ಭಾನುವಾರ, ಜನವರಿ 26, 2020
20 °C

ಅತ್ತಿವೇರಿಯಲ್ಲಿ ವಲಸೆ ಹಕ್ಕಿಗಳ ಕಲರವ

ಪ್ರಜಾವಾಣಿ ವಾರ್ತೆ/ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

ಮುಂಡಗೋಡ: ಜಲಾಶಯದ ಮಧ್ಯಭಾಗದ ಗಿಡದಲ್ಲಿ ನೀರ ಕಾಗೆಗಳ ಗೂಡು ಕಟ್ಟುವಿಕೆ; ಆ ಗಿಡದಲ್ಲಿ ತನ್ನದೊಂದು ಗೂಡು ಇರಲಿ ಎಂದು ಚಡಪಡಿಸುತ್ತಿರುವ ಚಮಚದ ಕೊಕ್ಕು ಹಕ್ಕಿಯ ಚೀತ್ಕಾರ. ಕಡು ನೀಲಿ ನೀರಿನ ಮೇಲೆ ಬಣ್ಣದ ಕೊಕ್ಕರೆಗಳ ಆಕರ್ಷಕ ಹಾರಾಟ. ಎಲ್ಲ ಗಿಡಗಳಲ್ಲಿಯೂ ಸೂಜಿ ಬಾಲದ ಬಾತು ಹಕ್ಕಿಗಳ ಕಲರವ. ಮುಟ್ಟಿದರೆ ಮುನಿದೇನು ಎಂಬಂತೆ ಗಿಡದಿಂದ ಗಿಡಕ್ಕೆ ಹಾರುತ್ತ ಬಳಕುವ ಬಾಲದಂಡೆ ಹಕ್ಕಿ ಸೇರಿದಂತೆ ವಲಸೆ ಹಕ್ಕಿಗಳು ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವ ಇಂಪಾಗಿ ಕೇಳಿಬರುತ್ತಿದೆ. ಉತ್ತರ ಚೀನಾ, ಸೈಬಿರಿಯಾ, ಮಂಗೋಲಿಯಾ, ಉತ್ತರ ಯುರೋಪ ದೇಶಗಳಲ್ಲದೇ ದೇಶಿಯ ಹಕ್ಕಿಗಳು ಕಳೆದ ಒಂದು ತಿಂಗಳಿಂದ ಅತ್ತಿವೇರಿ ಪಕ್ಷಿಧಾಮಕ್ಕೆ ವಲಸೆ ಬಂದಿದ್ದು ಸುರ್ಯೋದಯವಾಗುತ್ತಿದ್ದಂತೆ ಚಿಲಿಪಿಲಿಗಳ ಕಲರವ ಮನ ತಣಿಸುತ್ತಿದೆ. ದೇಶ, ವಿದೇಶಿ ಹಕ್ಕಿಗಳ ಹಾರಾಟ, ನರ್ತನ, ನೀರಿನ ಮೇಲ್ಭಾಗಕ್ಕೆ ರೆಕ್ಕೆಯ ಸ್ಪರ್ಶ ಮಾಡಿ ಹಾರಾಟ, ಅವುಗಳ ಕೂಗು ನೋಡುಗರನ್ನು ಸೆಳೆಯದೇ ಬಿಡಲಾರದು.ಪ್ರತಿ ಚಳಿಗಾಲದ ಸಂದರ್ಭದಲ್ಲಿ ಸುಮಾರು ಹನ್ನೆರಡು ನೂರು ವಲಸೆ ಹಕ್ಕಿಗಳು ಇಲ್ಲಿಗೆ ಆಗಮಿಸಿ ಮೊಟ್ಟೆಯಿಟ್ಟು, ಮರಿ ಮಾಡಿ 3–4 ತಿಂಗಳವರೆಗೆ ಇಲ್ಲಿಯೇ ಬಿಡಾರ ಹೂಡಿ ಬೇಸಿಗೆ ಆರಂಭಕ್ಕೆ ಮುನ್ನ ಮರಳಿ ತಮ್ಮ ಸ್ಥಾನಗಳಿಗೆ ತೆರಳುವುದು ವಾಡಿಕೆಯಾಗಿದೆ.

ಕಳೆದ ವರ್ಷ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಹಕ್ಕಿಗಳು ಅಷ್ಟಾಗಿ ಆಗಮಿಸಿರಲಿಲ್ಲ. ಈ ವರ್ಷ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿರುವುದು ವಲಸೆ ಹಕ್ಕಿಗಳು ಆಗಮಿಸಲು ಮತ್ತಷ್ಟು ಪ್ರೇರಣೆ ನೀಡಿದೆ. ಜಲಾಶಯದ ನಡುಗಡ್ಡೆಯಂತೆ ಕಾಣುವ ಗಿಡಗಳಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ವಲಸೆ ಹಾಗೂ ಸ್ಥಳೀಯ ಹಕ್ಕಿಗಳು ಕುಳಿತಿರುವ ದೃಶ್ಯ ಪಕ್ಷಿಪ್ರಿಯರನ್ನು ಕದಲದೇ ನಿಲ್ಲುವಂತೆ ಮಾಡುತ್ತದೆ.ಕಳೆದ ವರ್ಷಕ್ಕಿಂತ ಈ ಸಲ ವಿದೇಶಿ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿವೆ. ಇನ್ನೂ ಒಂದು ತಿಂಗಳವರೆಗೆ ವಲಸೆ ಹಕ್ಕಿಗಳು ಬರುವ ನಿರೀಕ್ಷೆಯಿದೆ. ಕೆಲವು ವಿದೇಶಿ ಹಕ್ಕಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿವೆ. ‘ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಪಕ್ಷಿಗಳನ್ನು ಚೆನ್ನಾಗಿ ನೋಡಬಹುದಾಗಿದೆ. ಪಕ್ಷಿ ಸಂಕುಲಕ್ಕೆ ತೊಂದರೆ ಮಾಡದ ಹಾಗೆ ಪಕ್ಷಿಗಳನ್ನು ವೀಕ್ಷಿಸಬೇಕಾದದ್ದು ಅಗತ್ಯ’ ಎಂದು ಅತ್ತಿವೇರಿ ಪಕ್ಷಿಧಾಮದ ಫಾರೆಸ್ಟರ್‌ ಪರಮೇಶ ಆನವಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.ಅತ್ತಿವೇರಿಯ ಅತಿಥಿಗಳು

ಮತ್ಸ್ಯ ಭಕ್ಷಕ ಗಿಡುಗ, ನೀರ ಕಾಗೆಗಳು, ಹೊಳೆ ಗುಟುಕ, ಸೂಜಿ ಬಾಲದ ಬಾತು, ಬಿಳಿ ಕೆಂಬರಳು, ಬಣ್ಣದ ಕೊಕ್ಕರೆ, ಕೆಂಪು ಟಿಟ್ಟಿಬಾ, ಅಪಾಯದ ಅಂಚಿನಲ್ಲಿರುವ ಹಾಗೂ ಅಪರೂಪದ ಪಕ್ಷಿಗಳಾಗಿರುವ ಹಾವಕ್ಕಿಗಳು, ಚಮಚದ ಕೊಕ್ಕು ಹಕ್ಕಿ, ನೀಲಿ ರೆಕ್ಕೆಯ ಬಾತು, ಇಂಡಿಯನ್‌ ಶಾಗ್‌, ಬ್ರಾಹ್ಮಿಣಿ ಶೆಲ್ಡಕ್‌, ಲಿಟ್ಲ್‌ ರಿಂಗ್ಡ್‌ ಪ್ಲೋವರ್‌, ಮಾರ್ಶ್‌ ಹ್ಯಾರಿಯರ್‌, ಬಹಳ ಅಪರೂಪದ ವೈಟ್‌ ನೆಕ್ಡ್‌ ಬ್ಲ್ಯಾಕ್‌ ಸ್ಟಾರ್ಕ್‌

 

ಪ್ರತಿಕ್ರಿಯಿಸಿ (+)