ಒಂದಲ್ಲ, ಎರಡಲ್ಲ, ಸತತ ಹದಿನೇಳು ವರ್ಷದಿಂದ ಈ ಯುವಕ ತನ್ನ ರಕ್ತವನ್ನು `ಶುದ್ಧೀಕರಿಸಿ'ಕೊಳ್ಳುತ್ತಿದ್ದಾರೆ. ಬದುಕುವುದೇ ಅಸಾಧ್ಯ ಎಂಬ ಸ್ಥಿತಿಯ ತುತ್ತತುದಿಗೆ ತಲುಪಿ ಸಾವು ಬದುಕಿನ ನಡುವಿನ ಯಾತನೆಯನ್ನು ಅನುಭವಿಸಿದರು. ಆದರೂ ಸಾವನ್ನು ಹೊಸಿಲಿನಾಚೆಯೇ ನಿಲ್ಲಿಸಿರುವ ಈತನ ಹೆಸರು ಕಮಲ್ ಶಾ. ತನ್ನಂತೆಯೇ ಕಷ್ಟದಲ್ಲಿರುವ ಇತರರಿಗಾಗಿ ಮಾಹಿತಿಯನ್ನು ನೀಡುವ ಮೂಲಕ ನೆರವು ನೀಡುತ್ತಿದ್ದ ಕಮಲ್ ಈಗ ಡಯಾಲಿಸಿಸ್ ಅನ್ನು ಜೇಬಿಗೆ ಭಾರವಾಗದಂತೆ ನಡೆಸುವ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಹೊರಟ ಉತ್ಸಾಹಿಗಳಿಗೆ ಹೆಗಲೆಣೆಯಾಗಿದ್ದಾರೆ.

ಕಮಲ್ ಶಾ ಅವರ ಮೂತ್ರಪಿಂಡಗಳು ಸಕ್ಕರೆ ಕಾಯಿಲೆ ಕಾರಣ ವಿಫಲವಾಗಿದ್ದವು. ಬದಲಿ ಮೂತ್ರಪಿಂಡ ಅಳವಡಿಸುವ ಪ್ರಯತ್ನವೂ ವಿಫಲವಾಗಿತ್ತು. ನಿರಂತರ ಡಯಾಲಿಸಿಸ್ ಮತ್ತು ಜೀವನಶೈಲಿಯ ಬದಲಾವಣೆಯಿಂದ ಮಾತ್ರ ಬದುಕುವ ಸಾಧ್ಯತೆ ಉಳಿದಿತ್ತು. ಅವರು ಧೃತಿಗೆಡಲಿಲ್ಲ. ಸಾವು ನಿಶ್ಚಿತ ಎಂದು ಭಯಪಡಲಿಲ್ಲ. ಮನೆಯವರಿಗೆ ಹೊರೆಯಾಗುತ್ತಿದ್ದೇನೆ ಎಂಬ ಭಾವದೊಂದಿಗೆ ಜುಗುಪ್ಸೆಗೆ ಒಳಗಾಗಲಿಲ್ಲ. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಇತರರಂತೆ ಬದುಕುವುದು ತಮ್ಮಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಅವರಲ್ಲಿತ್ತು. ವೈದ್ಯಕೀಯ ಲೋಕದ ಮಿತಿಗಳ ನಡುವೆಯೇ ಅದನ್ನು ಸವಾಲಾಗಿ ಸ್ವೀಕರಿಸಿದರು. ತಮ್ಮಂತೆಯೇ ಇರುವ ಇತರರಿಗಾಗಿ ತಮ್ಮ ಬ್ಲಾಗ್ನಲ್ಲಿ ಮಾಹಿತಿಯನ್ನೂ ಹಂಚುತ್ತಿದ್ದರು.

ಇದೇ ಹೊತ್ತಿಗೆ ಡಯಾಲಿಸಿಸ್ ಎಂದರೆ ಏನು? ಅದರ ಪ್ರಕ್ರಿಯೆ, ವಿಧಾನಗಳೇನು? ಎಂದು ಹುಡುಕುತ್ತಿದ್ದ ಯುವಕರಿಬ್ಬರ ಕಣ್ಣಿಗೆ ಕಂಡಿದ್ದು `ಕಮಲ್ ಶಾ ಬ್ಲಾಗ್'. ಅದರಲ್ಲಿ ಬರಹಗಾರ ತನ್ನ ಬದುಕು, ಕಾಯಿಲೆ, ಅನುಭವಿಸಿದ ನೋವು, ಅದನ್ನು ಎದುರಿಸಿದ ಬಗೆ ಎಲ್ಲವನ್ನೂ ವಿವರವಾಗಿ ಬರೆದಿದ್ದರು. ಕೂಡಲೇ ಬ್ಲಾಗ್ ಬರಹಗಾರನನ್ನು ಸಂಪರ್ಕಿಸಿದರು. ತನ್ನಂತಹ ಅನೇಕರಿಗೆ ಬರವಣಿಗೆ ಮೂಲಕ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದ ಕಮಲ್ ಶಾ, ತಾವು ಎದುರಿಸಿದ ನೋವನ್ನು ಬೇರೆಯವರೂ ಅನುಭವಿಸುವಂತಾಗಬಾರದು, ಡಯಾಲಿಸಿಸ್ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ತೊಲಗಿಸಬೇಕು ಎಂದು ಆ ಯುವಕರ ಕರೆಗೆ ಮರುಕ್ಷಣವೇ ಸ್ಪಂದಿಸಿದರು. ತಾವು ನಡೆಸುತ್ತಿದ್ದ ಕಂಪೆನಿಗೆ ಮುಕ್ತಾಯ ಹಾಡಿ, ಅವರೊಟ್ಟಿಗೆ ಕೈ ಜೋಡಿಸಿದರು.

`ಎಷ್ಟು ದಿನ ಎಂದು ಹೀಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು? ಮಗ ಪದವೀಧರನಾಗಿ ತನ್ನ ಕಾಲ ಮೇಲೆ ನಿಂತುಕೊಳ್ಳುವಂತಾಗಲಿ. ಅಂದೇ ಇದನ್ನು ನಿಲ್ಲಿಸುತ್ತೇನೆ'. ದುಡಿಮೆಯ ಹಣವನ್ನೆಲ್ಲ ತನ್ನ ಚಿಕಿತ್ಸೆಯ ಖರ್ಚಿಗೆ ವ್ಯಯಿಸುತ್ತಿದ್ದ ಆಟೊ ಡ್ರೈವರ್ನೊಬ್ಬ ಹೇಳಿದ ಮಾತು ಸಮೀಕ್ಷೆ ನಡೆಸುತ್ತಿದ್ದ ಯುವಕರಲ್ಲಿ ತಮ್ಮ ಹೆಜ್ಜೆ ಸರಿಯಾಗಿಯೇ ಇದೆ ಎಂಬ ಭರವಸೆ ಹುಟ್ಟಿಸಿತು. ಈ ಪರಿಕಲ್ಪನೆ ಮತ್ತಷ್ಟು ದೃಢವಾಗಬೇಕು. ಕಡಿಮೆ ವೆಚ್ಚ, ಅಧಿಕ ಗುಣಮಟ್ಟದಲ್ಲಿ ಚಿಕಿತ್ಸೆ ದೊರಕಬೇಕು. ಮಿಗಿಲಾಗಿ ಇಷ್ಟಕ್ಕೇ ತನ್ನ ಬದುಕು ಮುಗಿಯಿತು ಎಂದುಕೊಳ್ಳುವ ಜನರ ಮನೋಭಾವವನ್ನು ಬದಲಿಸಬೇಕು ಎಂದು ಸಂಕಲ್ಪ ತೊಟ್ಟರು. `ನೆಪ್ರೋಪ್ಲಸ್' ಎಂಬ ಮೂತ್ರಪಿಂಡ ಡಯಾಲಿಸಿಸ್ ಕೇಂದ್ರ ಜನ್ಮತಳೆಯಿತು. ವಿಭಿನ್ನ ಕ್ಷೇತ್ರಗಳಲ್ಲಿ ಪರಿಣಿತರಾದ ಮೂವರು ಯುವಕರ ಶ್ರಮದ ಪಯಣ ಕುತೂಹಲಕಾರಿ.

ತುಮಕೂರು ಮೂಲದ ಸಂದೀಪ್ ಗುಡಿಬಂಡ, ಹೈದರಾಬಾದ್ನ ವಿಕ್ರಮ್ ಉಪ್ಪಳ ಮತ್ತು ಗುಜರಾತ್ ಮೂಲದ ಕಮಲ್ ಶಾ 2009ರಲ್ಲಿ `ನೆಪ್ರೋಪ್ಲಸ್' ಹುಟ್ಟುಹಾಕುವಾಗ ಮೂತ್ರಪಿಂಡ ಡಯಾಲಿಸಿಸ್ನಲ್ಲಿನ ಭವಿಷ್ಯದ ಸವಾಲುಗಳ ಅರಿವಿತ್ತು. ಸಂದೀಪ್ ಗುಡಿಬಂಡ ಮತ್ತು ವಿಕ್ರಮ್ ಉಪ್ಪಳ ಸಾಹಸೋದ್ಯಮಕ್ಕೆ ಆರೋಗ್ಯ ಕ್ಷೇತ್ರವೇ ಸೂಕ್ತ ಎಂದು ಡಯಾಬಿಟಿಸ್ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಭಾರತದಲ್ಲಿ ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ಹೆಚ್ಚಿದಂತೆ ಕ್ರಮೇಣ ಮೂತ್ರಪಿಂಡ ಸಮಸ್ಯೆಗೆ ಒಳಗಾಗುವವರೂ ಹೆಚ್ಚುತ್ತಿರುವುದು ಕಂಡುಬಂತು. ಉದ್ದಿಮೆ ಮಾದರಿಯಲ್ಲಿ ಸಂಸ್ಥೆಯೊಂದನ್ನು ಬೆಳೆಸುವ ಇಂಥದ್ದೊಂದು ಸಾಹಸಕ್ಕೆ ಕೈಹಾಕುವ ಮುನ್ನ ತಮ್ಮ ಆಯ್ಕೆ ಸೂಕ್ತವಾಗಿದೆಯೇ ಎಂದು ತಿಳಿದುಕೊಳ್ಳಲು ದೇಶದ ಹಲವೆಡೆ ಸಮೀಕ್ಷೆ ನಡೆಸಿದರು. ಆಗ ಅವರಿಗೆ ಮೂತ್ರಪಿಂಡ ಡಯಾಲಿಸಿಸ್ನಲ್ಲಿನ ಹುಳುಕುಗಳು, ಸಮಸ್ಯೆಗಳ ಅರಿವಾಗತೊಡಗಿತು.

ಮೂತ್ರಪಿಂಡ ಡಯಾಲಿಸಿಸ್ ನಿರಂತರ ಚಿಕಿತ್ಸೆ ಬೇಡುವ, ಗುಣಪಡಿಸಲಾಗದ ಸಮಸ್ಯೆ. ದೇಶದಲ್ಲಿ ಮೂತ್ರಪಿಂಡ ಡಯಾಲಿಸಿಸ್ ಘಟಕಗಳಿಗೆ ಆಸ್ಪತ್ರೆಗಳಲ್ಲಿ ಅಷ್ಟಾಗಿ ಮಹತ್ವ ನೀಡುತ್ತಿಲ್ಲ. ಡಯಾಲಿಸಿಸ್ಗೆ ರೋಗಿಗಳು ತೆರುತ್ತಿರುವ ವೆಚ್ಚವೂ ಅಧಿಕ. ಗುಣಮಟ್ಟದ ಚಿಕಿತ್ಸೆ ಅವರಿಗೆ ದೊರಕುತ್ತಿಲ್ಲ. ಇನ್ನೂ ಕಳವಳಕಾರಿ ಸಂಗತಿಯೆಂದರೆ ಮೂತ್ರಪಿಂಡ ಸಮಸ್ಯೆ ಹೊತ್ತು ಆಸ್ಪತ್ರೆಗೆ ಬಂದು ಡಯಾಲಿಸಿಸ್ಗೆ ಒಳಗಾಗುವವರು ಯಕೃತ್ತಿನ ಕಾಯಿಲೆ ಹೊತ್ತು ಹೊರಹೋಗುವುದು... ಮಾನಸಿಕವಾಗಿ ಆಗಲೇ ಸಾಯಲು ಸಿದ್ಧನಾಗಿದ್ದ ಆಟೊ ಚಾಲಕನಂಥ ಹಲವಾರು ಜನ ಎದುರಾದರು.

ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೊರತೆ, ಡಯಾಲಿಸಿಸ್ ಅಸಮರ್ಪಕ ಪ್ರಕ್ರಿಯೆ ಮತ್ತು ಪರಿಣಿತರ ಕೊರತೆಯಿಂದ ಚಿಕಿತ್ಸೆಗೆ ಬಂದವರು ಮತ್ತೊಂದು ಸೋಂಕು ತಗುಲಿಸಿಕೊಳ್ಳುತ್ತಿದ್ದಾರೆ. ಮೂತ್ರಪಿಂಡ ಸಮಸ್ಯೆಯೆಂದರೆ 2-3 ವರ್ಷ ಮಾತ್ರ ಬದುಕು ಎಂದು ಭಾವಿಸಿದವರಿದ್ದಾರೆ. ತಮ್ಮ ಕುಟುಂಬದವರ ಮೇಲೆ ಹೊರೆಯಾಗುತ್ತಿದ್ದೇವೆ ಎಂಬ ಹತಾಶೆಯೂ ಅವರನ್ನು ಕಾಡುತ್ತಿರುತ್ತದೆ. ಮಗನಿಗೆ ಕೆಲಸ ಸಿಗುವ, ಮಗಳಿಗೆ ಮದುವೆ ಮಾಡುವ ಜೀವನದ ಗುರಿ ನೆರವೇರಿದರೆ ನೆಮ್ಮದಿ ಸಿಗುತ್ತದೆ. ಡಯಾಲಿಸಿಸ್ ಅಲ್ಲಿಗೆ ನಿಲ್ಲಿಸಿದರೆ ಸಾಕು. ಡಯಾಲಿಸಿಸ್ ನಿಲ್ಲಿಸಿದರೆ ಸಾವು ನಿಶ್ಚಿತ. ಇದು ಹೆಚ್ಚಿನ ಜನರ ಮನೋಭಾವ. ಇದನ್ನು ಬದಲಾಯಿಸುವ ಸವಾಲು ಅವರೆದುರಿಗಿತ್ತು.

ಆದರೆ ಮೂತ್ರಪಿಂಡ ಡಯಾಲಿಸಿಸ್ ಕ್ಷೇತ್ರ ಇಬ್ಬರಿಗೂ ಹೊಸತು. ಅದರ ಕುರಿತು ತಿಳಿವಳಿಕೆಯುಳ್ಳವರು ಇದ್ದಾರೆಯೇ ಎಂದು ಹುಡುಕಾಡಿದಾಗ ಅಂತರ್ಜಾಲದಲ್ಲಿ ಸಿಕ್ಕಿದ್ದು ಕಮಲ್ ಶಾ ಅವರ ಬ್ಲಾಗ್. ತಮ್ಮಂದಿಗೆ ಕೈ ಜೋಡಿಸಿ ಎಂಬ ಇವರಿಬ್ಬರ ಕೋರಿಕೆಯನ್ನು ಕಮಲ್ಗೆ ತಿರಸ್ಕರಿಸಲಾಗಲಿಲ್ಲ. `ನೆಪ್ರೋಪ್ಲಸ್' ಜೀವತಳೆಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ದೇಶದೆಲ್ಲೆಡೆ ನೆಪ್ರೋಪ್ಲಸ್ ಬಳ್ಳಿ
ಭಾರತದಲ್ಲಿ ಮೂತ್ರಪಿಂಡ ಡಯಾಲಿಸಿಸ್ಗೆ ವಿಶೇಷ ಆಸ್ಪತ್ರೆಗಳಿಲ್ಲ. ಡಯಾಲಿಸಿಸ್ ಕೇಂದ್ರವಿರುವ ಆಸ್ಪತ್ರೆಗಳಲ್ಲಿಯೂ ಅದಕ್ಕೆ ಪ್ರಾಮುಖ್ಯತೆಯಿಲ್ಲ. ಏಕೆಂದರೆ ಅದು ಹೆಚ್ಚು ಲಾಭ ತಂದುಕೊಡದು. ಆದರೆ ಸಾಮಾನ್ಯ ಆದಾಯವಿರುವ ರೋಗಿಗಳಿಗೆ ಅದರ ವೆಚ್ಚವನ್ನು ಭರಿಸುವುದು ಕಷ್ಟ. ಲಾಭದಾಯಕ ಉದ್ದಿಮೆ ನಡೆಸಲು ಹೊರಟವರಿಗೆ ಇದೂ ಕೂಡ ಸವಾಲಾಗಿತ್ತು. ಒಂದೆರಡು ಕೇಂದ್ರಗಳಿಂದ ಇದು ಸಾಧ್ಯವಿಲ್ಲ. ಅದರಿಂದ ಉದ್ದೇಶವೂ ಈಡೇರುವುದಿಲ್ಲ.

ಹೀಗಾಗಿ ದೇಶದ ಮೂಲೆ ಮೂಲೆಯಲ್ಲೂ ನೆಪ್ರೋಪ್ಲಸ್ ಕೇಂದ್ರ ಸ್ಥಾಪಿಸುವ ಯೋಜನೆ ಅವರದು. ಬೆಂಗಳೂರಿನಲ್ಲಿ ಮೂರು ಕೇಂದ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 20 ನೆಪ್ರೋಪ್ಲಸ್ ಕೇಂದ್ರಗಳಿವೆ. ದೇಶದ ಪ್ರತಿ ಜಿಲ್ಲೆಯಲ್ಲಿ, ಅಂದರೆ ಸುಮಾರು 600 ಜಿಲ್ಲೆಗಳಲ್ಲಿಯೂ ಕೇಂದ್ರ ತೆರೆಯುವ ಗುರಿ ಈ ಯುವಕರದು. ಒಂದೇ ಬಾರಿಗೆ ಮಾರುಕಟ್ಟೆಯಿಂದ ನೇರವಾಗಿ ಡಯಾಲಿಸಿಸ್ ಯಂತ್ರೋಪಕರಣಗಳನ್ನು ಖರೀದಿಸಿದರೆ ಅದಕ್ಕೆ ತಗಲುವ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ರೋಗಿಗಳಿಗೆ ಶುಲ್ಕದಲ್ಲಿ ಸ್ವಲ್ಪ ವಿನಾಯಿತಿ ನೀಡಬಹುದು ಎನ್ನುತ್ತಾರೆ ಸಂದೀಪ್.

`ಅತಿಥಿ' ಸತ್ಕಾರ
ರೋಗಿ ವಾರದಲ್ಲಿ ಮೂರು ದಿನ ಡಯಾಲಿಸಿಸ್ಗೆ ಒಳಗಾಗಬೇಕಾಗುತ್ತದೆ. ಇತರೆ ಆಸ್ಪತ್ರೆಗಳಲ್ಲಿ ಅವರ ಜೊತೆಯಲ್ಲಿ ಸಹಾಯಕರೊಬ್ಬರನ್ನು ಕರೆತರಬೇಕಾಗುತ್ತದೆ. ಒಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಎಂದರೆ ಕನಿಷ್ಠ 9 ಗಂಟೆ ವ್ಯಯಿಸಬೇಕು. ಆದರೆ ನೆಪ್ರೋಪ್ಲಸ್ನಲ್ಲಿ ಅಗತ್ಯಬಿದ್ದರೆ ರೋಗಿಗಳನ್ನು ಅವರ ಮನೆಯಿಂದ ವಾಹನದಲ್ಲಿ ಕರೆತಂದು ಡಯಾಲಿಸಿಸ್ ಮುಗಿದ ಬಳಿಕ ವಾಪಸು ಮನೆಗೆ ಬಿಡಲಾಗುತ್ತದೆ.

ಇಲ್ಲಿ ಸಹಾಯಕರ ಅಗತ್ಯವೇ ಇಲ್ಲ. ತರಬೇತಿ ಪಡೆದ ಸಿಬ್ಬಂದಿ ಅವರ ಜೊತೆಗಿರುತ್ತಾರೆ. ಪ್ರತಿ ಹಾಸಿಗೆಗೂ ಪ್ರತ್ಯೇಕ ಟೀವಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತಿದೆ. ಮೂರು ವರ್ಷಗಳಲ್ಲಿ ಸುಮಾರು ಒಂದು ಲಕ್ಷದಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದುವರೆಗೂ ಬೇರೆ ಸೋಂಕು ತಗುಲಿಸಿಕೊಂಡ ಪ್ರಕರಣ ನಮ್ಮಲ್ಲಿ ಉಂಟಾಗಿಲ್ಲ ಎಂಬ ಹೆಮ್ಮೆ ಸಂದೀಪ್ ಅವರದು. ಅಂದಹಾಗೆ, ನೆಪ್ರೋಪ್ಲಸ್ ತಮ್ಮ ರೋಗಿಗಳನ್ನು ಕರೆಯುವುದು `ಅತಿಥಿ'ಗಳೆಂದು. ಆರ್ಥಿಕವಾಗಿ ದುರ್ಬಲರಾಗಿರುವ `ಅತಿಥಿ'ಗಳಿಗೆ ಕೆಲವು ಚಿಕಿತ್ಸೆಯಲ್ಲಿ ರಿಯಾಯಿತಿಯೂ ಇದೆ.

ಕನ್ನಡಿಗನ ಕನಸು
ತುಮಕೂರಿನಲ್ಲಿ ಹುಟ್ಟಿ ಬೆಳೆದ ಸಂದೀಪ್ ಗುಡಿಬಂಡ ಅಪ್ಪ ತೋರಿಸಿದ ಬದುಕಿನ ಮಾದರಿಯನ್ನು ಅನುಸರಿಸಿದವರು. ಎಂಟನೇ ತರಗತಿಯಲ್ಲಿದ್ದಾಗ ಸೈಕಲ್ ಕೊಳ್ಳಲು ಒಂದು ಸಾವಿರ ರೂ ಕೊಟ್ಟ ತಂದೆ, ಉಳಿದ ನಾಲ್ಕು ನೂರು ರೂಪಾಯಿಯನ್ನು ಈ ಹಣದಿಂದ ನೀನೇ ಸಂಪಾದಿಸಿ ಸೈಕಲ್ ಕೊಳ್ಳು ಎಂದರಂತೆ. ಅಪ್ಪ ಕೊಟ್ಟ ಹಣದಿಂದ ಆಗ ಜನಪ್ರಿಯವಾಗಿದ್ದ ಡಬ್ಲ್ಯೂಡಬ್ಲ್ಯೂಇ ಸ್ಟಿಕ್ಕರ್ಗಳನ್ನು ಕೊಂಡು ಮಾರಾಟ ಮಾಡಿ ಗಳಿಸಿದ ಹಣದಿಂದ ಸೈಕಲ್ ಕೊಂಡರಂತೆ.

ಶಾಲಾ ದಿನಗಳಲ್ಲಿಯೇ ಹೀಗೆ ವ್ಯಾವಹಾರಿಕ ನಿಪುಣತೆ ಬೆಳೆಸಿಕೊಂಡ ಸಂದೀಪ್, ಕಾಲೇಜಿನಲ್ಲಿ ಓದುವಾಗಲೇ ಸ್ನೇಹಿತರ ಜೊತೆಗೂಡಿ ವ್ಯವಹಾರ ಕ್ಷೇತ್ರಕ್ಕೆ ಇಳಿದಿದ್ದರು. ಎಂಜಿನಿಯರಿಂಗ್ ಓದುವಾಗ ಐಟಿ ಕಂಪೆನಿಗಳ ಪರವಾಗಿ ರಾಜ್ಯದ ವಿವಿಧ ಕಾಲೇಜುಗಳಿಗೆ ತೆರಳಿ ಕ್ಯಾಂಪಸ್ ಆಯ್ಕೆ ಮಾಡುವ ಸಂಸ್ಥೆ ಹುಟ್ಟುಹಾಕಿದ್ದರು ಸಂದೀಪ್. ಮುಂದೆ ಅದನ್ನು ವಿಸ್ತರಿಸಿ ಕಂಪೆನಿಗಳ ಕುರಿತು ಅದರಲ್ಲಿ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದರು. ಆರ್ಥಿಕ ಹಿಂಜರಿತದ ಅವಧಿಯಲ್ಲಿ ಅದನ್ನು ಮುಚ್ಚುವ ಅನಿವಾರ್ಯತೆ ಅವರಿಗೆ ಎದುರಾಯಿತು. ಮುಂದೆ ಹುಟ್ಟಿದ ಕನಸು ನೆಪ್ರೋಪ್ಲಸ್ನದ್ದು.

ಸಂದೀಪ್ ಅವರ ಸಂಬಂಧಿಯೊಬ್ಬರು ವೈದ್ಯರಾಗಿದ್ದರು. ಸುತ್ತಮುತ್ತಲ 14 ಹಳ್ಳಿಗಳಿಗೆ ಅವರೊಬ್ಬರೇ ವೈದ್ಯರು. ಅವರ ಒಡನಾಟ ಮತ್ತು ಆಸ್ಪತ್ರೆಗಳಿಲ್ಲದೆ ಜನರ ಪರದಾಟಗಳನ್ನು ಚಿಕ್ಕಂದಿನಿಂದಲೂ ಕಂಡ ಅವರಿಗೆ ಮುಂದೆ ಸರಣಿ ಆಸ್ಪತ್ರೆಗಳನ್ನು ಕಟ್ಟಿಸಬೇಕು ಎಂಬ ಬಯಕೆ ಹುಟ್ಟಿಕೊಂಡಿತ್ತು. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಸೇರಲು ಬಂದ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಂದುಕೊಂಡಂತೆ ಸುಲಭವಾಗಿ ಜನರನ್ನು ತಲುಪಲು ಸಾಧ್ಯವಿಲ್ಲ. ವೈದ್ಯಕೀಯ ರಂಗಕ್ಕೆ ತಂತ್ರಜ್ಞಾನದ ಮೂಲಕ ಸೇವೆ ಸಲ್ಲಿಸಬೇಕು ಎಂದು ವೈದ್ಯಕೀಯದ ಓದಿನ ಆಸೆಯನ್ನು ಕೈಬಿಟ್ಟು ಎಂಜಿನಿಯರಿಂಗ್ ಸೇರಿಕೊಂಡರು. ಅಷ್ಟರಲ್ಲೇ ವ್ಯವಹಾರ ಕ್ಷೇತ್ರ ರುಚಿಸಿತ್ತು. ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಎಂಬಿಎ ಪದವಿ ಪಡೆದರು.

ಸಾಮಾನ್ಯವಾಗಿ ಉದ್ದಿಮೆ, ಕಂಪೆನಿಗಳು ಶುರುವಾಗುವುದು ಪರಿಚಿತರ ನಡುವೆ. ಆದರೆ ಇಲ್ಲಿ ನಮ್ಮ ಸಂಸ್ಥೆ ಹುಟ್ಟಿಕೊಳ್ಳುವಾಗ ಮೂವರೂ ಪರಸ್ಪರ ಅಪರಿಚಿತರು. ಇಲ್ಲಿ ಒಬ್ಬರನ್ನೊಬ್ಬರ ಮೇಲಿನ ನಂಬಿಕೆಗಿಂತ ನಮ್ಮ `ಐಡಿಯಾ'ಗಳ ಮೇಲೆ ಎಲ್ಲರಿಗೂ ನಂಬಿಕೆಯಿತ್ತು. ಅದೇ ಭರವಸೆ ಮೇಲೆ ಕಟ್ಟಿ ಬೆಳೆಸಿದೆವು ಎನ್ನುತ್ತಾರೆ ಸಂದೀಪ್.

ಸಿಹಿ ಕಹಿ
ನೆಪ್ರೋಪ್ಲಸ್ ಚಿಕಿತ್ಸೆ ಪಡೆದಿರುವ ರೋಗಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದರೆ, ಡಯಾಲಿಸಿಸ್ ಅನ್ನು ಗಂಭೀರವಾಗಿ ತೆಗೆದುಕೊಳ್ಳದ ಆಸ್ಪತ್ರೆಗಳಿಂದ ಕಹಿ ಅನುಭವವೂ ಇವರಿಗೆ ಆದದ್ದಿದೆ. ಅನೇಕ ದೊಡ್ಡ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಡಯಾಲಿಸಿಸ್ ಕೇಂದ್ರಗಳನ್ನು ಸರಿಪಡಿಸಿ ಉನ್ನತೀಕರಿಸುವ ಈ ಸ್ನೇಹಿತರ ಪ್ರಯತ್ನಕ್ಕೆ ಆಸ್ಪತ್ರೆಗಳಿಂದ ಅಸಹಕಾರ ದೊರೆತದ್ದೇ ಹೆಚ್ಚು. `ಅದರಲ್ಲೇನೂ ಲಾಭವಿಲ್ಲ. ಸುಮ್ಮನೆ ಏಕೆ ಹೊರೆಮಾಡಿಕೊಳ್ಳುವಿರಿ. ಹಾಗೆ ಡಯಾಲಿಸಿಸ್ ಕೇಂದ್ರ ಶುರುಮಾಡುವುದೇ ಆದರೆ ಜೊತೆಗೆ ಲಾಭದಾಯಕವಾದ ಇತರೆ ಆರೋಗ್ಯ ವಿಭಾಗಗಳನ್ನೂ ತೆರೆಯಿರಿ ಎಂದು ಸಲಹೆ ನೀಡಿದವರೇ ಹೆಚ್ಚು.

ಅಮೆರಿಕದ ಪ್ರಸಿದ್ಧ ಮೂತ್ರಪಿಂಡತಜ್ಞ ಡಾ. ಬ್ರಿಯಾನ್ ಪಿರೇರಾ ಸ್ವತಃ ಆಸಕ್ತಿ ವಹಿಸಿ ಇವರೊಂದಿಗೆ ಕೈಜೋಡಿಸಿದ ಬಳಿಕ ಚಿತ್ರಣ ಬಹಳಷ್ಟು ಬದಲಾಗಿದೆ. ಬ್ರಿಯಾನ್ ಪಿರೇರಾ ಮೂಲತಃ ಮಂಗಳೂರಿನವರು. ಅವರು ಮೂತ್ರಪಿಂಡ ಕ್ಷೇತ್ರದ ಸಚಿನ್ ತೆಂಡೂಲ್ಕರ್ ಎಂದು ಬಣ್ಣಿಸುತ್ತಾರೆ ಸಂದೀಪ್. ಪಿರೇರಾ ಈಗ ನೆಪ್ರೋಪ್ಲಸ್ನ ನಿರ್ದೇಶಕರೂ ಹೌದು. ಸಮಾಜ ಸೇವೆಗೆ ತೊಡಗಿಕೊಳ್ಳುವ ಕೆಲ ಸಂಸ್ಥೆಗಳನ್ನು ರೋಗಿಗಳ ಜೀವನಪರ್ಯಂತ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಮನವೊಲಿಸುವ ಪ್ರಯತ್ನವೂ ಸಾಗಿದೆ.

ಮೂತ್ರಪಿಂಡ ಡಯಾಲಿಸಿಸ್ ಎಂದರೆ ಸಾವು ಖಚಿತ ಎಂದೇ ಜನ ಭಾವಿಸುತ್ತಾರೆ. ಹಾಸಿಗೆ ಹಿಡಿದು ತಾವು ಉದ್ಯೋಗಕ್ಕೂ ಹೋಗಲು ಸಾಧ್ಯವಿಲ್ಲ ಎಂದು ಕೊರಗುತ್ತಾರೆ. ಇಂಥ ಮನಸ್ಥಿತಿಯನ್ನು ಬದಲಿಸುವವರು ಕಮಲ್ ಶಾ. ಸಾವು ಖಚಿತ ಎಂಬ ಭಾವನೆ ಹೊಂದಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕಮಲ್ ಮಾದರಿ ವ್ಯಕ್ತಿಯಾಗಿದ್ದಾರೆ. 17 ವರ್ಷದಿಂದ ಸತತ ಡಯಾಲಿಸಿಸ್ಗೆ ಒಳಗಾಗುತ್ತಿರುವ ಕಮಲ್ ಎಲ್ಲರಂತೆ ಸಾಮಾನ್ಯ ಬದುಕು ಸಾಗಿಸುತ್ತಿದ್ದಾರೆ. ತಿಂಗಳ ಕೊನೆಯ ಶನಿವಾರದಂದು `ಅತಿಥಿ'ಗಳನ್ನು ಒಂದೆಡೆ ಸೇರಿ ತಮ್ಮನ್ನೇ ಉದಾಹರಣೆಯಾಗಿ ನೀಡಿ ಅವರಲ್ಲಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ ಕಮಲ್.

ಇಲ್ಲಿ ಚಿಕಿತ್ಸೆ ಪಡೆದ ಅನೇಕ ರೋಗಿಗಳಿಗೆ ತರಬೇತಿ ನೀಡಿ ಅವರನ್ನೇ ಸಿಬ್ಬಂದಿ ವರ್ಗಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಡಯಾಲಿಸಿಸ್ ಕುರಿತ ಕೋರ್ಸ್ಗಳನ್ನು ಉತ್ತೇಜಿಸಬೇಕೆಂಬ ಪ್ರಯತ್ನ ಈ ಮೂವರದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆಯೂ ಅವರಲ್ಲಿದೆ. ಒಟ್ಟಾರೆ ಪ್ರಯತ್ನದ ಹಿಂದೆ ಲಾಭದ ಉದ್ದೇಶವಿದೆ ಎನ್ನುವುದು ನಿಜ. ಆದರೆ ಮೂತ್ರಪಿಂಡ ಡಯಾಲಿಸಿಸ್ ಹಣಗಳಿಸುವ ಮಾರ್ಗವಾಗುವುದಿಲ್ಲ. ಲಾಭ ಗಳಿಸುವ ಪರ್ಯಾಯ ಪ್ರಯತ್ನಗಳನ್ನೂ ಮಾಡುವುದಿಲ್ಲ. ತಮ್ಮ ಗುರಿಯೇನಿದ್ದರೂ ಮೂತ್ರಪಿಂಡ ಡಯಾಲಿಸಿಸ್ಅನ್ನು ಜನರ ಬಳಿಗೇ ಕೊಂಡೊಯ್ಯುವುದು ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವುದು.

ಸಂದೀಪ್ ಗುಡಿಬಂಡ

ತುಮಕೂರಿನವರಾದ ಸಂದೀಪ್ ಗುಡಿಬಂಡ ಸಮಾಜ ಸಾಹಸೋದ್ಯಮಕ್ಕೆ ವಿದ್ಯಾರ್ಥಿದೆಸೆಯಲ್ಲಿಯೇ ಕೈಹಾಕಿದವರು. ಜಾಬೀಹೈವ್ ಎಂಬ ಕಂಪೆನಿ ಹುಟ್ಟುಹಾಕಿದ್ದ ಅವರು ಅವೆನ್ಷಿಯಲ್ ಇನ್ಫೊಟೆಕ್ ಕಂಪೆನಿಯಲ್ಲಿ ಪ್ರಾಡಕ್ಟ್ ಮಾರ್ಕೆಟಿಂಗ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪೂರೈಸಿದ ನಂತರ, ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಎಂಬಿಎ ಪದವಿ ಪಡೆದರು.

ವಿಕ್ರಮ್ ಉಪ್ಪಳ

ನ್ಯೂಜೆರ್ಸಿಯ ಕಂಪೆನಿಯೊಂದರಲ್ಲಿ ಹೆಲ್ತ್ಕೇರ್ ಸ್ಟ್ರಾಟೆಜಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದ ವಿಕ್ರಮ್ ಜನಿಸಿದ್ದು ಹೈದರಾಬಾದ್ನಲ್ಲಿ. ಐಐಟಿ ಕರಗ್ಪುರ್ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಮತ್ತು ಇಲ್ಲಿನೊಯಿಸ್ ವಿಶ್ವವಿದ್ಯಾನಿಲಯದಲ್ಲಿ ಎಂಸಿಎಸ್ ಹಾಗೂ ಷಿಕಾಗೋ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಎಂಬಿಎ ಶಿಕ್ಷಣ ಪಡೆದರು. ಆಂತರಿಕ ನಿರ್ವಹಣೆ ಸಲಹಾ ಕೇಂದ್ರವೊಂದನ್ನೂ ಸ್ಥಾಪಿಸಿ ನಡೆಸಿದ ಅನುಭವ ಅವರದು.

ಕಮಲ್ ಡಿ ಶಾ

ಗುಜರಾತ್ ಮೂಲದ ಕಮಲ್ ಶಾ ಬೆಳೆದದು ಹೈದರಾಬಾದ್ನಲ್ಲಿ. ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಮೊದಲ ರ್ಯಾಂಕ್ ಗಳಿಸಿದ ಕಮಲ್ ಶಾ, 17ನೇ ವಯಸ್ಸಿನಲ್ಲಿಯೇ ಕಿಡ್ನಿ ಡಯಾಲಿಸಿಸ್ಗೆ ಒಳಗಾಗುವಂತಾಯಿತು. ತಾಯಿಯ ಮೂತ್ರಪಿಂಡವನ್ನು ಅಳವಡಿಸುವ ಪ್ರಯತ್ನ ನಡೆದರೂ ಅದು ವಿಫಲವಾಗಿತ್ತು. ಸಾಮಾನ್ಯ ಜನರಂತೆ ಬದುಕು ಸಾಗಿಸುತ್ತಿರುವ ಅವರು ಊರಿಂದೂರಿಗೆ ನಿರಂತರ ಪ್ರಯಾಣಿಸುತ್ತಿರುತ್ತಾರೆ. ಡಯಾಲಿಸಿಸ್ ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿರುವ ಅವರು, ಡಯಾಲಿಸಿಸ್ ಕುರಿತು ಬರೆಯುತ್ತಿರುವ ಬ್ಲಾಗ್ ಬರಹ ಅಪಾರ ಸಂಖ್ಯೆಯ ಓದುಗರನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.