ಶುಕ್ರವಾರ, ಮೇ 29, 2020
27 °C

ಅಜಯ್ ಅಭಿನಯ ಲಹರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜಯ್ ಅಭಿನಯ ಲಹರಿ

ಹಲವು ಟೀಕೆಗಳಿಗೆ ಒಳಗಾದ `ಹಿಮ್ಮತ್‌ವಾಲಾ' ಚಿತ್ರ ತೆರೆಕಂಡು ಕೆಲವೇ ದಿನಗಳು ಕಳೆದಿವೆ. ಅದಾಗಲೇ ಅಜಯ್ `ಸತ್ಯಾಗ್ರಹ' ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದೇ ಸಮಯದಲ್ಲಿ ತಮ್ಮ ನಟನಾ ಶೈಲಿ ಕುರಿತು ಒಂದಿಷ್ಟು ಮಾತನಾಡಿದ್ದಾರೆ.`ನಾನು ಸಹಜ ಅಭಿನಯ ಬಯಸುವ ನಟನಷ್ಟೇ ಹೊರತು ಹೀಗೆಯೇ ನಟಿಸಬೇಕು ಎಂದು ನಿಯಮ ಹಾಕಿಕೊಂಡವನಲ್ಲ. ಒಂದು ಚೌಕಟ್ಟು ಹಾಕಿಕೊಂಡು ನಟಿಸಲು ಮುಂದಾದರೆ ನಟನೆ ನಮ್ಮ ಹಿಡಿತಕ್ಕೆ ಸಿಕ್ಕುವುದಿಲ್ಲ' ಎನ್ನುವ ಅಜಯ್ ತಮ್ಮ 20 ವರ್ಷದ ಅನುಭವದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಹಜ ನಟನೆಯೇ ನನ್ನ ಯಶಸ್ಸಿನ ಒಳಗುಟ್ಟು ಎಂದೂ ಅವರು ಹೇಳಿಕೊಂಡಿದ್ದಾರೆ. ನಲವತ್ಮೂರರ ಹರೆಯದ ಅಜಯ್ ಮುಂದೆ ಕ್ಯಾಮೆರಾ ಬಂದಾಕ್ಷಣ ಪಾತ್ರಕ್ಕೆ ಸಜ್ಜಾಗಿಬಿಡುತ್ತಾರಂತೆ.`ಸಹಜ ನಟನೆ ನನ್ನ ಮಂತ್ರ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವುದು ನನಗಿಷ್ಟ. ಬಾಲಿವುಡ್‌ನಲ್ಲಿ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ ಸಂತೃಪ್ತಿ ನನಗಿದೆ. ನನ್ನನ್ನು ವಿವಿಧ ಬಗೆಯ ಪಾತ್ರಗಳಲ್ಲಿ ಕಣ್ತುಂಬಿಕೊಂಡ ಪ್ರೇಕ್ಷಕರು ಸಹ ನನ್ನನ್ನು ಪ್ರೀತಿಯಿಂದ ಮೆಚ್ಚಿಕೊಂಡಿದ್ದಾರೆ. ಒಂದು ಪಾತ್ರ ಅಜಯ್ ದೇವಗನ್ ಪ್ರತಿಬಿಂಬವಾಗಿ ಹೊರಹೊಮ್ಮುವ ಬದಲು, ಅಜಯ್ ಆ ಪಾತ್ರವಾಗಿ ಹೊರಹೊಮ್ಮುತ್ತಾನೆ' ಎಂದು ತಮ್ಮ ಅಭಿನಯ ಕೌಶಲದ ಕುರಿತು ಅಜಯ್ ಹೇಳಿಕೊಂಡಿದ್ದಾರೆ.`ನಟನ ಕೆಲಸ ಅಭಿನಯಿಸುವುದು ಅಷ್ಟೆ. ಮಾನಸಿಕವಾಗಿ, ದೈಹಿಕವಾಗಿ ಎಷ್ಟು ಸಾಧ್ಯವೋ ಅಷ್ಟೂ ಅಭಿನಯದಲ್ಲಿ ತೊಡಗಿಕೊಳ್ಳಬೇಕು. ಕೆಲವು ಶಾಲೆಗಳಲ್ಲಿ ತರಬೇತುದಾರರು ನಟಿಸುವುದು ಹೇಗೆ ಎಂದು ಕ್ರಮಬದ್ಧವಾಗಿ ಹೇಳಿಕೊಟ್ಟು ನಟರನ್ನು ತಯಾರು ಮಾಡುತ್ತಾರೆ. ಆದರೆ, ನಾನು ಆ ಪಟ್ಟಿಗೆ ಸೇರುವವನಲ್ಲ' ಎನ್ನುತ್ತಾರೆ.ಅಜಯ್ ತಮ್ಮ ಇತ್ತೀಚಿನ ಸಿನಿಮಾ `ಹಿಮ್ಮತ್‌ವಾಲಾ' ಕುರಿತೂ ಮಾತನಾಡಿದ್ದಾರೆ. `1983ರಲ್ಲಿ ತೆರೆಕಂಡಿದ್ದ ಹಿಮ್ಮತ್‌ವಾಲಾ ಚಿತ್ರದ ಮರುಸೃಷ್ಟಿ ಇದು ಎನ್ನಲು ನನಗೆ ಇಷ್ಟವಿಲ್ಲ. ಮೂಲ ಸಿನಿಮಾಕ್ಕಿಂತ ಇದು ಸಂಪೂರ್ಣ ಭಿನ್ನವಾಗಿದೆ. ಹಳೆಯ ಸಿನಿಮಾ ತಿರುಳನ್ನಷ್ಟೇ ಸಾಜಿದ್ ತೆಗೆದುಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ನಾಯಕ ಎಂಜಿನಿಯರ್. ಈ ಚಿತ್ರದ ನಾಯಕ ಸ್ಟ್ರೀಟ್ ಫೈಟರ್' ಎನ್ನುತ್ತಾರೆ `ಸಿಂಗಂ' ಖ್ಯಾತಿಯ ನಟ ಅಜಯ್. ಪ್ರಕಾಶ್ ಝಾ ಅವರ `ಸತ್ಯಾಗ್ರಹ' ಚಿತ್ರೀಕರಣದಲ್ಲಿ ಅಮಿತಾಭ್ ಬಚ್ಚನ್ ಜೊತೆ ಬಿಜಿಯಾಗಿರುವ ಅಜಯ್, `ಅಮಿತಾಬ್ ಅವರ ಜತೆಗಿನ ಕೆಲಸ ಖುಷಿ ನೀಡಿದೆ. ಏಳೆಂಟು ಸಿನಿಮಾಗಳಲ್ಲಿ ಅವರೊಂದಿಗೆ ನಟಿಸಿದ್ದೇನೆ. ನನ್ನ ಕುಟುಂಬ ಸದಸ್ಯರಂತೆ ಅವರು. ಅವರನ್ನು ಆರಾಧಿಸುತ್ತೇನೆ, ಗೌರವಿಸುತ್ತೇನೆ. ಅವರೊಬ್ಬರು ಅತ್ಯದ್ಭುತ ನಟ' ಎಂದು ಹೊಗಳಿಕೆಯ ಮಳೆ ಸುರಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.