ಶನಿವಾರ, ಸೆಪ್ಟೆಂಬರ್ 18, 2021
30 °C

ಸೂಟ್‌ಕೇಸ್ ಜೋಪಾನ

ಹೀರಾ. ಆರ್ Updated:

ಅಕ್ಷರ ಗಾತ್ರ : | |

ಒಮ್ಮೆ ದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದಾಗ ನಮ್ಮ ಬೋಗಿಯಲ್ಲಿದ್ದ ನವ ದಂಪತಿ ತಮ್ಮ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದರು. ಎರಡು ಮೂರು ಸಲ ಮಾತನಾಡಲು ಪ್ರಯತ್ನಿಸಿದರೂ ಅವರು ವಿಶೇಷ ಆಸಕ್ತಿ ತೋರಿಸಲಿಲ್ಲ. ಹಾಗಾಗಿ ನಾನು ಸುಮ್ಮನಾದೆ. ಮುಂದಿನ ಸ್ಟೇಷನ್ ಬಂದಾಗ, ಅವರಿಬ್ಬರೂ ಇಳಿಯಲು ಮುಂದಾದಾಗ, ನಾನು ಮನಸ್ಸು ತಡೆಯಲಾರದೇ, ‘ನಿಮ್ಮ ಸೂಟ್‌ಕೇಸ್, ಚೀಲ ಜೋಪಾನ’ ಎಂದೆ. ಅವರು ಕೂಡಲೇ ‘ಕಾಫಿ ಕುಡಿದು ಬರುತ್ತೇವೆ. ನಿಮಗೆ ಏನಾದರೂ ತರಬೇಕೇನು?’ ಎಂದರು. ನಾನು ‘ಕಾಫಿ ಸಾಕು’ ಎಂದೆ.

ಹಸಿವಾಗುತ್ತಿದ್ದರೂ ಕೊಳಕು ನೀರು, ಅವ್ಯವಸ್ಥೆ ನೋಡಿ ತಿನ್ನಲು ಮನಸ್ಸಾಗಲಿಲ್ಲ. ಕೆಲ ಹೊತ್ತಿನಲ್ಲಿ ಅವರು ನನಗೆ ಕಾಫಿ ತಂದುಕೊಟ್ಟು, ತಾವು ತಿಂಡಿ ತಿನ್ನಲು ಶುರು ಮಾಡಿದರು. ನನ್ನ ಹೊಟ್ಟೆ ತಾಳ ಹಾಕುತ್ತಿತ್ತು. ಅವರಿಬ್ಬರೂ ನನ್ನನ್ನೇ ಗಮನಿಸುತ್ತಿದ್ದರು. ‘ನಿಮ್ಮ ಹೆಸರು’ ಎಂದಾಗ ನಾನು ‘ಯಶಸ್ವಿನಿ’ ಎಂದೆ. ‘ನೀವು’ ಎಂದಾಗ ‘ಶಾಂಭವಿ ಹಾಗೂ ಇವರು ನವೀನ್’ ಎಂದರು.

ಕೆಲಸ, ಬೆಂಗಳೂರಿನ ಹವಾಮಾನ, ಊರ ಹೊರಗಿನ ಮಾಲ್‌ಗಳ ಬಗ್ಗೆ ನಾನು ಹೇಳುತ್ತಿದ್ದಾಗ ಅವರು ಕಾತರದಿಂದ ಕೇಳುತ್ತಿದ್ದರು. ಅವರಿಗೆ ಹೊಸದಾಗಿ ಬೆಂಗಳೂರಿಗೆ ವರ್ಗಾವಣೆ ಆಗಿತ್ತು. ಎಲ್ಲಾ ಜಾಗಗಳು ತಿಳಿದಿರಲಿಲ್ಲ. ಬೆಂಗಳೂರಿಗೆ ಮೊದಲ ಪ್ರಯಾಣ ಅವರದ್ದು. ‘ಈಗಿನ ಯುವಕ ಯುವತಿಯರು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ಮೂಲಕವೇ ಪರದೇಶಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಮೂಲೆ ಮೂಲೆಗಳಲ್ಲಿರುವ ಜಾಗದ ಹೆಸರು ಗುರುತು ಮಾಡಿಕೊಂಡಿರುತ್ತಾರೆ. ಆದರೆ ನಮ್ಮ ಹುಷಾರಲ್ಲಿ ನಾವು ಇರಬೇಕು’ ಎಂದು ಹೇಳಿದೆ.

ಕತ್ತಲಾಯಿತು. ನಾನು ನಿದ್ದೆ ಮಾಡಿದೆ. ಬೆಳಗಿನ ಜಾವ ಬೆಂಗಳೂರು ತಲುಪಲು ಹತ್ತು ನಿಮಿಷ ಇತ್ತು ಅನಿಸುತ್ತದೆ. ಆಗ ಎಚ್ಚರ ಆಯಿತು. ಗಡಿಬಿಡಿಯಲ್ಲಿ ನನ್ನ ಪರ್ಸ್, ಮನೆ ಬೀಗ ಇಟ್ಟುಕೊಂಡೆ. ಸ್ಟೇಷನ್ ಬಂತು. ಅವರಿಗೆ ನನ್ನ ವಿಳಾಸ ಕೊಟ್ಟು, ಮನೆಗೆ ಬಂದೆ.

ಮನೆಗೆ ಬಂದು ನೋಡಿದಾಗ, ನನ್ನ ಒಂದು ಸೂಟ್‌ಕೇಸ್ ಇರಲಿಲ್ಲ. ಅದನ್ನು ದೊಡ್ಡಮ್ಮನ ಮಗಳ ಮನೆಗೆ ತಲುಪಿಸಲು ಹೇಳಿದ್ದರು. ಏನು ಮಾಡುವುದೆಂದು ತಿಳಿಯಲಿಲ್ಲ. ಸ್ಟೇಷನ್‌ಗೆ ಫೋನ್ ಮಾಡಿ ಅವರಿಗೆ ನನ್ನ ಟಿಕೆಟ್ ನಂಬರ್ ಕೊಟ್ಟು, ಸಿಕ್ಕಿದರೆ ತಲುಪಿಸಲು ಹೇಳಿದೆ.

ಕೆಲ ಹೊತ್ತಲ್ಲಿ ಫೋನಿನ ಗಂಟೆ ಬಾರಿಸಿತು. ‘ಹಲೋ’ ಎಂದೆ. ‘ಹಲೋ, ನಾನು ಶಾಂಭವಿ ಮಾತನಾಡುವುದು. ನಿಮ್ಮ ಸೂಟ್‌ಕೇಸ್ ಕೆಳಗಡೆ ಇಳಿಸುವಷ್ಟರಲ್ಲಿ ನೀವು ಮುಂದಕ್ಕೆ ಹೋಗಿ ಆಗಿತ್ತು. ನಿಮ್ಮ ವಿಳಾಸ ಇದೆ. ನಾವು ಈಗಲೇ ತಂದುಕೊಡುತ್ತೇವೆ’ ಎಂದರು. ಅವರು ಕಾಫಿಗೆ ಹೊರಟಾಗ ನಾನು ‘ನಿಮ್ಮ ಪರ್ಸ್‌ ಜೋಪಾನ’ ಎಂದಿದ್ದಷ್ಟೇ. ಇಬ್ಬರೂ ವಿಳಾಸ ಹಂಚಿಕೊಂಡಿದ್ದು ಸಾರ್ಥಕವಾಯಿತು ಅಂದುಕೊಂಡೆ. ಸಾಯಂಕಾಲ ಬಾಗಿಲು ತಟ್ಟಿದಾಗ ಶಾಂಭವಿ ಸೂಟ್‌ಕೇಸ್ ಜೊತೆ ನಿಂತಿದ್ದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು