ಬುಧವಾರ, ಮಾರ್ಚ್ 3, 2021
19 °C

ಕೊಳಕು ನೋಟು, ಮನಸ್ಸುಗಳು...

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Deccan Herald

 ಚಹಾದ ಅಂಗಡ್ಯಾಗ್‌ ನಾನು, ಪ್ರಭ್ಯಾ ಬಿಸಿ ಬಿಸಿ ಚಹಾ ಕುಡ್ಯಾಕ ಕುಂತಿದ್ವಿ. ‘ಭಜಿ ಮೆಣಸಿನಕಾಯಿದ್‌ ಬೇಕೊ ಇಲ್ಲಾ ಉಳ್ಳಾಗಡ್ಡಿದೊ’ ಎಂದು ಪಕ್ಯಾ ಕೇಳ್ದ.

‘ಭಜಿ ತಿಂದಿಂದ ರೇವಣ್ಣನ ಕಣ್ಣಾಗ್‌ ನೀರ್‌ ಬಂದ್ಹಂಗ್‌ ನಮ್ಗೂ ಬರಬಾರ್ದು ನೋಡಪಾ. ಅಂಥಾ ಭಜಿ ಕೊಡು’ ಎಂದೆ. ‘ಖಾರ್‌ ಹತ್ತುವಂಗ್‌ ಭಜಿ ತಿಂದ್ರನ ಮಜಾ. ಖಾರದ ಭಜಿ ಬ್ಯಾಡಂದ್ರ ಸಪ್ಪನ್ನ ಪಾವ್‌ಭಾಜಿ ತಿನ್ರಿ’ ಅಂದ.

‘ನಕ್ಸಲರಿಗೆ ಬೆಂಬ್ಲಾ ಕೊಡೊವ್ರಂಗ್ಹ್‌ ಭಜಿ ಬೆಂಬಲಿಸಿ ಮಾತಾಡ್‌ ಬ್ಯಾಡ್‌. ಭಜಿನ ಭರ್ಚಿನೋ, ಬಾಂಬೊ ಅಂತ ಆರೋಪ ಹೊರಿಸಿ ಜೈಲಿಗೆ ಕಳಸ್ತಾರ್‌ ಹುಷಾರ್ಲೆ’ ಎಂದೆ.

‘ಈಗೀಗ್ ಜೈಲುಗಳೂ ಭಾರಿ ಸುದ್ದಿ ಮಾಡಾಕತ್ತಾವ ಬಿಡಪಾ. ಮಲ್ಯಾನಿಗೆ ವಿಲಾಸಿ ಜೈಲು, ಲಾಲೂಗೆ ಸೊಳ್ಳೆ ಕಾಟದ ಜೈಲು, ನಕ್ಸಲ್‌ರ ಬಗ್ಗೆ ಸಹಾನುಭೂತಿ ಹೊಂದಿದ್ರ ಮೋದಿ ಕೊಲೆ ಸಂಚಿಗೆ ಸಹಕರಿಸಿದ ಆರೋಪದ ಮೇಲೆ ಮನೇನ ಜೈಲು. ಕಾಂಗ್ರೆಸ್‌ ಪಕ್ಷ ಸೋಲ್ಸಾಕ್‌ ಜೈಲಿಗೆ ಹೋಗಿದ್ದೆ ಎಂಬ ಗಣಿ ಧಣಿ ಮಾತ್‌ ಕೇಳಿದ್ರ ಕತ್ತಿಗೂ ಜ್ವರ ಬರ್ತಾವ್‌. ಕಾಂಗ್ರೆಸ್‌ ಸೋಲ್ಸಾಕ್‌ ತೊಡೆ ತಟ್ಟಿದವರೆಲ್ಲ ಜೈಲಿಗೆ ಮತ್ತೊಮ್ಮೆ ಹೋದ್ರ ಸಾಕ್‌ ಬಿಡು. ನಗರ ನಕ್ಸಲ್‌ ಹೆಸರ್‌ನ್ಯಾಗ್‌ ಜೈಲಿಗೆ ಹೋಗಾಕ್‌ ನಾನೂ ತಯಾರ್‌ ಅದೀನಿ. ಜೈಲ್‌ನ್ಯಾಗ್‌ ವಿಜಯ್‌ ಮಲ್ಯಂಗೆ ಕೊಡಬೇಕೆಂದಿರುವ ಸೌಲಭ್ಯಗಳನ್ನೆಲ್ಲ ನಂಗೂ ಕೊಡಬೇಕ್‌ ಅಂತ ಕರಾರ್‌ ಮಾಡ್ತೀನಿ’ ಅಂದ.

‘ಏಯ್‌ ಹುಚ್ಚ. ಎಲ್ಲಿ ಅದಿ ನೀನು. ರಾಂಚಿ ಆಸ್ಪತ್ರೆಯಲ್ಲಿ ಲಾಲೂಗೆ ಸೊಳ್ಳೆ ಕಾಟ, ನಾಯಿಗಳ ಬೊಗಳುವಿಕೆ ಕಾಟದಿಂದ ನಿದ್ದೀನ ಬರುವಲ್ದಂತ. ಅಂಥಾದ್ರಾಗ್‌ ನಿಂಗ್‌ ಮಲ್ಯಾನಿಗೆ ಕೊಡುವ ಐಷಾರಾಮಿ ಜೈಲ್‌ ಕೋಣೆ ಕೊಡ್ತಾರಂತ ಏನ್‌ ಖಾತ್ರಿ ಐತಿ. ಮಬ್‌ನಂಗ್‌ ಮಾತಾಡಬ್ಯಾಡ್‌, ಸುಮ್ಮ ಕುಂದ್ರು’ ಎಂದೆ.

ಅಷ್ಟೊತ್ತಿಗೆ ಹೊರಗ್‌ ಮೈಕ್‌ನ್ಯಾಗ್‌, ‘ಬಹು ತಾರಾಗಣದ ಈಸ್ಟಮನ್‌ ಕಲರ್‌ ಚಿತ್ರ ‘ಸಮ್ಮಿಶ್ರ ಸರ್ಕಾರ’ ನೂರು ದಿನ ಪೂರ್ಣಗೊಳಿಸಿ ಮುನ್ನುಗ್ಗಾಕತ್ತದ. ಗಲ್ಲಾಪೆಟ್ಟಿಗೆ ಚಿಂದಿ ಮಾಡಾಕತ್ತದ. ದ್ಯಾವೇಗೌಡ್ರ ನಿರ್ದೇಶನ, ನಾಟಿ ಮಗ ನಟಿಸಿರುವ, ಸಮನ್ವಯ(?) ನಟ ಸಿದ್ರಾಮಣ್ಣ, ಖಳನಾಯಕ ಯಡಿಯೂರಪ್ಪ ಅವರ ಅಮೋಘ ನಟನೆಯ, ನವರಸಭಾವಗಳ ಚಿತ್ರ ನೋಡಿ ಆನಂದಿಸಿ. ಮರೆತು ನಿರಾಶರಾಗಬೇಡಿ...’ ಕೇಳಿ ಬರಾಕತ್ತಿತ್ತು.

‘ಕುಮಾರಣ್ಣನ ಸರ್ಕಾರದ ಆಯುಷ್ಯ ಎಷ್ಟಿರಬಹುದು. ಈ ಮಾಜಿ ‘ಮುಮ’ಗಳಿಗೆ ಏನಾಗೇದ ಅಂತೀನಿ. ಒಬ್ಬಾಂವ ನಾ ಮತ್ತ ಸಿಎಂ ಆಗ್ತೀನಿ ಅಂತ ಹುಸಿ ಬಾಂಬ್‌ ಒಗಿತಾನ. ಇನ್ನೊಬ್ಬ, ಶ್ರಾವಣ ಮುಗಿತಿದ್ಹಂಗ್‌ ನಾನs ಮುಂದಿನ ಸಿಎಂ ಅಂತ ಹೇಳಿದ ಮರು ದಿನಾನ, ನಂಗ ಭಾವಿ ‘ಮುಮ’ ಅಂತ ಕರಿಬ್ಯಾಡ್ರೊ ಅಂತ ಗೋಗರಿತಾನ. ಇವ್ಕೇನ್‌ ಅರಳ್‌ ಮರಳ್‌ ಹಿಡ್ದದ ಏನ್‌’ ಎಂದ ಪ್ರಭ್ಯಾ.

‘ಅರವತ್‌ ದಾಟಿಂದ್‌ ಅರಳ್‌ ಮರಳ್‌ ಅಲ್ದ ಮತ್ತೇನ್‌ ಇರ್ತದೋ ಮಳ್ಳ. ಕುಮಾರಣ್ಣಗೆ ಬೆದರಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳೊ ಕೊಳಕು ಮನಸ್ಸುಗಳ ತಂತ್ರಲೇ ಅದು’ ಎಂದೆ.

‘ಸೂಪರ್‌ ಸಿಎಂ ರೇವಣ್ಣ ಭಜಿ ತಿನ್ನುವತ್ನ್ಯಾಗ್ ಅತ್ತಿದ್ದು ನೋಡಿದ್ರ ಸರ್ಕಾರಕ್ಕ ಇಂದಲ್ಲ ನಾಳೆ ಏನೊ ಕೇಡ್ಗಾಲ್‌ ಕಾದೈತಿ. ಕಣ್ಣಾಗ್‌ ನೀರು ಬರುವಂಗ್‌ ಮಾಡಿದ ಮೆಣಸಿನಕಾಯಿ ಮ್ಯಾಲ್‌ ನಿಷೇಧ ವಿಧಿಸಿಲ್ಲ ಪುಣ್ಯಾತ್ಮ. ಕಣ್ಣೀರು ಯಜ್ಞ ಮಾಡಿದ್ರ ಕಂಟಕಾ ದೂರ್‌ ಆಗ್ತೈತಿ’ ಎಂದು ಪ್ರಭ್ಯಾ ಭವಿಷ್ಯ ಹೇಳ್ದ.

‘ಅವ್ರ ಭವಿಷ್ಯ ತಗೊಂಡ್‌ ನಮ್ಗೇನ್‌ ಆಗ್ಬೇಕಾಗೇತಿ. ನಮ್ಮ ಭವಿಷ್ಯ ನೋಡ್ಕೊಳ್ಳೋಣ ನಡಿ. ಪಕ್ಯಾಗ ಬಿಲ್ ಕೊಡು’ ಎಂದೆ.

ಪ್ರಭ್ಯಾ ಬಿಲ್‌ ಕೊಡಾಕ್‌ ಕೊಟ್ಟ ನೋಟ್‌ ನೋಡಿದ ಪಕ್ಯಾ, ‘ಏಯ್‌, ಈ ನೋಟ್‌ ಕೊಳಕೈತಿ, ನೀನs ಇಟ್ಕೊ’ ಎಂದ. ‘ನಿನ್ನ ಅಂಗಡ್ಯಾನ್‌ ಕಪ್ಪುಬಸಿಯಷ್ಟು, ರಾಜಕಾರಣಿಗಳ ಮನಸ್ಸಿನಷ್ಟು ಕೊಳಕ್‌ ಇಲ್ಲೇಲ್‌ ಸುಮ್ಮ ತಗೊ’ ಎಂದ ಪ್ರಭ್ಯಾನ್‌ ಮಾತಿಗೆ ‍ಪಕ್ಯಾ ಕಿವಿಗೊಡಲಿಲ್ಲ.

‘ಎಂಥಾ ಕೊಳಕ್‌ ನೋಟ್‌ಗಳನ್ನ ಕಿಸೆದಾಗ್‌ ಇಟ್ಕೊಂಡಿದಿಯೋ. ಅವುಗಳಿಂದ ರೋಗ ಬರ್ತದ ಅಂತ ಸುದ್ದಿ ಓದಿ ಇಲ್ಲ. ನೋಟ್‌ ಅಷ್ಟ ಕೊಳಕ್‌ ಅಲ್ಲ. ನೋಟ್‌ ರದ್ದು ಮಾಡಿದವ್ರ ಮನಸ್ಸೂ ಕೊಳಕ್‌ ಐತಿ ಬಿಡು’ ಎಂದು ರೇಗಿಸಿದೆ.

‘ಏಯ್‌ ಹಂಗೆಲ್ಲ ಅನಬ್ಯಾಡಪಾ’ ಅಂದ ಪ್ರಭ್ಯಾ.

‘ಯಾಕ್‌ ಹೇಳಬಾರ್ದಪಾ. ಮೊನ್ನೆ ಆನಿ ಎದ್ದ ಓಡಾಕತ್ತದ ಅಂತ ದೊಡ್ಡದಾಗಿ ಎದೆ ಬಡ್ಕೊಂದಿದ್ಯಲ್ಲ. ಈಗ ಪೆಟ್ರೋಲ್‌, ಡೀಸೆಲ್‌ ಬೆಲೆ ಆಕಾಶಕ್ಕ ಏರಾಕತ್ತಾವ್‌, ರೂಪಾಯಿ ಬೆಲೆ ಪಾತಾಳಕ್ಕ ಕುಸ್ಯಾಕತ್ತದ. ಇದ್ಕ ಏನ್‌ ಹೇಳ್ತಿಯಪ’ ಎಂದೆ.

‘ನೀ ಏನ್‌ ಹೇಳ್ತಿ ಬಿಡು. ಮೋದಿ ಅವ್ರ ಬಾಯಿ ಮುಚ್ಕೊಂಡಾರ್‌. ಹಿಂದ್‌ ಇದೇ ಮೋದಿ ಸಾಹೇಬ್ರು, ರೂಪಾಯಿ ಹೀಂಗ್‌s ಬೀಳ್ಕೋತ್‌ ಹೋದ್ರ, ನಕಾಶದಾಗ್‌ ಭಾರತನs ಕಾಣೆಯಾಗ್ತದ ಅಂತ ಬಾಯಿ, ಬಾಯಿ ಬಡ್ಕೊಂಡಿದ್ರು. ಈಗ ಭಾಯಿಂಯೊ ಅಂತ ಬಾಯಿನs ಬಿಡಾಕತ್ತಿಲ್ಲ. ಬಾಯ್ಯಾಗ್‌ ಕೊಳಕ್‌ ನೋಟ್‌ ಇಟ್ಕೊಂಡಾರ್‌ ಏನ್‌, ರಫೇಲ್‌ ನೋಟ್‌ ಇಟ್ಕೊಂಡಾರೊ ಗೊತ್ತಾಗವಲ್ದು’ ಎಂದೆ.

ನನ್ನ ಮಾತ್‌ ಕೇಳಿ ಪ್ರಭ್ಯಾಗ್ ಏನ್‌ ಉತ್ರಾ ಕೊಡ್ಬೇಕು ಅನ್ನೋದು ಗೊತ್ತಾಗದ ಕೆಮ್ಮ ಹತ್ತಿತು.

‘ನೀರ್ ಕುಡೀಪಾ, ಕೊಳಕ್‌ ಬಾಯವ್ನ. ಉಪ್‌ ತಿಂದ್‌ ಮ್ಯಾಲ್‌ ನೀರ್‌ ಕುಡಿಬೇಕ್ ಅನ್ನು ಹಂಗ್‌, ನೋಟ್‌ ರದ್‌ ಮಾಡಿದ ಮ್ಯಾಲೆ ಕೊಳಕು, ಕಪ್ಪು ನೋಟಾನೂ ನುಂಗಬೇಕ್‌ ನೋಡಪಾ’ ಎಂದೆ.

ಮನದ ಮಾತ್‌ನ್ಯಾಗ್‌ ಭಾರಿ ಭಾಷ್ಣಾ ಬಿಗ್ಯಾವ್ರು, ಈಗ ನೋಟ್‌ ಬೆಲೆ ಪಾತಾಳಕ್ಕೆ ಕುಸಿತಿರುವಾಗ ಬಾಯಿಗೆ ಚಾವಿ ಹಾಕ್ಕೊಂಡು ಮಾತs ಬರ್ಲಾದವ್ರಂಗ್‌ ಸುಮ್ಮನಾಗ್ಯಾರ. ಸಿಂಗ್‌ ಸಾಹೇಬ್ರಿಗೆ ಮೌನಿ ಬಾಬಾ ಅಂತ ಟೀಕಿಸಿದವ್ರು ಈಗ ಮೂಕನಂಗ್ಹ್‌ ನಟಸಾಕತ್ತಾರ. ಮಾತ್‌ ಬಂದ್‌ ಆಗ್ಯಾವೇನ್‌. ಮೂಗನಂತೆ ನಟಸಾಂವಾ ಭಾಳ್‌ ಡೇಂಜರ್‌ ಅಲ್ವಾ’ ಎಂದೆ.

ಏನುತ್ತರ ಕೊಡಬೇಕೊ ತಿಳಿಯದ ಪ್ರಭ್ಯಾ, ತ್ರಿಮೂರ್ತಿ ಚಿತ್ರದ ಹಾಡು, ‘ಮೂಗನ ಕಾಡಿದರೇನು... ಸವಿ ಮಾತನು ಆಡುವನೇನು...’ ಎಂದು ನೆನಪ್ ಮಾಡ್ಕೊಂಡು  ಗುನುಗುನಿಸತೊಡಗಿದ. ಆ ಹಾಡಿನ ಗುಂಗ್‌ನ್ಯಾಗs ನಾನೂ ಮನಿಕಡಿ ಹೊಂಟ್ಯಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು