ಶನಿವಾರ, ಫೆಬ್ರವರಿ 27, 2021
28 °C
ದೇಶ ಸುತ್ತಿ ವಾದ್ಯ ತಂದ ಕಲಾವಿದೆಯ

ಅಂತರಂಗದ ಮೃದಂಗ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಅಂತರಂಗದ ಮೃದಂಗ

ಸುಮಾರು ಒಂಬತ್ತು ದೇಶಗಳನ್ನು ಸುತ್ತಿ ಅಲ್ಲಿನ ವಿಶೇಷ ವಾದ್ಯಗಳ ಅಂತರಂಗ ಅರಿತು, ಅವುಗಳನ್ನು ತಮ್ಮೂರಿಗೆ ಹೊತ್ತು ತಂದ ಹಿರಿಮೆ ಹಿರಿಯ ಕಲಾವಿದೆ ಅನಸೂಯ ಕುಲಕರ್ಣಿ ಅವರದು. ಇಂಡೋನೇಷ್ಯಾದ ಅಪರೂಪದ ಬಿದಿರಿನ ವಾದ್ಯ ‘ಆ್ಯಂಕ್‌ಲುಂಗ್‌’ ನುಡಿಸುವ ಭಾರತದ ಏಕೈಕ ಕಲಾವಿದೆಯಾಗಿ ದಾಖಲೆ ಬರೆದ ಅವರ ಅನುಭವ ಸಾರ ವಿಶಾಲವಾದುದು.ಹುಟ್ಟಿದ್ದು ಮೈಸೂರಿನಲ್ಲಿ, ವಿದ್ಯಾಭ್ಯಾಸವನ್ನೆಲ್ಲ ಬೆಂಗಳೂರಿನಲ್ಲಿಯೇ ಮುಗಿಸಿದ್ದು. ತಾಯಿ ಅಂಬಮ್ಮ ವಯಲಿನ್‌ ವಾದಕಿ. ತಂದೆ ಸೂರ್ಯನಾರಾಯಣ ಕೂಡ ಅನೇಕ ವಾದ್ಯಗಳನ್ನು ನುಡಿಸುವಲ್ಲಿ ಪರಿಣತರು. ಚಿಕ್ಕಂದಿನಿಂದಲೇ ಮನೆಯಲ್ಲಿ ಹಲವು ವಾದ್ಯಗಳ ಝೇಂಕಾರ ಕೇಳುತ್ತಲೇ ಬೆಳೆದವರು ಅನಸೂಯ.ಹಾಗೆಂದು ಸಂಗೀತ ಅವರ ಮುಂದಿನ ಏಕೈಕ ಮಾರ್ಗವಾಗಿರಲಿಲ್ಲ. ‘ಜೀವನಕ್ಕಾಗಿ ಏನಾದರೂ ಮಾಡು,  ಆದರೆ ಆತ್ಮಸಂತೋಷಕ್ಕಾಗಿ ಸಂಗೀತದ ಮೂಲಾಕ್ಷರಗಳನ್ನು ಕಲಿತುಬಿಡು’ ಎನ್ನುವುದು ತಂದೆ–ತಾಯಿಯ ಹಿತವಚನವಾಗಿತ್ತು. ಮನೆಯಲ್ಲಿ ಎಲ್ಲರೂ ಸಂಗೀತಗಾರರೇ ಆಗಿದ್ದರೂ, ಜೀವನೋಪಾಯಕ್ಕಾಗಿ  ಸಂಗೀತವನ್ನು ಬಳಸಿಕೊಂಡವರಲ್ಲ. ಹಾಗೆಯೇ ಆತ್ಮಸಾಕ್ಷಾತ್ಕಾರಕ್ಕಾಗಿ ಸಂಗೀತದರಮನೆಯ ಬಾಗಿಲು ಬಡಿದವರು ಅನಸೂಯ.ತಾಯಿ ಅಂಬಮ್ಮ ಮೊದಲ ಗುರು. ಅವರಿಂದ ‘ಸರಿಗಮಪ’ ಕಲಿತ ನಂತರ ಮುಂದಿನ ಪಾಠಗಳಿಗಾಗಿ ಗುರು ಆರ್‌.ಆರ್‌. ಕೇಶವಮೂರ್ತಿ ಅವರ ಮುಂದೆಹೋಗಿ ಕುಳಿತರು. ಅಲ್ಲಿ ಕರ್ನಾಟಕ ಸಂಗೀತ ಕಲಿತರು.ಹೊಸ ಬದುಕು–ಹೊಸ ಪಯಣ

‘ಸಂಗೀತ ಮನಸ್ಸಿಗಾಗಿ, ಜೀವನಕ್ಕಾಗಿ ಅಲ್ಲ’ ಎನ್ನುವ ಅಪ್ಪನ ಸಂದೇಶ ಮನಸ್ಸಿನಾಳಕ್ಕೆ ಇಳಿದಿತ್ತು. ಆದರೆ ಸಂಗೀತಕ್ಕೊಂದು ವಿಶಾಲ ಹರವಿದೆ. ಅದು ನಿರಂತರ ಹರಿಯುವ ನದಿ. ಕೊನೆ ಎನ್ನುವುದೇ ಇಲ್ಲ ಎನ್ನುವುದು ಅರಿವಾದದ್ದು ವಿವಾಹ ನಂತರವೇ’ ಎನ್ನುವ ಅನಸೂಯ, ನಂತರದ ಸಂಗೀತ ಪಯಣದ ರೋಚಕ ತಿರುವುಗಳನ್ನು ಬಣ್ಣಿಸುತ್ತ ಹೋಗುತ್ತಾರೆ. ಅವರ ಮಾತುಗಳಲ್ಲಿಯೇ ಕೇಳಿ...

‘1964ರಲ್ಲಿ ನಾರಾಯಣ ಕುಲಕರ್ಣಿ ಅವರ ಕೈ ಹಿಡಿದ ಮೇಲೆ ಬದುಕು ಬೇರೆಯದೇ ತಿರುವು ಪಡೆಯಿತು. ಮೈಸೂರು–ಬೆಂಗಳೂರು ಎನ್ನುವ ನನ್ನ ಆಪ್ತ ಜಗತ್ತಿನಿಂದ ಆಚೆ ನೋಡಿದ್ದೇ ವಿವಾಹವಾದ ನಂತರ.ಪತಿ ನಾರಾಯಣ ವಿಶ್ವಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರು. ಅವರೊಂದಿಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಿ ಬರುವ ಭಾಗ್ಯ ನನ್ನದಾಯಿತು. ಹೋದಲೆಲ್ಲ ಆಯಾ ದೇಶದ ಸಂಸ್ಕೃತಿ, ಆಚಾರ–ವಿಚಾರ, ಊಟ–ಉಡುಗೆಗಳ ಜೊತೆಗೆ ಅಲ್ಲಿನ ಸಂಗೀತ ಹಾಗೂ ವಾದ್ಯ ಜಗತ್ತನ್ನು ಕಣ್ಣರಳಿಸಿ ನೋಡುವ ಪ್ರವೃತ್ತಿ ಬೆಳೆಯಿತು.ಮದುವೆಯಾದ ಒಂದು ವರ್ಷದಲ್ಲಿಯೇ ಕಾಬುಲ್‌ಗೆ ತೆರಳಬೇಕಾಯಿತು. ಖ್ಯಾತ ಹಿಂದೂಸ್ತಾನಿ ಗಾಯಕ ಮಹಮ್ಮದ್‌ ಹುಸೇನ್‌ ಸರಹಂಗ ಅವರು ಅಲ್ಲಿಯೇ ಇರುವುದನ್ನು ತಿಳಿದು ಹಿಂದೂಸ್ತಾನಿ ಸಂಗೀತ ಕಲಿಯಲು ಮನಸ್ಸು ಮಾಡಿದೆ. ಸುಮಾರು ಆರು ವರ್ಷ ಹಿಂದೂಸ್ತಾನಿ ಸಂಗೀತದ ಹಲವು ಮಜಲುಗಳನ್ನು ತಿಳಿದುಕೊಂಡೆ. ಗುರುಗಳ ಜೊತೆಗೆ ಕಾರ್ಯಕ್ರಮಗಳನ್ನೂ ನೀಡಿದೆ.ನಂತರದ ಪಯಣ ಮಂಗೋಲಿಯದತ್ತ ಸಾಗಿತು. ಅಷ್ಟು ಹೊತ್ತಿಗೆ ನಮಗೆ ಇಬ್ಬರು ಮಕ್ಕಳಾಗಿದ್ದರು. ಮಂಗೋಲಿಯದಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಅಲ್ಲಿ ಸಂಸಾರ ಹೂಡಲು ಸಾಧ್ಯವಿರಲಿಲ್ಲ. ಆದರೆ ನಾನು ಆರು ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದೆ.  ಹಾಗೆ ಹೋದಾಗೆಲ್ಲ ಅಲ್ಲಿನ ಸಂಗೀತ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.1980ರ ದಶಕದ ಆರಂಭದಲ್ಲಿ ಪತಿಯ ಜೊತೆಗೂಡಿ ಇಂಡೋನೇಷ್ಯಾಕ್ಕೆ ತೆರಳಿದೆ. ‘ಆ್ಯಂಕ್‌ಲುಂಗ್‌’ ಎನ್ನುವ ವಿಶೇಷ ವಾದ್ಯದ ಮೋಹಕ್ಕೆ ಒಳಗಾದದ್ದು ಅಲ್ಲಿಯೇ.

ಸುಮಾರು ಮೂರು ಅಡಿ ಎತ್ತರದ ಬಿದಿರಿನ ಒಂದು ಬೃಹತ್‌ ವಾದ್ಯ ಅದು. ಕಲಾವಿದರು ಅದನ್ನು ಅಲ್ಲಿ ಸಾಲಾಗಿ ನಿಂತು ನುಡಿಸುತ್ತಾರೆ. ಅದು ಹೊರಡಿಸುವ ಸ್ವರ ಮಾಂತ್ರಿಕವಾದುದು. ಮೊದಲ ಬಾರಿಗೆ ಅದರ ರೂಪ, ಮೋಹಕ ಸ್ವರ ಕಂಡು  ಮಂತ್ರಮುಗ್ಧಳಾದೆ.

ಏನಾದರೂ ಆಗಲಿ, ಆ್ಯಂಕ್‌ಲುಂಗ್‌ ಕಲಿಯಲೇಬೇಕು ಎನ್ನುವ ಹಟ ಹುಟ್ಟಿದ್ದು ಆಗಲೇ. ಅಷ್ಟು ಹೊತ್ತಿಗೆ ಅನೇಕ ದೇಶಗಳ ಹಲವು ವಾದ್ಯಗಳನ್ನು ನುಡಿಸಿ ಗೊತ್ತಿರುವುದರಿಂದ ಹಾಗೂ ಆ್ಯಂಕ್‌ಲುಂಗ್‌ ಮೇಲೆ ವಿಪರೀತ ಮೋಹ ಬೆಳೆದಿದ್ದರಿಂದ ಕಲಿಕೆ ಸುಲಭ, ಆಪ್ತ ಆಯಿತು.ಇಂಡೋನೇಷ್ಯಾದಲ್ಲಿಯೇ ಪರಿಪೂರ್ಣವಾಗಿ ಆ್ಯಂಕ್‌ಲುಂಗ್‌ ನುಡಿಸುವ ಕಲಾವಿದೆಯಾಗಿ ಗುರುತಿಸಿಕೊಂಡೆ. ಅಂತೆಯೇ ಅಲ್ಲಿನ ಸರ್ಕಾರ 1985–86ರಲ್ಲಿ ಪರ್ತ್‌ನಲ್ಲಿ ನಡೆದ ಸಂಗೀತ ಹಬ್ಬದಲ್ಲಿ ನನ್ನನ್ನು ಇಂಡೋನೇಷ್ಯಾದ ಪ್ರತಿನಿಧಿಯಾಗಿ ಕಳುಹಿಸಿತು. ಹೀಗೆ ವಿವಿಧ ದೇಶಗಳಿಂದ 300ಕ್ಕೂ ಹೆಚ್ಚು ವಾದ್ಯಗಳನ್ನು ತಂದು ಸಂಗ್ರಹಿಸಿದ್ದೇನೆ. ಅದರಲ್ಲಿ ಇಂಡೋನೇಷ್ಯಾದ ಆ್ಯಂಕ್‌ಲುಂಗ್‌, ಇಥಿಯೋಪಿಯಾದ ಕ್ರಾರ್‌ ಮುಖ್ಯವಾದವು. ಆ್ಯಂಕ್‌ಲುಂಗ್‌ ವಾದ್ಯವನ್ನು ಇಲ್ಲಿನ ಸಂಗೀತ ಶೈಲಿಗೆ ತಕ್ಕಂತೆ ಮಾರ್ಪಡಿಸಿಕೊಂಡಿದ್ದೇನೆ.’

ಹೀಗೆ ತಮ್ಮ ಸಂಗೀತ ಪಯಣದ ಪುಟ್ಟ ಪರಿಚಯ ಮಾಡಿಸುವ ಅನಸೂಯ, ಇದೀಗ ಬೆಂಗಳೂರಿನಲ್ಲಿಯೇ ತಮ್ಮ ವಿಶ್ರಾಂತ ಬದುಕನ್ನು ಕಳೆಯುತ್ತಿದ್ದಾರೆ. ಒಂಬತ್ತು ದೇಶಗಳಿಂದ ತಾವು ಕಲಿತು ಬಂದ ವಾದ್ಯಗಳನ್ನು ಇಲ್ಲಿನ ಯುವ ಕಲಾವಿದರಿಗೆ ಕಲಿಸುವ ಗುರಿ ಹೊಂದಿದ್ದಾರೆ. ಅವರ ಬಳಿ ವಿವಿಧ ದೇಶಗಳ ಸುಮಾರು 300ಕ್ಕೂ ಅಧಿಕ ವಾದ್ಯಗಳ ಸಂಗ್ರಹವಿದೆ. ಆಫ್ಘಾನಿಸ್ತಾನ, ಮಂಗೋಲಿಯ, ಇಂಡೋನೇಷ್ಯಾ, ಉಗಾಂಡಾ, ಇಥಿಯೋಪಿಯಾ, ಭೂತಾನ್‌, ತಾಂಜೇನಿಯ ಸೇರಿದಂತೆ ಅನೇಕ ದೇಶಗಳ ಗಾಳಿ ವಾದ್ಯ, ಚರ್ಮ ವಾದ್ಯ, ಘನ ವಾದ್ಯಗಳ ಸಂಗ್ರಹವಿದೆ.

ನಾಳೆ ವಾದ್ಯಗಳ ಸಮ್ಮಿಲನ

ನಾಳೆ (ಜ 24. ಭಾನುವಾರ) ಭಾರತೀಯ ವಿದ್ಯಾಭವನದಲ್ಲಿ ‘ಪಂಚ ವಾದ್ಯ ನಾದ ವೈಭವ’ ಎನ್ನುವ ಅಪರೂಪದ ಸಂಗೀತ ವಾದ್ಯಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಇನ್‌ಸ್ಟಿಟ್ಯೂಟ್‌ ಆಫ್‌ ಎಥ್ನೊಮ್ಯೂಸಿಕ್‌ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಪಂಚ ದೇಶಗಳ, ಪಂಚ ರಾಜ್ಯಗಳ ಪಂಚ ಆ್ಯಂಕ್‌ಲುಂಗ್‌ ವಾದ್ಯಗಳು, ಪಂಚತಂತಿ ವಾದ್ಯಗಳು, ಪಂಚತಾಳ ವಾದ್ಯಗಳ ಸಮ್ಮಿಲನವಿದೆ. ಎಂ.ಎನ್‌. ವೆಂಕಟಾಚಲಯ್ಯ, ಎಚ್‌.ಆರ್‌. ಸತೀಶ್‌ ಚಂದ್ರ, ಪ್ರೊ. ಮೈಸೂರು ಸುಬ್ರಹ್ಮಣ್ಯ, ಎಚ್‌.ಎನ್‌. ಸುರೇಶ್‌, ಲಲಿತಾ ಶ್ರೀನಿವಾಸ್‌, ಬಿ.ಎನ್‌. ರಮೇಶ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರೊ.ಕೆ.ಪಿ. ಸುತ್ತೂರಾಯರು ಪಂಚತತ್ವ ಕಲ್ಪನೆ ಮತ್ತು ಸಂಗೀತದಲ್ಲಿ ಅದರ ಮಹತ್ವದ ಕುರಿತು ಮಾತನಾಡಲಿದ್ದಾರೆ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ. ಸಮಯ: ಬೆಳಿಗ್ಗೆ 10. ಮಾಹಿತಿಗೆ: 93419 64662

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.