ಸೋಮವಾರ, ಮಾರ್ಚ್ 8, 2021
31 °C

ಅಂಪೈರ್‌ಗಳ ಹೆಲ್ಮೆಟ್‌ ಒಲವು

ಬಸೀರಅಹ್ಮದ್‌ ನಗಾರಿ Updated:

ಅಕ್ಷರ ಗಾತ್ರ : | |

ಅಂಪೈರ್‌ಗಳ ಹೆಲ್ಮೆಟ್‌ ಒಲವು

ಸ್ಫೋಟಕ ಆಟವೇ ಶೈಲಿಯಾಗಿ ಬದಲಾಗುತ್ತಿರುವ ಈ ದಿನಗಳಲ್ಲಿ ಬರೀ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರವಲ್ಲ, ಫೀಲ್ಡರ್‌ಗಳು ಹಾಗೂ ಅಂಪೈರ್‌ಗಳಿಗೂ ಅನಿರೀಕ್ಷಿತವಾಗಿ ಬರುವ ಚೆಂಡಿನಿಂದ ರಕ್ಷಣೆಯ ಅಗತ್ಯ ಎದುರಾಗಿದೆ. ಅವರೂ ಹೆಲ್ಮೆಟ್‌ ಧರಿಸುವ ಅನಿವಾರ್ಯತೆ ಇದೆ ಎಂಬ ವಾದ ಈಚೆಗೆ ಕೇಳಿ ಬರುತ್ತಿದೆ.‘ಸ್ಫೋಟಕ ಬ್ಯಾಟಿಂಗ್ ಹೀಗೆಯೇ ಮುಂದುವರೆದರೆ, ಭವಿಷ್ಯದಲ್ಲಿ ಅಂಪೈರ್‌ಗಳು ಹೆಲ್ಮೆಟ್‌ ಅಥವಾ ಇನ್ನಾವುದೇ ರಕ್ಷಣಾತ್ಮಕ ಸಾಧನಗಳನ್ನು ಧರಿಸುವುದು ಆಶ್ಚರ್ಯಕರ ಸಂಗತಿ ಎನಿಸದು’ ಎಂದು ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಸೈಮನ್ ಟಫೆಲ್‌ ಬಹಳ ಹಿಂದೆಯೇ ಹೇಳಿದ್ದರು.2014ರ ನವೆಂಬರ್‌ನಲ್ಲಿ ಸಂಭವಿಸಿದ ಫಿಲಿಪ್‌ ಹ್ಯೂಸ್ ನಿಧನ, ಅದಾದ ಎರಡೇ ದಿನಗಳಲ್ಲಿ ನಡೆದ ಅಂಪೈರ್‌ ಹಿಲೆಲ್‌ ಆಸ್ಕರ್‌ ಸಾವು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ. ಆಟಗಾರರ ಸಾವು ನೋವಿಗೆ ಕೆಲವು ಉದಾಹರಣೆ ಸಿಗುತ್ತವೆ. ಅದರೊಟ್ಟಿಗೆ ಅಂಪೈರ್‌ಗಳ ಸಾವಿನ ನಿದರ್ಶನಗಳೂ ಇವೆ.2009ರಲ್ಲಿ ಇಂಗ್ಲೆಂಡಿನ  ಅಂಪೈರ್‌  ಅಲ್ಕವೆಯ್ನ್  ಜೆನ್‌ಕಿನ್ಸ್‌ ಅವರು ಲೀಗ್‌ ಪಂದ್ಯವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಚೆಂಡು ತಾಗಿ ಮೃತಪಟ್ಟಿದ್ದರು. 2001ರಲ್ಲಿ  ಚೆಂಡಿನ ಹೊಡೆತಕ್ಕೆ ಆಸ್ಟ್ರೇಲಿಯಾದ ಕಾರ್ಲ್   ವೆಂಟ್ಜೆಲ್   ಐದು ಹಲ್ಲುಗಳನ್ನು ಕಳೆದುಕೊಂಡಿದ್ದರು.ಈ ಘಟನೆಗಳು ಕ್ರಿಕೆಟ್ ಅಂಗಳದಲ್ಲಿ ಮಹತ್ತರ ಬದಲಾವಣೆ ತರಲಿಲ್ಲ. ಆದರೆ, 2015ರ ಡಿಸೆಂಬರ್‌ 1ರಂದು ತಮಿಳುನಾಡಿನ ದಿಂಡಿಗಲ್‌ನಲ್ಲಿ   ತಮಿಳುನಾಡು ಹಾಗೂ ಪಂಜಾಬ್‌  ನಡುವೆ ರಣಜಿ ಪಂದ್ಯ ನಡೆದಿತ್ತು. ಅಂಪೈರಿಂಗ್‌ ಮಾಡುತ್ತಿದ್ದ ಜಾನ್‌ ವಾರ್ಡ್‌ ಅವರು ಪಂಜಾಬ್‌ ವೇಗಿ ಬರೀಂದರ್ ಸರನ್‌ ಅವರ ಎಸೆತದಲ್ಲಿ ಬಂದ ಚೆಂಡು ತಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.ಜಾನ್ ವಾರ್ಡ್ ಗಾಯಗೊಂಡ ಘಟನೆ  ಹೆಲ್ಮೆಟ್‌ ಧರಿಸಲು ಕೆಲವರಿಗೆ ಸ್ಫೂರ್ತಿಯಾಯಿತು. ಜಾನ್‌ ಘಟನೆಯಿಂದ ಎಚ್ಚೆತ್ತ ಭಾರತದ ಅಂಪೈರ್‌ ಪಶ್ಚಿಮ್ ಪಾಠಕ್ ಅವರು ವಿಜಯ್ ಹಜಾರೆ ಟೂರ್ನಿಯ  ಕೇರಳ ಹಾಗೂ ರೈಲ್ವೇಸ್ ತಂಡಗಳ ನಡುವಣ ಪಂದ್ಯದ ವೇಳೆ ಹೆಲ್ಮೆಟ್‌ ಧರಿಸಿ ಕಾರ್ಯನಿರ್ವಹಿಸಿದರು. ಕಳೆದ ತಿಂಗಳು ಆ ಪಂದ್ಯ ನಡೆದಿದ್ದು, ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ.

ಆಸ್ಟ್ರೇಲಿಯಾದ ಅಂಪೈರ್ ಗೆರಾರ್ಡ್ ಅಬೂದ್ ಅವರು ಬಿಗ್‌ ಬಾಷ್‌ ಲೀಗ್‌ ಟ್ವೆಂಟಿ–20 ಟೂರ್ನಿಯ ವೇಳೆ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸಿದ್ದರು.ಇವರಿಗೆಲ್ಲ ಸ್ಫೂರ್ತಿ ಎನಿಸಿದ 53 ವರ್ಷದ ಜಾನ್‌ ಅವರು ಕ್ಯಾನ್‌ಬೆರಾದ  ಮನುಕಾ ಒವೆಲ್ ಮೈದಾನದಲ್ಲಿ ಕಳೆದ ವಾರ ಭಾರತ–ಆಸ್ಟ್ರೇಲಿಯಾ ನಡುವಣ ನಾಲ್ಕನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಹೆಲ್ಮೆಟ್‌ ಧರಿಸಿ ಅಂಪೈರಿಂಗ್‌ ಮಾಡಿದ್ದಾರೆ. ಅದೇ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಮತ್ತೊಬ್ಬ ಅಂಪೈರ್‌ ರಿಚರ್ಡ್‌ ಕೆಟಲ್‌ಬರೊ ಅವರು ಗಾಯಗೊಂಡು ನಿವೃತ್ತಿ ಪಡೆದರು. ಆದರೆ, ಚೆಂಡಿನ ಹೊಡೆತದಿಂದ ಅವರಿಗೆ ಮೊಣಕಾಲಿಗೆ ನೋವಾಗಿತ್ತು.ಇವರೆಲ್ಲರಿಗೂ ಸಾಕಷ್ಟು ಮೊದಲೇ ಜಾಗೃತಗೊಂಡವರು ಚೆಂಡಿನ ಹೊಡೆತಕ್ಕೆ ಹಲ್ಲು ಕಳೆದುಕೊಂಡಿದ್ದ ಕಾರ್ಲ್‌  ವೆಂಟ್ಜೆಲ್.  ಹಲವು ವರ್ಷಗಳಿಂದ ಹೆಲ್ಮೆಟ್‌ ಧರಿಸಿಯೇ ಅಂಪೈರಿಂಗ್ ಮಾಡುತ್ತಿದ್ದಾರೆ.ಬೇಕಿದೆ ಸ್ಪಷ್ಟ ನಿಯಮ

ಆಟಗಾರರ  ಸುರಕ್ಷತೆಗೆ ನೀಡುವ ಪ್ರಾಮುಖ್ಯತೆಯನ್ನು ಕ್ರಿಕೆಟ್ ಮಂಡಳಿಗಳು ಅಂಪೈರ್‌ಗಳ ರಕ್ಷಣೆಗೂ ನೀಡಬೇಕೆಂಬ ಚರ್ಚೆ ಹಲವು ವರ್ಷಗಳಿಂದ ಕ್ರಿಕೆಟ್‌ ವಲಯದಲ್ಲಿದೆ.ಆದರೆ, ಫಲ ಮಾತ್ರ ನೀಡಿಲ್ಲ. ಹ್ಯೂಸ್ ನಿಧನದಿಂದ ಎಚ್ಚೆತ್ತು  ಕ್ರಿಕೆಟ್‌ ಆಸ್ಟ್ರೇಲಿಯಾ, ಇಸಿಬಿ ಸೂಕ್ತ ಕ್ರಮ ಕೈಗೊಂಡವು. ಆದರೆ ಅಂಪೈರ್‌ಗಳ ರಕ್ಷಣೆಯ ಕುರಿತು  ಐಸಿಸಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ ಎಂಬುದೇ ಇದಕ್ಕೆ ಸಾಕ್ಷಿ.

ಆದರೆ, ಐಸಿಸಿ ಮೇಲೆ ಸಾಕಷ್ಟು ಹಿಡಿತವಿರುವ ಬಿಸಿಸಿಐ ಮಾತ್ರ ಅಂಪೈರ್‌ಗಳ ಹೆಲ್ಮೆಟ್‌ ಬಳಕೆಗೆ ಒಲವು ತೋರಿದಂತಿದೆ. ‘ಹೆಲ್ಮೆಟ್ ಧರಿಸಿ ಅಂಪೈರಿಂಗ್ ನಡೆಸಲು ಬಿಸಿಸಿಐ ಅನುಮತಿ ಕೋರಿದಾಗ ಅದು ಮರುಕ್ಷಣವೇ ಸಮ್ಮತಿಸಿತು’ ಎಂದು ಪಶ್ಚಿಮ್ ಪಾಠಕ್‌ ಅವರ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ.ಚೆಂಡುದಾಂಡಿನ ಮತ್ತೊಂದು ಆಟ ಬೇಸ್‌ಬಾಲ್‌ನಲ್ಲಿ ಬಳಕೆಯಾಗುವ ಅಂಪೈರ್‌ಗಳ ಮುಖಗವುಸುಗಳನ್ನು ಕ್ರಿಕೆಟ್ ಅಂಪೈರ್‌ಗಳ ಬಳಕೆಗೆ ಪರೀಕ್ಷೆಗಳು ನಡೆಯುತ್ತಿವೆ. ಆದರೂ, ಈ ತನಕ ಯಾವುದೇ ಅಂಪೈರ್‌ ಅಂಥ ಸಾಧನ ಬಳಸಿಲ್ಲ; ಬ್ಯಾಟ್ಸ್‌ಮನ್‌ಗಳು ಧರಿಸುವ ಹೆಲ್ಮೆಟ್‌ಗಳೇ ಮೈದಾನದಲ್ಲಿ ಕಾಣಿಸಿವೆ.ಇಷ್ಟಾಗಿಯೂ, ಆಟಗಾರರಿಗೆ ಅಥವಾ ಅಂಪೈರ್‌ಗಳಿಗೆ ಹೆಲ್ಮೆಟ್‌ ಖಡಾಖಂಡಿತವಾಗಿಯೂ ಮೈದಾನದಲ್ಲಿ ನೋವು–ಸಾವಿನಿಂದ ರಕ್ಷಣೆ ದೊರೆಯುತ್ತದೆ ಎನ್ನಲಾಗದು. ಇತಿಹಾಸದ ಪುಟಗಳಲ್ಲಿ ಇದಕ್ಕೂ ಒಂದಿಷ್ಟು ಉದಾಹರಣೆಗಳಿವೆ . ಅದಕ್ಕೆ ರಮಣ್‌ ಲಾಂಬಾ ಹಾಗೂ ಅಂಕಿತ್ ಕೇಸರಿ ದುರ್ಘಟನೆಗಳನ್ನು, ಸಬಾ ಕರೀಮ್ ಹಾಗೂ  ಮಾರ್ಕ್‌ ಬೂಚರ್‌ ಅವರ ನಿವೃತ್ತಿ ಘಟನೆಗಳನ್ನು ಹೆಸರಿಸಬಹುದೇನೋ.ಇವೆಲ್ಲದರ ಹೊರತಾಗಿಯೂ ವಿಕೆಟ್‌ ಕಬಳಿಸುವ ಗುರಿಯೊಂದಿಗೆ ನುಗ್ಗುವ ಚೆಂಡು, ದಾಂಡಿಗನ ಸ್ಫೋಟಕ ಹೊಡೆತಕ್ಕೆ ಸಿಲುಕಿ ವೇಗ ಹೆಚ್ಚಿಸಿಕೊಂಡು ಬೌಂಡರಿಯತ್ತ ಸಾಗುವಾಗ ಅಂಪೈರ್‌ಗೆ ಅಪ್ಪಳಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಇದರಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಹೆಲ್ಮೆಟ್‌ ಇಲ್ಲವೇ ಇನ್ನಾವುದೋ ರಕ್ಷಣಾತ್ಮಕ ಸಾಧನಗಳ ಬಳಕೆಗೆ ಐಸಿಸಿ ನಿಯಮ ರೂಪಿಸುವುದು ಒಳಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.