ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟರ್‌ಮೆಲನ್

Last Updated 5 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಭಾಗ 1

ಮತ್ತದೇಗೆಜ್ಜೆ ಸಪ್ಪಳ!ಯಾರೋ ಓಡಾಡುತ್ತಿದ್ದಾರೆ... ಒಳಗೋ ಹೊರಗೋ?

ಥಟ್ಟನೆ ಎದ್ದು ಕೂತ ಲಕ್ಷ್ಮಿ ಅತ್ತಿತ್ತ ನೋಡುತ್ತಿದ್ದಾಗ – ಅದೇ ಕೋಣೆಯಲ್ಲಿ ಮಲಗಿದ್ದ ರಿಚರ್ಡ್ ವಿಲವಿಲ ಒದ್ದಾಡುತ್ತಿದ್ದ.

ಲಕ್ಷ್ಮಿಯ ಭಯ ದುಪ್ಪಟ್ಟುಗೊಂಡು ಇದ್ಯಾರು? ಕಪ್ಪಗೆ ಗುಂಡುಕಲ್ಲಿನ ಹಾಗೆ ಆಕೃತಿಯೊಂದು ನೆಲದ ಮೇಲೆ ಬಿದ್ದು ಒದ್ದಾಡುತ್ತಿದೆಯಲ್ಲ! ತಾನ್ಯಾಕೆ ಇಲ್ಲಿದ್ದೇನೆ? ಯಾವ ಸ್ಥಳವಿದು? ಒಂದೂ ಅರ್ಥವಾಗದೆ ಲಕ್ಷ್ಮಿ ಎದ್ದು ನಿಂತಾಗ–

ರಿಚರ್ಡ್ ‘ಲೀವ್ ಮಿ... ಲೀವ್ ಮಿ ಪ್ಲೀಸ್... ಡೋಂಟ್ ಕಿಲ್ ಮಿ...’ ಎಂದು ಬಡಬಡಿಸುತ್ತಾ ಎದ್ದು ಕೂತು ಅತ್ತಿತ್ತ ನೋಡಿದ. ತನ್ನ ಬಲಕ್ಕೆ ನಿಂತಿದ್ದ ಲಕ್ಷ್ಮಿಯ ನೋಡಿ ತನ್ನ ಊರಗಲದ ಹೊಳ್ಳೆಯಿಂದ ಉಸಿರನ್ನು ಹೊರ ತಳ್ಳಿದ.

ರಿಚರ್ಡ್‌ನ ಮುಖವನ್ನು ನೋಡಿದ್ದೇ ಲಕ್ಷ್ಮಿಗೆ ಎಲ್ಲವೂ ನೆನಪಾದವು! ಮಾತು ಶುರುವಾದ ನಂತರವಂತೂ ಎಲ್ಲವೂ ಸ್ಪಷ್ಟವಾದವು!

ಕಿವಿಗೆ ಬೀಳುತ್ತಿರುವ ಇಂಗ್ಲಿಷ್ ಶಬ್ದಗಳನ್ನು ಜೀರ್ಣಿಸಿಕೊಳ್ಳಲು ಲಕ್ಷ್ಮಿಗೆ ತುಸು ಸಮಯ ಬೇಕಾಯಿತು. ಅದರಲ್ಲೂ ರಿಚರ್ಡ್‌ನ ಓಘಕ್ಕೆ ಒಗ್ಗಿಕೊಳ್ಳುವುದು ತ್ರಾಸವೇ ಸರಿ, ಆಫ್ರಿಕನ್ನರ ಇಂಗ್ಲಿಷ್ ಉಚ್ಚರಣೆಯನ್ನು ಅರ್ಥೈಸಿಕೊಳ್ಳುವುದು ತುಸು ಕಷ್ಟ ಮಾರಾಯ್ತಿ ಎನ್ನುತ್ತಾ ಲಕ್ಷ್ಮಿ ಕೂತು ಕಣ್ಣರಳಿಸಿ ರಿಚರ್ಡ್‌ನ ಮಾತುಗಳ ಕೇಳಿಸಿಕೊಳ್ಳತೊಡಗಿದಾಗ-

‘... ಬಾವಿಯೊಳಗೆ ನಾನು ಬಿದ್ದು ಒದ್ದಾಡುತ್ತಿದ್ದೇನೆ... ಜನ ನನ್ನನ್ನು ನೀರೊಳಗೆ ಅದುಮುತ್ತಿದ್ದಾರೆ, ಅವರಲ್ಲಿ ನೀನೂ ಇದ್ದೆ... ನನ್ನ ಕತ್ತು ಹಿಸುಕುತ್ತಿದ್ದೆ, ಕಳ್ಳ ಕಳ್ಳ ಎನ್ನುತ್ತಾ ನೀವುಗಳು ನನ್ನನ್ನು ನೀರೊಳಗೆ ಅದುಮುತ್ತಿದ್ದೀರಿ... ನಾನು ಉಸಿರನ್ನು ಎಳೆಯುತ್ತಾ ಮುಳುಗಿ ಏಳುತ್ತಲಿದ್ದೆ... ಶಿಟ್... ಅದೆಂಥ ಕೆಟ್ಟ ಕನಸು ಗೊತ್ತಾ!’ ಎನ್ನುತ್ತಿದ್ದ ರಿಚರ್ಡ್.

ಲಕ್ಷ್ಮಿ ಮೌನದಿಂದ ಆತ ಮಾತನಾಡುವುದನ್ನೇ ನೋಡುತ್ತಿದ್ದಾಗ – ‘ಇಂಡಿಯನ್ಸ್ ನೀವೂ ಕೂಡ ರೇಸಿಸ್ಟಸ್... ಕಪ್ಪಗಿರುವವರೆಲ್ಲರೂ ಕ್ರಿಮಿನಲ್ಸ್, ಕಳ್ಳರು, ಖದೀಮರು ಅನ್ನೊ ವಿಕ್ಟೋರಿಯನ್ ಯುಗದ ಯುರೋಪಿಯನ್ ಮನಸ್ಥಿತಿಯಲ್ಲೇ ಇನ್ನೂ ಇದ್ದೀರಿ...! ನಮ್ಮ ಆಫ್ರಿಕನ್ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಅದೆಷ್ಟು ಕಷ್ಟಪಡ್ತಿದಾರೆ ಗೊತ್ತಾ? ತರಕಾರಿ ಖರೀದಿಸಲು ಹೋದ ನನ್ನ ಗೆಳತಿಯನ್ನು ನಿಮ್ಮ ಜನ ನಾಯಿಗೆ ಹೊಡೆದಂಗೆ ಹೊಡೆದರು. ಹೋದವಾರ... ಆಕೆ ಮಾಡಿದ ತಪ್ಪು ಏನು ಗೊತ್ತಾ? ಆಕೆ ಕನ್‍ಫ್ಯೂಸ್ ಆಗಿ ತನ್ನ ಸ್ಕೂಟರ್‌ನಂತೆಯೇ ಕಂಡ ಮತ್ತೊಂದು ಸ್ಕೂಟರ್‌ಗೆ ಕೀ ಹಾಕಿದ್ದು... ಆಕೆಗೆ ವಿವರಿಸಲೂ ಅವಕಾಶ ನೀಡದೆ ‘ಕಳ್ಳಿ’ ಅಂತ ಅಲ್ಲಿದ್ದವರೆಲ್ಲ ಹೊಡೆದು, ತುಳಿದು ಪೊಲೀಸ್‍ಗೆ ಫೋನ್ ಮಾಡಿ ರಾದ್ಧಾಂತ ಎಬ್ಬಿಸಿದರು... ನ್ಯೂಸ್ ಪೇಪರ್‌ಗಳಲ್ಲಿ ಓದಿರಬೇಕಲ್ಲ ನೀನು...’

ಆ ಘಳಿಗೆ ಆ ಕರಿ ರಿಚರ್ಡ್‌ನನ್ನು ಬಿಗಿಯಾಗಿ ಅಪ್ಪಿಕೊಂಡು ಅವನ ದೇಹವನ್ನೆಲ್ಲ ಮುದ್ದಾಡಬೇಕೆನಿಸಿತು ಲಕ್ಷ್ಮಿಗೆ. ನಿನ್ನ ನೋವನ್ನೆಲ್ಲ ಕೊಡು, ನಿನ್ನ ಪೂರ್ವಿಕರ ನೋವನ್ನೂ ನುಂಗಿ ನಿನ್ನ ದೇಹವಿಡೀ ನಾನು ಅಮೃತವನ್ನು ಸುರಿಸುತ್ತೇನೆ... ಬಾ ರಿಚರ್ಡ್ ಬಾ...

‘ಲ್ಯಾಕ್ಸ್ಮಿ... ನನಗೆ ಆಗಾಗ ಈ ಮನೆಯೊಳಗೆ ನೀರು ತುಳುಕಾಡುವ ಸದ್ದು ಕೇಳಿಸುತ್ತದೆ. ಇದು ದೆವ್ವದ ಮನೆ ಅಂತ ಜನ ಮಾತಾಡಿಕೊಳ್ಳುತ್ತಾರೆ... ಈ ಮನೆಗೆ ಬಂದವರೆಲ್ಲ ಇದರೊಳಗೇ ಸತ್ತು ಹೋದರಂತೆ... ಸುಮಾರು ತಿಂಗಳು ಈ ಮನೆ ಖಾಲೀನೆ ಇದ್ದಿದೆ... ನಾ ಬಂದಾಗ ಇದು ಕಸದ ಗುಂಡಿಯಾಗಿತ್ತು... ಹುಡುಕಿ ಹುಡುಕಿ ಮನೆ ಸಿಗದೆ ಇದನ್ನೇ ಆರಿಸಿಕೊಂಡೆ... ಆರಂಭದ ದಿನಗಳಲ್ಲಿ ಚೂರು ಭಯವಾಗಿದ್ದು ನಿಜ... ಸುಮಾರು ದಿನ ಈ ಮನೆಯ ಕತ್ತಲುಗಳನ್ನು ಒಬ್ಬಂಟಿಯಾಗಿಯೇ ಕಳೆದಿದ್ದೇನೆ... ಆಗ ಕೇಳಿಸಲು ಶುರುವಾದ ಆ ಸದ್ದು ಇವತ್ತಿಗೂ ನಿಂತಿಲ್ಲ... ಯಾರ ಬಳಿಯೂ ನಾನು ಈ ವಿಷಯವ ಹೇಳಿಲ್ಲ, ನಿನ್ನೊಬ್ಬಳ ಬಳಿಯೇ ಹೇಳುತ್ತಿರುವುದು. ನಾ ಏನನ್ನು ಹೇಳಿದರೂ ನೀ ನನ್ನ ಹುಡುಕಿಕೊಂಡು ಬರುತ್ತೀ ಎಂಬುದು ಗೊತ್ತಿದೆ...’

‘ನನಗೂ ಒಮ್ಮೊಮ್ಮೆ ಏನೇನೋ ಸದ್ದು ಕೇಳಿಸುತ್ತದೆ, ರಿಚರ್ಡ್... ಗೆಜ್ಜೆ ಸಪ್ಪಳ ಸುಮಾರ್ ಸರ್ತಿ ಕೇಳಿಸಿದೆ...’ ಲಕ್ಷ್ಮಿ ಹೇಳಿದಾಗ ರಿಚರ್ಡ್ ಅಚ್ಚರಿಯಿಂದ ನೋಡಿದ. ಆತ ಮುಂದುವರಿಸಿದ:

‘ಬಾವಿ ಕನಸು ಅಂತ ಈಗ ಹೇಳಿದ್ನಲ್ಲ, ಅದೇ ತರಹದ ಕನಸು ತಿಂಗಳಿಗೊಂದು ಬೀಳುತ್ತಲೇ ಇರುತ್ತೆ... ಬಾವಿಯೊಳಗಿನ ಗುಂಯ್ ಸದ್ದು ನನ್ನ ಕಿವಿಯೊಳಗೆ ಧ್ವನಿಸತೊಡಗಿ ಥಟ್ಟನೆ ಎದ್ದು ಕೂರುತ್ತೇನೆ... ನೀರಿನ ಮೇಲೆ ಕೂತಂತೆ ಭಾಸವಾಗಿ ಹೆದರಿದ ಗಳಿಗೆಗಳೂ ಇವೆ! ಯಾಕೀಗೆ ಅಂತ ಯೋಚಿಸುತ್ತಾ ಹೋದೆ... ಆ ಯೋಚನೆಗಳನ್ನು ಕಾಗದಗಳಲ್ಲಿ ಚಿತ್ರಗಳಾಗಿ ಬಿಡಿಸುತ್ತಾ ಹೋದೆ... ಒಂದು ದಿನ ಅದಕ್ಕೆ ಉತ್ತರ ಸಿಕ್ಕಿತು...’ ಎಂದು ಹೇಳಿ ಲಕ್ಷ್ಮಿಯ ನೋಡಿದ.

ಆತ ನಿರೀಕ್ಷಿಸಿದ್ದ ಆಸಕ್ತಿ ಲಕ್ಷ್ಮಿಯ ಕಣ್ಣುಗಳಲ್ಲಿ ಕಾಣಲಿಲ್ಲ. ಲಕ್ಷ್ಮಿ ನಕ್ಕು ‘ನಿನ್ನ ಬಾಲ್ಯದ ಮೈನಿಂಗ್ ಅನುಭವಗಳು... ಉದ್ದದ ಮಣ್ಣಿನ ಗುಹೆಗಳೊಳಗೆ ನಿನ್ನ ಅಜ್ಜ ಮತ್ತು ನಾಲ್ಕು ಮಂದಿ ಸಿಕ್ಕಿಕೊಂಡು ಸತ್ತುಹೋದ ನೆನಪು ಎಲ್ಲವೂ ನಿನ್ನ ಸ್ಮೃತಿಯೊಳಗೆ ಕೂತು ಈಗ ಕನಸಾಗಿ ನಿನ್ನ ಮುಂದೆ ಬಂದು ಕಾಡುತ್ತಿದೆ, ಆಮ್ ಐ ರೈಟ್!?’ ಎಂದಾಗ ರಿಚರ್ಡ್ ಬಿಟ್ಟ ಕಣ್ಣನ್ನು ಬಿಟ್ಟಂತೆಯೇ ಇದ್ದ.

‘ನೀನು ಸೋಷಿಯಾಲಜಿ ಸ್ಕಾಲರ್ ಅಲ್ಲ, ಸೈಕಾಲಜಿ ಸ್ಕಾಲರ್!’ ಎನ್ನುತ್ತಾ ಜೋರಾಗಿ ನಕ್ಕು ‘ನನ್ನ ಬದುಕಿನ ವಿವರಗಳ ನಿನಗೆ ಹೇಳಬಾರದಿತ್ತು... ಕಳ್ಳಿ... ಎಲ್ಲವನ್ನೂ ಕಲೋನಿಯಲ್ ನೆಲೆಯಲ್ಲೇ ಗ್ರಹಿಸುತ್ತೀ... ಇಂಗ್ಲಿಷರು ಕಲಿಸಿಕೊಟ್ಟ ವಿಧಾನಗಳ ಮೂಲಕವೇ ನಮ್ಮ ಕನಸುಗಳನ್ನೂ ನೋಡುತ್ತಿ... ನಾನೂ ನಿನ್ನ ಹಾಗೇ ಇದ್ದೆ ಮುಂಚೆ... ಈಗೀಗ ನನ್ನ ಮುತ್ತಜ್ಜಿ ಹೇಳುತ್ತಿದ್ದ ವಿವರಗಳು ಕಣ್ಮುಂದೆ ಬರುತ್ತಿವೆ... ಈ ಜಾಗಕ್ಕೂ ನೀರಿಗೂ ಏನೋ ಸಂಬಂಧವಿದೆ ಅನ್ನಿಸುತ್ತಿದೆ. ಇಲ್ಲಿ ಬೋರ್ ಹಾಕಿದರೆ ನೀರು ದಂಡಿಯಾಗಿ ಸಿಗಬಹುದೇನೊ...’

‘ನಿನ್ನಾ ಹೊಟ್ಟೆಬಾಕ ಓನರ್‌ಗೆ ಹೇಳು... ಬೋರ್ ಕೊರೆದು ನಾಲ್ಕೈದು ನೀರಿನ ಟ್ಯಾಂಕರ್ ಗಾಡಿಗಳ ಹಾಕಿ ದುಡ್ಡು ದೋಚಿಕೊಳ್ತಾನೆ’ ಲಕ್ಷ್ಮಿಯ ತುಟಿಗಳಲ್ಲಿ ಲಾಸ್ಯವಾಡಿದ ನಗುವನ್ನು ಹಾಗೇ ಒಂದೇ ಏಟಿಗೆ ನುಂಗಿಕೊಳ್ಳಬೇಕೆನಿಸಿತು ರಿಚರ್ಡ್‌ಗೆ.

ಲಕ್ಷ್ಮಿ ರಿಚರ್ಡ್‌ನ ಎದೆಯನ್ನೇ ನೋಡುತ್ತಾ ‘ಸರಿ, ಅವೆಲ್ಲ ಬಿಡು, ಹತ್ತಿರ ಬಾ... ನಿನ್ನ ಬಿಗಿದಪ್ಪಿಕೊಳ್ಳಬೇಕು... ನಿನ್ನೊಳಗಿನ ನೋವನ್ನೆಲ್ಲಾ ನಾನು ಹೀರಿಕೊಳ್ಳಬೇಕು... ಮೊದಲ ಸರ್ತಿ ನಿನ್ನನ್ನು ಎಂ.ಜಿ. ರಸ್ತೆಯಲ್ಲಿ ನೋಡಿದ ಘಳಿಗೆಯೇ ತೀರ್ಮಾನಿಸಿದೆ: ನಿನ್ನೊಂದಿಗೆ ಅಸಂಖ್ಯ ರಾತ್ರಿಗಳನ್ನು ಕಳೆಯಬೇಕೆಂದು...’

ರಿಚರ್ಡ್‌ನ ಕಣ್ಣುಗಳು ತಾವರೆಯಂತೆ ಅರಳಿದವು. ಲಕ್ಷ್ಮಿಗೆ ಕೋಪ ನೆತ್ತಿಗೇರಿ ‘ನಿನ್ ಕಣ್ಣುಗಳ ಕಿತ್ತು ಎಸೆದುಬಿಡ್ತೇನೆ, ಅಷ್ಟಗಲ ಮಾಡಬೇಡ್ವೊ...’ ಎಂದಾಗ ರಿಚರ್ಡ್ ಲಕ್ಷ್ಮಿಯ ಸನಿಹಕ್ಕೆ ಹೋಗಿ- ಬಾಗಿ ಮುತ್ತಿಟ್ಟು ‘ಈ ಆಟ ಸಾಕು ಲಕ್ಷ್ಮಿ, ಬೋರ್ ಹೊಡೀತಿದೆ... ಸುಮಾರ್ ದಿನಗಳಿಂದ ಇದೇ ಆಟ ಆಡ್ತಿದ್ದಿವಿ... ಹಿಂಗೆ ಆಡೋದರ ಮೂಲಕ ನಾನೇನು ಗಂಡಾಗಲ್ಲ, ನೀನೇನು ಹೆಣ್ಣಾಗಲ್ಲ! ನೀನು ಅದೆಷ್ಟು ಹೆಣ್ಣಾಗಲಿಕ್ಕೆ ಬಯಸಿದರೂ ನೀನು ಮುಟ್ಟಾಗಲಿಕ್ಕೆ ಸಾಧ್ಯವಾ!?’ ಎನ್ನುತ್ತಾ ಜೋರಾಗಿ ನಕ್ಕಳು ಜಾಂಬಿಯಾ ದೇಶದ ಬಂದ್ಯಾ ಚೆಲಾ ಚೆಂಗ್ಯು ರಿಚರ್ಡ್.

ಅವಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾ ಮಾಗಡಿಯ ಲಕ್ಷ್ಮಿಪತಿ ‘ಈಗ ಹೊಸ ಆಟ ಆಡೋಣ್ವಾ! ನೋಡುವ ಯಾರು ಸೋಲುತ್ತಾರೆಂದು...
ಎರಡು ಆಟಗಳಲ್ಲೂ ನೀನೇ ಸೋತಿದ್ದಿ... ಮೂರನೆಯ ಆಟದಲ್ಲಾದರೂ ಗೆಲ್ಲುವಿಯೇನೊ ಪ್ರಯತ್ನ ಮಾಡು’ ಎಂದ.

ಬಂದ್ಯಾ ಅವನ ಪಕ್ಕೆಗಳೇ ಮುರಿದು ಹೋಗುವಷ್ಟು ಗಟ್ಟಿಯಾಗಿ ಅಪ್ಪಿ ‘ಏನ್ ಆಟ ಅಂತ ಹೇಳು ಗುರು ಮೊದ್ಲು’ ಎಂದಳು.

ಲಕ್ಷ್ಮಿಪತಿ ಚಣ ಕಣ್ಣ ಮುಚ್ಚಿ ಬಂದ್ಯಾಳ ದೇಹದ ವಾಸನೆಯನ್ನು ಹೀರಿಕೊಂಡು ‘ಅಪ್ಪಿಕೊಂಡೇ ಇರುವ, ಯಾರು ಸಾಕಾಯ್ತು ಅಂತ ಬಿಡಿಸಿಕೊಳ್ಳುತ್ತಾರೊ ಅವರೇ ಸೋತಂತೆ, ಓಕೆನಾ?’ ಉಲಿದ.

ಹೆಣ್ಣೂರ್ ಕ್ರಾಸಿನ ಕಾಲೇಜೊಂದರಲ್ಲಿ ಬಯೊಟೆಕ್ನಾಲಜಿ ಡಿಗ್ರಿ ಮಾಡುತ್ತಿದ್ದ ಬಂದ್ಯಾ ಚೆಲಾ ಚೆಂಗ್ಯು ರಿಚರ್ಡ್ ‘ಯೆಸ್ಸ್ ...’ ಎಂದಳು.

ಪೈಪೋಟಿ ಎಂಬಂತೆ ಇಬ್ಬರೂ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಳ್ಳುತ್ತಾ ಹೋದರು. ಕತ್ತಲು ಹೊರಗೆ ಏರುತ್ತಲಿತ್ತು. ಚರ್ಮಗಳು ಬಿಸಿಯಾಗುತ್ತಾ ತಣ್ಣಗಾಗುತ್ತಾ ಹೋದವು.

ಬಾಗಿಲು ಮುಚ್ಚಿಯೇ ಇತ್ತು.

ರಾತ್ರಿ ಹಗಲುಗಳು ಸರಿದು ಒಂದು ಇಳಿಸಂಜೆ ಆ ಮನೆಯ ಓನರ್ ಬಾಗಿಲು ಬಡಿದ, ಬಡಿಯುತ್ತಲೇ ಇದ್ದ. ಸುಸ್ತಾಗಿ ‘ಮತ್ತೆ ಶುರುವಾಯ್ತಾ ತಲೆ ನೋವು’ ಎಂದುಕೊಂಡು ಹೊರಟ. ಇದಾಗಿ ಒಂದು ವಾರಕ್ಕೆ ಅವನ ಮನೆ ಮುಂದೆ ಪೊಲೀಸ್ ವ್ಯಾನ್ ಬಂದು ನಿಂತಿತು.

ಭಾಗ 2

‘ಬೀದಿಗೊಬ್ರು ಸಿವಿಲ್ ಇಂಜಿನಿಯರ್ ಇದ್ದಾರೆ ಕಣ್ರಿ, ಏನೋ ದೊಡ್ ಆಫೀಸರ್ ಥರ ಮಾತಾಡ್ತೀರಲ್ಲ! ಕೇಳಿದ್ದಕ್ಕೆ ಉತ್ತರ ಹೇಳ್ರಿ... ಎಫ್ಐಆರ್ ಹಾಕಿ ವಿಚಾರಿಸಿ ಅಂತ ಆ ಹುಡುಗನ ಮನೇರು ಹೇಳ್ತಾ ಇದ್ದಾರೆ... ಹಾಕ್ಲಾ?’

‘ಏನ್ ಹೇಳಬೇಕು ಸರ್, ನಾನು?’

‘ಎಷ್ಟು ಸರ್ತಿ ಹೇಳಬೇಕ್ರಿ ನಿಮಗೆ? ನಿಮ್ ಮನೇಲಿ ಬಾಡಿಗೆಗೆ ಇದ್ದ ನೀಗ್ರೊ ಹುಡುಗಿ ಜೊತೆ ಲಕ್ಷ್ಮಿಪತಿ ಅನ್ನೊ ಹುಡುಗ ಬಂದಿದ್ದಕ್ಕೆ ಸಾಕ್ಷಿ ಇದೆ... ನೆನಪಿರ್ಲಿ’

‘ಇದೊಳ್ಳೆ ಕಥೆ ಆಯ್ತಲ್ಲ ಸರ್, ಆ ಹುಡುಗ ಕಾಣೆಯಾಗಿರೋದಕ್ಕೆ ನಾ ಹೇಗ್ ಸರ್ ಜವಾಬ್ದಾರಿ? ಆ ನೀಗ್ರೊ ಹುಡುಗಿ ನಡತೆ ಸರಿಯಿರಲಿಲ್ಲ ಅಂತ ಮನೆ ಖಾಲಿ ಮಾಡ್ಲಿಕ್ಕೆ ಹೇಳಿದ್ದೆ. ಖಾಲಿ ಮಾಡಿಕೊಂಡು ಎಲ್ಲೋದ್ಳೊ ಗೊತ್ತಿಲ್ಲ... ನೀವು ಪೊಲೀಸ್, ಹುಡುಕ್ರಿ... ಸಂಬಂಧ ಇಲ್ಲದೆ ನನ್ ವಿಚಾರಣೆ ನಡಿಸಿದ್ರೆ ಹೇಗೆ ಸರ್...’

‘ರ‍್ರೀ ಸ್ವಾಮಿ, ಸಂಬಂಧ ಇದೆ ರ‍್ರೀ... ನಿಮ್ಮ ಮನೆ ಜಾಗದಲ್ಲಿ ಮುಂಚೆ ಏನಿತ್ತು? ಅದರೊಳಗೆ ಯಾರ‍್ಯಾರು ಬಿದ್ದು ಸತ್ತೋದ್ರು ಅನ್ನೋ ವಿವರ ನೀವು ಮರೆತಿರಬಹುದು, ನಮ್ ಫೈಲ್‍ಗಳು ಇನ್ನೂ
ಮರೆತಿಲ್ಲ ...!’

‘ಓ! ಆ ಹುಡುಗ್ರು ಮಿಸ್ ಆಗಿರೋದಕ್ಕೂ ನನ್ ಮನೆ ವಿಚಾರಕ್ಕೂ ಏನ್ ಸರ್ ಸಂಬಂಧ...? ತಲೆಬುಡ ಅರ್ಥ ಆಗ್ತಿಲ್ಲ...

ಬಾವಿ ಮುಚ್ಚಿ ಮನೆ ಕಟ್ಟೋದೇ ಅಪರಾಧ ಅನ್ನೊ ಹಾಗೆ ಮಾತಾಡ್ತೀರಲ್ಲ, ಅದಕ್ಕೆ ಪರ್ಮಿಶನ್ ತಗೊಂಡೇ ನಾನ್ ಕಟ್ಟಿಸಿದ್ದು. ಬಾವಿ ಇದ್ದಾಗ ಯಾರೋ ಹಾದಿಬೀದೀಲಿ ಹೋಗೊ ಹೆಂಗಸರು ಬಿದ್ ಸತ್ರೆ ನಾನೇನು ಮಾಡೋಕಾಗುತ್ತೆ ಸರ್?’

‘ಹಹಹ... ಆ ಬಾವೀಲಿ ಸತ್ತೋದವರು ಒಟ್ಟು ಮೂವರು ಹೆಂಗಸರು. ಅವರಲ್ಲಿ ಒಬ್ಬರ ಕಥೆ ಹೇಳಲಾ...?... ...... ಏನು ಮಾತೇ ಹೊರಡ್ತಿಲ್ಲವಲ್ಲ, ಇಂಜೀನಿಯರ್ ಸಾಹೇಬ್ರುದು...”


ಭಾಗ 3

ಆ ಮನೆಯೊಳಗೆ ನೀರು ತುಳುಕಾಡುವ ಸದ್ದು ಕೇಳಿಸಿದಂತಾಗಿ ಆ ಇಬ್ಬರು ಇರಾನಿಯನ್ ಹುಡುಗರು ಪರಸ್ಪರ ನೋಡಿಕೊಂಡು ನಗು ಸೂಸಿದರು. ಬ್ರೋಕರ್ ಹೇಳುತ್ತಿದ್ದ ವಿವರಗಳು ಅವರ ಕಿವಿಗಳೊಳಗೆ ಇಳಿದಂತಿರಲಿಲ್ಲ. ಇಬ್ಬರೂ ದಿಟ್ಟಿಸಿ ನೋಡುತ್ತಾ ಕಣ್ಣುಗಳೊಳಗೆ ಈಜಾಡುತ್ತಿದ್ದರು. ಕೈಕಾಲುಗಳ ಚಾಚಿ ಎಷ್ಟು ಸಾಧ್ಯವೊ ಅಷ್ಟು ಖುಷಿಯಿಂದ ಈಜಾಡುತ್ತಿದ್ದರು.

ಮುಟ್ಟಲು ಬಂದ ಆತನಿಂದ ತಪ್ಪಿಸಿಕೊಂಡು ಈತ ಮುನ್ನುಗ್ಗುತ್ತಿದ್ದ. ಆತ ಬಿಡದೆ ನೀರನ್ನು ಜಾಡಿಸುತ್ತಾ ಇವನ ಕಾಲುಗಳ ಹಿಡಿದು ತಿರುಗಿಸಿದ.

ಕೊನೆಗೆ ಇಬ್ಬರೂ ಒಟ್ಟಿಗೆ ಈಜಲು ಶುರು ಮಾಡಿದರು.

ದೂರದಲ್ಲಿ ನಾಯಿ ಬೊಗುಳುತ್ತಿರುವುದು ಅಸ್ಪಷ್ಟವಾಗಿ ಕೇಳಿಸಿ ಬ್ರೋಕರ್ ಇರಾನಿಯನ್ ಹುಡುಗರ ಕಡೆ ತಿರುಗಿ ‘ಮ್... ವಾಟ್? ಲೈಕ್ ಇಟ್?’ ಕೇಳಿದ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT