ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಧರ ಗಸ್ತಿ ಅವರ ಕಥೆ: ಕಾಡಂಚಿನ ಕಾಡುಮಲ್ಲಿಗೆ

Last Updated 4 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳಗೆ ತತ್ತರಿಸಿ ಹೋಗಿದ್ದ ಊರ ಜನಕ್ಕೆ, ಮಳೆ ಹೀಗೂ ಆಗುತ್ತಾ? ಎನ್ನುವ ಭಯ ಹುಟ್ಟಿಸಿತ್ತು. ಬಡತನದ ಬೇಗೆಯಲ್ಲಿ ಪುಡಿಗಾಸು ಮಾಡಿಕೊಂಡು ಕಟ್ಟಿಕೊಂಡಿದ್ದ ಶಿವಮೂರ್ತಿಯ ಮನೆ ಮಳೆಯ ಹೊಡೆತಕ್ಕೆ ಬಿರುಕು ಬಿಡಲಾರಂಭಿಸಿತು. ಇನ್ನೊಂದು ದಿನ ಮಳೆ ಹಿಂಗ ಸೂರಿದ್ರ ನಾವು ಬೀದಿಗೆ ಬಂದ ಬಿಡ್ತೀವಿ ಅನ್ನುವ ಸುಳಿವನ್ನು ಹೆಂಡತಿ ಸುಸ್ಮಿತಾ ನೀಡಿದ್ದರೂ ಶಿವಮೂರ್ತಿ ಅದೆಂಗ ಬೀಳ್ತೈತಿ ಹಾಳಮಣ್ಣು ಅಂದ್ರ ಸಿಮೆಂಟ ಇದ್ದಾಂಗ ಅಂತಹ ಮಣ್ಣ ಹಾಕಿ ಕಟ್ಟೇವಿ ಬೀಳಾಂಗಿಲ್ಲ ನೀ ಸುಮ್ಕೀರು. ಇಲ್ಲದ್ದ ಅಡಶುಬ ನುಡೀಬ್ಯಾಣ, ಅನ್ನೋದ್ರಾಗ ಆ ಓಣಿ ಒಳಗ ಒಬ್ಬೊಬ್ಬರದ್ದು ಮನಿಗೋಳೆಲ್ಲ ಬೀಳಾಕಾತ್ವು, ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಜನ ಹೊಯ್ಕೋಳ್ಳುತ್ತ ರಣಮಳೆಯನ್ನು ಶಪಿಸುತ್ತ, ಗೋಳಾಡುತ್ತಿರುವ ದೃಶ್ಯ ಕರುಳು ಕೀವುಚುವಂತಿತ್ತು. ದಿಢೀರನೆ ಸುರಿದ ಮಳೆಯಿಂದ ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಅದರ ಜೊತೆಗೆ ಕೂಲಿನಾಲಿ ಮಾಡಿ ಕೂಡಿಟ್ಟ ಕಾಳು ಕಡಿಯೆಲ್ಲವೂ ಮಳೆಗೆ ಆಹುತಿಯಾಗ್ತಾ ಇದ್ವು. ಜನರ ಕೂಗಾಟ ಚೀರಾಟಕ್ಕೆ ರಣಮಳೆ ಇನ್ನೂ ಆರ್ಭಟಿಸುತ್ತಿತ್ತು. ಹವಾಮಾನದ ವೈಪರಿತ್ಯದಿಂದಾಗಿ ಮಳೆ ಇನ್ನೂ ಒಂದು ವಾರ ಹೀಗೆ ಇರಲಿದೆಯೆಂದು ಸುದ್ದಿ ಮಾಧ್ಯಮಗಳು ಬಿತ್ತರಿಸಿ, ರಣಮಳೆಯ ಪ್ರಭಾವ ಹೆಚ್ಚುತ್ತಿರುವುದರಿಂದ ಕೆರೆ ಕಟ್ಟೆಗಳು ತುಂಬಿ ಊರಲ್ಲಿ ನೀರು ನುಗ್ಗಿ ಪ್ರವಾಹ ಉಂಟು ಮಾಡುವ ಸಾಧ್ಯತೆಗಳಿರುವುದರಿಂದ ಜನರು ಊರ ಹೊರಗಿನ ಆಶ್ರಯ ತಾಣಗಳಲ್ಲಿ ವಿರಮಿಸಲು ಸಲಹೆ ನೀಡಿತ್ತು. ನಿಮ್ಮೊಂದಿಗೆ ನಾವಿದ್ದೇವೆ, ಜನರು ಆತಂಕಕ್ಕೊಳಗಾಗದೇ ಇರಲು ಜನಪ್ರತಿನಿಧಿಗಳು ಮನವಿ ಮಾಡಿಕೊಳ್ಳುತಿದ್ದರು. ಸರ್ಕಾರಿ ಶಾಲೆ, ಗುಡಿಗುಂಡಾರಗಳಲ್ಲಿ ಹಾಗೂ ಎತ್ತರವಿರುವ ಪ್ರದೇಶಗಳಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ತೆರೆಯುವುದರ ಮೂಲಕ ಅಲ್ಲಿ ಆಶ್ರಯ ಪಡೆಯಲು ತಿಳಿಸುತ್ತಿದ್ದರು.

ಜಾನುವಾರಗಳನ್ನು, ಕೋಳಿ ಹಾಗೂ ಸಾಕಿದ ನಾಯಿ, ಬೆಕ್ಕುಗಳನ್ನು ಬಗಲಲ್ಲಿ ಹಿಡಿದುಕೊಂಡು ಗುಳೇ ಹೊರಟವರಂತೆ ರಾತ್ರೋ ರಾತ್ರಿ ಊರ ಜನ ಹೊರವಲಯದ ಎತ್ತರದ ಶಾಲೆಗಳಲ್ಲಿ ಉಳಿದುಕೊಳ್ಳಲು ಮನಸ್ಸಿಲ್ಲದ ಮನಸ್ಸಿನಿಂದ ದೌಡಾಯಿಸುತ್ತಿದ್ದರು. ಹಿರಿಯ ಜೀವಗಳು ಇಷ್ಟೋರ್ಷಾತು, ಎಷ್ಟೊಂದು ತಲೆಮಾರುಗಳಿಂದ ಯಾವ ಪ್ರವಾಹನೂ ಈ ಊರಿಗೆ ಬಂದಿಲ್ಲ. ಏನಾಗೊದಿಲ್ಲ ಸುಮ್ನಿರಿ ಎಂಬ ಹಿರಿಯರ ಮಾತುಗಳು ನಿಜವೆನಿಸಿದರೂ ಪರಿಸ್ಥಿತಿ ವೈಪರಿತ್ಯವಾಗಿತ್ತು. ಒತ್ತಾಯದಿಂದ ಅವರೆಲ್ಲರನ್ನೂ ಹೊರತರಲಾಗಿತ್ತು. ಆಶ್ರಯ ತಾಣಗಳು ಜನ ಜಂಗುಳಿಯಿಂದಾಗಿ, ಬದುಕಿದರೇ ಸಾಕಪ್ಪ ಎಂದು ಬೆಚ್ಚಗಿನ ಸ್ಥಳಕ್ಕಾಗಿ ಹವಣಿಸುತ್ತ ಶಾಲೆಯತ್ತ ಧಾವಿಸುತ್ತಿದ್ದರು. ಶಾಲೆಯೇನೋ ಎತ್ತರದಲ್ಲಿತ್ತು. ಆದರೆ ಎಲ್ಲ ರೂಮುಗಳಲ್ಲಿ ನೀರು ಜಿನಗುಟ್ಟುತಾ ಸೋರಲು ಆರಂಭವಾಗಿತ್ತು. ಬಹಳ ದಿನಗಳ ಮೇಲೆ ಇಷ್ಟೊಂದು ಜನ ತನ್ನತ್ತ ಬಂದಿರುವುದನ್ನು ಕಂಡ ಆ ಶಾಲೆ, ನೋಡಿ? ನನ್ನ ಸ್ಥಿತಿ ಹೇಗಾಗಿದೆ ಎಂದು ಅಣಕಿಸುತಿತ್ತು. ಊರಗೌಡರಾದಿಯಾಗಿ ಎಲ್ಲ ಹಿರಿಯರು ಏನೂ ಮಾತಾಡದ ಸ್ಥಿತಿಯಲ್ಲಿ ತಲೆ ತಗ್ಗಿಸಿದ್ದರು. ಯಾರು ಯಾರನ್ನು ಹಳಿಯೋದು ಅನ್ನುವ ಪರಿಸ್ಥಿತಿ ಬಂದೊದಗಿತ್ತು. ರಣಮಳೆಯ ಅರ್ಭಟ ಇನ್ನೂ ಜೋರಾಯಿತು. ಅಂದುಕೊಂಡಂತೆ ನೂರಾರು ಇತಿಹಾಸವುಳ್ಳ ಕೆರೆ ಕೋಡಿ ಒಡೆದು ನೀರು ನುಗ್ಗಿದ ರಭಸಕ್ಕೆ ಅಳಿದುಳಿದ ಮನೆ, ಗಿಡ ಮರಗಳೂ ಧರೆಗುರುಳಲಾರಂಭಿಸಿದ್ದವು. ತಮ್ಮ ಹಿರಿಯರು ಕಟ್ಟಿದ ಮನೆಗಳು ಅವರೇ ತೇಲಿ ಹೊಂಟಂತೆ ಟಾಟಾ ಬೈ ಬೈ ಹೇಳಿದಂತೆ ಭಾಸವಾಗುತ್ತಿತ್ತು.

ಕೆಟ್ಟ ಮುನ್ಸೂಚನೆಯೋ ಎಂಬಂತೆ ಕಳೆದೆರಡು ತಿಂಗಳಿಂದ ಬೆಳಗಾದರೆ ಸಾಕು, ಯಾಕಪ್ಪಾ ಬೆಳಗಾಯ್ತು ಅನ್ನುವಷ್ಟರ ಮಟ್ಟಿಗೆ ಜನ ನರಕ ಯಾತನೆ ಅನುಭವಿಸುತ್ತಿದ್ದರು. ಹಲಾಲ್ ಹಿಲಾಲ್‌ಗಳು, ಶಾಲು ರುಮಾಲುಗಳ ಸದ್ದು ಜೋರಾಗಿತ್ತು. ಸಂಘಟನೆಗಳ ಹೆಸರು ಹೇಳಿಕೊಂಡು ಧರ್ಮ ಧರ್ಮಗಳ ಮಧ್ಯೆ ಹಚ್ಚಿದ್ದ ಬೆಂಕಿಯ ಹೊಗೆ ಧಗಧಗ ಎಂದು ಉರಿಯುತ್ತಿತ್ತು. ನಾ ಹೆಚ್ಚು ನೀ ಹೆಚ್ಚು ಎನ್ನುವ ಆ ಬೆಂಕಿ ಊರ ನೆಮ್ಮದಿಯನ್ನು ಹಾಳುಮಾಡಿ ಹಿರಿಕಿರಿಯರ ತಲೆ ಕೆಡಿಸಿತ್ತು. ವಿದ್ಯಾರ್ಥಿಗಳು ಮನೆ ಬಿಟ್ಟು ಹೊರಬರದಂತೆ ತಂದೆತಾಯಿಯರು ನಿರ್ಬಂಧ ಹಾಕಿದ್ದರು. ಶಾಲೆ ಕಾಲೇಜುಗಳೆಲ್ಲ ಧರ್ಮದ ಟಾರ್ಗೇರ್ ಆಗಿ ಪೊಲೀಸರ ಕಣ್ಗಾವಲಿನಲ್ಲಿ ನಡೆಯುವಂತಾಗಿತ್ತು. ಗುಡಿ ಗುಂಡಾರ ಮಸೀದಿ ಚರ್ಚುಗಳ ದೇವರುಗಳೆಲ್ಲ ಪೊಲೀಸ್ ಸರ್ಪಗಾವಲಿನಲ್ಲಿ ಬಂಧಿಯಾಗಿದ್ದರು. ಹೊರಹೋದ ಮಕ್ಕಳು ಮನೆಗೆ ಮರಳುವ ಆತಂಕದ ಛಾಯೇ ಆವರಿಸಿತ್ತು. ಈ ಮಧ್ಯೆ ಕಳೆದೊಂದು ವಾರದಿಂದ ಬೀಳುತ್ತಿರುವ ಮಳೆ ಎಲ್ಲವನ್ನೂ ತೊಯ್ಸಿಕೊಂಡು ನಾ ಎಂದವನ ಅಹಮ್ಮನ್ನು ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.

ಬಿಡಾರದಲ್ಲಿ ಊಟಕ್ಕಾಗಿ, ಶುದ್ಧ ಕುಡಿಯುವ ನೀರಿಗಾಗಿ, ಹಸಿದ ಕಂದಮ್ಮಗಳು ಹಾಲಿಗಾಗಿ, ಹಸಿವಿನಿಂದ ಊಟಕ್ಕಾಗಿ ಹವಣಿಸುತಿದ್ವು. ಚಳಿಗಾಳಿಗೆ ವಾತಾವರಣ ಕಲುಷಿತವಾಗುತಿತ್ತು. ವಯಸ್ಸಾದ ವೃದ್ಧರು, ರೋಗಿಗಳು ಸರಿಯಾದ ಸುಶ್ರೂಷೆಯಿಲ್ಲದೇ ಬಳಲುತಿದ್ದರು. ಆಹಾರವಿಲ್ಲದೇ ದನಕರುಗಳು ಅಂಬಾ! ಎಂದು ಆಹಾರಕ್ಕಾಗಿ ಮಾಲಿಕನನ್ನು ಗೋಗರೆಯುತ್ತಿದ್ದವು.

ಶಿವಮೂರ್ತಿ ಮತ್ತು ಸುಸ್ಮಿತಾ ದಂಪತಿಗಳು ಕೂಲಿನಾಲಿ ಮಾಡಿ ಕಟ್ಟಿದ ಕನಸಿನ ಮನೆಯೂ ನೀರಲ್ಲಿ ನೀರಾಗಿ ಕಾಣದೇ ಮಾಯವಾದದ್ದು, ಅವರ ಎದೆ ಧಸಕ್ ಎನಿಸಿತ್ತು. ಕುಸಿದು ಬಿದ್ದ ಶಿವಮೂರ್ತಿ ಮೇಲೇಳಲೇ ಇಲ್ಲ. ಬೆಳಗಾದರೆ ಮಗಳ ಮದುವೆ ನಿಶ್ಚಯವಾಗಿತ್ತು. ಕೂಡಿಟ್ಟ ಕೂಲಿ ಹಣದಿಂದ ಮದುವೆಗೆ ಬೇಕಾದ ಬಂಗಾರದ ಒಡವೆ, ಬಟ್ಟೆ ಬರೆ ಹಾಗೂ ಮದುವೆಯನ್ನು ಇವರೇ ಮಾಡಿಕೊಡುವ ಕರಾರು ಇದ್ದುದರಿಂದ ಎಲ್ಲಾ ದಿನಸಿ ಪದಾರ್ಥಗಳನ್ನು ಖರೀದಿಸಿದ್ದರು. ಅವೆಲ್ಲವೂ ನೀರಲ್ಲಿ ನೀರಾಗಿ ಹೋಗಿದ್ದರಿಂದ ಮಗಳು ಮಲ್ಲಿಕಾಳ ಮದುವೆ ಅನಿಶ್ಚಿತವಾಗಿತ್ತು. ಗಟ್ಟಿಗೊಳಿಸಿದ್ದ ಮದುವೆ ಶಿವಮೂರ್ತಿಯ ಅಕಾಲಿಕ ಮರಣ ಹಾಗೂ ಎಲ್ಲವನ್ನು ಕಳೆದುಕೊಂಡಿದ್ದನ್ನು, ಗಂಡಿನ ಮನೆಯವರು ಸ್ವಾಭಾವಿಕವೆಂದು ಭಾವಿಸಲಿಲ್ಲ. ಬದಲಾಗಿ ಅಪಶಕುನವೆಂದು ಹೆಸರಿಟ್ಟರು. ಈ ಹುಡುಗಿಯನ್ನು ಮನೆಗೆ ತಂದರೆ ಅದೇನು ಸಂಭವಿಸಲಿದೆಯೋ ಎಂದು ಅವಹೇಳನ ಮಾಡಿ ಕೈ ಚೆಲ್ಲಿದರು. ಮಾಡಿಕೊಳ್ಳುವ ಪರ ಸುಶಿಕ್ಷಿತನಾದರೂ ತಂದೆ ತಾಯಿ ಹಾಕಿದ ಗೆರೆ ಮೀರುವವನಾಗಿರಲಿಲ್ಲ. ಮಲ್ಲಿಕಾಳ ನಿಂತು ಹೋದ ಮದುವೆ ಬೀಳುತ್ತಿರುವ ಮಳೆಯ ನೀರಿನಲ್ಲಿ ನಮ್ಮನ್ನೂ ಸಹ ಕೊಚ್ಚಿಕೊಂಡು ಹೋಗಬಾರದೇ ಎಂದು ಸುಸ್ಮಿತಾ ಪರಿಸ್ಥಿತಿಯನ್ನು ಹಳಿಯುತ್ತಿದ್ದಳು.

ಮಳೆ ಇದಾವ ಪರಿವೇ ಇಲ್ಲದೆ ಮನುಷ್ಯನ ಒಂದೊಂದು ಕಥೆಗೆ ಒಂದೊಂದು ಸ್ವರೂಪ ಕೊಡುತ್ತ ಒಂದೇ ಸಮನೆ ಸುರಿಯುತಿತ್ತು. ನಾ ಹೆಚ್ಚು ನೀ ಹೆಚ್ಚು ಎಂದು ಮೆರೆದಾಡಿದ್ದ ಹಲಾಲ್ ಹಿಲಾಲ್‌ಗಳು ಹಾಗೂ ರುಮಾಲುಗಳು ಒಂದೇ ಸೂರಿನಡಿ ಆಶ್ರಯ ಪಡೆದಿದ್ದವು. ಅಳಿದುಳಿದ ಕಾಳುಕಡಿಗಳ ಉಪಯೋಗಿಸಿ, ಗೌಡರು ಅಯ್ಯನೋರು, ಫಕೀರರು, ಮಾದಿಗರು, ಹೊಲೆಯರು ಒಂದೇ ಒಲೆಯನ್ನು ಹೂಡಿ ವೆಂಕನಗೌಡ್ತಿ ಅನ್ನಕ್ಕೆ ಎಸರಿಟ್ಟರೇ, ಮರುಳಯ್ಯನ ಹೆಂಡತಿ ಪದ್ಮಾವತಿ ಈರುಳ್ಳಿ, ಟೊಮೆಟೋ ಕತ್ತರಿಸಿದಳು. ಮಡಿವಂತಿ ಮೀನಾಕ್ಷಿ ಸಾರಿಗೆ ಒಗ್ಗರಣೆ ಹಾಕಿದಳು. ಹೊಲೆಯರ ಹೊಳೆಯವ್ವ ರೊಟ್ಟಿ ಬಡಿಯುತ್ತಿದ್ದಳು. ಘಾತೀಮಾ ಮಮತಾಬೇಗಂರು ರುಚಿಕಟ್ಟಾದ ಪಲ್ಲೇ ಮಾಡಿದ್ದರು. ಹೀಗೆ ತಂಡೋಪತಂಡವಾಗಿ ಅಲ್ಲಲ್ಲಿ ಬಿಡಾರ ಹೂಡಿದ್ದ ತಂಡಗಳು, ಯಾವ ಬೇಧ ಭಾವವಿಲ್ಲದೇ ಒಂದೇ ಕಡೆ ಸೇರಿ ಪ್ಲೇಟನ್ನು ಕೈಲಿ ಹಿಡಿದು ಸರತಿಯಲ್ಲಿ ನಿಂತು ಉಣ್ಣುವುದ ಕಂಡರೇ ಆ ಪ್ರಕೃತಿ ಮಾತೆಯೇ ಮುನಿಸಿಕೊಂಡು, ಇವರು ತಿಂಗಳುಗಟ್ಟಲೇ ಮಾಡುತ್ತಿರುವ ಹೋರಾಟದ ಬೆಂಕಿಯನ್ನು ತಣ್ಣಗಾಗುವಂತೆ ಮಾಡಿ ಒಂದುಗೂಡಿಸಿದ್ದಳು. ಮಡಿ ಮಡಿಯೆಂದು ಅಡಿಗಡಿಗೆ ಹಾರುತ್ತಿದ್ದವರು, ನರಸತ್ತ ನಾಯಿಯಂತಾಗಿದ್ದರು.

ತಂದೆ ಶಿವಮೂರ್ತಿಯ ಅಕಾಲಿಕ ನಿಧನ, ಗೊತ್ತಾದ ಮದುವೆ ನಿಂತು ಹೋಗಿದ್ದು, ತಾಯಿಯ ರೋಧನ, ಜನರ ಅಣಕು ಮಾತುಗಳು ಮಲ್ಲಿಕಾಳ ಮನಸ್ಸನ್ನು ಘಾಸಿಗೊಳಿಸಿತ್ತು. ಬಡತನವಿದ್ದರೂ ತುಂಬ ಸುಂದರಿಯಾದ ಮಲ್ಲಿಕಾ ಗುಣದಲ್ಲಿಯೂ ಅಪ್ಪಟ ಚೊಕ್ಕ ಬಂಗಾರವಾಗಿದ್ದಳು. ಇದಾವ ಗುಣಲಕ್ಷಣಗಳು ಅವಳನ್ನು ಕಾಪಾಡುತ್ತಿಲ್ಲ. ಮೇಲಾಗಿ ದರಿದ್ರ ಪಟ್ಟ ಬೇರೆ. ಹೀಗೆ ಎಲ್ಲವನ್ನೂ ನೆನೆದು ನನ್ನಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ, ನಾನಿನ್ನು ಬದುಕಬಾರದು ಎಂಬ ನಿರ್ಧಾರಕ್ಕೆ ಬಂದ ಮಲ್ಲಿಕಾ ನೋಡು ನೋಡುತಿದ್ದಂತೆ ಹರಿಯುತ್ತಿರುವ ಪ್ರವಾಹದೆಡೆಗೆ ಓಡಿದಳು ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ನೀರಿಗೆ ಹಾರಿಯೇ ಬಿಟ್ಟಳು. ಜನ ಹೋ ಹೋ ಎಂದು ಕೂಗು ಹಾಕುತಿದ್ದಂತೆ, ಪ್ರವಾಹ ಅವಳನ್ನು ಕೊಚ್ಚಿಕೊಂಡು ಹೋಗುತಿತ್ತು.

ನೀರಿನಲ್ಲಿ ತೇಲಿಕೊಂಡು ಹೋಗುತಿದ್ದ ತನ್ನ ಹಂದಿಗಳನ್ನು ರಕ್ಷಿಸುತ್ತಿದ್ದ ವೀರಬಾಹು, ತನ್ನ ಪ್ರಾಣದ ಹಂಗು ತೊರೆದು ಹಂದಿಗಳ ರಕ್ಷಣೆ ಮಾಡುತಿದ್ದ. ಅಸಲಿಗೆ ವೀರಬಾಹು ಹೆಸರಿಗೆ ತಕ್ಕ ಹಾಗೆ ಬಲಾಢ್ಯವಾಗಿದ್ದ. ಯಾವುದೇ ಅಪಾಯದ ಕೆಲಸಗಳನ್ನು ಸಲೀಸಾಗಿ ಮಾಡುವ ಧೈರ್ಯದವ. ಇದ್ದಕ್ಕಿದ್ದ ಹಾಗೆ ಜನಗಳು ಆವಾಜ ಮಾಡೋದ ಕೇಳಿ ಆ ಕಡೆ ಲಕ್ಷ್ಯ ವಹಿಸಿದ ವೀರಬಾಹು ಹಂದಿಗಳನ್ನು ಹಿಡಿಯಲು ಬಳಸುತ್ತಿದ್ದ ಮಲವಿನ ಹಗ್ಗವನ್ನು ನೀರಿಗೆ ಜಿಗಿದ ಮಲ್ಲಿಕಾಳೆಡೆಗೆ ಎಸೆಯುತ್ತಾನೆ. ಬಿಟ್ಟುಬಿಡದೇ ಕಟಿಯುತ್ತಿದ್ದ ರಣಮಳೆ, ಪ್ರವಾಹವನ್ನು ಹೆಚ್ಚಿಸಿತ್ತು. ಮಲವಿನ ಹಗ್ಗವೇನೋ ಮಲ್ಲಿಕಾಳ ಸೊಂಟಕ್ಕೆ ಗಟ್ಟಿಯಾಗಿ ಬಿಗಿದುಕೊಂಡಿತ್ತು. ಆದರೆ ನೀರಿನ ಬಲವಾದ ಸೆಳೆತಕ್ಕೆ, ವೀರಬಾಹು ಸಹ ನೀರಿಗೆ ಬಿದ್ದಿದ್ದ, ತಾಂಡವ ನೃತ್ಯವಾಡುತಿದ್ದ. ಮಳೆ ಇಬ್ಬರನ್ನೂ ಕಣ್ಣು ಮೀಟುಕಿಸುವದರೊಳಗೆ ಸೆಳೆದುಕೊಂಡು ಹೋಗಿತ್ತು. ಜನ ಏನೂ ಮಾಡಲಾಗದೇ ಕೈಲಾಗದೇ ಚೀರಾಡುತಿದ್ದರು. ರಕ್ಷಣಾ ತಂಡಗಳು ಅಲ್ಲಿಗೆ ತಲುಪಲು ದಾರಿ ಸುಗಮವಾಗಿರಲಿಲ್ಲ. ಮಲ್ಲಿಕಾ ನೀರಿಗೆ ಹಾರಿದ ಸುದ್ದಿ ಕಿವಿಗಪ್ಪಳಿಸುತ್ತಿದ್ದಂತೆ, ಮೊದಲೇ ಗಂಡನನ್ನು ಕಳೆದುಕೊಂಡ ಸುಸ್ಮಿತಾಳ ಹೃದಯವೂ ನಿಂತು ಹೋಗಿತ್ತು. ವೀರಬಾಹು ಅನಾಥನಾದ್ದರಿಂದ ಆತನ ಬಗ್ಗೆ ಯಾರುನೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆತನ ದೂರದ ಸಂಬಂಧಿಗಳು ಹೆಸರಿಗೆ ಅತ್ತಂತೆ ನಟನೆ ಮಾಡಿ ಅವನು ರಕ್ಷಿಸಿದ ನೂರಾರು ಹಂದಿಗಳು ನಮಗೆ ಸಿಗುತ್ತವಲ್ಲ ಅಂತಾ ಒಳಗೊಳಗೆ ಖುಷಿಯಾಗಿದ್ದರು.

ಪ್ರವಾಹ ಮಲ್ಲಿಕಾಳನ್ನು ಮತ್ತು ವೀರಬಾಹುವನ್ನು ಸಳೆದುಕೊಂಡು ಹೋಗ್ತಾಯಿತ್ತು. ವೀರಬಾಹು ಸಾಹಸಿಗನಾದ್ದರಿಂದ ಪ್ರಯತ್ನಗಳನ್ನು ಮಾಡ್ತಾನೇ ಇದ್ದ. ಅದೇ ಪ್ರವಾಹದಡಿ ಮರದ ಅನೇಕ ದಿಮ್ಮಿಗಳು ತೇಲುತ್ತಿರುವುದನ್ನು ಗಮನಿಸಿದ ಆತ ಹಿಡಿದುಕೊಂಡಿದ್ದ ಹಗ್ಗದ ಒಂದು ಭಾಗವನ್ನು ಆ ಮರದ ದಿಮ್ಮಿಗೆ ಸುತ್ತಿದ. ತಾನೂ ಅದರ ಮೇಲೆ ಏರಿ ಕುಳಿತ, ಹಗ್ಗದ ಮಲವಿಗೆ ಸಿಕ್ಕಿಹಾಕಿಕೊಂಡಿದ್ದ ಮಲ್ಲಿಕಾಳನ್ನು ಸಾವಕಾಶವಾಗಿ ಎಳೆಯುತ್ತ ಮರದ ದಿಮ್ಮಿಯ ಮೇಲೆ ತೆಗೆದುಕೊಂಡ. ಮಲ್ಲಿಕಾ ತುಂಬಾ ನೀರು ಕುಡಿದಿದ್ದರಿಂದ ಉಸಿರಾಟ ಕ್ಷೀಣಿಸುತಿತ್ತು. ತಡಮಾಡದೇ ಅವಳ ಹೊಟ್ಟೆಯ ಭಾಗದ ಮೇಲೆ ಮೃದುವಾಗಿ ಅದುಮುತ್ತ ಕುಡಿದ ನೀರನ್ನು ಹೊರತೆಗೆಯುತಿದ್ದ. ನೀರು ಹೊರಬಂದರೂ ಸಹ ಅವಳು ಮೀಸುಕಾಡುತ್ತಲೇ ಇಲ್ಲ. ಏನಪ್ಪಾ ಮಾಡೋದು ಇವರು ಬೇರೆ ಅಯ್ನೋರು. ನಮ್ಮಂತವರನ್ನು ಮುಟ್ಟಿಸಿಕೊಳ್ಳೋದಿಲ್ಲ. ಮಾತನಾಡಿದರೆ ಅಪರಾಧ ಅನ್ನುವ ಕಗ್ರಾಸ ಹಳ್ಳಿ ನಮ್ಮದು ಅಂತಾ ತನ್ನಲ್ಲಿ ಆ ಕ್ಷಣದ ವಿಚಾರಗಳನ್ನು ಮೆಲುಕು ಹಾಕುತ್ತಾ, ಏನಾದರಾಗಲೀ ಉಳಿದರೆ ಒಂದು ಜೀವ ಉಳಿಸಿದ ಪುಣ್ಯ ತನ್ನದಾಗುತ್ತದೆ ಎಂದುಕೊಂಡ ವೀರಬಾಹು. ಅವಳ ಬಾಯಿಗೆ ತನ್ನ ಬಾಯಿ ಸೇರಿಸಿ ಬಲವಾಗಿ ಊದುತ್ತಾನೆ. ಆ ರಭಸಕ್ಕೆ ಮಲ್ಲಿಕಾಳ ಉಸಿರು ಸ್ಪಂದಿಸಲು ಅನುವಾಗುತ್ತದೆ. ಅವಳು ನೆಂದಿದ್ದರಿಂದ ನಡುಕ ಶುರುವಾಗುತ್ತದೆ. ಮಾತುಗಳು ಬರಿ ನಡುಕ. ಅದೇ ವೇಳೆಯಲ್ಲಿ ಒಂದು ಡಬ್ಬಾ ಅಂಗಡಿ ಅವರ ಮರದ ದಿಮ್ಮಿಗೆ ತಾಗುತ್ತದೆ. ಅದೇನಾದರೂ ಸಹಾಯಕ್ಕೆ ಬರುತ್ತೇನೋ ಅಂದ್ಕೊಂಡು ಅದರ ಟೊಳ್ಳಾದ ಭಾಗಕ್ಕೆ ದಿಮ್ಮಿಯ ಒಂದು ಭಾಗವನ್ನು ಸೇರಿಸುತ್ತಾನೆ. ಆ ಡಬ್ಬಾದ ಒಳಭಾಗಕ್ಕೆ ಅವಳನ್ನು ತಳ್ಳುತ್ತಾ ತಾನು ಸರಿಯುತ್ತಾನೆ. ಆಯತಪ್ಪಿದ ಮರದ ದಿಮ್ಮಿ ನೆನೆದಿದ್ದರಿಂದ ಸರಿದ ಭಾಗ ಮುರಿದು ಪ್ರಪಾತಕ್ಕೆ ಬೀಳುತ್ತದೆ. ಒಂದು ಕ್ಷಣ ಹೆಚ್ಚುಕಡಿಮೆಯಾಗಿದ್ದರೂ ವೀರಬಾಹು ತನ್ನ ಪ್ರಾಣ ಕಳೆದುಕೊಂಡು ಬಿಡುತಿದ್ದ. ಆಶ್ರಯವಾದ ಆ ಡಬ್ಬಾ ಅಂಗಡಿ ಮಳೆಯಿಂದ ರಕ್ಷಣೆ ಕೊಡುತ್ತಿತ್ತು. ವೇಗವಾಗಿ ಹರಿಯುತ್ತಿದ್ದ ನೀರು ಅದನ್ನು ಎತ್ತೆತ್ತಲೋ ಕರೆದುಕೊಂಡು ಹೋಗುತಿತ್ತು. ಎತ್ತ ನೋಡಿದರೂ ನೀರೇ ನೀರು. ತೇಲಿ ಬರುತ್ತಿರುವ ಸತ್ತ ಪ್ರಾಣಿ, ಪಕ್ಷಿಗಳು, ಮನುಷ್ಯರ ಶವಗಳು..ಅದೆಷ್ಟು ದೂರ ಸಾಗಿದ್ದರೆಂದರೆ, ಯಾವುದು ಮೊದಲು ಕೊನೆ ಅನ್ನುವುದನ್ನು ಗುರುತಿಸಲಾರದಷ್ಟು ದೂರ ಸಾಗಿದ್ದರು. ಮಲ್ಲಿಕಾ ಮೂರ್ಛೆ ಹೋಗಿದ್ದಳು. ಡಬ್ಬಾದ ಮೇಲಿನ ತಗಡಿನ ಕತ್ತರಿಸಿದ ಭಾಗ ಮತ್ತೊಂದು ಅಡ್ಡಲಾಗಿ ಬಿದ್ದ ಮರಕ್ಕೆ ಸಿಕ್ಕಿಹಾಕಿಕೊಂಡು ನಿಂತಿತ್ತು. ಸದ್ಯಕ್ಕೆ ಪ್ರವಾಹದಿಂದ ಅಲ್ಪ ವಿಶ್ರಾಂತಿ ಸಿಕ್ಕಂತಾಗಿತ್ತು.

ಮಳೆ ಗಾಳಿಯಿಂದ ಅಲ್ಪ ರಕ್ಷಣೆ ಸಿಕ್ಕಿದ್ದರೂ ಯಾವುದೇ ಭರವಸೆ ಇರಲಿಲ್ಲ. ಎಲ್ಲದಕ್ಕೂ ನಂಬಿಕೆಯ ಮೇಲೆ ಭಾರಹಾಕಿದ ವೀರಬಾಹು ಮಲ್ಲಿಕಾಳನ್ನು ಗಮನಿಸಿದ. ತುಂಬಾ ಸುಂದರವಾದ ಚೆಲುವೆ. ಅದಾವ ದರಿದ್ರನೋ ಇಂಥ ಚೆಲುವೆಯನ್ನು ಕಡೆಗಣಿಸಿದ್ದು ಎಂದು ಹಳಿಯುತ್ತಾನೆ. ಮಲ್ಲಿಕಾ ಚಳಿಯಿಂದ ನಡುಗುತ್ತಿದ್ದಾಳೆ, ಪ್ರಜ್ಞೆಯಿಲ್ಲ ಅವಳ ಕೈ ಕಾಲು ಅಂಗೈಗಳನ್ನು ಉಜ್ಜುತ್ತಾನೆ. ಅವಳ ಕೈ ಕಾಲು ಮ್ಮೆ ಎಲ್ಲವೂ ಮರಗಟ್ಟಿದೆ. ಹಾಗಂತಾ ವೀರಬಾಹುವೇನೂ ಸುರಕ್ಷಿತವಾಗಿರಲಿಲ್ಲ. ಅವನೂ ಸಹ ನೆಂದಿದ್ದ. ಧೈರ್ಯವಂತ ಮತ್ತು ಸಾಹಸಿಗನಾದ್ದರಿಂದ ಅಂತಹ ಯಾವ ತೊಂದರೆ ಕಾಣಿಸುತ್ತಿಲ್ಲ. ಕತ್ತಲಾಗುತಿತ್ತು ಸುತ್ತಲೂ ನೀರೋ ನೀರು ಯಾವ ಊರೋ ನಾವೆಲ್ಲಿಗೆ ಬಂದಿದ್ದೇವೋ ಅನ್ನೋದೇ ಕಾಣದಾಗಿತ್ತು. ಕತ್ತಲಾಗುತ್ತಿದ್ದರಿಂದ ರಕ್ಷಣೆಗೆ ಕೂಗುತ್ತಾನೆ. ಅದಾವುದು ಲೆಕ್ಕಕ್ಕೆ ಬರೋದಿಲ್ಲ ಅಂತಾ ಗೊತ್ತಿದ್ರೂ ಒಂದೆನೋ ಭರವಸೆ. ಆ ಭರವಸೆ ಆವತ್ತಿನ ಮಟ್ಟಿಗೆ ಸುಳ್ಳಾಗಿಸಿತ್ತು.

ಮಲ್ಲಿಕಾಳ, ಮರಗಟ್ಟಿದ ದೇಹ ಕ್ಷಣಕ್ಷಣಕ್ಕೂ ನಡಗೋದನ್ನು ಹೆಚ್ಚು ಮಾಡಿಸಿತ್ತು. ತನಗೂ ನಡುಕ ಆರಂಭವಾಗಿದೆ ಅನ್ನೋದನ್ನೇ ಮರೆತಿದ್ದ ವೀರಬಾಹು, ಮಲ್ಲಿಕಾಳ ಸಾಮೀಪ್ಯದಲ್ಲಿ ಬಿಸಿಉಸಿರು ಗಮನಿಸುತ್ತಾನೆ. ತಡಮಾಡದೇ ಮಲ್ಲಿಕಾಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಈ ಬಿಸಿ ನಮ್ಮ ಜೀವ ಉಳಿಸಬಹುದೇನೋ ಎಂದರಿತ ವೀರಬಾಹು ಅವಳ ದೇಹವನ್ನು ಅರೆಬೆತ್ತಲೆಗೊಳಿಸಿದ. ಆ ರಾತ್ರಿಯೆಲ್ಲ ವೀರಬಾಹುವಿನ ತೋಳಲ್ಲಿ ಮಲ್ಲಿಕಾ ಬಂಧಿಯಾಗಿದ್ದಳು. ಚುಮು ಚುಮು ಬೆಳಗು ಹರಿಯೋದೇ ತಡ ಇಬ್ಬರೂ ಎಚ್ಚರವಾಗಿ ತಮ್ಮ ಇರುವಿಕೆ ಮತ್ತು ಗತಿಸಿದ ಆ ದಿನಗಳ ಘಟನಾವಳಿಗಳನ್ನು ನೆನೆಸಿಕೊಳ್ಳುತ್ತಾರೆ. ಮಲ್ಲಿಕಾ ಮೊದಲಿಗೆ ಗಾಬರಿಯಾಗಿ ವೀರಬಾಹುವನ್ನು ನೋಡಿ ಕಿರುಚುತ್ತಾಳೆ; ಪರಿಸ್ಥಿತಿ ಅರ್ಥೈಸಿಕೊಂಡ ವೀರಬಾಹು ಎಲ್ಲವನ್ನು ವಿವರಿಸುತ್ತಾನೆ. ಇಬ್ಬರೂ ಕಣ್ಣು ಹರಿಯಾಯಿಸಿ ನೋಡಿದರೆ ಎಲ್ಲಕಡೆ ಬರಿ ನೀರು. ಯಾವುದೇ ಗೊತ್ತು ಗುರಿಯಿಲ್ಲದ ಪ್ರದೇಶದಲ್ಲಿ ನಾವಿದ್ದೇವೆ ಎಂಬ ಅರಿವು ಬರಲಿಕ್ಕೆ ತಡವೇನೂ ಆಗೋದಿಲ್ಲ. ಕೆಳಗಡೆ ಬಾಗಿ ನೋಡಿದರೆ ನೀರು ಸರಿದಿದೆ, ಯಾವುದೋ ದೊಡ್ಡ ಕಂದಕದ ಮೇಲೆ ತಾವಿದ್ದೇವೆ, ತಗಡಿನ ಡಬ್ಬಾದ ಹರಿದ ಭಾಗ ನಮ್ಮನ್ನು ಉಳಿಸಿದೆ. ಅದು ಯಾವಾಗ ಕಳಚುತ್ತೋ ಗೊತ್ತಿಲ್ಲ. ಅನಿಶ್ಚಿತತೆಯ ಮಧ್ಯೆ ಅಪಾಯದ ಕಕ್ಷೆಯಲ್ಲಿ ತಾವಿದ್ದೇವೆ ಎಂಬ ಅರಿವು ಬಂದಾಕ್ಷಣ ಮತ್ತೇ ಗಾಬರಿ, ಮೇಲಾಗಿ ಹೊಟ್ಟೆ ಹಸಿದಿದೆ. ಕುಡಿಯಲು ನೀರು ಬೇಕಿದೆ, ಸುತ್ತ ಮುತ್ತ ನೀರಿದೆ ಕುಡಿಯಲು ಆಗಲ್ಲ. ಕಾರಣ ಅದರಲ್ಲಿ ಸತ್ತ ಮನುಷ್ಯರ, ಪ್ರಾಣಿಗಳ ಕೊಳಕು ವಾಸನೆ ಬರುತ್ತಿದೆ, ತಡೆಯಲಾಗುತ್ತಿಲ್ಲ.

ಮಲ್ಲಿಕಾಳಿಗೆ ಕಳವಳಿಕೆ ಬಂದಂತಾಗಿ ವೀರಬಾಹು ನನ್ನೇಕೆ ಉಳಿಸಿದ ನಾನಾರಿಗೂ ಬೇಡದವಳು, ನನ್ನಿಂದ ಯಾರಿಗೂ ಪ್ರಯೋಜನವಿಲ್ಲ. ನೋಡೀಗ ನನ್ನನ್ನು ಉಳಿಸಲು ಹೋಗಿ ನೀನೂ ಕಷ್ಟದಲ್ಲಿದ್ದೀಯಾ? ನನ್ನನ್ನು ಸಾಯಲಿಕ್ಕೆ ಬಿಡು ಅಂತಾ ಆ ಆಳದ ಕಂದಕಕ್ಕೆ ಜಿಗಿಯಲು ಪ್ರಯತ್ನಿಸುತ್ತಾಳೆ. ಇಲ್ಲಾ ನೀವು ಸಾಯಬಾರದು ಯಾರಿಗೂ ಬೇಡದವರು ಅಂತಾ ಯಾಕ ಅಂದ್ಕೋತೀರಿ. ನಿಮ್ಮ ಜೊತೆ ನಾನೀರ್ತಿನಿ, ನಿಮ್ಮನ್ನು ಉಳಿಸಲಿಕ್ಕೋಗಿ ನಿಮ್ಮ ದೇಹ ಮುಟ್ಟಿದ್ದೀನಿ, ಬಾಯಿಗೆ ಬಾಯಿ ಸೇರಿಸಿದ್ದೇನೆ. ನಾನೊಬ್ಬ ಕೊರಮ, ಹಂದಿ ಸಾಕೊಂಡಿರುವವನು ಅಸಹ್ಯ ಅನ್ನೋ ವಿಚಾರ ನಿಮ್ಮಲ್ಲಿಲ್ಲ ಅಂದ್ರೆ ಈ ಜೀವ ಸಾಯೋತಂಕ ನಿಮ್ಮ ಉಸಿರಲ್ಲಿ ಉಸಿರಾಗಿರ್ತಿನಿ. ಮಲ್ಲಿಕಾಳ ಕಣ್ಣಿನ ಕಣ್ಣಂಚಿನಲ್ಲಿ ನೀರು ಸುರೀತೀದೆ. ಅವನನ್ನು ಬಾಚಿ ತಬ್ಬಿಕೊಳ್ತಾಳೆ. ನೋಡಿ ಹಂಗೆಲ್ಲ ಅನಬ್ಯಾಡ್ರಿ ವೀರು. ನನ್ನನ್ನು ಅನಿಷ್ಟ ದರಿದ್ರದವಳು ಅನ್ನೋ ಮೂಢರೊಳಗೆ ನೀವು ಉತ್ತಮರು. ನಿಮ್ಮದೇ ಮಾತಿನಲ್ಲಿ ಹೇಳೋದಾದ್ರೆ ನೀವು ಭಾಳ ದೊಡ್ಡವರು. ನಿಮ್ಮ ಒಳ್ಳೆತನವೊಂದೇ ಸಾಕು, ಯಾರೇನೇ ಅಂದ್ರೂ ಈ ಸಮಾಜ ಏನಂತಾ ಹೆಸರಿಟ್ಟೂ ನಿಮ್ಮ ಜೊತೆ ನಾನಿರ್ತೀನಿ ಅಂದಾಗ ಅನಾಥವಾಗಿದ್ದ ವೀರಬಾಹುವಿಗೆ ತನಗೂ ಒಂದು ಸಂಸಾರ, ಕುಟುಂಬ ಆಗುತ್ತೇ ಅನ್ನೋ ಖುಷಿ ಇಮ್ಮಡಿಯಾಗಿ ಮೊದಲು ಅಲ್ಲಿಂದ ಹೊರಬರಲು ದಾರಿ ಹುಡುಕುತ್ತಾನೆ.

ಪಕ್ಕದಲ್ಲಿದ್ದ ಬಿದಿರಿನ ಗಳವನ್ನು ತೆಗೆದುಕೊಳ್ಳುತ್ತಾನೆ. ಮಲ್ಲಿಕಾ ಉಟ್ಟಿದ್ದ ಸೀರೆಯ ಸೆರಗಿನ ಕೆಂಪಂಚಿನ ತುಂಡನ್ನು ಆ ಗಳಕ್ಕೆ ಕಟ್ಟಿ ತಾವಿದ್ದ ಆ ಎತ್ತರದ ಸ್ಥಳದಿಂದ ಎತ್ತರಕ್ಕೆ ಹಾರಿಸ್ತಾನೆ. ಕೂಗಲು ಕಸುವಿಲ್ಲದಿದ್ದರೂ ಬದುಕುವ ಭರವಸೆಯಿಂದ ಯಾರಾದ್ರೂ ಕಾಪಾಡಿ ಎಂದು ಕೂಗು ಹಾಕ್ತಾನೆ. ಯಾರಾದ್ರೂ ರಕ್ಷಣೆಗೆ ಬರುವರೆಂಬ ವಿಶ್ವಾಸದೊಂದಿಗೆ ಕಾಯ್ತಾರೆ. ಸಂಜೆಯಾದ್ರೂ ಯಾರೂ ತಮ್ಮ ಸಹಾಯಕ್ಕೆ ಬರುವ ಮುನ್ಸೂಚನೆ ಕಾಣೋದೇ ಇಲ್ಲ. ಮಳೆ ನಿಂತಿದ್ದರಿಂದ ನೀರಿನ ಪ್ರವಾಹ ಕಡಿಮೆಯಾಗ್ತಾ ಇತ್ತು. ಮಲ್ಲಿಕಾ ನಾವು ಇಲ್ಲೇ ಇದ್ರೆ ಉಪವಾಸದಿಂದ ಸಾಯುತ್ತೇವೆ. ಬಾ, ನನ್ನ ಬೆನ್ನ ಮೇಲೆ ಕುಳಿತುಕೋ ನಾನು ಹೇಗೋ, ಇಳೀತೀನಿ ಅಂದಾಗ ಮಲ್ಲಿಕಾಳಿಗೂ ಹೇಗಾದರೂ, ಇಲ್ಲಿಂದ ಪಾರಾದ್ರೆ ಸಾಕಪ್ಪ ಅನಿಸಿತ್ತು. ಮೇಲಾಗಿ ತನಗೊಬ್ಬ ಜೊತೆಗಾರ ಸಿಕ್ಕ ಖುಷಿ. ಅದೇ ಕ್ಷಣದಲ್ಲಿ ತನ್ನ ಸೀರೆಯನ್ನು ಕಳಚುತ್ತಿರುವ ವೀರಬಾಹುವನ್ನು ನೋಡಿ ವೀರೂ ಏನು ಮಾಡುತ್ತಿರುವೆ, ಇದೆಲ್ಲ ಬ್ಯಾಡಾ. ಈಗ ನೀವ ಸುಮ್ಮರಿ ಅಂದಕ್ಕೆ ಆ ಸೀರೆಯನ್ನು ಕಳಚಿಕೊಂಡು ಅದನ್ನೇ ಹಗ್ಗವನ್ನಾಗಿ ಮಾಡಿ ಗಿಡದ ಗಟ್ಟಿಯಾದ ಭಾಗಕ್ಕೆ ಕಟ್ಟಿ ಮಲ್ಲಿಕಾಳನ್ನು ತನ್ನ ಬೆನ್ನ ಮೇಲೆ ಕೂಡ್ರಿಸಿಕೊಂಡು ಅದರ ಸಹಾಯದಿಂದ ಗಿಡಕ್ಕೆ ಕಾಲು ತಾಗಿಸುತ್ತ ಇಳಿಯಲು ಅಣಿಯಾಗುತ್ತಾನೆ. ಮಳೆಯಾದ್ದರಿಂದ ಎಲ್ಲಿಯೂ ಆಧಾರ ಸಿಗೋದೇ ಇಲ್ಲ. ಹೀಗಾಗಿ ಒಂದೇ ಕ್ಷಣದಲ್ಲಿ ಜ‌ರ್‌ ಎಂದು ಕೆಳ ಜಾರಿದಾಗ ಮೈಯೆಲ್ಲ ಕೆಸರು ಮೆತ್ತಿಕೊಂಡು ಬಿಡುತ್ತದೆ. ಮೇಲಾಗಿ ಗಬ್ಬು ವಾಸನೆ, ಏನು ಮಾಡಬೇಕು, ಎತ್ತ ಸಾಗುವುದು, ಏನೊಂದು ಗೊತ್ತಾಗದೇ ಚಡಪಡಿಸುತ್ತಾರೆ. ಭಾರವಾದ ಹೆಜ್ಜೆಗಳೊಂದಿಗೆ ಸಾಗುತ್ತಿರುವಾಗ ಆಂಬುಲೆನ್ಸ್‌ಗಳು ಓಡಾಡುತ್ತಿರುವ ಸದ್ದು ಕೇಳಲಾರಂಭಿಸುತ್ತದೆ. ಹೋ ನಾವು ಯಾವುದೋ ರಸ್ತೆಯ ಸಮೀಪದಲ್ಲಿದ್ದೇವೆ ಎಂದರಿವಿಗೆ ಬರುತ್ತಲೇ ಅವಸರದ ಹೆಜ್ಜೆ ಹಾಕುತ್ತಾರೆ.

ಹೇಗೋ ಹರಸಾಹಸ ಪಟ್ಟು ರಸ್ತೆಗೆ ಬಂದ ವೀರಬಾಹು ಹಾಗೂ ಮಲ್ಲಿಕಾ, ಪಕ್ಕದ ಗುಡ್ಡದಂಚಿನಿಂದ ಬೀಳುತ್ತಿರುವ ನೀರಿಗೆ ಮೈ ಒಡ್ಡುತ್ತಾರೆ. ಇರುವ ಬಟ್ಟೆಗಳನ್ನೇ ಶುಚಿಗೊಳಿಸಿ ಹಸಿದ ಹೊಟ್ಟೆಗೆ ಅದೇ ನೀರನ್ನು ತುಂಬಿಕೊಳ್ತಾ ವೀರಬಾಹು ಆ ಕಾಡುಗುಡ್ಡದ ಮೇಲೇರಿ ಮುಗಿಲಿನ ಕಡೆ ಕೈ ಮಾಡುತ್ತಾ, ಹೇ ಕಾಡುದೇವಿಯೇ ನೀನು ಎಲ್ಲರಿಗೂ ಪಾಠ ಕಲಿಸಲು ಈ ಪ್ರವಾಹ ನೆರೆಹಾವಳಿ ರೂಪದಲ್ಲಿ ಮನುಷ್ಯ ಎಚ್ಚರಗೊಳ್ಳಲಿ ಎಂದು ಆವಾಗಾವಾಗ ಕಾಣಿಸಿಕೊಳ್ತಾ ಇದ್ದೀಯ. ಆದರೆ ನನಗೆ ನನ್ನ ಬದುಕಿಗೆ ಅಸರೆಯಾಗಿದ್ದೀಯ, ನಿನಗೆ ನನ್ನ ಸಾಷ್ಟಾಂಗ ನಮಸ್ಕಾರಗಳು, ತಾಯೇ ನಮಸ್ಕಾರ ಎಂದು ಕೂಗುಹಾಕುತ್ತಾನೆ. ಇದನ್ನು ಆಶ್ಚರ್ಯದಿಂದ ನೋಡುತಿದ್ದ ಮಲ್ಲಿಕಾಳತ್ತ ಕೈ ಮಾಡಿ ಈ ಪ್ರವಾಹ ಯಾರ ಬದುಕನ್ನು ಕಸಿದುಕೊಂಡರೂ ಸಹ ನನ್ನ ಜೀವನಕ್ಕೆ ಆ ಪ್ರಕೃತಿ ಮಾತೆಯೇ ಆಸರೆಯಾಗಿದ್ದಾಳೆ. ಈ ಭೂ ತಾಯಿ ನನ್ನ ಪಾಲಿಗೆ ವರವಾಗಿದ್ದಾಳೆ. ನನಗೆ ನನ್ನ ಬದುಕಿಗೆ ಮಲ್ಲಿಕಾ ಸಿಕ್ಕಿದ್ದಾಳೆ. ಅಂದಾಗ ಮಲ್ಲಿಕಾಳ ಕಣ್ಣಂಚಿನ ನೀರು ಹೊರಹೊಮ್ಮಿಕ್ಕುತ್ತಲೇ, ವೀ....ವೀರೂ ನನ್ನ ತಂದೆ ತಾಯಿ ನನ್ನ ಮದುವೆಗಾಗಿ ಕೂಡಿಟ್ಟ ಎಲ್ಲವೂ ನೀರುಪಾಲಾದಾಗ, ಹೃದಯಾಘಾತವಾಗಿ ನನ್ನ ತಂದೆ ಅಸುನೀಗಿದರು. ನನಗೆ ಗೊತ್ತುಪಡಿಸಿದ ಮದುವೆ, ನಾವು ಎಲ್ಲವನ್ನೂ ಕಳಕೊಂಡಿದ್ದೀವಿ ಅಂತಾ ಗೊತ್ತಾದಾಗ ಇದಕ್ಕೆ ಹೊಸದೊಂದು ಕಥೆ ಕಟ್ಟಿದರು. ನಮ್ಮ ತಂದೆಯ ಸಾವು, ಈ ಅನಿಷ್ಟ ಪ್ರವಾಹ ಇನ್ನೂ ಏನೇನು ಕಾದಿದೆಯೋ ಅನ್ನುತ್ತಾ ಈ ದರಿದ್ರದವಳನ್ನು ಕಟ್ಟಿಕೊಂಡರೇ ಇನ್ನೂ ಏನೇನು ಕಾದಿದೆಯೋ ಎಂದು ಹೇಳಿದಾಗ ನನಗೆ ತುಂಬಾ ನೋವಾಯ್ತು. ಸುಶಿಕ್ಷಿತರಾದ ಜನಾನೇ ಹೀಗೆ ಮಾತಾಡ್ತಾರಲ್ಲಾ ಅಂತಾ ಗೊತ್ತಾಗಿ, ಆ ನೋವ ತಡೆಯಲಾಗದೇ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಅದೊಂದು ಸೌಭಾಗ್ಯವೇ ಸರಿ ನೀವು ಸಿಕ್ಕಿದ್ದೀರಾ. ಹೀಗೆ ಒಬ್ಬರಿಗೊಬ್ಬರು ಉಪಚರಿಸಿಕೊಳ್ಳುತ್ತಾ ಅಲ್ಲೇ ಕಂಡ ಕಾಡುನೆಲ್ಲಿಯನ್ನು ತಿಂದು ಹಸಿವಿನ ಉಪಶಮನ ಮಾಡಿಕೊಳ್ತಾರೆ. ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕೈ ಮಾಡುತ್ತಾರೆ. ಸ್ಥಳದ ಕೊರತೆಯೋ ಅಥವಾ ಹವಾಮಾನದ ವೈಪರಿತ್ಯವೋ, ಯಾರೂ ವಾಹನಗಳನ್ನು ನಿಲ್ಲಿಸೋದೇ ಇಲ್ಲಾ. ಕಡೆಗೆ ರಕ್ಷಣಾ ಪಡೆಯ ವಾಹನವೊಂದು ಇತ್ತ ಬರುವುದನ್ನು ಕಂಡ ಮಲ್ಲಿಕಾ ತಾನೇ ಅವರೊಂದಿಗೆ ಮಾತನಾಡುತ್ತಾಳೆ. ಅವಳ ಮಾತುಗಾರಿಕೆ, ಭಾಷೆ ಕಂಡು ವೀರಬಾಹು ಇವಳು ಇಸೊಂದು ಸಾಲಿ ಕಲ್ತವ್ಳಾ? ಎಂದು ಹೆಮ್ಮೆಯಾಗುತ್ತದೆ. ಹೇಗೂ ಬದುಕಿದೆವಲ್ಲ ಅಂದ್ಕೊಂಡು ಯಾವುದೋ ಗೊತ್ತಿಲ್ಲದ ಊರು ಹೆಸರು ಹೇಳಿ ಅಲ್ಲಿಗೆ ಬಂದು ಆಶ್ರಯ ಪಡೆಯುತ್ತಾರೆ. ಅಲ್ಲಾ! ನಾವು ನಮ್ಮೂರಿಗೆ ಹೋಗ್ದೆ ಇಲ್ಲಿಗೇಕೆ ಬಂದ್ರಿ ಅಂತಾ ವೀರಬಾಹುವಿನ ಮಾತಿಗೆ, ಇಲ್ನೋಡಿ ಇವತ್ತಿನ ಪತ್ರಿಕೆಯ ಮುಖಪುಟದಲ್ಲಿ ಪ್ರವಾಹದ ಸುಳಿಯಲ್ಲಿ ಸಿಕ್ಕು ಸತ್ತವರ ಹೆಸರಿನ ಪಟ್ಟಿಯಲ್ಲಿ ನಮ್ಮಿಬ್ಬರ ಹೆಸರಿದೆ. ಹೇಗೂ ಬದುಕಿದ್ದೀವಿ. ಅಲ್ಲಿಗೆ ಹೋದ್ರೆ ಮತ್ತದೇ ಪುರಾಣ, ನನ್ನ ನಿಮ್ಮ ನಡುವೆ ಇಲ್ಲದ ಕಥೆಗಳು ಮತ್ತೇ ಜಾತಿ ಜಂಜಾಟದ ವ್ಯವಸ್ಥೆ ಇಲ್ಲದ ಡಂಭಾಚಾರದ ವ್ಯವಸ್ಥೆ, ಇದಾವುದು ಬೇಡ ವೀರೂ ನಾವು ಈ ಪ್ರಕೃತಿ ಮಾತೆಯೇ ಮಾಡಿರುವ ವ್ಯವಸ್ಥೆಯಿಂದ ಒಂದಾಗಿದ್ದೇವೆ. ನಾವೀಗ ದೂರದ ರಾಜ್ಯ ಆಂದ್ರದ ಮತ್ತೊಂದು ಗಡಿಯ ಅಂಚಿನಲ್ಲಿದ್ದೇವೆ. ಹೊಸ ಮನುಷ್ಯರಾಗಿ ಹೊಸ ಜೀವನ ಸಾಗಿಸೋಣ, ಆ ಪ್ರಕೃತಿ ಮಾತೆಯನ್ನೇ ಆರಾಧ್ಯ ದೈವವಾಗಿರಿಸಿ, ಬಾ..ಹೊಸ ಜೀವನಕ್ಕೆ ಮುನ್ನುಡಿ ಬರೆಯೋಣ ಅನ್ನುತ್ತಾ ಆ ಕಾಡಂಚಿನ ಕಾಡುಮಲ್ಲಿಗೆಯ ಅಡಿಯಲ್ಲಿ ಕಾಡುದೇವಿಯ ಗುಡಿಯ ಮುಂದೆ, ತಮ್ಮ ಅಳಲನ್ನು, ಮನದಾಳದ ನೋವು ನಲಿವುಗಳನ್ನು ತೋಡಿಕೊಂಡು, ಅಲ್ಲಿರುವ ಹಿರಿಯರಿಗೆ ತಮ್ಮ ಕಥೆ ಹೇಳ್ಕೊಂಡು ಈ ಬದುಕಿನ ಬಾಳ ಬಂಡಿಯ ಜೀವನದ ರಥವೇರಿ ಕಾಡಂಚಿನ ಕಾಡುಮಲ್ಲಿಗೆಯ ಗುಡ್ಡದೊಳಗೆ ನಡೆದು ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT