ಆನೆ ಮತ್ತು ದುಂಬಿ

ಭಾನುವಾರ, ಮಾರ್ಚ್ 24, 2019
31 °C

ಆನೆ ಮತ್ತು ದುಂಬಿ

Published:
Updated:
Prajavani

ಒಂದು ದಿನ ಒಬ್ಬ ಶಿಷ್ಯ ತನ್ನ ಗುರುಗಳ ಜೊತೆ ಕಾಡಿನ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದ. ಬಹಳ ದಿನಗಳಿಂದ ಅವನ ಮನಸ್ಸಿನಲ್ಲಿ ಪ್ರಶ್ನೆಯೊಂದು ಅಶಾಂತಿಯನ್ನುಂಟು ಮಾಡಿತ್ತು. ಗುರುಗಳಲ್ಲಿ ಆ ಪ್ರಶ್ನೆ ಕೇಳಲು ಸೂಕ್ತ ಸಮಯಾವಕಾಶ ದೊರೆಯದೇ ಅದರ ಬಗ್ಗೆಯೇ ಯೋಚಿಸುತ್ತಿದ್ದ. ಕಾಡಿನ ಈ ಪ್ರಶಾಂತ ವಾತಾವರಣದಲ್ಲಿ ಪ್ರಶ್ನೆ ಕೇಳಲು ಮನಸ್ಸು ಮಾಡಿದ. ‘ಗುರುವೇ, ಬಹಳ ಜನರ ಮನಸ್ಸು ಕಲಕಿದೆ, ಆದರೆ ಕೆಲವೇ ಕೆಲವು ಜನರ ಮನಸ್ಸು ಮಾತ್ರ ಶಾಂತವಾಗಿದೆ. ಮನಸ್ಸು ಸ್ಥಿರವಾಗಿರಬೇಕಾದರೆ ವ್ಯಕ್ತಿಯು ಏನು ಮಾಡಬೇಕು?’ ಎಂದು ಪ್ರಶ್ನಿಸಿದ.

ಗುರುಗಳು ಶಿಷ್ಯನತ್ತ ನೋಡಿ ನಗುತ್ತಾ, ‘ಮಗುವೇ, ಈ ಬಗ್ಗೆ ಒಂದು ಕಥೆ ಹೇಳುತ್ತೇನೆ ಕೇಳು. ನಿನ್ನ ಪ್ರಶ್ನೆಗೆ ಉತ್ತರ ಕಥೆಯಲ್ಲಿಯೇ ಇದೆ’ ಎಂದು ಕಥೆ ಹೇಳಲು ಪ್ರಾರಂಭಿಸಿದರು...

‘ಒಂದು ದಿನ ಸುಂದರ ಹಾಗೂ ರಮ್ಯವಾದ ಪ್ರಕೃತಿಯ ಮಡಿಲಲ್ಲಿ ಆನೆಯೊಂದು ಮರದ ಟೊಂಗೆಗಳಿಂದ ಎಲೆಗಳನ್ನು ತಿನ್ನುತ್ತಿತ್ತು. ಇದ್ದಕ್ಕಿದ್ದಂತೆ ದುಂಬಿಯೊಂದು ಅಲ್ಲಿಗೆ ಹಾರಿಬಂದು ಆನೆಯ ಕಿವಿಯ ಮೇಲೆ ಕುಳಿತಿತು. ದುಂಬಿಯು ಸುಮ್ಮನೆ ಕೂಡಲಿಲ್ಲ, ಬದಲಾಗಿ ಗುಂಯ್‌ ಎಂದು ಶಬ್ದ ಮಾಡತೊಡಗಿತು. ಆನೆ ಶಾಂತವಾಗಿ ಎಲೆಗಳನ್ನು ತಿನ್ನುವುದರಲ್ಲೇ ನಿರತವಾಯಿತು.

ಆನೆಯು ತನ್ನ ಶಬ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ದುಂಬಿಗೆ ಅಚ್ಚರಿಯನ್ನುಂಟು ಮಾಡಿತು. ದುಂಬಿ ಇನ್ನಷ್ಟು ಜೋರಾಗಿ ಶಬ್ದ ಮಾಡುತ್ತಾ ಆನೆಯ ಕಿವಿಯ ಸುತ್ತಲೂ ಹಾರಾಡತೊಡಗಿತು. ಆಗಲೂ ಆನೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಆಗ ದುಂಬಿಯು ಆನೆಯ ಕಿವಿಯ ಮೇಲೆ ಕುಳಿತು ಜೋರಾಗಿ ಕೂಗಿ ‘ನೀನೇನು ಕಿವುಡನಾ’ ಎಂದು ಕೇಳಿತು.

‘ಇಲ್ಲ’ ಎಂದು ಆನೆ ಉತ್ತರಿಸಿತು.

‘ಹಾಗಾದರೆ ನನ್ನ ಶಬ್ದದಿಂದ ನಿನಗೆ ಯಾವುದೇ ತೊಂದರೆಯಾಗಲಿಲ್ಲವೇ’ ದುಂಬಿ ಕೇಳಿತು.

‘ಹೌದು ನೀನೇಕೆ ನಿರಂತರವಾಗಿ ಶಬ್ದ ಮಾಡುತ್ತಲೇ ಇರುವೆ? ಕ್ಷಣಕಾಲ ಏಕೆ ವಿಶ್ರಾಂತಿ ಪಡೆಯುತ್ತಿಲ್ಲ?’ ಬಾಯಲ್ಲಿದ್ದ ಎಲೆಗಳನ್ನು ಜಗಿಯುತ್ತಲೇ ಕೇಳಿತು ಆನೆ.

‘ನಾನು ನೋಡುವ, ಕೇಳುವ ಮತ್ತು ಅನುಭವಿಸುವ ಎಲ್ಲವೂ ನನ್ನ ಗಮನವನ್ನು ಸೆಳೆಯುತ್ತವೆ. ನನ್ನ ಸುತ್ತಲಿನ ಎಲ್ಲಾ ಶಬ್ದಗಳು ಮತ್ತು ಚಲನೆಗಳು ನನ್ನ ನಡವಳಿಕೆಗಳನ್ನು ಪ್ರಭಾವಿಸುತ್ತಿವೆ. ಹಾಗಾಗಿ ನನ್ನ ದೇಹ ವಿಶ್ರಾಂತಿ ಪಡೆಯುತ್ತಿದ್ದರೂ ಕೂಡಾ ಮನಸ್ಸಿನಲ್ಲಿ ಏನಾದರೂ ಯೋಚನಾ ಲಹರಿ ಏಳುತ್ತಲೇ ಇರುತ್ತದೆ’ ಎಂದು ತಳಮಳವನ್ನು ಹೊರಹಾಕಿತು ದುಂಬಿ.

ಆಗಲೂ ಆನೆ ತಿನ್ನುತ್ತಲೇ ತನ್ನ ಮೊರದಗಲ ಕಿವಿಗಳನ್ನು ಅಲುಗಾಡಿಸುತ್ತಲೇ ಇತ್ತು. ‘ಯಾವಾಗಲೂ ನೀನು ಇಷ್ಟೊಂದು ಶಾಂತ
ವಾಗಿರುತ್ತಿಯಲ್ಲಾ, ನಿನ್ನ ರಹಸ್ಯವೇನು’ ಎಂದು ಕೇಳಿತು ದುಂಬಿ.

ಆನೆ ತಿನ್ನುವುದನ್ನು ನಿಲ್ಲಿಸಿ, ‘ನನ್ನ ಐದು ಇಂದ್ರಿಯಗಳು ನನ್ನ ಶಾಂತಿಗೆ ಭಂಗ ತರುವುದಿಲ್ಲ. ಏಕೆಂದರೆ ಆ ಎಲ್ಲಾ ಇಂದ್ರಿಯಗಳು ನನ್ನ ಹಿಡಿತದಲ್ಲಿವೆ. ಅವು ನನ್ನ ಆಜ್ಞೆಯನ್ನು ಪಾಲಿಸುತ್ತವೆ. ನನ್ನ ನಿರ್ಧಾರಗಳನ್ನು, ಆಲೋಚನೆಗಳನ್ನು ಅವು ನಿಯಂತ್ರಿಸುವುದಿಲ್ಲ ಮತ್ತು ನಾನು ಅವು ಹೇಳಿದಂತೆ ಕೇಳುವುದಿಲ್ಲ. ಅವುಗಳನ್ನು ನನ್ನ ಹಿಡಿತದಲ್ಲಿ ಇಟ್ಟುಕೊಂಡಿರುವೆ. ಅವು ನನ್ನ ನಿರ್ದೇಶನ ಕೇಳುತ್ತವೆಯೇ ಹೊರತು ನಾನು ಅವುಗಳ ನಿರ್ದೇಶನ ಕೇಳುವುದಿಲ್ಲ...’ ಎಂದು ಹೇಳುತ್ತಲೇ ಇತ್ತು. ಆದರೆ ದುಂಬಿಗೆ ಏನೂ ಅರ್ಥವಾಗಲಿಲ್ಲ.

ಇದನ್ನು ಗಮನಿಸಿದ ಆನೆ, ‘ಈಗ ನಾನು ತಿನ್ನುತ್ತಿದ್ದೇನೆ. ತಿನ್ನುವ ಕ್ರಿಯೆಯಲ್ಲಿ ನಾನು ಸಂಪೂರ್ಣ ಮುಳುಗಿದ್ದೇನೆ. ಇದರಿಂದ ನಾನು ಆಹಾರವನ್ನು ಆನಂದಿಸುತ್ತೇನೆ ಮತ್ತು ಉತ್ತಮವಾಗಿ ಜಗಿದು ತಿನ್ನುತ್ತೇನೆ. ಇದರಿಂದ ಆಹಾರವೂ ಸುಲಭವಾಗಿ ಜೀರ್ಣವಾಗುತ್ತದೆ. ನನ್ನ ಗಮನವನ್ನು
ಆಹಾರ ಸೇವಿಸುವುದರಲ್ಲಿ ಕೇಂದ್ರೀಕರಿಸಿದ್ದರಿಂದ ಶಾಂತವಾಗಿರಲು ಸಾಧ್ಯವಾಯಿತು’ ಎಂದಿತು.

ಗುರುಗಳು ಕತೆ ಹೇಳುವುದನ್ನು ನಿಲ್ಲಿಸಿ ತನ್ನ ಶಿಷ್ಯನೆಡೆಗೆ ನೋಡಿದರು. ಕತೆ ಕೇಳುವುದರಲ್ಲೇ ಮುಳುಗಿದ್ದ ಶಿಷ್ಯನಿಗೆ ಕತೆ ನಿಲ್ಲಿಸಿದುದು ತಿಳಿಯಲೇ ಇಲ್ಲ.

‘ಮಗುವೇ, ನಮ್ಮ ಇಂದ್ರಿಯಗಳ ಕೆಲಸ ಸುತ್ತಲ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ನಮಗೆ ತಿಳಿಸುವುದಷ್ಟೇ. ಅವುಗಳ ಆಧಾರದ ಮೇಲೆ ನಿರ್ಧಾರಗಳು ನಮ್ಮದಾಗಬೇಕೇ ವಿನಾ ಇಂದ್ರಿಯಗಳ ಆಮಿಷಗಳಿಗೆ ಬಲಿಯಾಗಬಾರದು. ಅವುಗಳ ಹಿಂದೆ ಹೋಗದಿದ್ದರೆ ಮನಸ್ಸು ಖಂಡಿತವಾಗಿ ಶಾಂತವಾಗುತ್ತದೆ ಮತ್ತು ಜೀವನದಲ್ಲಿ ಉತ್ಸಾಹವನ್ನು ಹೊಂದುತ್ತೇವೆ’ ಎಂದು ಗುರುಗಳು ಮಾತು ಮುಗಿಸಿದರು.

‘ಹೌದು ಗುರುಗಳೆ, ನಿಮ್ಮ ಮಾತಿನಲ್ಲಿ ಅರ್ಥವಿದೆ. ಹೆಚ್ಚಿನ ಜನರು ಇಂದ್ರಿಯಗಳ ಮಾತುಗಳನ್ನು ಕೇಳುತ್ತಾರೆಯೇ ವಿನಾ ಮನದ ಮಾತನ್ನು ಕೇಳುವುದಿಲ್ಲ. ಹಾಗಾಗಿ ಯಾವಾಗಲೂ ಯೋಚನಾಮಗ್ನರಾಗಿರುತ್ತಾರೆ. ದುಂಬಿಯಂತೆ ಅನಗತ್ಯ ಶಬ್ದ ಮಾಡುತ್ತಲೇ ಇರುತ್ತಾರೆ. ನಾವು ದುಂಬಿಯಂತಾಗದೇ ಆನೆಯಂತಾಗಬೇಕು. ಯಾವ ಕೆಲಸ ಮಾಡುವುದಿದ್ದರೂ ಅದನ್ನು ಆಸ್ವಾದಿಸಬೇಕು. ಓದುವುದಿರಲಿ, ಬರೆಯುವುದಿರಲಿ ಅಥವಾ ಮನೆಯವರು ಹೇಳಿದ ಚಿಕ್ಕಪುಟ್ಟ ಕೆಲಸಗಳಿರಲಿ. ನಾವು ಅದನ್ನು ಪ್ರೀತಿಯಿಂದ ಮಾಡಿದಾಗ ಕೆಲಸದ ಅನುಭವ ನಮಗಾಗುತ್ತದೆ ಮತ್ತು ಅನುಭವದ ಮೂಲಕ ಜ್ಞಾನ ದೊರೆಯುತ್ತದೆ. ಇದರಿಂದ ತುಂಬಾ ಸರಳವಾಗಿ ಮನಸ್ಸನ್ನು ಶಾಂತಗೊಳಿಸಿಕೊಳ್ಳಬಹುದು. ನನ್ನ ಮನದಲ್ಲಿ ಬಹುದಿನಗಳಿಂದ ಉತ್ತರ ಸಿಗದಿದ್ದ ಪ್ರಶ್ನೆಗೆ ಇಂದು ಉತ್ತರ ದೊರೆತು ಮನಸ್ಸು ನಿರಾಳವಾಯಿತು’ ಎಂದ ಶಿಷ್ಯ.

ನಿಮಗೂ ಹಾಗೆ ಅನಿಸಿತೇ? ನೀವು ಆನೆಯಾಗುವಿರೋ? ದುಂಬಿಯಾಗುವಿರೋ? ನಿರ್ಧಾರ ನಿಮ್ಮದು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !