ಶನಿವಾರ, ಮೇ 15, 2021
24 °C

ಅಂಬೇಡ್ಕರ್, ಬಾಬೂಜಿ ಭವನಕ್ಕೆ ರೂ 3.20 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಡಾ.ಬಿ.ಆರ್. ಅಂಬೇಡ್ಕರ್ ಭವನ ಮತ್ತು ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 3.20 ಕೋಟಿ ಮಂಜೂರಾಗಿದೆ.ಚಾಮರಾಜನಗರದ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ 50 ಲಕ್ಷ ರೂ, ಹೆಗ್ಗವಾಡಿ ಗ್ರಾಮಕ್ಕೆ 20 ಲಕ್ಷ ರೂ, ಗುಂಡ್ಲುಪೇಟೆ ತಾಲ್ಲೂಕಿನ ಬೀಚನಹಳ್ಳಿಗೆ 10 ಲಕ್ಷ ರೂ, ಯಳಂದೂರು ಪಟ್ಟಣದಲ್ಲಿರುವ ಭವನದ ಮುಂದುವರಿದ ಕಾಮಗಾರಿಗೆ 25 ಲಕ್ಷ ರೂ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಹೊಸ ಐನೂರುಹುಂಡಿ ಗ್ರಾಮದಲ್ಲಿ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಮಂಜೂರಾಗಿದೆ.ಗುಂಡ್ಲುಪೇಟೆ ಪಟ್ಟಣದಲ್ಲಿರುವ ಡಾ.ಬಾಬು ಜಗಜೀವನರಾಂ ಭವನದ ಮುಂದುವರಿದ ಕಾಮಗಾರಿಗೆ 25 ಲಕ್ಷ ರೂ ನೀಡಲಾಗಿದೆ. ಯಳಂದೂರು ತಾಲ್ಲೂಕಿನ ಯರಗಂಬಳ್ಳಿಗೆ 10 ಲಕ್ಷ ರೂ, ಕೊಳ್ಳೇಗಾಲ ಪಟ್ಟಣದ ಬಾಪೂನಗರಕ್ಕೆ 50 ಲಕ್ಷ ರೂ, ಚಾಮರಾಜನಗರ ತಾಲ್ಲೂಕಿನ ಹೆಗ್ಗ ವಾಡಿ ಗ್ರಾಮದಲ್ಲಿ ಭವನ ನಿರ್ಮಾಣಕ್ಕೆ 20 ಲಕ್ಷ ರೂ ನೀಡಲಾಗಿದೆ. ಚಾಮರಾಜನಗರದಲ್ಲಿ ಬಾಬೂಜಿ ಭವನ ನಿರ್ಮಾಣಕ್ಕೆ 1 ಕೋಟಿ ರೂ ಮಂಜೂರು ಮಾಡಲಾಗಿದೆ.2011-12ನೇ ಸಾಲಿನಡಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕ್ರೋಡೀಕರಿಸಿದ ಅನುದಾನದಲ್ಲಿ ಅಂಬೇಡ್ಕರ್ ಮತ್ತು ಬಾಬೂಜಿ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಹಾಗೂ ಅದರಡಿ ರೂಪಿಸಿರುವ ನಿಯಮಗಳ ಅನುಸಾರ ಭವನ ನಿರ್ಮಿಸುವ ವೇಳೆ ಪಾಲಿಸಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.ನಿಗದಿತ ಅಂದಾಜು ವೆಚ್ಚದಲ್ಲಿಯೇ ಭವನ ನಿರ್ಮಿಸಬೇಕು. ಈ ವೆಚ್ಚ ಮೀರಿದರೆ ಸ್ಥಳೀಯವಾಗಿ ಅನುದಾನ ಸಂಗ್ರಹಿಸಬೇಕು. ಹೆಚ್ಚುವರಿ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವ ಸಲ್ಲಿಸುವಂತಿಲ್ಲ. ಅನುದಾನ ಬಿಡುಗಡೆಯಾದ 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಭವನ ನಿರ್ಮಾಣದ ಬಗ್ಗೆ ತ್ರೈಮಾಸಿಕ ಪ್ರಗತಿ ಮತ್ತು ಹಣದ ಬಳಕೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.ಭವನ ನಿರ್ಮಾಣಕ್ಕೆ ಲಭ್ಯವಿರುವ ನಿವೇಶನವನ್ನು ಮೊದಲು ಸಮಾಜ ಕಲ್ಯಾಣ ಇಲಾಖೆಯ ವಶಕ್ಕೆ ಪಡೆಯಬೇಕು. ನಂತರ, ಕಾಮಗಾರಿ ಆರಂಭಿಸಬೇಕು. ಭವನದ ನಿರ್ಮಾಣ ಸಂಬಂಧ ಸಿದ್ಧಪಡಿಸಿರುವ ಅಂದಾಜುಪಟ್ಟಿ ಮತ್ತು ನಕ್ಷೆ ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮೋದನೆ ಪಡೆಯಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.ಸಂಸದರ ಅಭಿನಂದನೆ

ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ ಅವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿರುವ ಅನುದಾನದ ಬಳಕೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ್ದರು.`ಪರಿಶಿಷ್ಟರ ಕಾಲೊನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ವೇಳೆ ತಾವು ಹಾಗೂ ಸಾರ್ವಜನಿಕರು ಸಮುದಾಯ ಭವನದ ಮಂಜೂರಾತಿಗೆ ಮನವಿ ಸಲ್ಲಿಸಿದ್ದವು. ಇದಕ್ಕೆ ಸ್ಪಂದಿಸಿ ಅನುದಾನ ಮಂಜೂರು ಮಾಡಿದ್ದಾರೆ. ಸಚಿವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ~ ಎಂದು ಸಂಸದ ಆರ್. ಧ್ರುವನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.