ಬುಧವಾರ, ಅಕ್ಟೋಬರ್ 28, 2020
28 °C

ಕಥೆ: ಅವ್ಯಕ್ತ

ಸೋಮಶೇಖರ ಎಸ್. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಂಜೆ ಆಫೀಸಿನಿಂದ ಹೊರಬಂದು ಸ್ಕೂಟರ್ ಚಾಲು ಮಾಡಿದ ಕೆಲವೇ ನಿಮಿಷಗಳಲ್ಲಿ ಮಳೆ ಹನಿ ಬೀಳಲು ಮೊದಲಾಯಿತು. ಆದಷ್ಟು ಬೇಗನೆ ಮನೆ ಸೇರುವ ಆಲೋಚನೆ ಹೊತ್ತು ವೇಗವಾಗಿ ಗಾಡಿ ಓಡಿಸುವ ನನ್ನ ಯತ್ನಕ್ಕೆ ಗುಂಡಿಗಳಿಂದ ತುಂಬಿಹೋಗಿದ್ದ ರಸ್ತೆ ಅಡ್ಡಿಯುಂಟು ಮಾಡಿತು. ಐದಾರು ನಿಮಿಷಗಳಲ್ಲಿ ಮಳೆ ಜೋರಾಗಿ, ವಿದ್ಯುತ್ ಕೂಡ ತೆಗೆದಿದ್ದರಿಂದ ಮಬ್ಬುಗತ್ತಲಿನಲ್ಲಿ ಗಾಡಿ ಚಲಾಯಿಸುವುದು ತೀರಾ ದುಸ್ತರವಾಯಿತು. ರಸ್ತೆ ಬದಿಗೆ ನಿಲ್ಲಲು ಜಾಗಕ್ಕಾಗಿ ಅರಸಿದವನಿಗೆ ಖಾಲಿಯಿದ್ದ ಅಂಗಡಿ ಮುಂಭಾಗ ಕಾಣಿಸಿ ಗಡಿಬಿಡಿಯಲ್ಲಿ ಗಾಡಿ ನಿಲ್ಲಿಸಿ ಓಡುತ್ತಾ ಅಲ್ಲಿಗೆ ಸೇರಿದ್ದಾಯಿತು.

ಮಳೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಲೇ ಹೋಯಿತು. ಎಲ್ಲವೂ ಸ್ತಬ್ದವಾಗಿ, ಮಳೆ ಬಾಣದೋಪಾದಿಯಲಿ ಆಗಸದಿಂದ ಭುವಿಗೆ ಎಡೆಬಿಡದೆ ಸುರಿಯುತ್ತಿತ್ತು. ವಾಹನಗಳ ಓಡಾಟ ವಿರಳವಾಗಿ ಸುತ್ತಲೂ ಕತ್ತಲು ಆವರಿಸಿತು. ಮಳೆಯ ರಭಸ ಬೇಂದ್ರೆ ಅಜ್ಜನ 'ಕುಣಿದ್ಹಾಂಗ ರಾವಣಾ!’ ಎಂಬ ಸಾಲು ನೆನೆಪಿಸುವಂತಿತ್ತು. ಈ ನಡುವೆ ಎಲ್ಲಿಂದಲೋ ಎಮ್ಮೆಗಳ ಮೆರವಣಿಗೆ ಕಂಡುಬಂತು. ಆ ಪರಿ ಸುರಿವ ಮಳೆಯಲ್ಲಿ ಪುಟ್ಟ ಪರ್ವತಗಳಂತೆ ನಿಧಾನವಾಗಿ ಚಲಿಸುತ್ತಾ ನಿರುಮ್ಮಳವಾಗಿ ಬರುತ್ತಿದ್ದ ಅವುಗಳನ್ನು ನೋಡಿ, 'ಯಾರೇ ಕೂಗಾಡಲಿ, ಊರೇ ಹೋರಾಡಲಿ, ಎಮ್ಮೆ ನಿನಗೆ ಸಾಟಿಯಿಲ್ಲ’ ಎಂಬ ಹಾಡು ಗುನುಗುನಿಸುತ್ತಾ ನಗು ಬಂತು. ಜೋರಾಗಿ ನಕ್ಕೆ.

ಹೀಗೇ ಎಷ್ಟು ಹೊತ್ತು ನಿಲ್ಲಬೇಕಾಗುವುದೋ ಎಂದುಕೊಳ್ಳುತ್ತಾ ಕತ್ತಲಿಗೆ ಹೊಂದಿಕೊಂಡ ಕಂಗಳನ್ನು ಸುತ್ತಲೂ ಹರಿಸಿದಾಗ ಎರಡಡಿ ದೂರದಲ್ಲಿ ಮೂಲೆಯಲ್ಲಿ ಗೋಡೆಗೆ ಆತುಕೊಂಡಂತೆ ಇನ್ನೊಬ್ಬ ವ್ಯಕ್ತಿ ನಿಂತಿರುವುದು ಅರಿವಿಗೆ ಬಂತು. ‘ಯಾರೋ’, ‘ಏನೋ’ ಎಂದು ಉದಾಸೀನ ನಟಿಸುತ್ತಲೇ ಗಮನಿಸುತ್ತಿರುವಾಗ ಮಿಂಚೊಂದು ಹೊಳೆದು, ನೋಡಿದರೆ ಮೂಲೆಯಲ್ಲಿ ನಿಂತ ವ್ಯಕ್ತಿ ಹೆಣ್ಣು! ಓಡಣಿ ತಲೆಯ ಮೇಲೆ ಹೊದ್ದುಕೊಂಡು ಮುಖ ಆ ಕಡೆ ಮಾಡಿ ನಿಂತುಕೊಂಡಿದ್ದಳು. ಮೊಗ ಕಾಣದೇ ಹೋದರೂ ವಯಸ್ಸು 25ರ ಆಸುಪಾಸಿನಲ್ಲಿ ಇರಬಹುದೆಂಬ ಅಂದಾಜು ಸಿಕ್ಕಿತು.

ಯಾಕೋ ಅರಿವಿಲ್ಲದೆಯೇ ಅವಳ ಬಗ್ಗೆ ಕುತೂಹಲ ಮೂಡಿ 'ಈಕೆ ಯಾರಿರಬಹುದು?’ ಎನ್ನುವ ಪ್ರಶ್ನೆ ಕಾಡತೊಡಗಿತು. ‘ಯಾಕೆ ಹೀಗಾಗ್ತಿದೆ? ಈಕೆ ಯಾರೋ, ಏನೋ ಗೊತ್ತಿಲ್ದೆ ಇದ್ರೂ ಅವಳನ್ನು ನೋಡುವ, ಮಾತಾಡಿಸುವ ತವಕ ಏಕೆ?’ ಎಂಬ ಅನಿಸಿಕೆಯೊಂದಿಗೆ ಅದೇಕೋ ‘ಅವಳನ್ನು ನಾನು ಚೆನ್ನಾಗಿ ಬಲ್ಲೆ, ಪರಿಚಯವಷ್ಟೇ ಅಲ್ಲ, ನಮ್ಮಿಬ್ಬರನ್ನು ಯಾವುದೋ ಸಂಬಂಧದ ಎಳೆ ಬಂಧಿಸಿದೆ’ ಎಂಬ ಭಾವನೆ ತೀವ್ರವಾಯಿತು.

ಆಕೆಯನ್ನು ಮಾತನಾಡಿಸಲೇಬೇಕೆಂಬ ಉಕ್ಕಿಬರುತ್ತಿರುವ ಆಸೆಯನ್ನು ಹತ್ತಿಕ್ಕಲಾರದೆ ‘ಯಾರಮ್ಮಾ ನೀನು? ಮಳೆ ಬರುವ ಸೂಚನೆ ಇದ್ದರೂ ಯಾಕೆ ಹೀಗೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡೆ?’ ಎಂದು ಪೀಠಿಕೆ ಹಾಕಿದೆ. ಆಕೆ ಕೇಳಿಸದವಳಂತೆ ತನ್ನ ಮೋರೆ ಆ ಕಡೆಗೆ ತಿರುಗಿಸಿಕೊಂಡು ಸುಮ್ಮನೆ ನಿಂತಿದ್ದಳು. ನಾನು ಪೆಚ್ಚಾಗಿ ಸುಮ್ಮನಾಗಬೇಕಾಯಿತು.

ಈ ಮಧ್ಯೆ ಮಳೆಯ ಸೆಳಕೊಂದು ಅವಳು ನಿಂತಿದ್ದ ಕಡೆಗೆ ಬಿದ್ದಾಗ, ತೊಯ್ಯಿಸಿಕೊಳ್ಳುವ ಫಜೀತಿಯಿಂದ ಪಾರಾಗಲು ಆಚೀಚೆ ಸರಿದಳು. ‘ನೀನು ನಿಂತಿರೋ ಕಡೆ ಮಳೆ ಬೀಳುತ್ತಾ ಇದೆಯಲ್ಲಾ, ಈ ಕಡೆಗೆ ಸರಿದು ನಿಂತ್ಕೋಳಮ್ಮ’ ಎನ್ನುತ್ತಾ ನಾನು ನಿಂತ ಜಾಗದಿಂದ ಸ್ವಲ್ಪ ಜರುಗಿದೆ. ಆದರೆ, ಅವಳು ನನ್ನ ಮಾತು ಕೇಳಿಸದವಳಂತೆ ನಿಂತಲ್ಲಿಯೇ ನಿಂತಿದ್ದಳು. ಅಷ್ಟೇ ಅಲ್ಲ, ನನ್ನತ್ತ ತಿರುಗಿ ನೋಡಲೂ ಇಲ್ಲ. ಅವಳ ನಿರ್ಲಕ್ಷ್ಯ ಧೋರಣೆ ನೋವನ್ನುಂಟುಮಾಡಿತು.

‘ಇವಳು ನಮ್ಮ ಪುಟ್ಟಿ ಇರಬಹುದಾ?’ ಎಂಬ ಊಹೆಯೊಂದಿಗೆ ಅಗೋಚರ ಇಂದ್ರಿಯಾತೀತ ಭಾವನೆಯೊಂದು ತನ್ನ ಇರುವಿಕೆಯನ್ನು ಪ್ರಕಟಿಸಿ, ಮನದ ದುಗುಡ ಹೆಚ್ಚಿಸಿತು. ಮರುಕ್ಷಣದಲ್ಲಿ ‘ಛೆ! ಛೆ! ಅವಳ್ಯಾಕೆ ಇಲ್ಲಿಗೆ ಬರುತ್ತಾಳೆ? ಕಟ್ಟಿಕೊಂಡು ಓಡಿಹೋದವನೊಂದಿಗೆ ಬೆಂಗಳೂರಿನಲ್ಲೆಲ್ಲೋ ಇರಬೇಕು’ ಎಂದು ಸಮಾಧಾನ ತಳೆದೆ. ನಡೆದ ಅವಘಡದ ಕಹಿ ನೆನಪಿನೊಂದಿಗೆ ಮಗಳ ಕೋಮಲ ಮುಖ ಕಣ್ಣೆದುರು ಬಂತು.

ಹೌದು! ನನ್ನ ಮುದ್ದಿನ ರಾಜಕುವರಿ ಶ್ವೇತಾ! ‘ಪುಟ್ಟಿ’ ಅಂತ ಕರೆಯುತ್ತಿದ್ದ ನಮ್ಮ ಏಕಮಾತ್ರ ಸಂತಾನ! ಎಷ್ಟೊಂದು ಮುಚ್ಚಟೆಯಿಂದ ಸಾಕಿದ ಮಗಳು. ಕಾಲೇಜು ಮೊದಲ ವರ್ಷದಲ್ಲಿದ್ದಾಗ ‘ಮುನ್ನಾ’ ಎನ್ನುವವನೊಂದಿಗೆ ಪ್ರೀತಿಯ ಅಮಲಲ್ಲಿ ಮನೆ ಬಿಟ್ಟು ಓಡಿಹೋಗಿದ್ದಳು. ಮುದ್ದಿನ ಮಗಳು ಕೊಟ್ಟ ಆಘಾತಕ್ಕೆ ನಾನು-ಯಶೋಧಾ ಮಾನಸಿಕವಾಗಿ ಕುಗ್ಗಿಹೋದೆವು.

ಏನು ಮಾಡೋದು? ಪ್ರೀತಿಯಿಂದ ಮುದ್ದು ಮಾಡಿ ಸಾಕಿದ ಮಗಳು ಹೀಗೆ ಪ್ರೇಮದ ಹುಚ್ಚು ಹತ್ತಿಸಿಕೊಂಡು ಹಿಂದೆ-ಮುಂದೆ ಯೋಚಿಸದೇ ಮುಖ-ಮೂತಿ ತಿಳಿಯದ ಹುಡುಗನ ಜೊತೆ ಹೊರಟು ಹೋದಳಲ್ಲಾ ಎಂಬ ಆಕ್ರೋಶಭರಿತ ಸಂಕಟ. ಹೌದು! ಶ್ವೇತಾಳನ್ನು ಅಂಗೈಯಲ್ಲಿಟ್ಟುಕೊಂಡು, ನಮ್ಮೆಲ್ಲ ಪ್ರೀತಿ ಧಾರೆಯೆರೆದು ಸಾಕಿ ಬೆಳೆಸಿದ್ದೆವು. ಎಷ್ಟೊಂದು ಆಸೆ ಇಟ್ಟುಕೊಂಡಿದ್ದೆವು, ಕನಸುಗಳನ್ನು ಕಟ್ಟಿದ್ದೆವು. ಎಲ್ಲ ನುಚ್ಚು-ನೂರು ಮಾಡಿ ಯಾವನೋ ಬೀಸಿದ ಪ್ರೇಮದ ಬಲೆಯಲ್ಲಿ ಬಿದ್ದು ಎಷ್ಟು ಸುಲಭವಾಗಿ ಅವನ ಹಿಂದೆ ಹೋಗಿದ್ದಳು.

ಎರಡು ತಿಂಗಳಾದ ಮೇಲೆ ಫೋನ್ ಮಾಡಿ, ‘ಅಪ್ಪಾ! ನನ್ನನ್ನು ಕ್ಷಮಿಸಿ, ನಿಮ್ಮ ನೆನಪು ಬರ್ತಾ ಇದೆ. ನಿಮ್ಮನ್ನು ನೋಡಬೇಕು ಅನಿಸ್ತಿದೆ. ವಾಪಾಸು ಬರ್ತಿನಿ’ ಅಂತ ಅಲವತ್ತುಕೊಂಡಿದ್ದಳು. ಆಗ ನಾನು ತೀರಾ ನಿಷ್ಠುರವಾಗಿ ‘ನೀ ನಿಮ್ಮ ಪಾಲಿಗೆ ಸತ್ತು ಹೋಗಿದ್ದಿ. ನೀನು ಬರೋದು ಅಷ್ಟೇ ಅಲ್ಲ, ಫೋನ್ ಕೂಡ ಮಾಡಬೇಡ’ ಅಂತೆಲ್ಲ ಅರಚಿ ಫೋನ್ ಕಟ್ ಮಾಡಿದ್ದೆ. ಯಶೋದಾ ಏನೋ ಹೇಳೋದಕ್ಕೆ ಬಂದಾಗ, ‘ನೀನು ಸುಮ್ಮನಿರು. ನಮಗೆ ಮಕ್ಕಳೇ ಇಲ್ಲ’ ಅಂತ ದನಿಯೇರಿಸಿ ಕಟುವಾಗಿ ನುಡಿದರೂ ಇಬ್ಬರ ಕಣ್ಣಾಲಿಗಳು ತುಂಬಿ ಬಂದು, ಇಬ್ಬರೂ ಗೋಳುಗರೆಯುತ್ತ ಒಬ್ಬರನ್ನೊಬ್ಬರು ತಬ್ಬಿ ಸಂತೈಸಿದ್ದೆವು.

ಆ ದಿನಗಳಲ್ಲಿ ನಾವಿಬ್ಬರೂ ಅನುಭವಿಸಿದ ನೋವು-ಸಂಕಟ-ಅವಮಾನ ಯಾರ ಕಲ್ಪನೆಗೂ ನಿಲುಕದ್ದು. ಯಶೋದಾ 'ಇದ್ದೊಬ್ಬ ಮಗಳ ಬಾಳು ಹೀಗಾಯ್ತಲ್ಲಾ' ಎಂದು ಕೊರಗಿ ಕೊರಗಿ ಹಾಸಿಗೆ ಹಿಡಿದಳು. ಮುಂದೆ ಕೆಲವೇ ತಿಂಗಳುಗಳಲ್ಲಿ ಗರ್ಭಾಶಯದ ಸೋಂಕಿಗೆ ಬಲಿಯಾದಳು. ಇದರಿಂದಾಗಿ ನನ್ನ ಮನಸ್ಸು ಇನ್ನಷ್ಟು ಕಠಿಣವಾಗಿ ‘ಅಂಥ ಮಗಳು ನನ್ನ ಪಾಲಿಗೆ ಇಲ್ಲವೇ ಇಲ್ಲ’ ಎಂಬಂತೆ ಅವಳ ನೆನಪನ್ನು ಸಂಪೂರ್ಣವಾಗಿ ತೊರೆದು ಜೀವಿಸಲು ರೂಢಿಸಿಕೊಂಡಿದ್ದೆ.

ಹೀಗೆಲ್ಲಾ ಯೋಚಿಸುತ್ತಾ ನಿಂತಷ್ಟು ಹೊತ್ತು ಆಕೆ ನನ್ನ ಇರುವಿಕೆಯನ್ನು ಧಿಕ್ಕರಿಸಿ, ಆ ಕಡೆಗೆ ಮುಖ ತಿರುವಿ ನಿಂತೇ ಇದ್ದಳು. ಅಂಗಡಿಯ ಮೂಲೆಯಲ್ಲಿ ನಿಂತಿದ್ದವಳಿಗೆ ಅಲ್ಲಿಂದ ಹೊರಟು ಹೋಗಲು ಅವಳ ದಾರಿಗೆ ಅಡ್ಡವಾಗಿ ನಾನಿದ್ದುದೇ ಕಾರಣವಾಗಿತ್ತು. ಬಹುಶಃ ಇಲ್ಲಿಗೆ ನಿಲ್ಲಲು ಬಂದಾಗಲೇ ಅವಳಿಗೆ ನನ್ನ ಗುರ್ತು ಸಿಕ್ಕಿರಬೇಕು. ಅದಕ್ಕೆಂದೇ ನನ್ನಿಂದ ತನ್ನ ಮುಖವನ್ನು ಮರೆಸಿ ನಿಲ್ಲುವ ಹಾಗೂ ನನ್ನ ಮಾತುಗಳನ್ನು ಕಡೆಗಣಿಸುವ ಪ್ರಜ್ಞಾಪೂರ್ವಕ ಯತ್ನ ಮಾಡುತ್ತಿರುವಳೆ? ಪಾಪ! ಸದಾ ಜೀವಕಳೆಯಿಂದ ನಳನಳಿಸುತ್ತಾ ನಕ್ಕು ನಲಿದಾಡುತ್ತಿದ್ದ ಹುಡುಗಿ ಹೇಗಾಗಿ ಹೋಗಿದ್ದಾಳೆ! ಮಕ್ಕಳು ಆಗಿರಬಹುದೇ?
ಮಳೆ ಇನ್ನೂ ಹೊಯ್ಯುತ್ತಲೇ ಇತ್ತು. ಈಗ ನಾನೇನು ಮಾಡಲಿ? ಅವಳು ಓಡಿಹೋದ ದಿನಗಳಲ್ಲಿ ನನ್ನ ಮನಸ್ಸು ಕಠಿಣವಾಗಿ ವರ್ತಿಸಿದ್ದರೂ ಯಶೋದಾ ತೀರಿಹೋದ ಮೇಲೆ ನಾನು ತೀರಾ ಒಬ್ಬಂಟಿಯಾಗಿ, ಯಾವಾಗಲಾದರೊಮ್ಮೆ ಮಗಳ ನೆನಪು ಒತ್ತಿ ಬಂದು ತುಂಬಾ ವೇದನೆಯುಂಟಾಗುತ್ತಿತ್ತು. ಅವಳು ಫೋನ್ ಮಾಡಿ ವಾಪಸ್ ಬರ್ತೀನಿ ಅಂದಾಗ ಅಷ್ಟೊಂದು ಕಠಿಣವಾಗಿ ಮಾತನಾಡಬಾರದಿತ್ತು. ಈಗ ಎಲ್ಲಿದ್ದಾಳೋ, ಹೇಗಿದ್ದಾಳೋ, ನನ್ನ ನೆನಪು ಅವಳಿಗಾಗುತ್ತಿರಬಹುದೇ- ಹೀಗೆ ಏನೇನೋ ಯೋಚನೆಗಳು ಕಾಡುತ್ತಿದ್ದವು. ಕೆಲವು ಸಾರಿ ಅವಳನ್ನು ಹುಡುಕುವ ವಿಚಾರ ಮೂಡಿ, ಪೇಪರ್- ಟಿವಿಗಳಲ್ಲಿ ಜಾಹೀರಾತು ಕೊಟ್ಟರೆ ಹೇಗೆ ಎಂದೆಲ್ಲಾ ಆಲೋಚನೆ ಬರುತ್ತಿತ್ತು.

ಇಲ್ಲಿ ನಿಂತಿರುವುದು ಪುಟ್ಟಿಯೇ ಆಗಿದ್ದರೆ ಅವಳನ್ನು ‘ಮನೆಗೆ ಬಾ’ ಎಂದು ಕರೆಯಲೇ? ಅವಳು ಬರುವಳೆ? ಅಥವಾ....' ಯಾಕೋ ಅಪನಂಬಿಕೆ ಕಾಡಿತು. 'ಛೆ! ಇಷ್ಟು ದಿನಗಳಾದ ಮೇಲೂ ಇನ್ನೂ ಆಕೆಗೆ ಈ ಬಡಪಾಯಿ ಅಪ್ಪನ ಮೇಲೆ ಕೋಪ ಹಾಗೇ ಇರಬಹುದಾ? ಇಲ್ಲಾ ನನ್ನಿಂದಾದ ಅನ್ಯಾಯ ಮನಸ್ಸಿನಲ್ಲಿಟ್ಟುಕೊಂಡು 'ಬರೋದಿಲ್ಲ' ಅಂತ ಧಿಕ್ಕರಿಸಬಹುದಾ? ಏನು ಮಾಡಲಿ? ನಿವೃತ್ತಿಯಿಂಚಿನಲ್ಲಿರುವ ನಂಗಾದರೂ ಬೇರೆ ಯಾರಿದ್ದಾರೆ? ಅವಳು ನನ್ನ ಜೊತೆ ಬರಲು ಒಪ್ಪಿದರೆ ನನಗೂ ಕಾಡುತ್ತಿರುವ ಅನಾಥ ಪ್ರಜ್ಞೆಯಿಂದ ಮುಕ್ತಿ ಸಿಕ್ಕಬಹುದು. ಮನಸ್ಸು ಇಂಥವೇ ಚಿಂತೆಗಳಲ್ಲಿ ತೊಳಲಾಡಿತು.
ಇಂಥ ತಾಕಲಾಟಗಳ ನಡುವೆ ನನಗೇ ಅರಿವಿಲ್ಲದೆ ಅವಳನ್ನು ಸಮೀಪಿಸಿ ‘ಪುಟ್ಟಿ!’ ಎನ್ನುತ್ತಾ ಅವಳ ಭುಜ ಮುಟ್ಟಿದೆ.

ಮರುಚಣವೇ ಶ್ವೇತಾ ಸರಕ್ಕನೆ ತಿರುಗಿ, ದುರುಗುಟ್ಟಿಕೊಂಡು ನೋಡುತ್ತಾ, ನನ್ನನ್ನು ತಳ್ಳಿಕೊಂಡೇ ದಾಟಿ ಅಂಗಡಿಯಿಂದಾಚೆ ರಸ್ತೆಗಿಳಿದು, ಸುರಿವ ಮಳೆಯಲ್ಲಿ ಓಡುಹೆಜ್ಜೆ ಹಾಕುತ್ತಾ ಹೊರಟೇ ಹೋದಳು; ಒಮ್ಮೆಯೂ ತಿರುಗಿ ನೋಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.