ತಳೆ ಹಣ್ಣು ನೋಡುವಾಗ ಆಸೆ‌. ಆದರೆ ಕೊಯ್ದರೆ ಕಳ್ಳತನ ಆಗುತ್ತೆ ಅಂತ ಹೆದರಿಕೆಯಿಂದ ನಾನು ಆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಆಸೆ ಹತ್ತಿಕ್ಕಲಾರದೆ ಅವರು ಕೊಟ್ಟ ಹಣ್ಣನ್ನು, ನಾನೇನೂ ಕೊಯ್ಯಲಿಲ್ಲವಲ್ಲ ಅಂತ ಸಮಾಧಾನ‌ ಮಾಡಿಕೊಂಡು ತಿಂದು‌ ಬಿಡುತ್ತಿದ್ದೆ.‌ ಕಿತ್ತಳೆ ಹಣ್ಣು ತಿಂದ ಮೇಲೂ ಅದರ ಪರಿಮಳ ಹಾಗೇ ನಮ್ಮನ್ನು ಅಂಟಿ ಕೊಂಡು‌ಬಿಡುತ್ತಿತ್ತು.

ದಾರಿಯುದ್ದಕ್ಕೂ‌ ಪರಿಮಳವೇ. ತೋಟದ ಮಾಲಿಕ‌ ತಿಮ್ಮಯ್ಯನವರ ಮಗಳು, ಗೆಳತಿ‌ ವಿದ್ಯಾ ಒಂದು ದಿನ, ‘ನಿನ್ನ ಚೀಲದಲ್ಲಿ ಕಿತ್ತಳೆ ಹಣ್ಣು ಇದೆಯ‌? ಎಲ್ಲಿ‌ ಚೀಲ‌ ನೋಡುವಾ’ ಅಂತ ಕೇಳಿಯೇ ಬಿಟ್ಟಳು. ಅವಳಿಗೆ ನಮ್ಮ ಕುರಿತು ಸಣ್ಣ ಗುಮಾನಿ ಇತ್ತೆಂದು‌ ಕಾಣುತ್ತದೆ. ಬೆಳಗ್ಗೆ ‌ಸಂಜೆ ಕಿತ್ತಳೆ ನಾಲ್ಕು ನಾಕೇ ಕಾಣೆ ಆದರೂ ಸಾಕಲ್ವ? ಮನೆಯಲ್ಲಿ ಆ ಕುರಿತು ಮಾತನಾಡಿರಬೇಕು ಅನ್ನಿಸುತ್ತದೆ. ಗೆಳತಿಯಾದ ಕಾರಣ‌ ಅವಳಿಗೆ ನೇರ ಕೇಳಲೂ ಹಿಂಜರಿಕೆ. ಸದ್ಯ ಆ ದಿನ‌ ಆಕೆ‌‌ ನನ್ನ ಚೀಲಕ್ಕೆ ಕೈ ಹಾಕಿ ಶೋಧಿಸಿದರೂ ಸಿಪ್ಪೆ ಕೂಡ ಸಿಗದ್ದು‌ ನನ್ನ ಪುಣ್ಯ. ಅಲ್ಲಿಂದ ಮೇಲೆ ನಮ್ಮ ಮೇಲೆ ಅವರ ಮನೆಯವರು ಒಂದು ಕಣ್ಣು ಇಟ್ಟರೆಂದು ತೋರುತ್ತದೆ. ಆಗೊಮ್ಮೆ ಈಗೊಮ್ಮೆ ವಿದ್ಯಾಳ ಅಜ್ಜ ಸಂಜೆ ಹೊತ್ತಲ್ಲಿ ತೋಟದಲ್ಲಿ ಕಾಣತೊಡಗಿದರು. ನಮ್ಮ ತಂಡ ಈಗ ತುಂಬಾ ಎಚ್ಚರಿಕೆಯಿಂದ‌ ಇರಬೇಕಿತ್ತು. ಆದರೂ ಅಜ್ಜನ ತಲೆ ಆಚೆ ಕಂಡರೆ‌ ಈಚೆಯಿಂದ ಪದ್ದು, ರುಕ್ಕು‌ ಒಂದೇ ರಭಸದಲಿ ಮರ ಹತ್ತಿ ಮರದ ಬುಡಕ್ಕೆ ಹಾಕಿದರೆ ಗೀತಾ‌ ಬಿದ್ದ ಹಣ್ಣುಗಳನ್ನು ಸರ‌ಸರನೇ ಎತ್ತಿ‌ ಲಂಗದೊಳಗೆ ತುಂಬಿಸಿ ಎಲ್ಲರಿಗೂ ಒಂದೊಂದು‌ ಕೊಟ್ಟದ್ದನ್ನು ಸಿಪ್ಪೆ ಸುಲಿದು ತಿಂದು‌ ಯಾರಿಗೂ ಕಾಣದಂತೆ ನದಿ‌ ದಾಟುವಾಗ ಅದರ‌ ನಡುವಿಗೆ ಹಾಕಿ ಚೆನ್ನಾಗಿ ಕೈ ಕಾಲು ಮುಖ ತೊಳೆದು‌ಕೊಂಡು‌ ಬರುತ್ತಿದ್ದೆವು. ಮಾರನೇ ದಿನ ಹೋಗುವಾಗ ಎಂದಿನಂತೆ ಕಿತ್ತಳೆ ಮರ ಹತ್ತಿ ಅದರ ನಮಸ್ಕರಿಸಿಯೇ ಹೋಗುವುದು.

ಪರಿಮಳ ವಿದ್ಯಾಳ ಮೂಗಿಗೆ ಅಂದು ಗಾಢವಾಗಿ ತಾಕಿರಬೇಕೆಂದು ಕಾಣುತ್ತದೆ. ಆ‌ ದಿನ ಸಂಜೆ ಕೊನೇ ಪಿರಿಯೇಡ್‌ ಮೈದಾನಕ್ಕೆ ನಮ್ಮನ್ನೆಲ್ಲ ಆಟಕ್ಕೆ ಬಿಟ್ಟಿದ್ದಾರೆ. ಏ..ಸರೂ‌..ಬಾರೇ ಇಲ್ಲಿ ..ಅಂತ ಕರೆದಳು. ಏನೇ..ಅಂದೆ.‌ ಏನಿಲ್ಲ..ಯಾರಲ್ಲೂ ಹೇಳಬಾರದು ಅಯ್ತಾ ಅಂತ ಎಲ್ಲರ ಹೆಸರಿನ ಮೇಲೂ ಆಣೆಯೊಂದ ಹಾಕಿಸಿಕೊಂಡು‌ ಗುಟ್ಟೊಂದು ಅರುಹಿದ್ದಳು.

ಸರೂ..‘ನೀ ಏನಾದರೂ ನಮ್ಮ ತೋಟದಲ್ಲಿ ಹಾವು ಕಂಡಿದ್ದಿಯೇನೆ?’

ಹಾವು! ಅಂದರೆ‌ ಮೊದಲೇ ಎದೆ ಹೊಡೆದು ಸಾಯುವವಳು ನಾನು. ಅಂತಹುದರಲ್ಲಿ ತೋಟದಲ್ಲಿ ಹಾವು ಕಂಡಿದ್ದೀಯಾ ಅಂತ ಕೇಳ್ತಾಳಲ್ಲ ಇಷ್ಟೊಂದು ಸಲೀಸಾಗಿ. ‘ಯಾಕೆ? ಇಲ್ವಲ್ಲ’ ಅಂದೆ.

ಏನಿಲ್ಲ ಮೊನ್ನೆ ನಮ್ಮ ಅಟ್ಟದ ತುಂಬಾ ಸದ್ದು. ‌ಏನು ಅಂತ ಯಾರಿಗೂ ಗೊತ್ತಾಗಲಿಲ್ಲ. ಆಚೆ ಈಚೆ ದಡಬಡ ಹೋಗುವ ಸದ್ದು. ಅಪ್ಪ ನೋಡಿಯೇ ಬಿಡುವ ಅಂತ ಮೇಲೆ ಹತ್ತಿ ಹೋದವರು ಕೆಳಗೆ ಇಳಿದು ಬರಲೇ ಇಲ್ಲ. ಏನಾಯ್ತು ಅಂತ ಅಣ್ಣ ನೋಡಲು ಹೋದರೆ ಅಪ್ಪ ಆಚೆ ಈಚೆ ತೂರಾಡುತ್ತಿದ್ದಾರೆ. ಇಷ್ಟು ಹೊತ್ತು ಸರಿ ಇದ್ದವರು ಈಗ ಏನಾಯ್ತಪ್ಪಾ ಅಂತ ಗಾಬರಿ ‌ಬಿದ್ದು, ಮೆಲ್ಲಗೆ ಅಪ್ಪನನ್ನ ಕೆಳಗಿಳಿಸಿ ಮಾತಾಡಿದರೆ,‌ ಅಪ್ಪ ಏನೆಲ್ಲಾ ಮಾತಾಡುತ್ತಿದ್ದಾರೆ.

ಹ್ಮಾಂ! ‘ನಿನ್ನ‌ ತೋಟದಲ್ಲಿ ಕಿತ್ತಳೆ ಕಳುವಾಗುತ್ತಿದೆ ನೋಡು. ಹೀಗೆ ಕಳುವಾದರೆ ನಿನಗೆ ಉಳಿಗಾಲ ಇಲ್ಲ. ನಾನು ಹೇಳಿದಂತೆ ಕೇಳು.’ ಅಪ್ಪನ ಮೇಲೆ‌ ನಾವು ನಂಬುವ ದೈವ ಬಂದಿರಬೇಕು ಅಂತ ಅಣ್ಣ ಅಂದಾಜಿಸಿ ಅದು ಕೇಳಿದ ಪ್ರಶ್ನೆಗಳಿಗೆ ಎಲ್ಲ ಉತ್ತರಿಸಿದ ಮೇಲೆ ಅಪ್ಪ ಸುಸ್ತಾಗಿ ಒಂದು ಕಡೆ ಬಿದ್ದಿದ್ದರು. ಎಲ್ಲರೂ ಗಾಳಿ ಹಾಕಿ, ಬೊಂಡದ‌ ನೀರು ಕುಡಿಸಿದಾಗ ಪ್ರಜ್ಞೆ‌ ಬಂದ ಅಪ್ಪ ಗಡಿಬಿಡಿಯಿಂದ ಎದ್ದಾಗ, ಅವರಿಗೆ‌ ನಡೆದದ್ದು ಒಂದೂ ನೆನಪಿರಲಿಲ್ಲ.

‘ಯಾಕೆ ಹೀಗೆಲ್ಲ ಆಯ್ತು ವಿದ್ಯಾ?’

ಗಾಬರಿ‌ಬಿದ್ದಿದ್ದೆ ನಾನು. ನನ್ನ ಮೈ ಸಣ್ಣಗೆ‌‌ ನಡುಗಿ ಆಗಲೇ ಬಿಸಿಯಾಗುತ್ತಿತ್ತು.

ನನಗೂ‌ ಗೊತ್ತಿಲ್ಲ ಸರೂ. ಆದರೆ ತೋಟದಲ್ಲಿ ಫಸಲು ಹೆಚ್ಚಿದ್ದರೂ ಕಿತ್ತಳೆ ಹಣ್ಣು ಅಂದಾಜಿಯಷ್ಟು ಸಿಗದೆ ಅಪ್ಪನಿಗೆ ಅದುವೇ‌ ಚಿಂತೆ ಆಗಿತ್ತು. ಏನಾದರೂ ಮಾಡಬೇಕು ಅಂತ ಅವೊತ್ತು‌ ಮಂಗಳವಾರ ಮಡಿಯುಟ್ಟು ಪ್ರಾರ್ಥನೆ ‌ಮಾಡಿಕೊಂಡಿದ್ದರು. ಸರೀ ಒಂದು ವಾರದೊಳಗೆ ಅಪ್ಪನ ‌ಮೈಯೊಳಗೆ ದೈವ ಆವಾಹಿಸಿ ಅಭಯ ನೀಡಿದ್ದಾರೆ ನೋಡು! ದೈವದ ಬಾಯಿಂದಲೇ ಬಂದದ್ದು‌.

‘ನಿನ್ನ ತೋಟದ ಕಾವಲಿಗೆ ನಾ‌ ನಿಲ್ಲುತ್ತೇನೆ, ಇನ್ನು ಮುಂದೆ ನಿಶ್ಚಿಂತೆಯಿಂದ ಇರು’ ಅಂತ. ಅಪ್ಪನಿಗೆ ಮೊನ್ನೆ ಕನಸಿನಲ್ಲಿ ನಮ್ಮ‌ ಮನೆಯಷ್ಟು ದೊಡ್ಡ ಗಾತ್ರದ ಹಾವು ತೋಟದ ನಡುವಿನ ಕಿತ್ತಳೆ ಹಣ್ಣಿನ ಮರದ ಬುಡದಲ್ಲಿ ಸುತ್ತು ಹಾಕಿ ಮಲಗಿದ್ದಂತೆ ಕಂಡಿತ್ತಂತೆ.

ನನ್ನ ಬಾಯಿ ಪಸೆ ಎಲ್ಲ ಆರಿ ಹೋಗಿತ್ತು. ನಾಳೆಯಿಂದ ತೋಟದಲ್ಲಿ ಕಿತ್ತಳೆ ಅವರು ಕಿತ್ತು ಕೊಟ್ಟರೂ ತಿನ್ನಬಾರದು.

ಛೆ! ಅವರಿಗೆ ಏನಾದರೂ‌ ಆದರೆ? ಹೇಗೆ ಹೇಳದೇ ಇರುವುದು? ಯಾರೊಂದಿಗೂ ಹೇಳಬಾರದು ಅಂತ ಆಣೆ ಬೇರೆ ಹಾಕಿಸಿ ಕೊಂಡಿದ್ದಾಳೆ.‌ ಅದೂ ಮನೆಯಷ್ಟು ದೊಡ್ಡ ಹಾವು ಹೇಗೆ ಗಿಡ ಮರದ ಸಂದಿಯಲ್ಲಿ ನುಸುಳೋಕೆ ಸಾಧ್ಯ ಆಗುತ್ತೆ ಅನ್ನುವುದೇ ನನಗೆ ಬಗೆಹರಿಯದ ಪ್ರಶ್ನೆ. ಆ ರಾತ್ರೆಯಿಡೀ ಸುತಾರಾಂ ನಿದ್ದೆ ಹತ್ತಿರಲಿಲ್ಲ. ಆದರೆ ಯಾರನ್ನೂ‌ ಕೇಳುವ ಹಾಗಿಲ್ಲವಲ್ಲ! ಆ ದಿನ ಓರಗೆಯವರ ಯಾರ ಜೊತೆ ಸೇರದೆಯೂ ಓಡೋಡಿ ಬಂದು ಮನೆ ಸೇರುವಷ್ಟರಲ್ಲಿ ಜ್ವರ ನೆತ್ತಿಗೇರಿ ಬಿಟ್ಟಿತ್ತು.

ಬೆಳಗ್ಗೆ ಕುಣಿಯುತ್ತಾ ಶಾಲೆಗೆ ಹೋದವಳಿಗೆ ಸಂಜೆ ಆಗುವಾಗ ಏನಾಯ್ತು ಅಂತ ಅಮ್ಮ ಗಾಬರಿ ‌ಬಿದ್ದು ಅಪ್ಪನನ್ನು ಡಾಕ್ಟರಲ್ಲಿಗೆ ಓಡಿಸಿ ಗುಳಿಗೆ ತಂದು ತಿನ್ನಿಸಿದರೂ ಏರಿದ ಜ್ವರ ಕಡಿಮೆ ಆಗಲಿಲ್ಲ. ಶಾಲೆ ದಾರಿಯಲ್ಲಿ ಬರುವಾಗ ಮುಸ್ಸಂಜೆ ಹೊತ್ತು ಇವಳಿಗೇನೋ ಸೋಕಿರಬೇಕೆಂದು ಅಜ್ಜಿ ತರ್ಕಿಸಿ, ಪೊರಕೆ ಕಡ್ಡಿ ಉಪ್ಪು, ಬೆಳ್ಳುಳ್ಳಿ ಸಿಪ್ಪೆ ತಲೆಗೆ ಮೂರು‌ ಸರ್ತಿ‌ ತಂದು ಉರಿವ ಬೆಂಕಿಗೆ ಹಾಕಿ ಸಿಡಿಸಿದರು. ಗಾಳಿ ಸೊಪ್ಪು ತಂದು ಸೋಂಕು ತೆಗೆದರೂ ಜ್ವರ ಜಪ್ಪಯ್ಯ ಅನ್ನಲಿಲ್ಲ. ಆ ದಿನ ರಾತ್ರೆಯೆಲ್ಲ ಬೆಚ್ಚಿ ಬೆಚ್ಚಿ‌‌ ಎಚ್ಚರ ಆಗುತ್ತಿತ್ತು. ಮೂರು ದಿನ ಆದರೂ ಜ್ವರ ಬಿಡಲಿಲ್ಲ.‌ ಶಾಲೆಗೂ ಹೋಗಲಾಗಲಿಲ್ಲ. ನನಗೆ ರುಕ್ಕು ಪದ್ದಿಯರದ್ದೇ ಚಿಂತೆ..ಕಿತ್ತಳೆ ಹಣ್ಣು, ಮನೆಯಷ್ಟು ದೊಡ್ಡ‌ ಹಾವು! ಅವರು ಶಾಲೆಗೆ ಹೋದವರು‌ ಬರುತ್ತಾರೋ ಇಲ್ಲವೋ ಅನ್ನುವುದೇ ದಿಗಿಲು. ಆದರೆ ಸಂಜೆ ನಗುತ್ತಾ ಬರುವ ಸದ್ದು ನನ್ನ ರೂಮಿನವರೆಗೂ ಕೇಳಿಸುವಾಗ ತುಸು ಎದೆ ಹಗೂರವಾಗುತ್ತಿತ್ತು. ಬಂದವರೇ ನನ್ನ ನೋಡಿಯೇ ‌ಹೋಗುತ್ತಿದ್ದರು.‌ ಇವತ್ತು ಹೇಗೆ ಅಜ್ಜನ ‌ಕಣ್ಣು ತಪ್ಪಿಸಿ ನಾವು ಕಿತ್ತಳೆ ಹಣ್ಣು ಕಿತ್ತೆವು ಅಂತ ರುಕ್ಕು ಹೇಳುವುದು‌ ನನಗೆ ಜ್ವರದ ಬಳಲಿಕೆಯ ನಡುವೆಯೂ ಕೇಳಿಸುತ್ತಿತ್ತು.‌ ನನ್ನ ಪಾಲಿನ ಕಿತ್ತಳೆ ಹಣ್ಣನ್ನು ಮೇಜಿನ ಬದಿಯಲ್ಲಿ ಇಟ್ಟು ಹೋಗಿದ್ದಾರೆ. ಮನೆಯಷ್ಟು ದೊಡ್ಡ ಹಾವು..!ಹೇಗಿರಬಹುದು? ಮತ್ತೆ ಬೆಚ್ಚಿ ಬೀಳುತ್ತೇನೆ. ಮುರಿದ ಮಾತು, ಹಾಕಿಸಿ ಕೊಂಡ ಆಣೆ ಎಲ್ಲವೂ ತೋಳೆ‌ತೋಳೆಗಳ ನಡುವೆ ಪದರ‌ ಪದರ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಎಲ್ಲರ ಕಣ್ಣು‌ ತಪ್ಪಿಸಿ‌ ಮೆಲ್ಲ ಹಿತ್ತಲ ಬಾಳೆ ಬುಡಕ್ಕೆ ಎಸೆದು ಬಿಟ್ಟಿದ್ದೆ.

‘ಹಾಗಾದರೆ ನಿಮಗೆ ಹಾವು ಕಾಣಲಿಲ್ಲವೇ?’ ಜ್ವರದ ನಡುವೆಯೂ ಕನಲಿದ್ದೆ.

ಅಲ್ಲೇ ಇದ್ದ ಅಜ್ಜಿಗೆ ಇದು ನಿಜಕ್ಕೂ‌ ದೆವ್ವದ ಕಾಟವೇನೋ ಅಂದು ಕೊಂಡು ‘ಸರೂವಿನ ಜ್ವರ ಕಡಿಮೆ ಆದರೆ ‌ಕಡ್ಲೆ ರೆಕ್ಕೆಯ ಲಾಕಿ ಹುಂಜ ನಿಂಗೇ ಕೊಟ್ಟನೆ’ ಅಂತ ಬಾಡೆಯಲ್ಲಿ ನೆಲ್ಲಕ್ಕಿ ದೀಪದ‌ ಮುಂದೆ ನಿಂತು ಪ್ರಾರ್ಥಿಸುವುದು ನನ್ನ ಕಿವಿಗೆ ಕೇಳುತ್ತಿತ್ತು. ಅದೇನೋ ಆ ದಿನ ರಾತ್ರೆ ಜ್ವರ ಬಿಟ್ಟಿತ್ತು. ಅಜ್ಜಿಯ‌ ನಂಬಿಕೆ ಮತ್ತಷ್ಟು ಹೆಚ್ಚಿತು. ನಾನು ಚೀಲ ಕೋಸಿ ರುಕ್ಕು ಪದ್ದಿ ಜೊತೆ ಶಾಲೆಗೆ ಹೊರಟೆ.

ಏಯ್..ರುಕ್ಕು..ನಿಜಕ್ಕೂ..ನಿಮಗೆ ಮೊನ್ನೆ ‌ಹಾವು ಕಾಣಲಿಲ್ವಾ..

ಇಲ್ವಾ.. ಯಾಕೆ? ಏನಿಲ್ಲ‌ ಬಿಡು.‌ ಆದರೆ ಇನ್ನು ಮುಂದೆ ಕಿತ್ತಳೆ ಹಣ್ಣು ಕೀಳುವುದು ಬೇಡ‌ ಅಯ್ತಾ.‌ ಯಾಕೆ ಬೇಡ? ನಮಗೆ ಬೇಕು ಅಂತ ಮರ ಹತ್ತಲು ಹೋದ‌ ರುಕ್ಕುವನ್ನು,‌ ಹಾವು..ಹಾವು! ಅಂತ ಕಿರುಚಿ ಲಂಗ ಎಳೆದಿದ್ದೆ. ಅವರು ಹೆದರಿಕೆಯಿಂದ ಹೌಹಾರಿ‌ ನೋಡಿದರೆ ಎಲ್ಲೂ ಇಲ್ಲ. ಮತ್ತೆ ಸಂಜೆ ರುಕ್ಕು ಮರ ಹತ್ತಲು ಹೋದಾಗ ಹಾಗೇ ಕಿರುಚಿ ತಪ್ಪಿಸಿದ್ದೆ. ಆ ‌ದಿನ‌ ಹೇಗೋ‌ ಕಳೆಯಿತು. ನಿರಾಳವಾಗಿದ್ದೆ. ಮಾರನೇ‌ ದಿನ ಇದೇ ಪುನರಾವರ್ತನೆ ಆದಾಗ ದಮ್ಮಯ್ಯ..! ಯಾರಲ್ಲೂ ಹೇಳ ಬೇಡಿ ಅಂತ ವಿದ್ಯಾ ಅರುಹಿದ ಸಂಗತಿಯನ್ನು ಮತ್ತಷ್ಟು ಭಯ ಹುಟ್ಟಿಸುವ ರೀತಿಯಲ್ಲಿ ಹೇಳಿ‌ ಅವರು ಕಿತ್ತಳೆ ಹಣ್ಣು ಕೀಳುವುದನ್ನು ತಪ್ಪಿಸುವುದರಲ್ಲಿ ಸಫಲಳಾದೆ. ಆಣೆ ಮಾಡಿಸಿಕೊಂಡ ಮಾತು ತಪ್ಪಿ ಉದುರಿ ಹೋಗಿತ್ತು. ನನಗೆ ವಿಧಿ ಇರಲಿಲ್ಲ. ‌ಅದೊಂದು ದಿಗಿಲು‌ ಹಾಗೇ ಕನಸಿನಂತೆ ನಿದ್ದೆಯಲ್ಲೂ ಏಳಿಸಿ ಗಾಬರಿ ಹುಟ್ಟಿಸುತ್ತಿತ್ತು.

ಎಷ್ಟೋ ದಿನಗಳ ಬಳಿಕ ವಿದ್ಯಾಳ ಅಪ್ಪ ಮನೆಗೆ ಬಂದಿದ್ದಾರೆ. ಹೊರಗೆ ಬಾಜಿರದಲ್ಲಿ ಕುಳಿತು ಅಪ್ಪನೊಂದಿಗೆ ಎಲೆ ಅಡಿಕೆ ಹಾಕುತ್ತಾ ಪಟ್ಟಾಂಗ ಹೊಡೆಯುತ್ತಿದ್ದಾರೆ. ಭಾರೀ ಕುಶಿಯಲ್ಲಿ ಇದ್ದಂತೆ ಕಾಣುತ್ತದೆ. ಈ ಸಲ‌ ತೋಟದಲ್ಲಿ ಕಿತ್ತಳೆಯಿಂದ ಒಳ್ಳೆ ಲಾಭ ಆಯ್ತು ನೋಡಿ! ಮೊದಲೆಲ್ಲಾ ಅಲ್ಲಿಂದ ಅಲ್ಲಿಗೆ. ಫಸಲು ಕಂಡರೂ ಕೈಗೆ ಸಿಗುತ್ತಿರಲಿಲ್ಲ.‌ ಹರಕೆ ಹೇಳಿ ಕರಿ ಲಾಕಿ ಕೋಳಿ ಬಿಟ್ಟದ್ದು ಒಂದೇ ಗೊತ್ತು,‌ ನಂಬಿದವರಿಗೆ ಇಂಬು ಉಂಟೇ ಉಂಟು‌. ‌ನಿಮ್ಮ‌ ಮಕ್ಕಳು ಅದೇ ದಾರಿಯಲ್ಲಿ ಹೋದರೂ ಒಂದೇ ಒಂದು ಕಿತ್ತಳೆ ಮುಟ್ಟಿ‌ಮೂಸಿ ನೋಡಲಿಲ್ಲ‌ ನೋಡಿ. ತಗೊಳ್ಳಿ! ಇವತ್ತು ಇಸುಬು ಕಾಕನ ಅಂಗಡಿಲಿ‌ ಕಿತ್ತಳೆ ವ್ಯಾಪಾರ ಮುಗಿಸಿದೆ. ಅಂದುಕೊಂಡದ್ದಕ್ಕಿಂತ ಹೆಚ್ಚಿಗೇ ಲಾಭ ಬಂದಿದೆ.‌ ಅದೇ ಕುಶಿಗೆ ಸರೂಗೆ ಇರಲಿ ಅಂತ ‌ವಿದ್ಯಾ ಒಂದು ಬುಟ್ಟಿ ಕಿತ್ತಳೆ ಕೊಡಲು ಹೇಳಿದ್ದಾಳೆ.

ಕೈಯಾಲೆಯಲ್ಲಿ ಅವರ ಮಾತುಕತೆ ಸಾಗುತ್ತಿದೆ. ನಡುವೆ‌ ಅಜ್ಜಿಯೂ ತಿಮ್ಮಯ್ಯನವರಲ್ಲಿ, ನನಗೆ ಬಂದ ಜ್ವರ ಹೇಗೆ ಕಡಿಮೆ ಆಯಿತು ಅಂತ ಹೇಳುತ್ತಾ‌ ಈ ಕಡ್ಲೆ ಲಾಕಿ ಕೋಳಿ ಅದಿಕ್ಕೆ ಬಿಟ್ಟದ್ದು ಅನ್ನುವಾಗ ಕ್ರೀ..ಕ್ರೀಂ ಕೋಳಿಯ ಚೀರಾಟ ಎದೆಯೊಳಗೆ ವೇದನೆ ಏಳಿಸುತ್ತದೆ. ಇನ್ನೆಂದೂ ‌ಕೋಳಿ ಸಾರು ಮುಟ್ಟುವುದಿಲ್ಲ ಅಂತ ನಿಶ್ಚಯಿಸಿ, ಈ ಕೋಳಿಯನ್ನ ಮೆಲ್ಲಗೆ ಗಡಿ ಪಾರು ಮಾಡಬೇಕು ಅಂತ ತೀರ್ಮಾನ ‌ಮಾಡಿ, ವಿದ್ಯಾ ಕೊಟ್ಟ ಕಿತ್ತಲೆ ಸಿಪ್ಪೆ ತೆಗೆದು ತೋಳೆಗಳನ್ನ‌ ಬಿಡಿಸಿ ನಿರ್ಭಿಡೆಯಿಂದ ತಿಂದು‌ ‌ಮುಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT