ಭಾನುವಾರ, ಮೇ 16, 2021
24 °C

ಅಂಗನವಾಡಿ ಕಟ್ಟಡ ನೆಲಸಮ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಸಮೀಪದ ಹೊಸನಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಯಾವುದೇ ಅನುಮತಿ ಪಡೆಯದೆ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಕೆಡವಿದ್ದು, ಇದನ್ನು ಖಂಡಿಸಿ ಮಂಗಳವಾರ ಸುವರ್ಣ ಕರ್ನಾಟಕ ಜನಪರ ಶಕ್ತಿ ವೇದಿಕೆ ಕಾರ್ಯಕರ್ತರು ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ವೇದಿಕೆಯ ಅಧ್ಯಕ್ಷ ಚಂದ್ರು ಮತ್ತು ಕಾಂಗ್ರೆಸ್ ಮುಖಂಡರು ಮಾತನಾಡಿ, ಜೆಡಿಎಸ್ ಬೆಂಬಲಿತ ಗ್ರಾ.ಪಂ.ಸದಸ್ಯರಾದ ಬಸವರಾಜು ಮತ್ತು ಕಿರಣ್‌ಕುಮಾರ್ ಮಾರ್ಚ್ 30ರಂದು ರಾತ್ರಿ ಯಾವುದೇ ಅನುಮತಿ ಪಡೆಯದೆ ಅಂಗನವಾಡಿ ಕಟ್ಟಡವನ್ನು ಕೆಡವಿದ್ದಾರೆ. ಈ ಸ್ವತ್ತನ್ನು ಖಾಸಗಿಯಾಗಿ ಬಳಸಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.ಸರ್ಕಾರಕ್ಕೆ ಸೇರಿದ ಕಟ್ಟಡವನ್ನು ನೆಲಸಮ ಮಾಡಲು ಗ್ರಾ.ಪಂ.ಸದಸ್ಯರಿಗೆ ಅಧಿಕಾರವಿಲ್ಲ. ಅಲ್ಲದೆ ಇದಕ್ಕಾಗಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಿಂದ ಯಾವುದೇ ಅನುಮತಿಯನ್ನೂ ಪಡೆದಿಲ್ಲ ಎಂದು ದೂರಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜೇಗೌಡ, ತಹಶೀಲ್ದಾರ್ ಎಲ್.ಸಿ.ನಾಗರಾಜ್, ಸಿಡಿಪಿಒ ಅಶ್ವತ್ಥಮ್ಮ ಹಾಗೂ ಚನ್ನರಾಯಪಟ್ಟಣ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಈ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ಉದ್ವಿಗ್ನ  ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.ನಂತರ ನಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜೇಗೌಡ ಮಾತನಾಡಿ, ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕಟ್ಟಡವನ್ನು 2 ವರ್ಷಗಳ ಹಿಂದೆಯೇ ನೆಲಸಮಗೊಳಿಸಲು ಸಿಡಿಪಿಒ ಆದೇಶ ನೀಡಿದ್ದರು. ತಾಲ್ಲೂಕು ಪಂಚಾಯಿತಿ ವತಿಯಿಂದ 3.50 ಲಕ್ಷ ರೂಪಾಯಿ ಅನುದಾನದಲ್ಲಿ ಆಗಲೇ ಹೊಸ ಕಟ್ಟಡವೂ ನಿರ್ಮಾಣವಾಗಿದೆ. ಹಳೆ ಕಟ್ಟಡವನ್ನು ಹಾಗೇ ಬಿಟ್ಟಿದ್ದು ಯಾರೋ ಕಿಡಿಗೇಡಿಗಳು  ಪಂಚಾಯಿತಿ ಅನುಮತಿ ಇಲ್ಲದೆ ನೆಲಸಮಗೊಳಿಸಿದ್ದಾರೆ ಎಂದು ಹೇಳಿದರು.ಈ ಸಂಬಂಧ ಅವರು ಚನ್ನರಾಯಪಟ್ಟಣ ಠಾಣೆಯಲ್ಲಿ  ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.