ಶುಕ್ರವಾರ, ಮೇ 27, 2022
23 °C

ಅಂದು ಪೈಲ್ಸ್ ಕ್ಲಿನಿಕ್ ಸಹಾಯಕ, ಇಂದು ಹೆಸರಾಂತ ವೈದ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ದಾವಣಗೆರೆ ಪೈಲ್ಸ್ ಕ್ಲಿನಿಕ್‌ನಲ್ಲಿ ಸಹಾಯಕನಾಗಿದ್ದ ವ್ಯಕ್ತಿ, ಇಂದು ದುಬೈನಲ್ಲಿ ಹೆಸರಾಂತ ವೈದ್ಯನಾಗಿದ್ದಾನೆ.-ಹೌದು ಇದು ವಿಚಿತ್ರ ಎನಿಸಿದರೂ ಸತ್ಯ!

ಕುವೆಂಪು ವಿವಿ ನಕಲಿ ಅಂಕಪಟ್ಟಿ, ಪ್ರಮಾಣಪತ್ರ ಕೃಪೆಯಿಂದ ಕಳೆದ 12 ವರ್ಷದಿಂದ ವೈದ್ಯ ವೃತ್ತಿ ನಡೆಸಿರುವ ಡಾ.ಉಮರ್‌ಪಾಷ ಆ ರಾಷ್ಟ್ರದಲ್ಲಿ ಈಗ ಬಹುಬೇಡಿಕೆಯ ಪೈಲ್ಸ್ ಶಸ್ತ್ರಚಿಕಿತ್ಸಕ.

1999-2000ನೇ ಸಾಲಿನಲ್ಲಿ ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿ ಪದವಿ ಪಡೆದ ದಾಖಲೆಯನ್ನು ಈತ ಪಡೆದಿದ್ದಾನೆ. ವಿಚಿತ್ರ ಎಂದರೆ ಈತನಿಗೆ ದೊರೆತಿರುವ ನಕಲಿ ಪ್ರಮಾಣಪತ್ರ, ಬಿಡಿಎಸ್ ಪದವಿಗೆ ನೀಡುವ ದಾಖಲೆ.ಈತನಷ್ಟೇ ಪ್ರಸಿದ್ಧಿಯಾದ ಮತ್ತೊಬ್ಬ ಭಾರತೀಯ ವೈದ್ಯ, ತನ್ನ ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಈತನ ದಾಖಲೆಯ ಸತ್ಯತೆ ಪ್ರಶ್ನಿಸಿ, ಮಾಹಿತಿ ಹಕ್ಕಿನಡಿ ವಿವಿ ಪರೀಕ್ಷಾಂಗ ಕಚೇರಿಗೆ ಅರ್ಜಿ ಸಲ್ಲಿಸಿದ್ದ ಈ ಕುರಿತಾಗಿ ಸ್ಪಷ್ಟ ಮಾಹಿತಿ ದೊರೆಯದ ಸಂದರ್ಭದಲ್ಲಿ ಆತ ಅನಿವಾರ್ಯವಾಗಿ ಈ ವಿಷಯವನ್ನು ಭಾರತೀಯ ವೈದ್ಯಕೀಯ ಮಂಡಳಿ ಗಮನಕ್ಕೆ ತಂದಿದ್ದ.ಮಂಡಳಿ ಈತನ ಪ್ರಮಾಣಪತ್ರ ಕುರಿತಾದ ಸತ್ಯತೆ ಪರೀಕ್ಷಿಸಲು ಫೆಬ್ರುವರಿ 2012ರಲ್ಲಿ ವಿವಿ ಪರೀಕ್ಷಾಂಗ ವಿಭಾಗಕ್ಕೆ ಕಳುಹಿಸಿತ್ತು. ಆಗಲೇ ಈತ ಪಡೆದ ಪ್ರಮಾಣಪತ್ರ ನಕಲಿ ಎಂದು ದೃಢಪಟ್ಟಿದೆ. ಆದರೆ ಈ ಕುರಿತಾದ ಯಾವುದೇ ಕ್ರಮವನ್ನು ವಿವಿ ಆಡಳಿತ ಇಲ್ಲಿಯ ತನಕ ಜರುಗಿಸಿಲ್ಲ, ಬದಲಾಗಿ ಗುರುವಾರ ಸಿಂಡಿಕೇಟ್ ಸಭೆಯಲ್ಲಿ ಇದರ ಕುರಿತು ಸದಸ್ಯರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು.ಮೊದಲೇ ತಿಳಿದ ವಿಷಯ


ಹಾಲೇಶಪ್ಪ ಪ್ರಕರಣ ಇಲ್ಲಿನ ಗ್ರಾಮಾಂತರ ಠಾಣೆಗೆ ದಾಖಲಾದ ನಂತರ ತನಿಖೆ ನಡೆಸಿದ್ದ ಪೊಲೀಸರಿಗೆ ನಕಲಿ ವೈದ್ಯ ಪ್ರಮಾಣಪತ್ರ ಪಡೆದ ವ್ಯಕ್ತಿಯೊಬ್ಬ ಹೊರದೇಶದಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಸಂಗತಿ ಅರಿವಿಗೆ ಬಂದಿತ್ತು.ಇದರ ಕುರಿತು ಪತ್ತೆ ಕಾರ್ಯ ನಡೆಸಲು ಆರಂಭಿಸಿದ್ದ ಪೊಲೀಸರು, ಆತನ ಕುರಿತಾದ ಎಲ್ಲಾ ಮಾಹಿತಿಯನ್ನು ಕಲೆಹಾಕಿ, ಅದಕ್ಕೆ ಆವಶ್ಯವಿರುವ ದಾಖಲೆಗಳ ಸಂಗ್ರಹಣೆ ಕಡೆಗೆ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಿಂಡಿಕೇಟ್ ಸಭೆ ನಿರ್ಣಯ ಕುರಿತಾಗಿ ಪತ್ರಿಕೆ ಡಿವೈಎಸ್‌ಪಿ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ `ಹಾಲೇಶಪ್ಪ ಪ್ರಕರಣದಲ್ಲಿ ನಕಲಿ ಪ್ರಮಾಣಪತ್ರಗಳ ತನಿಖೆ ನಡೆಯುತ್ತಿದ್ದು, ಅದರ ವ್ಯಾಪ್ತಿಯಲ್ಲೇ ಈ ವಿಷಯವನ್ನು ಗಮನಿಸಿದ್ದೇವೆ. ಹಾಗಾಗಿ ಈ ಕುರಿತಾದ ಪ್ರತ್ಯೇಕ ದೂರಿನ ಅವಶ್ಯವಿಲ್ಲ ಎಂದರು.ಆತನ ವಿಚಾರವಾಗಿ ಸಾಕಷ್ಟು ಮಾಹಿತಿ ಇಲಾಖೆಗೆ ಲಭ್ಯವಿದೆ. ಅದರ ಮೇಲೆ ಮುಂದಿನ ಕ್ರಮ ಜರುಗಿಸುವ ಕುರಿತು ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ. ಸಂದರ್ಭ ಬಂದಾಗ ಎಲ್ಲವನ್ನು ಬಹಿರಂಗ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.