ಮತ್ಸಕನ್ಯೆಯ ದುರಂಥ ಕತೆ

7

ಮತ್ಸಕನ್ಯೆಯ ದುರಂಥ ಕತೆ

Published:
Updated:
Prajavani

ಬಂಡೆಗಲ್ಲ ಮೇಲೆ ಕೂತು ದಟ್ಟ ವಿಷಾದ ಭಾವದಿಂದ ಸಾಗರವನ್ನೇ ನೋಡುತ್ತ ಕೂತ ಹೆಣ್ಣೊಬ್ಬಳ ಪ್ರತಿಮೆ ಡೆನ್ಮಾರ್ಕ್‌ನ ಕೊಪನ್‌ ಹೆಗನ್‌ಗೆ ಭೇಟಿ ನೀಡುವ ಪ್ರವಾಸಿಗರೆಲ್ಲರನ್ನೂ ಸೆಳೆಯುತ್ತದೆ. ಸಾಗರದ ಭೋರ್ಗರೆತಕ್ಕೆ ಮನಸ್ಸಿನ ನಿರಾಸೆಯನ್ನೂ ಸೇರಿಸಿಕೊಂಡು ಕೂತಿರುವಂತೆ ಕಾಣುವ ಈ ಪ್ರತಿಮೆಯ ಹಿಂದೆ ಒಂದು ಭಗ್ನಪ್ರೇಮದ ಕಥೆಯಿದೆ.

ಲಿಟಲ್ ಮರ್ಮೇಡ್‌ ಎಂಬ ಹೆಸರಿನ ಈ ಪ್ರತಿಮೆ ರೂಪಿಸಿರುವುದು ಎಡ್ವರ್ಡ್‌ ಎರಿಕ್‌ಸನ್‌. ಹ್ಯಾನ್ಸ್‌ ಕ್ರಿಶ್ಚಿಯನ್ ಆ್ಯಂಡರ್ಸನ್‌ ಎಂಬ ಸಾಹಿತಿ ಬರೆದಿರುವ ಕಥೆಯ ಪಾತ್ರವೊಂದನ್ನು ಆಧರಿಸಿ ರೂಪಿಸಿದ ಕಲಾಕೃತಿಯಿದು. ಸಮುದ್ರ ಪಾಲಾಗಲಿದ್ದ ರಾಜಕುಮಾರನನ್ನು ಮತ್ಸ್ಯಕನ್ಯೆಯೊಬ್ಬಳು ರಕ್ಷಿಸುತ್ತಾಳೆ. ಕೊನೆಗೆ ಅವನ ರೂಪಕ್ಕೆ ಮೋಹಿತಳಾಗಿ ಪ್ರೇಮದಲ್ಲಿ ಬೀಳುತ್ತಾಳೆ. ಆದರೆ ಅವಳಿಗೆ ಭೂಮಿಗೆ ಹೋಗಲು ಸಾಧ್ಯವಾಗುವುದಿಲ್ಲ. ಮಾಟಗಾತಿಯೊಬ್ಬಳಿಗೆ ತನ್ನ ಕೊರಳು ಮತ್ತು ಕಿವಿರುಗಳನ್ನೇ ನೀಡಿ ಸಾಗರವನ್ನು ದಾಟಿ ಭೂಮಿಗೆ ಬರುತ್ತಾಳೆ. ಆದರೆ ಕೊನೆಗೂ ಅವಳಿಗೆ ರಾಜಕುಮಾರ ಸಿಗುವುದಿಲ್ಲ. ಹೀಗೆ ತನ್ನಿಷ್ಟದ ರಾಜಕುಮಾರ ಸಿಗದ ಹತಾಶೆ ಮತ್ತು ಮರಳಿ ಸಾಗರಲೋಕಕ್ಕೂ ತೆರಳಲಾಗದ ಅಸಹಾಯಕತೆ ಎರಡೂ ಭಾವಗಳನ್ನು ಹಿಡಿದಿಟ್ಟಂತೆ ಈ ಮೂರ್ತಿಯನ್ನು ಕೆತ್ತಲಾಗಿದೆ.

1.25 ಮೀಟರ್ ಎತ್ತರದ ಈ ಪ್ರತಿಮೆಯ ತೂಕ 175 ಕೆ.ಜಿ. ಬ್ರೆವೆರ್ ಕಾರ್ಲ್‌ ಜಾಕೋಬ್‌ಸೆನ್‌ ಎಂಬ ವ್ಯಕ್ತಿಯು ಕೊಪನ್ ಹೆಗನ್‌ ನಗರಕ್ಕೆ ಉಡುಗೊರೆ ರೂಪದಲ್ಲಿ ಈ ಮೂರ್ತಿಯನ್ನು ಕೆತ್ತಿಸಿದನು. 

ಲಿಟಲ್ ಮರ್ಮೇಡ್‌ ಮತ್ಸ್ಯಕನ್ಯೆ. 1909ರಲ್ಲಿ ಹ್ಯಾನ್ಸ್ ಬರೆದ ಕಥೆಯನ್ನು ಆಧರಿಸಿ ರಾಯಲ್ ಡ್ಯಾನಿಶ್ ಥಿಯೇಟರ್ ಒಂದು ರಂಗರೂಪವನ್ನು ಪ್ರಸ್ತುತಪಡಿಸಿತು. ಅದರಲ್ಲಿ ಲಿಟಲ್‌ ಮರ್ಮೇಡ್‌ ಆಗಿ ನಟಿಸಿದ ಕಲಾವಿದೆ ಎಲ್ಲೆನ್‌ ಪ್ರೈಸ್‌. ಈ ನಟಿಯನ್ನೇ ಮನಸಲ್ಲಿ ಇಟ್ಟುಕೊಂಡು ಪ್ರತಿಮೆ ಕೆತ್ತಲು ಎಡ್ವರ್ಡ್‌ ಎರಿಕ್‌ಸನ್‌ ನಿರ್ಧರಿಸಿದ್ದ. ಆದರೆ ಆ ನಟಿ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಎರಿಕ್‌ಸನ್‌ ತನ್ನ ಹೆಂಡತಿಯನ್ನೇ ಮಾಡೆಲ್‌ ಆಗಿ ಇಟ್ಟುಕೊಂಡು ಈ ಕಲಾಕೃತಿ ರಚಿಸಿದ. ಇಂದು ಈ ಪ್ರತಿಮೆ ಕೊಪನ್‌ ಹೆಗನ್‌ನ ಪ್ರಮುಖ ಗುರುತಾಗಿ ಜನಪ್ರಿಯತೆ ಗಳಿಸಿದೆ.

1913ರವರೆಗೂ ಈ ಪ್ರತಿಮೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಆದರೆ ಇತ್ತೀಚೆಗಿನ ದಶಕಗಳಲ್ಲಿ ಅದು ರಾಜಕೀಯ ಘರ್ಷಣೆಗಳಿಗೆ, ವಿಧ್ವಂಸಕ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಮೂಲ ಪ್ರತಿಮೆಯೂ ವಿಧ್ವಂಸಕರ ದಾಳಿಗೆ ಸಿಕ್ಕು ಜರ್ಜರಿತವಾಗಿದೆ. ಆ ಪ್ರತಿಮೆಯ ಮೇಲೆ ಹಲವು ಬಾರಿ ಮಸಿ ಎರಚಲಾಗಿದೆ. ಈ ಎಲ್ಲದರ ಹೊರತಾಗಿಯೂ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆ ಪ್ರತಿಮೆಯನ್ನು ನೋಡಲು ಬರುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !