ಶುಕ್ರವಾರ, ಏಪ್ರಿಲ್ 16, 2021
21 °C

ಅಡಿಕೆ ಬೆಳೆಗಾರರ ಬಲ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ಲಾಸ್ಟಿಕ್ ಸ್ಯಾಷೇಯಲ್ಲಿ ಗುಟ್ಕಾ ಮಾರಾಟ ನಿಷೇಧಿಸಿರುವ ಬಗ್ಗೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ವಿರುದ್ಧ ಸೋಮವಾರ ಜಿಲ್ಲಾ ಅಡಿಕೆ ಬೆಳೆಗಾರರ ಹಿತರಕ್ಷಣಾ ಸಮಿತಿ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರೈಲುತಡೆ ಬೆಳೆಗಾರರ ಬಲಪ್ರದರ್ಶನಕ್ಕೆ ಸಾಕ್ಷಿಯಾಯಿತು. ಟ್ರ್ಯಾಕ್ಟರ್ ಮೇಲೆ ನೇಣುಬಿಗಿದ ಸ್ಥಿತಿಯಲ್ಲಿದ್ದ ರೈತನ ಅಣಕು ಶವಯಾತ್ರೆ ನಡೆಸಿದರು. ತಮಟೆ, ಡೊಳ್ಳುವಾದನ, ಕ್ರಾಂತಿಗೀತೆ ಹಾಡಿದರು.ಗಾಂಧಿವೃತ್ತದ ಮೂಲಕ ಸಾಗಿ ಅಶೋಕ ಚಿತ್ರಮಂದಿರದ ಸಮೀಪದ ರೈಲ್ವೆ ಗೇಟ್ ಬಳಿ ಸೇರಿ ಧರಣಿ ನಡೆಸಿದರು. ಸ್ವಾಮೀಜಿ ಸಾಥ್: ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ. ಶಾಂತನಗೌಡ ಇತರರು ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಘಟಕದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಪ್ಲಾಸ್ಟಿಕ್ ನಿಷೇಧಿಸಲಿ. ಆದರೆ, ಎಲ್ಲ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಲ್ಲಿಸಬೇಕು. ಕೇವಲ ಗುಟ್ಕಾ ಸ್ಯಾಷೇ ನಿಷೇಧಿಸಿದರೆ ಪ್ರಯೋಜನವಿಲ್ಲ.ಇದ್ದಕ್ಕಿದ್ದಂತೆಯೇ ಇಂಥ ನಿಷೇಧ ಹೊರಡಿಸುವ ಸುಪ್ರೀಂ ಕೋರ್ಟ್ ಆದೇಶ ಗೊಂದಲದಿಂದ ಕೂಡಿದೆ. ಈ ಬಗ್ಗೆ ನಾವು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ ಎಂದು ಹೇಳಿದರು. ವಡ್ನಾಳ್ ರಾಜಣ್ಣ ಮಾತನಾಡಿ, ಅತ್ಯಂತ ಹೆಚ್ಚು ಅಡಿಕೆಯನ್ನು ದಾವಣಗೆರೆಯಲ್ಲಿ ಬೆಳೆಯಲಾಗುತ್ತದೆ. ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂಥ ಆದೇಶವನ್ನು ಪುನರ್‌ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ರೈಲು ತಡೆ: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಮಧ್ಯಾಹ್ನ 1.55ರಿಂದ 2.26ನಿಮಿಷದವರೆಗೆ ಪ್ರತಿಭಟನಾಕಾರರರು ತಡೆದರು. ರೈಲಿನ ಎಂಜಿನ್ ಮೇಲೆ ಹತ್ತಿ ಘೋಷಣೆ ಕೂಗಿದರು. 2.09ಕ್ಕೆ ಒಂದು ಹಂತದಲ್ಲಿ ಪ್ರತಿಭಟನಾಕಾರರು ವಾಪಸಾದರು. ಆದರೆ, ಆವರಗೆರೆ ರುದ್ರಮುನಿ ನೇತೃತ್ವದ ತಂಡ ರೈಲ್ವೆ ಗೇಟ್ ಬಳಿ ಮತ್ತೆ ರೈಲುತಡೆ ನಡೆಸಿತು.ರೈತಮುಖಂಡರೊಳಗೆ ವಾಗ್ವಾದ ಚರ್ಚೆಗಳು ನಡೆದವು. ಕೊನೆಗೆ ಪೊಲೀಸರು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದಾಗ ಅಲ್ಲಿಂದ ಚದುರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಹೊನ್ನೂರು ಮುನಿಯಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್, ಕೆ.ಎಂ. ಕೊಟ್ರಪ್ಪ, ಅತ್ತಿಗೆರೆ ನಾಗಣ್ಣ, ಮುದೇಗೌಡ್ರ ಗಿರೀಶ್, ಜಯಣ್ಣ, ರಾಮಗೊಂಡನಹಳ್ಳಿ ಬಸವರಾಜ್, ವೀರೇಂದ್ರಪಾಟೀಲ್, ಮಲ್ಲಾಪುರದ ದೇವರಾಜ್, ಹರೀಶ್ ಕೋಟೆಹಾಳ್, ಬನಶಂಕರಿ ಸದಾನಂದ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.