ಮಂಗಳವಾರ, ಮೇ 17, 2022
25 °C
ಬೊಮ್ಮನಹಳ್ಳಿ ನಗರ ಸಭೆ ಮಾಜಿ ಅಧ್ಯಕ್ಷ ಕೃಷ್ಣಪ್ಪ ಕೃತ್ಯ

ಅಡ್ಡಾದಿಡ್ಡಿ ನುಗ್ಗಿದ ಕಾರಿಗೆ ನಾಲ್ವರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬೊಮ್ಮನಹಳ್ಳಿ ನಗರ ಸಭೆ ಮಾಜಿ ಅಧ್ಯಕ್ಷ ಕೃಷ್ಣಪ್ಪ ಅವರಿಗೆ ಸೇರಿದ ಎಸ್‌ಯುವಿ ವಾಹನ ಪಾದಚಾರಿ ಮಾರ್ಗಕ್ಕೆ ನುಗ್ಗಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟು, ಆರು ಮಂದಿ ಗಾಯಗೊಂಡಿರುವ ಘಟನೆ ನಗರದ ಪರಪ್ಪನ ಅಗ್ರಹಾರ ಸಮೀಪದ ಹೊಸ ರೋಡ್ ಜಂಕ್ಷನ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.`ಘಟನೆ ವೇಳೆ ಕೃಷ್ಣಪ್ಪ ಅವರೇ ವಾಹನ ಚಾಲನೆ ಮಾಡುತ್ತಿದ್ದರು. ಪರಪ್ಪನ ಅಗ್ರಹಾರ ಬಳಿಯ ಚನ್ನಕೇಶವ ನಗರ ನಿವಾಸಿಯಾದ ಅವರು ತಮ್ಮ `ಲ್ಯಾಂಡ್ ರೋವರ್' ವಾಹನದಲ್ಲಿ  ಮನೆಯಿಂದ ಹೊಸೂರು ರಸ್ತೆ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಅವರು ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.ಹೊಸ ರೋಡ್ ಜಂಕ್ಷನ್ ಸಮೀಪ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬಂದ ಕೃಷ್ಣಪ್ಪ, ಪಾದಚಾರಿ ಮಾರ್ಗಕ್ಕೆ ವಾಹನ ನುಗ್ಗಿಸಿದ್ದಾರೆ. ಆಗ ಅವರ ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿ ಚಲಿಸಿದ ವಾಹನವು ಪಾದಚಾರಿ ಮಾರ್ಗದಲ್ಲಿನ ತರಕಾರಿ ವ್ಯಾಪಾರಿಗಳು, ತರಕಾರಿ ಕೊಳ್ಳಲು ನಿಂತಿದ್ದ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಗುದ್ದಿದೆ. ನಂತರ ಪಾದಚಾರಿ ಮಾರ್ಗದಲ್ಲಿನ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆಯಲ್ಲಿ ಗಾಯಗೊಂಡ ಹತ್ತು ಮಂದಿಯನ್ನೂ ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಇಂದ್ರಾಣಿ (36), ಚಿತ್ರದುರ್ಗ ಮೂಲದ ರಾಜನಾಯಕ್ (25), ವಿಜಯ್‌ಕುಮಾರ್ (36) ಹಾಗೂ ಪುಷ್ಪರಾಣಿ (48) ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಗಾಯಾಳುಗಳಾದ ಲಲಿತಮ್ಮ, ಹರೀಶ್, ಮಲ್ಲೇಶ್, ಜನಕರಾಜು, ರೇಖಾ ಮತ್ತು ರಾಜೇಶ್ ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಘಟನೆ ಸಂಬಂಧ ಕೊಲೆಯ ಉದ್ದೇಶವಿಲ್ಲದ ಸಂಭವಿಸಿದ ಸಾವು ಹಾಗೂ ಅಪಘಾತದ ಬಳಿಕ ಪೊಲೀಸರಿಗೆ ಮಾಹಿತಿ ನೀಡದೆ ಪರಾರಿಯಾದ ಆರೋಪದ ಮೇಲೆ ಕೃಷ್ಣಪ್ಪ ಅವರ ವಿರುದ್ಧ ಪರಪ್ಪನ ಅಗ್ರಹಾರ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.