ಮಂಗಳವಾರ, ಏಪ್ರಿಲ್ 13, 2021
25 °C

ಅಂಗನವಾಡಿ: ನಿವೇಶನ ಸಮಸ್ಯೆ ಪರಿಹರಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಟ್ಟಡಗಳಿಗೆ ಎದುರಾಗಿರುವ ನಿವೇಶನ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ಸೂಚನೆ ನೀಡಿದರು.ನಗರದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾರದೊಳಗೆ ನಿವೇಶನ ಸಮಸ್ಯೆ ಇರುವ ಅಂಗನವಾಡಿ ಕಟ್ಟಡಗಳ ವರದಿ ತಯಾರಿಸಿ ಸೂಕ್ತ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕರಿಗೆ ಸೂಚಿಸಿದರು.ಜಿಲ್ಲೆಗೆ ಎಷ್ಟು ಅಂಗನವಾಡಿ ಕಟ್ಟಡಗಳ ಅವಶ್ಯಕತೆ ಇದೆ ಎಂದು ಮುಖ್ಯ ಯೋಜನಾಧಿಕಾರಿ ಬಸವರಾಜ ಪ್ರಶ್ನಿಸಿದರು. 825 ಅಂಗನವಾಡಿ ಕಟ್ಟಡಗಳು ಬೇಕಾಗಿದ್ದು, ಇವುಗಳಲ್ಲಿ 525 ಕಟ್ಟಡ ಕಟ್ಟಲು ಅವಕಾಶವಿದೆ ಎಂದು ಉಪನಿರ್ದೇಶಕರಿ ಗರ್ಟ್ರೂಜ್ ವೇಗಾಸ್ ತಿಳಿಸಿದರು.ಕರ್ನಾಟಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದವರಿಗೆ 2009-10ರಲ್ಲಿ ವಹಿಸಲಾದ ಅಂಗನವಾಡಿ ಕಟ್ಟಡಗಳಲ್ಲಿ ಎಷ್ಟು ಪೂರ್ಣಗೊಂಡಿವೆ ಎಂದು ಸಭೆಗೆ ಮಾಹಿತಿ ನೀಡುವಂತೆ ಕೇಳಿದರು. 25 ಅಂಗನವಾಡಿ ಕಟ್ಟಡಗಳಲ್ಲಿ 18 ಕಟ್ಟಡ ಪೂರ್ಣಗೊಂಡಿವೆ, 5 ಪ್ರಗತಿಯಲ್ಲಿವೆ. 2 ಅಂಗನವಾಡಿಗಳಿಗೆ ನಿವೇಶನ ಸಮಸ್ಯೆ ಇದೆ ಎಂದು ನಿಗಮದ ಅಧಿಕಾರಿ ಮಾಹಿತಿ ನೀಡಿದರು.ಶೀಘ್ರದಲ್ಲಿ ಆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳಿಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ನಿವೇಶನ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಬಿಸಿಎಂ ಇಲಾಖೆಯ ಪ್ರಗತಿ ವರದಿ ನೀಡುವಂತೆ ಉಪನಿರ್ದೇಶಕರಿಗೆ ಸೂಚಿಸಿದಾಗ ತಾಲ್ಲೂಕಿನಲ್ಲಿರುವ 2 ಆಶ್ರಮ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡುತ್ತಿದ್ದಂತೆ, ಹಾಗಾದರೆ ಅಲ್ಲಿನ ಮಕ್ಕಳ ಪರಿಸ್ಥಿತಿ ಹೇಗೆ ಎಂದು ಸದಸ್ಯ ಹನಮೇಗೌಡ ಮರಕಲ್ ಪ್ರಶ್ನಿಸಿದರು.

 

ಆ ಮಕ್ಕಳನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಗುರಮಠಕಲ್‌ನಲ್ಲಿ ಕಟ್ಟುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡವನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಗೊಂಚಲ ಗ್ರಾಮ ಯೋಜನೆಯಡಿ ಗ್ರಾಮಗಳ ಆಯ್ಕೆ ಮಾಡಿ, ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಯಿತು. ಸಮಿತಿ ಸದಸ್ಯರಾದ ಶಂಕರಗೌಡ ಪಾಟೀಲ ಶಿರವಾಳ, ಬಸವರಾಜ ಖಂಡ್ರೆ, ರಾಣಿ ಸೋಮೇಶ್ವರಿ ದೇವಿ, ಮಲ್ಲಮ್ಮ ಮೇಟಿ, ಭೀಮಣ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.