ಸೋಮವಾರ, ಜೂನ್ 14, 2021
22 °C
ಒಡಲಾಳ

ಅಕಟಕಟಾ... ಕಾಲ ಕಾವ್ಯವಶಂ!

ಮಾಲತೇಶ್ ಗುಡದಪ್ಪನವರ್ Updated:

ಅಕ್ಷರ ಗಾತ್ರ : | |

ಇದು ಅಪಾರ ಅಸಹಿಷ್ಣುತೆಯ ಕಾಲ. ಹಿಂದೆಲ್ಲ ಜನ ಸಿದ್ಧಾಂತಗಳಿಗಾಗಿ ಬಡಿದಾಡುತ್ತಿದ್ದರಂತೆ. ದೇಶದೇಶಗಳು ಏನೇನಕ್ಕೋ ಹೊಡೆದಾಟ ಮಾಡಿದವು. ಸಣ್ಣಮಟ್ಟದಲ್ಲಿ ಎಲೆಕ್ಟ್ರಿಕ್ ಡಿಪಾರ್ಟ್‌ಮೆಂಟು ಒಗ್ಗಟ್ಟಿನಲ್ಲಿ ಟೆಲಿಫೋನಿನವರ ವಿರುದ್ಧ ಆರೋಪ ಮಾಡುತ್ತಿತ್ತು. ಆಟೊದವರು ಒಂದೇ ಸಂಘವಾಗಿ, ಟ್ರಾಫಿಕ್ ಸಮಸ್ಯೆಗೆ ಬಸ್ಸಿನವರೇ ಪೂರ್ತಿ ಹೊಣೆ ಎಂದು ಘೋಷಿಸುತ್ತಿದ್ದರು.

ಈಗ ಹಾಗಿಲ್ಲ. ಯಾರೂ ಯಾರನ್ನೂ ಯಾವುದನ್ನೂ ಸಹಿಸಿಕೊಳ್ಳಲು ಸಿದ್ಧರಿಲ್ಲ. ಉದಾಹರಣೆಗೆ ಸಾಹಿತ್ಯ. ಮುಖ್ಯವಾಗಿ ಕಾವ್ಯ. ಇದರ ಪರಿಸ್ಥಿತಿಯಂತೂ ಶೋಚನೀಯವಾಗಿ ಹೋಗಿದೆ. ಬರೆಯುವವರನ್ನು ಕಂಡರೆ ಎಲ್ಲರಿಗೂ ಸಿಟ್ಟು. ಪುಸ್ತಕಗಳನ್ನು ಬ್ಯಾನ್ ಮಾಡುವ ದ್ವೇಷ. ಆದರೆ ಎಲ್ಲರಿಗೂ ಗುಟ್ಟಾಗಿ ತಾನೂ ಕವಿಯಾಗುವ ಆಸೆ. ಕಾವ್ಯವನ್ನು ಕೊಲ್ಲಲು ಅದನ್ನು ಬರೆಯುವುದಕ್ಕಿಂತ ದೊಡ್ಡ ಉಪಾಯ ಇನ್ಯಾವುದಿದೆ? ಈ ಗೆರಿಲ್ಲ ತಂತ್ರವು ಸೋಷಿಯಲ್ ಮೀಡಿಯಾಗಳಲ್ಲಿ ಆವಿಷ್ಕಾರಗೊಂಡು ಕ್ರಮೇಣ ನಿಜಬದುಕಿನತ್ತ ಧಾಂಗುಡಿಯಿಡುತ್ತಿದೆ.ಅಲ್ಲಿ ಬಿದ್ದ ಲೈಕುಗಳ ಲೆಕ್ಕವು ಪುಸ್ತಕ ಮಾರಾಟದಲ್ಲಿ ನಿಜವಾಗದೇ ಹುಸಿ ಚುನಾವಣಾ ಪೂರ್ವ ಸಮೀಕ್ಷೆಗಳಂತಾಗುತ್ತಿವೆ. ಇದಕ್ಕಿರುವ ಸರಳ ತಾರ್ಕಿಕ ಕಾರಣ ಭಾವೋನ್ಮಾದೀ ಕವಿಗಳಿಗೆ ಹೊಳೆಯುತ್ತಿಲ್ಲ. ಫೇಸ್‌ಬುಕ್‌ನ ಸ್ನೇಹಿತ ಕವಿಗಳೆಲ್ಲರೂ ಅವರವರ ಬರ್ತ್‌ಡೇ ಪಾರ್ಟಿಗಳಲ್ಲಿ ಪರಸ್ಪರ ಕೊರೆದುಕೊಂಡು, ಎಲ್ಲರ ಬಾಯಿಂದಲೂ, ಮೊಬೈಲಿಂದಲೂ, ಅಂಡರ್‌ವೇರಿನ ಪಾಕೀಟುಗಳಿಂದಲೂ, ಕವಿತೆಗಳು ಅಮ್ಮನಿಂದ ತಪ್ಪಿಸಿಕೊಂಡ ಸುಂಡಿಲಿಗಳಂತೆ ಟುಣಟುಣನೆ ನೆಗೆದೋಡುತ್ತ, ಯಾವ ಕವಿವರ್ಯನದು ಯಾವ ಕವಿತೆ ಎಂದು ಎಲ್ಲರಿಗೂ ಗೊಂದಲವಾಗಿ, ಮರೆತು ಹೋಗಿರುತ್ತದೆ. ಇದೇ ಕವಿತೆಗಳನ್ನೋದಲು ಅದೇ ಸ್ನೇಹಿತರು ಮತ್ತೆ ಪುಸ್ತಕವನ್ನು ಬೇರೆ ಕೊಳ್ಳಬೇಕೆ? (ಮೇಲಾಗಿ, ಪುಸ್ತಕದ ಪಿಡಿಎಫ್‌ಗಳನ್ನೂ ಮುಂಚೆಯೇ ಹಂಚಿಕೊಂಡಾಗಿರುವಾಗ!)

ಅನಂತಮೂರ್ತಿಯವರು ‘ಪ್ರತಿ ಜನಾಂಗವೂ ಪಿತೃಹತ್ಯೆಯನ್ನು ಮಾಡುತ್ತದೆ. ಮಾಡಬೇಕು. ಆದರೆ ಆದಷ್ಟೂ ಕಡಿಮೆ ನೋವಾಗುವಂತೆ’ ಎಂದಿದ್ದರು. ಅಂದರೆ, ಹೊಸ ತಲೆಮಾರಿನ ಹೊಸ ವಿಚಾರಗಳು ಹಿಂದಿನ ತಲೆಮಾರನ್ನು ಅಲ್ಲಗೆಳೆದು, ಖಂಡಿಸಿ ಬೆಳೆಯುತ್ತವೆ, ಕಾಲದ ಒತ್ತಡಕ್ಕೆ ತಕ್ಕಂತೆ ಹೊಸದನ್ನು ಸೃಜಿಸುತ್ತದೆ ಎಂದು. ಪಿತೃಹತ್ಯೆಯನ್ನು, ನೋವು ಬಿಡಿ, ಅರಿವೇ ಆಗದಂತೆ ಮಾಡಿ ಬಿಸಾಕುತ್ತಿರುವವರು ನಾವು. ನಮ್ಮ ಹಳಬರನ್ನು ಓದದೇ ಇರುವ ಮೂಲಕ. ಓದುತ್ತ ಕೂತರೆ ಬರೆಯುವುದು ಯಾವಾಗ ಗುರೂ?ಮೇಲಾಗಿ ಇದು ಭ್ರೂಣಹತ್ಯೆಯ ಕಾಲ. ಎಲ್ಲವನ್ನೂ ಅರ್ಜೆಂಟಾಗಿ ಮಾಡಬೇಕು. ಕವಿತೆ ಮನಸ್ಸಿನಲ್ಲಿ ಮೂಡುವುದಿಲ್ಲ. ಫೇಸ್‌ಬುಕ್ಕಿನ ವಾಲ್‌ನ ಮೇಲೆ ನೇರವಾಗಿ ಹುಟ್ಟುತ್ತದೆ. ತಿದ್ದುವುದಕ್ಕೆ ಸಮಯವಿಲ್ಲ. ಅಷ್ಟರಲ್ಲಿ ಬೇರೊಬ್ಬ ಬರೆದುಬಿಟ್ಟರೆ? ಏಕೆಂದರೆ ಈ ಎಲ್ಲ ಕವಿಗಳ ಅನುಭವಗಳೂ ಒಂದೇ; ಭಾಷೆಯ ಬಳಕೆಯ ಕ್ರಮ ಒಂದೇ. ಗೆಳೆಯನೊಬ್ಬ ತಮಾಷೆ ಮಾಡುತ್ತಿದ್ದ. ಇತ್ತೀಚೆಗೆ ಹಸಿವಿನ ಕವನಗಳು (ಅರ್ಥಾತ್ ಬಂಡಾಯದ ಒಂದು ಉಪಪಂಗಡ) ಕಡಿಮೆಯಾಗುತ್ತಿವೆ.ಸಿದ್ಧರಾಮಣ್ಣನ ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಕಾರ್ಯಕ್ರಮದ ಪರಿಣಾಮ ಇದು ಎಂದು. ಅಂತೆಯೇ ಈ ಫೇಸ್‌ಬುಕ್ಕಿನ ಕವಿಗಳಿಗೆ ಹೀಗೊಂದು ಸರ್ಕಾರಿ ಕಾರ್ಯಕ್ರಮ ರೂಪಿಸಿ ‘ಕವಿತಾ ನಿಯಂತ್ರಣ ಕಾಯಿದೆ’ ರೂಪಿಸುವುದಗತ್ಯ. ಪ್ಲೇಟೋ ಆದರ್ಶ ರಾಜ್ಯದಿಂದ ಕವಿಗಳನ್ನು ಉಚ್ಚಾಟನೆ ಮಾಡಲು ಬಯಸಿದ್ದ. ಏಕೆಂದರೆ ಜಗತ್ತಿನ ಪ್ರತಿ ವಸ್ತುವೂ ಸತ್ಯದ ಅನುಕರಣೆ ಮಾತ್ರವಾಗಿದೆ. ಕಾವ್ಯವು ಈ ಅನುಕರಣೆಯ ಅನುಕರಣೆ ಮಾತ್ರ. ಅಂದರೆ ಸತ್ಯದಿಂದ ಎರಡು ಪಟ್ಟು ನಾವು ದೂರಾದೆವು ಎಂದು. ನಮ್ಮ ಈ ಫೇಸ್‌ಬುಕ್ ಜಮಾನದಲ್ಲಿ ಈ ಸತ್ಯ- ದೂರವು ಇನ್ನೂ ಹೆಚ್ಚು: ಮೂರು ಪಟ್ಟು. ಏಕೆಂದರೆ ಈ ಇಡೀ ‘ಕವಿಯಾಗುವಿಕೆ’ಯು ಕಂಪ್ಯೂಟರಿನ ಅಂತರ್ಜಾಲೊತ್ತಡದಲ್ಲಷ್ಟೇ ನಡೆಯುತ್ತದೆ.

ಇಷ್ಟು ಬರೆದದ್ದನ್ನು ನೋಡಿ ಫೇಸ್‌ಬುಕ್ಕಿನ ಕವಿವರ್ಯ ಗೆಳೆಯನೊಬ್ಬ ಬೈದ. ‘ನಮ್ಮ ಮೇಲೇಕಿಷ್ಟು ಸಿಟ್ಟು ನಿನಗೆ? ನಾವು ಕವಿತೆ ಬರೆಯುವುದು ಕಾವ್ಯಕ್ಕೋಸ್ಕರ ಅಲ್ಲ. ನಮ್ಮ ಕಂಪೆನಿಗಳಲ್ಲಿ ನಮಗೇ ಅಂತ ಒಂದು ಐಡೆಂಟಿಟಿ ಇರೋದಿಲ್ಲ. ಕವಿಯಾಗದೇ ಹೋದರೆ ನಿನಗೆ ಫೇಸ್‌ಬುಕ್ಕಿನ ಗೆಳೆಯರ ಮಧ್ಯೆ ಐಡೆಂಟಿಟಿ ಇರೋದಿಲ್ಲ; ಅವರ ಬರ್ತ್‌ಡೇ ‘ಕವಿ-ಘೋಷ್ಟ್-ಟಿ’ಗಳಲ್ಲಿ ನೀನು ಜ್ಯೂಸ್ ಸಪ್ಲೇ ಮಾಡ್ತಾ ಇರಬೇಕಾಗ್ತದೆ. ಅವರೆಲ್ಲರೂ ‘ಸ್ವರಚಿತ’ ಕವನ ವಾಚಿಸ್ತಾ ಇರಬೇಕಾದ್ರೆ ಆಗೋ ಅವಮಾನ ಗೊತ್ತೇನಪ್ಪಾ ನಿನಗೆ?’

ಹೀಗೆ ಕವಿಗಳದ್ದು ಒಂದು ಕಡೆಯ ದೊಂಬರಾಟವಾದರೆ, ಮುಗಿಬಿದ್ದು ವಾದ ಮಾಡುವ ಟ್ರಾಲ್‌ಗಳದ್ದು ಇನ್ನೊಂದು ಸ್ತರ.ಜಾತಿ, ಧರ್ಮ, ಭಾಷೆ ಇವು ಮೂರು ಕಚ್ಚಾಡಿಕೊಳ್ಳಲು ಹೇಳಿಮಾಡಿಸಿದ ವಿಷಯಗಳು. ವಾದವೂ ಸರಳ, ಸುಲಭ. ಜಾತಿ ಇದೆ, ಇಲ್ಲ; ತನ್ನದು ಬಿಟ್ಟು ಉಳಿದೆಲ್ಲ ಧರ್ಮಗಳೂ ಹಿಂಸಾಪರ (ಮತ್ತು ಗಾಂಧಿ ಸರಿಯಿಲ್ಲ!) ಹಾಗೂ ಪನ್ ಮಾಡುವುದೊಂದೇ ಭಾಷೆಗಿರುವ ಉಪಯೋಗ. ಅವನ ಪ್ರಕಾರ ಅವನೇ ಪನ್‌ಡಿತ. ಜಾತಿ ಕುರಿತಾದ ವಾದಗಳು ಭಾರಿ ಮಜಬೂತಾಗಿರುತ್ತವೆ. ‘ಜಾತಿ ಇಲ್ಲ; ಇದ್ದರೂ ನಮ್ ಏರಿಯಾದಲ್ಲಂತೂ ಇಲ್ಲ’ ಎಂಬ ಥರದ ವಾದಗಳು.ಭಾರತದ ಷಡ್ದರ್ಷನಗಳಲ್ಲೊಂದಾದ ‘ನ್ಯಾಯದರ್ಶನ’ದಲ್ಲಿ ಪಕ್ಷಧರ್ಮತಾ ಎಂಬುದೊಂದು ಕಲ್ಪನೆಯಿದೆ. ಅದರ ಪ್ರಕಾರ ಯಾವುದನ್ನೋ ಸಮರ್ಥಿಸಲು ಇನ್ಯಾವುದೋ ಕಾರಣ ಕೊಡುವುದು ಅಭಾಸಕರ. ಉದಾಹರಣೆಗೆ: ‘ಹುಲಿಯು ಒಂದು ಕ್ರೂರ ಪ್ರಾಣಿ, ಏಕೆಂದರೆ ಅದಕ್ಕೆ ಕೋಡಿದೆ’ ಎನ್ನುವ ಬಗೆಯದ್ದು. ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುವ ಉನ್ಮತ್ತ ಚರ್ಚೆಗಳು ಮುಕ್ಕಾಲು ವೀಸಾ ಇಂಥವೇ ಆಗಿರುವುದು ವಿಚಿತ್ರ.   ಕಳೆದ ಹತ್ತು ವರ್ಷಗಳಲ್ಲಿ ಅಸಂಖ್ಯಾತ ಕವಿಗಳು ಉದ್ಭವಿಸಿದ್ದಾರೆ. ಆದರೆ ಹೇಳಿಕೊಳ್ಳುವಂತಹ ಒಂದು ಪುಸ್ತಕ ಬಂದಿಲ್ಲ. ಅಥವಾ ಹೀಗೂ ಹೇಳಬಹುದು. ಎಲ್ಲರೂ ಕವಿಗಳೆನಿಸಿಕೊಳ್ಳಲು ಹಾತೊರೆಯುವುದಕ್ಕೆ ಕಾರಣವೇನಿರಬಹುದು? ಕವಿಯಾಗುವುದರಿಂದ ಸಿಗುವ ಲಾಭವೇನು ಎಂದು ನೋಡಿದರೆ ಉತ್ಸಾಹೀ ಉತ್ತರಗಳೇನೂ ದೊರೆಯುವುದಿಲ್ಲ.ಮಮ್ಮಟ ಕಾವ್ಯದ ಪ್ರಯೋಜನಗಳೆಂದು ಹೇಳುವ ಕೀರ್ತಿ, ಧನಾರ್ಜನೆ, ವ್ಯವಹಾರ ಜ್ಞಾನ, ಅಮಂಗಳ ನಿವಾರಣೆ, ತತ್ಕಾಲದಲ್ಲಿ ದೊರೆಯುವ ಪರಮಾನಂದ ಇವುಗಳಲ್ಲೊಂದರ ಬಗ್ಗೆಯೂ ಫೇಸ್‌ಬುಕ್ ಕವಿಗಳಿಗೆ ಪೂರ್ಣಾಸಕ್ತಿ ಇದ್ದಂತಿಲ್ಲ. ಅಷ್ಟೇ ಅಲ್ಲ, ಇವುಗಳಲ್ಲಿ ಮೊದಲನೆಯದು ಮತ್ತು ಕೊನೆಯದನ್ನು ಸಂಪೂರ್ಣ ತಪ್ಪಾಗಿ ಅರ್ಥ ಮಾಡಿಕೊಂಡಿರುವಂತಿದೆ. ಇದಕ್ಕೆಲ್ಲಾ ಕಾರಣ ಪತ್ರಿಕೆಗಳು. ವರ್ಷಾಂತರಗಳಿಂದ ಇಡೀ ಪತ್ರಿಕೆ, ಪುರವಣಿಗಳು ಎಲ್ಲೆಲ್ಲೂ ಸಾಹಿತಿಗಳದ್ದೇ ಕಾರುಬಾರು. ವಿಷಯ ಅನಗತ್ಯ. ಅಭಿಪ್ರಾಯ ಮುಖ್ಯ.ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಚಿತ್ರಕಲೆ ಅಥವಾ ಇನ್ಯಾವುದೇ ಮಾನವಿಕ ಶಾಸ್ತ್ರಜ್ಞರಿಗೆ ಪತ್ರಿಕೆಗಳಲ್ಲಿ ಸ್ಥಳವಿಲ್ಲ. ಹಾಗಾಗಿ ಗ್ಲಾಮರಿಲ್ಲ. ನಮ್ಮ ಈಗಿನ ಹುಡುಗರ ಪ್ರಕಾರ ಇವೆಲ್ಲಾ ವೇಸ್ಟು, ಡಬ್ಬಾ. ಏಕೆಂದರೆ ಅದರಲ್ಲಿ ಐಡೆಂಟಿಟಿಯಿಲ್ಲ. ಸಾಹಿತಿಯಾದರೆ ಏನು ಬೇಕಾದರೂ ಮಾತನಾಡಬಹುದು ಎಂದು ಇವರನ್ನೆಲ್ಲಾ ಹಾದಿ ತಪ್ಪಿಸಿದ್ದೇ ಸಾಹಿತಿಗಳು. ನಾನು ಕೂಡಾ ಈ ಪ್ರಕ್ರಿಯೆಯ ಬಗ್ಗೆ ನನ್ನದೊಂದು ಅಭಿಪ್ರಾಯ ಹೇಳಿ ಸಾಹಿತಿಯಾಗುವ ಸಾಹಸ ಮಾಡಲಾರೆ.ಓ.ಎಲ್. ನಾಗಭೂಷಣಸ್ವಾಮಿಯವರು ’ವಿಮರ್ಶೆಯ ಪರಿಭಾಷೆ’ಯಲ್ಲಿ ‘ಕವಿ’ಯನ್ನು ವಿವರಿಸುತ್ತ– ‘... ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ ಕವಿಯನ್ನು ಇತರ ಜನರಿಂದ ಪ್ರತ್ಯೇಕವಾದ ಒಂದು ‘ಸೃಷ್ಟಿ’ ಎಂದು ನೋಡುವ ದೃಷ್ಟಿ ಇದೆ... ಕೆಲವು ಕವಿಶಿಕ್ಷಾ ಗ್ರಂಥಗಳು ಕವಿಯ ಉಗುರು ಹೇಗೆ ಕತ್ತರಿಸಬೇಕು ಎಂಬುದರಿಂದ ಹಿಡಿದು ಅವನ ಓದುವ ಕೋಣೆಯ ಸುಣ್ಣ ಯಾವ ರೀತಿ ಇರಬೇಕು ಎಂಬುವರೆಗೆ ಕವಿಯನ್ನು ಒಂದು ವಿಚಿತ್ರ ಸೃಷ್ಟಿಯಾಗಿ ನೋಡುತ್ತವೆ,. ಪ್ರತಿಭೆ, ವ್ಯುತ್ಪತ್ತಿ, ಅಭ್ಯಾಸಗಳು ಕವಿಗೆ ಅಗತ್ಯ’ ಎಂದು ಬರೆಯುತ್ತಾರೆ.ನಮ್ಮ ಕವಿಗಳು ಕಡೆಯ ಸಾಲೊಂದನ್ನು ಬಿಟ್ಟು ಮುಂಚಿನ ಇತರೇ ವಿವರಣೆಗಳನ್ನು ಫಾಲೋ ಮಾಡಿ ತಮ್ಮನ್ನು ‘ವಿಚಿತ್ರ ಸೃಷ್ಟಿ’ ಮಾತ್ರವಾಗಿ ಪರಿಗಣಿಸಿಕೊಳ್ಳುತ್ತಿದ್ದಾರೋ ಎಂದು ಅಚ್ಚರಿ! ಈ ಡೇಂಜರ್‌ ಕವಿಗಳಿಂದ ಪಾರಾಗಲಿಕ್ಕೆ ನನ್ನ ಗೆಳತಿಯೊಬ್ಬಳು ಈ ಸಾಹಿತ್ಯ, ಸಂಗೀತ –ಒಟ್ಟಾರೆ ‘ಕಲೆ’– ಯ ಅವಗುಣಗಳಿರದ ಹುಡುಗನೊಬ್ಬನನ್ನು ವರಿಸಲು ಹುಡುಕುತ್ತಿದ್ದಾಳೆ.ಕೆಟ್ಟುಹೋಗಿದೆ ಕಾಲ

ಎಲ್ಲರೂ ಕವಿತಾಲೋಲ

ಕವಿಯಲ್ಲದವ ಸಿಕ್ಕನಲ್ಲ

ಎಲ್ಲಿರುವನೋ ನನ್ನ ನಲ್ಲ?

(ಅವಳ ಸ್ವರಚಿತ ಕವಿತೆ)

ಇದಕ್ಕೆಲ್ಲ ಏನು ಪರಿಹಾರ ಎಂದು ಯಾರಾದರೂ ಸಾಹಿತಿಗಳನ್ನು ಕೇಳಬೇಕು.

ಈ ಅಂಕಣಕ್ಕೆ ನೀವೂ ಬರೆಯಬಹುದು. ವಿಷಯ ಇಂಥದ್ದೇ ಆಗಿರಬೇಕೆಂಬ ಷರತ್ತುಗಳೇನೂ ಇಲ್ಲ. ಆದರೆ ಬರಹದಲ್ಲೊಂದು ಲವಲವಿಕೆ, ಮಂಡನೆಯ ಕ್ರಮದಲ್ಲೊಂದು ಹೊಸತನ ಇರುವುದು ಕಡ್ಡಾಯ. ಪ್ರಕಟವಾದ ಬರಹಗಳಿಗೆ ಸಂಭಾವನೆಯೂ ಇರುವುದರಿಂದ ಸುಳ್ಳು ಹೆಸರುಗಳಲ್ಲಿ ಬರೆದು ಧನ ಹಾನಿ ಮಾಡಿಕೊಳ್ಳಬೇಡಿ.

ಬರಹಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ‘ಒಡಲಾಳ’, ಕಾಮನಬಿಲ್ಲು ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರು–01. ಇ–ಮೇಲ್:kamanabillu@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.