ಶನಿವಾರ, ಮೇ 28, 2022
28 °C

ಅಂಬಿ 60: ಅಭಿಮಾನದ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ನಲವತ್ತು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಅಭಿನಯಿಸಿ `ಮಂಡ್ಯದ ಗಂಡು~ ಎಂದೇ ಹೆಸರಾದ ಅಂಬರೀಷ್ ಅವರಿಗೆ ವಜ್ರ ಕಿರೀಟ ತೊಡಿಸುವ ಮೂಲಕ ಅಭಿಮಾನಿಗಳು ಅಭಿಮಾನದ ಮಳೆಯನ್ನೇ ಸುರಿಸಿದರು.ಪಟ್ಟಣದ ಪಾಂಡವ ಕ್ರೀಡಾಂಗಣದ ಅದ್ದೂರಿ ವೇದಿಕೆಯಲ್ಲಿ ವರ್ಣಮಯ ಚಿತ್ತಾರದೊಂದಿಗೆ ಅಂಬಿ-60 ನಮ್ಮಾಭಿಮಾನ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು. ಕೆಪಿಸಿಸಿ ಸದಸ್ಯ ಎಲ್.ಡಿ.ರವಿ ನೀಡಿದ ವಜ್ರದ ಕಿರೀಟವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಂಬರೀಷ್ ಅವರಿಗೆ ತೊಡಿಸುತ್ತಿದ್ದಂತೆ ಅಭಿಮಾನಿಗಳ   ಹರ್ಷೋದ್ಗೋರ ಮುಗಿಲು ಮುಟ್ಟಿತು. ಪಟಾಕಿಗಳನ್ನು ಹಚ್ಚಿ ಸಂತಸದಿಂದ ಕುಣಿದರು. ಹಿರಿಯರು ನೂರ‌್ಕಾಲ ಬಾಳಲಿ ಎಂದು ಅಂಬರೀಷ್ ಅವರಿಗೆ ಹರಸಿದರು.ಬೆಂಗಳೂರಿನ ಮೋಹನ್ ಮ್ಯೂಸಿಕ್ ಮತ್ತು ಪಾಂಡವಪುರದ ರಿದಂ ಸ್ಟೆಪ್ ಆಫ್ ದಿ ಡ್ಯಾನ್ಸ್ ತಂಡದವರು ಹಾಡಿದ `ಈ ಮಣ್ಣನ್ನು ಮರಿಬೇಡ ಓ ಅಭಿಮಾನಿ~ ಎಂಬ ಹಾಡಿಗೆ ಜನ ಹುಚ್ಚೆದ್ದು ಕುಣಿದರು. ಅಂಬರೀಷ್ ಅವರಿಗೆ ಶುಭಾಶಯ ಹೇಳಲು ಹೂವಿನ ಹಾರ ಹಿಡಿದು ನಿಂತ ಅಪಾರ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು ಸಾಧ್ಯವಾಗಲಿಲ್ಲ. ಕೊನೆಗೆ ಅಂಬರೀಷ್ ಅವರೇ ನಿಯಂತ್ರಣಕ್ಕೆ ಮುಂದಾದರು.ತಾಲ್ಲೂಕಿನ 60ಜನ ಸಾಧಕರನ್ನು ಸನ್ಮಾನಿಸಲಾಯಿತು. ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ, ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ಎಲ್.ಡಿ.ರವಿ ಅಧ್ಯಕ್ಷತೆ ವಹಿಸಿದ್ದರು. ನಟ ದರ್ಶನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಂ.ರಾಮಕೃಷ್ಣ.ನಾಗರಾಜು, ಶಾಸಕರಾದ ಕೆ.ಬಿ.ಚಂದ್ರಶೇಖರ್, ಸುರೇಶ್‌ಗೌಡ, ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಎಲ್.ಆರ್.ಶಿವರಾಮೇಗೌಡ, ಮಧು ಜಿ.ಮಾದೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ವಸಂತಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಂ.ಕೆ.ಪುಟ್ಟೇಗೌಡ, ಸ್ವಾಮೀಗೌಡ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್, ಮನ್‌ಮುಲ್ ನಿರ್ದೇಶಕ ಎಲ್.ಸಿ.ಮಂಜುನಾಥ್, ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಹಾಜರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಐದು ದೀಪ ವೃತ್ತದಿಂದ ಅಂಬರೀಷ್ ಅವರನ್ನು ಹೂಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು. ವಿವಿಧ ಪ್ರಕಾರಗಳ ಜನಪದ ಕಲಾತಂಡಗಳು ಪ್ರದರ್ಶನ ನೀಡಿದವು.`ಪೂರ್ಣಾವಧಿ ರಾಜಕಾರಣಕ್ಕೆ ಅಂಬರೀಷ್ ಮುಂದಾಗಲಿ~

ನೂರಾರು ಚಲನಚಿತ್ರಗಳಲ್ಲಿ ನಟಿಸಿ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಅಂಬರೀಷ್ ಇನ್ನು ಮುಂದೆ ಪೂರ್ಣಾವಧಿ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ಹೇಳಿದರು.ಪಟ್ಟಣದಲ್ಲಿ ನಡೆದ `ಅಂಬಿ-60 ನಮ್ಮಾಭಿಮಾನ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಅಪಾರ ಜನಸ್ತೋಮ ನೋಡಿದರೆ ಜನರ ಮನಸ್ಸಿನಲ್ಲಿ ಅಂಬರೀಷ್  ಹೇಗೆ ನೆಲೆಯೂರಿದ್ದಾರೆ ಎಂಬುದು ತಿಳಿಯುತ್ತದೆ. ಸಮಾಜದ ಎಲ್ಲ ವರ್ಗದಲ್ಲೂ ಸ್ನೇಹಿತರನ್ನು ಹೊಂದಿರುವ ಅಂಬರೀಷ್ ಇಷ್ಟು ದಿನ ರಾಜಕಾರಣವನ್ನು ಅರೆಕಾಲಿಕ ಎಂಬಂತೆ ನೋಡುತ್ತಿದ್ದರು. ಆದರೆ ಕರ್ನಾಟಕದ ಇಂದಿನ ರಾಜಕಾರಣ ಗಮನಿಸಿದರೆ ಅಂಬರೀಷ್ ಅಗತ್ಯ ಹೆಚ್ಚು ಇದೆ ಎಂದರು.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಷ್ ಮಹತ್ವದ ಪಾತ್ರ ವಹಿಸಬೇಕಾಗಿದೆ. ತಾವು ಮತ್ತು ಅಂಬರೀಷ್ ರಾಜ್ಯವನ್ನು ಪ್ರವಾಸ ಮಾಡಿ ರಾಜ್ಯದಲ್ಲಿ ಒಂದು ಹೊಸ ಬದಲಾವಣೆ ತರುವ ಜವಾಬ್ದಾರಿ ಹೊರಬೇಕಾಗಿದೆ ಎಂದು ಹೇಳಿದರು.`ಅಭಿಮಾನಿಗಳ ಒತ್ತಾಸೆಯಿಂದ ರಾಜಕೀಯಕ್ಕೆ ಬಂದೆ~

ಅಧಿಕಾರಕ್ಕೆ ಆಸೆಪಟ್ಟು ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬರಲಿಲ್ಲ, ನನ್ನ ಅಸಂಖ್ಯಾತ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ರಾಜಕೀಯ ಪ್ರವೇಶಿಸಿದೆ ಎಂದು ಚಿತ್ರನಟ ಅಂಬರೀಷ್ ತಿಳಿಸಿದರು.ಪಟ್ಟಣದಲ್ಲಿ ನಡೆದ `ಅಂಬಿ-60 ನಮ್ಮಾಭಿಮಾನ~ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ನನಗೆ ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಿದರು ಹಾಗೂ ವೀರಸ್ವಾಮಿ ನನಗೆ ಅನ್ನದಾತ. ನನಗೆ ಅಧಿಕಾರಕ್ಕಿಂತ ಜನರ ಮನಸ್ಸಿನಲ್ಲಿ ಉಳಿದಿರುವುದು ಮುಖ್ಯ. ಜನರ ಅಭಿಮಾನ, ಪ್ರೀತಿಗಳಿಂದ ನಾನು ಬೆಳೆದಿದ್ದೇನೆ ಮತ್ತು ಉಳಿದಿದ್ದೇನೆ ಎಂದು ಹೃದಯ ತುಂಬಿ ನುಡಿದರು.ನಮ್ಮ ನಾಯಕ ಸಿದ್ದರಾಮಯ್ಯ ನಾನು ಪೂರ್ಣಾವಧಿ ರಾಜಕಾರಣಕ್ಕೆ ಬಂದು ರಾಜ್ಯದ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸುವಂತೆ ಸಲಹೆ ನೀಡಿರುವುದು ಸಂತಸದ ವಿಚಾರ. ಆ ನಿಟ್ಟಿನಲ್ಲಿ ಆಲೋಚನೆ ಮಾಡುವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.