ಮಂಗಳವಾರ, ಆಗಸ್ಟ್ 9, 2022
24 °C

ಹಲ್‌–ಮಿಡಿ ಹೊಸ ಶಾಸನ!: ಹಲ್ಲುಗಳಿಗೇಕಿಲ್ಲ ಇನ್ಶೂರೆನ್ಸ್‌ ಸೌಲಭ್ಯ?

ಡಾ.ಲಕ್ಷ್ಮಣ ವಿ.ಎ. Updated:

ಅಕ್ಷರ ಗಾತ್ರ : | |

Prajavani

ಕಳೆದ ನಲವತ್ತು ವರ್ಷಗಳಿಂದ ನನ್ನ ಜೊತೆಗಿದ್ದ ಒಂದು ದಂತ, ಕಳೆದ ಒಂದು ವಾರದಿಂದ ವಿಪರೀತ ಜುಮ್‌ ಜುಮ್ ಎಂದು ಮಿಡಿದ ಮೇಲೆ ಲೇಖನವನ್ನು ಬರೆದುದರಿಂದ ನೀವು ಇದನ್ನು ‘ಹಲ್ -ಮಿಡಿ’ ಶಾಸನವೆಂದೂ ಓದಿಕೊಳ್ಳಬಹುದು. ಹಲ್ಲುನೋವು ಮಾನಸಿಕ ವೇದನೆಗಿಂತ ಹೆಚ್ಚು ನೋವು ಕೊಡುವಂತಹದ್ದು (Dental pain is more than mental pain) ಅಂತ ಒಂದು ಕಥೆಯಲ್ಲಿ ಪಾಶ್ಚಾತ್ಯ ಲೇಖಕ ಮಾರ್ಕ್ವೇಜ್  ಹೇಳುತ್ತಾನೆ. ಹೀಗೆ ನನ್ನ ಮಿಡಿವ ದಂತವೊಂದು ಭಗ್ನವಾಯಿತೆಂದು ಹೇಳಲು ಅತೀವ ವಿಷಾದವೆನಿಸುತ್ತಿದೆ. ಆಹಾರ ಅರೆಯಲು, ಅದರ ರುಚಿ ಅರಿಯಲು ಸಾಧನವಾಗಿದ್ದ ನನ್ನದೇ ಅಂಗಕ್ಕೆ ಅರೆಭಗ್ನವಾಗಿ ಪುರಾತನ ದೇಗುಲವೊಂದರ ಸಾಲು ಕಂಬಗಳಿಗೆ ಹೊರಗಿನಿಂದ ಆಧಾರ ಕೊಟ್ಟವರಂತೆ ಸಿಮೆಂಟಿನ ಎರಕವ ಹೊಯ್ದು ನಿಲ್ಲಿಸಿದ್ದಾರೆ.

ಹಾಗೆ ನೋಡಿದರೆ ನಮ್ಮ ದೇಹದಲ್ಲಿ ಎರಡೆರಡು ಸಲ ಬೆಳೆಯುವ ಅಂಗವೆಂದರೆ ಹಲ್ಲು ಮಾತ್ರ. ಜೀರ್ಣಕ್ರಿಯೆ ಹಾಗೂ ಜೈವಿಕ ಕ್ರಿಯೆಯ ಅದ್ಭುತ ಭಾಗವಾಗಿ ಎಳೆಯರಿದ್ದಾಗ ಹಾಲು -ಹಲ್ಲಾಗಿ ನಂತರ ಮೂಳೆ -ಮಾಂಸ ಕಡಿಯುವ ಬಲಿಷ್ಠ ಹಲ್ಲುಗಳಾಗಿ ಬೆಳೆಯುವುದು ಬದುಕಿನ ಒಂದು ಪ್ರಮುಖ ಮೈಲಿಗಲ್ಲು. ಮಗುವಿನ ಬೆಳವಣಿಗೆಯ ಮೈಲುಗಳನ್ನು ಈ ದಂತ ಬೆಳವಣಿಗೆಯ ಆಧಾರದಲ್ಲಿ ಅಳೆಯುತ್ತಾರೆ. ಮಗುವಿನ ಹಲ್ಲಿನ ಬೆಳವಣಿಗೆ ಕಡಿಮೆಯಾದರೆ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿದೆ ಎಂದರ್ಥ.

ಪೂರ್ಣ ಹಲ್ಲು ಬೆಳೆದು ಜಾಣ ಹಲ್ಲು (wisdom teeth) ಎಂಬುದು ಬೆಳೆಯಲು ಪೂರ್ತಿ ಹದಿನೆಂಟರಿಂದ ಇಪ್ಪತ್ತು ವರ್ಷಗಳೇ ಬೇಕು. ಕೆಲವರು ಮಣ್ಣಲ್ಲಿ ಮಣ್ಣಾಗಿ ಹೋದರೂ ಈ ಬುದ್ಧಿ ಹಲ್ಲೂ ಬರುವುದಿಲ್ಲ; ಬುದ್ಧಿಯೂ ಬೆಳೆಯುವುದಿಲ್ಲ. ಏನಾದರೂ ಶ್ಯಾಣೇತನದ ಕೆಲಸ ಮಾಡಿದರೆ, ಅದ್ಭುತವಾದ ಪವಾಡ ಮಾಡಿದರೆ ‘ತುಮ್ಹಾರಿ ದಾಂತ್ ಗಿನನೀ ಪಡೇಗಿ’ ಅಂತ ಬಾಲಿವುಡ್‌ ಸಿನಿಮಾಗಳ ಜನಪ್ರಿಯ ಸಂಭಾಷಣೆ ಕೇಳುತ್ತ ಬೆಳೆದ ಜಾಣ- ಜಾಣೆಯರು ನಾವು.

‘ಪ್ರಥಮ ಚುಂಬನ ದಂತ ಭಗ್ನ’ ಎಂದು ಮೊದಲ ಯತ್ನದಲ್ಲಿ ವಿಫಲರಾದವರ ಬಗ್ಗೆ ಆಡಿಕೊಳ್ಳುತ್ತಾರೆ. ಆದರೆ, ನಿಜ ಅರ್ಥದಲ್ಲಿ ಮುತ್ತು ಕೊಟ್ಟರೆ ಹಲ್ಲು ಅಷ್ಟು ಸುಲಭವಾಗಿ ಬೀಳುವುದೂ ಇಲ್ಲ, ಉದುರುವುದೂ ಇಲ್ಲ. ಹಾಗೆ ಬಿದ್ದಿದ್ದರೆ ನಮ್ಮದೇ ಹಲ್ಲು ಕೀಳಲು ದಂತ ವೈದ್ಯರು ಅಷ್ಟು ದುಡ್ಡು ಕೀಳುತ್ತಿರಲಿಲ್ಲ. ಇಡೀ ದೇಹಕ್ಕೆ ಒಂದು ಜೀವಶಾಸ್ತ್ರವಾದರೆ, ಈ ಡೆಂಟಿಸ್ಟ್ರಿ ಎಂಬುದೊಂದೇ ಪ್ರತ್ಯೇಕ ವೈದ್ಯಕೀಯ ಕ್ಷೇತ್ರದ ಶಾಸ್ತ್ರ. ಕೆಲವೊಂದು ದೇಶಗಳಲ್ಲಿ ಹೀಗೆ ಆಧುನಿಕ ವೈದ್ಯಶಾಸ್ತ್ರವನ್ನು ಓದುವವರು ಪ್ರತ್ಯೇಕವಾಗಿ ಡೆಂಟಿಸ್ಟ್ರಿ ಓದಬೇಕಿಲ್ಲ.

ಈ ದಂತಶಾಸ್ತ್ರದಲ್ಲೇ ಎಷ್ಟೊಂದು ಪ್ರಮುಖ ವಿಭಾಗಗಳು! ಮೊದಲ ಯತ್ನದಲ್ಲಿ ಡೆಂಟಲ್ ವಿಭಾಗದಲ್ಲಿ ಪ್ರವೇಶ ಪಡೆಯಲು ವಿಫಲವಾದ ವಿಧ್ಯಾರ್ಥಿಗಳನ್ನು ‘ಪ್ರಥಮ ಚುಂಬನ...’ ಎಂದು ನಿರ್ವಿವಾದವಾಗಿ ಕರೆಯಬಹುದು. ಹೀಗೆ ಪಾಸಾದ ಡೆಂಟಲು ಡಾಕ್ಟರ್‌ಗಳು ತಮ್ಮ ಪ್ರಥಮ ಚುಂಬನದಲ್ಲಿ ದಂತಭಗ್ನವಾಗದ ಹಾಗೆ ಎಚ್ಚರಿಕೆ ವಹಿಸುತ್ತಾರೆಯೆ? ಅಥವಾ ರೋಮಿಯೊ ಜ್ಯೂಲಿಯೆಟ್‌ರಂತೆ ಪ್ರೇಮದ ದಂತಕಥೆಯಾಗಿ ಹೋಗುತ್ತಾರೆಯೋ!

ಹುಟ್ಟಿನಿಂದ ಸಾಯುವತನಕ ಬಹಳ ಪ್ರಮುಖ ಪಾತ್ರವಹಿಸುವ ಅಂಗ ನಮ್ಮ ದಂತ. ನಾವು ಪ್ರತಿದಿನ ಎಲ್ಲಾ ಅಂಗಗಳನ್ನು ತೊಳೆಯದಿದ್ದರೂ ಹಲ್ಲನ್ನಂತೂ ಖಂಡಿತ ಉಜ್ಜುತ್ತೇವೆ! ಹೀಗೆ ನಾವು ಪ್ರತಿನಿತ್ಯ ದೇಹದ ಇನ್ನೊಂದು ಭಾಗವನ್ನು ಉಜ್ಜುವ ಬ್ರಷ್‌ ನಾನಂತೂ ನೋಡಿಲ್ಲ.  ನಿಮಗಾಗದವರ ಮೇಲೆ ಸಿಟ್ಟಿನಿಂದ ಹಲ್ಲು ಮಸೆಯುವುದು ಬಿಟ್ಟುಬಿಡಿ; ಬಡವನ ಸಿಟ್ಟು ಅವನ ದವಡೆಗೇ ಮೂಲವಾಗಿ ದಂತ ವೈದ್ಯರಿಗೇ ಲಾಭವಾಗುವ ಸಂಭವ ಹೆಚ್ಚು.

ಮೊದಲು ಕಾಣುವ ಇನ್ಸಿಜರ್ ಹಲ್ಲುಗಳು ನಮ್ಮ ಮುಖ ಸೌಂದರ್ಯದ ಅಸಲಿ ಮಾಪಕಗಳು. ನಾವು ಈ ಹಲ್ಲುಗಳಿಂದ ಸೇಬು, ಪೇರಲ ಹಣ್ಣುಗಳನ್ನು ಕಚ್ಚಿ ತಿನ್ನುತ್ತೇವೆ. ಕೋರೆ (ಕ್ಯಾನೈನ್) ಹಲ್ಲುಗಳು ಮಾಂಸವನ್ನು ಕಚ್ಚಿ ಹಿಡಿಯಲು ‌ಅನುಕೂಲ ಮಾಡುತ್ತವೆ. ಮನುಷ್ಯ ಮೊದಲು ಹಸಿ ಮಾಂಸಾಹಾರಿಯಾಗಿದ್ದಾಗ ಮಾಂಸವನ್ನು ಜಗಿಯಲು, ಎಳೆಯಲು ಈ ಹಲ್ಲು ಸಹಕಾರಿಯಾಗಿತ್ತು. ಕ್ರಮೇಣ ಮನುಷ್ಯ ಮಾಂಸಾಹಾರದಿಂದ ಶಾಖಾಹಾರಕ್ಕೆ ತನ್ನ ಆಹಾರದ ಶೈಲಿ ಬದಲಿಸಿಕೊಂಡಾಗ ಈ ಹಲ್ಲುಗಳು ಮನುಷ್ಯನ ಅಂಗದ ಅವಸಾನದ ಅಂಚಿಗೆ ಬಂದ(Rudimentary) ಹಲ್ಲಾಗಿ ತಮ್ಮ ಹರಿತವನ್ನು ಕಳೆದುಕೊಂಡವು.

ನಮ್ಮ ದೇಹಕ್ಕೆ ಮುಖ, ಹಲ್ಲು, ದವಡೆ ಇಷ್ಟು ಪ್ರಮುಖವಾಗಿದ್ದರೂ ಬಹುತೇಕ ಇನ್ಶೂರೆನ್ಸ್‌ ಕಂಪನಿಯವರು ಈ ಮುಖ, ಹಲ್ಲಿನ ಚಿಕಿತ್ಸೆಗೆ ಹಣ ಕೊಡಲಾರರು. ಇದನ್ನು ಯಾರಾದರೂ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನಿಸಿ ಈ ವಕ್ರತುಂಡರಿಗೆ ನ್ಯಾಯ ಒದಗಿಸಬೇಕು. ಇಲ್ಲವೆಂದಾದರೆ ಕಾರಣಾಂತರಗಳಿಂದ ಎಲ್ಲಾ ಹಲ್ಲು ಉದುರಿ ಬಿದ್ದವರು ಕೇವಲ ಉದುರಾದ ಉಪ್ಪಿಟ್ಟು ತಿನ್ನಲಿಕ್ಕೆ ಮಾತ್ರ ಲಾಯಕ್ಕಾಗಿ, ಬಿದ್ದ ಹಲ್ಲು ಕಟ್ಟಿಸೋಣವೆಂದರೆ ಮನೆ ಕಟ್ಟುವಷ್ಟೇ ಖರ್ಚು ತಗುಲಿ ಈ ಹಲ್ಲು ಕಟ್ಟಿಸಲು ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸುವಂತಾಗಬಾರದಲ್ಲವೆ!? ಇದು ಹಿರಿಯ ನಾಗರಿಕರಿಗೆ ಸರ್ಕಾರ ಮತ್ತು ಸಮಾಜ ಮಾಡುವ ಘನ ಘೋರ ಅನ್ಯಾಯವೆಂದೇ ಹಲ್ಲು ಗಟ್ಟಿಯೂರಿ ಜೋರು ದನಿಯಲ್ಲಿ ಖಂಡಿಸಬೇಕಾಗುತ್ತದೆ.

ಹಾವಿಗೆ ಹಲ್ಲಿನಲ್ಲಿ ವಿಷವಿದೆ ಅಂತ ಹೇಳುತ್ತಾರೆ.

ಆದರೆ, ಅದು ಅಸಲು ಹಲ್ಲಿನಲ್ಲಿ ಅಲ್ಲ. ಹಲ್ಲಿಗೆ ಅಂಟಿಕೊಂಡಂತೇ ಇರುವ ವಿಷದ ಚೀಲದಲ್ಲಿ. ಹಾವಿಗೆ, ಹಲ್ಲಿಗೆ ವಿಷವಿರುವುದು ಮನುಷ್ಯರಿಗೆ ಕಚ್ಚಲೆಂದೇ ಅಲ್ಲ ಕೆಲವೊಂದು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಆಹಾರ ಜೀರ್ಣವಾಗಲು.

ನಾಯಿ ಕಚ್ಚಿದರೆ ಬರುವ ಕಾಯಿಲೆ ರೇಬಿಸ್ ವೈರಸ್‌ ಇರುವುದು ನಾಯಿಯ ಜೊಲ್ಲು ರಸದಲ್ಲಿ. ಆನೆ ಬದುಕಿದರೂ ಕೋಟಿ; ಸತ್ತರೂ ಕೋಟಿ ಎನ್ನುವುದು ಅದರ ದಂತದ ಬೆಲೆಯ ಮೇಲೆಯೇ.

‘ದಂತದ ಮೈಯೋಳೇ...’ ಅಂತ ಕನ್ನಡದ ಕವಿಗಳು ಹೆಣ್ಣನ್ನು ಹೊಗಳಿ ದಂತಗೋಪುರದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ‘ಬಚ್ಚಲ ಹಂಡೆಯ ಪಕ್ಕ ಅಜ್ಜ ಇಟ್ಟಿದ್ದ ಹಲ್ಲಿನ ಸೆಟ್ಟು ಯಾಕೋ ನಕ್ಕಿತು ನಾನೂ ನಕ್ಕೆ’ ಎಂದು ಎ.ಕೆ. ರಾಮಾನುಜನ್ ತಮ್ಮ ಅಜ್ಜನ ಅಸ್ತಿತ್ವವನ್ನು ಹಂಡೆಯ ಪಕ್ಕದಲ್ಲಿದ್ದ ಹಲ್ಲಿನ ಸೆಟ್ಟಿನೊಡನೊಂದು ಅಮೂರ್ತ ಸಂಬಂಧ ಕಲ್ಪಿಸಿ ಕವಿತೆಗೊಂದು ವಿಶಿಷ್ಟ ಅರ್ಥ ಕಲ್ಪಿಸುತ್ತಾರೆ. ಈಗವರು ಬದುಕಿದ್ದರೆ ಬರೇ ಚಿನ್ನೆಗಳ ಮೂಲಕ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ನಡೆಯುವ ಮೂಕಿ ಭಾಷೆಯಲ್ಲಿ ನಡೆಯುವ ಹಲ್ಕಿರಿಯುವ ಇಮೋಜಿ ನೋಡಿ ಇನ್ನಷ್ಟು ಕವಿತೆ ಬರೆಯುತ್ತಿದ್ದರೋ ಏನೊ!

ಇರುವ ಮೂವತ್ತೆರಡು ಹಲ್ಲುಗಳಲ್ಲಿ ಒಂದರ ಅರ್ಧ ಡೆಂಟಿಸ್ಟರ ಪಾಲಾಗಿ ನಾನು ಈಗ ಮೂವತ್ತೊಂದೂವರೆ ಹಲ್ಲಿನವನು. ಈ ಅರ್ಧ ಹಲ್ಲಿಗೆ ಬೆಳ್ಳಿ ತುಂಬಿ ನನ್ನ ತಲೆಗೆ ಬಂಗಾರದ ಕಿರೀಟವಿಟ್ಟು, ನನ್ನ ಕನ್ನಡ ಚಲನಚಿತ್ರದ ರಾಜಕುಮಾರನಂತೆ ಬಂಗಾರದ ಮನುಷ್ಯನಂತಹ ಇತಿಹಾಸದ ‘ದಂತಕಥೆ’ ಮಾಡುತ್ತೇನೆಂದು ಈ ದಂತ ವೈದ್ಯರು ಎರಡು ಸಾವಿರ ಫೀಜು ಕಟ್ಟಿಸಿಕೊಂಡು ಮುಂದಿನ ವಾರ ಬರ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು