ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್ ಎನ್ ನೇರಳಕಟ್ಟೆ ಅವರ ಕಥೆ– ಸೋತಂತ್ರ ದಿನ

Last Updated 19 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ತಲೆಯ ತುಂಬಾ ಚಿಂತೆಯ ಭಾರ ಹೊತ್ತುಕೊಂಡು ಬಂದ ಎಲ್ಲಪ್ಪ ಮೈದಾನದ ಮೂಲೆಯಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತದ್ದು, ಅವನೊಳಗಿದ್ದ ಅಸಮಾಧಾನವೇ ಆಸೀನವಾದಂತಾಯಿತು. ಖಾಲಿ ಕೈಯ್ಯಲ್ಲಿ ಊರಿಗೆ ಮರಳಬೇಕಾದ ಅನಿವಾರ್ಯತೆಯು, ಅವನಿದ್ದ ನಗರದ ಟ್ರಾಫಿಕ್ ಜಾಲದಂತೆ ಅವನ ತಲೆಯೊಳಗನ್ನು ಸುತ್ತಿ ಸುಳಿದು ಕೋಲಾಹಲ ಎಬ್ಬಿಸತೊಡಗಿತು. ಮುಂದೇನು ಮಾಡುವುದೆಂಬ ಸ್ಪಷ್ಟತೆಯೇ ಇಲ್ಲದ ಎಲ್ಲಪ್ಪ ಸುಮ್ಮನೆ ಕುಳಿತುಕೊಂಡ. ಹೀಗೆ ಅವನು ಚಲನೆಯಿಲ್ಲದೆ ಕುಳಿತ ಪರಿ, ಜಂಗಮ ಜಗತ್ತಿನೊಳಗೂ ಆಗಾಗ ಅಸ್ತಿತ್ವ ಗಳಿಸಿಕೊಳ್ಳುವ ತಾಟಸ್ಥ್ಯಕ್ಕೆ ರೂಪಕದಂತೆ ತೋರುತ್ತಿತ್ತು. ಅವನು ಕುಳಿತಿದ್ದ ಮೈದಾನಕ್ಕೆ ಬಲು ಸಮೀಪದ ರಸ್ತೆಯಲ್ಲಿಯೇ ಸದ್ದೆಬ್ಬಿಸಿಕೊಂಡು ಸಾಗುತ್ತಿದ್ದ ಆಂಬುಲೆನ್ಸ್, ಮಕ್ಕಳ ಕಿಲಕಿಲ ನಗು, ವಾಹನಗಳ ಹಾರ್ನ್ - ಇವ್ಯಾವುವೂ ಆತನ ನಿರ್ಲಿಪ್ತತೆಗೆ ಮುಕ್ತಿ ದೊರಕಿಸಲಿಲ್ಲ.

ಅಷ್ಟರಲ್ಲಿಯೇ ಅದೇ ಮಾರ್ಗವಾಗಿ ಸಾಗಿಬಂದ ಸ್ವಾತಂತ್ರ್ಯೋತ್ಸವದ ಮೆರವಣಿಗೆ, ಎಲ್ಲಪ್ಪನ ತತ್ಕಾಲದ ನಿರ್ಲಿಪ್ತತೆಯನ್ನು ದೂರೀಕರಿಸಿತು. ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ಹೊರಡಿಸುತ್ತಲೇ ಮುಂದೆ ಮುಂದೆ ಚಲಿಸಿಬರುತ್ತಿದ್ದ ಬಲು ಹುರುಪಿನ ಮೆರವಣಿಗೆಯ ಕಡೆಗೆ ಆತ ಈಗ ಗಮನಹರಿಸತೊಡಗಿದ.

*****
ಚಿಕ್ಕವಳ್ಳಿಯ ರಾಮೇಗೌಡರ ಜೀತದಾಳುಗಳಲ್ಲಿ ಒಬ್ಬನಾಗಿದ್ದವ ಕರಿಯ. ಇಂತಹ ಕರಿಯನ ಎಂಟು ಜನ ಮಕ್ಕಳಲ್ಲಿ ಒಬ್ಬನಾಗಿದ್ದ ಎಲ್ಲಪ್ಪನಿಗೆ ಗೌಡರ ಹಟ್ಟಿಯ ಸೆಗಣಿ ಬಾಚುವ ಕೆಲಸ ಜನ್ಮತಃ ಒದಗಿಬಂದ ಬಳುವಳಿಯಾಗಿತ್ತು. ಪರಂಪರಾನುಗತವಾದ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಂಡು, ಅಪ್ಪಿಕೊಂಡು, ಅದಕ್ಕೆ ತಲೆಬಾಗಿ ಬದುಕುತ್ತಿದ್ದ ಕರಿಯನಿಗೆ ತನ್ನ ಮಕ್ಕಳು ಸಣ್ಣವಯಸ್ಸಿನಲ್ಲಿಯೇ ಗೌಡರ ಹೊಲ, ಮನೆಗಳಲ್ಲಿ ದುಡಿಯಬೇಕಾಗಿ ಬಂದುದು ಅಸಹಜವೆಂದು ಯಾವತ್ತೂ ಅನಿಸಿರಲೇ ಇಲ್ಲ. ಬದಲಾಗಿ, ಗೌಡರಿಂದ ಹೆಚ್ಚೆಚ್ಚು ಕೆಲಸ ಹೇಳಿಸಿಕೊಳ್ಳುವ ಬಲು ನಂಬಿಕಸ್ಥ ಆಳು ತಾನೆಂಬ ಗರ್ವ ಅವನಲ್ಲಿತ್ತು.

ಹೀಗೆ ಪರಂಪರಾನುಗತವಾಗಿ ಹರಿದುಬಂದ ಜೀತಪದ್ಧತಿಯ ಮಹಾಪ್ರವಾಹದಲ್ಲಿ ಎಂಟರ ಹರೆಯದ ಎಲ್ಲಪ್ಪನೂ ಕೊಚ್ಚಿಹೋಗಬಹುದಾದ ಸಾಧ್ಯತೆಯಿತ್ತು. ಆದರೆ ಹಾಗಾಗಲಿಲ್ಲ. ಊರಿನ ಏಕೋಪಾಧ್ಯಾಯ ಶಾಲೆಗೆ ಹೊಸದಾಗಿ ಬಂದ ಶಂಕ್ರಪ್ಪ ಮೇಷ್ಟರ ಕೃಪಾಕಟಾಕ್ಷದಿಂದ ಅಕ್ಷರವನ್ನು ಎದೆಗಿಳಿಸಿಕೊಳ್ಳಬಹುದಾದ ಬಲುದೊಡ್ಡ ಅವಕಾಶ ಒದಗಿಬಂದಿತ್ತು. ಶಂಕ್ರಪ್ಪ ಮೇಷ್ಟರು ತುಂಬು ಜವ್ವನಿಕೆಯ, ಏರೋತ್ಸಾಹದ ಶಿಕ್ಷಕರಾಗಿದ್ದರು. ಚಿಕ್ಕವಳ್ಳಿ ಎನ್ನುವ ಕುಗ್ರಾಮದಲ್ಲಿ ಅಕ್ಷರಸ್ಥರು ಇಲ್ಲದೇ ಇರುವುದನ್ನು, ಶಿಕ್ಷಣದ ಕುರಿತಾಗಿ ಆಸಕ್ತಿ ಇಲ್ಲದಿರುವುದನ್ನು ಊರಿಗೆ ಬಂದ ಆರಂಭದಲ್ಲಿಯೇ ಅವರು ಗಮನಿಸಿದ್ದರು. ಚಿಕ್ಕವಳ್ಳಿಯ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಬೇಕು, ಇದಕ್ಕಾಗಿ ಪೋಷಕರ ಮನ ಒಲಿಸಬೇಕು ಎಂಬ ಯೋಚನೆ ಅವರ ತಲೆಗೆ ಬಂದದ್ದೇ ತಡ, ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ನಡೆಸತೊಡಗಿದರು.

ಮಕ್ಕಳಿದ್ದ ಮನೆಗಳಿಗೆ ತೆರಳಿ, ತಂದೆ- ತಾಯಿಯರ ಮನವೊಲಿಸುತ್ತಾ, ತಮ್ಮ ಪ್ರಯತ್ನದಲ್ಲಿ ಒಂದಷ್ಟು ಸಫಲತೆಯನ್ನು ಪಡೆದ ಶಂಕ್ರಪ್ಪ ಮೇಷ್ಟರು ಗೌಡರ ಮಹಡಿಮನೆಗೆ ಸಮೀಪದಲ್ಲಿಯೇ ಇದ್ದ ಕರಿಯನ ಗುಡಿಸಲಿನ ಮುಂದೆ ನಿಂತಾಗ ಸೂರ್ಯ ನೆತ್ತಿಗೇರಿದ್ದ. ಗೌಡರ ತೋಟದ ಕೆಲಸಕ್ಕೆ ಕುಡುಗೋಲು, ಹಾರೆ ಹೊತ್ತೊಯ್ಯಲು ಬಂದಿದ್ದ ಕರಿಯನಿಗೆ ಮೇಷ್ಟರು ಹೇಳಿದ ಶಿಕ್ಷಣ, ಶಾಲೆ, ವಿದ್ಯಾಭ್ಯಾಸದ ಮಹತ್ವ ಇವ್ಯಾವುವೂ ತಲೆಗೆ ಹತ್ತಲಿಲ್ಲ. ತುಸು ಹೊತ್ತು ಕಳೆದರೆ ಹೊಟ್ಟೆಗಿಳಿಸಬಹುದಾದ ರಾಗಿಗಂಜಿಯನ್ನು ಧೇನಿಸುತ್ತಿದ್ದ ಅವನು ಮೇಷ್ಟರ ಮಾತು ಅರ್ಥವಾಗದೆ ತಲೆ ತುರಿಸಿಕೊಂಡ. ಅವರು ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಿದ ಮೇಲೆ ಅವನಿಗೆ ವಿಷಯ ತುಸು ತಲೆಗೆ ಹೋಯಿತು. ಆದರೆ ಗೌಡರ ಸಾಲ ತೀರಿಸಿ, ಋಣಮುಕ್ತನೆನಿಸಿಕೊಂಡು ಸಾಯಬೇಕು ಎಂಬ ಕನಸು ಕಾಣುತ್ತಿದ್ದ ಅವನಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಇಷ್ಟ ಇರಲಿಲ್ಲ. ಶಿಕ್ಷಕರಾಗಿ ದುಡಿಯುತ್ತಿದ್ದವರಿಗೆ ಬಲು ಗೌರವ ಕೊಡುತ್ತಿದ್ದ ಕಾಲ ಅದಾಗಿದ್ದರಿಂದ ಮೇಷ್ಟರ ಮಾತನ್ನು ಸಂಪೂರ್ಣವಾಗಿ ಕಡೆಗಣಿಸುವ ಧೈರ್ಯವೂ ಅವನಿಗಿರಲಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸಿದರೆ ತಾನು ಗೌಡರ ಸಾಲ ತೀರಿಸುವುದು ಹೇಗೆಂದು ಅಸಹಾಯಕನಾಗಿ ಮೇಷ್ಟರನ್ನೇ ಪ್ರಶ್ನಿಸಿದ. ಅವನ ದೈನ್ಯಾವಸ್ಥೆ ಮೇಷ್ಟರನ್ನೇ ಗೊಂದಲಕ್ಕೆ ನೂಕಿತು. ಎಂಟು ಜನ ಮಕ್ಕಳಲ್ಲಿ ಕನಿಷ್ಠ ಪಕ್ಷ ಇಬ್ಬರನ್ನಾದರೂ ಶಾಲೆಗೆ ಕಳುಹಿಸಿಕೊಡುವಂತೆ ಸೂಚಿಸಿದರು.

ಯಾರನ್ನು ಕಳುಹಿಸಿಕೊಡುವುದೆಂದು ಲೆಕ್ಕಹಾಕಿದ ಕರಿಯನಿಗೆ ಹೊಳೆದದ್ದು ನಾಲ್ಕನೆಯ ಮಗ ಎಲ್ಲಪ್ಪ ಮತ್ತು ಹೆಣ್ಣುಮಕ್ಕಳಲ್ಲಿ ಎರಡನೆಯವಳಾಗಿದ್ದ ದ್ಯಾಮವ್ವ. ನಾಲ್ಕು ಶಿಳ್ಳೆ ಹೊಡೆಯುವುದರೊಳಗೆ ಮಾಡಿ ಮುಗಿಸಬಹುದಾದ ಕೆಲಸವನ್ನು ಮುಗಿಸಲು ಗಜಗರ್ಭದಷ್ಟು ಸಮಯವನ್ನು ಸೋಮಾರಿ ಎಲ್ಲಪ್ಪ ವ್ಯಯಿಸುತ್ತಾನೆ ಎನ್ನುವುದನ್ನು ಕರಿಯ ಈ ಹಿಂದಿನ ಅನುಭವಗಳಿಂದ ಕಂಡುಕೊಂಡಿದ್ದ. ಹುಟ್ಟುವಾಗಲೇ ಗೂರಲು ರೋಗ ಅಂಟಿಸಿಕೊಂಡು ಬಂದಿದ್ದ ದ್ಯಾಮವ್ವಳಿಗೆ ದುಡಿಯುವ ಮನಸ್ಸಿದ್ದರೂ ದುಡಿಯಲು ಆಗುತ್ತಿರಲಿಲ್ಲ. ಹೀಗೆ ಗೆಯ್ಮೆಗೆ ನಾಲಾಯಕ್ ಎಂದು ಇವರಿಬ್ಬರನ್ನು ಅಂದಾಜಿಸಿದ ಕರಿಯ ಅವರನ್ನೇ ಶಾಲೆಗೆ ಕಳುಹಿಸಲು ಮೇಷ್ಟರಲ್ಲಿ ಒಪ್ಪಿಕೊಂಡ. ಬೆನ್ನಿಗೆಯೇ, ಇದಕ್ಕೆ ಗೌಡರು ಒಪ್ಪುತ್ತಾರೆಯೇ ಎಂಬ ಸಂಶಯವನ್ನೂ ಮುಂದಿಟ್ಟ. ಗೌಡರನ್ನು ಒಪ್ಪಿಸುವ ಜವಾಬ್ದಾರಿ ತನ್ನದು ಎಂದು ಮೇಷ್ಟರು ತಿಳಿಸಿದ ಬಳಿಕ ನಿರಾಳನಾದ. ಅಕ್ಷರಸ್ಥರಾಗಿರುವ ಮೇಷ್ಟರ ಮನವಿಯನ್ನು ತಿರಸ್ಕರಿಸಿದರೆ ತನ್ನ ಪಾಳೇಗಾರಿಕೆಗೆ ಸಂಚಕಾರ ಒದಗಲೂಬಹುದು ಎನ್ನುವುದನ್ನು ಮುನ್ನಂದಾಜಿಸಿದ ಗೌಡರು ಮೇಷ್ಟರು ಕೇಳಿಕೊಂಡ ಕೂಡಲೇ ಭಾರೀ ಒಳ್ಳೆಯವರಂತೆ ಒಪ್ಪಿಗೆ ಕೊಟ್ಟಿದ್ದರು. ಮೇಲಾಗಿ, ಮೇಷ್ಟರೇನಾದರೂ ಕರಿಯನ ಸಾಲದ ಮೂಲವನ್ನೇನಾದರೂ ಹಿಡಿದು ಹೊರಟರೆ ತನ್ನ ಕಳ್ಳಾಟವೆಲ್ಲ ಬಯಲಾದೀತು ಎಂಬ ಭಯ ಗೌಡರಿಗಿತ್ತು. ಹೀಗೆ ಶಂಕರ ಮೇಷ್ಟರ ಕಾರಣದಿಂದ ದ್ಯಾಮವ್ವ ಹಾಗೂ ಎಲ್ಲಪ್ಪ ಇಬ್ಬರೂ ಶಾಲೆಗೆ ಸೇರಿಕೊಳ್ಳುವಂತಾಯಿತು.

ಗೌಡರ ಮನೆಯಲ್ಲಿ ಏಳು ಜನ್ಮಗಳಿಗಾಗುವಷ್ಟು ಜಾತಿ ತಾರತಮ್ಯವನ್ನು ಅನುಭವಿಸಿ ನೊಂದಿದ್ದ ಈ ಇಬ್ಬರು ಶಾಲೆಯಲ್ಲಿಯೂ ಅದನ್ನೇ ಕಾಣುವಂತಾಯಿತು. ಶಾಲೆ ಆರಂಭಗೊಂಡ ದಿನ ಎಲ್ಲಾ ಮಕ್ಕಳನ್ನೂ ಪಕ್ಕಪಕ್ಕವೇ ಕೂರಿಸಿದ್ದು ಊರಿನ ಮೇಲ್ಜಾತಿಯವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ದಿನ ಸಂಜೆಯೇ ಮೇಷ್ಟರ ಮನೆ ಬಾಗಿಲು ಬಡಿದ ಅವರುಗಳು ತಮ್ಮ ಕೋಪವನ್ನು ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದರು. ಎದುರು ನಿಂತ ಬೆರಳೆಣಿಕೆ ಮಂದಿಯೊಂದಿಗೆ ಚರ್ಚಿಸಿ ಗೆಲ್ಲುವಷ್ಟು ತಲೆತೂಕ ಮೇಷ್ಟರಿಗಿತ್ತು. ಆದರೆ ಊರಿನಲ್ಲಿ ಪ್ರಬಲರಾಗಿದ್ದ ಅವರನ್ನು ಎದುರುಹಾಕಿಕೊಂಡು ಈಸುವುದು ಸುಲಭವಲ್ಲವೆಂಬ ಅರಿವೂ ಇದ್ದುದರಿಂದ ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಸುಮ್ಮನಾಗಿದ್ದರು.

ದ್ಯಾಮವ್ವ, ಎಲ್ಲಪ್ಪ ಹಾಗೂ ಇನ್ನಿಬ್ಬರು ಮಕ್ಕಳು ತಮ್ಮ ತರಗತಿಯ ಉಳಿದ ಮಕ್ಕಳಿಗಿಂತ ದೂರದಲ್ಲಿ ಕುಳಿತೇ ಶಿಕ್ಷಣ ಪಡೆಯತೊಡಗಿದರು. ತಾವ್ಯಾಕೆ ಉಳಿದವರನ್ನು ಸ್ಪರ್ಶಿಸಬಾರದೆನ್ನುವ ಪ್ರಶ್ನೆ, ಉತ್ತರ ಇದ್ಯಾವುದೂ ಆ ಎಳೆಯ ತಲೆಗಳಲ್ಲಿ ಮೂಡಿರಲಿಲ್ಲ.

ಎಲ್ಲಪ್ಪ ಕಲಿಯುವಿಕೆಯಲ್ಲಿ ಭಲೇ ಚುರುಕಿದ್ದ. ಮೇಷ್ಟರು ಹೇಳಿದ್ದನ್ನು ಕೂಡಲೇ ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿ ಹೊಂದಿದ್ದ ಆತ ಶಾಲೆಗೆ ಸೇರಿದ ಕೆಲವೇ ಸಮಯದಲ್ಲಿ, ಮೇಷ್ಟರು ಪಾಠ ಮಾಡುವುದಕ್ಕೂ ಮೊದಲೇ ಅರ್ಥೈಸಿಕೊಳ್ಳುವಂತಾಗಿದ್ದ. ಎಲ್ಲಪ್ಪನ ಈ ಬುದ್ಧಿವಂತಿಕೆಯನ್ನು ಶಂಕ್ರಪ್ಪ ಮೇಷ್ಟರು ಗಮನಿಸಿ, ಅವನ ಕಲಿಕೆಗೆ ಸಂಪೂರ್ಣ ಪ್ರೋತ್ಸಾಹ ಕೊಡುವ ನಿರ್ಧಾರ ಮಾಡಿದ್ದರು.

ತೋಟದ ಕೆಲಸದಲ್ಲಿ ಮಂದನೆನಿಸಿಕೊಂಡು ತನ್ನಿಂದ ಹಲವಾರು ಸಲ ಬೈಸಿಕೊಂಡಿದ್ದ ಎಲ್ಲಪ್ಪ ಕಲಿಕೆಯಲ್ಲಿ ಬಹಳ ಚುರುಕಾಗಿದ್ದಾನೆ ಎಂಬ ವಿಷಯ ಗೌಡರಿಗೆ ತಿಳಿದದ್ದು ಅವರ ಎರಡನೇ ಮಗನಿಗಿಂತಲೂ ಹೆಚ್ಚಿನ ಅಂಕವನ್ನು ಗಳಿಸಿ, ಎಲ್ಲಪ್ಪ ತರಗತಿಗೇ ಮೊದಲಿಗನಾದಾಗ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ ಗೌಡರಿಗೆ. ‘ಈ ಕೆಸರಣಬೆಗಳ ತಲೆಯೊಳಗೆ ಮೂರಕ್ಷರ ಹೊಕ್ಕುವುದಕ್ಕಿದೆಯಾ? ಈ ಮೇಷ್ಟರಿಗೆ ಒಂದಿಷ್ಟೂ ಬುದ್ಧಿಯಿಲ್ಲ’ ಎಂದು ಅಂದುಕೊಳ್ಳುತ್ತಲೇ ಗೌಡರು, ದ್ಯಾಮವ್ವ- ಎಲ್ಲಪ್ಪರನ್ನು ಶಾಲೆಗೆ ಕಳುಹಿಸುವುದಕ್ಕೆ ಒಪ್ಪಿಕೊಂಡಿದ್ದರು. ಒಂದಾರು ತಿಂಗಳು ಶಾಲೆಗೆ ಹೋಗಿ, ಆಮೇಲೆ ಮೇಷ್ಟರ ಕೈಯ್ಯಲ್ಲಿನ ನಾಗರ ಬೆತ್ತದ ಬಿಸಿಗೆ ಬೆದರಿ, ಶಾಲೆ ಬಿಟ್ಟು, ತನ್ನ ಹಟ್ಟಿಯ ಖಾಯಂ ದುಡಿಮೆಗಾರರಾಗುತ್ತಾರೆ ಎಂಬ ನಿರೀಕ್ಷೆ ಗೌಡರದ್ದಾಗಿತ್ತು. ಆದರೆ ಇದೀಗ ತನ್ನ ನಿರೀಕ್ಷೆ ಸುಳ್ಳಾಗುವುದನ್ನು ಅವರಿಗೆ ಸಹಿಸಲಾಗಲಿಲ್ಲ. ಮರುದಿನ ಬೆಳಗ್ಗೆ ಕೆಲಸಕ್ಕೆ ಬಂದ ಕರಿಯನನ್ನು ಜೋರುಮಾಡಿ ನುಡಿದರು- ‘ನೀವಷ್ಟೇ ದುಡಿದರೆ ಕೆಲಸ ಚುರುಕಾಗಿ ಸಾಗುವುದಿಲ್ಲ. ಶಾಲೆ ಸೇರಿದ್ದಾರಲ್ಲ ನಿನ್ನಿಬ್ಬರು ಮಕ್ಕಳು, ಅವರನ್ನೂ ಕೆಲಸಕ್ಕೆ ಸೇರಿಸಿಕೋ. ದ್ಯಾಮವ್ವಳಾದರೂ ರೋಗಿಷ್ಟೆ, ದುಡಿಯದಿದ್ದರೂ ಪರವಾಗಿಲ್ಲ. ಎಲ್ಲಪ್ಪನಂತೂ ನಾಳೆಯಿಂದ ಕೆಲಸಕ್ಕೆ ಬರಲೇಬೇಕು’ ಧಣಿಗಳ ಜೋರುದನಿಗೆ ಬೆದರಿದ ಕರಿಯ ಅಂತೆಯೇ ನಡೆದುಕೊಂಡ. ಎಲ್ಲಪ್ಪನನ್ನು ಶಾಲೆ ಬಿಡಿಸಿ, ಹಿಂದಿನಂತೆಯೇ ಗೌಡರ ಬಿಟ್ಟಿಚಾಕರಿಗೆ ನಿಯೋಜಿಸಿದ. ಎಲ್ಲಪ್ಪನಿಗೆ ಶಾಲೆಯ ಸಹವಾಸವೇ ಮೆಚ್ಚುಗೆಯಾಗಿದ್ದರೂ ಅಪ್ಪನೆದುರು ತನ್ನ ಅಭಿಪ್ರಾಯವನ್ನು ನಿರ್ಭಿಡೆಯಿಂದ ಹೇಳುವ ಪ್ರೌಢತೆ ಇನ್ನೂ ಮೂಡಿರಲಿಲ್ಲ.

ತರಗತಿಯ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಎಲ್ಲಪ್ಪ ಎರಡು ದಿನಗಳಿಂದ ಶಾಲೆಗೆ ಬರದೇ ಇದ್ದುದನ್ನು ಗಮನಿಸಿದ್ದ ಮೇಷ್ಟರು ಎರಡನೇ ದಿನದ ಸಂಜೆ ಗೌಡರ ಮನೆಯಾಚೆ ಹೆಜ್ಜೆಹಾಕಿದ್ದರು. ಆತನ ಗೈರುಹಾಜರಿಗೆ ಕಾರಣ ಏನಿರಬಹುದೆಂದು ಗೌಡರ ಮನೆಯೆದುರಿನ ವಿಶಾಲ ಅಂಗಳಕ್ಕೆ ಕಾಲಿಡುವ ಮೊದಲೇ ಊಹಿಸಿದ್ದ ಮೇಷ್ಟರು ಗೌಡರ ಜೊತೆಗಿನ ಮಾತುಕತೆಗೆ ಸಿದ್ಧರಾಗಿಯೇ ಬಂದಿದ್ದರು. ಗೌಡರಿಂದ ವಿಷಯ ತಿಳಿದುಕೊಂಡ ಮೇಷ್ಟರು ‘ಕರಿಯ ನಿಮ್ಮಲ್ಲಿ ಮಾಡಿರುವ ಸಾಲ ಎಷ್ಟಿದೆಯೋ ಹೇಳಿ ಗೌಡರೇ. ಅದನ್ನು ನಾನೇ ತೀರಿಸುತ್ತೇನೆ. ಸಾಲಪತ್ರ ಈಗಲೇ ತಂದುಬಿಡಿ’ ಎಂದಿದ್ದರು. ಮೇಷ್ಟರ ಮಾತು ಗೌಡರಲ್ಲಿ ನಡುಕ ಹುಟ್ಟಿಸಿತು. ಕರಿಯ ಮಾಡಿದ್ದ ಜುಜುಬಿ ಸಾಲಕ್ಕೆ ತಾನು ಅವನ ಇಡೀ ಕುಟುಂಬವನ್ನೇ ಜೀತಕ್ಕಿಟ್ಟುಕೊಂಡ ವಿಚಾರ ಮೇಷ್ಟರಿಗೆ ತಿಳಿದರೆ ಗತಿಯೇನು? ಎಂಬ ನಡುಕವದು. ಮೂರು ಮೈಲುಗಳಾಚೆ ಮೈಮರೆತು ಮಲಗಿದ್ದ ಮುಳ್ಳುಹಂದಿಯ ಮೈದಡವಿ ಮೈಯ ಮೇಲೆಯೇ ಮಲಗಿಸಿಕೊಂಡಂತಾಯಿತಲ್ಲಾ ಎಂದು ಮನದಲ್ಲಿಯೇ ಮರುಗಿದ ಗೌಡರು ಮೃದುವಾಗಿ ನುಡಿದರು- ‘ಇಲ್ಲ ಮೇಷ್ಟರೇ, ಅದೆಲ್ಲಾ ಏನೂ ಬೇಡ. ನಿಮಗೆ ಅಷ್ಟು ಬೇಸರವಾಗುವುದಿದ್ದರೆ ಅವನು ಶಾಲೆ ಕಲಿಯಲಿ ಬಿಡಿ. ನನಗೂ ಸಂತೋಷವೇ’.

ಹೀಗೆ ಮತ್ತೆ ಶಾಲೆ ಸೇರಿಕೊಂಡ ಎಲ್ಲಪ್ಪ ಹಿಂದಿಗಿಂತಲೂ ಹುರುಪಿನಿಂದ ಕಲಿಯತೊಡಗಿದ. ಎಲ್ಲಾ ತರಗತಿಗಳಲ್ಲಿಯೂ ಮೊದಲಿಗನಾಗಿ ಆರನೇ ತರಗತಿ ಮುಗಿಸಿದವನು ಏಳನೇ ತರಗತಿಯಲ್ಲಿಯೂ ಅತ್ಯಧಿಕ ಅಂಕ ಗಳಿಸಿದ. ಹೈಸ್ಕೂಲ್ ಸೇರಿಕೊಳ್ಳಬೇಕೆಂಬ ಆಸೆ ಎಲ್ಲಪ್ಪನಲ್ಲಿ ಭರಪೂರವಾಗಿತ್ತು. ಆದರೆ ಚಿಕ್ಕವಳ್ಳಿಯಲ್ಲಿ ಆ ಕಾಲಕ್ಕೆ ಪ್ರೌಢಶಾಲೆ ಇರಲಿಲ್ಲ. ಹೈಸ್ಕೂಲ್ ಕಲಿಯಬೇಕಿದ್ದರೆ ಸರಿಸುಮಾರು 78 ಕಿಲೋಮೀಟರ್ ದೂರದ ಪೇಟೆಗೆ ಹೋಗಬೇಕಿತ್ತು. ಶಿಷ್ಯನ ಹೈಸ್ಕೂಲ್ ಶಿಕ್ಷಣದ ಕುರಿತು ಅತೀವ ಕಾಳಜಿ ವಹಿಸಿದ ಶಂಕ್ರಪ್ಪ ಮೇಷ್ಟರು ತಮ್ಮ ಕಾಲೇಜು ಸಹಪಾಠಿಯಲ್ಲಿ ಮಾತನಾಡಿ, ಅವರ ಮನೆಯಲ್ಲಿ ಉಚಿತವಾಗಿ ಉಳಿದುಕೊಂಡು, ಶಿಕ್ಷಣ ಪಡೆಯುವ ವ್ಯವಸ್ಥೆಯನ್ನು ಎಲ್ಲಪ್ಪನಿಗೆ ಒದಗಿಸಿಕೊಟ್ಟರು. ಮಗ ಹಟ್ಟಿ ತೊರೆದು, ದೂರದ ಪೇಟೆ ಕಡೆಗೆ ಹೊರಡುವಾಗ ಕರಿಯ ಮತ್ತು ಅವನ ಹೆಂಡತಿ ಬೂದೆಯ ಕಣ್ಗಳು ತುಂಬಿಕೊಂಡಿದ್ದವು. ಗೌಡರು ಕೈಕೈ ಹಿಸುಕಿಕೊಂಡಿದ್ದರು.

ಎಲ್ಲಪ್ಪ ಹೋಗಿ ಉಳಿದುಕೊಂಡ ಮನೆಯ ಒಡೆಯ, ಶಂಕ್ರಪ್ಪ ಮೇಷ್ಟರ ಸಹಪಾಠಿ, ಶಂಕ್ರಪ್ಪ ಮೇಷ್ಟರಷ್ಟು ಒಳ್ಳೆಯವರಾಗಿರಲಿಲ್ಲ. ಬಿಟ್ಟಿ ಉಳಿದುಕೊಂಡವನೆಂಬ ಕಾರಣಕ್ಕೆ ಎಲ್ಲಪ್ಪನಿಗೆ ಮನೆಯ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಆಗಾಗ ವಹಿಸುತ್ತಿದ್ದರು. ಮನೆಗೆ ಬೇಕಾದ ತರಕಾರಿಗಳನ್ನು ಎರಡು ದಿವಸಗಳಿಗೊಮ್ಮೆ ತರುವ, ತಿಂಗಳಿಗೆ ಮೂರು ಬಾರಿ ಮೂರು ಮೈಲು ದೂರದ ಅಂಗಡಿಯಿಂದ ದಿನಸಿ ಸಾಮಾಗ್ರಿಗಳ ಮೂಟೆಯನ್ನು ತಲೆಮೇಲೆ ಹೊತ್ತುತರುವ ಕೆಲಸ ಎಲ್ಲಪ್ಪನಿಗೆ ಖಾಯಮ್ಮಾಗಿತ್ತು. ಕೆಲವು ಭಾನುವಾರಗಳಂದು ಮನೆಯ ಸ್ವಚ್ಛತೆಯ ಕೆಲಸವನ್ನೂ ಎಲ್ಲಪ್ಪನೇ ಮಾಡಬೇಕಾಗುತ್ತಿತ್ತು. ತಪ್ಪು ಮಾಡದಿದ್ದರೂ ಬೈಗುಳ ತಿನ್ನಬೇಕಾಗುತ್ತಿತ್ತು. ವಾಸ್ತವವಾಗಿ, ಶಂಕ್ರಪ್ಪ ಮೇಷ್ಟರ ಆ ಸ್ನೇಹಿತರು ಹೊರಗಡೆ ವಿಶಾಲ ಮನೋಭಾವದವರಾಗಿ ತೋರಿಸಿಕೊಳ್ಳುತ್ತಿದ್ದರಾದರೂ ಅವರ ಆಂತರ್ಯದಲ್ಲಿ ಸಂಪ್ರದಾಯ ನಿಷ್ಠೆ ರವಷ್ಟು ಉಳಿದುಕೊಂಡಿತ್ತು. ಈ ಆಂತರಂಗಿಕ ಭಾವನೆ ಕೆಲವು ಸಂದರ್ಭಗಳಲ್ಲಿ ಎಲ್ಲಪ್ಪನ ಮೇಲೆ ಪ್ರಯೋಗಗೊಳ್ಳುತ್ತಿತ್ತು.

ಇಷ್ಟೆಲ್ಲಾ ಅವಮಾನ- ಸಮಸ್ಯೆಗಳಿದ್ದರೂ ಸಹ, ಎಲ್ಲಪ್ಪನನ್ನು ಸಹಜವಾಗಿಯೇ ಇರಿಸಿದ್ದ ಕಾರಣವೊಂದಿತ್ತು. ಅದು, ವಾರಕ್ಕೊಮ್ಮೆ ಶಾಲೆಯ ಸನಿಹದಲ್ಲಿ ಅವನನ್ನು ಭೇಟಿಯಾಗುತ್ತಿದ್ದ ಹೋರಾಟಗಾರ ಈರೇಶ ಹಾಗೂ ಅವರು ತಂದುಕೊಡುತ್ತಿದ್ದ ವೈಚಾರಿಕ ಪುಸ್ತಕಗಳು. ಪುಸ್ತಕಗಳ ಓದಿನಿಂದ ಹಾಗೂ ಈರೇಶರ ಒಡನಾಟದಿಂದ ಸಮಾಜದ ನಿರ್ಲಕ್ಷಿತ ಸಮುದಾಯಗಳ ಕುರಿತಾದ ಅರಿವು ಎಲ್ಲಪ್ಪನ ಮೆದುಳಿನ ಮೂಲೆಯಲ್ಲಿ ಮೆಲ್ಲಮೆಲ್ಲಗೆ ಮೊಳಕೆಯೊಡೆಯತೊಡಗಿತ್ತು. ತನ್ನ ಕುಟುಂಬ ಮೊದಲಿನಿಂದಲೂ ರಾಮೇಗೌಡರ ಜೀತದಲ್ಲಿದ್ದುಕೊಂಡು ಅನುಭವಿಸಿದ ಶೋಷಣೆಯ ತಿಳಿವಳಿಕೆ ಆತನಲ್ಲಿ ಜಾಗೃತವಾಗತೊಡಗಿತ್ತು. ಬಿಡುವಿದ್ದಾಗಲೆಲ್ಲಾ ಇಂತಹ ಪುಸ್ತಕಗಳನ್ನು ಓದುತ್ತಾ, ತನ್ನ ಜ್ಞಾನಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿದ್ದ ಎಲ್ಲಪ್ಪ.

ಕಾಲ ಸಾಗತೊಡಗಿತು. ಹೈಸ್ಕೂಲ್ ಮುಗಿಸಿದ ಎಲ್ಲಪ್ಪ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಪಿ.ಯು. ಮುಗಿಸಿದ. ಬಳಿಕ ಡಿಗ್ರಿ ಮಾಡಿದ. ಅವರಿವರ ಸಹಾಯ ಪಡೆದು ಎಂ.ಎ.ಯನ್ನೂ ಮುಗಿಸಿಕೊಂಡ. ಎಂ.ಎ.ನಲ್ಲಿ ಅವನಿಗೆ ರ‍್ಯಾಂಕ್ ಬಂದಿತ್ತು. ಘಟಿಕೋತ್ಸವದಲ್ಲಿ ಭಾಗವಹಿಸಿ, ವೇದಿಕೆಗೆ ಹೋಗಿ, ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾದರೆ ಶುಭ್ರ ಶ್ವೇತವರ್ಣದ ಉಡುಪನ್ನು ಧರಿಸುವುದು ಕಡ್ಡಾಯವಾಗಿತ್ತು. ಆದರೆ ಎಲ್ಲಪ್ಪನಲ್ಲಿ ಅಂತಹ ಉಡುಗೆ ಇರಲಿಲ್ಲ. ಕೊಂಡುಕೊಳ್ಳುವ ಆರ್ಥಿಕ ತಾಕತ್ತು ಇರಲಿಲ್ಲ. ಈಗಾಗಲೇ ಮಾಡಿರುವ ಕೈಸಾಲ ಕೈಮೀರಿದ್ದರಿಂದ ಯಾರೂ ಸಾಲ ಕೊಡುವ ಸಾಧ್ಯತೆಯೇ ಇರಲಿಲ್ಲ. ಘಟಿಕೋತ್ಸವದ ಹಿಂದಿನ ದಿನ ಬೆಳ್ಳಂಬೆಳಗ್ಗೆಯೇ ಎಲ್ಲಪ್ಪ ಸಪ್ಪೆಮೋರೆ ಹೊತ್ತುಕೊಂಡು ಕುಳಿತದ್ದನ್ನು ನೋಡಿದ ಅವನಮ್ಮ ಕಾರಣ ಕೇಳಿದ್ದಳು. ಬಟ್ಟೆ ಕೊಳ್ಳಲು ದುಡ್ಡಿಲ್ಲ ಎಂದು ಈತ ಹೇಳಿದ ತಕ್ಷಣವೇ ಹತ್ತು ಹದಿನೈದು ಬುಟ್ಟಿಗಳನ್ನು ರಪರಪನೆ ಹೆಣೆದು, ಅವುಗಳನ್ನು ಸಂತೆ ವ್ಯಾಪಾರಿ ಹನುಮಪ್ಪನಿಗೆ ಕೊಟ್ಟು, ಅವನಿಂದ ಮುಂಗಡ ಹಣವನ್ನೂ ಒಂದಿಷ್ಟು ಪಡೆದು ತಂದು ಮಗನ ಕೈಲಿಟ್ಟಿದ್ದಳು. ಕೂಡಲೇ ಪಕ್ಕದ ಪೇಟೆಗೆ ಹೋದ ಎಲ್ಲಪ್ಪ, ಬಟ್ಟೆ ಖರೀದಿಸಿ, ಮರುದಿನದ ಘಟಿಕೋತ್ಸವಕ್ಕೆ ಹಾಜರಾಗಿದ್ದ.

ರ‍್ಯಾಂಕ್ ಸಹಿತವಾಗಿ ಎಂ.ಎ. ಮುಗಿಸಿದ ಎಲ್ಲಪ್ಪ ಉದ್ಯೋಗ ಹುಡುಕತೊಡಗಿದ್ದ. ಕಾಲೇಜಿನಲ್ಲಿ ಉಪನ್ಯಾಸಕನಾಗಬೇಕು ಎಂಬ ಕನಸು ಆತನದ್ದಾಗಿತ್ತು. ಉಪನ್ಯಾಸಕ ಎನಿಸಿಕೊಂಡು, ಸಂಬಳ ಪಡೆಯುವಂತಾದರೆ ರಾಮೇಗೌಡರ ಸಾಲ ತೀರಿಸಿ, ಅವರ ಜೀತದಿಂದ ಮುಕ್ತಗೊಳ್ಳಬಹುದು ಎನ್ನುವುದು ಅವನ ಯೋಚನೆಯಾಗಿತ್ತು. ಗೌಡರು ಹೇಳುವಷ್ಟು ದೊಡ್ಡ ಮೊತ್ತದ ಸಾಲವನ್ನು ತನ್ನಪ್ಪ ಖಂಡಿತವಾಗಿಯೂ ಮಾಡಿರಲಿಕ್ಕಿಲ್ಲ ಎಂಬ ಬಲವಾದ ಗುಮಾನಿ ಅವನಿಗಿದ್ದುದರಿಂದ ಗೌಡರ ಬಂಡವಾಳವನ್ನು ಬಟಾಬಯಲಾಗಿಸಬೇಕೆಂಬ ಹಠವೂ ಆತನಲ್ಲಿತ್ತು. ಆದರೆ ಎಂ.ಎ. ಮುಗಿಸಿದ ಮೊದಲ ವರ್ಷ ಅವನಿಗೆ ಉಪನ್ಯಾಸಕ ವೃತ್ತಿ ದಕ್ಕಲಿಲ್ಲ. ತನ್ನ ಹಳ್ಳಿಯ ಸುತ್ತಮುತ್ತಲಿನ ಊರುಗಳಲ್ಲಿ ಕಳೆದ ಆರೇಳು ವರ್ಷಗಳಿಂದೀಚೆಗೆ ಸ್ಥಾಪನೆ ಆಗಿದ್ದ ಕೆಲವು ಕಾಲೇಜುಗಳಲ್ಲಿ ನಡೆದ ಸಂದರ್ಶನಕ್ಕೆ ಹೋಗಿಬಂದ. ಈತನ ಜ್ಞಾನಕ್ಕೆ ತಕ್ಕ ಬೆಲೆ ಸಿಗಲಿಲ್ಲ. ಒಳ್ಳೆಯ ರೀತಿಯಲ್ಲಿಯೇ ಸಂದರ್ಶನ ಎದುರಿಸಿದ್ದರೂ ತಾನೇಕೆ ಆಯ್ಕೆ ಆಗಿಲ್ಲ ಎನ್ನುವುದು ಎಲ್ಲಪ್ಪನ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಉತ್ತರವಂತೂ ದೊರೆಯಲಿಲ್ಲ.

ಒಂದು ವರ್ಷ ಖಾಲಿ ಕುಳಿತುಕೊಳ್ಳುವುದನ್ನು ಬಯಸದ ಎಲ್ಲಪ್ಪನಿಗೆ ಚಿಕ್ಕವಳ್ಳಿಯ ಗ್ರಾಮ ಪಂಚಾಯತ್ ಕಛೇರಿಯ ಗುಮಾಸ್ತನ ಕೆಲಸ ದೊರಕಿತು. ಅರೆಕಾಲಿಕ ಕೆಲಸ ಅದಾಗಿತ್ತು. ಹುಟ್ಟಿದ ಊರಿನಲ್ಲಿಯೇ ದೊರೆತ ಕೆಲಸ ಹಲವು ವರ್ಷಗಳ ಬಳಿಕ ಎಲ್ಲಪ್ಪನನ್ನು ಊರಿಗೆ ನಿಕಟಗೊಳಿಸಿತು. ತನ್ನ ಬಾಲ್ಯದಲ್ಲಿ ಇದ್ದಂತಹ ಅನಿಷ್ಟಗಳನ್ನು ತನ್ನ ಊರು ಇಷ್ಟು ವರ್ಷಗಳ ಬಳಿಕವೂ ಕಳೆದುಕೊಂಡಿಲ್ಲ ಎಂಬ ವಿಚಾರ ಅವನಿಗೆ ಸ್ಪಷ್ಟವಾಗತೊಡಗಿತ್ತು. ಬದಲಾವಣೆ ತರಬೇಕೆಂದು ಬಯಸಿದ ಎಲ್ಲಪ್ಪ ಊರಿನಲ್ಲಿದ್ದ ಯುವಕರನ್ನು ಸಂಘಟಿಸುವ ಪ್ರಯತ್ನ ಮಾಡಿದ. ‘ವೈಚಾರಿಕ ದರ್ಶಿನಿ’ ಎಂಬ ಸಂಘಟನೆಯೊಂದನ್ನು ಆರಂಭಿಸಿದ ಆತ ಗ್ರಾಮದ ಯುವಕರಲ್ಲಿ ವೈಚಾರಿಕತೆಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಊರಿನ ಮೇಲ್ಜಾತಿಯ ಜನರ ಹಂಗಿನಲ್ಲಿದ್ದವರು ಎಲ್ಲಪ್ಪನ ಕಾರ್ಯಕ್ರಮಗಳಿಗೆ ಬರುವ ಉತ್ಸಾಹ ತೋರಿಸಲಿಲ್ಲ. ಎಲ್ಲಪ್ಪನ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿಯಾಗಿರದಿದ್ದರೂ ರಾಮೇಗೌಡರನ್ನೂ ಒಳಗೊಂಡಂತೆ ಊರಿನ ಆಢ್ಯರ ಕಣ್ಣು ಕುಕ್ಕತೊಡಗಿದವು.

ಹೀಗೆ ವೈಚಾರಿಕ ಚಿಂತನೆಗಳನ್ನು ಕಾರ್ಯಗತಗೊಳಿಸಲು ಯೋಜಿಸಿದ ಎಲ್ಲಪ್ಪ ಊರ ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶ ದೊರಕಿಸಲು ಹೊರಟದ್ದು ಭಾರೀ ವಿವಾದವಾಯಿತು. ತನ್ನದೇ ಜಾತಿಯ ಜನರ ಜೊತೆಗೆ ಕೆಲವು ಮಂದಿ ಹೋರಾಟಗಾರರನ್ನೂ ಸೇರಿಸಿಕೊಂಡು ಎಲ್ಲಪ್ಪ ಊರ ದೇವಸ್ಥಾನದ ಪ್ರವೇಶಕ್ಕೆ ಮುಂದಾದ. ದೇವಸ್ಥಾನ ಪ್ರವೇಶಿಸಿದರೆ ತಾವು ದೇವರ ಕೋಪಕ್ಕೆ ತುತ್ತಾಗುತ್ತೇವೆ ಎಂಬ ಭಯಕ್ಕೆ ಕಟ್ಟುಬಿದ್ದ ಬಹುತೇಕರು ಎಲ್ಲಪ್ಪನಿಗೆ ಬೆಂಬಲ ಕೊಡಲಿಲ್ಲ. ಏಳೆಂಟು ಯುವಕರು ಮಾತ್ರವೇ ಅವನ ಜೊತೆಗೆ ಇದ್ದದ್ದು. ಮೊದಲೇ ಈ ವಿಚಾರ ತಿಳಿದಿದ್ದ ಊರಿನ ಮೇಲ್ಜಾತಿಯ ಜನರು ನಿಯಂತ್ರಣಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದರು. ಊರ ಮೈದಾನದಲ್ಲಿ ಭಾಷಣ ಮುಗಿಸಿ, ಮೆರವಣಿಗೆಯ ರೀತಿಯಲ್ಲಿ ಹತ್ತು ಹದಿನೈದು ಜನ ಊರ ದೇವಸ್ಥಾನದ ಕಡೆಗೆ ಸಾಗಿ, ಇನ್ನೇನು ದೇವಸ್ಥಾನ ಪ್ರವೇಶಿಸುವಷ್ಟರಲ್ಲಿ ಅವರನ್ನು ತಡೆಯಲು ಐವತ್ತು ಅರುವತ್ತು ಮಂದಿಯ ತಂಡ ಅಲ್ಲಿಗೆ ಬಂದಿತ್ತು. ಮಾತಿನ ಚಕಮಕಿ ವೈಪರೀತ್ಯಕ್ಕೆ ಹೋಗಿ, ಹೊಯ್‌ಕೈ ನಡೆದಿತ್ತು. ತಕ್ಷಣವೇ ಪೋಲೀಸರು ಲಾಠಿಚಾರ್ಜ್‌ಗೆ ಮುಂದಾಗಿದ್ದರು. ಈ ಗದ್ದಲದ ಮಧ್ಯೆ ಎಲ್ಲಪ್ಪನೂ ಸೇರಿದಂತೆ ನಾಲ್ಕೈದು ಮಂದಿ ದೇವಸ್ಥಾನದ ಒಳಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆ ಒಳಪ್ರವೇಶಿಸಿದವರನ್ನು ಇನ್ನೊಂದು ಗುಂಪಿನವರು ಹೊರ ಎಳೆದುಕೊಂಡು ಬಂದಿದ್ದರು. ಗಲಾಟೆ ಜಾಸ್ತಿಯಾದಾಗ ಕೆಲವರ ಬಂಧನವೂ ನಡೆಯಿತು.

ಎಲ್ಲಪ್ಪ ಈ ಗಲಾಟೆಯೆಲ್ಲಾ ಪೂರ್ತಿಯಾಗಿ ಮುಗಿಸಿಕೊಂಡು ಮರುದಿನ ಬೆಳಗ್ಗೆ ಮನೆ ತಲುಪಿದಾಗ ಅವನಪ್ಪ ಕರಿಯ ಕೆಂಡವಾಗಿದ್ದ. ಮಗ ಮಾಡಹೊರಟ ಕೆಲಸ ಅವನೆದೆಯನ್ನು ಉರಿಸಿತ್ತು. ಕರಿಯ ಮಗನನ್ನು ಬೈದು, ಸುಮ್ಮನಾಗುವಷ್ಟರಲ್ಲಿ ಯಕ್ಷಗಾನದ ಮಹಿಷಾಸುರನಂತೆ ರಾಮೇಗೌಡರು ಅಲ್ಲಿಗೆ ಬಂದರು. ಇನ್ನೊಂದು ವಾರದೊಳಗೆ ಕರಿಯ ಮಾಡಿರುವ ಅಷ್ಟೂ ಸಾಲವನ್ನು ತೀರಿಸದಿದ್ದರೆ ಸುಮ್ಮನಿರುವುದಿಲ್ಲ ಎಂದು ಅಬ್ಬರಿಸಿದರು. ಕರಿಯ ಅವರ ಕಾಲು ಹಿಡಿದು, ಪರಿಪರಿಯಾಗಿ ಬೇಡಿಕೊಂಡ ಬಳಿಕ ಒಂದು ವಾರವಿದ್ದದ್ದು ಅದು ಹೇಗೋ ಕಷ್ಟದಲ್ಲಿ ಒಂದು ತಿಂಗಳಾಯಿತು. ಸಾಲದ ವಿಚಾರದಲ್ಲಿ ಗೌಡರು ಇಷ್ಟು ಗಟ್ಟಿಯಾಗಿ ನಿಂತುಕೊಳ್ಳುವ ಧೈರ್ಯ ಮಾಡಿರುವುದಕ್ಕೆ ಕಾರಣವಿತ್ತು. ಎಲ್ಲಪ್ಪ ಅಕ್ಷರಸ್ಥ ಎನಿಸಿಕೊಳ್ಳುತ್ತಿರುವಾಗಲೇ ಎಚ್ಚರಗೊಂಡಿದ್ದ ಅವರು ತಮ್ಮ ಪರಿಚಯದ ವಕೀಲರನ್ನು ಹಿಡಿದು, ಸುಳ್ಳು ಸಾಲಪತ್ರವನ್ನು ಸಿದ್ಧಪಡಿಸಿದ್ದರು. ಆ ಸಾಲಪತ್ರದ ಪ್ರಕಾರ ಕರಿಯ ಎರಡು ಲಕ್ಷಗಳಷ್ಟು ಸಾಲವನ್ನು ಪಾವತಿಸಬೇಕಿತ್ತು.

ಸಾಲದ ಸುಳಿಯಿಂದ ಹೊರಬರುವುದು ಹೇಗೆಂದು ಎಲ್ಲಪ್ಪ ಚಿಂತಿಸುತ್ತಿದ್ದಾಗಲೇ ಬಂದ ದೂರವಾಣಿ ಕರೆ ಆತನಿಗೊಂದು ದಾರಿ ದೊರೆಯುವ ಸೂಚನೆ ನೀಡಿತು. ನಗರದ ಖಾಸಗಿ ಕಾಲೇಜೊಂದರಿಂದ ಬಂದಿದ್ದ ದೂರವಾಣಿ ಕರೆಯದು. ಸುಮಾರು ನಾಲ್ಕೈದು ತಿಂಗಳುಗಳ ಹಿಂದೆ ಪತ್ರಿಕೆಯಲ್ಲಿ ಬಂದ ಜಾಹೀರಾತನ್ನು ನೋಡಿ, ಎಲ್ಲಪ್ಪ ಉದ್ಯೋಗಕ್ಕೆ ಅರ್ಜಿ ಹಾಕಿದ್ದ. ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಬೇರ‍್ಯಾರೋ ಆಯ್ಕೆ ಆಗಿರಬೇಕು ಎಂದುಕೊಂಡಿದ್ದ ಎಲ್ಲಪ್ಪ ವಿಷಯವನ್ನೇ ಮರೆತುಬಿಟ್ಟಿದ್ದ. ಆದರೆ ಆಡಳಿತ ಮಂಡಳಿಯ ಶಿಫಾರಸ್ಸಿನ ಮೂಲಕ ಸಂದರ್ಶನವಿಲ್ಲದೆ ನೇರ ಆಯ್ಕೆ ಆಗಿದ್ದ ಉಪನ್ಯಾಸಕಿ ಅನಾರೋಗ್ಯದ ಕಾರಣದಿಂದ, ಸೇರಿದ ಎರಡೂವರೆ ತಿಂಗಳುಗಳಲ್ಲಿಯೇ ಕೆಲಸ ಬಿಡುವಂತಾಗಿತ್ತು. ಆದ್ದರಿಂದ ಈಗ ಎಲ್ಲಪ್ಪನನ್ನೂ ಒಳಗೊಂಡಂತೆ ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಕರೆಬಂದಿತ್ತು. ಸಂದರ್ಶನಕ್ಕೆ ನಾಲ್ಕು ದಿನಗಳಿದ್ದವು.

ಶಾಶ್ವತವಾದ ಉದ್ಯೋಗ ದೊರೆತರೆ ಗ್ರಾಮೀಣ ಸಹಕಾರಿ ಬ್ಯಾಂಕ್‌ನಿಂದ ಸಾಲ ದೊರೆಯುತ್ತದೆ. ಅಲ್ಲಿಂದ ಸಾಲ ಪಡೆದು ಗೌಡರ ಸಾಲ ತೀರಿಸಬೇಕು. ಋಣಮುಕ್ತನಾಗಬೇಕು ಎಂದು ಅಂದುಕೊಂಡ ಎಲ್ಲಪ್ಪನ ಕಣ್ಗಳಲ್ಲಿ ಹೊಸ ಉದ್ಯೋಗದ ಕನಸು ತುಂಬಿತ್ತು. ಉಳಿದ ನಾಲ್ಕು ದಿನಗಳಲ್ಲಿ ಚೆನ್ನಾಗಿ ಸಿದ್ಧತೆ ಮಾಡಿಕೊಂಡ. ಸಂದರ್ಶನವಿರುವ ಖಾಸಗಿ ಕಾಲೇಜು ತನ್ನ ಮನೆಯಿಂದ ತುಂಬಾ ದೂರದಲ್ಲಿ ಇದ್ದುದರಿಂದ ಸಂದರ್ಶನಕ್ಕೆ ತೊಂದರೆ ಆಗಬಾರದು ಎಂಬ ದೂರಾಲೋಚನೆಯಿಂದ ಸಂದರ್ಶನದ ಹಿಂದಿನ ದಿನವೇ ನಗರಕ್ಕೆ ಹೋಗಿ, ಲಾಡ್ಜ್‌ನಲ್ಲಿ ರೂಮು ಮಾಡಿ ನಿಂತ.

ಈ ಮೊದಲಿನ ಎಲ್ಲಾ ಸಂದರ್ಶನಗಳಿಗಿಂತಲೂ ಈ ಸಂದರ್ಶನ ಎಲ್ಲಪ್ಪನಿಗೆ ಮುಖ್ಯವಾಗಿತ್ತು. ತನ್ನನ್ನು ಸುತ್ತಿಕೊಳ್ಳುತ್ತಿರುವ ಗೌಡರ ಹಂಗಿನ ಪಾಶವನ್ನು ಕಡಿದುಕೊಳ್ಳುವುದಕ್ಕಾಗಿ ತತ್‌ಕ್ಷಣದ ಗೆಲುವು ಅವನಿಗೆ ಅನಿವಾರ್ಯವಾಗಿತ್ತು. ಸಂದರ್ಶನವನ್ನು ಚೆನ್ನಾಗಿ ನಿರ್ವಹಿಸಿದ ಎಲ್ಲಪ್ಪನಲ್ಲಿ ಆಯ್ಕೆ ಆಗಲೇಬೇಕೆಂಬ ತುಡಿತವಿತ್ತು. ಆಯ್ಕೆ ಆಗುತ್ತೇನೆಂಬ ಭರವಸೆಯಿತ್ತು. ಆಯ್ಕೆ ಆಗಲೇಬೇಕಾದ ಒತ್ತಡವಿತ್ತು. ಆಗಸ್ಟ್ 14ರಂದು ನಡೆದ ಸಂದರ್ಶನದಲ್ಲಿ ತಾನು ಆಯ್ಕೆ ಆದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನ ತನ್ನ ಪಾಲಿನ ಋಣಮುಕ್ತ ಬದುಕಿನ ನಾಂದಿದಿನವಾಗುತ್ತದೆ ಎಂಬ ಆಶಾವಾದ ಅವನಲ್ಲಿತ್ತು.

ಆದರೆ.......

ಆಯ್ಕೆ ಆಗಲಿಲ್ಲ!

ಸಂದರ್ಶಕರಾಗಿ ಕುಳಿತವರೆಲ್ಲ ಮೆಚ್ಚಿಕೊಂಡಿದ್ದರೂ ತಾನೇಕೆ ಆಯ್ಕೆ ಆಗಿಲ್ಲ ಎಂದು ಅಚ್ಚರಿಪಡುತ್ತಿದ್ದವನಿಗೆ ಉತ್ತರ ದೊರಕಿತ್ತು. ಸಂದರ್ಶಕರಾಗಿದ್ದು ಈತನ ಬೋಧನಾ ವಿಧಾನವನ್ನು ಮೆಚ್ಚಿಕೊಂಡಿದ್ದವರೊಬ್ಬರು ಅಭ್ಯರ್ಥನ ಪತ್ರದಲ್ಲಿದ್ದ ಈತನ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು. ಅವರು ಹೇಳಿದ್ದಿಷ್ಟು- ‘ನೀವೇ ಆಯ್ಕೆ ಆಗುವ ಸಾಧ್ಯತೆ ಇದ್ದದ್ದು. ನಾವಷ್ಟೂ ಜನ ನಿಮ್ಮ ಹೆಸರನ್ನೇ ಅಂತಿಮಗೊಳಿಸಿದ್ದೆವು. ಅಷ್ಟರಲ್ಲಿ ನಮ್ಮ ಎಂ.ಎಲ್.ಎ. ಇದ್ದಾರಲ್ಲ, ಕಾಳಿಂಗಪ್ಪ, ಅವರಿಂದ ನಮ್ಮ ಅಧ್ಯಕ್ಷರಿಗೆ ಕಾಲ್ ಬಂತು. ಕಾಳಿಂಗಪ್ಪನವರು ಒಂದಷ್ಟು ವರ್ಷಗಳ ಮೊದಲು ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿದ್ದವರು. ಈಗಲೂ ನಮ್ಮ ಕಾಲೇಜಿನಲ್ಲಿ ಅವರ ಮಾತು ನಡೆಯುತ್ತದೆ. ನೀವು ನಿಮ್ಮ ಊರಿನಲ್ಲಿ ಅದೇನೋ ಕ್ರಾಂತಿ ಮಾಡಹೊರಟ ವಿಚಾರ ಎಲ್ಲಾ ಹೇಳಿದರು. ನಿಮ್ಮನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡುವಂತಿಲ್ಲ ಎಂದರು. ನಮ್ಮ ಕಾಲೇಜಿನ ಲೆಕ್ಚರರ್ ಒಬ್ಬರು ನೀವು ಇಂಟರ್‌ವ್ಯೂಗೆ ಬಂದದ್ದನ್ನು ಆ ಕಾಳಿಂಗಪ್ಪ ಅವರಿಗೆ ತಿಳಿಸಿರಬೇಕು ಎಂದು ನನ್ನ ಅಂದಾಜು. ನಿಮಗೆ ಕೆಲಸ ದೊರೆಯುವುದು ಸಾಧ್ಯವೇ ಇಲ್ಲ’.

ಎಲ್ಲಪ್ಪನ ಕನಸು ನುಚ್ಚುನೂರಾಗಿತ್ತು. ಹೀಗೆ ತಲೆಬಿಸಿ ಏರಿಸಿಕೊಂಡ ಆತ ಮೈದಾನದ ಕಲ್ಲುಬೆಂಚಿನ ಮೇಲೆ ಬಂದು ಕುಳಿತಿದ್ದ.

*****
ಮೆರವಣಿಗೆಯ ಕಡೆಗೆ ದೃಷ್ಟಿಯನ್ನು ಹರಿಸಿದ್ದ ಎಲ್ಲಪ್ಪನಿಗೆ ಅಷ್ಟೂ ಜನರ ಮಧ್ಯೆ ಕಾಣಿಸಿದ್ದು ಎಂ.ಎಲ್.ಎ. ಕಾಳಿಂಗಪ್ಪ. ಬೆಳ್ಳನೆಯ ಪೈಜಾಮ, ಬೆಳ್ಳನೆಯ ಪಂಚೆ, ಕೊರಳ ಸುತ್ತ ಮಿರಿಮಿರಿ ಮಿಂಚುವ ತ್ರಿವರ್ಣದ ಶಾಲನ್ನು ಧರಿಸಿದ್ದ ಕಾಳಿಂಗಪ್ಪನ ತುಟಿ ತುಂಬಾ ನಗುವಿತ್ತು. ಎಲ್ಲರಿಗೂ ಕೈಮುಗಿದುಕೊಂಡು ಬರುತ್ತಿದ್ದವನು ಭಾರೀ ಒಳ್ಳೆಯವರಂತೆ ಕಾಣುತ್ತಿದ್ದ.

ಸಾಗಿಬಂದ ಮೆರವಣಿಗೆ ಎಲ್ಲಪ್ಪ ಕುಳಿತಿದ್ದ ಮೈದಾನದ ಮಧ್ಯಭಾಗದಲ್ಲಿ ಸಮಾವೇಶಗೊಂಡಿತು. ಅಲ್ಲೇ ಕುರ್ಚಿ ಮೇಲಿಟ್ಟಿದ್ದ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಕಾಳಿಂಗಪ್ಪ ಮಾತು ಶುರುವಿಟ್ಟುಕೊಂಡ. ಆತನ ಮಾತು ಕೇಳಿದ ಜನರು ಬೆಪ್ಪರಂತೆ ಚಪ್ಪಾಳೆ ತಟ್ಟುತ್ತಿದ್ದರು.

ಅಷ್ಟರಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನ ಜೊತೆಗೆ ಎಲ್ಲಪ್ಪ ಕುಳಿತಿದ್ದ ಕಲ್ಲುಬೆಂಚಿನಲ್ಲಿಯೇ ಬಂದುಕುಳಿತಳು. ಕಾಳಿಂಗಪ್ಪ ಪದೇ ಪದೇ ಹೇಳುತ್ತಿದ್ದ ‘...ಇಂದಿನ ಸ್ವಾತಂತ್ರ್ಯ ದಿನಾಚರಣೆ’, ‘ಸ್ವಾತಂತ್ರ್ಯ ದಿನದ ಈ ಶುಭಾವಸರದಲ್ಲಿ...’ ಮೊದಲಾದ ಮಾತುಗಳು ಆ ಐದು ವರ್ಷದ ಹುಡುಗನಲ್ಲಿ ಸೋಜಿಗ ಮೂಡಿಸಿರಬೇಕು. ಸ್ವಾತಂತ್ರ್ಯ ಎಂದು ಉಚ್ಛರಿಸಲು ಪ್ರಯತ್ನಿಸಿದ ಹುಡುಗ ಸರಿಯಾಗಿ ನಾಲಗೆ ಹೊರಳಿಸಲು ಸಾಧ್ಯವಾಗದೆ ಎರಡು ಮೂರು ಬಾರಿ “ಸೋತಂತ್ರ ದಿನ, ಸೋತಂತ್ರ ದಿನ, ಸೋತಂತ್ರ ದಿನ” ಎಂದು ಹೇಳಿದ. ಹುಡುಗನ ಈ ಮಾತು ಎಲ್ಲಪ್ಪನ ಕಿವಿಯಲ್ಲಿ ‘ಸೋತಂಥವರ ದಿನ’ವಾಗಿ, ‘ಸತ್ತಂಥವರ ದಿನ’ವಾಗಿ ಅನುರಣಿಸತೊಡಗಿತು.

ಅಷ್ಟರವರೆಗೂ ಕಾಳಿಂಗಪ್ಪನ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಎಲ್ಲಪ್ಪ. ‘ನಾವೆಲ್ಲಾ ಸೇರಿ ನಮ್ಮ ರಾಷ್ಟ್ರವನ್ನು ಜಾತ್ಯತೀತಗೊಳಿಸಲು ಪರಿಶ್ರಮಿಸಬೇಕಾಗಿದೆ. ಜಾತಿ ಅಸಮಾನತೆಯನ್ನು ತೊಡೆದುಹಾಕಿದಾಗಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಂತಾಗುತ್ತದೆ’ ಎಂಬ ಕಾಳಿಂಗಪ್ಪನ ಮಾತು ಇನ್ನಿಲ್ಲದಂತೆ ಕೆರಳಿಸಿತು. ಎದ್ದುನಿಂತು, ನೆಲದ ಕಡೆಗೆ ಬಾಗಿದವನು ಅಲ್ಲಿದ್ದುದರಲ್ಲೇ ದಪ್ಪನಾದ ಕಲ್ಲೊಂದನ್ನು ಎತ್ತಿಕೊಂಡು, ಕಾಳಿಂಗಪ್ಪ ನಿಂತು ಮಾತನಾಡುತ್ತಿದ್ದ ದಿಕ್ಕಿಗೆ ಬಲವಾಗಿ ಎಸೆದ...

*****
ಮರುದಿನದ ಪತ್ರಿಕೆಯಲ್ಲಿ ಇದೇ ಸುದ್ದಿ. ಎಂ.ಎಲ್.ಎ. ಕಾಳಿಂಗಪ್ಪನವರ ಮೇಲೆ ಕಲ್ಲಿನಿಂದ ದಾಳಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು, ಪೂರ್ವನಿಯೋಜಿತ ಕೃತ್ಯ ಇದೆಂಬ ಶಂಕೆ, ಹಿಂದೆಯೂ ಅನೇಕ ಬಾರಿ ಕಾಳಿಂಗಪ್ಪನವರಿಗೆ ಬೆದರಿಕೆ ಕರೆಗಳು ಬಂದಿದ್ದವು, ವಿರೋಧ ಪಕ್ಷದವರ ಹುನ್ನಾರ ಇರುವ ಸಾಧ್ಯತೆ, ಮುಂಬರುವ ಚುನಾವಣೆಯ ದೃಷ್ಟಿಯಿಂದಲೇ ಕಾಳಿಂಗಪ್ಪನವರನ್ನು ಗುರಿ ಮಾಡಲಾಗಿದೆ- ಹೀಗೆ ಬಗೆಬಗೆಯಲ್ಲಿ ಘಟನೆಯನ್ನು ವಿಶ್ಲೇಷಿಸಿದ ಪತ್ರಿಕೆಗಳು ವರ್ಣರಂಜಿತವಾಗಿದ್ದವು. ಕೆಲವು ಪತ್ರಿಕೆಗಳಂತೂ ಎಲ್ಲಪ್ಪನನ್ನು ವಿರೋಧ ಪಕ್ಷದ ಕಾರ್ಯಕರ್ತನೆಂದು ದಟ್ಟವಾಗಿ ಅನುಮಾನಿಸಿ ಬರೆದಿದ್ದವು. ಕಾಳಿಂಗಪ್ಪನವರ ಬೆಂಬಲಿಗರು ಎಲ್ಲಪ್ಪನಿಗೆ ಬುದ್ಧಿ ಕಲಿಸಬೇಕೆಂದು ಹಲ್ಲು ಕಡಿಯತೊಡಗಿದ್ದರು. ವಿರೋಧ ಪಕ್ಷದವರು, ಎಲ್ಲಪ್ಪನ ಬೆಂಬಲಕ್ಕೆ ನಿಂತರೆ ಮುಂದಿನ ಚುನಾವಣೆಯಲ್ಲಿ ತಮಗೇನಾದರೂ ಲಾಭವಿದೆಯೇ? ಎಂದು ತಲೆ ಖರ್ಚು ಮಾಡತೊಡಗಿದ್ದರು. ಪತ್ರಿಕೆಗಳು ಬಿಸಿ ಬಿಸಿ ಮಸಾಲೆದೋಸೆಗಳಂತೆ ಖರ್ಚಾಗುತ್ತಿದ್ದವು.

ಜೈಲಿನಲ್ಲಿ ಕುಳಿತಿದ್ದ ಎಲ್ಲಪ್ಪ ತನ್ನ ಹೋರಾಟವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಬಲಿಷ್ಠವಾದ ನೀಲನಕ್ಷೆಯೊಂದನ್ನು ಮನಸ್ಸಿನಲ್ಲಿಯೇ ಸಿದ್ಧಗೊಳಿಸತೊಡಗಿದ್ದ......

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT