ಶನಿವಾರ, ಜೂನ್ 19, 2021
24 °C

ಅಂತರರಾಜ್ಯ ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಸೇರಿದಂತೆ ಸುಮಾರು 14.20 ಲಕ್ಷ  ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ತಮಿಳುನಾಡು ಮೂಲದ ರಾಜನ್‌ಕುಮಾರ್ (22), ರವಿ (30), ರಾಮಮೂರ್ತಿನಗರದ ಪಾಂಡ್ಯನ್ (27), ವಿನೋದ್ (35), ಬಾಬೂಸಾಪಾಳ್ಯದ ಶಿವಕುಮಾರ್ (37), ಪ್ಯಾಲೇಸ್ ಗುಟ್ಟಹಳ್ಳಿಯ ಅರುಣ್ (20) ಬಂಧಿತರು.ಮಲ್ಲೇಶ್ವರದ ಶ್ರೀ ಅಪಾರ್ಟ್‌ಮೆಂಟ್ ನಿವಾಸಿ ಜಯವಂತಿ ಹಿರಿಯೂರ್ ಎಂಬುವರ ಮನೆಗೆ ಫೆ.20ರಂದು ನುಗ್ಗಿದ್ದ ಈ ಆರೋಪಿಗಳು ಕುಟುಂಬ ಸದಸ್ಯರನ್ನು ಕಟ್ಟಿ ಹಾಕಿ 75 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ದರೋಡೆ ಮಾಡಿದ್ದರು.ನಂತರ ಹೆಣ್ಣೂರು ಸಮೀಪದ ಪ್ರಕೃತಿ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ಬಂದು ತಲೆಮರೆಸಿಕೊಂಡಿದ್ದರು. ಫೆ.20ರ ರಾತ್ರಿ ಪ್ರಕೃತಿ ಲೇಔಟ್‌ನಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಅವರ ಸಹಚರರಾದ ಹರಿಮುರಳಿ ಮತ್ತು ರಮೇಶ್ ಎಂಬುವರನ್ನು ಬಂಧಿಸಿದ್ದರು. ಆದರೆ ಇತರೆ ಆರೋಪಿಗಳು ಪರಾರಿಯಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತರಿಂದ 374 ಗ್ರಾಂ ಚಿನ್ನಾಭರಣ, ಎರಡು ಕೆ.ಜಿ ಬೆಳ್ಳಿ ವಸ್ತುಗಳು, ಐದು ಕೆ.ಜಿ ಶ್ರೀಗಂಧ ಮರದ ತುಂಡುಗಳು ಮತ್ತು ಎರಡು ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ನಗರದ ಕೆ.ಆರ್.ಪುರ, ಮಹದೇವಪುರ, ಮಲ್ಲೇಶ್ವರ ಹಾಗೂ ತಮಿಳುನಾಡಿನ ಠಾಣೆಗಳಲ್ಲಿ ದರೋಡೆ, ಸರಗಳವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಾ.ಡಿ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಜಿ.ಪ್ರಭಾಕರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಸರಗಳವು: ದುಷ್ಕರ್ಮಿಯೊಬ್ಬ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಸಮೀಪದ ಗೋಪಾಲಪ್ಪ ಲೇಔಟ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.ಗೋಪಾಲಪ್ಪ ಲೇಔಟ್ ನಿವಾಸಿ ನಾಗರತ್ನಮ್ಮ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಮನೆಯ ಸಮೀಪದ ದೇವಸ್ಥಾನಕ್ಕೆ ಹೋಗಿದ್ದ ಅವರು ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ. ಸರದ ಮೌಲ್ಯ ಒಂದು ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.