ಶುಕ್ರವಾರ, ಏಪ್ರಿಲ್ 23, 2021
31 °C

ಅಕ್ರಮ ಕಂಪೆನಿಗೆ ಸರ್ಕಾರದ ಕರುಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಮೊದಲೇ ಅರಣ್ಯ ಒತ್ತುವರಿ, ಅಕ್ರಮವಾಗಿ ರಸ್ತೆ ನಿರ್ಮಾಣ ಮತ್ತು ಬೊಕ್ಕಸಕ್ಕೆ 14 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದ ಗಣಿ ಕಂಪೆನಿಯೊಂದಕ್ಕೂ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟು ‘ಕರುಣಾಮಯಿ’ಯಂತೆ ನಡೆದುಕೊಂಡಿತ್ತು ಎಂಬ ಸಂಗತಿಯನ್ನು ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಬಹಿರಂಗಪಡಿಸಿದೆ.ಬಳ್ಳಾರಿಯ ಸಂಡೂರು ವಲಯದಲ್ಲಿರುವ ಲಕ್ಷ್ಮೀನಾರಾಯಣ ಗಣಿ ಕಂಪೆನಿಯ ಗುತ್ತಿಗೆ ಪ್ರದೇಶದ ಪರಿಶೀಲನೆ ನಡೆಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿರುವ ಸಿಇಸಿ, ಕಂಪೆನಿ ಅಕ್ರಮ ಗಣಿಗಾರಿಕೆ ಮತ್ತು ಅರಣ್ಯ ಒತ್ತುವರಿಯಲ್ಲಿ ಭಾಗಿಯಾಗಿತ್ತು. ಸರ್ಕಾರ ದಂಡ ವಸೂಲಿ ಮಾಡಿ, ಸುಮ್ಮನಾಗಿದೆ. ಅರಣ್ಯ ಕ್ಯಾದೆಯಡಿ ಕಂಪೆನಿ ವಿರುದ್ಧ ದಾಖಲಿಸಿದ್ದ ಮೊಕದ್ದಮೆಯನ್ನೂ ಹಿಂದಕ್ಕೆ ಪಡೆದಿದೆ ಎಂದು ಹೇಳಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಸಿ ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ವದಿಯೊಂದನ್ನು ಸಲ್ಲಿಸಿದೆ. ಇದೇ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸ್ಥಳೀಯ ವಲಯ ಅರಣ್ಯಾಧಿಕಾರಿ 2011ರ ಫೆಬ್ರುವರಿ 25ರಂದು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒಂದು ವರದಿಸಲ್ಲಿಸಿದ್ದರು.10 ಹೆಕ್ಟೇರ್ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು ಮತ್ತು ಐದು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅದಿರು ಸಂಗ್ರಹಿಸಿರುವ ಆರೋಪ ಕಂಪೆನಿಯ ಮೇಲಿತ್ತು. ದಂಡ ವಸೂಲಿ ಮಾಡಿ ಪ್ರಕರಣವನ್ನೇ ಮುಕ್ತಾಯ ಮಾಡಲಾಗಿದೆ.1963ರಿಂದಲೂ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿ 175.63 ಹೆಕ್ಟೇರ್ ವಿಸ್ತೀರ್ಣದ ಗಣಿ ಗುತ್ತಿಗೆ ಹೊಂದಿತ್ತು. ಅಕ್ರಮ ಗಣಿಗಾರಿಕೆ ಕುರಿತು 2008ರಲ್ಲಿ ವರದಿ ಸಲ್ಲಿಸಿದ್ದ ಲೋಕಾಯುಕ್ತರು, ಲಕ್ಷ್ಮೀನಾರಾಯಣ ಮೈನಿಂಗ್ ಕಂಪೆನಿ 41.93 ಹೆಕ್ಟೇರ್ ಒತ್ತುವರಿ ಮಾಡಿರುವುದನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದರು. ಹೀಗಾಗಿ ಅರಣ್ಯ ಇಲಾಖೆ ಕಂಪೆನಿ ವಿರುದ್ಧ ಮೊಕದ್ದಮೆ ದಾಖಲಿಸಿತ್ತು.ಮೊಕದ್ದಮೆ ವಿರುದ್ಧ ಕಂಪೆನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರಣ್ಯ ಇಲಾಖೆ, ಭಾರತೀಯ ಗಣಿ ಬ್ಯೂರೋ, ಭಾರತೀಯ ಸರ್ವೆ ನಿರ್ದೇಶನಾಲಯದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಂಟಿ ಸರ್ವೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ಕಂಪೆನಿಯು 35 ಹೆಕ್ಟೇರ್ ಒತ್ತುವರಿ ಮಾಡಿರುವುದು ಜಂಟಿ ಸರ್ವೆಯಲ್ಲಿ ಪತ್ತೆಯಾಗಿತ್ತು.ಆ ಬಳಿಕವೂ ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಗುಂಡಿಯನ್ನು ಮುಚ್ಚಿ, ಅಲ್ಲಿ ಗಿಡಗಳನ್ನು ನೆಟ್ಟಿರುವುದು ಸಿಇಸಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗಿದೆ.ಕಂಪೆನಿಯು ಅರಣ್ಯ ಪ್ರದೇಶದಲ್ಲಿ ಹಾದುಹೋಗುವ 4.325 ಕಿ.ಮೀ ಉದ್ದದ ರಸ್ತೆಯನ್ನು 2.5 ಮೀಟರ್‌ನಿಂದ 7.5 ಮೀಟರ್ ವಿಸ್ತರಿಸಿದೆ. ಅಲ್ಲದೇ 2.80 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಬಳಿಕ ಗುಂಡಿಗಳನ್ನು ಮುಚ್ಚಿದೆ ಎಂದು ವಲಯ ಅರಣ್ಯಾಧಿಕಾರಿ ತಮ್ಮ ತನಿಖಾ ವರದಿಯಲ್ಲಿ ತಿಳಿಸಿದ್ದರು. ರಸ್ತೆ ನಿರ್ಮಾಣದಿಂದ 1.6 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿತ್ತು. ಗಣಿ ಗುತ್ತಿಗೆಯ ಹೊರ ಭಾಗದಲ್ಲಿ ಇದ್ದ ರೂ14 ಕೋಟಿ ಮೌಲ್ಯದ ಅದಿರನ್ನು ವಶಪಡಿಸಿಕೊಳ್ಳಲಾಗಿತ್ತು.ಇಂತಹ ಗಂಭೀರ ಆರೋಪ ಎದುರಿಸುತ್ತಿದ್ದ ಕಂಪೆನಿಗೆ ಕೇವಲ ದಂಡ ವಿಧಿಸಿ, ಮೊಕದ್ದಮೆ ಹಿಂದಕ್ಕೆ ಪಡೆದಿರುವ ಸರ್ಕಾರದ ಕ್ರಮದ ಬಗ್ಗೆ ಸಿಇಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕಂಪೆನಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದಲೇ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ದೂರಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.