ಶುಕ್ರವಾರ, ಏಪ್ರಿಲ್ 23, 2021
28 °C

ಅಚ್ಚರಿ ನೀಡುವ ನೆಚ್ಚಿನ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡ ಕನಸೊಂದು ನನಸಾಗಬೇಕು. ಅದು ಸಾಧ್ಯವಾಗುವ ಆಶಯವೂ ಬಲವಾಗಿದೆ. ಲಂಡನ್‌ನಲ್ಲಿ ಮನಸು ಗೆಲ್ಲುವಂಥ ಆಟವಾಡುವ ವಿಶ್ವಾಸಕ್ಕೂ ಕೊರತೆ ಇಲ್ಲ. ಛಲದ ಆಟದಿಂದ ಪದಕ ಗೆಲ್ಲುವ ಬಲ ತೋರುವುದಕ್ಕೆ ಲಂಡನ್‌ನಲ್ಲಿ ವೇದಿಕೆಯೂ ಸಜ್ಜಾಗಿದೆ. ಈಗಾಗಲೇ ತಾಲೀಮು ಪಂದ್ಯಗಳನ್ನು ಆಡಿ ಆಗಸದಲ್ಲಿ ಸುಳಿಯುವ ಮೋಡಗಳ ನಡುವೆ ಯಶಸ್ಸಿನ ಚಿತ್ರವನ್ನು ಕಾಣುತ್ತಿದ್ದಾರೆ ಭಾರತ ಹಾಕಿ ತಂಡದ ಆಟಗಾರರು.ಒಲಿಂಪಿಕ್ ಹತ್ತಿರದಲ್ಲಿ ಇರುವಾಗಲೇ ಆಡಿರುವ ಪಂದ್ಯಗಳಲ್ಲಿ ಭಾರತಕ್ಕೆ ನಿರಾಸೆಯಾಗಿಲ್ಲ. ಫ್ರಾನ್ಸ್ ವಿರುದ್ಧ ಗೆಲುವು, ಆನಂತರ ಸ್ಪೇನ್ ಎದುರು ಡ್ರಾ ಮಾಡಿಕೊಂಡಿದ್ದು ಒಳ್ಳೆಯ ಸಂಕೇತ ಎಂದೇ ಹೇಳಬೇಕು. ಸರಿಯಾದ ಸಮಯಕ್ಕೆ ತಕ್ಕ ಪರಿಣಾಮ ಕಂಡಿರುವುದು ಸಂತಸಕ್ಕೆ ಕಾರಣ.ಇಂಥ ಸಂತಸದ ವಾತಾವರಣ ಇರುವುದಕ್ಕೆ ಕಾರಣ ಭಾರತ ತಂಡದ ಕೋಚ್ ಆಗಿರುವ ಆಸ್ಟ್ರೇಲಿಯಾದ ಮೈಕಲ್ ನಾಬ್ಸ್. ತಮಗೆ ಲಭ್ಯವಾದ ತೀರ ಅಲ್ಪ ಅವಧಿಯಲ್ಲಿಯೇ ತಂಡದ ಆಟಗಾರರಲ್ಲಿ ವಿಶ್ವಾಸ ತುಂಬಿ ದೊಡ್ಡ ಹೋರಾಟಕ್ಕೆ ಸಜ್ಜಾಗಿಸಿದ್ದಾರೆ.ಈಗ ಈ ತಂಡವು ಯಾವುದೇ ಶಕ್ತಿಶಾಲಿ ಎನಿಸುವ ತಂಡಕ್ಕೆ ಆಘಾತ ನೀಡುವ ಛಲವನ್ನು ಮನದಲ್ಲಿ ಬಿತ್ತಿಕೊಂಡಿದೆ. ಯಾವುದೇ ಎದುರಾಳಿಗೆ ಸವಾಲಾಗುವ ತಂಡ ಎನ್ನುವ ಮಟ್ಟಕ್ಕೆ ಬೆಳೆದಿದೆ ಭಾರತ.ನವದೆಹಲಿಯಲ್ಲಿ ನಡೆದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಸಂಕಷ್ಟದ ಪರಿಸ್ಥಿತಿಗಳನ್ನು ನಿವಾರಿಸಿಕೊಂಡು ಗೆಲ್ಲುವಂಥ ಆಟವಾಡಿದೆ. ಆದರೆ ಆ ಟೂರ್ನಿಯಲ್ಲಿ ಆಡಿದ್ದು ಹಾಕಿಯಲ್ಲಿ ಭಾರಿ ಹೆಸರು ಮಾಡಿರುವಂಥ ತಂಡಗಳಲ್ಲ ಎನ್ನುವುದನ್ನು ಮರೆಯಲಾಗದು. ಈ ಟೂರ್ನಿ ನಂತರ ಮಲೇಷ್ಯಾದ ಇಪೊದಲ್ಲಿ `ಅಜ್ಲನ್ ಷಾ ಕಪ್~ನಲ್ಲಿ ಪ್ರಬಲ ತಂಡಗಳಿಗೂ ಸವಾಲಾಗಿ ನಿಂತಿದ್ದು ವಿಶೇಷ. ಇದೇ ಕಾರಣಕ್ಕಾಗಿ ಒಲಿಂಪಿಕ್‌ನಲ್ಲಿ ಉತ್ತಮ ಫಲದ ನಿರೀಕ್ಷಿಸಲಾಗಿದೆ.ವಿಶ್ವ ರ‌್ಯಾಂಕಿಂಗ್‌ನಲ್ಲಿ ತಮಗಿಂತ ಮೇಲಿರುವ ದಕ್ಷಿಣ ಕೊರಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಿದ್ದು ಭಾರತದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಈ ಎರಡು ಪಂದ್ಯಗಳಲ್ಲಿನ ಫಲಿತಾಂಶದ ನಂತರ ಎಲ್ಲ ತಂಡಗಳೂ ಭಾರತವನ್ನು ಗಂಭೀರವಾಗಿ ಪರಿಗಣಿಸುವಂತಾಗಿದೆ.ಭಾರತದ ತಂಡ ಹೀಗೆ ದಾಳಿಗೆ ಒತ್ತು ನೀಡುವ ಜೊತೆಗೆ ರಕ್ಷಣೆಯಲ್ಲಿಯೂ ಶಕ್ತಿಯುತವಾಗಿ ಕಾಣಿಸಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.

ಮಧ್ಯಕ್ಷೇತ್ರದಲ್ಲಿ ಸರ್ದಾರ್ ಸಿಂಗ್ ತಂಡದ ಹೃದಯ ಎನ್ನುವಂತೆ ಆಟವಾಡುತ್ತಿದ್ದಾರೆ.ಆಧುನಿಕ ಹಾಕಿಗೆ ಅಗತ್ಯ ಇರುವುದೇ ಇಂಥ ಆಟ. ಸರ್ದಾರ್ ಅವರನ್ನು ವಿಶ್ವದ ಉತ್ತಮ ಆಟಗಾರರಲ್ಲಿ ಒಬ್ಬರೆಂದು ಖಂಡಿತವಾಗಿ ಪರಿಗಣಿಸಬಹುದು. ದೇಶದ ತಂಡಕ್ಕೆ ದಾಳಿಯಲ್ಲಿ ಮಾತ್ರವಲ್ಲ ರಕ್ಷಣೆಯಲ್ಲಿಯೂ ಆಧಾರವಾಗಿ ನಿಂತಿದ್ದಾರೆ. ಗುರ್ಬಾಜ್ ಸಿಂಗ್ ಅವರಂತೂ ಬಲಭಾಗದಲ್ಲಿ ಬಲಗೈನಂತೆ ಬಲವಾಗಿದ್ದಾರೆ. ಇವರು ದಾಳಿ ಮಾಡುವ ರೀತಿಯನ್ನು ನೋಡುವುದೇ ಕಣ್ಣಿಗೆ ಸೊಬಗು.

ಇಗ್ನೇಸ್ ಟಿರ್ಕಿ ಅಂದರೆ ಕೋಟೆ ಎಂದೇ ಹೇಳಬೇಕು. `ಡೀಪ್ ಡಿಫೆನ್ಸ್~ ಎಂಥದ್ದು ಎನ್ನುವುದನ್ನು ಅವರು ಇಪೊದಲ್ಲಿ ತೋರಿಸಿಕೊಟ್ಟಿದ್ದಾರೆ. ರಕ್ಷಣೆಯತ್ತ ಗಮನ ಕೇಂದ್ರೀಕರಿಸಿ, ಎದುರಾಳಿ ಪಡೆಯ ಆಟಗಾರರು ಬೆರಗಾಗುವಂತೆ ದಾಳಿಯತ್ತ ಕೂಡ ಮುಖಮಾಡುವುದು ಗುರ್ಬಾಜ್ ವಿಶೇಷ.ಈ ಮೂವರು ಆಟಗಾರರು ವಿಶಿಷ್ಟವಾಗಿ ನಿಲ್ಲುತ್ತಾರೆ. ಲಂಡನ್‌ನಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಇವರ ಪಾತ್ರ ದೊಡ್ಡದು. ಸರ್ದಾರ್, ಗುರ್ಬಾಜ್ ಹಾಗೂ ಇಗ್ನೇಸ್ ಅವರು ತೋರುವ ಹೊಂದಾಣಿಕೆ ಹಾಗೂ ದಾಳಿ-ರಕ್ಷಣೆಯಲ್ಲಿ ಮಾಡುವ ಅಚ್ಚರಿಯ ಬದಲಾವಣೆಯೇ ಎದುರಾಳಿ ತಂಡದವರಿಗೆ ಅಪಾಯಕಾರಿ.ಭಾರತದ ದೊಡ್ಡ ಶಕ್ತಿ ಕೇಂದ್ರ ಡ್ರ್ಯಾಗ್ ಫ್ಲಿಕ್ ಪರಿಣತ ಸಂದೀಪ್ ಸಿಂಗ್. ಪ್ರತಿಯೊಂದು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಂತಹ ತಂತ್ರಗಾರಿಕೆ ಹಾಗೂ ಉತ್ಸಾಹ. ಅದೇ ಎದುರಾಳಿ ಗೋಲ್ ಕೀಪರ್‌ಗಳು ಭಯಗೊಳ್ಳುವಂತೆ ಮಾಡುವುದು. ಸಂದೀಪ್ ಅವರಂತೆಯೇ ರಘುನಾಥ್ ಕೂಡ ಆಡುವ ಅವಕಾಶ ಸಿಕ್ಕಾಗ ತಮ್ಮ ಡ್ರ್ಯಾಗ್ ಫ್ಲಿಕ್ ಪರಿಣತಿಯನ್ನು ಪ್ರದರ್ಶಿಸಬಲ್ಲರು. ರಘುನಾಥ್ ಅವರೂ ತಂಡದ ಅಮೂಲ್ಯವಾದ ಆಸ್ತಿ.ಹಾಕಿ ತಂಡದ ಹಕ್ಕಿಯ ರೆಕ್ಕೆಗೆ ಬಲ ಬೇಕು. ಅದಕ್ಕೆ ಸೂಕ್ತ ಎನಿಸುವ ಬಲ ವಿಂಗ್‌ನಲ್ಲಿ ಆಡುವ ಎಸ್.ವಿ.ಸುನಿಲ್ ಮಿಂಚು ಹರಿದಂತೆ ಮುನ್ನುಗ್ಗುವ ಛಲಗಾರ. ಈ ಆಟಗಾರನ ನಿಯಂತ್ರಣಕ್ಕೆ ಚೆಂಡು ಸಿಕ್ಕರೆ ಪ್ರೇಕ್ಷಕರು ಉಸಿರು ಬಿಗಿಹಿಡಿದು ಅವರ ಮೇಲೆ ಕಣ್ಣು ನೆಡಬೇಕು. ಅಂಥ ಅದ್ಭುತವಾಗಿ ಕಾಣಿಸುತ್ತಾರೆ ಸುನಿಲ್. ಶಿವೇಂದ್ರ ಸಿಂಗ್ ಹಾಗೂ ತುಷಾರ್ ಖಾಂಡೇಕರ್ ಅವರಂತೂ ಅಂಗಳದಲ್ಲಿ ಮಿನುಗುವುದು ಅಚ್ಚರಿಯೇನಲ್ಲ.

 

ಈ ಫಾರ್ವರ್ಡ್ ಆಟಗಾರರೇ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸುವುದು. ಲಂಡನ್ ಒಲಿಂಪಿಕ್‌ನಲ್ಲಿ ತಂಡದ ಪ್ರದರ್ಶನ ಉತ್ತಮಗೊಳ್ಳಲು ಇವರು ಹೊಳಪಿನಿಂದ ಹೊಳೆಯುವುದು ಅಗತ್ಯ ಮಾತ್ರವಲ್ಲ, ಅನಿವಾರ್ಯ ಕೂಡ.ಮುಖ್ಯ ಕಾಳಜಿ ಇರುವುದು ಗೋಲ್ ಕೀಪಿಂಗ್ ವಿಭಾಗದಲ್ಲಿ. ಇದೇ ದೊಡ್ಡ ಹೊಣೆ. ದಾಳಿಯಲ್ಲಿನ ಶ್ರಮ ಸಾರ್ಥಕ ಎನಿಸಬೇಕಾದರೆ ರಕ್ಷಣೆಯಲ್ಲಿ ಗೋಲ್ ಕೀಪರ್ ತಪ್ಪು ಮಾಡಬಾರದು. ಭರತ್ ಚೆಟ್ರಿ ಹಾಗೂ ಶ್ರೀಜೇಶ್ ಎದುರಾಳಿಗಳಿಗೆ ಎಷ್ಟು ಬಲಾಢ್ಯ ಕೋಟೆಯಾಗಿ ಕಾಣಿಸುತ್ತಾರೆ ಎನ್ನುವುದೇ ಮುಖ್ಯ.

 

ಈ ವಿಭಾಗದಲ್ಲಿ ನಿರಾಸೆ ಆಗದಿದ್ದರೆ ಎಲ್ಲವೂ ಒಳಿತು. ಭಾರತ ತಂಡವು ಅಂಗಳಕ್ಕೆ ಇಳಿಸಲು ಆಟಗಾರರ ಆಯ್ಕೆಗೆ ಕೊರತೆ ಇರದು. ದಾಳಿಯಲ್ಲಿಯಂತೂ ಆಯ್ಕೆಗೆ ಸಾಕಷ್ಟು ಅವಕಾಶ. ಯುವ ಆಟಗಾರ ಎಸ್.ಕೆ.ಉತ್ತಪ್ಪ ನಿರಾಸೆ ಮಾಡುವುದಿಲ್ಲ. ಅವರು ದಾಳಿಯ ರಂಗು ಹೆಚ್ಚಾಗುವಂತೆ ಮಾಡಿದ್ದಾರೆ.ಒಲಿಂಪಿಕ್‌ನಲ್ಲಿ ಭಾರತ ಇರುವುದು `ಬಿ~ ಗುಂಪಿನಲ್ಲಿ. ಇದೇ ಗುಂಪಿನಲ್ಲಿ ಇರುವ ಬಲಾಢ್ಯ ಹಾಲೆಂಡ್ ಹಾಗೂ ಜರ್ಮನಿ ಫೇವರಿಟ್ ತಂಡಗಳು ಎನಿಸಿವೆ. ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಹಾಗೂ ಬೆಲ್ಜಿಯಂ ಕೂಡ ದುರ್ಬಲವಾಗಿಲ್ಲ.ಆದ್ದರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಭಾರತ ತನ್ನ ಸಾಮರ್ಥ್ಯವನ್ನು ಮೀರಿದ ಆಟವನ್ನು ಆಡಬೇಕು. ಜರ್ಮನಿ, ಆಸ್ಟ್ರೇಲಿಯಾ, ಸ್ಪೇನ್ ಇಲ್ಲವೇ ಹಾಲೆಂಡ್ ಯಾರೇ ಎದುರಾಗಲಿ, ವಿಜಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಎಲ್ಲ ಎದುರಾಳಿಗಳಿಗೆ ಆಘಾತ ನೀಡುವಂತಹ ಹೋರಾಟ ಅಗತ್ಯ.ಈ ಹಿಂದೆ ಅನೇಕ ಅನಿರೀಕ್ಷಿತ ಫಲಿತಾಂಶಗಳನ್ನು ಒಲಿಂಪಿಕ್ಸ್ ಇತಿಹಾಸ ಕಂಡಿದೆ. ನ್ಯೂಜಿಲೆಂಡ್ 1976ರಲ್ಲಿ ಮಾಂಟ್ರಿಯಲ್‌ನಲ್ಲಿ ಹಾಗೂ ಇಂಗ್ಲೆಂಡ್ 1988ರಲ್ಲಿ ಸೋಲ್‌ನಲ್ಲಿ ಅಚ್ಚರಿಗೊಳ್ಳುವಂತೆ ಮಾಡಿತ್ತು.ಭಾರತವೂ ಇಂಥ ಅನಿರೀಕ್ಷಿತಗಳಿಗೆ ಕಾರಣವಾಗಬೇಕು. ಎದುರಾಳಿಗಳು ಬಲಾಢ್ಯರೆಂದು ಯೋಚಿಸುವುದನ್ನು ಬಿಟ್ಟು ಆಡಬೇಕು. ಕೇವಲ ಸಕಾರಾತ್ಮಕ ಯೋಚನೆಯೊಂದಿಗೆ ಆಡಬೇಕು.

ಗೆಲುವು ಸಾಧ್ಯ ಎನ್ನುವ ವಿಶ್ವಾಸವನ್ನು ಮನದಲ್ಲಿ ಇಟ್ಟುಕೊಂಡು ದಿಟ್ಟ ಆಟವಾಡಿದರೆ ಪದಕದ ಕನಸು ನನಸಾಗುತ್ತದೆ. ಇಂಥ ಸಕಾರಾತ್ಮಕ ಆಟವನ್ನು ಲೀಗ್ ಹಂತದ ಆರಂಭದಿಂದಲೇ ಆಡುವುದು ಒಳಿತು. ಕೋಚ್ ನಾಬ್ಸ್ ಅವರು ದಾಳಿಗೆ ಒತ್ತು ನೀಡಿದ ಆಡುವಂತೆ ತಮ್ಮ ಆಟಗಾರರನ್ನು ಯೋಜಿಸಬಲ್ಲರು.

 

ಅಷ್ಟೇ ಅಲ್ಲ, ಅವರು ಸರಿಯಾದ ಸಮಯಕ್ಕೆ ಸೂಕ್ತ ಆಟಗಾರರನ್ನು ಬದಲಿಸುತ್ತಾರೆ. ಅವರ ಸರಿಯಾದ ಯೋಜನೆಯು ಲಂಡನ್ ಒಲಿಂಪಿಕ್‌ನಲ್ಲಿ ಯಶಸ್ಸು ತಂದುಕೊಡಲು ನೆರವಾಗಬಲ್ಲದು.

- ಲೇಖಕರು ಭಾರತ ಹಾಕಿ ತಂಡದ ಮಾಜಿ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.