ಭಾನುವಾರ, ಏಪ್ರಿಲ್ 18, 2021
32 °C

ಅಣ್ಣಾ ಹೋರಾಟಕ್ಕೆ ಅಭೂತಪೂರ್ವ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಾ ಹೋರಾಟಕ್ಕೆ ಅಭೂತಪೂರ್ವ ಬೆಂಬಲ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬೆಂಬಲಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಇಂಡಿಯಾ ಅಗೆನ್ಸ್ಟ್ ಕರಪ್ಷನ್’ ಸಂಘಟನೆ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಚಲನಚಿತ್ರ ನಟ-ನಟಿಯರು, ನಿರ್ದೇಶಕರು, ಗೀತ ರಚನೆಕಾರರು, ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಸ್ವಪ್ರೇರಣೆಯಿಂದ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟರು.  ಯುವಕ-ಯುವತಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಗಮನ ಸೆಳೆಯಿತು. ಲೋಕಪಾಲ ಮಸೂದೆ ಜಾರಿಗೊಳಿಸುವವರೆಗೂ ಈ ಹೋರಾಟ ಮುಂದುವರೆಸುವುದಾಗಿ ಹೋರಾಟಗಾರರು ಒಕ್ಕೊರಲಿನಿಂದ ಘೋಷಿಸಿದರು. ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ‘ಇಂಡಿಯಾ ಅಗೆನ್ಸ್ಟ್ ಕರಪ್ಷನ್’ ಸಂಘಟನೆ ಕರೆ ನೀಡಿದೆ. ರಾಜ್ಯದ ವಿವಿಧ ಮೂಲೆಗಳಿಂದ ಜನರು ದೂರವಾಣಿ ಮೂಲಕ ಸಂಪರ್ಕಿಸಿ ಬೆಂಗಳೂರಿಗೆ ಬಂದು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಹೇಳುತ್ತಿದ್ದಾರೆ. ಎಲ್ಲರೂ ಇಲ್ಲಿಗೆ ಬರಲು ಸಾಧ್ಯವಿಲ್ಲದ ಕಾರಣ ಜನರು ತಮ್ಮ ಹಳ್ಳಿ, ಊರಿನಲ್ಲಿಯೇ ಪ್ರತಿಭಟನೆ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಕೇಳಿಕೊಳ್ಳಲಾಗಿದೆ. ಸಾಧ್ಯವಾದರೆ ಪ್ರಧಾನಿಗೆ ಪತ್ರ ಬರೆದು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ಸಂಘಟಕರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ‘ದೇಶದ ಜನರು ನಿದ್ದೆಯಿಂದ ಎದ್ದು ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರಿಗೂ ಇರುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಭ್ರಷ್ಟ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಹೋರಾಟಕ್ಕೆ ಇಳಿಯಬೇಕು’ ಎಂದು ಕರೆ ನೀಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟದ ಸಂಯೋಜನೆಯ ಜವಾಬ್ದಾರಿ ಹೊತ್ತಿರುವ ಆನಂದ್ ಯಾದವ್ ಮಾತನಾಡಿ, ‘ದೇಶದಲ್ಲಿ ಶೇ 55ರಷ್ಟು ಮಾತ್ರ ಮತದಾನವಾಗುತ್ತಿದೆ. ಭ್ರಷ್ಟ ರಾಜಕಾರಣಿಗಳು ಶೇ 25ರಷ್ಟು ಮತಗಳನ್ನು ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ತೊಡೆದು ಹಾಕಬೇಕು. ಜಾಗೃತ ಜನರು ಕಡ್ಡಾಯವಾಗಿ ಮತದಾನ ಮಾಡಬೇಕು. ಶೇ 75ರಿಂದ 80ರಷ್ಟು ಮತದಾನವಾದರೆ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಬಹುದು’ ಎಂದರು. ಮೇಣದ ಬತ್ತಿ ಹಚ್ಚಿ ಬೆಂಬಲ: ಸ್ವಾತಂತ್ರ್ಯ ಉದ್ಯಾನದ ಬಳಿ ರಾತ್ರಿ ಜಮಾಯಿಸಿದ ನೂರಾರು ಮಂದಿ ಮೇಣದ ಬತ್ತಿ ಹಚ್ಚಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು. ಅಪಾರ ಸಂಖ್ಯೆಯ ಜನರು ತಾವೇ ತಂದಿದ್ದ ಮೇಣದ ಬತ್ತಿ ಹಚ್ಚಿ ಮಾನವ ಸರಪಳಿ ರಚಿಸಿದರು. ನಾಲ್ಕು ದಿನಗಳಿಂದ ಉಪವಾಸ ಮಾಡುತ್ತಿದ್ದ ಐದು ಮಂದಿ ರಾತ್ರಿ ಅಸ್ವಸ್ಥರಾದರು. ಎಲ್ಲರಿಗೂ ವೈದ್ಯರು ಸ್ಥಳದಲ್ಲೇ ಚಿಕಿತ್ಸೆ ನೀಡಿದರು.ಸಾಹಿತಿಗಳಾದ ಡಾ.ಯು.ಆರ್.ಅನಂತಮೂರ್ತಿ, ಡಾ.ಬಂಜಗೆರೆ ಜಯಪ್ರಕಾಶ್, ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್, ನಟರಾದ ಉಪೇಂದ್ರ, ಜೈಜಗದೀಶ್, ಕಿರಣ್, ಶ್ರೀನಗರ ಕಿಟ್ಟಿ, ನಾಗಶೇಖರ್, ಚೇತನ್, ನಟಿಯರಾದ ನೀತು, ಶರ್ಮಿಳಾ ಮಾಂಡ್ರೆ, ಪೂಜಾ ಗಾಂಧಿ, ವಿಜಯಲಕ್ಷ್ಮಿಸಿಂಗ್ ಮತ್ತಿತರರು ಬೆಂಬಲ ಸೂಚಿಸಿದರು.ಜನ ಜಾತ್ರೆ: ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಜನ ಜಾತ್ರೆಯೇ ಇತ್ತು. ಗಾಯತ್ರಿ ನಗರದ ವಿವೇಕಾನಂದ ಕಾನೂನು ವಿದ್ಯಾಲಯ, ನ್ಯೂ ಹೊರೈಜನ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳ ವಿದ್ಯಾರ್ಥಿಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ತಂಡೋಪತಂಡವಾಗಿ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸರ್ಕಾರಿ, ಖಾಸಗಿ ಕಂಪೆನಿ ಉದ್ಯೋಗಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಸಹಿ ಮಾಡುವ ಮೂಲಕ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿದರು. ಘೋಷಣೆಗಳನ್ನು ಕೂಗುವ ಮೂಲಕ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‘ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಇಂದಿನ ಅಗತ್ಯವಾಗಿದೆ, ಆದ್ದರಿಂದಲೇ ಹೋರಾಟಕ್ಕೆ ಬೆಂಬಲ ಸೂಚಿಸಲೆಂದು ಎರಡು ದಿನಗಳಿಂದ ನಾನು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇನೆ. ಕಂಪೆನಿಯಲ್ಲಿರುವ ನೂರಾರು ಮಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುವ ಇಚ್ಛೆ ಇದೆ. ಆದರೆ ಅವರಿಗೆ ರಜೆ ಸಿಗದ ಕಾರಣ ಬರುತ್ತಿಲ್ಲ’ ಎಂದು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ಡಿ.ವಿ.ಆನಂದ ತೀರ್ಥ ಹೇಳಿದರು.‘ಈ ರೀತಿಯ ಚಳವಳಿಯ ಅಗತ್ಯ ದೇಶಕ್ಕಿದೆ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈಗಲಾದರೂ ರಾಷ್ಟ್ರ ಭ್ರಷ್ಟಾಚಾರದಿಂದ ಮುಕ್ತವಾಗಬೇಕು ಎಂಬುದು ನನ್ನ ಆಶಯ’ ಎಂದು ಮಲ್ಲೇಶ್ವರ ನಿವಾಸಿ ಕಿಶೋರ್ ಷಾ ಹೇಳಿದರು.ಸಾಮಾಜಿಕ ಆಶಯ ಅಂತರ್ಗತವಾಗಲಿ

ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಹೂಡಿರುವ ಹೋರಾಟವನ್ನು ನಾನು ಸಂಪೂರ್ಣ ಬೆಂಬಲಿಸುತ್ತೇನೆ. ಕೇಂದ್ರ ಸರ್ಕಾರ ರೂಪಿಸಿದ ಲೋಕಪಾಲ ಮಸೂದೆಗಿಂತ ಅಣ್ಣಾರವರ ಮೂಲಕ ಮಂಡಿಸಿರುವ ಜನಲೋಕಪಾಲದ ಸ್ವರೂಪವು ನಿಜಕ್ಕೂ ಪರಿಣಾಮಕಾರಿಯಾಗಿದೆ. ಆದರೆ   ಇದೇ ಸಂದರ್ಭ ಯಾವುದೇ ಕಾನೂನಾಗಲಿ, ಅಧಿನಿಯಮವಾಗಲಿ ನಮ್ಮ ಸಂವಿಧಾನದ ಸಾಮಾಜಿಕ ಆಶಯಗಳನ್ನು ಅಂತರ್ಗತ ಮಾಡಿಕೊಳ್ಳುವುದನ್ನು ಮರೆಯಬಾರದು. ಜನಲೋಕಪಾಲದಲ್ಲಿ ಸೂಚಿಸಿರುವ ಹತ್ತು ಜನರ ತಂಡ ಸಾಮಾಜಿಕ ಸಮತೋಲನ ಮತ್ತು ವಿಶ್ವಾಸಾರ್ಹತೆಯ ಸಂಕೀರ್ಣ ಸಮಾಜವನ್ನು ಸರಿಯಾಗಿ ಪ್ರತಿನಿಧಿಸಿದಂತೆ ಆಗುವುದಿಲ್ಲ. ಭಾವನಾತ್ಮಕ ಪ್ರತಿರೋಧದ ಜಾಗದಲ್ಲಿ ರಚನಾತ್ಮಕ, ಸೈದ್ಧಾಂತಿಕ ನೆಲೆಗಳನ್ನು ಸ್ಥಾಪಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ಚಿಂತನೆ ಮತ್ತು ಹೋರಾಟವನ್ನು ಗಟ್ಟಿಗೊಳಿಸಿಕೊಳ್ಳಬೇಕು. ರಾಜಕಾರಣಿಗಳ ಬಗ್ಗೆ ಇರುವ ನೈತಿಕ ಅಸಹನೆಯು ನಿಜ ರಾಜಕಾರಣವನ್ನೇ ನಿರಾಕರಿಸುವಂತಾಗಬಾರದು.  

                                        

  -ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿಸಂಕಲ್ಪ ಮಾಡಬೇಕುಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಎಲ್ಲ ರೂ ಸಹಕಾರ ನೀಡಬೇಕು. ಜನ ಜಾಗೃತಿ ನಡೆಯಬೇಕು. ನಮ್ಮ ದೇಶ ಭ್ರಷ್ಟಾಚಾರದಿಂದ ಮುಕ್ತವಾಗಿದ್ದರೆ ಈಗಿನ ಪ್ರಗತಿಗಿಂತ ಶೇ 100ರಷ್ಟು ಪ್ರಗತಿ ಸಾಧಿಸುತ್ತಿತ್ತು. ಮೊದಲು ನನ್ನ ಮನೆ, ನನ್ನ ಗ್ರಾಮ ಸರಿಪಡಿಸಿಕೊಳ್ಳಬೇಕು. ಭ್ರಷ್ಟಾಚಾರ ನಿರ್ನಾಮ ಮಾಡಲು ಎಲ್ಲರೂ ಸಂಕಲ್ಪ ತೊಡಗಬೇಕು. ಈ ಹೋರಾಟಕ್ಕೆ ನಾಯಕತ್ವ ನೀಡಿದ ಹಜಾರೆ ಅವರಿಗೆ ಅಭಿನಂದನೆಗಳು. ಅವರಿಗೆ ಮಹಾತ್ಮ ಗಾಂಧೀಜಿ, ಜಯಪ್ರಕಾಶ್ ನಾರಾಯಣ್ ಅವರು ಪ್ರೇರಣೆಯಾಗಿದ್ದಾರೆ.  -ಡಾ.ಡಿ.ವೀರೇಂದ್ರ ಹೆಗ್ಗಡೆ,  ಧರ್ಮಸ್ಥಳದ ಧರ್ಮಾಧಿಕಾರಿಗಳುಹೋರಾಟಕ್ಕೆ ಸಂಪೂರ್ಣ ಬೆಂಬಲ

ಅಣ್ಣಾ ಹಜಾರೆಯವರು ಕೈಗೊಂಡಿರುವ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಜನಲೋಕಪಾಲ ಕಾಯ್ದೆಯನ್ನು ಮಂಡಿಸಿ ಜಾರಿಗೊಳಿಸಲು ಒತ್ತಾಯಿಸಿ ಇಡೀ ದೇಶದಾದ್ಯಂತ ನಡೆಯುತ್ತಿರುವ ಹೋರಾಟ ಆಂದೋಲನದ ಸ್ವರೂಪವನ್ನು ಪಡೆಯುತ್ತಿದೆ. ಹಿಂದೆ ಜಯಪ್ರಕಾಶ್ ನಾರಾಯಣ್ ಅವರು ಕೈಗೊಂಡ ಆಂದೋಲನ ಮತ್ತೆ ದೇಶದಲ್ಲಿ ಮರುಕಳಿಸುವ ಮೂಲಕ ತುರ್ತು ಪರಿಸ್ಥಿತಿಯನ್ನು ನೆನಪಿಸಿದೆ. ಭ್ರಷ್ಟಾಚಾರ ಎಂಬುದು ಕೇಂದ್ರ, ರಾಜ್ಯಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ತಿಂದು ಹಾಕುತ್ತಿದೆ. ಭ್ರಷ್ಟಾಚಾರದ ಪಿಡುಗಿನ ವಿರುದ್ಧ ಹೋರಾಡಲು ಜನರೇ ಮುಂದೆ ಬರುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಪಕ್ಷಗಳು ಬರೀ ಅಪಪ್ರಚಾರದಲ್ಲಿ ತೊಡಗಿವೆ. ಪ್ರಧಾನಿಯವರು ಕೂಡಲೇ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಬೇಕು. ಅದಾದ ನಂತರ ರಾಜ್ಯದಲ್ಲೂ ಲೋಕಾಯುಕ್ತರಿಗೆ ಅಧಿಕಾರ ಸಿಗುತ್ತದೆ.

   -ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.