ಶನಿವಾರ, ಮಾರ್ಚ್ 25, 2023
26 °C

ಅತ್ತ ಕೆರೆ -ಇತ್ತ ಕಂದರ ನಡುವೆ ಪಯಣಿಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ತ ಕೆರೆ -ಇತ್ತ ಕಂದರ ನಡುವೆ ಪಯಣಿಗ

ಚಿಂಚೋಳಿ: ಜೀವ ಕೈಯಲ್ಲಿ ಹಿಡಿದುಕೊಂಡೇ ಇಲ್ಲಿ ವಾಹನ ಚಾಲನೆ ಮಾಡಬೇಕು. ಅತ್ತ ಕಂದರ- ಇತ್ತ ಕೆರೆ. ನಡುವೆ ಕಿರಿದಾದ ರಸ್ತೆಯಲ್ಲಿ ನಿತ್ಯ ಸರ್ಕಸ್. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.



ನೆರೆಯ ಆಂಧ್ರದ ಜತೆ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಬದಿಗೆ ಇರುವ ತಾಲ್ಲೂಕಿನ ಮಿರಿಯಾಣ ಕೆರೆಯ ದಂಡೆಯ ಮೇಲೆ ಪ್ರಯಾಣಿಸಬೇಕಿದ್ದರೆ ಗುಂಡಿಗೆ ಗಟ್ಟಿ ಇರಲೇಬೇಕು.



ಕೆರೆಯ ಕೋಡಿ (ಬಂಡ್) 15 ಅಡಿಗಿಂತಲೂ ಎತ್ತರವಿದೆ, ದಕ್ಷಿಣದಿಂದ ಉತ್ತರಕ್ಕೆ ತೆರಳುವ ಮಾರ್ಗದ ರಸ್ತೆಗೆ ಪೂರ್ವದಲ್ಲಿ 50 ಎಕರೆಯಷ್ಟು ವಿಶಾಲವಾದ ಕೆರೆಯಿದೆ.  ಪಶ್ಚಿಮದಲ್ಲಿ ರೈತರ ಜಮೀನುಗಳಿವೆ. ಆದರೆ ಇವು (ಬಂಡ್) ರಸ್ತೆಯ ಮಟ್ಟದಿಂದ ಸುಮಾರು 20 ಅಡಿ ಆಳದಲ್ಲಿವೆ. ಹೀಗಾಗಿ ಕಂದರದಂತೆ ಗೋಚರಿಸುತ್ತದೆ. ಅಕ್ಕಪಕ್ಕದಲ್ಲಿ ಬೆಳೆದುನಿಂತಿರುವ ದೈತ್ಯ ಮರಗಳೂ ಚಾಲಕನ ಕೌಶಲಕ್ಕೆ ಸವಾಲಾಗಿವೆ.



ಸುಮಾರು ನಾಲ್ಕು ನೂರರಿಂದ ಐದು ನೂರು ಮೀಟರ್ ಉದ್ದದ ಬಂಡ್ ಮೇಲೆ ಹಾದು ಹೋಗುವ ರಸ್ತೆಯಲ್ಲಿ ವಾಹನಗಳನ್ನು ಓಡಿಸುವುದೆಂದರೆ ಚಾಲಕರಿಗೆ ಹಗ್ಗದ ಮೇಲಿನ ನಡಿಗೆ.



ರಾಷ್ಟ್ರೀಯ ಹೆದ್ದಾರಿ-7 ಹಾಗೂ ರಾಷ್ಟ್ರೀಯ ಹೆದ್ದಾರಿ-9ರ ಮಧ್ಯೆ ಸಂಪರ್ಕ ಬೆಸೆಯುವ ಮಹತ್ವದ ರಸ್ತೆಯಾದ ಇದನ್ನು ಆಂಧ್ರ ಗಡಿಯಿಂದ (ಉಮ್ಮರ್ಗಾ ಮಾರ್ಗದ) ಚಿಂಚೋಳಿ ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಅಧಿಕಾರಿಗಳು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಯ ಟೆಂಡರ್ ಅಂತಿಮ ಹಂತದಲ್ಲಿದೆ.



ಹೈದರಾಬಾದ್- ಮುಂಬಯಿ, ಭಾಲ್ಕಿ- ಶ್ರೀಶೈಲ, ಮೆಹಬೂಬನಗರ- ಚಿಂಚೋಳಿ, ತಾಂಡೂರು- ಚಿಂಚೋಳಿ, ಜೆಡ್‌ಚರ್ಲಾ- ಚಿಂಚೋಳಿ ಮಾರ್ಗದಲ್ಲಿ ಉಭಯ ರಾಜ್ಯಗಳ ಸಾರಿಗೆ ಬಸ್ಸು ಮತ್ತು ಮಿರಿಯಾಣ ಪರ್ಸಿ (ಶಹಾಬಾದ್ ಕಲ್ಲು) ತುಂಬಿದ ಭಾರಿ ವಾಹನಗಳು ನಿರಂತರ ಸಂಚರಿಸುತ್ತವೆ.



ಆಂಧ್ರದ ಗಡಿಯಿಂದ ಕೇವಲ ಐನೂರು ಮೀಟರ್ ಅಂತರದಲ್ಲಿರುವ ‘ಮಿರಿಯಾಣ ಕೆರೆ’ ಗೂ ರಕ್ಷಣಾಗೋಡೆಯ ಭಾಗ್ಯ ಬೇಕಿದ್ದರೆ ಒಂದಷ್ಟಾದರೂ ಮಂದಿಯನ್ನು ಬಲಿ ತೆಗೆದುಕೊಳ್ಳಬೇಕು ಎಂದು ಜನ ವ್ಯಂಗ್ಯವಾಗಿ ಹೇಳುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.