ಬುಧವಾರ, ಮೇ 12, 2021
18 °C

ಅಜ್ಜಿ ಅಂಗಡಿ

ಸಂತೋಷ ಗುಡ್ಡಿಯಂಗಡಿ Updated:

ಅಕ್ಷರ ಗಾತ್ರ : | |

ಅಜ್ಜಿ ಅಂಗಡಿ

`ಅಜ್ಜಿ ನಿಂಗೀಗ ಎಷ್ಟು ವಯಸ್ಸು?'

`ನಂಗಾ? ಹಿಂದ್ಕ ಇಂದ್ರಾಗಾಂಧಿ ಅಂಬೋಳು ದೇಸಾನ ಆಳ್ತಿದ್ಕಾಲಕ್ಕ ನಂಗ ಮೊಮ್ಮಗ ಆಗಿ ಅಜ್ಜಿ ಆಗಿದ್ದೆ. ಮೊಮ್ಮಗ್ಳುಗ ಇಂದ್ರಮ್ಮ ಅಂತ ಹೆಸ್ರ ಮಡ್ಗಿ ಅವ್ಳೀಗ ಅಜ್ಜಿ ಆಗವ್ಳೆ. ಅಂದ್ರ ನೀನೇ ಲೆಕ್ಕ ಹಾಕ್ಕೋ ನಂಗ ಎಷ್ಟು ವರ‌್ಸಾಗಿದ್ದೂ ಅಂತ'.

`ನಿಂಗ ಎಷ್ಟ ವರ‌್ಸಕ್ಕ ಮದ್ವ ಆಗಿತ್ತು?'

`ಅದೂವಿ ಗೊತ್ತಿಲ್ಲಕಪ್ಪ. ಆಡಾಕಂತ್ಲೀಯಾ ಹೋಗಿದ್ನಂತ. ಎತ್ಕಂಬಂದು ಲಂಗ ಜಾಕೀಟು ಹಾಕ್ಬುಟ್ಟು ಗಂಡ್ಗ ತೋರ‌್ಸಿದ್ರು. ಆಮ್ಯೋಕ ಇದೇ ನಂಜನ್ಗೂಡ್ನ ದೊಡ್ಜಾತ್ರ ಟೇಮಿಗ ಮದ್ವ ಮಾಡಿ ಕಳ್ಸುದ್ರು ನನ್ನ ತಗಡೂರ‌್ಗ. ಮದುಮಗಳಾದ ನಂಗ ನಿದ್ದ ಬರ‌್ಲಿ ಅಂತ ಕಾದು ನಾನು ನಿದ್ದ ಮಾಡಿದ್ಮ್ಯಾಗ ಗಂಡನ್ಮೀಗ ಕಳ್ಸಿದ್ದಂತ'.

`ಅದ್ಯಾಕ?'

`ಯಾಕಂದ್ರ ನಾನಾಗ ಚಿಕ್ಕವ. ಎಚ್ರಾಗಿದ್ರ ಅವ್ವ ಬೇಕಂತ ಹಟ ಮಾಡ್ತಾಳಂತ ನಿದ್ದಿ ಮಾಡೋ ಕೂಸ್ನ ಕರ‌್ಕೊಂಡೋಗಿದ್ರಂತ'.

`ನಿಂಗ ಯಾವಾಗ ಎಚ್ರಾರಾಯ್ತು?'

`ಅದೂವಿ ಗೊತ್ತಿಲ್ಲಕಪ್ಪ. ಆಮ್ಯೋಕ ಮೂರು ಮಕ್ಕ ಆದ್ವು ಹೋದ್ವು. ಅತ್ತಿ ಮನಿಯಾಗ ಒಳ್ಳೆ ಸೊಸಿ ಆಗ್ನಿಲ್ಲ ಅಂತ ಬೋದ್ರು, ನನ್ಮಗ ನೀ ಒಳ್ಳೆ ಅವ್ವ ಆಗ್ನಿಲ್ಲ ಅಂತ ನನ್ಮ್ಯಾಕ ಬೇಜಾರು ಪಟ್ಕಂಡ್ಲು, ನನ್ನ ಮೊಮ್ಮಕ್ಕಗ ನಾ ಒಳ್ಳೆ ಅಜ್ಜಿ ಆಗ್ನಿಲ್ಲ ಅಂತ ಅಂಗಡಿ ಒಳಗ ಕೂತಾಗ ಅನಸ್ತದ. ಅದ್ಕ ಕೂಸ ಈಗ ಹಗಲೂ ರಾತ್ರಿ ನಿದ್ದ ಮಾಡದ ಎಚ್ರಾಗೇ ಇರ‌್ತೀನಿ, ನಿದ್ದ ಮಾಡದ ಎಷ್ಟ ವರ‌್ಸಾಯ್ತು ಅಂತ ಕೇಳ್ಬ್ಯಾಡ, ಅದೂವಿ ಗೊತ್ತಿಲ್ಲಕಪ್ಪ'.

`ಅಜ್ಜೀ ಮೂರೂ ಮಕ್ಕ ಹೋದ್ವು ಅಂದಿ ಮತ್ತ ಮಗ್ಳು ಮೊಮ್ಮಕ್ಕ ಅಂತೀಯಲ್ಲ?'

`ಅದೇಕಪ್ಪ ಈ ಅಜ್ಜಿ ಬಾಳಾಟ...'

2

ನಂಜನಗೂಡಿಂದ ಹುಲ್ಲಹಳ್ಳಿಗೆ ಹೋಗುವ ಭಯಾನಕವಾಗಿದ್ದ ರಸ್ತೆಯೊಂದು ನಂಜನಗೂಡಿನೊಳಗ ಇದ್ದು ಅದರೊಳಗ ಮೋಟಾರುಗಳು ಕುಲುಕುಲು ಓಡುವಾಗ ಏಳುವ ದೂಳಿನ ಮೋಡಗಳು ಅಡಗಿ ಕೂತುಕೊಳ್ಳುವುದು ಅಲ್ಲೇ ಪಕ್ಕಕ್ಕಿರುವ ಗೂಡಂಗಡಿಯೊಳಗೆ. ಆ ಅಂಗಡಿ ಅಂದರೆ ಅದೊಂದು ಜೀವಂತ ಪೆಟ್ಟಿಗೆ. ಯಾವತ್ತೂ ಚಲಿಸದ ಆ ಪೆಟ್ಟಿಗೆಯೊಳಗೆ ಜೀವವೊಂದು ಬದುಕಿನ ನೋವುಗಳ ಹೆಪ್ಪುಗಟ್ಟಿಸಿಕೊಂಡು ನಿದ್ದೆಯ ಹತ್ತಿರಕ್ಕೂ ತಂದುಕೊಳ್ಳದೆ ಹಗಲೂರಾತ್ರಿಯ ಕೊಲ್ಲುತ್ತಿತ್ತು... ಅವಳು ಅಜ್ಜಿ. ನಡೆಯಲಾಗದ ಕಾಲುಗಳ ಇಟ್ಟುಕೊಂಡು ಜಗವು ಚಲಿಸುವ ಸೋಜಿಗವ ಕಣ್ಣೆವೆ ಮುಚ್ಚದೆ ನೋಡುತ್ತಿದ್ದಳು.

ಮೊನ್ನೆ ಮೊನ್ನೆ ದಿಲ್ಲಿಯೊಳಗೆ ಹೆಣ್ಣುಮಗಳ ಪಾಪಿಗಳ್ಯಾರೋ ಅತ್ಯಾಚಾರ ಮಾಡಿ ಕೊಂದದ್ದ ಅವರಿವರ ಬಾಯಿಂದ ಕೇಳಿದ ಅಜ್ಜಿ ತನ್ಮಗ ಅನುಭವಿಸಿದ್ದ ಮನಸಿಗೆ ತಂದುಕೊಂಡು ಒಬ್ಬಳೆ ಸಂಕಟಪಟ್ಟಳು.

ಆಟ ಆಡ್ಲಿಕಂತ್ಲೀಯ ಬೀದಿಗ ಹೋಗಿದ್ದ ಚಿಕ್ತಾಯಮ್ಮನ ಕರ‌್ಕಂಬಂದು ಗಂಡುಗ ತೋರ‌್ಸಿ, ಆ ಮಗಿನ ವರನೆಂಬೋ ಹುಡುಗನೂ ಒಪ್ಕಂಬುಟ್ಟು ನಂಜನ್ಗೂಡ್ನ ದೊಡ್ಜಾತ್ರ ಟೇಮಿಗ ಮದ್ವ ನಡದು ನಿದ್ದಾಲೀಯ ಚಿಕ್ತಾಯಮ್ಮ ಅತ್ತಮನ ಸೇರ‌್ಕಂತು. ಮದ್ವ ಅಂದ್ರೇನು, ಗಂಡ, ಅತ್ತಿಮನಿ ಅಂದ್ರೇನು ಅಂತ ತಿಳಿಯದ ಕೂಸು ಚಿಕ್ತಾಯಮ್ಮ ಗಂಡನ್ನ ಮಣ್ಣಾಡ್ಲಿಕ್ಕಂತ ಕರ‌್ದು ಅವ ಬರ‌್ನೇ ಇದ್ದಾಗ ಅವ್ವನ್ನ ನೆನಿಸ್ಗಂಡು ಅತ್ತು ಅದಕ್ಕ ಅತ್ತಿ ಬಡದು ಅತ್ತೂಅತ್ತು ಒಂಜಿನ ದೊಡ್ಡವಳಾದಳು.

ಗಂಡ ದೊಡ್ಡಗಂಡಯ್ಯನ ಹುಡುಗಾಟಕ್ಕ ಚಿಕ್ತಾಯಮ್ಮ ಬಸುರಾಗಿ ಅತ್ತಿಮನಿ ಕೆಲಸದಾಗ ಕೂಸು ಈ ಲೋಕಾನೇ ಕಾಣದೆ ಮಣ್ಣಾಗಿತ್ತು. ಹೀಂಗ ಒಂದಾದ ಮ್ಯೋಲ ಒಂದೂ ಅಂತ ಮೂರು ಮಕ್ಕ ಮಣ್ಣಾಗಿ ಕಣ್ಣಾಗಿನ ನೀರು ಹರ‌್ದೂ ಹರ‌್ದು ಚಿಕ್ತಾಯಮ್ಮ ಹೆಂಗಸಾಗುತ್ತಿದ್ದಳು. ಅವರಿವರ ಮಾತುಗಳು ಚುಚ್ಚಿದ್ರ, ಅತ್ತ ಮಾತು ಜೀವ ಹಿಂಡುತ್ತಾ ಒಂಜಿನ ತಿಪ್ಗಾ ಅಂತ ಹೋದವಳು ಕೆರಿಗ ಬಿದ್ದಳು. ದೊಡ್ಡಗಂಡಯ್ಯ ಸಾಸಪಟ್ಟು ಹೆಡ್ತೀನ ಉಳಿಸ್ಗಂಡು ಅವ್ವನ ಸಿಟ್ಟುಗ ಗುರಿಯಾಗಿದ್ದನು. ಮುಂದ್ಕ ಬಾಳಾಟ ಕಣ್ಣೀರ‌್ಲೀಯಾ ತೇಲ್ಕಂಡು ಮತ್ತ ಚಿಕ್ತಾಯಮ್ಮ ಬಸುರಾಗಿ ಇದ್ನ ಹೆಂಗಾರು ಮಾಡಿ ಉಳಿಸ್ಗಾಬೇಕು ಅಂದ್ಕಂಡು ತವುರುಗ ನಡದಳು. ಹಿಂದೇನೆ ಅವುಳಿಗ ಗಂಡನ ಮನಿಬಾಕಲು ಮುಚ್ಗಂಡಿತು. ಅವ್ವಿಲ್ದ ತವುರ‌್ಮನಾಲಿ ಹೆಣ್ಮಗ ಹುಟ್ಟಿ ಗಂಡಿಗ ಆಸಪಟ್ಟಿದ್ದ ತವುರ‌್ಮೇಲ ಬ್ಯಾಜಾರು ಪಟ್ಕಂಡು ಚಿಕ್ತಾಯಮ್ಮ ನಂಜನ್ಗೂಡ್ಗ ನಡೆದಳು.

ಮಗಳು ಸುಂದ್ರಮ್ಮನ ಕಟ್ಕಂಡು ನಂಜನ್ಗೂಡ್ಗ ಸೇರ‌್ಕಂಡಂತ ಚಿಕ್ತಾಯಮ್ಮ ದೇವುಸ್ತಾನ, ಬೀದಿ ಅಂದ್ಕಂಡು ರಾತ್ರಿ ಕಳೀತಾ ಅವುರಿವರ ಬಾಯಿಗೆ ತುತ್ತಾಗಿ, ತನ್ಮ್ಯಾಗ ಬ್ಯಾಸರಾಗಿ ತನ್ಮಗೂನ ನೆನಿಸ್ಗಂಡು ಜೀವ ಹಿಡ್ಕಂಡಿದ್ದಳು. ತಾಯಿ ಬ್ಯಾಸರಾದ ಅವುರಿವರುಗ ಸುಂದ್ರಮ್ಮ ದೊಡ್ಡವಳಾಗುವುದು ಕಣ್ಣುಗ ಚುಚ್ಚಿ ಅದು ಚಿಕ್ತಾಯಮ್ಮಗ ಅರಿವಿಗ ಬುರವಷ್ಟರಲ್ಲಿ ಮಗ ಬಸುರಾಗಿತ್ತು.

3

ಅವರಿವರೊಳಗೇ ಒಂದು ಜೀವ ಬದುಕು ಸಾಗಿಸಲು ರಸ್ತೆ ಎನಿಸಿಕೊಂಡ ಕಲ್ಲುಗುಂಡಿಗಳ ಎಡೆಯಲ್ಲೊಂದು ಅಂಗಡಿಯನ್ನ ಮಾಡಿಕೊಟ್ಟಿದ್ದರು. ಕಾಲು ಬಿದ್ದುಹೋಗುವ ಮೊದಲೆಲ್ಲಾ ಓಡಾಡಿಕೊಂಡಿದ್ದ ಅಜ್ಜಿ ಆಮೇಲೆ ಜೀವಂತ ಪ್ರತಿಮೆಯಾಗಿ ಆ ಸರ‌್ಕಲ್ಲಿನ ಪಕ್ಕದಲ್ಲಿ ಕಾಯಂ ನೆಲೆಯಾದಳು.

`ಅಜ್ಜೀ, ನಿಂಗ ಊಟ ತಿಂಡಿ ಯಾರ‌್ಕೊಟ್ಟಾರು?'

`ನನ್ಮೊಮ್ಮಗ ರಾತ್ರಿ ಆದ್ಮ್ಯಾಗ ಬಂದು ಕೊಟ್ಟೋಗ್ತಾಳ. ಅವ್ಳಗ ಈ ಅಜ್ಜಿ ಮ್ಯೋಗ ಬೇಜಾರು. ನಾ ಏನೇ ಕೊಟ್ರೂವಿ ಈಸ್ಗಳಲ್ಲ. ಅವ್ವ ಇರಾಗಂಟ ಬಂದಿದ್ದಿಲ್ಲ. ನನ್ಮಗ ಅದ್ಯಾನೋ ಕಾಯ್ಲಿ ಬಂದು ಹೋದ್ಮ್ಯಾಗ ಬಂದೋಗ್ತಾಳ'.

`ಯಾನ್ಮಾಕಂಡಿದ್ದಾಳು ನಿನ್ಮೊಮ್ಮಗ?'

`ಯಾಕಪ್ಪ ಹೀಂಗಂತಿಯ? ಅವುಳು ಹಂಗೆಲ್ಲ ಇಲ್ಲಕಪ್ಪ'.

`ಅಯ್ಯೋ ಅಜ್ಜಿ ತಪ್ಪ ತಿಳ್ಕಬ್ಯಾಡ'.

`ನೀನಾರು? ಯಾನ್ಮಾಡ್ತೀಯ ಹೇಳು? ದಿಕ್ಕಲ್ದ ಹೆಣ್ಮಕ್ಕ ಎಲ್ರಿಗೂವಿ ಹಂಗೆ ಕಾಣೋದು ಕೂಸೆ. ನೀ ಯಾ ವೂರಾಂವ?'

`ನಂದು ಮಂಗ್ಳೂರ‌್ದಿಕ್ಕ. ಇಲ್ಲಿಂದ ದೂರ'.

`ಅವ್ದಾ, ನಿಮ್ಮೂರ‌್ದಿಕ್ಕುಗ ಹೆಣ್ಮಗೀನ ಕೆಡಿಸ್ಬುಟ್ಟು ಕೊಂದವ್ರಂತಲ್ಲ?'

`ಅದಾ? ನಮ್ಮೂರ‌್ದಿಕ್ಕಲ್ಲ ಅಜ್ಜಿ. ದೂ...ರ... ಇಂದ್ರಾಗಾಂಧಿ ದೇಸ ಆಳ್ತಿದ್ಲಲ್ಲ ಆ ಊರ‌್ನಾಗೆ'.

`ನೋಡ್ಕ ಅಲ್ಲಾದ್ದು ನಮ್ಗೂ ಗೊತ್ತಾಯ್ತದೆ, ಆದರ ನಮ್ದೆಲ್ಲ ಆಚ ಬೀದ್ಗೂ ಗೊತ್ತಾಗದಿಲ್ಲ. ಗೊತ್ತಾದ್ರ ತಲಗೊಂದೊಂದು ಮಾತಾಡಿನೇ ಕೊಲ್ತಾರೆ'.

`ಅಜ್ಜಿ ಹಾಗನ್ಬ್ಯಾಡ. ನಿನ್ಮೊಮ್ಮಗ್ಳು ಅಜ್ಜಿ ಆಗವ್ಳೆ ಅಂದ್ಯಲ್ಲ, ಕೂಸು ಎನ್ಮಾಡ್ತದ?'

`ಇಸ್ಕೂಲ್ಮನಿಗೋಯ್ತಳ. ನಮ್ಮಟ್ಟಿಯಾಗ ಅಕ್ಸರ ಕಂಡದ್ದು ಆ ಕೂಸು ಒಂದೆಯಾ.'

ಅಜ್ಜಿಗೆ ಸಂಭ್ರಮ. ತಾನೂ ತನ್ಮಗಳು ಮೊಮ್ಮಗಳು ಕಲಿಯಲಾರದ್ದನ್ನ ತನ್ನ ಹೊಸ ಕುಡಿ ಕಲಿಯುತಿರುವುದಕ್ಕೆ. ಹಾಗಂತ ಆ ಕೂಸನ್ನ ಅಜ್ಜಿ ಇನ್ನೂ ನೋಡಿಲ್ಲ. ತನ್ನ ಮೊಮ್ಗೂಸನ್ನ ಅಜ್ಜಿಗೆ ತೋರಿಸಬೇಕೆಂಬ ಮನಸ್ಸು ಮಾಡದ ಇಂದ್ರಮ್ಮ ಮಗುವಿನ ಬಗ್ಗೆ ಆಗಾಗ ಹೇಳಿ ಅಜ್ಜಿಯ ಬಯಕೆಗಳಿಗೆ ಬೆಂಕಿ ಹಚ್ಚುತ್ತಿದ್ದಳು. ಆ

ದರೆ ಎಂದೂ ಮಗುವನ್ನು ತೋರಿಸು ಅಂತ ಮೊಮ್ಮಗಳನ್ನ ಕೇಳಿದವಳಲ್ಲ ಚಿಕ್ಕತಾಯಮ್ಮ. ಆ ಪುಟ್ಟ ಜೀವವನ್ನು ನೆನೆದು ಮುದಿಜೀವ ಸರ‌್ಕಲ್ಲಿನಲ್ಲಿ ನಿಂತು ಬಸ್ಸಿಗೆ ಕಾಯುವ ಹೆಣ್ಣು ಮಕ್ಕಳಿಗೆ ಚಾಕ್ಲೇಟ್ ಹಂಚುತ್ತಾಳೆ. ಮಾತಾಡಬಯಸಿದ ಮಕ್ಕಳಿಗೆ `ಕೂಸ ನಿನ್ನ ಅಪ್ಪ ಅವ್ವ ಚನ್ನಾಗವ್ರ?' ಎಂಬ ಪ್ರಶ್ನೆ ಕೇಳಿ ಸಮಾಧಾನವಾಗುವಳು. `ಯಾಕಜ್ಜಿ ಹೆಣೈಕ್ಳಿಗ್ಮಾತ್ರ ಈ ಪ್ರಶ್ನೆ ಕೇಳ್ತಿ?' ಅಂತ ಯಾರಾದ್ರೂ ಕೇಳಿದ್ರ `ಹೂಂ, ಹಂಗೆಕಪ್ಪ ಹೆಣೈಕ್ಳು ಚನ್ನಾಗಿದ್ರ ಹಟ್ಟಿ ಚನ್ನಾಗಿರ‌್ತದ' ಅಂದು ಕಣ್ಣು ತೇವ ಮಾಡಿಕೊಳ್ಳುತ್ತಿದ್ದಳು.

4

ಮತ್ತ ನಂಜನ್ಗೂಡ್ನ ದೊಡ್ಡಜಾತ್ರ. ಸುತ್ತೂರೂರಿಂದ ಬಂದ ಜನ್ಗಳು ನಂಜನ್ಗೂಡ್ಗ ತುಂಬ್ಕಂಡು ಇಡೀ ಊರಾಗ ಜಾಗಿಲ್ದಂಗಾಗಿ, ಜನ್ಗಳ ಗೌಜು ಸುತ್ಕಂಡು ನಂಜನ್ಗೂಡು ಗೌಜಿನ್ಗೂಡಾಗಿತ್ತು. ಚಿಕ್ತಾಯಮ್ಮನ ಮೊಮ್ಮಗ ಇಂದ್ರಮ್ಮ ಅವತ್ತು ಮೊಮ್ಗೂಸ್ನ ಕರ‌್ಕಂಡು ಅಜ್ಜಿತವುಕ್ಕೆ ಬಂದು ಸಂತೋಸವಾದಳು. ಮಗೂನ ಕಂಡ್ಬುಟ್ಟು ಮದ್ವ ಆದ್ಮ್ಯಾಗ ಸಂತೋಸ ಪಡೂದ್ನ ಮರ‌್ತೇಹೋಗಿದ್ದ ಚಿಕ್ತಾಯಮ್ಮ ಕೂಸ್ನ ಅಪ್ಕಂಡು ಕಣ್ಣೀರಿಟ್ಟಳು. ಕೂಸ ನಿನ್ನಂಗ ಇರ‌್ಬೇಕಾರ ಮದ್ವ ಮಾಡ್ಬುಟ್ಟು ನನ್ಬಾಳ ನನ್ನಪ್ಪ ಅವ್ವ ಹಾಳ್ಮಾಡ್ಬುಟ್ರು. ನಾನು ನನ್ಮಕ್ಳ ಬಾಳ ಹಾಳ್ಮಾಡ್ದಿ. ಆದರ ನಂಗ ಯಾವ್ದೆ ಗೊತ್ತಾಗ್ನಿಲ್ಲ. ಹಾಳಾದ್ಮ್ಯಾಲ ಹಾಳಾಯ್ತಲ್ಲ ಸಿವಾ ಅಂಬೋದು ತಿಳೀತು ಅಂದ್ಕಂಡು ಚಿಕ್ತಾಯಮ್ಮ ಮಗೂಗ ಮುತ್ತಿಟ್ಟು, ಜನಗಳು ತುಂಬ್ಕಂಡ ಕತ್ತಲು ತುಂಬ್ಕಂಡ ನಂಜನ್ಗೂಡ್ನಾಗೆ ತನ್ನ ಮೊಮ್ಗೂಸ್ನ ಮಾತ್ರ ನೋಡ್ತಾ ಮಾತ ಮರ‌್ತಿರುವಾಗ ಇಂದ್ರಮ್ಮ ಅಜ್ಜೀನ ಮಾತಿಂದ ಅಲುಗಾಡಿಸಿದಳು.

`ಅಮ್ಮ ಆ ಮಾಂಗಲ್ಯ ಯಾಕ ಕಿತ್ತು ಮಡ್ಗಿದ್ದೀ?'

`ಯಾಕ?'

`ಯಾಕಿಲ್ಲ ಅಷ್ಟ್ ಜಿನದಿಂದ ನೋಡ್ತವ್ನಿ ಯಾಕ ಅಂತ?'

`ಇಂದ್ರಿ, ಇನ್ನೂವಿ ಆ ಮೂದೇವಿ ಇರ‌್ಬೋದೇ?'

`ಆಹಾ ಇದ್ನೋಡು ಮುತ್ತೈದೆತನ'.

`ಹಾಗಲ್ಲ ಮಗಾ', ಅಂದು ಅಜ್ಜಿ ತನ್ನೊಳಗ ಇಳಿದುಹೋದಳು.

ಚಿಕ್ತಾಯಮ್ಮಗ ಮದ್ವ ಆಗಿ ಅತ್ತಿಮನಿ ಸೇರ‌್ಕಂಡು ಆಡಾಕ ಯಾರೂ ಇಲ್ದ ಆ ಮೊಗ ಬಾಡಿತ್ತು. ದೊಡ್ಡಗಂಡಯ್ಯಗ ತಾನು ಮದ್ವ ಆಗಿದ್ದೀನಿ ಅಂಬೋದು ಅರುವಾಗಿ ಅವ ಚಿಕ್ತಾಯಮ್ಮನ ಜೊತ್ಗ ಆಡ್ಲಿಕ್ಕೆ ಹೋಗದೆ ಎಲ್ಲದಕ್ಕೂ ತನ್ನವ್ವನಿಂದ ಹೇಳಿಸಿಕೊಂಡು ಹೆಜ್ಜೆ ಇಡುತ್ತಿದ್ದನು. ಆದ್ರೂವಿ ಒಂದೊಂದ್ಸಲಕ್ಕ ಮರ‌್ತು ಹೆಡ್ತಿ ಜೊತ್ಗ ಆಡೂದ್ನ ಅವ್ವ ಕಂಡ್ಬುಟ್ಟು ಹೆಡ್ತಿಗ ಏಟು ಬೀಳುತ್ತಿದ್ದವು.

ಆಗೆಲ್ಲ ದೂರ ನಿಂತ್ಗಂಡು ತಾನು ಆಡಾಕ ಹೋಗಿದ್ಕ ಆಕಿಗ ಏಟು ಬೀಳತಾವ ಅಂಬೋದು ತಿಳಿದು ಹೆಡ್ತಿ ಅತ್ರೂವಿ ಅವುಳ ಜೊತ್ಗ ಆಡ್ಲಿಕ್ಕ ಹೋಗ್ತಿರ‌್ನಿಲ್ಲ. ಅಳ್ತಾ ಅಳ್ತಾ ಚಿಕ್ತಾಯಮ್ಮ ಒಂದ್ಸಲ ದೊಡ್ಡವಳಾದಳು. ಇದು ಯಾನ ಅಂಬೋದು ಅರುವಾಗದ ದೊಡ್ಡಗಂಡಯ್ಯ ಅವ್ವ ಅಂದಂತೆ ಊರಾಚ್ಗ ಸೊಪ್ಪು ಗರಿ ತಕ್ಕಂಡು ಒಂದು ಗುಡ್ಲು ಹಾಕಿದ್ದನು. ಐಜಿನ ಆ ಗುಡ್ಲಾಗೆ ಹೆಡ್ತಿ ಒಬ್ಳನ್ನೆ ಬಿಡ್ತಾಳೆ ನಮ್ಮವ್ವ ಅಂಬೋದು ತಿಳಿದು ಕೋಪ ಬಂದರೂ ಅವ್ವಗ ಹೆದರಿ ಸುಮ್ನೋಗಿದ್ದನು. ಚಿಕ್ತಾಯಮ್ಮ ಒಬ್ಳನ್ನೇ ಊರಾಚ್ಗಿನ ಗುಡ್ಲಾಗೆ ಬಿಟ್ಟು ಬಂದಿದ್ದರು. ಆ ಕೂಸು ಹೆದ್ರಕಂಡು ಹಟ್ಟಿಗ ಓಡ್ಬಂದ್ರ ಅವ್ವ ಹೇಳ್ದಾಂಗ ಮಗ ಮತ್ತ ಅಲ್ಲುಗ ಬುಟ್ಬುಟ್ಟು ಬರುತ್ತಿದ್ದನು.

ಕತ್ತಲು ಊರೂಗ ಕವುಚ್ಕಂಡು ಚಿಕ್ತಾಯಮ್ಮಗ ಭಯ ಹುಟ್ಟಿಸಿ ಆ ಕೂಸು ರಾತ್ರನಗ ಜೋರಾಗಿ ಕಿರುಚ್ಕಂಡು ಅದಕ್ಕ ಊರ ನಾಯ್ಗಳು ಸೇರ‌್ಕಂಡು ದೊಡ್ಡಕ ಗದ್ದಲವಾಗುತ್ತಿತ್ತು. ದೊಡ್ಡಗಂಡಯ್ಯಗ ಇದ್ಯಾಕ ಅನ್ನೋ ಪ್ರಶ್ನ ಕಾಡಿ ರಾತ್ರನಗ ಅವ್ವ ನಿದ್ದವಾಗಿದ್ದ ತಿಳಿದು ನಿಧಾನಕ್ಕೆದ್ದು ಗುಡ್ಲ ಕಡಿಗ ನಡೆದನು. ಚಿಕ್ತಾಯಮ್ಮ ಅತ್ತೂ ಅತ್ತು ನಿದ್ದೆ ಹೋಗಿತ್ತು. ಅವ ಹಾಗೆ ಕೂತಿರ‌್ಬೇಕಾರ ಅಲ್ಯ್‌ರೋ ತಿರುಗಾಡಿದಂಗ ಕಂಡು ಕೂಗಿದ್ರ ಕತ್ಲಲ್ಲಿ ಯಾರೋ ಓಡ್ಬುಟ್ಟಿದ್ದರು. ಮಾರ‌್ನೆಗ ಮಗನ್ನ ಕಾವಲು ಕೂತಿದ್ದ ಅವ್ವ ಹಾಗೆ ನಿದ್ದೆಯಾಗುವಾಗ ರಾತ್ರಿ ಬಹಳವಾಗಿತ್ತು. ಮಗ ಎದ್ದು ಗುಡ್ಲಿನ್ತಕ್ಕೆ ಬಂದ್ರ ಅಲ್ಲಿ ಹೆಡ್ತಿ ಕಿರುಚಾಡುವುದು ನಡೆದಿತ್ತು.

ಚಿಕ್ತಾಯಮ್ಮನ ಕತ್ಲುನಾಗೆ ಯಾರೋ ಕೆಡಿಸ್ಬುಟ್ಟು ಓಡಿಹೋಗಿದ್ದರು. ದೊಡ್ಡಗಂಡಯ್ಯ ಹೆಡ್ತಿನ ಕರ‌್ಕಂಡು ಹಟ್ಟಿಗೆ ಬಂದ್ರ ಅವುರವ್ವ ಸೊಸಿನ ಮತ್ತೆ ಗುಡ್ಲಿಗ ಬಿಟ್ಟುಬಂದಿದ್ದಳು. ಮತ್ತೆ ಮೂರ‌್ಜಿನವಿ ಆ ಕತ್ಲು ಹೆಡ್ತಿನ ಕೆಡಿಸುವುದಕ್ಕ ತನ್ನವ್ವನೆ ಕಾರಣವೆಂಬುದು ದೊಡ್ಡಗಂಡಯ್ಯಗ ಸೇಡಾಗಿ ಅವ ಗಂಡಸಾದ ಮ್ಯೋಲ ಒಂಜಿನ ಅವ್ವನ್ನ ಬಲಿತೆಗೆದು ಜೈಲು ಸೇರಿದ್ದನೆಂಬುದು ನಂಜನ್ಗೂಡ್ನಾಗಿರೋ ಚಿಕ್ತಾಯಮ್ಮಗ ಸುದ್ದಿ ಬಂದಿತ್ತು.

`ಆಹಾ ಇದ್ಕ ಅನ್ನು ತಾತನ ಮ್ಯೋಗ ನಿಂಗ ಮೋಹ ಇನ್ನೂ ಉಳ್ಕಂಡದ'.

`ಮೋಹನೋ ಸುಡುಗಾಡೋ, ಆದ್ರ ಅವಗ ಹೆಡ್ತಿ ಅಂದ್ರ ಜೀವ. ಆದ್ರ ಅವ್ವಗ ಹೆದ್ರಕಂಡು ನನ್ತಕ್ಕೆ ಬತ್ತಾನೇ ಇರ‌್ನಿಲ್ಲ. ಕೂಸ್ಗ ನಿದ್ದ ಬಂದದ'.

5

ಆ ಜಾತ್ರ ಅಂಬೋ ಜನ್ಗಳ ಗಡಿಬಿಡಿಯೊಳಗ ಅಜ್ಜೀ ಅಂಗಡಿಯ ಬೀಡಿ ಸಿಕ್ರೋಟು ಬೇಕಾದಷ್ಟು ಸುಟ್ಟುಹೋಗಿ ಕಾಸು ಗುಡ್ಡೆಯಾಗುತ್ತಿತ್ತು.

`ಅಜ್ಜಿ ಜಾತ್ರ ನೋಡಿದ್ಯಾ?'

`ನಂದು ಹಾಂಗಿರ‌್ಲಿಕನ ನೀ ಬ್ಯಾರೆ ಊರಿಂದ ಬಂದವ ನೀ ನೋಡಿದ್ಯಾ?'

`ನೋಡ್ದೆ ಅಜ್ಜಿ.'

`ಕೂಸು ಇಕಾ ನೋಡಿಲ್ಲಿ ಯಾರೋ ಮಾಸ್ಟ್ರು ಇಟ್ಬುಟ್ಟೋಗಾರ ಈ ಪುಸ್ಕ ಯಾನ್ಬರ‌್ದಿದ್ದಾದು ಇದರ ಮ್ಯೋಗ?'

`ಆಹಾ, `ಎದೆಗೆ ಬಿದ್ದ ಅಕ್ಷರ' ಚೆನ್ನಾಗದ ಅಲ್ವಜ್ಜೀ?'

`ಹೌದುಕಪ್ಪ ನನ್ನ ಮೊಮ್ಗೂಸಿನ ಎದ್ಯಾಗೂ ಬಿದ್ದದ ಅದು. ಇಂಥದ್ದೇ ನಂಗೊಂದು ತಂದ್ಕೊಡು ನನ್ಮೊಮ್ಗೂಸ್ಗ, ತಕಾ ಮಾಂಗಲ್ಯಾ'.

`ಅಯ್ಯೋ ಮಾಂಗಲ್ಯ ಯಾಕಜ್ಜಿ! ಕಾಸವಲ್ಲ ಅದ್ನೇ ಕೊಡು. ಇಲ್ಲಾ ನಾನೇ ತಕಬತ್ತೀನಿ'.

`ಬ್ಯಾಡಕಪ್ಪ. ಅದು ಗಂಡಸ್ರು ಸಿಕ್ರೋಟು ಸುಟ್ಟೀರಾದು. ಅಂತ ಕಾಸ್ನಾಗೆ ಮೊಮ್ಗೂಸ್ಗೆ ಯಾನೂ ಕೊಡಲ್ಲಕಪ್ಪ. ನೀನ್ತರಾದೂ ಬ್ಯಾಡ. ನಾನಿನ್ನ ನಂಬೀನಿ ಮಾಂಗಲ್ಯ ತಕ್ಕ'.

`ಕೂಸಿನೆದ್ಯಾಗ ಅಕ್ಷರ ಅರಳಿ ಹೂವಾಗಲಿ ಅಜ್ಜಿ'.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.