ಮಂಗಳವಾರ, ಜೂನ್ 28, 2022
24 °C

ಹೊಸ ರುಚಿಯ ‘ನಿಘಂಟು’!

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ಅನೇಕ ಪದಗಳಿಗೆ ಇತ್ತೀಚೆಗೆ ಹೊಸ ಅರ್ಥಗಳು ಹುಟ್ಟಿಕೊಳ್ಳುತ್ತಿವೆ. ಅಂತಹ ಪದಗಳ ಗಂಟನ್ನು ಬಿಚ್ಚಿಡುವ ಕೆಲಸ ಇನ್ನೂ ಯಾಕಾಗುತ್ತಿಲ್ಲ ಎಂದು ಕನ್ನಡಾಂಬೆ ಯೋಚಿಸುತ್ತಿರುವಾಗಲೇ ಶ್ರೀಮಾನ್ ಕಿ.ತಾ.ಪತಿ ಅವರು ಆ ಮಹತ್ಕಾರ್ಯಕ್ಕೆ ಇಳಿದಿದ್ದಾರೆ. ಬರುವ ಅಮಾವಾಸ್ಯೆಗೆ ಈ ಹೊಚ್ಚ ಹೊಸ ಕನ್ನಡ ನಿಘಂಟುವಿನ ಲೋಕಾರ್ಪಣೆಆಗಲಿದೆ.

ನಮ್ಮಲ್ಲಿ ಕನ್ನಡ ಪದಗಳಿಗೆ ಅಪಾರ್ಥ, ಅನರ್ಥ ಗಳನ್ನು ಕೊಟ್ಟು ತಮಾಷೆ ಮಾಡಿದ ‘ಪನ್’ಡಿತರಿದ್ದಾರೆ. ಆದರೆ ಕಿ.ತಾ.ಪತಿ ಅವರು ಹೊಸರುಚಿಯ ಪದಾರ್ಥಗಳನ್ನೇ ತಯಾರಿಸಿದ್ದಾರೆ.

ರಾಜಕೀಯ ರಂಗದಲ್ಲಿರುವ ಕೆಲವು ಪದಗಳನ್ನು ನೋಡಿ. ಕನ್ನಡದ್ದೇ ಪದ ಎಂಬಷ್ಟು ಪರಿಚಿತವಾಗಿರುವ ಆಪರೇಷನ್‌ಗೆ ಭಾಜಪ ಎಂಬ ಅರ್ಥ ನೀಡಿದ್ದಾರೆ. ಕಣ್ಣೀರು ಎಂಬ ಪದಕ್ಕೆ ಗೌಡರ ಕುಟುಂಬ ಎಂಬ ಅರ್ಥ ಕೊಟ್ಟಿದ್ದಾರೆ. ಏಕವಚನ ಅಂದರೆ ಸಿದ್ರಾಮಣ್ಣ, ಬಲಿ ಅಂದರೆ ಸಂಸತ್ ಕಲಾಪ! ಪಾಪ, ನಿಂಬೆಹಣ್ಣನ್ನೂ ಅದರ ಪಾಡಿಗೆ ಬಿಟ್ಟಿಲ್ಲ. ಅದಕ್ಕೆ ರೇವಣ್ಣ ಎಂಬರ್ಥ ಕೊಟ್ಟಿದ್ದಾರೆ! ಅತೃಪ್ತಿ ಎಂಬ ಪದಕ್ಕೆ ಅಸಮಾಧಾನ, ಬೇಸರ ಮುಂತಾದ ಅರ್ಥಗಳಿರುವಾಗ ಇಲ್ಲಿ ಕೊಟ್ಟಿರುವ ಅರ್ಥ- ಶಾಸಕ ಎಂದು! ಉಪಮುಖ್ಯಮಂತ್ರಿಗೂ ಒಂದು ಅರ್ಥ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ವಾಹನ ಸಂಚಾರ ದಟ್ಟಣೆ ಎಂಬ ಅರ್ಥ ಅದಕ್ಕಿದೆ!

‘ಬಂದ್’ ನಮ್ಮ ಜೀವನದ ಭಾಗವಾಗಿಬಿಟ್ಟಿರುವುದರಿಂದ ಆ ಪದವೂ ನಿಘಂಟಿನಲ್ಲಿ ಸೇರಿಕೊಂಡಿದೆ. ಅದಕ್ಕೆ ವಾಟಾಳ್ ನಾಗರಾಜ್ ಎಂಬ ಅರ್ಥ ಕೊಟ್ಟಿದ್ದಾರೆ. ಹಗಲು ದರೋಡೆಗೆ ನೀರವ್, ಮಲ್ಯ, ಮನ್ಸೂರ್ ಖಾನ್ ಹೀಗೆ ಅರ್ಥಗಳ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಗರ್ವ ಎಂದರೆ ಏನೆಂದು ನೀವು ತಿಳಿದುಕೊಂಡಿದ್ದೀರೋ ಅದು ಇಲ್ಲಿ ಖಂಡಿತ ಇರುವುದಿಲ್ಲ. ಅದಕ್ಕೆ ಮಮತಾ ಎಂಬ ಅರ್ಥ ಇದೆ!

ಹಾಗೇ ನೀವು ‘ಪಾದಚಾರಿ ಮಾರ್ಗ’ಕ್ಕೆ ಬಂದರೆ ಅದಕ್ಕೂ ಒಂದು ಅರ್ಥ ಸಿಗುತ್ತದೆ. ಬೀದಿ ಮಾರಾಟ ಎಂದು! ಸಾಲ ಎಂದರೆ ಏನೂಂತ ಎಲ್ಲರಿಗೂ ಗೊತ್ತು. ಆದರೆ ಅದಕ್ಕೆ ಹೊಸ ಅರ್ಥ ಸೇರ್ಪಡೆಯಾಗಿದೆ. ಅದು ರೈತ. ಸಂಘರ್ಷ ಎಂಬ ಪದಕ್ಕೆ ತುಂಬಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅದೊಂದು ಸಂಘ ಎಂದೇ ತಿಳಿದುಕೊಂಡರೆ ಸಾಕು.

ಬಾಕಿ ಸಂಬಳ ಎಂದರೆ ಅದೇನೂ ಕಠಿಣ ಶಬ್ದ ಅಲ್ಲ. ಆದರೆ ಇಲ್ಲಿ ಅದಕ್ಕೊಂದು ವಿಚಿತ್ರ ಅರ್ಥ ಕೊಟ್ಟಿದ್ದಾರೆ. ಅದು ಅತಿಥಿ ಶಿಕ್ಷಕರು! ಆಸ್ಪತ್ರೆಗೆ ಈ ನಿಘಂಟಿನ ಪ್ರಕಾರ ಬಿಲ್ ಎಂಬ ಸುಂದರ ಅರ್ಥವಿದೆ. ಖಾಕಿ ಅಂದರೆ ಬಣ್ಣ ಅಲ್ಲವೇ? ಅಲ್ಲ! ಖಾಕಿ ಅಂದರೆ ಹಫ್ತಾ ಎಂದೇ ತಿಳಿದುಕೊಳ್ಳಬೇಕು.

ಗೊರಕೆಗೆ ಸರ್ಕಾರಿ ಕಚೇರಿ ಎಂಬ ಅರ್ಥ ಕೊಟ್ಟಿರುವುದರಿಂದ ಸರ್ಕಾರಿ ನೌಕರರು ಇನ್ನಾದರೂ ಎಚ್ಚೆತ್ತುಕೊಳ್ಳಬಹುದೇನೋ! ಪ್ರತಿಭಟನೆಗೆ ನೀವು ಮುಷ್ಕರವೆಂಬ ಅರ್ಥ ಹೇಳಿದರೆ ಅದು ತಪ್ಪು. ಅದಕ್ಕೆ ಅಂಗನವಾಡಿ ಎಂಬ ಅರ್ಥ ಇಲ್ಲಿದೆ. ಯೋಜನೆ ಎಂಬ ಪದಕ್ಕೆ ನುಂಗುವುದು ಎಂಬ ಅರ್ಥ ಕೊಟ್ಟಿರುವುದು ಸುತರಾಂ ಸುಳ್ಳಲ್ಲ ಅನಿಸುತ್ತದೆ.

ಚಕ್ರಬಡ್ಡಿಯ ಅರ್ಥ ಗೊತ್ತಿಲ್ಲದವರು ಇಲ್ಲಿ ತಡಕಾಡಿದರೆ ಸಿಗುವುದು ಯಮ ಎಂಬ ಭಯಂಕರ ಅರ್ಥ! ಮರಣ ಮೃದಂಗ ಅಂದರೆ ಜೀವ ವಿಮೆ ಏಜೆಂಟ್ ಅನ್ನುವ ಅರ್ಥ ನೋಡಿ ಏಜೆಂಟರೆಲ್ಲಾ ಹೆಮ್ಮೆ ಪಡುತ್ತಾರೆ ಎಂದು ನಂಬಿಕೆ.

ನಗರಗಳಲ್ಲಿ ಬಹಳ ಪ್ರಚಲಿತದಲ್ಲಿರುವ ಪದ ‘ತ್ಯಾಜ್ಯ’. ಅದಕ್ಕೇ ಇರಬೇಕು ಈ ನಿಘಂಟಿನಲ್ಲಿ ತ್ಯಾಜ್ಯ ಅಂದರೆ ಬೆಂಗಳೂರು ಎಂಬ ಅರ್ಥ ಕೊಟ್ಟಿರುವುದು. ಅನಧಿಕೃತ ಎಂಬ ಪದಕ್ಕೆ ತುಂಬಾ ಕುತೂಹಲದ ಅರ್ಥ ಕೊಟ್ಟಿದ್ದಾರೆ. ಅದೇನೆಂದರೆ, ಬೈಯುವಾಗ ಲೀಲಾಜಾಲವಾಗಿ
ಬರುವ ಶಬ್ದ– ನನ್ಮಗನೇ! ಹಾಗೆಯೇ ಮಗ ಅನ್ನುವುದಕ್ಕೆ ಪರಮ ಮಿತ್ರ ಎಂಬ ಅರ್ಥವಿರುವುದು ಎಲ್ಲಾ ತಾಯಿ– ತಂದೆಯರಿಗೆ ಸೋಜಿಗದ ವಿಷಯವೇ ಬಿಡಿ.

ಚಿಲ್ಲರೆ ಪದಕ್ಕೆ ಹೆಚ್ಚೆಂದರೆ ಚಿಲ್ಲರೆ ಮನುಷ್ಯರು ನೆನಪಾಗಬಹುದು. ಆದರೆ ಈ ನಿ-ಗಂಟಿನಿಂದ ಬಿಚ್ಚಿಟ್ಟ ಅರ್ಥ ಕಂಡಕ್ಟರ್. ತಲೆನೋವಿಗೆ ಸಂಸಾರ ಅನ್ನುವ ಸ್ಪಷ್ಟ ಅರ್ಥ ನೀಡಿದ್ದಾರೆ. ದಂಡ ಅಂದರೆ ದ್ವಿಚಕ್ರ ವಾಹನ ಸವಾರರ ಖಾಲಿ ತಲೆ ಎಂಬ ಅದ್ಭುತ ಅರ್ಥ ಕೊಟ್ಟಿರುವುದನ್ನು ಪೊಲೀಸಪ್ಪರೆಲ್ಲಾ ಒಪ್ಪಲೇಬೇಕು.

ಬಕೆಟ್, ಇಂಗ್ಲಿಷ್ ಪದವಾದರೂ ಅದಕ್ಕೆ ಕನ್ನಡದಲ್ಲಿ ಏನು ಕೆಲಸ ಎಂದು ಕೇಳಿದರೆ ಇಲ್ಲಿ ಉತ್ತರವಿದೆ. ನಾಚಿಕೆಗೆಟ್ಟವ, ಮೇಲಿರುವವರನ್ನು ಬುಟ್ಟಿಗೆ ಹಾಕುವ ವ್ಯಕ್ತಿಗೆ ಬಕೆಟ್ ಹಿಡಿಯುವವನು ಎಂದು ಕರೆಯುತ್ತಾರೆ ಎಂದು ಇಲ್ಲಿ ಉಲ್ಲೇಖಿಸ ಲಾಗಿದೆ. ಇನ್ನು ಮಂಗಳಾರತಿಗೆ ಬೈಗುಳ ಎಂಬ ಅರ್ಥ ಕೊಟ್ಟಿದ್ದರಿಂದ ಅರ್ಚಕರು ಈ ನಿಘಂಟನ್ನು ನಿಷೇಧಿಸಲು ಒತ್ತಾಯಿಸಬಹುದೇ?

ಈ ಹೊಸ ರುಚಿಯ ‘ಪದಾರ್ಥ’ಗಳನ್ನೆಲ್ಲ ಜಗಿದ ನಂತರ ಮತ್ತೆ ಮತ್ತೆ ನೆನಪಾಗುವುದು, ಅಕ್ರಮಕ್ಕೆ ಕೊಟ್ಟ ಅರ್ಥ-  ಕೆ.ಪಿ.ಎಸ್.ಸಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.