ನೋನಿ

7

ನೋನಿ

Published:
Updated:
Prajavani

ರಾತ್ರಿ ಹನ್ನೊಂದೂವರೆ ಸಮಯ. ಇಡೀ ಪಟ್ಟಣವೇ ತಣ್ಣಗೆ ಮಲಗಿತ್ತು. ಪಟ್ಟಣದ ಮುಖ್ಯರಸ್ತೆಯಲ್ಲಿನ ಬೀದಿದೀಪಗಳು ಉರಿಯುತ್ತಿದ್ದವು. ಆದರೆ, ಮುಖ್ಯರಸ್ತೆಯಲ್ಲಿದ್ದ ಸರ್ಕಲ್‌ನಲ್ಲಿನ ಎತ್ತರದ ಕಂಬದಲ್ಲಿದ್ದ ಹೈಮಾಸ್ ಲೈಟ್ ಮಾತ್ರ ನಿಧಾನವಾಗಿ ಆರುತ್ತಿತ್ತು. ಬಳಿಕ ಅರೆಕ್ಷಣದಲ್ಲಿ ಝಗಮಗಿಸುತ್ತಿತ್ತು. ಆ ಲೈಟಿನ ಬೆಳಕಿಗೆ ಒಂದಿಷ್ಟು ಹುಳುಗಳು ಪಿರಪಿರನೆ ರೆಕ್ಕೆ ಬಡಿಯುತ್ತ, ಹಾರಾಡುತ್ತ ಲೈಟಿಗೆ ಡಿಕ್ಕಿ ಹೊಡೆದು ಅರೆಜೀವವಾಗಿ ನೆಲಕ್ಕೆ ಬೀಳುತ್ತಿದ್ದವು. ನಾಲ್ಕೈದು ಇಲಿಗಳು ಚೀಂ... ಚೀಂ... ಚೀರ್... ಅಂತ ಸದ್ದು ಮಾಡುತ್ತ ಖುಷಿಯಿಂದ ಕುಪ್ಪಳಿಸಿಕೊಂಡು ಆ ಹುಳುಗಳನ್ನು ಮುಕ್ಕುತ್ತಿದ್ದವು.

ಅಷ್ಟರಲ್ಲಿ ಬಸ್ಸೊಂದು ಭರ‍್ರೆಂದು ಸದ್ದು ಮಾಡುತ್ತ ಬಂದಿತ್ತು. ಹುಳುಗಳನ್ನು ಮುಕ್ಕುತ್ತಿದ್ದ ಇಲಿಗಳು ಚೆಲ್ಲಾಪಿಲ್ಲಿಯಾಗಿ ಓಟ ಕಿತ್ತಿದ್ದವು. ವೇಗವಾಗಿ ಬಂದ ಆ ಬಸ್ಸು ಸರ್ಕಲ್‌ನಿಂದ ಕೊಂಚ ದೂರ ಹೋಗಿ ನಿಂತಿತ್ತು. ಅಲ್ಲಿಯವರೆಗೆ ಹೈಮಾಸ್ ಲೈಟ್ ಬೀಳುತ್ತಿರಲಿಲ್ಲ. ಆದರೆ, ರಸ್ತೆಯ ಬದಿಯಲ್ಲಿ ಟೈರೊಂದು ಸಣ್ಣಗೆ ಉರಿಯುತ್ತಿತ್ತು. ಸುಡುತ್ತಿದ್ದ ಟೈರಿನ ಕೆಟ್ಟ ವಾಸನೆಯೊಂದಿಗೆ ಉರಿ ಬೆಳಕು ರಸ್ತೆಯ ಆಸುಪಾಸಿನ ಜಾಗವನ್ನು ಆವರಿಸಿಕೊಂಡಿತ್ತು.

ಬಸ್ಸು ಹೊರಟು ಹೋಯಿತು. ಆ ಬಸ್ಸಿನಿಂದ ಇಳಿದ ನಿರ್ಮಲಾಳ ಮನಸ್ಸು ಒಂದು ಕ್ಷಣ ವಿಚಲಿತಗೊಂಡಿತ್ತು. ಅವಳ ಹಿಂಬದಿಗೆ ಕೊಂಚ ದೂರದಲ್ಲಿ ರಸ್ತೆ ಅಂಚಿನಲ್ಲಿ ಸಣ್ಣಗೆ ಉರಿಯುತ್ತಿದ್ದದ್ದು ಏನು ಎಂಬುದು ಸ್ಪಷ್ಟವಾಗಿ ಅವಳಿಗೆ ಗೋಚರಿಸಿರಲಿಲ್ಲ. ಹಾಗಾಗಿ ತನ್ನೆದುರು ಕಾಣುತ್ತಿದ್ದ ಸರ್ಕಲ್‌ನ ಹೈಮಾಸ್ ಲೈಟಿನತ್ತ ವೇಗವಾಗಿ ಹೆಜ್ಜೆ ಹಾಕತೊಡಗಿದ್ದಳು. ತನ್ನ ಎಡ ಬಗಲಿನಲ್ಲಿ ಜೋತು ಬಿದ್ದಿದ್ದ ಬ್ಯಾಗನ್ನು ಎದೆ ಭಾಗದತ್ತ ಎಳೆದುಕೊಂಡು ತಬ್ಬಿಕೊಂಡಿದ್ದಳು. ಬಲಗೈಯಿಂದ ಸೆರಗನ್ನು ಹಿಡಿದುಕೊಂಡಿದ್ದಳು.

ಸರ್ಕಲ್‌ನ ಬಳಿಗೆ ಬರುತ್ತಿದ್ದಂತೆ ನಿರ್ಮಲಾ ಒಂದು ಸಾರಿ ನಾಲ್ಕೂ ದಿಕ್ಕುಗಳಲ್ಲಿದ್ದ ರಸ್ತೆಗಳತ್ತ ಕಣ್ಣು ಹಾಯಿಸಿದಳು. ಯಾವ ರಸ್ತೆಯಲ್ಲೂ ಒಂದು ಬೀದಿನಾಯಿ ಕೂಡ ಇರಲಿಲ್ಲ. ಅದೇ ಮೊದಲ ಬಾರಿಗೆ ಅಷ್ಟು ಹೊತ್ತಿನಲ್ಲಿ ಸರ್ಕಲ್‌ನಲ್ಲಿ ನಿಂತ ಅವಳಿಗೆ ಒಂದು ಕ್ಷಣ ತಾನು ಎತ್ತ ಹೋಗಬೇಕು ಎನ್ನುವುದೇ ತಿಳಿಯಲಿಲ್ಲ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಹಾಲಕ್ಕಿಗಳೆರಡು ಹಾರಿ ಬಂದು ಬೀದಿದೀಪದ ಕಂಬದ ತಂತಿಯ ಮೇಲೆ ಕುಳಿತುಕೊಂಡಿದ್ದವು. ಒಂದು ಕ್ಷಣ ಜೋರಾಗಿ ಕಿರುಚಾಡಿದ ಅವು ಎತ್ತಲೋ ಹಾರಿಹೋದವು. ಆಗಂತೂ ನಿರ್ಮಲಾಳ ಎದೆಬಡಿತ ಜೋರಾಗಿತ್ತು. ಕೈಕಾಲುಗಳು ನಡುಗತೊಡಗಿದ್ದವು. ಒಂದೆರಡು ನಿಮಿಷ ಹೇಗೋ ಸಾವರಿಸಿಕೊಂಡವಳು. ಬ್ಯಾಗಿನ ಮೊದಲ ಜಿಪ್ಪನ್ನು ಸರಿಸಿ ಅದರೊಳಗಿದ್ದ ಮೊಬೈಲನ್ನು ಕೈಗೆತ್ತಿಕೊಂಡಿದ್ದಳು. ಮನೆಗೆ ಕಾಲ್ ಮಾಡಿದ್ದಳು.

ಗಾಳಿ ಕೂಡ ಇರದ ವಾತಾವರಣ. ಎಲ್ಲೆಡೆ ನಿಶ್ಯಬ್ದ. ಆ ಸಮಯದಲ್ಲಿ ಮೊಬೈಲ್ ರಿಂಗ್ ಸದ್ದು ಜೋರಾಗಿ ಕೇಳುತ್ತಿತ್ತು. ಕೂಡಲೇ ಕಾಲ್ ಕಟ್ ಮಾಡಿದಳು. ಆ ಸರ್ಕಲ್‌ನಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿದ್ದ ಮನೆಯನ್ನು ತಲುಪಲು ನಿರ್ಮಲಾ ತನ್ನ ಬಲಗಡೆಯ ರಸ್ತೆಯಲ್ಲಿ ನಿಧಾನವಾಗಿ ಹೆಜ್ಜೆ ಹಾಕತೊಡಗಿದ್ದಳು.

ಆ ರಸ್ತೆಯ ಮಧ್ಯದಲ್ಲಿನ ರಸ್ತೆ ವಿಭಜಕದ ಮೇಲೆ ಅಲ್ಲಲ್ಲಿ ಸಣ್ಣಗೆ ಬೆಂಕಿ ಉರಿಯುತ್ತಿತ್ತು. ಅದೆಂಥ ಬೆಂಕಿ ಎಂದು ನಿರ್ಮಲಾ ಆರಂಭದಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಲೇ ಗಮನಿಸಿದಳು. ಟೈರಿಗೆ ಹಚ್ಚಿದ ಬೆಂಕಿ ಅವಳು ಬರುವ ಮೊದಲೇ ಧಗಧಗನೆ ಉರಿದು ಆರುವ ಕೊನೆಯ ಹಂತದಲ್ಲಿ ಇತ್ತು. ಆದರೂ, ಕೆಲವೆಡೆ ಜೋರಾಗಿಯೇ ಬೆಂಕಿ ಉರಿಯುತ್ತಿತ್ತು. ಬೀದಿದೀಪದ ಕಂಬಗಳಿಗೆ ಕಟ್ಟಿದ ದಾರಕ್ಕೆ ಸಾಲಾಗಿ ಪೋಣಿಸಿದ್ದ ಕೇಸರಿ ಬಣ್ಣದ ಬಾವುಟಗಳು ಹರಿದು ಬಿದ್ದು ಉರಿಯುತ್ತಿದ್ದ ಬೆಂಕಿಗೆ ಆಹುತಿಯಾಗಿದ್ದವು. ಅವುಗಳ ನಡುವೆ ಬೆಳ್ಳಗಿನ ಅರ್ಧ ಚಂದ್ರನ ಚಿತ್ರವಿದ್ದ ಅಂಗೈ ಅಗಲದ ಹಸಿರು ಬಣ್ಣದ ಬಾವುಟಗಳು ಸಹ ಅರ್ಧಮರ್ಧ ಸುಟ್ಟು ಬಿದ್ದವು. ಆ ದೃಶ್ಯವನ್ನು ಕಂಡ ನಿರ್ಮಲಾಳಿಗೆ ತಾನು ಸ್ಮಶಾನದಲ್ಲಿ ನಡೆದುಕೊಂಡು ಹೋಗುತ್ತಿರುವಂತೆ ಭಾಸವಾಯಿತು.

ಎರಡು ದಿನಗಳ ಹಿಂದೆಯಷ್ಟೇ ಸಂಜೆ ಹೊತ್ತಿನಲ್ಲಿ ಅದೇ ರಸ್ತೆಯಲ್ಲಿ ನಡೆದುಕೊಂಡು ಬಂದ ನಿರ್ಮಲಾ ಸರ್ಕಲ್‌ನ ಬಳಿಯಿಂದಲೇ ಬೆಂಗಳೂರು ಬಸ್ಸನ್ನು ಏರಿದ್ದಳು. ಆಗ ಇಡೀ ಸರ್ಕಲ್‌ನ ನಾಲ್ಕು ದಿಕ್ಕುಗಳ ರಸ್ತೆಯಲ್ಲಿ ಸಂತೆಯ ವಾತಾವರಣವಿತ್ತು. ದಿನದ ಕೆಲಸವನ್ನು ಮುಗಿಸಿ ಮನೆಗೆ ಸೇರಿಕೊಳ್ಳುವವರು, ತಮಗೆ ಅಗತ್ಯವಾದ ತರಕಾರಿ, ಸಾಮಾನುಗಳನ್ನು ಖರೀದಿಸಿಕೊಂಡು, ಚೀಲಗಳನ್ನು ಹೆಗಲಿಗೇರಿಸಿಕೊಂಡು ತಮ್ಮ ತಮ್ಮ ಮನೆಗಳತ್ತ ಹೋಗುವವರು, ಆ ವೇಳೆ ಅವರ ಮಾತಿನ ಗದ್ದಲ, ಆ ಗದ್ದಲದ ನಡುವೆ ನಗುವು, ಕೂಗಾಟವೂ ಇತ್ತು. ಅಂತಹ ರಸ್ತೆಗಳಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡ ನಿರ್ಮಲಾಳನ್ನು ಸ್ಮಶಾನ ಮೌನ ಆವರಿಸಿಕೊಂಡು ಬಿಟ್ಟಿತ್ತು.

ಮನೆ ಇನ್ನೂ ಅರ್ಧ ಕಿಲೋ ಮೀಟರ್ ದೂರ ಇರಬೇಕು. ರಸ್ತೆಯ ಪಕ್ಕದ ಹಲಸಿನ ಮರದ ಒಣ ಟೊಂಗೆ ಲಟಾರೆಂದು ಮುರಿದು ಬಿದ್ದಿತ್ತು. ಆಗಂತೂ ನಿರ್ಮಲಾ ಹೆದರಿದ ಜಿಂಕೆಯಂತೆ ಒಮ್ಮೆಲೆ ಜಿಗಿದು ರಸ್ತೆಯ ಮತ್ತೊಂದು ತುದಿಗೆ ಹೋಗಿ ನಿಂತಿದ್ದಳು. ಆ ಬಳಿಕ ಅವಳು ಇನ್ನಷ್ಟು ವೇಗವಾಗಿ ಹೆಜ್ಜೆಗಳನ್ನು ಇಡತೊಡಗಿದ್ದಳು.

ಹಾಗೆಯೇ ಅವಳಿಗೆ ಮತ್ತಷ್ಟು ಭಯವಾಗತೊಡಗಿತ್ತು. ಕಾರಣ, ಅವಳ ಎದುರು ಸ್ವಲ್ಪ ದೂರದಲ್ಲಿದ್ದ ಬೀದಿದೀಪ ಕೆಟ್ಟಿತ್ತು. ಎದುರು ಬದಿಯಿಂದ ಇವಳತ್ತ ಕತ್ತಲು ಚೆಲ್ಲಿತ್ತು. ಅವಳ ಹಿಂಬದಿಯ ಬೀದಿದೀಪದ ಬೆಳಕು ಅವಳ ಕರಿನೆರಳನ್ನು ಅವಳ ಮುಂದೆಯೇ ರಸ್ತೆ ಉದ್ದಕ್ಕೆ ಬೀಳುವಂತೆ ಮಾಡಿತ್ತು. ತನ್ನ ಆ ನೆರಳನ್ನು ಕಂಡವಳು ಹೆದರಿ ನಿಂತುಬಿಟ್ಟಿದ್ದಳು. ಒಂದು ಕ್ಷಣ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ತನ್ನ ನೆರಳಿನ ಪಕ್ಕದಲ್ಲಿಯೇ ಮತ್ತೊಂದು ಕರಿನೆರಳು ಕಾಣಿಸಿತ್ತು. ಆ ನೆರಳನ್ನು ಕಂಡ ನಿರ್ಮಲಾಳ ಎದೆ ಝಲ್ಲೆಂದಿತ್ತು. ಆ ನೆರಳು ಒಂದು ಗಂಡಿನ ನೆರಳಾಗಿತ್ತು. ದುಂಡಗಿನ ಟೋಪಿ, ಕೈಯಲ್ಲಿ ಎರಡು ಗೇಣುದ್ದದ ಚಾಕುವಿನಂತಹ ಆಯುಧ ಇರುವುದಂತೂ ಆ ಕರಿನೆರಳಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಹೇಗೋ ಧೈರ್ಯ ತಂದುಕೊಂಡ ನಿರ್ಮಲಾ ಹಿಂತಿರುಗಿ ನೋಡದೆ ತನ್ನ ಬ್ಯಾಗನ್ನು ಎದೆಗೆ ಗಟ್ಟಿಯಾಗಿ ಒತ್ತಿಕೊಂಡು ವೇಗವಾಗಿ ಹೆಜ್ಜೆಗಳನ್ನು ಇಡತೊಡಗಿದ್ದಳು.

ಆ ಕರಿನೆರಳು ಕೂಡ ಇವಳ ನೆರಳನ್ನು ವೇಗವಾಗಿ ಹಿಂಬಾಲಿಸುತ್ತಲೇ ಇತ್ತು. ಹದಿನೈದು, ಇಪ್ಪತ್ತು ಹೆಜ್ಜೆಗಳನ್ನು ಇಡುತ್ತಿದ್ದಂತೆ ನಿರ್ಮಲಾ ಸಂಪೂರ್ಣವಾಗಿ ಬೆವರಿಹೋಗಿದ್ದಳು. ಕಾರಣ ಆ ನೆರಳು ಅವಳ ನೆರಳಿನೊಂದಿಗೆ ಕಡಿಮೆ ಅಂತರದಲ್ಲಿಯೇ ಸಾಗತೊಡಗಿತ್ತು. ಏನೇ ಆಗಲಿ, ಒಮ್ಮೆ ಹಿಂತಿರುಗಿ ನೋಡಿಯೇ ಬಿಡೋಣ ಎಂದವಳು ಒಮ್ಮೆ ಥಟ್ಟನೆ ನಿಂತು ಬಿಟ್ಟಿದ್ದಳು. ಆ ಕ್ಷಣವೇ ನಿರ್ಮಲಾಳ ಮೊಬೈಲ್ ರಿಂಗಾಗಿತ್ತು. ಆ ಕೂಡಲೇ ನಡುಗುವ ಕೈಯಿಂದಲೇ ಕಾಲ್ ರಿಸೀವ್ ಮಾಡಿದವಳು, ‘ಹಲೋ...’ ಎಂದಿದ್ದಳು.

ಆ ಕಡೆಯಿಂದ, ‘ಅಮ್ಮಾ, ಎಲ್ಲಿದ್ದೀಯಮ್ಮಾ?’ ಮುಗ್ಧ ಮಗುವಿನ ಧ್ವನಿ ಕೇಳಿಸಿತ್ತು. ನಿಶ್ಶಬ್ದವಾದ ವಾತಾವರಣವಾಗಿದ್ದರಿಂದ ಆ ಮಗುವಿನ ಧ್ವನಿ ಸ್ಪಷ್ಟವಾಗಿ, ಜೋರಾಗಿಯೇ ಕೇಳುತ್ತಿತ್ತು.

‘ಮಗಾ, ಇಲ್ಲೇ ಸರ್ಕಲ್ ಕಡೆಯಿಂದ ಬರ‍್ತಾ ಇದ್ದೀನಿ. ಊಟ ಮಾಡಿದೆಯಾ ಮಗಾ..?’

‘ಇಲ್ಲಮ್ಮಾ, ಮೊನ್ನೆ ನೀನು ಮಾಡಿಟ್ಟ ಚಪಾತಿಗಳನ್ನು ಬಿಸಿ ಮಾಡಿಕೊಂಡು ಚಟ್ನಿಯೊಂದಿಗೆ ಇವತ್ತು ಮಧ್ಯಾಹ್ನದವರೆಗೂ ತಿಂದೆವಮ್ಮಾ’.

‘ಓ ದೇವರೇ, ಮಗಾ ಅಪ್ಪಂಗೆ ಚಪಾತಿ ತಿನಿಸಿದೆಯಾ?’

‘ಹೂಂ ಅಮ್ಮಾ, ಇವತ್ತು ಬೆಳಿಗ್ಗೆ ಏನೂ ತಿಂದಿಲ್ಲಮ್ಮ, ಉಳಿದಿದ್ದ ಎರಡು ಚಪಾತಿಗಳನ್ನು ಮಧ್ಯಾಹ್ನ ಅಪ್ಪ, ನಾನು ಇಬ್ಬರೂ ತಿಂದೆವು. ಈಗ ತಿನ್ನೋಕೆ ಏನೂ ಇಲ್ಲಮ್ಮ. ತುಂಬಾನೆ ಹೊಟ್ಟೆ ಹಸೀತಿದೆ. ಅಪ್ಪ ನಿನ್ನನ್ನೇ ಕಾಯ್ತಾ ಕುಳಿತಿದ್ದಾರೆ. ಬೇಗ ಬಾ ಅಮ್ಮ...’

‘ಹೂಂ ಮಗನೇ, ಬಂದೆ. ಮನೆ ಸ್ವಲ್ಪ ದೂರ ಇದೆ’ ಎಂದವಳು ಬಿಕ್ಕಿದ್ದಳು.

‘ಯಾಕಮ್ಮಾ ಅಳ್ತೀಯಾ? ಅಪ್ಪನ ಮೆಡಿಸಿನ್ ಹಣ್ಣು, ನೋನಿ ಹಣ್ಣುಗಳನ್ನು ತಂದಿಲ್ಲವಾ?’

‘ಮಗಾ, ತಂದಿದ್ದೇನೆ. ಚೀಲದಲ್ಲಿವೆ. ನಿಂಗೆ ತಿಂಡಿಯನ್ನೂ ತಂದಿದ್ದೇನೆ. ನೀನು ತಿಂಡಿ ತಿನ್ನುವಷ್ಟರಲ್ಲಿ ಊಟ ರೆಡಿ ಮಾಡುತ್ತೇನೆ. ಬಂದೆ. ಕಾಲ್ ಕಟ್ ಮಾಡ್ಲಾ ಮಗಾ..?’

‘ಆಂ ಅಮ್ಮಾ, ಕಾಲ್ ಕಟ್ ಮಾಡ್ಬೇಡ. ಮನೆವರೆಗೂ ಮಾತಾಡಿಕೊಂಡು ಬಾ ಅಮ್ಮಾ...’

‘ಆಯಿತು ಮಾತಾಡು ಮಗಾ...’

‘ಅಮ್ಮಾ, ಅಪ್ಪನ ಹಾಸ್ಪಿಟಲ್ ರಿಪೋರ್ಟ್ ನೋಡಿದ ಬೆಂಗಳೂರು ಡಾಕ್ಟರ್ ಏನಂದ್ರು?’

‘ಮಾಮೂಲು ಮೆಡಿಸಿನ್‌ಗಳನ್ನು ಕೊಡಿ. ಹಾಗೇನೇ ನೋನಿ ಹಣ್ಣುಗಳನ್ನು ಆಗಾಗ ಕೊಟ್ರೆ ಸರಿ ಹೋಗ್ತಾರೆ ಅಂದ್ರು. ಹೇಗೂ ಮೂನ್ನೂರು ರೂಪಾಯಿಗೆ ಒಂದರಂತೆ ನಾಲ್ಕು ಹಣ್ಣುಗಳನ್ನು ತಂದಿದ್ದೇನೆ ಮಗಾ. ಅವುಗಳನ್ನು ನಿನ್ನ ಅಪ್ಪನಿಗೆ ತಿನ್ನಿಸಿದ್ರೆ ಕಾಯಿಲೆ ವಾಸಿಯಾಗುತ್ತೆ ಅಂತ ಹೇಳಿದ್ದಾರೆ’.

‘ಅಮ್ಮಾ, ನೋನಿ ಹಣ್ಣುಗಳನ್ನು ಬ್ಯಾಗ್‌ನಲ್ಲಿ ಜಾಗ್ರತೆಯಿಂದ ತೆಗೆದುಕೊಂಡು ಬಾ ಅಮ್ಮಾ...’

‘ಆಯಿತು ಮಗಾ, ಇನ್ನು ಒಂದು ಐವತ್ತು ಹೆಜ್ಜೆ ಅಷ್ಟೇ, ಬಂದ್ಬಿಟ್ಟೆ’.

‘ಹೌದಮ್ಮಾ, ಬಾ ಬೇಗ. ಆಂ ಮತ್ತೆ, ಅಪ್ಪನಿಗೆ ನೋನಿ ಹಣ್ಣುಗಳನ್ನು ತಿನ್ನಿಸಿದರೆ ಮತ್ತೆ ಕಿಮೋಥೆರಪಿಗೆ ಅಂತ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅಗತ್ಯವಿಲ್ಲ ಅಲ್ಲೇನಲಮ್ಮ..?’

‘ಆಂ ಮಗಾ, ನೋಡೋಣ, ಆ ದೇವರು ಹೇಗೆ ದಾರಿ ತೋರಿಸುತ್ತಾನೋ ಹಾಗೆ. ನೋಡೋಣ. ನೀನು ಈಗ ಅಪ್ಪನನ್ನು ಹಾಸಿಗೆಯಿಂದ ಕೈ ಹಿಡಿದು ಎಬ್ಬಿಸಿ ಕೂರಿಸು. ಬಂದೆ...’

‘ಆಯಿತಮ್ಮಾ, ಎಲ್ಲಿದ್ದೀಯಾ? ನಾನು ರಸ್ತೆ ಕಡೆಗೆ ಬರ‍್ಲಾ..?’

‘ಬೇಡ ಮಗಾ, ಬೇಡ. ತುಂಬಾ ಕತ್ತಲಿದೆ. ನಾನೇ ಬರ‍್ತೇನೆ ಎಂದ ನಿರ್ಮಲಾ ತನ್ನ ನೆರಳಿನ ಪಕ್ಕದ ನೆರಳಿನ ಕಡೆಗೆ ಗಮನ ಹರಿಸಿದಳು. ಆದರೆ, ರಸ್ತೆಯಲ್ಲಿ ಅವಳದ್ದೊಂದೇ ನೆರಳಿತ್ತು. ಅವಳನ್ನು ಹಿಂಬಾಲಿಸುತ್ತಿದ್ದ ನೆರಳು ಮಾಯವಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !