ಸೋಮವಾರ, ಮೇ 17, 2021
25 °C

ಅಗ್ಗದ ಅಕ್ಕಿ ಪ್ರಚಾರಕ್ಕಲ್ಲ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಡವರಿಗೆ ಎರಡು ಹೊತ್ತಿನ ಊಟ ಸಮರ್ಪಕವಾಗಿ ದೊರೆಯಬೇಕೆಂಬ ಉದ್ದೇಶದಿಂದಲೇ ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಯೋಜನೆಯನ್ನು ಅಧಿಕಾರ ಸ್ವೀಕರಿಸಿದ ದಿನದಂದೇ ಘೋಷಣೆ ಮಾಡಿದೆ ಹೊರತು ಪ್ರಚಾರ ಪಡೆಯಲು ಅಲ್ಲ' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ  ಕೃಷ್ಣಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `98 ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕಾರ್ಡ್‌ನ ವ್ಯಾಪ್ತಿಗೂ ಬರದ ಅದೆಷ್ಟೋ ಮಂದಿ ಬಡವರು ಇದ್ದಾರೆ. ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಬಹುದು. ಆದರೆ ಬಡವರಿಗೆ ಎರಡು ಹೊತ್ತಿನ ತುತ್ತು ದೊರೆಯಬೇಕು' ಎಂದು ತಿಳಿಸಿದರು.`ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ರಾಜ್ಯದ ಅಭಿವೃದ್ಧಿ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ತರುವ ಅಗತ್ಯವಿದೆ. ದಲಿತರ, ಶ್ರಮಿಕರ, ಶೋಷಿತರ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.`ತೊಂಬತ್ತರ ದಶಕದಲ್ಲಿ ಬಿ.ಕೃಷ್ಣಪ್ಪ ಅವರ ಪರಿಚಯವಾಗಿತ್ತು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಬಿ.ಕೃಷ್ಣಪ್ಪ ಜೀವಂತವಾಗಿಲ್ಲದೇ ಇರಬಹುದು, ಆದರೆ ಅವರ ವಿಚಾರಧಾರೆಯಿಂದಲೇ ಜನರ ನಡುವೆ ಇದ್ದಾರೆ'ಎಂದರು.ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ , `ಅಸ್ತಿತ್ವವನ್ನೇ ಮಾರಿಕೊಂಡು, ವ್ಯವಸ್ಥೆಗೆ ಶರಣೆಂದಿರುವ ಬುದ್ಧಿಜೀವಿಗಳ  ನಡುವೆಯೂ ನಿಜವಾದ ಹೋರಾಟಗಾರನಿಗೆ ಬೆಂಬಲ ಸೂಚಿಸಬೇಕು. ಶೋಷಿತರ ಪರವಾಗಿ ಬಾಯಿಚಪಲಕ್ಕೆ ಮಾತನಾಡುವವರನ್ನು ವಿರೋಧಿಸಬೇಕು' ಎಂದು ಕರೆ  ನೀಡಿದರು.ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, `ಜಾತಿಯೆಂಬುದು ಈ ವ್ಯವಸ್ಥೆಗೆ ಅಂಟಿರುವ ಜಾಡ್ಯ. ಶಿಕ್ಷಣ, ಅಧಿಕಾರ ಪಡೆದರೂ ಈ ವಿಷವರ್ತುಲದಿಂದ ಹೊರಬರಲು ದಲಿತನೊಬ್ಬ ಕಷ್ಟಪಡುತ್ತಾನೆ. ದಲಿತರ ಆತ್ಮಶಕ್ತಿಯಾಗಿರುವ ಅಂಬೇಡ್ಕರ್ ತತ್ವಗಳೇ ಶ್ರೀರಕ್ಷೆ' ಎಂದರು.ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್‌ನ ಇಂದಿರಾ ಕೃಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.