ಶನಿವಾರ, ಜನವರಿ 18, 2020
26 °C
‘ಲೆವಿ ಅಕ್ಕಿ’ ನೀಡಲು ವಿರೋಧ

ಅಕ್ಕಿ ಗಿರಣಿ ಬಂದ್ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಜ್ಯ ಸರ್ಕಾರ ಲೆವಿ ಅಕ್ಕಿ ಸಂಗ್ರಹ ಕುರಿತು ಹೊರಡಿಸಿರುವ ಆದೇಶ ವಿರೋಧಿಸಿ ಡಿ. 16ರಿಂದ ರಾಜ್ಯಾದ್ಯಂತ ಅಕ್ಕಿ ಗಿರಣಿಗಳನ್ನು ಅನಿರ್ದಿಷ್ಟ ಕಾಲದವರೆಗೆ ಬಂದ್ ಮಾಡಲು ತೀರ್ಮಾನಿಸಿದ್ದು, ರಾಯ­ಚೂರು ಜಿಲ್ಲೆಯಲ್ಲಿನ 125 ಅಕ್ಕಿ ಗಿರಣಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ರಾಯಚೂರು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ಪಾಪಾರೆಡ್ಡಿ ತಿಳಿಸಿದರು.



ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಪ್ರತಿ ವರ್ಷ ಅಕ್ಕಿ ಗಿರಣಿದಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಲೆವಿ ಗುರಿ ನಿಗದಿಪಡಿಸುತ್ತಿತ್ತು. ಆದರೆ, ಈ ವರ್ಷ ಲೆವಿ ಸಭೆ ಕರೆಯದೇ ಏಕ ಪಕ್ಷೀಯವಾಗಿ ಆದೇಶ ಹೊರಡಿಸಿದೆ.



ಈ ವರ್ಷ ರಾಜ್ಯದ ಅಕ್ಕಿ ಗಿರಣಿಗಳಿಂದ 13 ಲಕ್ಷ 25 ಸಾವಿರ ಟನ್ ‘ಲೆವಿ’ ಅಕ್ಕಿ ಸಂಗ್ರಹಕ್ಕೆ ಆದೇಶ ಹೊರಡಿಸಿರುವುದು ಅಕ್ಕಿ ಗಿರಣಿ ಮಾಲೀಕರಿಗೆ ಆಘಾತಕಾರಿ ಸಂಗತಿಯಾಗಿದೆ.  ಜಿಲ್ಲೆಗೆ 2 ಲಕ್ಷ 25 ಸಾವಿರ ಟನ್ ಲೆವಿ ಅಕ್ಕಿ ಸಂಗ್ರಹಕ್ಕೆ ಆದೇಶಿ­­ಸ­ಲಾಗಿದೆ. ಇಷ್ಟೊಂದು ಪ್ರಮಾ­ಣದ ಲೆವಿ ಸಂಗ್ರಹ ಹಿಂದೆಂದೂ ಯಾವ ಸರ್ಕಾರವೂ ಮಾಡಿರಲಿಲ್ಲ ಎಂದು ತಿಳಿಸಿದರು.



ಸರ್ಕಾರ ನಿಗದಿ ಪಡಿಸಿದಷ್ಟು ಲೆವಿ ಅಕ್ಕಿ ಕೊಡಲು ಅಕ್ಕಿ ಗಿರಣಿಗಳಿಂದ ಸಾಧ್ಯ­ವಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಮಾಡಿದ ಮನವಿಗೆ ಸ್ಪಂದಿಸುವ ಪ್ರಯತ್ನ ಮಾಡಿಲ್ಲ. ಇಷ್ಟು ಪ್ರಮಾಣದ ಲೆವಿ ಅಕ್ಕಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುತ್ತಿದೆ ಎಂದು ತಿಳಿಸಿದರು.



ಜಿಲ್ಲೆಯಲ್ಲಿ ಪ್ರತಿ ಅಕ್ಕಿ ಗಿರಣಿಗೆ ನಿತ್ಯ ಭತ್ತದ 15–20 ಲಾರಿ ಲೋಡ್ ಬರುತ್ತವೆ. ಅಕ್ಕಿ ಗಿರಣಿಗಳಿಂದ 2–3 ಅಕ್ಕಿ ಲೋಡ್ ಹೋಗುತ್ತವೆ. ಸಾವಿರಾರು ಕಾರ್ಮಿಕರು. ಭತ್ತದ ವ್ಯಾಪಾರಸ್ಥರು, ಟ್ರಾನ್ಸ್ ಪೋರ್ಟ್‌ನವರು ಹೀಗೆ ಅನೇಕರು ಅಕ್ಕಿ ಗಿರಣಿ ಅವಲಂಬನೆ ಹೊಂದಿದ್ದಾರೆ.  ಅಕ್ಕಿ ಗಿರಣಿ ಬಂದ್ ಆಗುವುದರಿಂದ ಎಲ್ಲರಿಗೂ ಸಮಸ್ಯೆ ಎದುರಾಗಲಿದೆ. ಎಲ್ಲರ ಸಹಕಾರದಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.



ಸೋನಾ ಮಸೂರಿ ಭತ್ತಕ್ಕೆ ವಿನಾಯಿತಿ ಕೊಡಿ: ಜಿಲ್ಲೆ, ರಾಜ್ಯದ ಬಹುತೇಕ ಕಡೆ ಸೋನಾ ಮಸೂರಿ ಭತ್ತ ಬೆಳೆಯುತ್ತಾರೆ. 2005–06ರಲ್ಲಿ ಸೋನಾ ಮಸೂರಿ ಭತ್ತ ಬೆಳೆಯುವ ಜಿಲ್ಲೆಗಳಿಗೆ ಲೆವಿ ಯಿಂದ ವಿನಾಯಿತಿ ದೊರಕಿತ್ತು. ಅದೇ ಈ ವರ್ಷವೂ ಸೋನಾ ಮಸೂರಿ ಭತ್ತ ಬೆಳೆಯುವ ಜಿಲ್ಲೆಗಳಿಗೆ ಲೆವಿಯಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.



ಮಾರಂ ತಿಪ್ಪಣ್ಣ,  ಮಂಚಾಳ ಶ್ರೀನಿವಾಸ, ಎಂ.ಆರ್ ವೀರಣ್ಣ, ಬಿ ಗಿರೆಣ್ಣ,  ಬಿ ಗೋವಿಂದಪ್ಪ ಪತ್ರಿಕಾ­ಗೋಷ್ಠಿಯ­ಲ್ಲಿದ್ದರು.

ಪ್ರತಿಕ್ರಿಯಿಸಿ (+)