ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒರಿಯಾ ಕಥೆ: ಇಪ್ಪತ್ತಮೂರನೆಯ ಸಾವು

Last Updated 9 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಗಾಂಧಾರಿ ರೋದಿಸಿದಳು. ತನ್ನ ಕೊಠಡಿಯಲ್ಲಿ ರೋದಿಸುತ್ತಿದ್ದ ಅವಳು, ಈಗ ತಂದೆಯವರು ತನಗೆ ಕರೆ ಕಳುಹಿಸುವುದಿಲ್ಲ, ತಾನು ತತ್ಕಾಲಕ್ಕೆ ಹೊರ ಹೋಗಿ ಮುಖ ತೋರಿಸುವಂಥ ಅಗತ್ಯವಾದ ಕೆಲಸವೂ ಒದಗಿ ಬರುವುದಿಲ್ಲ ಎಂದು ಯೋಚಿಸಿದಳು. ರಾಜಕುಮಾರಿಯ ಕಣ್ಣೀರು ಗೋಪನೀಯವಾಗಿದೆ. ಅಲ್ಲದೆ ಅವಳು ತನ್ನನ್ನು ತಾನು ಗಾಂಧಾರಿ ಎಂದು ಎಚ್ಚಿರಿಸಿಕೊಂಡಳು. ತಂದೆಯವರೊಂದಿಗೆ ರಾಜ್ಯದ ಎಲ್ಲರೂ, ತನ್ನ ಬಗ್ಗೆ ಕರುಣೆ ತೋರುವ ಹಕ್ಕು ಅವರಿಗೆ ಇಲ್ಲವೆಂಬುದನ್ನು ತಿಳಿಯಬೇಕು. ನಾನು ರಾಜಮನೆತನದ ಹೆಣ್ಣಾಗಿದ್ದೇನೆ, ಆದರೂ ಎಚ್ಚರ! ನಾನು ಅಂಧಕಾರದಂತೆ ಸ್ಥಿರ, ಅಲೆ-ರಹಿತ ಹಾಗು ದೃಢ. ಯಾರ ನೆರಳೂ ಸಹ ನನ್ನ ಮೇಲೆ ಬೀಳದು, ಯಾರ ಬೆಳಕಿನಿಂದಲೂ ನನ್ನ ತನು-ಮನ ಝಳಪಿಸಲಾಗದು. ನಾನು ಯಾರವಳೂ ಅಲ್ಲ, ನನಗೂ ನನ್ನವರಿಲ್ಲ. ಧನ್ಯವಾದ. ಆದರೆ ನಾನು ರೋದಿಸುವೆ. ನನ್ನ ಮನಸ್ಸು...! ಗಾಂಧಾರಿ ಬಿಕ್ಕಿ-ಬಿಕ್ಕಿ ರೋದಿಸಿದಳು, ಬಿಕ್ಕಳಿಗೆ ಹೆಚ್ಚಿದಾಗ ದಿಂಬಿಗೆ ಮುಖವನ್ನು ಒತ್ತಿ ಹಿಡಿದಳು, ಉಸಿರು ಕಟ್ಟಿದಾಗ ದಿಂಬನ್ನು ತೆಗೆದಳು. ಕಾಡಿಗೆ ಹಚ್ಚಿದ ನಯನಗಳಿಂದ ಶೂನ್ಯವನ್ನು ನೋಡಿದಳು, ಮತ್ತೆ ರೋದಿಸಿದಳು. ಈ ಬಾರಿ ಅವಳು, ಅಲ್ಪ ಆಯಸ್ಸಿನವರು ತನ್ನ ಬಳಿ ಎಂದೂ ಸುಳಿಯದಂತೆ, ತನ್ನೆಲ್ಲಾ ಕಣ್ಣೀರನ್ನು ಹೊರಗೆ ಚೆಲ್ಲುವಂತೆ ರೋದಿಸಿದಳು.

ಕಡೆಗೆ ಗಾಂಧಾರಿ ಶಾಂತಳಾದಳು, ನಂತರ ಶಯ್ಯೆಯಿಂದೆದ್ದು ಮುಖ ತೊಳೆದು ಸಾಮಾನ್ಯ ಸ್ಥಿತಿಗೆ ಬರಲು ಬಯಸಿದಳು. ಅಲ್ಲಿಂದಲೇ ತನ್ನ ವಿಧ್ವಸ್ತ ದೇಹವನ್ನು ದರ್ಪಣದಲ್ಲಿ, ಅದರೊಂದಿಗೆ ಸೆಣಸುವಂತೆ ನೋಡಿದಳು. ಏನು ನೋಡುತ್ತಿರುವೆ? ಹುಣ್ಣಿಮೆ ಚಂದಿರನಲ್ಲಿ ಮಾತ್ರವೇ ಹದಿನಾರು ಕಲೆಗಳಿರುವವೇ, ಅಮಾವಾಸ್ಯೆಯಲ್ಲಿ ಇರುವುದಿಲ್ಲವೇ? ಇಲ್ಲದಿದ್ದಲ್ಲಿ ಈ ಮುಖವನ್ನು ನೋಡುವುದಕ್ಕೂ ಮೊದಲೇ, ಸ್ಪರ್ಶಿಸುವುದಕ್ಕೂ ಮೊದಲೇ, ಅವರೆಲ್ಲರು ಹೀಗೆ ಮುಗ್ಧ-ಮೋಹಿತರಾಗಿ ತಡಬಡಿಸಿ ಬೀಳುತ್ತಿದ್ದರೆ? ಒಬ್ಬರಲ್ಲ, ಇಬ್ಬರಲ್ಲ, ಒಬ್ಬೊಬ್ಬರಂತೆ ಇಪ್ಪತ್ತೆರಡು ವೀರರು? ನಿರ್ದೋಷ ರಾಜಕುಮಾರರು?

ನನ್ನ ಸಮೀಪಕ್ಕೆ ಬರುವುದಕ್ಕೂ ಮೊದಲೇ ಅವರೆಲ್ಲರು ಸಾಯುವರು. ಶಾಸ್ತ್ರದಲ್ಲಿ ಬರೆಯಲಾಗಿದೆ. ನನ್ನ ರಾಶಿ-ನಕ್ಷತ್ರಗಳು ಇದನ್ನೇ ಬಯಸುತ್ತವೆ. ಏಕೆಂದರೆ ನಾನು ಸಾಮಾನ್ಯಳಲ್ಲ. ನಾನೆಷ್ಟು ಬ್ರಹ್ಮಳೋ, ಅಷ್ಟೇ ರಾಕ್ಷಸಿಯೂ ಹೌದು. ನನ್ನ ಹೆಸರು ಗಾಂಧಾರಿ.

ಗಾಂಧಾರಿ ಅತಿ ಅಭಿಮಾನದಿಂದ, ಆದರೆ ಅಸಡ್ಡೆಯಿಂದ ಗವಾಕ್ಷಿಯ ಬಳಿಗೆ ಬಂದು ನಿಂತು, ರಾಜ್ಯೋದ್ಯಾನದ ಸುಂದರ ಪ್ರಕಾಶವನ್ನು ನೋಡಲಾರಂಭಿಸಿದಳು. ಅಲ್ಲಿದ್ದ ಹಳದಿ, ಕೆಂಪು, ನಾನಾ ವಿಧದ ಹೂವುಗಳು, ದಟ್ಟ ಹಸಿರು ಹುಲ್ಲು, ಜೀವ-ಚೈತನ್ಯದಿಂದ ಹೊಳೆಯುತ್ತಿವೆ. ನಾನು ನೋಡಿದರೆ ಇವು ಬಾಡುವುದಿಲ್ಲ. ನನ್ನ ಸ್ಪರ್ಶದಿಂದ ಇವು ಸುಟ್ಟು ಹೋಗುವುದಿಲ್ಲವೇ? ಈ ಅಸಹಾಯಕ ಮನುಷ್ಯರು ಮಾತ್ರ ನನ್ನನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಹೇಡಿಗಳು, ನಪುಂಸಕರು, ಭಿಕ್ಷುಕರ ಗುಂಪಿನವರು. ನನ್ನನ್ನು ಗೆಲ್ಲುವಂಥ, ನನ್ನೆಲ್ಲಾ ಪಾಪ-ತಾಪದ ಕೆಟ್ಟ ಗ್ರಹಗಳನ್ನು ಆಚಮನ ಮಾಡಿ, ನನ್ನನ್ನು ತನ್ನೊಂದಿಗೆ ಕರೆದೊಯ್ಯುವಂಥ ಒಬ್ಬ ಮನುಷ್ಯನೂ ಈ ಗಾಂಧಾರ ದೇಶದಲ್ಲಿ ಅಥವಾ ಆರ್ಯಾವರ್ತದಲ್ಲಿ ಹುಟ್ಟಲಿಲ್ಲವೇ?

ಅಷ್ಟರಲ್ಲಿ ಅವಳ ತಂದೆ ಖುದ್ದು ರಾಜಾ ಗಾಂಧಾರಸೇನ ಉದ್ಯಾನದಲ್ಲಿ ಅಡ್ಡಾಡುತ್ತಿರುವುದನ್ನು ಗಾಂಧಾರಿ ನೋಡಿದಳು. ಆದರೆ ಅವರು ಒಂಟಿಯಾಗಿರಲಿಲ್ಲ. ಅವರೊಂದಿಗೆ ಇನ್ನೊಬ್ಬರಿದ್ದಾರೆ. ಅವರು ಮಹಾಮಂತ್ರಿಯಲ್ಲ. ಅಮಾತ್ಯರು ಮತ್ತು ಸಭಾಸದಸ್ಯರಲ್ಲಿ ಒಬ್ಬರಂತೆಯೂ ತೋರುವುದಿಲ್ಲ. ಹಾಗಾದರೆ ಆ ಸುಂದರ ಪುರುಷ ಯಾರು? ಅವರ ಪ್ರಶಸ್ತ ಹಣೆ, ತೀಕ್ಷ್ಣ ನಾಸಿಕಾ, ಆಳ ದೃಷ್ಟಿ, ಶಾಂತ ಮುಖ ಆಕರ್ಷಕವಾಗಿವೆ. ಅವರು ತಂದೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಅವರು ಏನೋ ಹೇಳುತ್ತಿರುವುದನ್ನು ತಂದೆಯವರು ಗಂಭೀರವಾಗಿ ಕೇಳುತ್ತಿರುವಂತಿದೆ? ಅವರು ಮುನಿಯಂತೆ ಕಾಷಾಯ ವಸ್ತ್ರವನ್ನು ಧರಿಸಿದ್ದಾರೆ. ಆದರೆ ಅವರು ಓರ್ವ ಛದ್ಮವೇಷದ ರಾಜಪುತ್ರರೆಂದು ಅನ್ನಿಸುತ್ತದೆ. ಬಹುಶಃ ರಾಜಪುತ್ರರೇ ಇರಬೇಕು...ಗಾಂಧಾರಿಯ ಹೃದಯದಲ್ಲಿ ಅಪೂರ್ವ ಮಥನದ ಅನುಭವವಾಯಿತು. ನನ್ನನ್ನು ದೂರಕ್ಕೆ ಕರೆದೊಯ್ಯುವ ಇಪ್ಪತ್ತಮೂರನೆಯ ಪುರುಷ ಇವನೇ ಆಗಿರಬಹುದು...

ಆದರೆ ಮಥನ ಧಸಕ್ಕನೆ ನಿಂತಿತು; ಅವರಿಬ್ಬರು ಸಮೀಪಕ್ಕೆ ಬಂದಾಗ, ಗಾಂಧಾರಿಯ ಕಿವಿಗಳಿಗೆ ಆ ಅತಿಥಿಯ ಮಾತುಗಳು ಬಿದ್ದಂತಾಯಿತು.

ಮಘೆ ನಕ್ಷತ್ರದ ಮೊದಲ ಮೂರು ಘಳಿಗೆಯಲ್ಲಿ ಜನ್ಮ ತಾಳಿದರೆ ಐದು ವರ್ಷಗಳವರೆಗೆ, ಮೂಲಾ ನಕ್ಷತ್ರದ ಮೊದಲ ಮೂರು ಘಳಿಗೆಯಲ್ಲಿ ಜನ್ಮ ತಾಳಿದರೆ ನಾಲ್ಕು ವರ್ಷ, ಜ್ಯೇಷ್ಠಾ ನಕ್ಷತ್ರದ ಕೊನೆಯ ಐದು ಘಳಿಗೆಯಲ್ಲಿ ಜನ್ಮ ತಾಳಿದರೆ ಎರಡು ವರ್ಷ ಮಾತ್ರ ದಂಡನೆ ಇರುತ್ತದೆ. ಆದರೆ ಕೃತ್ತಿಕಾ, ಅದೂ ವೃಷಭ ರಾಶಿಯಾದ್ದರಿಂದ...

ಹೋಗಲಿ ಬಿಡು. ನಾನೇನೂ ಕೇಳಬೇಕಿಲ್ಲ. ಬಹಳಷ್ಟು ಕೇಳಿದ್ದೇನೆ ನಿನ್ನ ರಾಶಿ-ನಕ್ಷತ್ರಗಳ ವಿಷಯಗಳನ್ನು. ಕೃತ್ತಿಕಾ, ವೃಷಭ ರಾಶಿ, ಅದರೊಂದಿಗೆ ಅಮಾವಾಸ್ಯೆ, ಅದಕ್ಕೇ ನಾನು ಬ್ರಹ್ಮಾಸುರಿ? ಗಾಂಧಾರಿ ದಢಾರನೆ ಗವಾಕ್ಷಿಯನ್ನು ಮುಚ್ಚಿದಳು, ಆದರೆ ಅಲ್ಲಿಂದ ಕದಲದಾದಳು. ರೋದಿಸಲು ಸಹ ಶಕ್ತಿಯನ್ನು ಒಟ್ಟು ಮಾಡದಾದಳು. ಅವಳು ಸೋಲಿನ ಅಂತಿಮ ಘಳಿಗೆಯಲ್ಲಿ ಸ್ಥಿರಗೊಂಡಿದ್ದಾಳೆಂದು ಅನ್ನಿಸಿತು. ‘ಆದರೆ ನೀನು ಸಹ ಅದೇ ಮಾತನ್ನೇ ಹೇಳಿದೆ? ನಾನು ಮನುಷ್ಯಳಲ್ಲವೇ? ಹೆಣ್ಣಲ್ಲವೇ? ತದನಂತರದಲ್ಲಿ ನಾನು ರಾಜಕುಮಾರಿಯಾಗುವೆ, ಯಾವ ರಾಶಿ-ನಕ್ಷತ್ರದ ಕೈಗಳಲ್ಲಿ ನನ್ನ ಪಾಪವನ್ನು ರೂಪಿಸಲಾಯಿತು? ಈ ಪಾಪದಲ್ಲಿ ಕಣ್ಣು, ಕಿವಿ, ಮೂಗು ಮತ್ತು ಲಜ್ಜೆಗೇಡಿ ಹೃದಯವನ್ನು ಯಾರಿಟ್ಟರು? ಯಾಕಿಟ್ಟರು?’ ಎಂದು ಗಾಂಧಾರಿ ಮನದಲ್ಲಿಯೇ ಗೊಣಗಿದಳು.

ತಾನು ಕ್ರಮೇಣ ನೆಲದ ಮೇಲೆ ಹೊರಳಿ ಬೀಳುತ್ತಿದ್ದನೇನೋ...ಆದರೆ ಹೀಗಾಗಲಿಲ್ಲ. ತಾನು ಗಾಂಧಾರಿ ಎಂದು ಅವಳು ಮತ್ತೆ ತನ್ನನ್ನು ತಾನು ಸಹಜಗೊಳಿಸಿಕೊಂಡಳು. ತನಗೆ ಕೊಲ್ಲಲು ಹೇಳಲಾಯಿತು, ಸಾಯಲು ಅಲ್ಲ. ಇಪ್ಪತ್ತೆರಡರಲ್ಲಿ ಕೊನೆಯಾಗಲಿಲ್ಲ, ಇನ್ನೂ ಇದೆ, ಇಪ್ಪತ್ತಮೂರು, ಇಪ್ಪತ್ತನಾಲ್ಕು, ಇಪ್ಪತ್ತೈದು...ಹೀಗೆ ಈ ಕೊಂಡಿ ಎಲ್ಲಿಯವರೆಗೆ ಸಾಗುವುದು? ಎಲ್ಲಿಗೆ ಕೊನೆಗೊಳ್ಳುವುದು?

ಉದ್ಯಾನದಲ್ಲಿನ ಓಡಾಟ ಮುಗಿದಿತ್ತು, ಗಾಂಧಾರಸೇನರು ಅತಿಥಿಯೊಂದಿಗೆ ತಮ್ಮ ಕೊಠಡಿಗೆ ಮರಳಿ ಹೋಗಿದ್ದರು. ಆದರೆ ಅತಿಥಿಯ ವಚನಾಮೃತ ಮುಗಿದಿರಲಿಲ್ಲ. ಅವರ ವಚನ-ಪ್ರವಾಹವನ್ನು ತಡೆಯುವುದು ರಾಜನಿಗೆ ಸಂಭವವಿರಲಿಲ್ಲ. ಏಕೆಂದರೆ ಅವರು, ಆಗಾಗ ಬರುವ ಸನ್ಯಾಸಿಗಳಾಗಿರಲಿಲ್ಲ ಅಥವಾ ನಾನಾ ವಿಧದ ಸಹಾಯದ ಅಪೇಕ್ಷೆಯೊಂದಿಗೆ ಬರುವವರಾಗಿರಲಿಲ್ಲ. ಅವರು ಮಹಾಯತಿ ಮಹಾಜ್ಞಾನಿ ವೇದವ್ಯಾಸರಾಗಿದ್ದು, ಇವರಿಲ್ಲದೆ ಸನಾತನ ಧರ್ಮ ಲಪ್ತವಾಗಿರುತ್ತಿತ್ತು. ಇವರ ಕೃಪೆಯಿಲ್ಲದಿದ್ದರೆ ಸಪ್ತದ್ವೀಪದ ಚಕ್ರವರ್ತಿ ರಾಜಾಧಿರಾಜ ಶಾಂತನುವಿನ ವಂಶ ಸಹ ನಾಶವಾಗಿರುತ್ತಿತ್ತು. ಧರ್ಮರಕ್ಷಕರಾದ, ವಂಶರಕ್ಷಕರಾದ ವೇದವ್ಯಾಸರು ಖುದ್ದು ಗಾಂಧಾರಸೇನರ ಬಳಿಗೆ ಸಲಹೆ ನೀಡಲು ಬಂದಿದ್ದಾರೆ. ಹೀಗಾಗಿ ಮೌನವಾಗಿ ಕೇಳುವುದನ್ನು ಹೊರತುಪಡಿಸಿ ರಾಜನ ಬಳಿ ಬೇರೆ ಮಾರ್ಗವಿರಲಿಲ್ಲ. ಅಲ್ಲದೆ ರಾಜನ ಮನಸ್ಸಿನಲ್ಲಿ ಆಸೆಯ ಕ್ಷೀಣ ಬೆಳಕೊಂದು ಮಿಣುಕುತ್ತಿತ್ತು- ಬಹುಶಃ ಮುನಿಗಳ ವಚನದಿಂದ ದಡವೊಂದು ಸಿಗಬಹುದು, ತಾನು ಗಾಂಧಾರಿಯ ವಿವಾಹವನ್ನು ನೆರವೇರಿಸಬಹುದು...ನೆಮ್ಮದಿಯಿಂದ ಇಹಲೋಕವನ್ನು ತ್ಯಜಿಸಬಹುದು. ಆದರೆ ಮುನಿವರ್ಯರು ಮಾತನಾಡುತ್ತಲೇ ಇದ್ದಾರೆ; ಎಷ್ಟು ಜನ್ಮಗಳ ನಂತರ ಮನುಷ್ಯನ ಜನ್ಮ ಲಭಿಸುವುದು, ಯಾವ ರಾಶಿ, ಯಾವ ನಕ್ಷತ್ರ, ಎಂಥ ಶಾಪವನ್ನು ಕೊಟ್ಟು ಅವನನ್ನು ಭೂಲೋಕಕ್ಕೆ ಕಳುಹಿಸಲಾಗುತ್ತದೆ. ಅಲ್ಲದೆ ಅವರು ಪದೇ-ಪದೇ, ಗಾಂಧಾರಿಯ ದೋಷ ಎಲ್ಲಾ ದೋಷಗಳಿಗಿಂತ ದೊಡ್ಡದು, ಅವಳಿಗಿಂತ ಮಿಗಿಲಾದ ದೋಷಿ ಬೇರಾರೂ ಇಲ್ಲ, ಯಾಕೆಂದರೆ ಇಪ್ಪತ್ತೇಳು ನಕ್ಷತ್ರಗಳಿಂದ ಆಯ್ದು ಅವಳು ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ್ದಾಳೆ, ಅದೂ ಜ್ಯೇಷ್ಠ ಮಾಸದಲ್ಲಿ, ಅದೂ ಕೃಷ್ಣ ಪಕ್ಷದಲ್ಲಿ, ಅದೂ ಅಮಾವಾಸ್ಯೆಯ ದಿನದಂದು ಎಂದು ತಿಳಿಯಪಡಿಸುತ್ತಿದ್ದಾರೆ. ಈ ಹುಡುಗಿಯಲ್ಲಿ ಅಸುರಕಲೆಗಳಲ್ಲಿ ಯಾವುದೂ ಉಳಿದಿಲ್ಲ. ಅಲ್ಲದೆ ವೃಷಭ ರಾಶಿಯಲ್ಲಿ ಜನಿಸಿದ್ದಾಳೆ, ಹೀಗಾಗಿ ರಾಕ್ಷಸಿ ಮಾತ್ರವಲ್ಲ, ಬ್ರಹ್ಮಾಸುರಿಯಾಗಿದ್ದಾಳೆ. ಅವರು, ‘ರಾಜನ್, ಇಂಥ ಕನ್ಯೆಯನ್ನು ನೀವು ಭೂಲೋಕಕ್ಕೆ ತಂದದ್ದಾದರೂ ಯಾಕೆ? ಈಗ ನಾನೇನು ಮಾಡಲು ಸಾಧ್ಯ, ಹೇಳಿ?’ ಎಂದು ಪ್ರಶ್ನಿಸುತ್ತಿರುವಂತೆ ತೋರುತ್ತದೆ. ಓಹ್! ಮುಂದೆ ಸಹಿಸಲು ಸಾಧ್ಯವಿಲ್ಲದ್ದರಿಂದ ಗಾಂಧಾರಸೇನರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು.

ವೇದವ್ಯಾಸರು ರಾಜನ ಕಳವಳವನ್ನು ಗಮನಿಸಿದರು, ಆದರೆ ಇದನ್ನು ಗಮನಿಸದ ಅವರ ಮುಖಮಂಡಲ ಅರಳಿತು, ಅವರು ಹೀಗೆಯೇ ಆಗಲಿ ಎಂದು ಬಯಸುತ್ತಿರುವಂತಿತ್ತು.

ಇತ್ತ ಗಾಂಧಾರಸೇನರು ಕಣ್ಣುಗಳನ್ನು ಮುಚ್ಚಿಕೊಂಡಿದ್ದರು. ‘ನನ್ನನ್ನು ಕ್ಷಮಿಸಿ, ಈ ಸ್ಥಿತಿಯಲ್ಲಿ ನಾನು ವಾಸ್ತವಿಕತೆಯನ್ನು ಎದುರಿಸಲಾರೆ’ ಎಂದು ಮನಸ್ಸಿನಲ್ಲಿ ಹೇಳಿಕೊಂಡರು. ಆದರೆ ಅವರಿಂದ ಸ್ಮೃತಿಯನ್ನು ಮುಚ್ಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಒಂದೊಂದಾಗಿ, ದುರದೃಷ್ಟೆಯನ್ನು ವರಿಸಲು ಜನ ಬಂದ ಬಗ್ಗೆ, ಒಬ್ಬರಿಗಿಂತ ಒಬ್ಬರು ಬಲಶಾಲಿ ರಾಜಕುಮಾರರಿದ್ದ ಬಗ್ಗೆ ಹಾಗೂ ಯಾರೂ ಸಹ ಅವಳ ಮಹಾಪಾಪದಿಂದ ಪಾರಾಗಲಿಲ್ಲ, ಎಲ್ಲರೂ ನೋಡು-ನೋಡುತ್ತಿದ್ದಂತೆಯೇ ಭಸ್ಮವಾದರು; ತೇಜಸ್ವಿ ಭಾನುವಂತ, ಉಡಂಗ ರಾಜ... ಎಲ್ಲರೂ ನೆನಪಾಗುತ್ತಿದ್ದರು. ಸೂಕ್ಷ್ಮ ಅಧರಗಳಲ್ಲಿ ಮಿಂಚಿನ ಕಾಂತಿ...ಅವರನ್ನು ನೋಡುತ್ತಲೇ ಅವರ ಎದೆಯಲ್ಲಿ ತಲೆಯಿಡುವಳು, ವೃದ್ಧ ತಂದೆಯ ಬೆಂದ ಎದೆಗೆ ಗಂಧದ ಲೇಪನವಾಗುವುದುದೆಂದು ತೋರುತ್ತಿತ್ತು. ಆದರೆ ಆದದ್ದೇನು? ವರಮಾಲೆ ಕೊರಳಿಗೆ ಹೋಗುವುದಕ್ಕೂ ಮೊದಲೇ, ಅದು ಗಾಂಧಾರಿಯ ಕೈಯಿಂದ ತಪ್ಪಿತು. ಏಕೆಂದರೆ ಭಾನುವಂತರ ಮುಖ ನೋಡು-ನೋಡುತ್ತಿದ್ದಂತೆಯೇ ಬಾಡಿತು, ಬೂದಿಯಂತಾಯಿತು, ಅಕಸ್ಮಾತ್ ಭೂತವನ್ನು ನೋಡಿದಂತೆ ಹಾಗೂ ಹೂವಿನ ಎಸಳೊಂದು ಅವರ ಶರೀರವನ್ನು ಸ್ಪರ್ಶಿಸಬೇಕೆಂದಾಗಲೇ, ಉಡಂಗ ರಾಜ ಅಲ್ಲಿಯೇ ನೆಲದ ಮೇಲೆ ಕುಸಿದು ಬಿದ್ದರು. ಸತ್ತ ನಂತರವೂ ಅವರ ಕಣ್ಣುಗಳು ತೆರದಿದ್ದವು, ಎರಡು ಪುತ್ಥಳಿಗಳು ಭಯದಿಂದ ನಿಂತಲ್ಲಿಯೇ ನಿಂತಂತೆ, ಅಲ್ಲಿಯೇ ಸ್ಥಿರವಾಗಿ ಉಳಿದಿದ್ದವು. ತನ್ನ ಮಗಳು ರಾಕ್ಷಸಿ, ಪಿಶಾಚಿನಿಯಂತೆ. [ಇವಳು ರಾಕ್ಷಸಿ, ಪಿಶಾಚಿನಿ ಅಲ್ಲ, ತಮ್ಮ ಒಡತಿ ಬ್ರಹ್ಮ ರಾಕ್ಷಸಿ ಎಂಬುದನ್ನೂ ರಾಜರು ಅರ್ಥಮಾಡಿಕೊಳ್ಳದಾದರು.]

ಗಾಂಧಾರಸೇನರು ವಿರೋಧಿಸದಾದರು. ಯಾಕೆಂದರೆ ಸ್ವಲ್ಪವೇ ಹೊತ್ತಿನಲ್ಲಿ ಭಾವಿ ಅಳಿಯರು ಆಗಮಿಸಿದರು. ಮಹಾರಾಷ್ಟ್ರದ ರಾಜ ವಿರೂಪಾಕ್ಷರಾಗಿದ್ದ ಅವರ ಭುಜಗಳಲ್ಲಿ ನೂರು ಸಿಂಹಗಳ ಶಕ್ತಿಯಿತ್ತು. ದಟ್ಟ ಕೃಷ್ಣವರ್ಣದ ಕೇಶ, ವಿಶಾಲ ಮೀಸೆಗಳನ್ನು ಹೊಂದಿದ್ದ ಅವರು ವರಮಾಲೆಯನ್ನು ಧರಿಸಲು ಬಂದಿಲ್ಲ, ಮಾಲೆಯ ಸಹಿತ ಗಾಂಧಾರಿಯನ್ನು ಎತ್ತಿಕೊಂಡು ಹೋಗಲು ಬಂದಿದ್ದಾರೆಂದು ತೋರುತ್ತಿತ್ತು. ಆದರೆ ಗಾಂಧಾರಿ ಅವರ ಸಮೀಪಕ್ಕೆ ಬಂದೊಡನೆಯೇ ಅವರಿಗೇನಾಯಿತೋ, ಅವರು ಗಟ್ಟಿಯಾಗಿ ಚೀರಿ, ಕತ್ತರಿಸಿದ ಮರದಂತೆ ಕೆಳಗೆ ಬಿದ್ದರು. ಅವರು ಮೊದಲೇ ಮರಣ ಹೊಂದಲು ಬಯಸುತ್ತಾರೆ, ಗಾಂಧಾರಿ ತಮ್ಮನ್ನು ಸ್ಪರ್ಶಿಸದಿರಲಿ ಎಂಬಂತೆ ಅವರ ನಾಲಿಗೆ ಹೊರ ಬಂದಿತ್ತು.

ಹೀಗೆ ಒಬ್ಬೊಬ್ಬರಂತೆ ಎಲ್ಲರೂ ಗಾಂಧಾರಸೇನರ ಚೈತನ್ಯಕ್ಕೆ ಒಂದೊಂದಾಗಿ ಪ್ರಹಾರವೆಸಗುವಂತೆ ಸತ್ತರು...ಅವರೆಲ್ಲರೂ, ‘ನೀವೇ ಬ್ರಹ್ಮಾಸುರಿಯ ತಂದೆಯಲ್ಲವೇ? ಇನ್ನೂ ನೀವು ಬದುಕುತ್ತಿದ್ದೀರ? ನಿಮಗೆ ಲಜ್ಜೆಯಾಗುತ್ತಿಲ್ಲವೇ?’ ಎಂದು ಪ್ರಶ್ನಿಸುವಂತೆ ತೋರುತ್ತಿತ್ತು.

‘ಲಜ್ಜೆಯಾಗುತ್ತಿಲ್ಲವೇ ನಿನಗೆ? ಮುನಿವರ್ಯರು ಏನೆಂದು ಹೇಳುತ್ತಿದ್ದಾರೆಂದು ನೀನು ಕೇಳುತ್ತಿಲ್ಲವೇ?’
ಈಗ ಯಾವುದನ್ನು ನಿರೀಕ್ಷಿಸಲಾಗುತ್ತಿದೆ? ನಿನ್ನ ಮುದ್ದು ಮಗಳು, ಬ್ರಹ್ಮಾಸುರಿ ನಿನ್ನೊಂದಿಗೆ ಮಾತನಾಡಲು ಬರುವಳೇ? ಅವಳ ಕ್ರೋಧಾಗ್ನಿಯನ್ನು ಸಹಿಸುವೆಯಾ?
ಅಥವಾ ಇಪ್ಪತ್ತಮೂರನೆಯ ಬಾರಿಗೆ ಮತ್ತೊಬ್ಬ ನಿನ್ನ ಮಗಳ ಕೈ ಹಿಡಿಯಲು ಬರುವನೆಂದು ಯೋಚಸುವೆಯಾ?...
ಅಷ್ಟರಲ್ಲಿ ಅವರು ಒಮ್ಮೆಲೆ ಚಪ್ಪಾಳೆ ತಟ್ಟಿ ನಕ್ಕರು. ಈ ಪ್ರಚಂಡ ಚಪ್ಪಾಳೆಯನ್ನು ಕೇಳಿ ಗಾಂಧಾರಸೇನರು ಅಸಹಜ ಕಾರ್ಯವೊಂದನ್ನು ಮಾಡಿದರು. ಅವರು ಸಮೀಪದಲ್ಲಿ ಕೂತಿದ್ದ ಮುನಿವರ್ಯರನ್ನು ತಡಕಾಡಿ, ಅವರ ಅಂಗೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಂತರ ಆಸನದಲ್ಲಿ, ಮೂರ್ಛೆಗೊಂಡಂತೆ ಹೊರಳಿ ಬಿದ್ದರು.

ಮುನಿವರ್ಯರು ಅವರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿಸಿದರು. ಅವರು ಸುಪ್ರಸನ್ನರಾಗಿರುವ ಬಗ್ಗ ಕಿಂಚಿತ್ ಅನುಮಾನವೂ ಇಲ್ಲ. ಇದರಿಂದ, ಮಹಾಯತಿ ವ್ಯಾಸರಿಗೆ ಇನ್ನೊಬ್ಬರ ದುಃಖ-ಕಷ್ಟವನ್ನು ನೋಡಲು ಹಿತವೆನಿಸುತ್ತದೆ ಎಂದು ಭಾವಿಸಬಾರದು. ಅವರು ಪರಮಜ್ಞಾನಿಯಾದ್ದರಿಂದ ಸಂಪೂರ್ಣವಾಗಿ ಒಣಗಿದ ನಂತರವೇ ಮಣ್ಣು, ನೀರನ್ನು ಕುಡಿಯಬಲ್ಲದು ಎಂಬುದು ಅವರಿಗೆ ಗೊತ್ತಿದೆ. ಸ್ವರ್ಗ ಸುಳ್ಳಾಗಲಾರದು ಎಂದು ಅನ್ನಿಸುತ್ತದೆ. ಏಕೆಂದರೆ ಸ್ವರ್ಗ ಲಭಿಸದಿದ್ದಾಗ ಅಥವಾ ಮೇಲೆ ಹತ್ತುವಾಗ ಜಾರಿದಾಗ್ಯೂ, ಮತ್ತೂ ಕೆಳಗೆ ಹೋಗುವ ಭಯ ಉಳಿಯಲಾರದು. ಅತೀವ ಕಷ್ಟವನ್ನು ಅನುಭವಿಸದೆ ಕೃಷ್ಣ ಎಲ್ಲಿ ಸಿಗುವನು? ಹೀಗಾಗಿ ಅವರು ಆನಂದದಿಂದ, ಕರುಣೆಯ ಸ್ವರದಲ್ಲಿ ಹೇಳಿದರು, “ರಾಜನ್, ಆಸೆಯೂ ಇದೆ, ಉಪಾಯವೂ ಇದೆ.”

ಗಾಂಧಾರಸೇನರು ಮುನಿಯನ್ನು ಉದ್ವೇಗದಿಂದ ನೋಡಿದರು. ಬೇರೆಯವರಾಗಿದ್ದರೆ, ಈ ಮನುಷ್ಯ ನನ್ನನ್ನು ಮೂರ್ಖನನ್ನಾಗಿ ಮಾಡುತ್ತಿರುವನೋ ಅಥವಾ ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿರುವನೋ, ಇವನಿಗೆ ಶಿರಚ್ಛೇದ ಉಚಿತವೋ, ಅಲ್ಲವೋ ಎಂದು ಯೋಚಿಸುತ್ತಿದ್ದರು. ಆದರೆ ಆ ಇನ್ನೊಬ್ಬ ವ್ಯಕ್ತಿ ಮಹಾಮುನಿ ವೇದವ್ಯಾಸರಾಗಿದ್ದರು; ಗಾಂಧಾರಸೇನರು ಆಶ್ಚರ್ಯ ಮತ್ತು ಅತಿ ಮುಗ್ಧತೆಯಿಂದ ನೋಡಿದರು. ನಂತರ ವ್ಯಾಸರು ಮೆಲ್ಲನೆ ಹೇಳಿದರು-
“ಗೋಲಕ ವೃಕ್ಷ?”

“ಹಾಂ...?”

“ಸಹಾಡಾ [ವೃಕ್ಷವೊಂದರ ಹೆಸರು] ಮರ?”

ರಾಜನ ವಿಸ್ಮಯ ಮತ್ತೂ ಹೆಚ್ಚಿದ್ದನ್ನು ಕಂಡು ಮುನಿಗಳು ಪ್ರಸನ್ನರಾದರು. ಅವರು ಮೃದುವಾಗಿ ಮುಗುಳ್ನಕ್ಕರು. ಅಶಿಕ್ಷಿತನಿಗೆ ಅಕ್ಷರಾಭ್ಯಾಸ ಮಾಡಿಸಿದಂತೆ ತಿಳಿ ಹೇಳಿದರು, ‘ರಾಜನ್, ಈ ವೃಕ್ಷದ ಮಹಿಮೆ ನಿಮಗೆ ತಿಳಿದಿಲ್ಲ. ಕೇಳಿ, ಹೇಳುತ್ತೇನೆ.’

ಗಾಂಧಾರಸೇನರು ಕೇಳಲಾರಂಭಿಸಿದರು. ಆಖ್ಯಾನ ಆರಂಭವಾಗುವುದಕ್ಕೂ ಮೊದಲೇ ಅಲ್ಪಜ್ಞಾನದ ಪರಾಕಾಷ್ಠೆಯನ್ನು ಪ್ರದರ್ಶಿಸುತ್ತಾ ಹೇಳಿದರು, ‘ಆ ವೃಕ್ಷ ನಮ್ಮ ಅರಮನೆಯ ನಡುವೆಯಿದೆ. ನಾನು ನಿತ್ಯ ಅದನ್ನು ಪೂಜಿಸುತ್ತೇನೆ. ಏಕೆಂದರೆ ಅದು ದೇವರ ರಥದ ಚಕ್ರವೆಂದು ಕೇಳಿದ್ದೇನೆ.’

ಈ ಮಾತಿಗೆ ಮುನಿಗಳು ಮುಗುಳ್ನಗುತ್ತಾ ಹೇಳಿದರು, ‘ಅದರ ಮಹತ್ವ ಇಷ್ಟರಿಂದಲೇ ಕೊನೆಗೊಂಡಿಲ್ಲ, ಸ್ವತಃ ಮಹಾದೇವರು ಸಹ ಈ ವೃಕ್ಷದೊಂದಿಗಿನ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಕೇಳಿ.’

ಈ ಬಾರಿ ಗಾಂಧಾರಸೇನರು ಮೌನವಾಗಿದ್ದು, ಕೇಳಲಾರಂಭಿಸಿದರು.

‘ಒಂದು ದಿನ ಮಹಾದೇವರು ವೃಷಭ ವಾಹವನ್ನೇರಿ ದಿಗ್ವಿಜಯಕ್ಕೆ ಹೊರಟಿದ್ದರು. ನಾನಾ ದೇಶ-ವಿದೇಶಗಳನ್ನು ಸುತ್ತಿದ ನಂತರ ಅವರು ವೈತರಣಿ ನದಿಯ ತೀರಕ್ಕೆ ಬಂದರು. ಅಲ್ಲಿ ಎಡಗಡೆಯಲ್ಲಿ ಒಂದು ಸಹಾಡಾ ವೃಕ್ಷವನ್ನು ನೋಡಿದರು. ವೃಷಭ ಅದರ ಎಲೆಯೊಂದನ್ನು ಹಿಡಿದು ಹಣೆಗೊತ್ತಿಕೊಳ್ಳುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಏನು ವಿಷಯ? ಎಂದು ವೃಷಭನನ್ನು ಕೇಳಿದಾಗ ಅದು ಹೇಳಿತು, ‘ನಮ್ಮ ಎಡ ಭಾಗದಲ್ಲಿ ಸಹಾಡಾದ ವೃಕ್ಷವಿದ್ದರೆ, ಅದರ ಎಲೆಯನ್ನು ಹಣೆಗೆ ಒತ್ತಿಕೊಳ್ಳಬೇಕು, ಏಕೆಂದರೆ ಅದರಿಂದ ಅಮೃತ ಲಭ್ಯವಾಗುತ್ತದೆ. ಹಸಿವು-ನೀರಡಿಕೆಗಳು ಶಮನಗೊಳ್ಳುತ್ತವೆ, ಅಭಾವಗಳು ದೂರವಾಗುತ್ತವೆ’. ಮಹಾದೇವರು ಆಶ್ಚರ್ಯದಿಂದ ಹೇಳಿದರು, ‘ಹೀಗೋ?’ ನಂತರ ಅವರು ಮತ್ತೆ ಅಡ್ಡಾಡಲು ಹೋದರು, ಹದಿನಾಲ್ಕು ಭುವನಗಳಲ್ಲಿ ಚಲಿಸಿದರು, ಆದರೆ ವೃಷಭಕ್ಕೆ ಎಲ್ಲಿಯೂ ತಿನ್ನುವ ಅವಕಾಶವನ್ನು ಕೊಡಲಿಲ್ಲ, ನೀರು ಮತ್ತು ಹುಲ್ಲಿನ ಸಮೀಪವೂ ಸುಳಿಯಲಿಲ್ಲ. ಅತ್ತ ಉಮಾ ಪತಿಯ ನಿರೀಕ್ಷೆಯಲ್ಲಿ ಕಳವಳಗೊಂಡಳು. ಹದಿಮೂರು ಗಳಿಗೆ ಕಳೆದ ನಂತರ ಮಹಾರಾಣಿ ಉಮಾ ಊಟ ಮಾಡಲು ಕೂತಳು; ಖೀರು-ಮೃಷ್ಟಾನ್ನಗಳನ್ನು ಯಥಾವಿಧಿ ಸ್ವರ್ಣ ಪಾತ್ರೆಗಳಲ್ಲಿ ತುಂಬಿ ಊಟ ಮಾಡಲಾರಂಭಿಸಿದಳು. ಆದರೆ ಮೂರು ತುತ್ತು ಬಾಯಿಗೆ ಹಾಕಿಕೊಂಡಿದ್ದಳು, ಅಷ್ಟರಲ್ಲಿ ದುಡಿ ‘ಡಮ್-ಡಮ್’ ಎಂದು ಬಾರಿಸಿತು. ಇದೇನು ಒಡೆಯರು ಬಂದರು? ಉಮಾ ಲಜ್ಜೆಯಿಂದ ನೀರಾದಳು, ಅವಳು ಎದ್ದು ನಿಂತಳು. ಎಂಜಲನ್ನು ಏನು ಮಾಡುವುದು, ಎಲ್ಲಿಡುವುದು ಎಂದು ಯೋಚಿಸದಾದಳು. ಅಷ್ಟರಲ್ಲಿ ಉಪಾಯವೊಂದು ಹೊಳೆಯಿತು. ವೃಷಭವು ತಿನ್ನುವ ಕೊಳಗದಲ್ಲಿ ಅಡಗಿಸಿಡುವುದು ಅನುಚಿತವಾಗದು. ಅತ್ತ ವೃಷಭವನ್ನು ಕೊಳಗದ ಬಳಿ ಅದರ ನಿರ್ದಿಷ್ಟ ಕಂಭಕ್ಕೆ ಕಟ್ಟಿ ಹಾಕಲಾಯಿತು. ಮಹಾದೇವರು ವೃಷಭಕ್ಕೆ ತಿನ್ನಲು ಹಿಂಡಿ, ಹುಲ್ಲು, ನೀರು ಇತ್ಯಾದಿಗಳನ್ನು ಕೊಡಬಾರದೆಂದು ಆದೇಶಿಸಿದರು. ವೃಷಭ, ಇದು ತನಗೆ ಶಿಕ್ಷೆಯಲ್ಲ, ತನ್ನ ಪರೀಕ್ಷೆ, ಎಲ್ಲವೂ ಪ್ರಭುವಿನ ಲೀಲೆ ಎಂದು ತಿಳಿಯಿತು. ಬಹುಶಃ ಹಳಸಿದ ಹಿಂಡಿ ಬಿದ್ದಿದೆ ಎಂದು ಯೋಚಿಸಿ ಕೊಳಗಕ್ಕೆ ಬಾಯಿಯನ್ನು ಹಾಕುತ್ತಲೇ [ಮುನಿವರ್ಯರು ತಡೆದರು, ರಾಜನೇ ಖುದ್ದು ಕೊಳಗಕ್ಕೆ ಬಾಯಿ ಹಾಕುವವನಿದ್ದಾನೆ, ಮುನಿಗಳು ಅವರಿಗೆ ಧೈರ್ಯವನ್ನು ಕಳೆದುಕೊಳ್ಳದಂತೆ ಹೇಳುತ್ತಿದ್ದಾರೆ ಎನ್ನುವಂತೆ ನೋಡಿದರು.] ಅಮೃತ! ದೇವಿಯ ಅಧರಗಳಿಂದ ಸ್ಪರ್ಶಗೊಂಡ ಖೀರು-ಕಜ್ಜಾಯದ ಪ್ರಸಾದ! ರಾಜನ್, ಸಹಾಡ ವೃಕ್ಷದ ಮಹಿಮೆಯನ್ನು ನೋಡಿದಿರ? ನಂತರ ರಾತ್ರಿ ಕಳೆದ ನಂತರ ಪ್ರಭುಗಳು ವೃಷಭನನ್ನು ನೋಡಲು ಹೋಗಿದ್ದು, ಅದರ ಬಗ್ಗೆ ಕರುಣೆ ತೋರಿದ್ದು, ಸಹಾಡಾ ವೃಕ್ಷವನ್ನು ಪೂಜಿಸಿ ಅದರಿಂದ ದೊರೆತ ಫಲದ ಬಗ್ಗೆ ಕೇಳಿದ್ದು, ವೃಷಭ ಗದ್ಗದಿತಗೊಂಡು ಹೇಳಿದ್ದು, ಪ್ರಭುಗಳು ಆಶ್ಚರ್ಯಗೊಂಡಿದ್ದು...ಇದನ್ನೆಲ್ಲಾ ವರ್ಣಿಸುವ ಅಗತ್ಯವಿದೆಯೇ?”

ಗಾಂಧಾರಸೇನರು ತಲೆಯಾಡಿಸಿದರು. ಅಂದರೆ ಅವರು ಇನ್ನೇನು ಕೇಳುವುದಿರಲಿಲ್ಲ. ಅವರ ಹೊಟ್ಟೆ ತುಂಬಿತ್ತು. ಆದರೆ ಕ್ಷಣಕಾಲದ ನಂತರ ಅವರ ಬಾಯಿಂದ ‘ಆದರೆ’ ಎಂಬ ಶಬ್ದ ಹೊರಟಿತು.

ಮುನಿವರ್ಯರು ರಾಜನಿಗೆ ಕಿಂಚಿತ್ ಸಂದೇಹವನ್ನೂ ಹೆಚ್ಚಿಸದೆ, ಅದನ್ನು ಬೇರು ಸಮೇತ ನಾಶ ಮಾಡಲೋಸುಗ ಮುಗುಳ್ನಗುತ್ತಾ ಹೇಳಿದರು, ‘ಆದರೆ ಏನು ರಾಜನ್? ಯಾವ ವೃಕ್ಷ ಸ್ವತಃ ಮಾಹಾದೇವರ ಕುತೂಹಲವನ್ನು ಹೆಚ್ಚಿಸಿತೋ ಹಾಗೂ ತನ್ನ ಮಹಿಮೆಯನ್ನು ಪ್ರಮಾಣೀಕರಿಸಿತೋ, ಅದರೆದುರು ತುಚ್ಛ ಸಾವು ಹೋಗಬಲ್ಲದೆ?’.

ಗಾಂಧಾರಸೇನರ ಸಂದೇಹ ದೂರವಾಯಿತು. ‘ನಿಜ! ಇಷ್ಟು ದೊಡ್ಡ ರಾಜನಾಗಿದ್ದಾಗ್ಯೂ ನಾನು ಇಷ್ಟನ್ನೂ ತಿಳಿಯಲಾಗುತ್ತಿರಲಿಲ್ಲವೇ? ಹುಟ್ಟು-ಸಾವು, ಪ್ರಾಣಿ ಜಗತ್ತಿನ ವ್ಯವಸ್ಥೆ, ವರ್ಗ-ಸಮಸ್ಯೆ, ದೇವರ ಸುಖಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದೆ? ತನ್ನ ಜಾಗ ಯಾವುದೆಂಬುದನ್ನು ಯಮಧರ್ಮರಾಯ ಅರಿಯನೇ?’

ತದನಂತರ, ಗಾಂಧಾರಿಯ ವಿವಾಹ ಸಹಾಡಾ ವೃಕ್ಷದೊಂದಿಗೆ ನೆರವೇರುವುದು ಎಂದು ನಿರ್ಧಾರವಾಯಿತು.

ಗಾಂಧಾರಿ ಇಪ್ಪತ್ತಮೂರನೆಯ ಬಾರಿ, ಮೇಲೆ ತಿಳಿಸಿದ ಪಾಪ-ನಾಶಕನ ಕೊರಳಿಗೆ ವರ ಮಾಲೆಯನ್ನು ಹಾಕುವಳು ಎಂದು ನಿರ್ಧರಿಸಲಾಯಿತು. ನಂತರ ಏನಾಗುವುದು, ವೃಕ್ಷದೊಂದಗೆ ವಿವಾಹವಾದ ನಂತರ ಏನಾಗುವುದು ಅಥವಾ ಏನು ಮಾಡಬೇಕು ಇತ್ಯಾದಿ ಪ್ರಾಸಂಗಿಕ ಪ್ರಶ್ನೆ ರಾಜನ ಮನಸ್ಸಿನಲ್ಲಿ ಉದ್ಭವಿಸಿದಾಗ್ಯೂ, ಅದನ್ನು ಅವರು ನೋಡಿಯೂ ನೋಡದಂತಿದ್ದರು. ಮುನಿವರ್ಯರಿಗೆ ಗೊತ್ತಿದೆ, ಅವರೇ ನನಗೆ ಮಾರ್ಗ ತೋರಿಸಿದ್ದಾರೆ, ಇದೆಲ್ಲಿಗೆ ಹೋಗಿ ಕೊನೆಗೊಳ್ಳುವುದು, ಹೇಗೆ ಕೊನೆಗೊಳ್ಳುವುದೆಂಬುದು ಅವರಿಗೇ ಗೊತ್ತಿದೆ.

ಆದರೆ ಗಾಂಧಾರಿ? ಗಾಂಧಾರಿ ಇದಕ್ಕೆ ಸಿದ್ಧಳಾಗುವಳೇ?

ಗಾಂಧಾರಸೇನರು! ನೀವು ತಂದೆ ಮಾತ್ರವಲ್ಲ, ರಾಜರೂ ಹೌದು, ರಾಜರಲ್ಲ, ತಂದೆಯೂ ಹೌದು. ನಿಮ್ಮ ಮಗಳನ್ನು, ಸಹಾಡಾ ವೃಕ್ಷಕ್ಕೆ ಒಪ್ಪಿಸುವಂಥ ಅಲೌಕಿಕ ಘಟನೆಯನ್ನು ನೀವು ಅಲ್ಲಗೆಳೆಯಲಾರಿರ? ತ್ರೇತಾಯುಗದ ರಾಮ-ರಾವಣ ಮುಂತಾದ ರಾಜರುಗಳು ಅದೆಷ್ಟು ಮಂತ್ರ-ಮಾಟವನ್ನು ಮಾಡಿ, ಯುಗ-ಯುಗದವರೆಗೆ ಕೀರ್ತಿವಂತರಾದದ್ದು ನೆನಪಿದೆಯಲ್ಲ? ಗಾಂಧಾರಸೇನರು ತಮಗೆ ತಾವೇ ವಿಶ್ವಾಸವನ್ನು ಕೊಟ್ಟುಕೊಂಡು, ವ್ಯಾಸಮುನಿಗಳಿಂದ ಆದಷ್ಟು ಶೀಘ್ರ ಬೀಳ್ಕೊಂಡು ಅಂತಃಪುರಕ್ಕೆ ಹೊರಟರು.

ಗಾಂಧಾರಿಯ ತಂದೆ ಒಪ್ಪದಂಥ ಸೂಚನೆ ಈ ಮೊದಲೇ ಲಭಿಸಿರಲಿಲ್ಲ ತಾನೇ? ಒಬ್ಬೊಬ್ಬರಂತೆ ಇಪ್ಪತ್ತೆರೆಡು ಬಾರಿ ಅವಳಿಗೆ, ‘....ಇಂಥ ರಾಜರು ನಿನ್ನೊಂದಿಗೆ ವಿವಾಹವಾಗಲು ಬರುತ್ತಿದ್ದಾರೆ, ಅವರಿಗೆ ವರಮಾಲೆಯನ್ನು ಹಾಕಬೇಕು’ ಎಂದು ಹೇಳಲಾಯಿತು. ಗಾಂಧಾರಿ, ‘ಸರಿ’ ಎಂದಳು. ಅಲ್ಲದೆ ಎಂದೂ ವಿರೋಧಿಸಲಿಲ್ಲ. ನನ್ನ ಶರೀರ ಕಲ್ಲಿನಿಂದಾಗಿದೆಯೇ? ಎಂದು ಹೇಳಲಿಲ್ಲ. ಆದರೆ ನಾನು ಪ್ರತಿ ಬಾರಿಯೂ, ಯಾರೂ ನನ್ನನ್ನು ವರಿಸುತ್ತಿಲ್ಲ, ನನ್ನನ್ನು ಸ್ಪರ್ಶಿಸುವುದಕ್ಕೂ ಮೊದಲೇ ಬೂದಿಯಾಗುತ್ತಾರೆ? ಎಂಬುದನ್ನು ನೋಡುತ್ತಿದ್ದೇನೆ. ಇದು ಎಲ್ಲಿಯವರೆಗೆ? ನನ್ನ ಈ ದುರ್ದಶೆ ಎಲ್ಲಿಯವರೆಗೆ ಇರುವುದು? ನಿಮ್ಮ ಮಗಳು ಹೆಣ್ಣಲ್ಲ, ರಾಕ್ಷಸಿ?...ಎಂದು ಜಗತ್ತು ತಿಳಿಯುವುದು. ಇಂಥ ಕಠೋರದ ಮಾತಿರಲಿ, ಅವಳೆಂದೂ ಏನನ್ನೂ ಹೇಳಲಿಲ್ಲ. ಮೌನದಿಂದ ತಂದೆಯ ಆಜ್ಞೆಯನ್ನು ಒಪ್ಪಿಕೊಂಡಳು. ಎಂದೂ ರೇಗಲಿಲ್ಲ, ಎಂದೂ ಕಣ್ಣೀರು ಸುರಿಸಲಿಲ್ಲ. ಆದರೂ ಗಾಂಧಾರಸೇನರಿಗೆ, ಈ ಇಪ್ಪತ್ತಮೂರನೆಯ ಬಾರಿಗೆ ಅವಳು ಒಪ್ಪುತ್ತಾಳೆ, ಬಹಿರಂಗವಾಗಿ ಏನನ್ನೂ ವ್ಯಕ್ತಪಡಿಸುವುದಿಲ್ಲ, ಆದರೆ ಅವಳು ತನ್ನೆಲ್ಲಾ ಮೌನವನ್ನು ತನ್ನ ತಂದೆಯ ಮೇಲೆ ಹೊರಿಸುವಳು ಎಂದು ಅನ್ನಿಸುತ್ತಿತ್ತು. ನಿರ್ಲಜ್ಜ ತಂದೆ ತನ್ನನ್ನು ಇಷ್ಟು ದೂರಕ್ಕೆ ಒಯ್ಯುವರೆ ಎಂದು ಅವಳು ಹೇಳಲು ಬಯಸುವಳೇ? ಅವಳ ಮೌನ ಅವಳೇನು ಹೇಳಲು ಬಯಸುತ್ತಾಳೆ ಎಂಬುದು ಸ್ಪಷ್ಟವಾಗುವುದು...ನಿರ್ಲಜ್ಜ ತಂದೆ ತನ್ನನ್ನು ಇಷ್ಟು ದೂರಕ್ಕೆ ಕರೆದೊಯ್ಯುವರೇ?...ಅದೂ ಮನುಷ್ಯನಿಂದ ವೃಕ್ಷದವರೆಗೆ? ಇದು ಕ್ಷಮ್ಯವಲ್ಲ. ನಾನು ರಾಕ್ಷಸಿಯಾಗಿರಬಹುದು, ಆದರೆ ನಾನು ಎಷ್ಟಾದರೂ ಅವರ ಮಗಳು. ಆದರೆ ಅವರು ನನ್ನ ತಂದೆಯಲ್ಲ.

‘ಓಹ್! ಒಂದು ವೇಳೆ ಅವಳು ಒಮ್ಮೆಯಾದರೂ ಕೋಪಿಸಿಕೊಂಡರೆ, ರೋದಿಸಿದರೆ, ಕಿರುಚಿದರೆ, ನಾನು ಅವಳಿಗೆ ತಿಳಿ ಹೇಳುತ್ತಿದ್ದೆ. ಮುನಿವರ್ಯರು ಹೇಳಿದಂತೆ ಧೈರ್ಯ ಕೊಡುತ್ತಿದ್ದೆ. ಬಹುಶಃ ಶಿಕ್ಷೆಯನ್ನೂ ವಿಧಿಸುತ್ತಿದ್ದೆ. ಆದರೆ ಅವಳು ಈ ಅವಕಾಶವನ್ನು ಕೊಡುವುದಿಲ್ಲ ಎಂಬುದು ನನಗೆ ಗೊತ್ತಿದೆ, ನನಗೆ ಗೊತ್ತಿದೆ...

ಪಾಪ-ಕಾರ್ಯಗಳೆಲ್ಲವೂ ನನ್ನದೇ, ರಾಶಿ-ನಕ್ಷತ್ರ, ಸಮಯ-ಗಳಿಗೆ ಮುಂತಾದವುಗಳ ದೋಷವೆಂದು ಹೇಳುವುದರಿಂದ ಪ್ರಯೋಜನವಿಲ್ಲ; ಏಕೆಂದರೆ ನಾನು ಅವಳ ತಂದೆ, ಈ ಜಗತ್ತಿಗೆ ಅವಳನ್ನು ತಂದವನು ನಾನೇ.’
ಗಾಂಧಾರಸೇನರು ಹೀಗೆ ವಿಚಲಿತರಾದರು. ಮನದಲ್ಲಿ ಮುನಿವರ್ಯರನ್ನು ಸ್ಮರಿಸಿದರು, ಈ ಆಪತ್ತಿನಿಂದ ಪಾರು ಮಾಡಿ ಎಂದು ಪ್ರಾರ್ಥಿಸಿದರು. ಸನಾತನ ಧರ್ಮ ಲೋಪವಾಗುತ್ತಿರುವಾಗ, ನೀವೇ ಅದನ್ನು ರಕ್ಷಿಸಿದಿರಿ, ನಾಲ್ಕೂ ವೇದಗಳನ್ನು ಒಂದುಗೂಡಿಸಿದರಿ. ಹಸ್ತಿನಾಪುರದ ರಾಜವಂಶ ನಿರ್ವಂಶವಾಗುವುದರಲ್ಲಿತ್ತು, ನೀವು ಅದಕ್ಕೆ ಉಪಾಯವನ್ನು ಕಂಡುಹಿಡಿದಿರಿ, ರಾಜವಧುಗಳ ಮಡಿಲಿಗೆ ಪುತ್ರ ಸಂತಾನವನ್ನು ಕರುಣಿಸಿದಿರಿ. ಧೃತರಾಷ್ಟ್ರ ಮತ್ತು ಪಾಂಡುವನ್ನು ಕೊಟ್ಟಿರಿ. ಈ ಸಹಾಡಾ ವೃಕ್ಷವೇ ನನ್ನ ಮಗಳ ಅದೃಷ್ಟವನ್ನು ಬದಲಿಸುವುದು ಎಂಬುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಆದರೆ ಹೇಗೆ ಬದಲಿಸುವುದು ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಬಾಯಿಯಿಂದ, ‘ಪುತ್ರಿ, ನನ್ನನ್ನು ನೋಡು, ಸ್ವಲ್ಪ ಮುಗುಳ್ನಗು, ಇಲ್ಲಿಂದಲೇ ನಿನ್ನ ಸುಖದ ದಿನಗಳು ಆರಂಭವಾಗುತ್ತವೆ, ನಾನು ನಿನ್ನ ತಂದೆ, ನನ್ನನ್ನು ನಂಬು?’ ಎಂದು ಏಕೆ ಹೇಳಿಸುವುದಿಲ್ಲ? ಇಷ್ಟು ಹೇಳುವ ಧೈರ್ಯವನ್ನು ನನಗೆ ಕೊಡಿ, ನಾನು ನಿಮ್ಮಿಂದ ಬೇರೇನೂ ಯಾಚಿಸುವುದಿಲ್ಲ. ಇಲ್ಲದಿದ್ದಲ್ಲಿ ಅವಳ ಮೌನ ನನ್ನನ್ನು ನುಂಗಿ ಬಿಡುವುದು, ನನ್ನನ್ನು ಟೊಳ್ಳಾಗಿ ಮಾಡಿಬಿಡುವುದು...

ಮುನಿವರ್ಯರ ಆಶೀರ್ವಾದ ಫಲಿಸಿತೋ ಅಥವಾ ಇನ್ನೇನೋ, ಗಾಂಧಾರಸೇನರು ಈ ಬಾರಿ ಪಾರಾದರು. ಅವರಿಗೆ ಆಸೆ, ಆಶ್ವಾಸನೆ ಕೊಡುವ ಕಷ್ಟವಾಗಲಿಲ್ಲ. ಯಾಕೆಂದರೆ ಪ್ರಸ್ತಾಪವನ್ನು ಕೇಳುತ್ತಲೇ ಗಾಂಧಾರಿಯ ಮುಖದಲ್ಲಿ ಭಾವಾವೇಗ ಮೂಡಿ ಬಂತು. ಆದರೆ ಅವಳು ರೋದಿಸಲಿಲ್ಲ, ಆದರೆ ಅದಕ್ಕೂ ಮಿಗಿಲಾದ ಸುಖಕರ ವಿಷಯವೆಂದರೆ, ‘ಸರಿ’ ಎಂದು ಹೇಳುವುದರೊಂದಿಗೆ ಅವಳು ಮಂದವಾಗಿ ಮುಗುಳ್ನಕ್ಕಳು. ಆಹಾ, ಅದೆಷ್ಟು ಸುಂದರ, ಮಧುರ ಮುಗುಳ್ನಗೆ!

ಜ್ಞಾನಿ, ವಿಲಕ್ಷಣೆ, ಪ್ರಜಾವತ್ಸಲೆ ಪುತ್ರಿಯ ಮಂದ ಮುಗುಳ್ನಗೆಯಲ್ಲಿ ಕುರೂಪತೆ ಕಾಣಲಿಲ್ಲ; ಅದಕ್ಕೆ ಕಾರಣ, ದೊಡ್ಡವಳಾದ ನಂತರ ಇಂದು ಮೊದಲ ಬಾರಿಗೆ ಅವರು ಪುತ್ರಿ ಮುಗುಳ್ನಗುವುದನ್ನು ನೋಡಿದ್ದರು; ಅಥವಾ ಹೀಗೆಂದು ಅವರಿಗೆ ಅನ್ನಿಸಿತ್ತು. ಅಷ್ಟೇ ಅಲ್ಲ, ಗಾಂಧಾರಿ ಸುಂದರಿ ಎಂದು ಸಹ ಅನ್ನಿಸಿತು. ಅಸುರಿಯಾದರೆ ಏನೀಗ? ಅವಳು ಈ ಪೃಥ್ವಿಯನ್ನು ಖಂಡಿತ ಅನುಭವಿಸುವಳು, ಭೋಗಿಸುವಳು. ವಿವಾಹವಷ್ಟೇ ಅಲ್ಲ, ತಾಯಿಯೂ ಆಗುವಳು, ಒಂದಲ್ಲ ಎರಡಲ್ಲ, ನೂರು-ನೂರು ಮಕ್ಕಳ ತಾಯಿಯಾಗುವಳು...ನನಗೆಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ. ಅವರು ಮುನಿವರ್ಯರಿಗೆ ಮನಸ್ಸಿನಲ್ಲಿ ಕೋಟಿ-ಕೋಟಿ ನಮಸ್ಕಾರಗಳನ್ನು ಮಾಡಿದರು; ಪುತ್ರಿಯ ಮುಗುಳ್ನಗೆಯಲ್ಲಿ ತಮ್ಮ ರಾಜೋಚಿತ ಸುಖವನ್ನು ಮನಗಂಡರು.

ಮತ್ತೊಂದು ಸ್ವಯಂವರ. ಇಪ್ಪತ್ತಮೂರರ ಉತ್ಸವ ಮತ್ತು ನಿರೀಕ್ಷೆ. ರಾಜಕುಮಾರಿ ಚಂದನ-ಕುಂಕುಮವಿಟ್ಟುಕೊಂಡು ಬಹುಮೂಲ್ಯ ಆಭರಣಗಳನ್ನು ಧರಿಸಿ, ಯೌವನವನ್ನು ಸೂಸುತ್ತಾ ಬರುತ್ತಿದ್ದಾಳೆ. ಅವಳ ಎರಡೂ ಕೈಗಳಲ್ಲಿ ತಾಜಾ ಸುಗಂಧದ ಹೂವುಗಳ ಮಾಲೆಗಳಿವೆ, ಕಾಲುಗಳಿಗೆ ಗೆಜ್ಜೆಗಳನ್ನು ಧರಿಸಿ ಬರುತ್ತಿದ್ದಾಳೆ. ಎದುರಿಗೆ ಹೊಸ ವರ ರಾಜನೀತಿಯ ಮುಖ-ಮುದ್ರೆಯಲ್ಲಿ ನಿಂತಿದ್ದಾನೆ. ಅವನು ಲೇಪಿಸಿಕೊಂಡ ಸುಗಂಧ ದ್ರವ್ಯ ಮತ್ತು ವೇಷಭೂಷಣಗಳಲ್ಲಿ ಯಾವುದೇ ಕೊರತೆಯಿಲ್ಲ. ಅವನೀಗ ಜಂಗಮನಲ್ಲ. ಸಂಚಾರಿಯಾಗಿದ್ದಾನೆ, ಆದರೆ ಇದು ಅವನ ಗರ್ವ ಮತ್ತು ಗೌರವಕ್ಕೆ ಪಾತ್ರವಾಗಿದೆ. ಅವನ ಧೀರೋದಾತ್ತತೆ, ನಿರ್ಭೀಕ ಆಹ್ವಾನ! ಮಂತ್ರಿ, ಸಭಾಸದಸ್ಯರು, ಎವೆಯಿಕ್ಕದೆ ಎಲ್ಲವನ್ನೂ ನೋಡುತ್ತಿದ್ದಾರೆ. ಅವಶ್ಯವಾಗಿ ಏನೋ ಘಟಿಸುವುದು, ಘಟಿಸಲೂ ಬೇಕು.

ಅವರು ಕನ್ಯೆಯ ಬಾಗಿದ ದೃಷ್ಟಿಗಳನ್ನು ನೋಡದಿದ್ದಾಗ್ಯೂ, ತಂದೆಯ ಉದ್ವಿಗ್ನತೆ ಹಾಗೂ ಮುನಿವರ್ಯರ ಉದ್ವೇಗವನ್ನು ಖಂಡಿತ ನೋಡುತ್ತಿರಬೇಕು; ಕುತೂಹಲದಿಂದ ಅದರ ಅರ್ಥವನ್ನೂ ಹುಡುಕುವ ಪ್ರಯತ್ನವನ್ನು ಮಾಡುತ್ತಿರಬೇಕು; ಆದರೆ ಅತ್ತ ಕಡೆಗೆ ಯಾರ ದೃಷ್ಟಿ ಇರಲಿಲ್ಲ. ಅವರು ಇಪ್ಪತ್ತಮೂರನೆಯ ಪರಿಣಾಮ ಮತ್ತು ಚಮತ್ಕಾರವನ್ನು ನೋಡಲು ಬಂದಿರುವಂತಿತ್ತು. ಯಾವುದೋ ಒಂದು ಅನನ್ಯ ಮತ್ತು ಅಭೂತಪೂರ್ವ ಘಟನೆಯೊಂದು ಘಟಿಸುವುದಿದೆ!

ಘಟನೆ ಘಟಿಸಿತು. ಆದರೆ ಅಭೂತಪೂರ್ವ ಘಟನೆಯಲ್ಲ. ವ್ಯತ್ಯಾಸವೇನೆಂದರೆ, ಸುಟ್ಟು ಬೂದಿಯಾಗುವುದಕ್ಕೆ ಮೊದಲು ಇನ್ನೊಂದು ಶರೀರದಿಂದ ಎದ್ದ ಅಗ್ನಿಶಿಖೆ ಮೇಲೆದ್ದು, ಆಗಸವನ್ನು ಸ್ಪರ್ಶಿಸಿದಂತೆ, ಅದರ ಪ್ರಕಾಶದಿಂದ ದಿಕ್ಕುಗಳು ಪ್ರಕಾಶಗೊಂಡವು. ವೃಕ್ಷ ಸುಡದೆ, ತನ್ನೆಲ್ಲವನ್ನೂ ಒಪ್ಪಿಸಿದಂತೆ...

ಅಲ್ಲದೆ ಆಗಲೇ ಎರಡು ವಿಸ್ಮಯಕಾರಿ ಹಾಗೂ ವಿರೋಧಾತ್ಮಕ ಘಟನೆಗಳು ಸಹ ಘಟಿಸಿದವು. ಗಾಂಧಾರಸೇನರು, ಮಗಳು ಮೇಲೆ ನೋಡುವುದನ್ನು ಗಮನಿಸಿ ಕಳೆಗುಂದಿದರು. ಏಕೆಂದರೆ ಅವರು ಗಾಂಧಾರಿಯ ಮುಗುಳ್ನಗೆಯನ್ನು ನೋಡಿದರು. ಅದೇ ಮುಗುಳ್ನಗೆ, ಅಷ್ಟೇ ಸುಂದರವಾದ ಮುಗುಳ್ನಗೆ, ಆದರೆ ಅದರಿಂದ ಅಗಾಧ ವಿದ್ವತ್ತಿನ ವಿಷ ಉಕ್ಕುತ್ತಿದೆ. ಆದರೆ ಅವರು ಪ್ರಜ್ಞೆಕಳೆದುಕೊಳ್ಳುವ ಅವಕಾಶ ಲಭಿಸಲಿಲ್ಲ. ಏಕೆಂದರೆ ಮುನಿವರ್ಯರು ‘ಜಯ್ ನಾರಾಯಣ್’ ಎಂದು ಸಂತಸದಿಂದ ಗಟ್ಟಿಯಾಗಿ ಕಿರುಚಿದರು, ಇದರಿಂದ ರಾಜನ ಸಮೇತ ಎಲ್ಲಾ ಪ್ರೇಕ್ಷಕರು ಗಾಬರಿಯಿಂದ ಅವರನ್ನು ನೋಡಿದರು. ನಂತರ ಮುನಿವರ್ಯರು ಹೇಳಿದರು-
‘ರಾಜನ್, ನೋಡಿದಿರ? ಏನಾಯಿತೆಂದು ನೋಡಿದಿರ? ಗಾಂಧಾರಿಯ ವಿಪತ್ತು ಕಳೆದು ಹೋಯಿತು, ಪಾಪಗಳೆಲ್ಲವೂ ಸುಟ್ಟು ಬೂದಿಯಾಯಿತು...ವೃಕ್ಷ ಧನ್ಯ, ನಿಮ್ಮ ಮಹಿಮೆ ಧನ್ಯ’.

ಅವರ ಮಾತಿನ ಅರ್ಥವನ್ನು ಅರಿಯುವುದಕ್ಕೂ ಮೊದಲೇ ಅವರು ಘೋಷಣೆ ಮಾಡಿದರು-
‘ಈಗ ರಾಜಕುಮಾರಿ ಸ್ವಚ್ಛಂದವಾಗಿ ವಿವಾಹವನ್ನು ಮಾಡಿಕೊಳ್ಳಬಹುದು. ಅವಳು ರಾಜಾಧಿರಾಜ ಧೃತರಾಷ್ಟ್ರರನ್ನು ವಿವಾಹವಾಗಬೇಕೆಂಬುದು ನನ್ನ ಪ್ರಸ್ತಾಪವಾಗಿದೆ. ನಿಮ್ಮದೇನೂ ಆಕ್ಷೇಪಣೆ ಇಲ್ಲವಲ್ಲ, ಮಹಾರಾಜ?’

ಗಾಂಧಾರಸೇನರು ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅವರಿಗೆ ತಮ್ಮ ಕಿವಿಗಳನ್ನು ನಂಬಲಾಗುತ್ತಿರಲಿಲ್ಲ. ಅವರ ಬಾಯಿಯಿಂದ ಈ ಮಾತು ಯಾವಾಗ ಹೊರಟಿತೋ-
‘ಧೃತರಾಷ್ಟ್ರ! ಹಸ್ತಿನಾಪುರದ ರಾಜ!’
‘ಖಂಡಿತ! ಗಾಂಧಾರಿಗೆ ಯೋಗ್ಯವಾದವರು ಇನ್ಯಾರಿದ್ದಾರೆ?’
[ಬೇರಾರೂ ಇರಲಾರರು. ಏಕೆಂದರೆ ಗಾಂಧಾರಿ ಬ್ರಹ್ಮಾಸುರಿಯಾಗಿದ್ದರೆ, ಧೃತರಾಷ್ಟ್ರರು ಬ್ರಹ್ಮಾಸುರರು. ಅಲ್ಲದೆ ಅವರದು ಕೃತ್ತಿಕಾ ನಕ್ಷತ್ರ, ವೃಷಭರಾಶಿ. ಹೇ ದೇವ, ನಿನ್ನದು ವಿಚಿತ್ರ ಲೀಲೆ, ನಾನು ತುಚ್ಛ, ನಿಮಿತ್ತ ಮಾತ್ರ.]

ಗಾಂಧಾರಸೇನರ ಹೃದಯದಲ್ಲಿ ಉಕ್ಕಿದ್ದ ವಿಷಮ ಆನಂದದ ಕೋಲಾಹಲವನ್ನು ಅವರಿಂದ ಸಹಿಸುವುದು ಸಾಧ್ಯವಾಗಲಿಲ್ಲ. ಸೌಭಾಗ್ಯವತಿಯ ಭಾವ-ಭಂಗಿಯಲ್ಲಾದ ಪರಿವರ್ತನೆಯನ್ನೂ ಸಹ ಅವರಿಂದ ನೋಡಲಾಗಲಿಲ್ಲ.
ಗಾಂಧಾರಿ ಮತ್ತು ಧೃತರಾಷ್ಟ್ರರ ವಿವಾಹ ಪೂರ್ಣ ಆಡಂಬರದೊಂದಿಗೆ ಸಂಪನ್ನಗೊಂಡಿತೆಂದು ಹೇಳುವ ಅಗತ್ಯವಿಲ್ಲ? ಗಾಂಧಾರ ಮತ್ತು ಹಸ್ತಿನಾ ರಾಜ್ಯದ ಹಳ್ಳಿ-ನಗರಗಳಲ್ಲಿ ಸಂತಸದ ಅಲೆ ವ್ಯಾಪಿಸಿತು, ಎಲ್ಲರೂ ವರ-ವಧುಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಂಗಳ ಕಾರ್ಯದ ಸೃಷ್ಟಿಕರ್ತರಾದ ವೇದವ್ಯಾಸರ ಬಾಯಿಯಿಂದ ಹೊರಟ ಆಶೀರ್ವಾದ, ಪಾಣಿಗ್ರಹಣದ ತತ್‌ಕ್ಷಣದಲ್ಲಿ ಆಶ್ಚರ್ಯಪಡುವಂಥ ವಿಷಯವಾಗಿರಲಿಲ್ಲ. ಅವರು ಗಾಂಧಾರಿಯ ತಲೆಯ ಮೇಲೆ ಕೈಯಿಟ್ಟು ಹೇಳಿದರು, ‘ಭವತು ಆಯುಷ್ಮತೀ, ಶತಪುತ್ರವತೀ!’

ಇದನ್ನೆಲ್ಲಾ ನೋಡಿದ ಗಾಂಧಾರಸೇನರು ಸಂತಸದಿಂದ ಬೀಗಿದರು. ಅವರು ಗದ್ಗದಿತರಾಗಿ ಹೇಳಿದರು, ‘ನಾನು ಹೇಳುತ್ತಿರಲಿಲ್ಲವೇ? ಹೇಳುತ್ತಿರಲಿಲ್ಲವೇ?’ ಅವರು ಪುತ್ರಿಯ ಮುಖವನ್ನು ನೋಡುವ ಲೋಭವನ್ನು ತಡೆದುಕೊಳ್ಳದಾದರು. ಈ ಬಾರಿ ಅವರು ಮತ್ತೆ ನೋಡಿದರು, ಅವಳ ಅಧರಗಳಲ್ಲಿ ಅದೇ ಅವಿಸ್ಮರಣೀಯ ಮುಗುಳ್ನಗೆಯಿತ್ತು. ಆದರೆ ಆ ಅಧರಗಳಲ್ಲಿ ಕುರೂಪತೆ ಹೆಚ್ಚಿತ್ತೋ ಅಥವಾ ಸೌಂದರ್ಯವಿತ್ತೋ ಎಂದು ಅರಿಯದಾದರು. ಇವಳ್ಯಾರು, ಇವಳನ್ನು ಎಲ್ಲೋ ನೋಡಿದಂತಿದೆಯಲ್ಲ!
ಆದರೆ ವೇದವ್ಯಾಸರು ಗುರುತಿಸಿದರು, ಅರಿತರು. ಸುಶ್ಮಿತಾ ಸುಂದರಿಯಾದ ಅವಳು, ತಾನು ದೇವಿಯಲ್ಲ, ದಾನವಿಯಲ್ಲ, ಇಬ್ಬರಿಂದ ಹೊರತಾಗಿ ಶ್ರೇಷ್ಠಳು, ತಾನು ಸುಳ್ಳು ಅರೋಪಕ್ಕೆ ಗುರಿಯಾಗಿದ್ದೆ ಎಂದು ಹೇಳುತ್ತಿದ್ದಾಳೆಂದು ಅವರು ಅರಿತರು.

ಅವಳು ನನ್ನ ಆಶೀರ್ವಾದಕ್ಕೆ ಉತ್ತರಿಸುತ್ತಾ, ‘ನಿಜವೇ? ನಾನು ಪಡೆಯಲು ಯೋಗ್ಯವಾದ
ಸಾವುಗಳನ್ನು ನೀವು ಕಸಿದುಕೊಳ್ಳಬಲ್ಲಿರ? ನಾನು ಗಾಂಧಾರಿ ಮಾತ್ರವಲ್ಲ, ದುರ್ಗೆ; ಇದು ಈ ಇಪ್ಪತ್ತಮೂರರಲ್ಲೂ ಕೊನೆಗೊಂಡಿಲ್ಲ, ನೂರು ಪುತ್ರರಲ್ಲಿಯೂ ಕೊನೆಗೊಳ್ಳುವುದಿಲ್ಲ, ದ್ವಾಪರದಲ್ಲಿಯೂ ಕೊನೆಗೊಳ್ಳುವುದಿಲ್ಲ...
ಓಹ್! ಈ ಅಸಹ್ಯ ಜ್ಯೋತಿ, ಜ್ಯೋತಿಯಲ್ಲ ಜ್ವಾಲೆ, ಎಲ್ಲಿಂದ ಬರುತ್ತಿದೆ? ಅವಳ ಮುಗುಳ್ನಗೆಯಿಂದ ಅಥವಾ ಅವಳ ದೃಷ್ಟಿಯಿಂದ ಅಥವಾ ಅವಳ ಸ್ವಚ್ಛ ಹೆಣ್ಣುತನದಿಂದ ಬರುತ್ತಿದೆಯೇ?... ಅವಳ ಕೈಗಳಿಂದಲೇ ಅವಳ ಕಣ್ಣುಗಳಿಗೆ ಜೀವನಪರ್ಯಂತ ಪಟ್ಟಿಗಳನ್ನು ಕಟ್ಟಿಸಬೇಕಾಗುವುದು; ಆದರೆ ಅಷ್ಟು ಮಾತ್ರದಿಂದಲೇ ಈ ಮಾರಣಾಂತಕ ಜ್ಯೋತಿ ಆರಿಸಲು ಸಾಧ್ಯವೇ?

-ಮೂಲ: ಕಿಶೋರಿ ಚರಣ್ ದಾಸ್. ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

=====================

ಕಿಶೋರಿ ಚರಣ್ ದಾಸ್
1924 ರಲ್ಲಿ ಜನಿಸಿದ ಕಿಶೋರಿ ಚರಣ್ ದಾಸ್ ಬಿಹಾರದ ಪಟ್ನಾ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ.ಅಧ್ಯಯನವನ್ನು ಮಾಡಿದ್ದರು. ಇವರು ಇಂಡಿಯನ್ ಆಡಿಟ್ ಆ್ಯಂಡ್‌ ಅಕೌಂಟ್ಸ್ ಸರ್ವಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಒರಿಯಾ ಭಾಷೆಯ ಪ್ರಸಿದ್ಧ ಸಾಹಿತಿಯಾಗಿದ್ದ ಇವರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ‘ಠಾಕುರ್ ಘರ್’ ಕಥಾ-ಸಂಕಲನಕ್ಕೆ 1976 ರಲ್ಲಿ ಕೇಂದ್ರೀಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT