ಸೋಮವಾರ, ಏಪ್ರಿಲ್ 19, 2021
24 °C

ಅಂತರ್ಜಾಲದಲ್ಲಿ ಕನ್ನಡ

ನಟರಾಜ Updated:

ಅಕ್ಷರ ಗಾತ್ರ : | |

ಯುನಿಕೋಡ್, ಕೀಲಿಮಣೆಗಳ ಗೊಂದಲ, ಸ್ವತಂತ್ರ ತಂತ್ರಾಂಶಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ‘ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳು’ ಚರ್ಚೆ-ವಾಗ್ವಾದಗಳ ನಡುವೆಯೇ ಅಂತರ್ಜಾಲದಲ್ಲಿ ಕನ್ನಡವನ್ನು ಮೂಡಿಸುವ ಕೆಲಸಗಳು ಸಾಕಷ್ಟು ನಡೆದಿವೆ. ಈ ನಿಟ್ಟಿನಲ್ಲಿ ಕನ್ನಡದ ಪತ್ರಿಕೆಗಳು, ಮುಖ್ಯವಾಗಿ ‘ಪ್ರಜಾವಾಣಿ’ಯದೇ ಮೇಲ್ಪಂಕ್ತಿ.ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳು ಅಂತರ್ಜಾಲ ತಾಣವನ್ನು ಹೊಂದಿವೆ. ಕೆಲವು ದೈನಿಕಗಳು ಪತ್ರಿಕೆಯ ಯಥಾವತ್ ರೂಪವಾದ ‘ಇ-ಪತ್ರಿಕೆ’ ಹೊಂದಿವೆ. ಆದರೆ ಜಾಲತಾಣ (prajavani.net) ಹಾಗೂ ಇ-ಪತ್ರಿಕೆ (prajavaniepaper.com) ಎರಡನ್ನೂ ಹೊಂದಿರುವ ಏಕೈಕ ಕನ್ನಡ ದೈನಿಕ ‘ಪ್ರಜಾವಾಣಿ’. ಪಿಡಿಎಫ್ ಕಡತಗಳ ರೂಪದಲ್ಲಿ ‘ಇ-ಪತ್ರಿಕೆ’ ದೊರೆತರೆ, ಪತ್ರಿಕೆಯ ಸುದ್ದಿಗಳೊಂದಿಗೆ ವಿಶೇಷ ಹಾಗೂ ತಾಜಾಸುದ್ದಿಗಳು ಜಾಲತಾಣದಲ್ಲಿರುತ್ತವೆ. ಈಗ ಯುನಿಕೋಡ್ ಶಿಷ್ಟತೆಯೊಂದಿಗೆ ವಿನ್ಯಾಸದಲ್ಲೂ ‘ಪ್ರಜಾವಾಣಿ’ ಜಾಲತಾಣ ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ.‘ಪ್ರಜಾವಾಣಿ’ ಸಮೂಹದ ಜನಪ್ರಿಯ ವಾರಪತ್ರಿಕೆ ‘ಸುಧಾ’ ಕೂಡ ಜಾಲತಾಣದಲ್ಲಿ ಲಭ್ಯ (sudhaezine.com). ಇತರ ಕೆಲವು ಕನ್ನಡ ನಿಯತಕಾಲಿಕಗಳು ಕೂಡ ಅಂತರ್ಜಾಲದಲ್ಲಿ ಲಭ್ಯ. ಆದರೆ ಅವು ‘ಪಾವತಿ ಮಾಡಿ ಬಳಸುವ’ ನಿಯತಕಾಲಿಕೆಗಳು; ‘ಸುಧಾ’ (sudhaezine.com) ಹಾಗೂ ಮಯೂರ (mayuraezine.com) ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುತ್ತವೆ.ಪತ್ರಿಕೆಗಳಿಂದ ಕನ್ನಡ ಜಾಲತಾಣಗಳ ವಿಷಯಕ್ಕೆ ಬಂದರೆ ಮೊದಲು ನೆನಪಾಗುವುದು ಹತ್ತನೇ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ‘ದಟ್ಸ್‌ಕನ್ನಡ’ (thatskannada.oneindia.in ). ಇದು ಕನ್ನಡದ ಅತ್ಯಂತ ಜನಪ್ರಿಯ ಪೋರ್ಟಲ್.‘ದಟ್ಸ್‌ಕನ್ನಡ’ದಲ್ಲಿ ಪ್ರಕಟವಾಗಿರುವ ಲೇಖನ, ಕಥೆ- ಕವಿತೆ, ಪ್ರಬಂಧ, ಅಂಕಣ ಬರಹಗಳು ಪುಸ್ತಕ ರೂಪದಲ್ಲೂ ಪ್ರಕಟವಾಗಿವೆ. ಶ್ರೀವತ್ಸ ಜೋಶಿ ಅವರ ‘ವಿಚಿತ್ರಾನ್ನ’ ಅಂಕಣ ಬರಹಗಳು, ಎಸ್.ಕೆ. ಹರಿಹರೇಶ್ವರ ಅವರ ‘ಮಾತಿನ ಮಂಟಪ’, ಎಂ.ಆರ್. ದತ್ತಾತ್ರಿ ಅವರ ‘ಪೂರ್ವ ಪಶ್ಚಿಮ’, ಡಾ. ಗುರುಪ್ರಸಾದ್ ಕಾಗಿನೆಲೆ ಅವರ ‘ವೈದ್ಯ ಮತ್ತೊಬ್ಬ’, ತ್ರಿವೇಣಿ ಶ್ರೀನಿವಾಸರಾವ್ ಅವರ ‘ತುಳಸೀವನ’- ಹೀಗೆ ಅನೇಕ ಪುಸ್ತಕಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.‘ಅವರ್ ಕರ್ನಾಟಕ’ (ourkarnataka.com) ಕನ್ನಡದ ಮತ್ತೊಂದು ಜನಪ್ರಿಯ ಜಾಲತಾಣ. ಜನಪ್ರಿಯ ‘ಹುಡುಕು ತಾಣ’ಗಳಲ್ಲೊಂದಾದ ‘ಯಾಹೂ’ ಕನ್ನಡ ಸುದ್ದಿಗಳಿಗಾಗಿ ಪ್ರತ್ಯೇಕ ವಿಭಾಗ (in.kannada.yahoo.com)ವೊಂದನ್ನು ಆರಂಭಿಸಿರುವುದು ವಿಶೇಷ. ಕನ್ನಡ ವಿಕಿಪೀಡಿಯಾ (kn.wikipedia.org)ದಲ್ಲಿ ಕನ್ನಡ ನಾಡುನುಡಿ ಕುರಿತು ಸಾಕಷ್ಟು ಮಾಹಿತಿಯಿದೆ.ಕಂಪ್ಯೂಟರ್‌ನಲ್ಲಿ ಕನ್ನಡದ ಬಗ್ಗೆ ಮಾತನಾಡುವಾಗಲೆಲ್ಲ ಶೇಷಾದ್ರಿ ವಾಸು ಅವರನ್ನು ಉಲ್ಲೇಖಿಸಲೇಬೇಕು. ಅವರ ‘ಬರಹ’ (baraha.com) ಉಚಿತ ತಂತ್ರಾಂಶ ಸಾವಿರಾರು ಕನ್ನಡಿಗರ ಭಾವನೆಗಳಿಗೆ ಅಕ್ಷರ ರೂಪ ನೀಡಿದ ಅಗ್ಗಳಿಕೆ ಹೊಂದಿದೆ. ಕನ್ನಡ ಮಾತ್ರವಲ್ಲದೆ ಭಾರತದ ಇತರ ಭಾಷೆಗಳಲ್ಲೂ ವಾಸು ತಂತ್ರಾಂಶಗಳನ್ನು ರೂಪಿಸಿದ್ದಾರೆ.ಅಂಧರಿಗಾಗಿ ‘ಬ್ರೈಲಿ’ ತಂತ್ರಾಂಶವನ್ನು ಕನ್ನಡಕ್ಕೆ ಒಗ್ಗಿಸಿರುವುದು ಹಾಗೂ ಪ್ರೊ. ಜಿ. ವೆಂಕಟಸುಬ್ಬಯ್ಯನವರ ‘ಇಂಗ್ಲಿಷ್- ಕನ್ನಡ’ ನಿಘಂಟನ್ನು ಅಂತರ್ಜಾಲದಲ್ಲಿ ಅಳವಡಿಸಿರುವುದು ‘ಬರಹ’ದ ಬಹುಮುಖ್ಯ ವಿಶೇಷಗಳು.ಈಚಿನ ದಿನಗಳಲ್ಲಿ ಬ್ಲಾಗ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಂಪದ (sampada.net) ವೆಬ್‌ಸೈಟ್ ಕ್ಲಿಕ್ಕಿಸಿದರೆ ಕನ್ನಡ ಬ್ಲಾಗ್‌ಗುಚ್ಛವೇ ತೆರೆದುಕೊಳ್ಳುತ್ತದೆ ಕನ್ನಡದ ಬಗ್ಗೆ ಆಸಕ್ತಿಯುಳ್ಳವರು ಇಂಗ್ಲಿಷ್ ಮೂಲಕ ಕನ್ನಡವನ್ನು ಕಲಿಯುವ ಅವಕಾಶವನ್ನೂ ‘ಸಂಪದ’ ಕಲ್ಪಿಸಿದೆ. ಹಿರಿಯ ಲೇಖಕ ಕೆ.ಟಿ.ಗಟ್ಟಿ ಅವರು ಈ ಕಲಿಕಾ ಸಾಮಗ್ರಿಗಳನ್ನು ರೂಪಿಸಿದ್ದಾರೆ.

ಕನ್ನಡದ ಕೆಲವು ಪ್ರಮುಖ ಬರಹಗಾರರು ತಮ್ಮದೇ ಆದ ಬ್ಲಾಗ್‌ಗಳನ್ನು ಹೊಂದಿರುವುದು ವಿಶೇಷ. ಈ ನಿಟ್ಟಿನಲ್ಲಿ, ಯು.ಆರ್. ಅನಂತಮೂರ್ತಿ (rujuvathu.sampada.net), ಓ.ಎಲ್. ನಾಗಭೂಷಣಸ್ವಾಮಿ (olnswamy.sampada.net), ಕೆ.ವಿ. ನಾರಾಯಣ (wordworth.sampada.net), ಎಂ.ಎಸ್. ಶ್ರೀರಾಮ್ (kannada-kathe.blogspot.com) ಅವರನ್ನು ಹೆಸರಿಸಬಹುದು.ಸಾಹಿತ್ಯ, ಸಿನಿಮಾ, ಸಂಗೀತ, ಅಡುಗೆ, ಧರ್ಮ, ಪ್ರವಾಸ, ಆಡಳಿತ ಸೇರಿದಂತೆ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಜಾಲತಾಣಗಳ ವಿಳಾಸಗಳನ್ನು ‘ದಟ್ಸ್‌ಕನ್ನಡ’ದ ‘ಕನ್ನಡ ವೆಬ್’ ವಿಭಾಗದಲ್ಲಿ ಪಡೆಯಬಹುದು. ಕ್ಲಿಕ್ಕಿಸಿ: thatskannada.oneindia.in/mixed-bag/info/2008/kannada-blogs.htm. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.