ಶನಿವಾರ, ಮೇ 8, 2021
18 °C

ಅತಿಥಿ ಪಾತ್ರದಲ್ಲಿ ಮತ್ತೆ ಸೋನಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿಥಿ ಪಾತ್ರದಲ್ಲಿ ಮತ್ತೆ ಸೋನಾಲಿ

ಬೆಳ್ಳಿತೆರೆಯಿಂದ ಒಂದಿಷ್ಟು ಅಂತರ ಕಾಯ್ದುಕೊಂಡಿದ್ದ ನಟಿ ಸೋನಾಲಿ ಬೇಂದ್ರೆ ಇದೀಗ ಸಿನಿಮಾ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಮಿಲನ್ ಲೂತ್ರಿಯಾ ಅವರ ಮುಂಬರುವ ಚಿತ್ರ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ' ಚಿತ್ರದಲ್ಲಿ ನಟಿಸಲಿದ್ದಾರೆ.ಮಿಲನ್ ಅವರೊಂದಿಗೆ ಕೆಲಸ ಮಾಡಿ ತುಂಬಾ ದಿನಗಳೇ ಕಳೆದಿರುವ ಕಾರಣ ಸೋನಾಲಿ ಅಭಿನಯದಿಂದ ದೂರ ಇರಬೇಕೆಂಬ ತಮ್ಮ ನಿರ್ಧಾರವನ್ನು ಸ್ವಲ್ಪ ಸಡಿಲಿಸಿದ್ದಾರೆ. ಸಿನಿಮಾದಲ್ಲಿ ಪೂರ್ತಿಯಾಗಿ ತೊಡಗಿಕೊಳ್ಳದೆ, ಕೇವಲ ಅತಿಥಿ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಭೂಗತಲೋಕದ ಕುರಿತಾದದ್ದು ಎಂಬ ಮಾತುಗಳು ಕೇಳಿಬಂದಿವೆ.ಬಾಲಾಜಿ ಮೋಷನ್ ಪಿಕ್ಚರ್ಸ್‌ ನಿರ್ಮಾಣದ ಈ ಚಿತ್ರದಲ್ಲಿ ಮುಮ್ತಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೋನಾಲಿ, ಹಿರಿತೆರೆಯಿಂದ 10 ವರ್ಷ ದೂರ ಉಳಿದಿದ್ದರು. ಶಾರುಖ್ ಖಾನ್, ಪ್ರೀತಿ ಜಿಂಟಾ ಮತ್ತು ಸೈಫ್ ಅಲಿ ಖಾನ್ ಅಭಿನಯದ `ಕಲ್ ಹೋ ನಾ ಹೋ' (2003) ಚಿತ್ರದಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸಿದ ನಂತರ ಹಿಂದಿ ಚಿತ್ರರಂಗದಿಂದ ಅವರು ದೂರ ಉಳಿದಿದ್ದರು. 2004ರಲ್ಲಿ ತೆಲುಗಿನ `ಶಂಕರ್ ದಾದಾ ಎಂಬಿಬಿಎಸ್'ನಲ್ಲಿ ಅವರು ನಿರ್ವಹಿಸಿದ್ದೂ ವೈದ್ಯೆಯ ಪಾತ್ರವನ್ನೇ. ಆಮೇಲೆ ಮರಾಠಿ ಚಿತ್ರವೊಂದರ ಐಟಂ ಗೀತೆಗೆ ಹೆಜ್ಜೆಹಾಕಿದ್ದರಷ್ಟೆ. ಅಲ್ಲಿಂದ ಇಲ್ಲಿಯವರೆಗೆ ಅವರು ಬಣ್ಣದ ಲೋಕದಿಂದ ದೂರ ಇದ್ದರು.“ಮಿಲನ್ ಲೂತ್ರಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನನಗೆ ಅವರು ಮುಂಚಿನಿಂದಲೂ ಪರಿಚಯ ಇರುವವರು. ನಾರಾಜ್ ಚಿತ್ರದಲ್ಲಿನ ನನ್ನ `ಸಂಭಾಲಾ ಹೈ ಮೈನೆ' ಹಾಡನ್ನೂ ಅವರೇ ಚಿತ್ರೀಕರಿಸಿದ್ದು” ಎಂದು ನೆನಪಿಸಿಕೊಂಡರು ಸೋನಾಲಿ.

ಬೆಳ್ಳಿತೆರೆಗೆ ತಾವು ಮರಳಲು ನಿರ್ಮಾಪಕಿ ಶೋಭಾ ಕಪೂರ್ ಕಾರಣ ಎನ್ನುವುದನ್ನೂ ಸೋನಾಲಿ ಒಪ್ಪಿಕೊಳ್ಳುತ್ತಾರೆ.`ಕಳೆದ 40 ವರ್ಷಗಳಿಂದ ಶೋಭಾ ಆಂಟಿ ನನ್ನ ಅತ್ತೆಗೆ ಒಳ್ಳೆ ಸ್ನೇಹಿತೆ. ಅವರು ಕರೆ ಮಾಡಿ ನಟಿಸುವಂತೆ ಕೇಳಿದರು. ನನಗೆ ಇಲ್ಲ ಎನ್ನಲು ಮನಸ್ಸಾಗಲಿಲ್ಲ. ನಾನು ಈ ಚಿತ್ರಕ್ಕೆ ಯಾವ ಸಂಭಾವನೆಯನ್ನೂ ತೆಗೆದುಕೊಂಡಿಲ್ಲ. ಕೇವಲ ಅತಿಥಿಯಾಗಿ ಕೆಲವೇ ಗಂಟೆಗಳು ಮಾತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಆದರೆ ನನ್ನ ಈ ಪಾತ್ರ ತುಂಬಾ ಆಸಕ್ತಿಕರವಾಗಿದೆ' ಎಂದು ಪಾತ್ರದ ಕುರಿತು ಮಾತು ಹಂಚಿಕೊಂಡರು ಸೋನಾಲಿ.ಸೋನಾಲಿ ಕಾಣಿಸಿಕೊಳ್ಳುತ್ತಿರುವ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಇಮ್ರಾನ್ ಖಾನ್, ಸೋನಾಕ್ಷಿ ಸಿನ್ಹ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.