ಶುಕ್ರವಾರ, ಜೂನ್ 24, 2022
28 °C

ಹೀಗೊಂದು ಮನವಿ...

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಕೋಮಾದಲ್ಲಿದ್ದ ಮೌಢ್ಯ ನಿಷೇಧ ಕಾಯ್ದೆಗೆ ರಾಜ್ಯ ಸರ್ಕಾರ ಈಚೆಗೆ ಪುನರ್ಜೀವ ಕೊಟ್ಟಿದ್ದರೂ ಎಲ್ಲರೂ ಸಂತೋಷಪಟ್ಟಿಲ್ಲ ಎಂಬುದು ಮಾತ್ರ ವಾಸ್ತವ. ಅಚ್ಚರಿಯೆಂದರೆ ಅಸಮಾಧಾನಪಟ್ಟವರು ಮಾನವರಲ್ಲ. ಪ್ರಾಣಿ, ಪಕ್ಷಿಗಳು!

ಒಂದು ದಿವಸ ಕಾಗೆ, ಬೆಕ್ಕು, ಹಲ್ಲಿ, ಕೋಳಿ, ಗೂಬೆ ಮತ್ತು ನಾಯಿ ಎಲ್ಲವೂ ಸೇರಿಕೊಂಡು ಮೌಢ್ಯ ನಿಷೇಧದ ಬಗ್ಗೆ ಗಂಭೀರ ಚರ್ಚೆಗಿಳಿದವು. ಎಲ್ಲವುಗಳದ್ದೂ ಒಂದೇ ಪ್ರಶ್ನೆ. ಈ ನಿಷೇಧದಿಂದ ಯಾವ ಘನಕಾರ್ಯ ಸಾಧಿಸಿದಂತಾಯಿತು? ಚರ್ಚೆಯ ಕೊನೆಗೆ ಒಂದು ನಿರ್ಣಯಕ್ಕೆ ಬಂದವು. ಎಲ್ಲರೂ ನಿಧಾನಸೌಧಕ್ಕೆ ಹೋಗಿ ಸಿ.ಎಂ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸುವುದೆಂದು ನಿರ್ಧರಿಸಿದವು.

ಕಾಗೆ ಕಾಲಿನಲ್ಲಿ ಬರೆದ ಮನವಿ ಪತ್ರ ಹೀಗಿತ್ತು: ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ, ನಿಮ್ಮ ಹಭಿಮಾಣಿಗಳಾದ ಕಾಗೆ, ಗೂಬೆ, ಹಲ್ಲಿ, ಬೆಕ್ಕು, ನಾಯಿಗಳು ಮಾಡುವ ಆತ್ಮೀಯ ನಮಸ್ಕಾರಗಳು.

ಸರ್ಕಾರ ಈಚೆಗೆ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದಕ್ಕೆ ಮೊದಲಿಗೆ ತಮಗೆ ಅಭಿನಂದನೆಗಳು. ಅದನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ ನಮ್ಮ ನ್ನೆಲ್ಲಾ ಆ ಕಾಯ್ದೆಯಿಂದ ದೂರವಿಟ್ಟಿದ್ದರಿಂದ ವಿಷಾದ ವ್ಯಕ್ತಪಡಿಸಲೇಬೇಕಾಗಿದೆ. ಈ ಮನವಿ ಪತ್ರವನ್ನು ಕ.ಬು.ಗೆ ಹಾಕದೆ ಪೂರ್ತಿ ಓದುತ್ತೀರಿ ಎಂದು ನಂಬುತ್ತೇವೆ.

ಮೊದಲಿಗೆ, ಬಡಪಾಯಿ ಕಾಗೆಯನ್ನು ಜನ ತಮ್ಮ ಮೂಢನಂಬಿಕೆಯಿಂದಾಗಿ ತುಂಬಾ ದೂಷಿಸುತ್ತಾರೆ. ಕಾಗೆ ನಿರುಪದ್ರವಿ ಹಕ್ಕಿ ಎಂದೇ ಖ್ಯಾತಿ ಪಡೆದಿರುವುದು ತಮಗೂ ಗೊತ್ತು. ಹೆಚ್ಚೆಂದರೆ ಅದು ಜನರ ತಲೆಗೋ ಶರ್ಟಿಗೋ ಸೀರೆಗೋ ಇಕ್ಕೆ ಮಾಡಬಹುದು. ಕಾಗೆಯಿಂದಾಗಿ ಯಾವತ್ತಾದರೂ ‘ಹಕ್ಕಿ ಜ್ವರ’ ಹರಡಿದ್ದು ಗೊತ್ತಾ? ತಮಗೇ ಗೊತ್ತಿರುವಂತೆ ಮುಖ್ಯಮಂತ್ರಿಯಾಗಿದ್ದವರೊಬ್ಬರ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಆ ಕಾರನ್ನೇ ಬದಲಾಯಿಸಿಬಿಟ್ಟಿದ್ದರಲ್ಲವೇ! ಇದು ಒಂದು ರೀತಿಯ ಮೂಢನಂಬಿಕೆಯಾದರೆ, ಇನ್ನೊಂದು ಕಡೆ ಕಾಗೆಯು ಮನೆ ಎದುರು ಕೂಗಿದರೆ ನೆಂಟರು ಬಂದು ಮನೆಯ ಶಾಂತಿ ಭಂಗ ಮಾಡುತ್ತಾರೆ ಎಂಬ ಭಯ! ತಿಥಿಯ ಸಂದರ್ಭದಲ್ಲಿ ಮೊದಲು ಕಾಗೆಗೆ ಅನ್ನ ಸಂತರ್ಪಣೆ ಆಗಬೇಕೆಂಬ ಮೌಢ್ಯ ಬೇರೆ! ಇವನ್ನೆಲ್ಲಾ ಮೌಢ್ಯ ನಿಷೇಧ ಕಾಯ್ದೆಯಡಿ ಸೇರಿಸಲೇಬೇಕಾಗಿತ್ತು ಎಂಬುದು ನಮ್ಮ ಅಭಿಪ್ರಾಯ.

ಇನ್ನು ಗೂಬೆ ಬಗ್ಗೆಯೂ ತಮಗೆ ತಿಳಿದಿರುವಂತಹುದೇ. ಗೂಬೆಯಲ್ಲಿ ಜನ ಅದೇನು ಅಪಶಕುನ ಕಂಡಿದ್ದಾರೋ ಗೊತ್ತಿಲ್ಲ. ರಾತ್ರಿಯಷ್ಟೇ ಸಂಚಾರ ಹೊರಡುವ ಈ ಹಕ್ಕಿ ಅಪ್ಪಿತಪ್ಪಿಯೂ ಕೂಗಬಾರದಂತೆ. ಇದು ಎಷ್ಟು ಸರಿ? ಹಲ್ಲಿಯನ್ನೂ ಜನ ಸುಮ್ಮನೆ ಬಿಟ್ಟಿಲ್ಲ! ಹಲ್ಲಿ ಲೊಚಗುಟ್ಟುವ ಸಮಯದಲ್ಲಿ ಮಾತು– ಹರಟೆ ನಡೆಯುತ್ತಿದ್ದರೆ ಆ ಮಾತುಗಳಿಗೆ ಒಮ್ಮಿಂದೊಮ್ಮೆಲೇ ಬೆಲೆ ಜಾಸ್ತಿ ಬರುತ್ತದೆ. ಅದು ಏನೇ ಸುಳ್ಳು ಮಾತನಾಡಿದರೂ ಹಲ್ಲಿಯ ಲೊಚಗುಟ್ಟುವ ಸದ್ದು ಕೇಳಿದರೆ ಅದು ಅಪ್ಪಟ ಸತ್ಯವೆಂದು ನಂಬುವಷ್ಟು ಹೆಡ್ಡತನ ತೋರಿಸುವುದು ಸರಿಯಲ್ಲ. ಮೌಢ್ಯಗಳಲ್ಲಿ ಇದನ್ನೂ ಸೇರಿಸಿ ನಿಷೇಧಿಸಿಬಿಟ್ಟಿದ್ದರೆ ಹಲ್ಲಿಗೂ ಜನರಾಡುವ ಬೊಗಳೆಗೂ ಸಂಬಂಧ ಕಲ್ಪಿಸಿಕೊಳ್ಳುವುದು ಕಡಿಮೆಯಾಗುತ್ತಿತ್ತು.

ಕಪ್ಪು ಬೆಕ್ಕುಗಳಿಗಂತೂ ಮೂಢನಂಬಿಕೆಯಿಂದಾಗಿ ಬದುಕೇ ಶೂನ್ಯವಾಗಿದೆ. ಅಂತಹ ಬೆಕ್ಕುಗಳನ್ನು ಎಲ್ಲಿ ನೋಡಿದರೂ ಜನ ಅಟ್ಟಾಡಿಸಿಕೊಂಡು ಓಡಿಸುತ್ತಾರೆ. ಬೆಳಿಗ್ಗೆ ಶುಭಕಾರ್ಯಕ್ಕೆ ಮನೆಯಿಂದ ಹೊರಡುವವರಿಗೆ ಈ ಕಪ್ಪು ಬೆಕ್ಕುಗಳು ದಾರಿಗೆ ಅಡ್ಡ ಬಂದರಂತೂ ಮುಗಿಯಿತು. ಆ ಬೆಕ್ಕಿಗೆ ನೂರು ಶಾಪ ಹಾಕಿ, ಎಲ್ಲೂ ಹೋಗದೆ ಮನೆಯಲ್ಲೇ ಕೂರುವವರು ಇದ್ದಾರೆ. ಬೆಕ್ಕುಗಳ ಮೇಲೆ ಯಾವತ್ತೂ ಒಂದು ಕೆಟ್ಟ ಕಣ್ಣಿಡುವುದನ್ನು ಅಪರಾಧ ಎಂದು ಪರಿಗಣಿಸಬೇಕು.

ನಾಯಿಗಳನ್ನು ನೀವು ಮಾನವರು ಸಾಕುತ್ತೀರ, ಮುದ್ದು ಮಾಡುತ್ತೀರ, ಜೀವನದ ಒಳ್ಳೆಯ ಮಿತ್ರ ಅನ್ನುವ ಪಟ್ಟ ಕೂಡ ಕೊಡುತ್ತೀರ. ಆದರೆ ಮೂಢನಂಬಿಕೆ ವಿಷಯಕ್ಕೆ ಬಂದಾಗ, ರಾತ್ರಿ ಹೊತ್ತು ನಾಯಿಗಳು ವಿಚಿತ್ರ ರೀತಿಯಲ್ಲಿ ಕೂಗಿದರೆ ಅದಕ್ಕೆ ಬೇರೆಯೇ ಅರ್ಥ ಕಲ್ಪಿಸಿಕೊಂಡು ಅದನ್ನು ಅಪಾಯದ ಮುನ್ಸೂಚನೆ ಅನ್ನುತ್ತೀರ!

ಮುಖ್ಯಮಂತ್ರಿ ಅವರೇ, ತಾವೊಬ್ಬ ನಾಯಿಪ್ರೇಮಿ ಎಂಬ ನಂಬಿಕೆಯಿಂದ ವಿನಮ್ರವಾಗಿ ಪ್ರಾರ್ಥಿಸುತ್ತಿದ್ದೇವೆ. ನಾಯಿ ಕೂಗಿಗೆ ದಯವಿಟ್ಟು ಸಮಾಜದಲ್ಲೊಂದು ಗೌರವಯುತ ಸ್ಥಾನಮಾನ ಕೊಡಬೇಕು.ನಮ್ಮ ನರಿರಾಯರ ಕತೆ ಒಂದಿಷ್ಟು ಭಿನ್ನ.

ಈ ಮನವಿ ಪತ್ರದಲ್ಲಿ ನರಿಯ ಸಹಿಯೂ ಇಲ್ಲ. ಯಾಕೆಂದರೆ ಎಲ್ಲಾ ಪ್ರಾಣಿ ಪಕ್ಷಿಗಳ ಮೇಲೆ ‘ಅಪಶಕುನ’ದ ಆಪಾದನೆಗಳಿರುವಾಗ ನರಿರಾಯರ ಮುಖ ನೋಡಿದರೆ ಅದೊಂದು ಅದೃಷ್ಟ ಎಂಬ ಮೂಢನಂಬಿಕೆಯಿರುವುದು ಶುದ್ಧ ತಪ್ಪು. ಅದೂ ಹಳ್ಳಿಗಳಲ್ಲಿ ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಕೋಳಿ ಕದ್ದೊಯ್ಯುವ ನರಿಗಳ ಬಗ್ಗೆ ಜನರಿಗೆ ಯಾಕೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ?

ಆದ್ದರಿಂದ ಈ ‘ಅದೃಷ್ಟ’ದ ಗೊಡ್ಡುನಂಬಿಕೆಯನ್ನೂ ನಿಷೇಧಿಸಬೇಕೆಂಬುದಾಗಿ ನಮ್ಮೆಲ್ಲರ ಕೋರಿಕೆ.

ಇಂತು ನಿಮ್ಮ ವಿಶ್ವಾಸಿಗಳಾದ, ಕಾಗೆ, ಗೂಬೆ, ಹಲ್ಲಿ, ಬೆಕ್ಕು, ಕೋಳಿ ಮತ್ತು ನಾಯಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು