ಅಪ್ಪ ಕೊಡಿಸಿದ ಕೊಡೆ

7
male hadu

ಅಪ್ಪ ಕೊಡಿಸಿದ ಕೊಡೆ

Published:
Updated:
Deccan Herald

ಮಳೆಗಾಲದಲ್ಲಿ ಅಪ್ಪ ಮತ್ತು ಅವರು ಕೊಡಿಸಿದ ಕೊಡೆ ಸದಾ ನೆನಪಾಗುತ್ತದೆ. ನಾನಾಗ ಮೂರನೇ ತರಗತಿ ಓದುತ್ತಿದ್ದೆ. ಅಪ್ಪ ಬೆಳಿಗ್ಗೆಯೇ ಬೇಗ ನನ್ನನ್ನು ಎಬ್ಬಿಸಿ ಸ್ನಾನ ಮಾಡಿಸಿ, ಯೂನಿಫಾರಂ ಹಾಕಿ, ಬೂಟು ಹಾಕಿ ಶಾಲೆಗೆ ಕಳಿಸುತ್ತಿದ್ದರು. ಆಗ ಈಗಿನಂತೆ ಕಾರು, ಬೈಕ್‌ಗಳ ಹಾವಳಿ ಇರಲಿಲ್ಲ. ಸೈಕಲ್‌ ಬಳಸುವುದು ರೂಢಿಗತವಾಗಿತ್ತು.

ಅಂತೆಯೇ ಅಪ್ಪನ ಹತ್ತಿರ ಒಂದು ಸೈಕಲ್ ಇತ್ತು. ಆದರೆ, ನನಗೆ ಆ ಸೈಕಲ್ ಮೇಲೆ ಕೂಡಲು ಬರುತ್ತಿರಲಿಲ್ಲ. ಆಗ ಅಪ್ಪ ಸೈಕಲ್‌ನ ಮುಂದಿನ ಬಾರ್ ಮೇಲೆ ದಪ್ಪನೆಯ ಬಟ್ಟೆ ಕಟ್ಟಿ ಅದನ್ನು ಪುಟ್ಟ ಸೀಟ್ ಥರ ಮಾಡುತ್ತಿದ್ದರು. ಅದರ ಮೇಲೆ ನನ್ನ ಕೂರಿಸಿ ಸೈಕಲ್‌ನಲ್ಲೇ ಶಾಲೆಗೆ ಬಿಟ್ಟು ಬರುತ್ತಿದ್ದರು.

ಒಂದು ದಿನ ಅಪ್ಪ ನನ್ನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಬರಲಿಲ್ಲ. ಅವತ್ತು ಮಳೆ, ಗುಡುಗು–ಮಿಂಚು ಶುರುವಾಯಿತು. ಕೊನೆಗೆ ನಾನೇ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮಳೆಯಲ್ಲಿ ನೆನೆದುಕೊಂಡೇ ಮನೆಗೆ ಬಂದೆ. ಅವತ್ತು ಇಡೀ ರಾತ್ರಿ ನನಗೆ ಜ್ವರವೋ ಜ್ವರ. ಇದರಿಂದ ಭಯಭೀತರಾಗಿದ್ದ ಅಪ್ಪ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ನಂತರ ನನಗಾಗಿಯೇ ಕೆಂಪು, ಹಳದಿ, ಗುಲಾಬಿ ಬಣ್ಣಗಳಿರುವ ಕೊಡೆ ತಂದುಕೊಟ್ಟರು. ಅದು ಸಾಮಾನ್ಯವಾದ ಕೊಡೆ ಆಗಿರಲಿಲ್ಲ. ಅದು ತಲೆಗೆ ಹಾಕಿಕೊಳ್ಳುವ ಕೊಡೆಯಾಗಿತ್ತು. ಅದನ್ನು ಕೈಯಲ್ಲಿ ಹಿಡಿದುಕೊಳ್ಳುವ ಪ್ರಮೇಯವೇ ಇರಲಿಲ್ಲ. ಅದುವೇ ಅಪ್ಪ ನನಗೆ ತಂದುಕೊಟ್ಟ
ಮೊದಲ ಕಾಣಿಕೆ.

–ವಿದ್ಯಾಶ್ರೀ ಬೆಳ್ಳುಬ್ಬಿ, ವಿಜಯಪುರ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !