ಗುರುವಾರ , ಜನವರಿ 23, 2020
28 °C

ಅಂಗವಿಕಲರ ಕಲ್ಯಾಣ ಯೋಜನೆಗಳಿಗೂ ‘ಅಂಗವೈಕಲ್ಯ’!

ಪ್ರಜಾವಾಣಿ ವಾರ್ತೆ /ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಅನುಕಂಪ ಬೇಡ; ಅವಕಾಶ ಕೊಡಿ’ ಎಂಬ ಜಿಲ್ಲೆಯ ಅಂಗವಿಕಲರ ಬೇಡಿಕೆ ಅರಣ್ಯ ರೋದನವಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ 37,315 ಜನ ಅಂಗವಿಕಲರಿದ್ದು, ಸರ್ಕಾರದ ಕಲ್ಯಾಣ ಕಾರ್ಯಗಳು ಅವರೆಲ್ಲರನ್ನು  ತಲುಪಿಲ್ಲ.ಅಂಗವಿಕಲರ ಸಂರಕ್ಷಣೆ ಮತ್ತು ಸಮಾನ ಹಕ್ಕು ಕಾಯ್ದೆ–1995ರ ಪ್ರಕಾರ ಎಲ್ಲ ಇಲಾಖೆಗಳ ಅಭಿವೃದ್ಧಿ ಅನುದಾನದಲ್ಲಿ ಶೇ.3ರಷ್ಟು ಅಂಗವಿಕಲರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ಇದನ್ನು ಪಾಲಿಸುತ್ತಿರುವುದು ಒಂದೆರಡು ಇಲಾಖೆಗಳು ಮಾತ್ರ. ಅಂಗವಿಕಲರಿಗಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರ್‍ಯಾಂಪ್‌ ನಿರ್ಮಿಸುವುದು ಕಡ್ಡಾಯ. ವಿಜಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಅದನ್ನು ನಿರ್ಮಿಸಿಲ್ಲ. ಅಂಗವಿಕಲರ ಕುಂದು ಕೊರತೆ ಪರಿಹರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ತಿಂಗಳು ಮೂರನೇ ಸೋಮವಾರ ಸಭೆ ನಡೆಯಬೇಕು ಎಂಬುದು ನಿಯಮ. ಇಲ್ಲಿ ಒಮ್ಮೆಯೂ ಈ ಸಭೆ ನಡೆದಿಲ್ಲ. ಅಂಗವಿಕಲರ ಕ್ರೀಡಾಕೂಟ ಜಿಲ್ಲಾ ಮಟ್ಟಕ್ಕಷ್ಟೇ ಸೀಮಿತ.  ವಿಜೇತರನ್ನು ರಾಜ್ಯ ಮಟ್ಟಕ್ಕೆ ಕಳಿಸುವುದಿಲ್ಲ. ಶಾಸಕರು–ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಪಾಲು ದೊರೆಯುತ್ತಿಲ್ಲ.... ಎಂಬುದು ಬಹುತೇಕ ಅಂಗವಿಕಲರ ಆರೋಪ.‘ರಾಮೇಶ್ವರ ಠಾಕೂರ್‌ ಅವರು ರಾಜ್ಯಪಾಲರಾಗಿದ್ದ ಸಮಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ರಾಜ್ಯದ ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗೆ ನೀಡಬೇಕಾದ 17,000 ಹುದ್ದೆಗಳು ಖಾಲಿ ಇರುವುದು ಪತ್ತೆಯಾಯಿತು. ಅವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತ ಸ್ವಯಂ ಉದ್ದೋಗಕ್ಕೂ ಹೆಚ್ಚಿನ ನೆರವು ನೀಡುತ್ತಿಲ್ಲ. ಆಧಾರ್‌ ಯೋಜನೆಯಡಿ ಗೂಡಂಗಡಿ, ವಿಶೇಷ ಸೈಕ್‌ ಪಡೆಯಲು ‘ಖರ್ಚು’ ಮಾಡಬೇಕು. ಅವು ಆರು ತಿಂಗಳೂ ಬಾಳಿಕೆ ಬರುವುದಿಲ್ಲ. ಅಷ್ಟೊಂದು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ’ ಎಂದು ಕರ್ನಾಟಕ ಅಂಗವಿಕಲರ  ರಾಜ್ಯ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಗುನ್ನಾಪೂರ ದೂರುತ್ತಾರೆ.‘ನಮಗೆ ಬೇಕಿರುವುದು ಉದ್ಯೋಗ. ರಾಜಕೀಯ ಮೀಸಲಾತಿಯೂ ಬೇಕು. ಎಲ್ಲ ಇಲಾಖೆಗಳಲ್ಲಿ ಲಭ್ಯವಿರುವ ಶೇ.3ರಷ್ಟು ಅನುದಾನ ನೀಡಿ ಮತ್ತು ಅದನ್ನು ಸದ್ವಿನಿಯೋಗ ಮಾಡಿದರೆ ಮೂರು ವರ್ಷಗಳಲ್ಲಿ ನಮ್ಮೆಲ್ಲ  ಅಂಗವಿಕಲರ ಅಭಿವೃದ್ಧಿ ಸಾಧ್ಯ’ ಎನ್ನುತ್ತಾರೆ ಅವರು.ಹೆಚ್ಚಳವಾಗದ ಗೌರವ ಧನ: 2006ರಲ್ಲಿ ಕೆಇಬಿಯಲ್ಲಿ 600 ಜನ ಅಂಗವಿಕಲರನ್ನು ‘ಕಂದಾಯ ಸಹಾಯಕರು’ ಹುದ್ದೆಗೆ ನೇಮಿಸಿಕೊಳ್ಳಲಾಗಿದೆ. 18 ತಿಂಗಳಲ್ಲಿ ಕಾಯಂಗೊಳಿಸಬೇಕಿತ್ತು. ಈವರೆಗೂ ಅವರ ಸೇವೆ ಕಾಯಂಗೊಳಿಸಿಲ್ಲ. ವೇತನವನ್ನೂ ಹೆಚ್ಚಿಸಿಲ್ಲ. ಅವರಲ್ಲಿ ನಮ್ಮ ಜಿಲ್ಲೆಯ 30 ಜನರೂ ಇದ್ದಾರೆ.ಗ್ರಾಮೀಣ ಪ್ರದೇಶದ ಅಂಗವಿಕಲರ ಸಮೀಕ್ಷೆ ಮತ್ತು ಅವರಿಗೆ ಸೌಲಭ್ಯ ತಲುಪಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ‘ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್‌ಡಬ್ಲ್ಯೂ)’ ಮತ್ತು ತಾಲ್ಲೂಕು ಪಂಚಾಯಿತಿಗೊಬ್ಬರಂತೆ ‘ತಾಲ್ಲೂಕು ಪುನರ್ವಸತಿ ಕಾರ್ಯಕರ್ತರು’  ಇದ್ದಾರೆ.  ಆದರೆ, ನಗರ–ಪಟ್ಟಣ ಪ್ರದೇಶಗಳಲ್ಲಿ ಈ ಕಾರ್ಯಕರ್ತರೇ ಇಲ್ಲ. ವಿಆರ್‌ಡಬ್ಲ್ಯೂಗಳಿಗೆ ನೀಡುತ್ತಿರುವ ಸಂಭಾವನೆ ಕೇವಲ ₨1,500.‘ಇವರು ಐದಾರು ಹಳ್ಳಿ ಸುತ್ತಿ ಕೆಲಸ ಮಾಡಬೇಕು. ಸಭೆಗಳಿಗೆ ಹಾಜರಾಗಬೇಕು. ಕನಿಷ್ಠ ₨5,000 ಸಂಭಾವನೆ ಕೊಡಬೇಕು’ ಎಂದು ಸಂಘದ ಕಾರ್ಯದರ್ಶಿ ಸುರೇಶ ಚವ್ಹಾಣ ಆಗ್ರಹಿಸುತ್ತಾರೆ.ವಿವಾಹಕ್ಕೆ ನೆರವು: ‘ಅಂಗವಿಕಲರೊಡನೆ ವಿವಾಹವಾದ ಸಾಮಾನ್ಯ ವ್ಯಕ್ತಿ ಸ್ವಂತ ವೃತ್ತಿ ಕೈಗೊಳ್ಳಲು ಸರ್ಕಾರ ₨50,000 ನೆರವು (ಹೂಡಿಕೆ ಬಂಡವಾಳ) ನೀಡುತ್ತದೆ. ಆದರೆ, ಅಂಗವಿಕಲರನ್ನು ಅಂಗವಿಕಲರು ವರಿಸಿದರೆ ಈ ಸೌಲಭ್ಯ ಕೊಡುವುದಿಲ್ಲ. ಸಾಮಾನ್ಯವಾಗಿ ಅಂಗವಿಕಲರಲ್ಲಿ ಹೊಂದಾಣಿಕೆ ವಿವಾಹಗಳೇ ಹೆಚ್ಚು.  ಅಂಗವಿಕಲರನ್ನು ಅಂಗವಿಕಲರು ಮದುವೆಯಾದರೆ ಕನಿಷ್ಠ  ₨1 ಲಕ್ಷ ನೆರವು ನೀಡಬೇಕು’ ಎನ್ನುತ್ತಾರೆ ಅಂಗವಿಕಲರ ಸಂಘಟನೆಗಳ ಪ್ರಮುಖರು.ಇನ್ನು ಅಂಗವಿಕಲರ ಮಾಸಿಕ ಭತ್ಯೆಯ ಅವಾಂತರ ದೊಡ್ಡದು. ಶೇ.40ರಿಂದ 75ರಷ್ಟು ಅಂಗವಿಕಲತೆ ಹೊಂದಿದವರಿಗೆ ₨500, ಶೇ.75ಕ್ಕಿಂತ ಮೇಲ್ಪಟ್ಟ  ಅಂಗವಿಕಲತೆ ಹೊಂದಿದವರಿಗೆ ₨1,200 ಮಾಸಿಕ ಭತ್ಯೆ ನೀಡಲಾಗುತ್ತಿದೆ. ಬಹಳಷ್ಟು ಜನರಿಗೆ ಇದು ದೊರೆಯುತ್ತಿಲ್ಲ. ‘ನಾನು ಸತ್ತಿದ್ದೇನೆ ಎಂದು ಹೇಳಿ ನನ್ನ ಭತ್ಯೆಯನ್ನೇ ನಿಲ್ಲಿಸಿದ್ದಾರೆ’ ಎಂದು ಅಂಗವಿಕಲೆಯೊಬ್ಬರು ಅಳಲು ತೋಡಿಕೊಂಡರು.ಖಾಸಗಿ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಬೇಕು. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಕೊಡಬೇಕು. ಅಂಗವಿಕಲರ  ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ರಚಿಸಬೇಕು ಎಂಬ ಬೇಡಿಕೆ ಬಲಗೊಳ್ಳುತ್ತಿದೆ.‘ಉದ್ರಿ ಗಿರಾಕಿಗಳು’ ಅಂತಾರ...

ವಿಜಾಪುರ ನಗರ ಸಾರಿಗೆ ಬಸ್‌ನವರು ನಮಗೆ ‘ಉದ್ರಿ ಗಿರಾಕಿಗಳು’ ಅಂತಾರ. ಬಸ್‌ನಲ್ಲಿ ಹತ್ತಿಸಿಕೊಳ್ಳುವುದಿಲ್ಲ. ವರ್ಷಕ್ಕೆ ₨620 ಹಣ ಸಂದಾಯ ಮಾಡಿ ಬಸ್‌ ಪಾಸ್‌ ಪಡೆದಿರುತ್ತೇವೆ. ನಮ್ಮನ್ನು ನೋಡಿದರೆ ಕೆಲ ಚಾಲಕರು ಬಸ್‌ ನಿಲ್ಲಿಸುವುದಿಲ್ಲ. ಕೆಲ ಸಂದರ್ಭಗಳಲ್ಲಿ ನಾವಿನ್ನೂ ಬಸ್‌ನಲ್ಲಿ ಹತ್ತಿರುವುದಿಲ್ಲ, ಆಗಲೇ ಬಸ್‌ ಹೊರಡಲಾರಂಭಿಸುತ್ತವೆ. ಬಿದ್ದರೆ ಗತಿ? ಜಿಲ್ಲೆಯ ಬಹುತೇಕ ಬಸ್‌ಗಳಲ್ಲಿ ನಮಗಾಗಿ ಮೀಸಲಿರುವ ಆಸನ ಬಿಟ್ಟುಕೊಡುವುದಿಲ್ಲ.

ವಿಜಾಪುರದ ಉದ್ಯೋಗಸ್ಥ ಅಂಗವಿಕಲ ಮಹಿಳೆಯ ವಸತಿ ನಿಲಯದಲ್ಲಿ ತಂಗಿರುವ ವಿದ್ಯಾರ್ಥಿನಿಯರ ದೂರಿದರು.

ಶೇ.40ರ ಪ್ರಮಾಣಕ್ಕಿಂತ ಹೆಚ್ಚಿನ ಅಂವಿಕಲತೆ ಹೊಂದಿದವರಿಗೆ ಬಸ್‌ ಪಾಸ್‌ ಕೊಡಲಾಗುತ್ತದೆ. ಹಿಂದೆ ಉಚಿತವಾಗಿದ್ದ ಈ ಪಾಸ್‌ಗೆ ಈಗ ವರ್ಷಕ್ಕೆ ₨610 ಭರಿಸಬೇಕು. ಬುದ್ಧಿ ಮಾಂಧ್ಯ ಮತ್ತು ಮಾನಸಿಕ ಅಸ್ವಸ್ಥರಿಗೆ ಈ ಬಾಸ್‌ ಕೊಡುತ್ತಿಲ್ಲ ಎಂದು ಪರಶುರಾಮ ಆರೋಪಿಸಿದರು.ವೈದ್ಯಕೀಯ ಪ್ರಮಾಣ ಪತ್ರ ಎಂಬ ಹಿಂಸೆ

ಅಂಗವಿಕಲತೆ ದೃಢೀಕರಿಸಲು ವೈದ್ಯಕೀಯ ಪ್ರಮಾಣ ಪತ್ರ ಅಗತ್ಯ.  ಪ್ರತಿ ಹತ್ತು ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳಬೇಕು. ಇದು ಅಂಗವಿಕಲರ ಭತ್ಯೆ, ಬಸ್‌ಪಾಸ್‌ಗೆ ಮಾತ್ರ ಉಪಯೋಗವಾಗುತ್ತಿದೆ. ಆದರೆ, ಸರ್ಕಾರದ ಯಾವುದೇ ಹುದ್ದೆಗೆ ಅರ್ಜಿಸಲ್ಲಿಸಬೇಕಾದರೆ ಅರ್ಜಿಯ ಜೊತೆಗೆ ಇರುವ ಅಂಗವಿಕಲರ ಪ್ರಮಾಣ ಪತ್ರದ ನಮೂನೆಯನ್ನು ವೈದ್ಯರಿಂದ ಭರ್ತಿ ಮಾಡಿಸಿ ಸಲ್ಲಿಸಬೇಕು ಎಂಬ ನಿಯಮವೂ ಇದೆ. ವರ್ಷಕ್ಕೆ ಹತ್ತು ಬಾರಿ ನೌಕರಿಗೆ  ಅರ್ಜಿ ಸಲ್ಲಿಸಿದರೂ ಪ್ರತ್ಯೇಕ ಪ್ರಮಾಣ ಪತ್ರ ಪಡೆದು ಲಗತ್ತಿಸಬೇಕು. ಇದು ನಮಗೆ ದೊಡ್ಡ ಹಿಂಸೆ ಎನ್ನುತ್ತಾರೆ ಅಂಗವಿಕಲ ವಿದ್ಯಾರ್ಥಿನಿಯರಾದ ನರಸಲಗಿಯ ಪ್ರೇಮಾ ಲಮಾಣಿ ಮತ್ತು ಕವಿತಾ ಕಾಂಬಳೆ.

ತಾಲ್ಲೂಕು ಆಸ್ಪತ್ರೆಗಳಲ್ಲಿ ತಿಂಗಳಿಗೆ ಒಂದು ದಿನ ಈ ಪ್ರಮಾಣ ಪತ್ರಗಳನ್ನು ನೀಡುತ್ತಾರೆ. ತಜ್ಞ ವೈದ್ಯರು ಇರುವುದಿಲ್ಲ. ನೌಕರಿಗೆ ಅರ್ಜಿ ಸಲ್ಲಿಸುವ ಅವಧಿಯೊಳಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳುವುದು ಸವಾಲಿನ ಕೆಲಸ ಎಂಬುದು ಅವರ ಅಳಲು.ಬನ್ನಿ, ಅವರ ಸಂಗತವನ್ನು ಕೇಳೋಣ

‘ಅಂಗವಿಕಲೆಯರಿಗೆ ಸರ್ಕಾರ ಕರೆದು ನೌಕರಿ ಕೊಡುತ್ತದೆ. ಇಷ್ಟು ವರ್ಷ ನೌಕರಿ ಸಿಕ್ಕಿಲ್ಲ ಅಂದ್ರೆ ನೀವು ಸರಿಯಾಗಿ ಓದಿರಲಿಕ್ಕಿಲ್ಲ’ ಎಂದು ಜನ ಹೀಯಾಳಿಸುತ್ತಾರೆ. ‘ಇನ್ನೂ ಎಷ್ಟು ದಿನಾ ಅಂತ ಕಾಲೇಜಿಗೆ ಹೋಗ್ತೀರಿ?  ನೌಕರಿಯಾದ್ರೂ ಯಾವಾಗ ಸಿಗತೈತಿ’ ಎಂದು ಪಾಲಕರು ಪ್ರಶ್ನಿಸುತ್ತಾರೆ. ಕೆಲವರಿಗೆ ವಯೋಮಿತಿ ಮೀರುತ್ತಿದ್ದರೂ ಸರ್ಕಾರಿ ನೌಕರಿ ದೊರೆಯುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯವರು ನಮಗೆ ನೌಕರಿ ಕೊಡುತ್ತಿಲ್ಲ. ಇದಕ್ಕೆಲ್ಲ ಈ ಅಂಗ ವೈಕಲ್ಯತೆಯೇ ಕಾರಣ. ನಮ್ಮ ಗೋಳು ಎಷ್ಟು ಹೇಳಿದರೂ ಮುಗಿಯುವುದಿಲ್ಲ ಬಿಡ್ರಿ. ನಮ್ಮ ಜೀವನವೇ ಒಂದು ಸಮಸ್ಯೆ.

ನಮ್ಮಲ್ಲಿ ಅರ್ಹತೆ ಇದೆ. ಎಂಟು ಗಂಟೆ ಕುಳಿತುಕೊಂಡು ಕೆಲಸ ನಿರ್ವಹಿಸುವ ಸಾಮರ್ಥ್ಯವಿದೆ. ಆದರೆ,  ಎಂ.ಎ. ಎಂ.ಎಡ್‌ ಪದವಿ ಪಡೆದರೂ ಖಾಸಗಿ ಶಿಕ್ಷಣ  ಸಂಸ್ಥೆಗಳಲ್ಲಿ ಶಿಕ್ಷಕಿಯ ನೌಕರಿ ದೊರೆಯುವುದಿಲ್ಲ. ‘ಅಂಗವಿಕಲರಿಂದ ಏನು ಕೆಲಸವಾಗುತ್ತದೆ?’ ಎಂಬ ತಿರಸ್ಕಾರದ ಭಾವವೇ ಇದಕ್ಕೆಲ್ಲ ಕಾರಣ. ನೌಕರಿ ಕೊಟ್ಟು ನೋಡಲಿ, ನಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇವೆ. ಖಾಸಗಿ ಕ್ಷೇತ್ರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ನಮಗೆ ಉದ್ಯೋಗ ಮೀಸಲಾತಿ ಬಂದರೆ ಈ ಸಮಸ್ಯೆಗೆ ಮುಕ್ತಿ ದೊರೆಯಬಹುದೇನೋ?ಪ್ರತಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೇ.3ರಷ್ಟು ಹಣವನ್ನು ಅಂಗವಿಕಲರಿಗೆ ವಿನಿಯೋಗಿಸಬೇಕು ಎಂಬ ನಿಯಮ ಇದೆ. ವಿಜಾಪುರ ತಾಲ್ಲೂಕಿನ ಬಿಜ್ಜರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದಿಸಲಿಲ್ಲ (ವಾಣಿಶ್ರೀ ಅಕ್ಕಿ ಪ್ರಕರಣ). ಜಿಲ್ಲೆಯ 199 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ ಮೂರು ಪಂಚಾಯಿತಿಯವರು ಮೂರು ಜನರಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಉಳಿದವರು ನಮ್ಮ ಪಾಲಿನ ಹಣವನ್ನೂ ‘ಕಬಳಿಸುತ್ತಿದ್ದಾರೆ’.ಸರ್ಕಾರದ ಎಲ್ಲ ಆಶ್ರಯ ಯೋಜನೆಗಳ ಮನೆಗಳ ಹಂಚಿಕೆಯಲ್ಲಿ ಅಂಗವಿಕಲರಿಗೇ ಶೇ.5ರಷ್ಟು ಮೀಸಲಿಡಬೇಕು ಎಂಬ ನಿಯಮ ಇದೆ. ನಾವು ಮನೆ ಕೇಳಿದರೆ ‘ನಿಮಗೆ ಮದುವೆ ಆಗಿದೆಯೇ? ಮೊದಲು ಮದುವೆಯಾಗಿ ಬನ್ನಿ’ ಎಂದು ನಗುತ್ತಾರೆ. ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆ ನಡೆಸುವುದಿಲ್ಲ. ಮೊಬೈಲ್‌ಗಳಿಗೆ ಕರೆ ಮಾಡಿದರೆ  ಸ್ವೀಕರಿಸುವುದಿಲ್ಲ. ಹೆಚ್ಚು ಕೇಳಿದ್ರೆ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕ್ರಿ ಎಂದು ನಮಗೇ ಬುದ್ದಿವಾದ ಹೇಳುತ್ತಾರೆ! ಜಿಲ್ಲೆಯ ಅಂಗವಿಕಲರಲ್ಲಿ ಓದಿನಲ್ಲಿ ಪುರುಷರಿಗಿಂತ ಮಹಿಳೆಯರೇ  ಮುಂದಿದ್ದೇವೆ. ಅರಳುವ ಬದಲು ಕಮರುತ್ತಿದ್ದೇವೆ. ನಮಗೆ ಅನುಕಂಪ ದೊರೆಯುತ್ತಿದೆಯೇ ವಿನಾ, ಅವಕಾಶ ಇಲ್ಲ... ಇದೆಲ್ಲ ನಮ್ಮ ಕರ್ಮ ಎಂದು ಸಾಮಾಧಾನ ಪಟ್ಟುಕೊಳ್ಳಬೇಕಿದೆ ಅಷ್ಟೆ.

ಸಂಗಾತಿ ಅಲ್ಲ; ‘ಊರುಗೋಲು’ ಬೇಕು!

ವಿಜಾಪುರ:
‘ನಾವು ಕಮರುವ ಹೂವುಗಳಾಗುತ್ತಿದ್ದೇವೆ. ಉನ್ನತ ಶಿಕ್ಷಣ ಪಡೆದ ನಮ್ಮಂತಹ ಅಂಗವಿಕಲೆಯರಿಗೆ ಮದುವೆಯ ಆಸಕ್ತಿ ಇಲ್ಲ. ಬಾಳ ಸಂಗಾತಿ ದೊರೆಯದಿದ್ದರೂ ಪರವಾಗಿಲ್ಲ. ಬದುಕು ಕಟ್ಟಿಕೊಳ್ಳಲು ಒಂದು ನೌಕರಿ ಸಿಕ್ಕರೆ ಸಾಕು. ನಾವು ನೌಕರಿಯಲ್ಲಿದ್ದರೆ ನಮ್ಮ ಮೇಲಿನ ಪ್ರೀತಿಯಿಂದ ಅಲ್ಲದಿದ್ದರೂ ವೇತನದ ಆಸೆಗಾಗಿಯಾದರೂ ನಮ್ಮನ್ನು ವಿವಾಹವಾಗಲು ಯುವಕರು ಮುಂದೆ ಬರುತ್ತಾರೆ...’ ಎಂದು ರಮೀಜಾ ಎಸ್‌.ಎಂ. ಮತ್ತು ಹೇಮಾ ವೈ.ಕೆ. ಅವರು ಒಂದೇ ಉಸಿರಿನಿಂದ ಹೇಳಿದಾಗ ಅಲ್ಲಿ ನೀರವ ಮೌನ ಆವರಿಸಿತು.

ಉಳಿದ ವಿದ್ಯಾರ್ಥಿನಿಯರು ನೆಲವನ್ನೇ ದಿಟ್ಟಿಸುತ್ತ ಕುಳಿತರು. ಅವರ ಮೊಗದಲ್ಲಿ ಚಿಂತೆಯ ಗೆರೆ ಮೂಡಿದರೆ, ಕಣ್ಣಂಚಿನಲ್ಲಿ ನೀರು ಚಿಮ್ಮುತ್ತಿತ್ತು. ಉತ್ತಮ ಬಾಳು ಕಟ್ಟುಕೊಳ್ಳುವ ಹೊಂಗನಸಿನಲ್ಲಿರುವ ಅವರಿಗೆ ಬದುಕೇ ಭಾರ ಎನಿಸುತ್ತಿದೆಯೇ ಎಂಬಂತೆ ಭಾಸವಾಯಿತು.ವಿಜಾಪುರದ ಐಶ್ವರ್ಯ ಮಹಿಳಾ ಸಂಸ್ಥೆಯ ಅಂಗವಿಕಲ ಮಹಿಳೆಯರ ವಸತಿ ನಿಲಯದ ಹಜಾರಿನಲ್ಲಿ ಕುಳಿತು ಅಲ್ಲಿಯ ಅಂಗವಿಕಲ ವಿದ್ಯಾರ್ಥಿನಿಯರನ್ನು ಮಾತನಾಡಿಸಿದಾಗ ಒಬ್ಬೊಬ್ಬರದು ಒಂದೊಂದು ಕತೆ. ಮಾತು ಎಲ್ಲೆಲ್ಲೊ ಸುತ್ತಿ ‘ಬದುಕು ಕಟ್ಟಿಕೊಳ್ಳುವ’ ಆಶಯದೊಂದಿಗೇ ಕೊನೆಗೊಳ್ಳುತ್ತಿತ್ತು.ವಿಜಾಪುರದ ಮಹಿಳಾ ವಿವಿಯಲ್ಲಿ ಎಂ.ಎ. (ಹಿಂದಿ) ವ್ಯಾಸಂಗ ಮಾಡುತ್ತಿರುವ ಬಸವನ ಬಾಗೇವಾಡಿ ತಾಲ್ಲೂಕಿನ ನರಸಲಗಿಯ ಪ್ರೇಮಾ ಲಮಾಣಿ, ಇದೇ ವಿವಿಯಲ್ಲಿ ಎಂ.ಎ. ಕನ್ನಡ ಅಧ್ಯಯನ ಮಾಡುತ್ತಿರುವ ಕವಿತಾ ಕಾಂಬಳೆ, ಅಬ್ಬಿಹಾಳದ ಹೇಮಾ ವೈ.ಕೆ., ಪದವಿ ಓದುತ್ತಿರುವ ಕಾರಜೋಳ ಗ್ರಾಮದ ಭಾರತಿ ಎಂ.ಎಚ್‌.,  ಎಂ.ಎ. ಬಿ.ಎಡ್‌ ಮುಗಿಸಿರುವ ಕಣಕಾಲ ಗ್ರಾಮದ ರಮೀಜಾ ಎಂ.ಎ. ಮಹಾದೇವಿ ಹತ್ತಿ (ಎಂ.ಎ. ಎಂ.ಎಡ್‌.) ... ಹೀಗೆ ಉನ್ನತ ಶಿಕ್ಷಣ ಪಡೆದಿರುವ ಮತ್ತು ಪಡೆಯುತ್ತಿರುವ ವಿದ್ಯಾರ್ಥಿನಿಯರೆಲ್ಲ ಅಲ್ಲಿದ್ದರು.ಯಾವ ಸೌಲಭ್ಯ ದೊರೆತಿಲ್ಲ

ನನಗೀಗ 25 ವರ್ಷ ವಯಸ್ಸು. ದೇಹ ಬೆಳವಣಿಗೆ ಹೊಂದಿಲ್ಲ. ಹೆಚ್ಚೆಂದರೆ ಎರಡು ಅಡಿ ಎತ್ತರ ಇದ್ದೇನೆ. ತಂದೆ ತೀರಿದ್ದಾರೆ. ಅಕ್ಕನ ಗಂಡನೂ ಮೃತಪಟ್ಟಿರುವುದರಿಂದ ಆಕೆ ನಮ್ಮೊಟ್ಟಿಗಿದ್ದಾಳೆ. ತಾಯಿ–ಅಕ್ಕ–ತಮ್ಮ ಮತ್ತು ನಾನು ಒಟ್ಟಾಗಿ ಬಾಡಿಗೆ ಮನೆಯಲ್ಲಿದ್ದೇವೆ. ಇರಲೊಂದು ಸ್ವಂತ ಮನೆ ಇಲ್ಲ. ಅಂಗವಿಕಲರ ಯಾವ ಸೌಲಭ್ಯವೂ ನನಗೆ ದೊರೆತಿಲ್ಲ. ಪಿಂಚಣಿಯೂ ಬರುತ್ತಿಲ್ಲ. ಬಸ್‌ ನಿಲ್ದಾಣದ ಎದುರು ಬೂಟ್‌ ಪಾಲಿಶ್‌ ಮಾಡುತ್ತ ಜೀವನ ನಿರ್ವಹಿಸುತ್ತಿದ್ದೇನೆ.

-ಆನಂದ ಕಾಂಬಳೆ

ಪ್ರತಿಕ್ರಿಯಿಸಿ (+)