ಶನಿವಾರ, ಏಪ್ರಿಲ್ 4, 2020
19 °C

ರಾಧೆಯ ಮತ್ತೆ ಬಂದ

ಜ್ಯೋತಿ ಎಸ್‌. Updated:

ಅಕ್ಷರ ಗಾತ್ರ : | |

Prajavani

ಗಂಟೆ ಸಂಜೆ ನಾಲ್ಕಾದರೂ ಇನ್ನೂ ಸೆಖೆ. ಬೆಳಿಗ್ಗೆ ಬೇಗ ಎದ್ದವಳಿಗೆ ಮಧ್ಯಾಹ್ನವಾದರೂ ಸ್ವಲ್ಪ ಹೊತ್ತು ಮಲಗಿ ಮನಸ್ಸು ಹಗುರ ಮಾಡಿಕೊಳ್ಳೋಣವೆಂದರೆ, ತೊಟ್ಟಿಕ್ಕುವ ಬೆವರು, ಜೊತೆಗೆ ಕರೆಂಟು ಇಲ್ಲದೆ ಫ್ಯಾನ್ ಗಾಳಿಯ ಭಯವಿಲ್ಲದ ನೊಣಗಳ ಮುತ್ತಿಕ್ಕುವಿಕೆ. ಮಗ್ಗುಲು ಬದಲಾಯಿಸಿ ಸಾಕಾಗಿ ಎದ್ದು ಟೀ ಕುಡಿದವಳಿಗೆ, ಹೊರಗೆ ಗಾಳಿಗೆ ಮೈಯೊಡ್ಡಬೇಕೆನಿಸಿತು. ಆದರೆ, ಗಾಳಿಯಿಲ್ಲದೆ ಮಿಸುಕಾಡದ ಒಂಟಿಮರಗಳು. ದೈನಂದಿನ ಏಕತಾನತೆಗೆ ಅದೊಂದೇ ಅರ್ಥಪೂರ್ಣ ಚಟುವಟಿಕೆ. ಮನೆಗೆ ವಾಪಸ್ಸಾದರೆ, ಮಲಗುವವರೆಗೆ ಮತ್ತದೇ ದಿನಚರಿಯ ಪುನರಾವರ್ತನೆ. ಬಿಡುಗಡೆಯೆಂದೆನೆಗೆ ಇದರಿಂದ? ಚಪ್ಪಲಿ ಮೆಟ್ಟಿ ಮನೆಬಾಗಿಲು ಸರಿಸಿ, ಹೊರಗೆ ಕಾಲಿಟ್ಟರೆ, ಸೂರ್ಯ ಇನ್ನೂ ಸುಡುತಿದ್ದ. ಮೈಬಿಸಿಯೆನಿಸಿ ಸೆರಗು ಹೊದ್ದುಕೊಂಡೆ. ಕಾಲಗಳೆಲ್ಲಾ ಏರುಪೇರಾದಂತಿದೆ. ಚಳಿಗಾಲದಲ್ಲಿ ಮಳೆ, ಸೆಖೆಗಾಲದಲ್ಲಿ ಚಳಿ, ಮಳೆಗಾಲದಲ್ಲಿ ಬಿಸಿಲು. ಒಂದೇ ಪ್ರವಾಹ, ಇಲ್ಲವೇ ಬರಗಾಲ. ಮನುಷ್ಯ ಎಚ್ಚರಗೊಳ್ಳದಿದ್ದರೆ, ಪ್ರಪಂಚದ ಅಳಿವು ನಿಶ್ಚಿತವೆಂದು ಗೊಣಗುತ್ತಲೇ ಸಂಜೆಯ ವಾಕಿಂಗ್ ಬೇಗ ಮುಗಿಸಲೆಂದು ಮನೆ ಹಿಂದಿನ ಗುಡ್ಡದತ್ತ ಕಾಲುದಾರಿಯಲ್ಲಿ ನಡೆಯತೊಡಗಿದೆ. ನಲವತ್ತು ಕಳೆದ ಮೇಲೆ ಸ್ವಲ್ಪ ಕೈಕಾಲು ಅಲುಗಾಡಿಸದಿದ್ದರೆ, ಬಿಪಿ, ಶುಗರ್ ಗ್ಯಾರಂಟಿಯೆಂದು ಸ್ನೇಹಿತರು ಹೆದರಿಸುತ್ತಾರೆ. ಆರೋಗ್ಯ ಕೆಡಿಸಿಕೊಂಡು, ಇನ್ನೊಬ್ಬರ ಹಂಗಿಗೆ ಬದುಕೊಡ್ಡುವುದು ಯಾಕೆ? ನಮ್ಮ ಅರೋಗ್ಯ ನೋಡಿಕೊಳ್ಳುವ ವ್ಯವಧಾನವಿಲ್ಲದ ಕಾಲದಲ್ಲಿ, ಇನ್ನೊಬ್ಬರ ಆರೈಕೆಗೆ ಎಲ್ಲಿದೆ ಸಮಯ? ಸೂರ್ಯಾಸ್ತವಾದರೆ, ಒಬ್ಬಳೇ ನಡೆದಾಡಲು ಭಯ. ಕಾಲ ಕೆಟ್ಟುಹೋಗಿದೆಯೆನ್ನುತ್ತಾರೆ. ಆದರೆ ನನಗನಿಸುವುದು, ಎಲ್ಲಾ ಕಾಲದಲ್ಲಿ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದುದು ಹೀಗೆಯೇ. ಬೇರೆಲ್ಲ ಅಭಿವೃದ್ಧಿ ಕಂಡರೂ, ನೋಡುವ ದೃಷ್ಟಿ ಮಾತ್ರ ಬದಲಾಗಿಲ್ಲ. ಪ್ರಾಯ ಎಷ್ಟಾದರೇನು. ಹೊತ್ತಿರುವ ದೇಹ ಹೆಣ್ಣಿನದೇ ತಾನೇ? ನನ್ನ ಜಾಗ್ರತೆ ನನಗಿರಬೇಕೆನಿಸಿತು.

ಮಲಗಿದ್ದ ಒಣಹುಲ್ಲುಗಳ ಮೇಲೆ ಕಾಲಿಡುತ್ತಾ ಬೇಗಬೇಗನೆ ಗುಡ್ಡ ಹತ್ತಲಾರಂಭಿಸಿದೆ. ಈ ಹಳ್ಳಿಯಲ್ಲಿ ಮನೆಮಾಡಿ ವರ್ಷ ಕಳೆಯಿತು. ಗಂಡನಿಗೆ ನಿವೃತ್ತಿಯ ನಂತರ ಹಳ್ಳಿಜೀವನ ಬೇಕೆನಿಸಿತು. ನಿರ್ಧಾರ ಅವರದ್ದು. ನಾನು ಹಿಂಬಾಲಿಸಿದೆ, ಮದುವೆಯಾದ ದಿನದಿಂದ ಹಿಡಿದು ಇಂದಿನವರೆಗೂ. ಸಿಟಿಯಲ್ಲಿ ಹುಟ್ಟಿಬೆಳೆದು ಬೇರೂರಿದ ಮಕ್ಕಳಿಗೆ ಹಳ್ಳಿಬೇಡ. ಗಂಡನಿಗೆ ಅವರದ್ದೇ ಹಠ. ಆದರೆ ಹಳ್ಳಿ ಸೇರಿದ ಮೇಲೆ ಒಂದು ದಿನವೂ ಮನೆಯಲಿಲ್ಲ. ಯಾವುದಾದರೂ ಸಭೆ ಸಮಾರಂಭಕ್ಕೆ ಆಹ್ವಾನ ತಪ್ಪಿದಿಲ್ಲ. ನನ್ನನೆಂದೂ ಜೊತೆಗೆ ಕರೆದಿಲ್ಲ. ಬಹುಶಃ ಒಂಟಿ ಪ್ರಯಾಣವೇ ಇಷ್ಟವಾಗಿಬಿಟ್ಟೆದೆಯೆನಿಸುತ್ತದೆ. ಕೆಲವೊಮ್ಮೆ ವರುಷ ಕಳೆದಂತೆ, ದಾಂಪತ್ಯದಲ್ಲಿ ಅಪರಿಚಿತರಾಗಿಬಿಡುತ್ತೇವೆ. ನನಗೆ ಇತ್ತೀಚೆಗೆ ಮರಗಿಡಗಳೊಂದಿಗೆ ಮಾತನಾಡುವ ಗೀಳು ಹತ್ತಿಕೊಂಡಿದೆ. ಎಷ್ಟು ಹೊತ್ತು ಮೌನವಾಗಿರಲಿ? ಮಾತಾಡಲು, ಜನರ ಸಂಪರ್ಕ ಕಡಿಮೆ. ಅಪರಿಚಿತರಾಗಿಯೇ ಉಳಿದವರಲ್ಲಿ ಎಷ್ಟು ಮಾತಾಡಲಿಕ್ಕಾದೀತು? ಹಾಗೆ ನೋಡಿದರೆ ಪ್ರಕೃತಿಯೇ ವಾಸಿ, ಒಂದು ಮುಖಾಮುಖಿಯಲ್ಲಿ ನಮ್ಮದಾಗಿಬಿಡುತ್ತದೆ. ನನಗೆ ಆ ಗುಡ್ಡದ ಮೇಲೆ ಕುಳಿತು ಸೂರ್ಯಾಸ್ತ ನೋಡುವ ಹುಚ್ಚು ಹತ್ತಿಬಿಟ್ಟಿದೆ. ದಿನಾ ಬರುತ್ತೇನೆ. ಸೂರ್ಯ ಮುಳುಗುವವರೆಗೆ ನೋಡುತ್ತಾ ನನ್ನ ಜೀವನದ ಪರ್ಯಾವಲೋಕನ ಮಾಡಿಕೊಳ್ಳುತ್ತೇನೆ. ಸೂರ್ಯ ಮುಳುಗಿದ ಮೇಲೆ ಸುತ್ತಲಿನ ಕತ್ತಲು ನನ್ನ ವಾಸ್ತವಕ್ಕೆ ಎಚ್ಚರಿಸಿ ಮನೆಕಡೆ ತಳ್ಳುತ್ತವೆ.

ಯಾಕೋ ಇತ್ತೀಚೆಗೆ ಆ ಗುಡ್ಡ ಹತ್ತದಿದ್ದರೆ ರಾತ್ರಿ ನಿದ್ರೆ ಹತ್ತಿರ ಸುಳಿಯುವುದಿಲ್ಲ. ಏನೋ ಕಳೆದುಕೊಂಡಂತೆ. ಇಂದೇಕೋ ದೇಹ, ಮನಸ್ಸು ಎರಡೂ ಸುಸ್ತಾದಂತಿದೆ. ಏದುಸಿರು ಬಿಡುತ್ತ ಹತ್ತುತ್ತಿದ್ದಂತೆ, ಗುಡ್ಡದ ತುದಿಯ ಕಲ್ಲಿನ ಮೇಲೆ ಯಾವುದೊ ಮನುಷ್ಯನಾಕೃತಿ ಆಗಲೇ ಠಿಕಾಣಿ ಹೂಡಿದಂತೆ ಕಾಣಿಸುತ್ತಿತ್ತು. ಯಾರಿರಬಹುದು? ಯಾವುದೋ ಬಿಳಿ ವಸ್ತ್ರಧಾರಿ ಗಂಡಸಿನಂತೆ ಕಾಣಿಸುತ್ತಿದೆ. ಉಟ್ಟಿರುವುದು ಬಿಳಿ ಪಂಚೆ, ತುಂಬು ತೋಳಿನ ಬಿಳಿ ಶರ್ಟ್, ತಲೆಗೆ ಸುತ್ತಿರುವ ಬಿಳಿ ರುಮಾಲು, ಮುಖದಲ್ಲಿ ಕುರುಚಲು ಗಡ್ಡ, ವರುಷ ಸುಮಾರು ಐವತ್ತು ಇರಬಹುದು. ನಾನು ಹತ್ತಿರವಾದಂತೆ, ಒಂದು ಕ್ಷಣ ದಿಟ್ಟಿಸಿನೋಡಿ ಸೂರ್ಯನತ್ತ ಮುಖ ತಿರುಗಿಸಿದ, ಖ್ಯಾರೇ ಇಲ್ಲದವನಂತೆ. ಬೇರೆ ಯಾವುದೋ ಊರಿನವನಂತೆ ಕಂಡ. ಒಂದು ಕ್ಷಣ ಕೋಪ ಬಂತು, ನಾನು ದಿನಾ ಕೂರುವ ಜಾಗದಲ್ಲಿ ಕೂತಿದ್ದಾನಲ್ಲಾ? ಸ್ವಲ್ಪ ಹೊತ್ತು ಹಾಗೆ ನಿಂತೆ. ಆಮೇಲೆ ಅಲ್ಲೇ ಬಿದ್ದುಕೊಂಡಿದ್ದ ಸೊಟ್ಟ ಚಿಕ್ಕಕಲ್ಲಿನ ಮೇಲೆ ಕುಳಿತು ಸೂರ್ಯನ ನೋಡಲಾರಂಭಿಸಿದೆ.

'ಎಷ್ಟು ದಿನಗಳಿಂದ, ಇಲ್ಲಿ ಸೂರ್ಯಾಸ್ತ ನೋಡುತ್ತಿದ್ದೀರಾ?' ಎಂದ.
ಉತ್ತರಿಸಲೋ, ಬೇಡವೋ, ನಾನ್ಯಾಕೆ ಅಪರಿಚಿತನೊಂದಿಗೆ ಈ ಒಂಟಿ ಪ್ರದೇಶದಲ್ಲಿ ಹರಟೆ ಹೊಡೆಯಲಿ ಎನಿಸಿತು. ಆದರೂ ಕುತೂಹಲಿಯಾಗಿ ಕೇಳಿದೆ, 'ಕ್ಷಮಿಸಿ, ನೀವ್ಯಾರೋ ಗೊತ್ತಾಗಿಲ್ಲ?'
ಅವನು ತುಸುನಗುತ್ತ ಹೇಳಿದ, 'ನನ್ನನ್ನು ಹಲವಾರು ಹೆಸರಿನಿಂದ ಕರೆಯುತ್ತಾರೆ. ಆದರೆ ನನ್ನ ಇಷ್ಟದ ಹೆಸರು ರಾಧೆಯ'
ಓಹ್. ರಾಧೆಯ. ಹೆಸರು ಚೆನ್ನಾಗಿದೆ ಎನಿಸಿತು. ತಕ್ಷಣ ಸಿನಿಮಾದ ಪಾತ್ರವೊಂದು ನೆನಪಾಗಿ ನಗುಬಂತು. ಅವನು ಕೇಳಿದ, ‘ಯಾಕೆ ನಗುತಿದ್ದೀರಾ?' ‘ಏನೋ ನೆನಪಾಯಿತು’ ಎಂದು ಸುಮ್ಮನಾದೆ.
ಒಂದು ಕ್ಷಣ ಕಳೆದು ಕೇಳಿದ, ‘ಸೂರ್ಯಾಸ್ತ ನಿಮಗೆ ಖುಷಿ ಕೊಡುತ್ತದೆಯೋ?'
‘ಹೌದು. ಮನಸ್ಸು ನೆಮ್ಮದಿಯಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ರೆಬರುತ್ತದೆ' ಎಂದೆ.

‘ನನಗೆ ಇತ್ತೀಚೆಗೆ ಸೂರ್ಯ ನಿದ್ರೆ ಕೆಡಿಸುತ್ತಿದ್ದಾನೆ. ಸಾವಿರಾರು ವರುಷ ಕಳೆದರೂ ನನ್ನ ಹೆಸರಿನ್ನೂ ಈ ಭೂಮಿಯಲ್ಲಿ ಜೀವಂತವಿದೆ. ಜನ ನನ್ನನ್ನು ಅವರಿಗೆ ತೋಚಿದಂತೆ ವಿಮರ್ಶಿಸುತ್ತಾರೆ. ಆದರೆ ನಾನು ಸ್ವವಿಮರ್ಶೆ ಮಾಡಿಕೊಳ್ಳಲಾಗಲಿಲ್ಲ. ನಾನೊಂದು ಕಾಲದ ಗೊಂಬೆಯಂತೆ ವರ್ತಿಸಿದೆ. ‘ತ್ಯಾಗದ ಸಂಕೇತ ಇವ’ ಎನ್ನುವ ಹಣೆಪಟ್ಟಿ ಕಟ್ಟಿ ನನ್ನ ಪಾತ್ರಕ್ಕೆ ಶೀರ್ಷಿಕೆ ಕೊಟ್ಟರು. ನನ್ನ ಬಾಯಿ ಕಟ್ಟಿ ಹೋಯಿತು. ಅಲ್ಲಿಂದ ಬದುಕು ವಿಕಾಸವಾಗಲಿಲ್ಲ, ಕುಸಿದುಹೋಯಿತು. ತ್ಯಾಗದ ಭಾರಹೊತ್ತು ಹೊತ್ತು ಬೇಸರವಾಗಿದೆ. ಬದುಕ ಕಟ್ಟಿಕೊಳ್ಳಲು ಸೋತುಹೋದೆಯೆನಿಸತೊಡಗಿದೆ. ಇದನೆಲ್ಲ ಸರಿಮಾಡಲು, ಬದುಕಿನ ಸಿಹಿಕಹಿಯ ಅನುಭವ ಪಡೆದಿದ್ದ ನನ್ನ ಹುಟ್ಟಿಸಿದ ಅಪ್ಪಅಮ್ಮ ಮಾರ್ಗದರ್ಶನ ನೀಡಬೇಕಿತ್ತು. ಅಮ್ಮನ ಯೌವ್ವನದ ಚೆಲ್ಲಾಟಕ್ಕೆ ನನ್ನ ಹುಟ್ಟಾಯಿತು. ಪ್ರೀತಿಯ ಅಮಲಿನಿಂದ ವಾಸ್ತವಕ್ಕೆ ತಲುಪಿದಾಗ, ತನ್ನ ಮಗುವಾಗಿ ಕಾಣಲಿಲ್ಲ ಅವಳಿಗೆ, ಒಂದು ತಪ್ಪಿನ ಅಂಶವೆನಿಸಿ, ನಿರ್ದಯವಾಗಿ ನದಿಯಲ್ಲಿ ತೇಲಿಬಿಟ್ಟು ಕೈ ತೊಳೆದುಬಿಟ್ಟಳು. ಆದರೆ, ಹುಟ್ಟಿಸಿದ ಜೀವನಾನುಭವಿ ಅಪ್ಪ, ಲೋಕಕ್ಕೆ ಬೆಳಕುಕೊಡುವ ಸೂರ್ಯ, ನನಗೆ ಜೀವನದ ಬೆಳಕ ಕೊಡದೆ ಹೋದ. ಹೇಗೆ ಕ್ಷಮಿಸಲಿ ಅವನ?’ ಎಂದು ನಿಟ್ಟುಸಿರಬಿಟ್ಟ.
‘ಕ್ಷಮಿಸಿ. ನೀವು ಯಾರೋ ನಂಗೆಗೊತ್ತಿಲ್ಲ. ಆದರೆ ನಿಮ್ಮ ಕಥೆಯ ಧಾಟಿ ಮಹಾಭಾರತದ ಕರ್ಣನ ನೆನಪಿಸುತ್ತದೆ. 'ನಿಮಗೆ ನಿದ್ರೆ ಬಾರದಿರುವುದಕ್ಕೂ, ಸೂರ್ಯನಿಗೆ ಸಂಬಂಧವೇನು ಗೊತ್ತಾಗಲಿಲ್ಲ?' ಎಂದೆ.

‘ಯಾಕೆಂದರೆ ನಾನೇ, ಆ ಕರ್ಣ, ವಾಸುಸೇನಾ, ಅಂಗರಾಜ, ಸೂತಪುತ್ರ, ರಾಧೆಯ. ಹೆತ್ತವಳಿಗೆ ಬೇಡವಾದರೆ, ಹುಟ್ಟಿಸಿದವ ಯಾಕೆ ನನಗಾಸರೆಯಾಗಲಿಲ್ಲ? ನದಿಯಲ್ಲಿ ತೇಲಿ ಹೋಗುವುದನ್ನು ಸುಮ್ಮನೆ ನೋಡಿದ, ತನ್ನ ಜೊತೆಗಿಟ್ಟು ಪೋಷಿಸಲಿಲ್ಲ. ಲೋಕವೆಲ್ಲಾ ಸೂತಪುತ್ರನೆಂದು ಹೀಯಾಳಿಸಿದಾಗ, ನನ್ನ ಮಗನಿವನೆಂದು ಹೇಳಿಕೊಳ್ಳಲಿಲ್ಲ. ಪ್ರಪಂಚಕ್ಕೆ ಬೆಳಕು ಕೊಡುವವ, ತನ್ನ ಮಗನ ಬಾಳಿಗೆ ಕತ್ತಲ ಕೊಟ್ಟ. ದೀಪದ ಬುಡದಲ್ಲಿ ಕತ್ತಲಿದ್ದಂತೆ.’ ಎಂದು ತುಟಿ ಕಚ್ಚಿದ.
ನನಗೆ ಒಂದು ಕ್ಷಣ ಭಯವಾಯಿತು. ಇವನಿಗೆ ಏನೋ ಮನೋರೋಗವೆಂದು ಕಾಣಿಸುತ್ತದೆ. ನೆಮ್ಮದಿಗೆಂದು ಗಾಳಿಸೇವನೆಗೆ ಬಂದರೆ, ಇಲ್ಲಿ ಇವನ ಹತ್ತಿರ ಸಿಕ್ಕಿಹಾಕಿಕೊಂಡೆನಲ್ಲಾ? ಹೇಗಾದರೂ ಮಾಡಿ ಕಳಚಿಕೊಳ್ಳಬೇಕು. ನಿಧಾನವಾಗಿ ಏಳಲು ಪ್ರಯತ್ನಿಸಿದೆ. ಅವನಿಗದು ಗೊತ್ತಾಗಿ ಹೋಯಿತು.

‘ಭಯ ಪಡಬೇಡಿ. ಎಷ್ಟೋ ದಿನವಾಯಿತು ಜನರೊಂದಿಗೆ ಮಾತನಾಡದೆ. ನಾನೇ ಕರ್ಣನೆಂದು ಹೇಗೆ ನಂಬಿಸಲಿ? ಗುರುತಿಗಿದ್ದ ಕರ್ಣ ಕುಂಡಲ ಕವಚ ಎಲ್ಲಾ, ತನ್ನಮಗನ ರಕ್ಷಿಸಲು ಇಂದ್ರ ಬೇಡಿಕೊಂಡು ಹೋದ. ಅದನ್ನು ಕೊಟ್ಟಿದ್ದ ನನ್ನಪ್ಪ ತನ್ನೆದುರೇ ಮಗನ ಜೀವನ ಅಂತ್ಯವಾಗುವುದ ಕಂಡು ಮೌನಕ್ಕೆ ಶರಣಾದ. ಎಲ್ಲರಿಗೂ ನಾನು ಬೇಕಿತ್ತು, ತಮ್ಮ ಬದುಕ ಕಟ್ಟಿಕೊಳ್ಳಲು ಮಾತ್ರ. ನನಗೆ ಪ್ರೀತಿಯ ಅಗತ್ಯತೆಯಿದೆಂದು ಯಾರಿಗೂ ಅರಿವಾಗಲಿಲ್ಲ. ನೀವಾದರೂ ನನ್ನ ಮಾತು ಸ್ವಲ್ಪ ಕೇಳಿ ನನಗಷ್ಟೇ ಸಾಕು. ಪ್ರತಿಕ್ರಿಯಿಸುವ ಒತ್ತಡ ಹಾಕುವುದಿಲ್ಲ. ಮಾತನಾಡುತ್ತಾ ನನ್ನ ಗೊಂದಲಗಳ ಸಿಕ್ಕನ್ನು ನಾನೇ ಬಿಡಿಸಿಕೊಳ್ಳಲು ಪ್ರಯತ್ನಿಸುವೆ.' ಎಂದು ಕೈ ಮುಗಿದ.

‘ಅಯ್ಯೋ ಪ್ರಾರಬ್ಧವೇ, ನನಗೆಲ್ಲಿ ಅಂಟಿಕೊಂಡಿತು. ಆದರೂ ಅವನ ಮುಖ ನೋಡಿ ಪಾಪವೆನಿಸಿ, ಸ್ವಲ್ಪ ಕತೆ ಕೇಳಿ 'ದೇವರು ನಿನ್ನ ಒಳ್ಳೆಯದು ಮಾಡಲಿ. ಎಲ್ಲ ಸರಿಯಾಗುತ್ತೆ' ಹೇಳುವ ಅಂದುಕೊಂಡು, ‘ಸರಿ, ಬೇಗ ಹೇಳಿ ಮುಗಿಸು, ಕತ್ತಲಾಗುತ್ತಿದೆ' ಎಂದೆ.

‘ಧನ್ಯವಾದಗಳು. ನಿಮ್ಮ ಹೆಸರು ಗೊತ್ತಾಗಲಿಲ್ಲ' ಎಂದ ರಾಧೆಯ.
‘ಅದರ ಅಗತ್ಯವೇನಿದೆ ಈಗ. ಕತೆ ಕೇಳಬೇಕೆಂದು ನೀನು ಬೇಡಿಕೊಂಡಿದ್ದಿ. ಮಾನವೀಯತೆ ದೃಷ್ಟಿಯಿಂದ ಇನ್ನೂ ಕುಳಿತಿದ್ದೇನೆ. ಬೇಗ ಮಾತು ಮುಗಿಸು. ನನಗಿನ್ನೂ ಕೆಲಸವಿದೆ ಮನೆಯಲ್ಲಿ' ಎಂದೆ ವಾಚು ನೋಡುತ್ತಾ.
‘ಸರಿ ಒತ್ತಾಯಿಸುವುದಿಲ್ಲ. ನೇರವಾಗಿ ನನ್ನ ಮೊದಲ ಗೊಂದಲ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ. ಹುಟ್ಟಿಸುವ ಮೊದಲು ಮಗುವಿನ ಭವಿಷ್ಯದ ಜವಾಬ್ದಾರಿ ಇರಬೇಕಿತ್ತು ತಾನೇ? ಮಕ್ಕಳ ಹುಟ್ಟಿಸುವುದು ಮಕ್ಕಳಾಟವೇ? ಮಗು ಹುಟ್ಟಿದ ಮೇಲೆ ತನಗಿನ್ನು ಮದುವೆಯಾಗಿಲ್ಲ ಎಂದೆಚ್ಚರವಾಗಿ, ತನ್ನ ಭವಿಷ್ಯ ಮಾತ್ರ ಮುಖ್ಯವೆನಿಸಿ, ಮಗುವನ್ನು ಹೃದಯಹೀನಳಾಗಿ ನದಿಯಲ್ಲಿ ತೇಲಿಬಿಟ್ಟ ಹೆತ್ತವಳ ಹೇಗೆ ಕ್ಷಮಿಸಲಿ? ಅವಳು ಮರೆತರೆ, ಹುಟ್ಟಿಸಿದವನೂ ಕೈಬಿಡುವುದೇ? ಕೇವಲ ಕರ್ಣ ಕುಂಡಲಿ ದಯಪಾಲಿಸಿದರೆ ಮಗನ ಜವಾಬ್ದಾರಿ ಮುಗಿಯಿತೇ?’

‘ರಾಧೆಯ, ಅವರು ಮಾಡಿದ್ದು ಸರಿಯಲ್ಲ. ಆದರೆ ರಾಧಾ ಮತ್ತು ಅಥಿರಥ ನಂದನ ಆ ಸ್ಥಾನ ತುಂಬಿದರಲ್ಲ? ಹೋಗಲಿ ಬಿಡು’ ಎಂದು ಸಮಾಧಾನಿಸಿದೆ.

‘ನಿಜ. ಅವರಿಬ್ಬರೂ ನನ್ನ ಮುದ್ದಿನಿಂದ ಸಾಕಿಸಲಹಿದರು. ಆದರೆ, ಮಗನ ಮೇಲಿನ ಅಧಿಕಾರಕ್ಕಿಂತ ಗೌರವ ಹೆಚ್ಚಾಗಿತ್ತು. ಸಮಾಜ, ನಾನೆಷ್ಟು ಪರಾಕ್ರಮ ತೋರಿಸಿದರೂ ಸೂತಪುತ್ರನೆಂದು ಜಾತಿಹೇಳನೆ ಮಾಡಿ, ಪ್ರತಿದಿನ ನನ್ನ ಮನ ಘಾಸಿಮಾಡಿತು. ಇದನ್ನು ಸಹಿಸಲಾಗದೆ, ಅಮ್ಮ ರಾಧಾ ಒಂದು ದಿನ ಸಮಾಧಾನಿಸಲೆತ್ನಿಸಿದಳು, ‘ನೀನು ನನ್ನ ಮಗನಲ್ಲ, ನದಿಯಲ್ಲಿ ಸಿಕ್ಕಿದವನು. ಬಹುಶಃ ರಾಜಪುತ್ರನಿರಬೇಕು'. ಇದು ನನ್ನನ್ನು ಇನ್ನೂ ಕುಗ್ಗಿಸಿತು. ಒಂದು ಕಡೆ, ನನ್ನ ಪ್ರೀತಿಸುವ ಈ ಎರಡು ಜೀವಗಳು ನನ್ನ ಹೆತ್ತವರಲ್ಲ ಎನ್ನುವ ಸಂಕಟ, ಇನ್ನೊಂದೆಡೆ ಹೆತ್ತವರಿಗೆ ಬೇಡವಾದ ಅವಮಾನ. ಎಲ್ಲ ಅರಗಿಸಿಕೊಳ್ಳಲೆತ್ನಿಸಿದೆ. ಮನಸ್ಸು ಗಟ್ಟಿಮಾಡಿಕೊಂಡು ಸಲಹಿದವರ ಆಶೀರ್ವಾದದೊಂದಿಗೆ, ಶ್ರೇಷ್ಠ ಗುರು ದ್ರೋಣರಲ್ಲಿ ಬಿಲ್ವಿದ್ಯೆ ಕಲಿಯಲು ಹಸ್ತಿನಾಪುರಕ್ಕೆ ಬಂದೆ. ಆದರೆ ಸೂತಪುತ್ರನಿಗೆ ಬಿಲ್ವಿದ್ಯೆ ಹೇಳಿಕೊಡುವುದಿಲ್ಲವೆಂದು ಖಡಾಖಂಡಿತವಾಗಿ ನಿರಾಕರಿಸಿದರು. ಕಲಿಯುವ ಅಸೆ, ಆದರೆ ಕಲಿಯಲು ನನ್ನದಲ್ಲದ ಜಾತಿ ಅಡ್ಡಿ. ಯಾರನ್ನು ಹೊಣೆಯಾಗಿಸಲಿ ಇದಕೆ? ಬೇರೆ ದಾರಿಯಿಲ್ಲದೆ, ಬ್ರಾಹ್ಮಣನೆಂದು ಸುಳ್ಳುಹೇಳಿ ಪರಶುರಾಮರಲ್ಲಿ ಬಿಲ್ವಿದ್ಯೆ ಕಲಿತೆ. ದುಂಬಿ ಕಡಿದರೂ, ಗುರುಭಕ್ತಿಯಲ್ಲಿ ಸಹಿಸಿಕೊಂಡೆ. ಆದರೆ ಅದೇ ಮುಳುವಾಗಿ, ಪರಶುರಾಮ ಶಾಪಕೊಟ್ಟರು, ‘ನಿನ್ನ ಅಗತ್ಯದ ಸಂದರ್ಭದಲ್ಲಿ ಕಲಿತ ವಿದ್ಯೆಯೆಲ್ಲಾ ಮರೆತುಹೋಗಲಿ’. ಮತಿಕೆಟ್ಟು ಅಲೆಯುತ್ತಿದ್ದಾಗ, ಸಿಂಹವೆಂದು ತಿಳಿದು ಬ್ರಾಹ್ಮಣರೊಬ್ಬರ ಹಸು ಸಾಯಿಸಿದೆ. ಅದಕ್ಕೆ ಪುನಃ ಶಾಪ, ‘ನಿನ್ನ ವೈರಿಯೊಂದಿಗೆ ಯುದ್ಧ ಮಾಡುವಾಗ ನಿನ್ನ ರಥ ಹುದುಗಿಹೋಗಿ, ನಿಶಸ್ತ್ರನಾಗಿರುವಾಗ ಸಾಯಿ.’ ಇದೆಲ್ಲಾ ನಿನ್ನ ಕರ್ಮದ ಫಲವೆಂದರು.’ ಕಣ್ಣಂಚು ಒದ್ದೆಯಾಯಿತು ಅವನದ್ದು.

ನನ್ನಲ್ಲಿ ಉತ್ತರವಿರಲಿಲ್ಲ. ಇಂತಹ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಕರ್ಮದ ಮೊರೆ ಹೋಗುತ್ತೆವೇನೋ ಅನ್ನಿಸುತ್ತದೆ. ಅವನೇ ಮುಂದುವರಿಸಿದ, ‘ಮುಂದೆ ದ್ರೋಣರಲ್ಲಿ ಕುಂತೀಪುತ್ರರು, ಗಾಂಧಾರಿಪುತ್ರರು ಬಿಲ್ವಿದ್ಯೆ ಕಲಿಯುವಾಗ, ನಾನು ದೂರದಲ್ಲಿಯೆ ಗಮನಿಸಿ ಕಲಿಯುತಿದ್ದೆ. ನನ್ನ ಚಾಣಾಕ್ಷತನ ಕಂಡು ಕುಂತೀಪುತ್ರರು ಹೊಟ್ಟೆಕಿಚ್ಚುಪಟ್ಟರು. ಅರ್ಜುನ ನನ್ನೆದುರು ಸ್ಪರ್ಧೆಯಲ್ಲಿ ಸೋಲುವ ಭಯದಲ್ಲಿ ಜಾತಿನೆಪ ಮುಂದಿಟ್ಟು ಸ್ಪರ್ಧೆ ನಿರಾಕರಿಸಿ ಅಪಹಾಸ್ಯ ಮಾಡಿದರು. ಅಲ್ಲಿಂದಲೇ ನನ್ನ ಮತ್ತು ಕುಂತೀಪುತ್ರರ ನಡುವೆ ದ್ವೇಷ ಬೆಳೆಯಿತು. ಅವಮಾನದಿಂದ ಕುಸಿದು ಹೋಗುತ್ತಿದ್ದ ನನಗೆ ಬೆಳಕಿನ ಕಿರಣದಂತೆ ಕೈಹಿಡಿದು ಮೇಲಕ್ಕೆತ್ತಿದವ ಸುಯೋಧನ. ತಕ್ಷಣ ಅಂಗರಾಜ್ಯದ ಅಧಿಪತಿಯನ್ನಾಗಿ ಮಾಡಿ ನನ್ನ ಜಾತಿಹೀನತೆಯಿಂದ ಮುಕ್ತಿಮಾಡಿ ಕ್ಷತ್ರಿಯನನ್ನಾಗಿ ಮಾಡಿದ. ಅದೊಂದೇ ನನ್ನ ಬದುಕಿನ ಹೆಮ್ಮೆಪಡುವ ಕ್ಷಣ. ಅದಕ್ಕಾಗಿ ನಾನು ಸುಯೋಧನನಿಗೆ ಜೀವನವಿಡೀ ಋಣಿಯಾದೆ. ಪಟ್ಟಾಭಿಷೇಕಕ್ಕೆ ಬಂದ ನನ್ನಪ್ಪನನ್ನು ಜಾತಿಯ ಹೆಸರಲ್ಲಿ ಕುಂತೀಪುತ್ರರು ಅಪಹಾಸ್ಯ ಮಾಡಿದರು. ಇಲ್ಲಿಗೂ ನನ್ನ ಅಪಮಾನ ಮುಗಿಯಲಿಲ್ಲ. ದ್ರೌಪದಿಯ ಸ್ವಯಂವರದಲ್ಲಿ, ನಾನು ಗೆಲ್ಲುವೆನೆಂಬ ಭಯದಲ್ಲಿ ದ್ರೋಣ, ಭೀಷ್ಮ ಮೊದಲಾದ ಹಿರಿಯರು, ಸೂತಪುತ್ರನೆಂದು ನನಗೆ ಸ್ಪರ್ಧೆ ನಿರಾಕರಿಸಿದರು. ದ್ರೌಪದಿಯೂ ನನ್ನ ಅದೇ ಕಾರಣಕ್ಕೆ ಅವಮಾನಿಸಿದಳು. ಆದರವಳಿಗೆ ಗೊತ್ತಾಗಿತ್ತು, ನನ್ನ ಐವರು ಗಂಡಂದರಿಗಿಂತ ಇವನೇ ಬಲಶಾಲಿ. ಆದರೂ ನನ್ನ ನಿರಾಕರಿಸಿದಳು. ಜೀವನವಿಡೀ ನನ್ನ ಅವಮಾನಿಸಿದ ಇವರುಗಳ ಮೇಲೆ ಸೇಡು ತೀರಿಸಿಕೊಂಡಿದ್ದು ತಪ್ಪಾಯಿತೇ? ಹಾಗಂತ ನಾನು ಸಾಯುವಾಗ ಕೃಷ್ಣ ಹೇಳಿದ. ದ್ರೌಪದಿಯ ಸೀರೆ ಸೆಳೆದಾಗ ಅದರಲ್ಲಿ ನನ್ನ ಬೆರಳ ಗುರುತು ಇತ್ತೆಂದ. ಇದ್ದರೆ ತಪ್ಪೇನು? ನನ್ನ ಅವಮಾನಗಳಿಗೆ ಬೆಲೆಯಿಲ್ಲವೆ?’ ಎಂದು ನಿಟ್ಟುಸಿರುಬಿಟ್ಟ.
‘ಹೋಗಲಿ ಬಿಡು. ಮದುವೆ ನಮ್ಮ ಅದೃಷ್ಟ. ನಿನ್ನ ತುಂಬಾ ಪ್ರೀತಿಸುವ ಇಬ್ಬರು ಹೆಂಡತಿಯರಿದ್ದರಲ್ಲವೇ?’ ಎಂದು ಗಮನ ಅತ್ತ ಸೆಳೆದೆ.

‘ಹೌದು. ಮೊದಲನೆಯವಳು, ವೃಷಾಲಿ. ಸಾರಥಿ ಸತ್ಯಸೇನನ ಮಗಳು. ಪ್ರೀತಿಗಿಂತ ಹೆಚ್ಚಾಗಿ ಅವಳಿಗೆ ವಿನಮ್ರತೆ ಭಕ್ತಿಯಿತ್ತು. ಸಮಾನ ಮನಸ್ಕಳಾಗಲಿಲ್ಲ. ನನ್ನ ದೇಹದೊಂದಿಗೆ ಚಿತೆಯೇರುವಷ್ಟು ಸತಿಭಾವ ಅವಳಲ್ಲಿತ್ತು. ಎರಡನೆಯವಳು ಸುಪ್ರಿಯಾ. ಭಾನುಮತಿಯ ಸ್ನೇಹಿತೆ. ನನ್ನಲ್ಲಿ ಮೋಹಗೊಂಡು ಹಠಹಿಡಿದು ಅಭಿಮಾನಿಯಾಗಿ ವರಿಸಿದಳು. ಆದರೆ ಅಲ್ಲೂ ಸಾಂಗತ್ಯ ಸಿಗಲಿಲ್ಲ.’ ವಿಷಾದಿಸಿದ ರಾಧೇಯ.

‘ಮಕ್ಕಳಿದ್ದಾರಲ್ಲವೇ? ಕೇಳಿದೆ. ಅವರಾದರೂ ನಿನ್ನ ನೋವನ್ನೆಲ್ಲಾ ಮರೆಸಿರಬೇಕಲ್ಲವೇ?’ ಮನಸು ಹಗುರಗೊಳಿಸಲೆತ್ನಿಸಿದೆ.

‘ನಿಜ. ಒಂಭತ್ತು ಮಕ್ಕಳು ನನಗೆ. ಎಲ್ಲ ಕುರುಕ್ಷೇತ್ರ ಯುದ್ಧದಲ್ಲಿ ಸುಯೋಧನನಿಗೆ ಸಹಾಯ ಮಾಡಿದರು. ಹೌದು, ಮಕ್ಕಳು ಚೆನ್ನಾಗಿಯೇ ಇದ್ದರು. ಬದುಕಿ ಉಳಿದೊಬ್ಬ ಮಗ ವೃಷಕೇತು, ಹೊಸ ಚಿಕ್ಕಪ್ಪ ಅರ್ಜುನನ ಭಂಟನಾಗಿ ಬಿಟ್ಟ. ಕಾಲಕ್ಕೆ ತಕ್ಕಂತೆ ಕೋಲ. ಬೇಸರವಿಲ್ಲ. ಹೊಟ್ಟೆಪಾಡು.’ ಎಂದು ನಕ್ಕ.

‘ಇಂದ್ರ, ತನ್ನ ಮಗನ ರಕ್ಷಿಸಲು ನಿನ್ನ ಕರ್ಣ ಕುಂಡಲಿ ಕೇಳಲು ಬ್ರಾಹ್ಮಣ ವೇಷದಲ್ಲಿ ಬಂದಾಗ ನಿನಗೆನ್ನಿಸಿತು?’ ಕುತೂಹಲಿಯಾಗಿ ಕೇಳಿದೆ.

‘ಅವನ ಬಗ್ಗೆ ಹೆಮ್ಮೆ ಅನಿಸಿತು. ತನ್ನ ಮಗನ ಮೇಲೆ ಎಷ್ಟೊಂದು ಪ್ರೀತಿ. ಆ ಪ್ರೀತಿ ನನ್ನಪ್ಪನಿಗೆ ಇದ್ದಿದ್ದರೆ ನಾನು ಹೀಗಿರುತ್ತಿರಲಿಲ್ಲವೆನಿಸಿ ವಿಷಾದವಾಯಿತು. ಪ್ರೀತಿವ್ಯಕ್ತನಾಗಿ ಜಿಗುಪ್ಸೆಗೊಂಡು ಎಲ್ಲ ಕೊಟ್ಟುಬಿಟ್ಟೆ. ಜೀವನದಲ್ಲಿ ನಾನೇನಾದರೂ ಮಾಡಿದ್ದರೆ, ಅದು ನನಗೆಂದೂ ಸಿಗದ ಪ್ರೀತಿಯ ಹಂಬಲದಲ್ಲಿ ಮಾತ್ರ. ಆದರೆ, ಎಲ್ಲ ನನ್ನ ಖರೀದಿಸಿದರು, ಹೆತ್ತವಳೂ ಸೇರಿ’ ಅವನ ಮುಖ ಗಂಭೀರವಾಯಿತು.

‘ಕುಂತಿ ಇನ್ನೇನು ಮಾಡಿಯಾಳು? ಉಳಿದ ಮಕ್ಕಳನ್ನು ಕಾಪಾಡಬೇಕಿತ್ತಲ್ಲವೇ?’ ಸಮಜಾಯಿಸಿದೆ.
ಅಂದು ಕುಂತಿ ನನ್ನಲ್ಲಿ ತನ್ನ ಮಕ್ಕಳ ಜೀವಭಿಕ್ಷೆ ಕೇಳುವಾಗ, ನನ್ನ ಅಮ್ಮನಂತೆ ಕಾಣಲಿಲ್ಲ. ಅಪರಿಚಿತ ಭಿಕ್ಷುಕಳಂತೆ ಕಂಡಳು. ನನ್ನಿಂದ ಸಹಾಯ ಪಡೆದವರೆಲ್ಲ ಪ್ರೀತಿಯಿಂದ ಹರಸಿದರು. ಕುಂತಿ ಮಾತ್ರ ನನ್ನ ಪ್ರಾಣ ತೆಗೆದುಕೊಂಡು ಹೋದಳು. ಆದರೆ, ಹೆತ್ತ ಕುಂತಿ ನಿರ್ದಯವಾಗಿ ಪ್ರಾಣಕೇಳಿ ಹೋದಳು. ಅವಳ ಭೇಟಿಯಾದ ದಿನದಂದೇ, ನನಗೆ ಬದುಕುವ ಆಸೆ ಹೋಯಿತು.’ ಎಂದು ತಲೆ ತಗ್ಗಿಸಿದ.

‘ಆದರೆ ದುರ್ಯೋಧನ ನಿನ್ನ ಸ್ನೇಹದ ಹೆಸರಲ್ಲಿ ಗಾಳವಾಗಿ ಉಪಯೋಗಿಸಿದ ಎಂದೆನಿಸಲಿಲ್ಲವೇ? ಎಂದು ವಿಚಾರಿಸಿದೆ.
‘ಅವನ ಉದ್ದೇಶ ಏನೇ ಇರಲಿ, ನನಗದು ಮುಖ್ಯವಾಗಿರಲಿಲ್ಲ. ಅವನು ನನಗೆ ಗೌರವದ ಜೀವನ ಕೊಟ್ಟ. ನನಗೆ ಅಷ್ಟೇ ಸಾಕು. ಬರಿ ಅವಹೇಳನ, ಅವಮಾನಗಳನ್ನು ಜೀವನವಿಡೀ ಎದುರಿಸಿದ ನನಗೆ ಪ್ರೀತಿಯಿಂದ ನಡೆಸಿಕೊಳ್ಳುವವರು ಬೇಕಿತ್ತು. ಅದು ಸುಯೋಧನನಿಂದ ಸಿಕ್ಕಿತು. ಹಾಗಾಗಿ ವಿಮರ್ಶೆ ಅಗತ್ಯವಿಲ್ಲ. ಅವನು ಏನೇ ಮಾಡಿದರೂ ಬೆಂಬಲಿಸುವುದು ನನ್ನ ಋಣವಾಗಿತ್ತು.’ ಚುಟುಕಾಗಿ ಹೇಳಿದ.

‘ನಿನ್ನ ದುಃಖಕ್ಕೆಲ್ಲಾ ಪೂರ್ವಜನ್ಮದ ಕರ್ಮದ ಫಲವೆಂದು ಕೇಳಿದ್ದೆ. ಅದಕ್ಕೆ ನೀನಿದೆಲ್ಲಾ ಅನುಭವಿಸಬೇಕಾಯಿತೇನೋ. ಎಲ್ಲ ಮುಗಿದ ಮೇಲೆ ಈಗೇಕೆ ಈ ಚಡಪಡಿಕೆ?’ ಸಮಾಧಾನಿಸಲೆತ್ನಿಸಿದೆ.

‘ಕರ್ಮ? ಇಡೀ ಬದುಕನ್ನು ಕರ್ಮ ನಿರ್ಧರಿಸುವುದಾದರೆ ಭೂಮಿಯ ಮೇಲ್ಯಾಕೆ ವೃಥಾ ಕಾಲಹರಣ?. ತನಗೆ ಅರಿವಾಗದ ಸಂಗತಿಗಳಿಗೆ ಮನುಷ್ಯ ಕೊಟ್ಟ ಸುಂದರ ಹೆಸರೇ ಕರ್ಮ. ಇದೊಂದು ಸಮಜಾಯಿಷಿ ಅಷ್ಟೇ. ನನಗೆ ಬೇಸರವಿರುವುದು ‘ಕರ್ಣ ತ್ಯಾಗದ ದ್ಯೋತಕ’ವೆಂದು ಬಣ್ಣಿಸುವುದಕ್ಕೆ. ನನ್ನ ಮಾದರಿಯಾಗಿಸಿಕೊಂಡು ಜೀವನ ಹಾಳುಮಾಡಿಕೊಂಡವರೆಲ್ಲ ನನಗೆ ಶಾಪ ಹಾಕುತ್ತಿರಬಹುದೆನ್ನುವ ಭಯವಾಗುತ್ತದೆ. ನಾನು ಮಾಡಿದ್ದು ತ್ಯಾಗವಲ್ಲ. ಪ್ರೀತಿ ಪಡೆಯಲು ಮಾಡಿದ ವ್ಯರ್ಥ ಹೋರಾಟ. ಗೊತ್ತಾಗುವಾಗ ಜೀವನ ಮುಗಿದಿತ್ತು. ಕೊಡುತ್ತೇವೆಯೆನಿಸಿದರೆ, ಲಿಂಬೆಹಣ್ಣಿನಂತೆ ಹಿಂಡಿ ಹಿಂಡಿ ಸಿಪ್ಪೆಯಂತೆ ಬಿಸಾಡುತ್ತಾರೆ, ನಮ್ಮ ಕುರಿತು ಆಲೋಚಿಸುವುದಿಲ್ಲ. ಅದನ್ನರಿಯದೆ, ಹೆಮ್ಮೆಯಿಂದ ನನ್ನ ಮಾದರಿ ಮಾಡಿಕೊಂಡವರೆಲ್ಲಾ ಒಂಟಿಯಾಗಿಯೇ ಕೊನೆಯುಸಿರೆಳೆದರು. ಒಂದು ಧ್ಯೇಯಕ್ಕೆ ತ್ಯಾಗ ಮಾಡುವುದಕ್ಕೂ, ಜನರಿಗಾಗಿ ಜೀವನ ನಾಶಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಮೊದಲನೆಯದು ಎಂದಿಗೂ ಶ್ರೇಷ್ಠ. ಧ್ಯೇಯ, ನಿಮ್ಮ ವ್ಯಕ್ತಿತ್ವ ಪರಿಪೂರ್ಣಗೊಳಿಸುತ್ತದೆ. ಆದರೆ, ಎರಡನೆಯದು ನಾನು ಮಾಡಿದ್ದು. ಜೀವನದಲ್ಲಿ ಸರಿಯಾದ ಮಾರ್ಗದರ್ಶಕರಿಲ್ಲದಿದ್ದರೆ ಆಗುವ ಅವಘಡವದು. ಶ್ರೇಷ್ಠ ಬದುಕು ಕಟ್ಟಿಕೊಳ್ಳುವ ಶಕ್ತಿಯಿದ್ದರೂ, ಹತಾಶೆಯಿಂದ ಎಲ್ಲ ಕೈಚೆಲ್ಲಿದ ವ್ಯಕ್ತಿ ಈ ಕರ್ಣ. ನಾನೊಂದು ಕೇವಲ ತ್ಯಾಗದ ರೂಪಕವಾಗುವುದು ನನಗಿಷ್ಟವಿಲ್ಲ. ನನ್ನ ಜೀವನಕೊಟ್ಟ ತಪ್ಪು ಸಂದೇಶವದು. ಇದನ್ನು ಸರಿಪಡಿಸಬೇಕೆನ್ನುವ ಚಡಪಡಿಕೆಯಿಂದ ಪುನಾ ಬಂದೆ. ನಮಗರಿವಿಲ್ಲದ ಜನ್ಮಗಳ ಒಪ್ಪುತಪ್ಪುಗಳ ಲೆಕ್ಕಾಚಾರ ಮುಖ್ಯವಲ್ಲ. ಎದುರಿಗಿರುವ ವರ್ತಮಾನಜೀವನ ಪರಿಪೂರ್ಣವಾಗಿ ಬದುಕುವುದು ಮುಖ್ಯವೆಂದು ಹೇಳಬೇಕೆನಿಸಿತು. ನಮ್ಮ ಗುರುತು ನಾವೇ ಕಟ್ಟಿಕೊಳ್ಳಬೇಕು. ಉಳಿದವರು ಹೇರಿದ್ದು, ಅವರ ದೃಷ್ಟಿಕೋನದಿಂದ ಮತ್ತು ಅವರ ಅನುಭವದಿಂದ, ಅದನ್ನು ನಮ್ಮದಾಗಿಸಿಕೊಳ್ಳಬಾರದು. ತನ್ನ ಜೀವನದ ಲೇಖಕ ತಾನಾಗಬೇಕು.’ ಎನ್ನುತ್ತಲೇ ಕಣ್ಮರೆಯಾದ.
ಮುಳುಗುತ್ತಿರುವ ಸೂರ್ಯನ ನೋಡುತ್ತಾ, ನಾನಿನ್ನೂ ಕುಳಿತೇ ಇದ್ದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)