ಒಂದೇ ಒಂದು ದಿನವೂ ಅಭ್ಯಾಸವನ್ನು ತಪ್ಪಿಸಲು ಯಾವುದೇ ನೆಪವನ್ನು ದೀಪಾ ಹೇಳಿಲ್ಲ. ಮಕ್ಕಳಿಗಾಗಿ ತಾವು ಶಕ್ತಿಶಾಲಿಯಾಗಬೇಕು. ದೈಹಿಕವಾಗಿ ಬಲಾಢ್ಯರಾಗಬೇಕು ಎಂಬ ಏಕೈಕ ಗುರಿಯೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಕೌಶಲಗಳನ್ನು ಹೇಳಿಕೊಟ್ಟಿರುವೆ. ಆದರೆ ಛಲ ಬಲ ಎಲ್ಲವೂ ಅವರದ್ದೇ. ಅವರಿಗೆ ತಾಲೀಮು ನೀಡುವ ಅವಕಾಶ ನನಗೆ ಸಿಕ್ಕಿದ್ದು ಭಾಗ್ಯವೇ ಸರಿ.
–ಕೌಶಿಕ್ ತರಬೇತುದಾರ
ದೇಹತೂಕ ಹೆಚ್ಚಳ ತಂದ ಆತಂಕ
ದೀಪಾ ಅಜಯ್ ಅವರು ಕೇಪ್‌ಟೌನ್‌ನಲ್ಲಿ ತಮ್ಮ ದೇಹ ತೂಕ ಹೆಚ್ಚಳದಿಂದಾಗಿ ಸ್ಪರ್ಧೆಯಿಂದ ಅನರ್ಹಗೊಳ್ಳುವ ಆತಂಕ ಎದುರಿಸಿದ್ದರು. ‘ಅಲ್ಲಿ ನಾನು ದೇಹತೂಕ ಹೆಚ್ಚಳದ ಸವಾಲನ್ನೂ ಎದುರಿಸಬೇಕಾಯಿತು. ಸ್ಪರ್ಧೆಗೂ ಕೆಲವು ಗಂಟೆಗಳ ಮುಂಚಿನ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ (69 ಕೆಜಿ) 100 ಗ್ರಾಮ್ ಹೆಚ್ಚು ತೂಗಿದ್ದೆ. ವ್ಯಕ್ತಿಗಳಿಂದ ಪ್ರಾಯೋಜಕತ್ವ ಪಡೆದುಕೊಂಡು ಹೋಗಿದ್ದೆ. ಅನರ್ಹಗೊಂಡರೆ ಏನು ಗತಿ ಎಂಬ ಆತಂಕ ಕಾಡಿತ್ತು. ಮತ್ತೆ ಹೋಟೆಲ್‌ಗೆ ಮರಳಿ ಸೌನಾ ಬಾತ್ ಮಾಡಿ ಕೆಲವು ಕಸರತ್ತು ಮಾಡಿ ತೂಕವನ್ನು ಇಳಿಕೆ ಮಾಡಿಕೊಂಡು ಮರಳಿದ್ದೆ. ಸ್ಪರ್ಧೆಗೆ ಅರ್ಹಳಾಗಿದ್ದೆ’ ಎಂದು ದೀಪಾ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಸಾಹಸಗಾಥೆಯನ್ನು ವಿವರಿಸಿದರು. ‘ನನ್ನ ಪತ್ನಿ ಮಕ್ಕಳ ಲಾಲನೆ ಪಾಲನೆಯ ನಡುವೆಯೂ ಸಿಕ್ಕ ಅಲ್ಪ ಸಮಯಾವಕಾಶದಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ನನಗೂ ಬೆರಗು ಮೂಡಿಸುತ್ತದೆ. ಇದೊಂದು ಅಸಾಧಾರಣ ಸಾಧನೆ. ದಶಕಗಳಿಂದ ಅಭ್ಯಾಸ ಮಾಡಿದ ವೃತ್ತಿಪರರೊಂದಿಗೆ ಸ್ಪರ್ಧಿಸಿ ಸ್ಥಾನ ಪಡೆದು ಬಂದಿದ್ದಾರೆ’ ಎಂದು ದೀಪಾ ಅವರ ಪತಿ ವಿಪ್ರೊ ಉದ್ಯೋಗಿಯಾಗಿರುವ ಅಜಯ್ ಹೆಮ್ಮೆ ವ್ಯಕ್ತಪಡಿಸಿದರು.