ಭಾನುವಾರ, ಜುಲೈ 3, 2022
27 °C
ಟಠಡಢಣ

ದಂಗೆ ಎದ್ದವರಿಗೆ ಪಂಚಮಿ ಉಂಡಿ!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಹೊಳಿ ಉಕ್ಕಿ ಹರಿದಿದ್ದರಿಂದ ಮನಿ ಬಿಟ್ಟು ಗಂಜಿ ಕೇಂದ್ರ ಸೇರಿದ್ದ ಸಂತ್ರಸ್ತರಿಗೆ ಆಡಿಯೋರಪ್ಪನೋರು ‘ನಾನs ನಿಮ್ಮ ಸಿ.ಎಂ’ ಅಂತ ಖಾತರಿಪಡಿಸಿದ್ದನ್ನು ಟೀವ್ಯಾಗ್‌ ನೋಡ್ತಾ ಕುಂತಿದ್ದೆ. ಅಷ್ಟೊತ್ತಿಗೆ ಪ್ರಭ್ಯಾನ ಫೋನ್‌ ಬಂತು. ನಾಗರ ಪಂಚಮಿ ಉಂಡಿ, ಕರದಂಟ್‌ ತಿನ್ನಾಕ್‌ ಬಾ ಅಂತ ಬಾಯ್ತುಂಬ ಕರೆದ. ಹೆಂಡ್ತಿ ಊರಿಗೆ ಹೋಗಿದ್ದರಿಂದ ಬಾಯಿ ರುಚಿ ಕೆಟ್ಟಿತ್ತು. ಉಂಡಿಪಂಡಿ ತಿಂದ್ರ ಸರಿಹೋಗ್ತದ ಅಂತ ಅನ್ಕೊಂಡು, ‘ನೀ ಕರಿಯೋದು ಹೆಚ್ಚs, ನಾ ಬರೋದು ಹೆಚ್ಚs’ ಅಂತ ಹೇಳಿದೆ.

‘ಏಯ್‌, ಹಂಗೆಲ್ಲ ಹೇಳ್ಬೇಡ. ಅತೃಪ್ತ ಶಾಸಕರು ಕೇಳಿಸಿಕೊಂಡಾರ್‌. ‘ನೀವs ನಮ್ಮನ್ನು ಕರ‍್ದು ಮಂತ್ರಿಗಿರಿ ಕೊಡೋದ್‌ ಹೆಚ್ಚs, ನಾವಾಗಿ ಬರೋದು ಹೆಚ್ಚs’ ಅಂತ ಅಂತರಪಿಶಾಚಿ ಎಂಎಲ್‌ಎಗಳು ಪ್ರಮಾಣ ವಚನ ಸ್ವೀಕಾರದ ಫೋನ್‌ ಕರೆ ಬರೋದನ್ನ ಕಾಯ್ಕೊಂಡು ಕುಂತಾರ್‌’ ಅಂದ.

‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಅನ್ನೋ ಹಂಗ್ ಆಗೇದೇಳ್‌’ ಅಂತ ಹೇಳ್ಕೊಂತs ನಾ ಪ್ರಭ್ಯಾನ ಮನಿ ಬಾಗಿಲಿಗೆ ಬಂದುಬಿಟ್ಟಿದ್ದೆ.

ಮನಿ ಒಳಗಿನಿಂದ ಪ್ರಭ್ಯಾನ ಮಗಾ ಪಕ್ಯಾ, ‘ನಾಲ್ಕ್ ಬ್ಯಾಡಾ ನಂಗ್‌ ಐದ್‌ ಬೇಕೇ ಬೇಕ್‌’ ಅಂತ ರಚ್ಚೆ ಹಿಡಿದು ಅಳಾಕತ್ತಿದ್ದ. ‘ಹಬ್ಬದಾಗ್‌ ಏನಲೇ ನಿಂದ್‌ ಕಿರಿಕಿರಿ’ ಅಂತ ಪ್ರಭ್ಯಾ ಜೋರ್‌ ಮಾಡಾಕತ್ತಿದ್ದ.

‘ಏಯ್‌, ಹುಡುಗ ಹಕ್ಕಿನಿಂದ ಕೇಳಾಕತ್ತದ. ನಾಲ್ಕ ಕೊಟ್ಟು ಸುಮ್ಮ ಕುಂದ್ರುಸುದು ಬಿಟ್ಟು, ಅಂವ್ಗs ಜೋರ್‌ ಮಾಡ್ತಿ ಅಲ್ಲೋ’ ಎಂದೆ.

‘ಏಯ್‌... ಉಂಡಿ, ಕರದಂಟು, ಕರ್ಚಿಕಾಯಿ ನನ್ನ ಖಾತೆಯಲ್ಲಿ ಇಲ್ಲಪಾ. ಎಲ್ಲಾ ಆಕೀದs ಕಾರ್‌ಬಾರ್‌’ ಎಂದ.

ಅಡುಗಿ ಮನ್ಯಾಗನಿಂದ ಹೊರ ಬಂದ ಪಾರೋತಿ ಮಗನ್ನ ದರದರ ಎಳೆದುಕೊಂಡ್‌ ಒಳಗೆ ಹೋಗಿ ಒಂದೆರಡು ಏಟು ಕೊಡುತ್ತಿದ್ದಂತೆ ಪಕ್ಯಾನ ಅಳು ಬಂದಾತು. ‘ಓಣ್ಯಾಗ್‌ ನಾಲ್ಕೈದು ಮನೀಗೆ ಹಂಚುದದ. ನಿಮ್ಮಪ್ಪನ ಗೆಳ್ಯಾರ್‌ ಬರ್ತಾರ್. ಅವ್ರಿಗಿಷ್ಟ ಕೊಡಬೇಕು. ಒಂದೆರಡು ತಿನ್ನೋದು ಬಿಟ್ಟು, ನಾಲ್ಕೈದು ನಂಗ ಬೇಕು ಅನ್ನಾಕ್‌ ಅದೇನ್‌ ಭಾಜಪ ಸರ್ಕಾರದಾಗ್‌ ಖಾಲಿ ಇರೋ ಮಂತ್ರಿ ಪದವಿ ಅನ್ಕೊಂಡಿ ಏನೋ ಮಡ್ಡಾ’ ಎಂದು ಮೂದಲಿಸಿದಳು.

‘ಅರೆ, ಇದೇನೋ ಪ್ರಭ್ಯಾ, ಪಂಚಮಿ ಉಂಡಿಗೂ ಪಂಚಮಸಾಲಿಗಳ ನಾಲ್ಕು ಸಚಿವರ ಹುದ್ದೆ ಬೇಡಿಕೆಗೂ ನಿನ್ನ ಹೆಂಡ್ತಿ ತಳಕ್‌ ಹಾಕಾಕತ್ತಾಳಲ್ಲೊ. ಉಂಡಿ ತಿನ್ನಾಕ್‌ ನಾ ಬಂದಿದ್ದ ತಪ್ಪಾತೇನೊ. ನಿನ್ನ ಭಾರ್ಯೆ ಭಾಳ್‌ ಬೆರಕಿ ಅದಾಳ್‌ ಬಿಡಪಾ’ ಎಂದೆ.

ಅಷ್ಟೊತ್ತಿಗೆ ಸೇಂಗಾ ಉಂಡಿ ತಿನ್ಕೊಂತ್‌, ಅಂಗ್ಯಾಗs ಕಣ್ಣಾಗಿನ ನೀರು, ಮೂಗ್‌ನ್ಯಾಗಿನ ಸುಂಬ್ಳಾ ಒರೆಸ್ಕೋಂತ ಹೊರಗ ಬಂದ ಪಕ್ಯಾ, ‘ಯಪ್ಪಾ, ದೇಶದಾಗ್‌ ಎಷ್ಟ ಹುಲಿ ಅದಾವ. ಅಕ್ಕೋರು ಕೇಳ್ಕೊಂಡ್‌ ಬಾ ಅಂದಾರ್‌’ ಎಂದ.

‘ನಿನಗ್‌ ಗೊತ್ತೇನಪಾ’ ಅಂತ ಕೇಳ್ದ. ‘ಹ್ಞೂಂನಪಾ. 2,967 ಅದಾವ್‌ ನೋಡ್‌’ ಎಂದೆ.

‘ನಿನ್ನ ಲೆಕ್ಕಾ ತಪ್ಪೇದ್. ದೇಶದಾಗ್ ಬರೋಬ್ಬರಿ 2,970 ಹುಲಿ ಅದಾವ್‌’ ಅಂದ.

‘ಏಯ್ ಹುಚ್ಚ, ಮೂರು ಹುಲಿ ಎಲ್ಲಿಂದ ತಂದು ಹೊಸ್ದಾಗಿ ಸೇರ‍್ಸಿದಿ’ ಎಂದು ಜಬರಿಸಿದೆ.

ಏಕಚಕ್ರಾಧಿಪತಿಯಾಗಿ ರಾಜ್ಯದಲ್ಲಿ ಅಧಿಕಾರ ನಡೆಸ್ತಿರೊ ‘ರಾಜಾ ಹುಲಿ’, ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಓಡಾಡಿದ ‘ನಮೋ’ ಹುಲಿ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ‘ಚಾಣಾಕ್ಷ’ ಹುಲಿ ಸೇರಿಸಿದ್ರನs ಹುಲಿಗಳ ಸಂಖ್ಯೆ ಪೂರ್ಣಗೊಳ್ಳೋದು’ ಅಂತ ಪ್ರಭ್ಯಾ ಮೀಸೆ ತಿರುವಿದ.

‘ಯಪ್ಪಾ, ನಿನ್ನ ಕಾಲಾಗ್‌ ಇಲಿ ಓಡ್ಯಾಡಾಕತ್ತಾದ’ ಎಂದು ಪಕ್ಯಾ ಗಾಬರಿ ದನಿಯಲ್ಲಿ ಹೇಳುತ್ತಿದ್ದಂತೆ ಪ್ರಭ್ಯಾ, ಕುರ್ಚಿಯಿಂದ ಧಡಕ್ಕನೆ ಎದ್ದು ಠಣ್ಣನೆ ಬಾಗಿಲಿನತ್ತ ಹಾರಿ, ‘ಏ ಪಾರಿ, ಇಲಿ ಬಂದದ ಬಾರೇ’ ಅಂತ ಕೂಗಿದ.

‘ಎಲ್ಲಿ, ಎಲ್ರಿ’ ಅಂತ ಕೂಗ್ತಾ ಪಾರೋತಿ, ಕಸಬರಿಗೆ ಹಿಡ್ಕೊಂಡ್‌s ಸೊಂಟಕ್ಕ ಸೀರಿ ಸಿಗಿಸಿ ಓಡಿ ಬಂದಳು.

‘ಬೇ ಯವ್ವಾ ಇಲಿ ಬಂದಿಲ್ಲ. ಯಪ್ಪಾ ಹುಲಿಗಳ ಬಗ್ಗೆ ದೊಡ್ಡದಾಗಿ ಮಾತಾಡಾಕತ್ತಿದ್ನಲ್ಲ. ಅಂವ್ಗ ಅಂಜಸಾಕ್‌ ಚಾಷ್ಟಿ ಮಾಡ್ದೆ’ ಎಂದು ಪಕ್ಯಾ ಪಕಪಕನೆ ನಗುತ್ತ ಹೊರಗೆ ಓಡಿದ. ಕಿಸಿಕಿಸಿ ನಗುತ್ತ ಪಾರೋತಿನೂ ಅಡುಗೆ ಮನಿಗೆ ಓಡಿದಳು. ಈ ಹುಲಿ– ಇಲಿ ಗದ್ದಲ ನೋಡ್ತಾ ನಾ ಸುಮ್ಮನೆ ಕರದಂಟ್ ರುಚಿ ನೋಡ್ತಾ ಸೋಫಾ ಮೇಲೆ ತೆಪ್ಪಗೆ ಕುಂತಿದ್ದೆ.

‘ಏಯ್ ತೆಪರ್‌ ನನ್ನ ಮಗ್ನ. ನೀನರ ಹೇಳ್‌ಬಾರ್ದೇನೊ ಮಳ್ಳ. ಸುಮ್ಮ ಕುತ್ಕೊಂಡ್‌ ನಾಟ್ಕಾ ನೋಡಾಕತ್ತಿ ಏನ್‌’ ಅಂತ ಪ್ರಭ್ಯಾ ಜೋರ್‌ ಮಾಡ್ದಾ. ಇಲಿ ಹಗರಣದಿಂದಾಗಿ ಅವನ ನಡುಕ ಕಡಿಮೆಯಾಗಿರಲಿಲ್ಲ. ನಡುಗುವ ಕೈಗಳಿಂದಲೇ ಟೀವಿ ಚಾಲೂ ಮಾಡಿದ.

‘ನಾವು ಅತೃಪ್ತರಲ್ಲ. ದಂಗೆ ಎದ್ದವರು’ ಅಂತ ಹಳ್ಳಿ ಹಕ್ಕಿ ಪೊಲೀಸ್‌ ಭದ್ರತೆ ಒಳ್ಗ ಹೊಸಾ ಹಾಡು ಹೇಳೂದು ಪ್ರಸಾರ ಆಗಾಕತ್ತಿತ್ತು. ಸ್ವಲ್ಪ ದಿವ್ಸ್‌ ಹಿಂದ್‌ ಕುಮಾರಣ್ಣ ದಂಗೆ ಏಳಾಕ್ ಕರೆಕೊಡಬೇಕಾಗ್ತೈತಿ ಅಂತ ಹೇಳಿದ್ದಕ್ಕ ಆಕಾಶ್ ಭೂಮಿ ಒಂದ್ ಮಾಡಿದ್ದ ಪಕ್ಷಕ್ಕs ದಂಗೆ ಎದ್ದವರೆಲ್ಲ ಗುಳೆ ಹೊಂಟಾರಲ್ಲೊ ಅದಕ್ಕೇನಂತಿ’ ಎಂದೆ.

‘ದಂಗೆ ಎದ್ದವರು, ಏಳುವವರು, ಎಬ್ಬಿಸುವವರು ಎಲ್ಲಾ ಪಕ್ಷದಾಗ್‌ ಎಲ್ಲಾ ಕಾಲಕ್‌ ಇದ್ದೇ ಇರ‍್ತಾರ್‌. ಎದ್ದೇಳ್‌ ಗಡಂಗಿಗೆ ಹೋಗೋಣ’ ಅಂತ ಪ್ರಭ್ಯಾ ನನ್ನ ಎಳಕೊಂಡು ಹೊಂಟಾ.

ಅದೇ ಹೊತ್ತಿಗೆ ರೇಡಿಯೊದಾಗ್‌, ದಂಗೆ ಎದ್ದ ಮಕ್ಕಳು ಚಿತ್ರದ ‘ನಾವೆಂದೂ ಅಂಜುವುದಿಲ್ಲ, ನಮ್ಮಾಸೆ ಸಂಚಿನದಲ್ಲಾ, ಕವಲಾಗೆ ಕೂಡಿದರೂ ಒಂದಾಗಿ ನಡೆಯೋಣ’ ಹಾಡು ಕೇಳಿ ಬರಾಕತ್ತಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು