ಮಂಗಳವಾರ, ಏಪ್ರಿಲ್ 13, 2021
23 °C

ಅಧಿಕಾರಿಗಳ ವರ್ತನೆ ಖಂಡಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ರಸ್ತೆ ವಿಸ್ತರಣೆಗಾಗಿ ನಡೆಸಿರುವ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳ ವರ್ತನೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಪಟ್ಟಣದ ನಾಗರಿಕರು ಉಪತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು. ‘ಕಳೆದ ಮೂರ್ನಾಲ್ಕು ವರ್ಷಗಳಿಂದ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಹಿಂದೆ ಅಂದಿನ ಶಿರಸಿ ಉಪವಿಭಾಗಾಧಿಕಾರಿ, ತಹಸೀಲ್ದಾರ ಹಾಗೂ ಪ.ಪಂ. ಮುಖ್ಯಾಧಿಕಾರಿಗಳು ಸಾರ್ವಜನಿಕರ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ರಸ್ತೆ ವಿಸ್ತರಣೆಗೆ ಅವಶ್ಯವಿದ್ದ ಜಾಗವನ್ನು ತೆರವುಗೊಳಿಸಲು ಸೂಚಿಸಿದ್ದರು.

 

ಅದರಂತೆ ಸಾರ್ವಜನಿಕರು ನಿಗದಿತ ಸ್ಥಳವನ್ನು ತೆರವುಗೊಳಿಸಿ ಉಳಿದ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ ಈಗ ಹಿಂದಿನ ಅಧಿಕಾರಿಗಳು ನಿಗದಿಗೊಳಿಸಿದ್ದ ವಿಸ್ತರಣೆ ಕ್ಷೇತ್ರ ಸಮರ್ಪಕವಾಗಿಲ್ಲವೆಂದು ಈಗಿನ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಾ ಅಧಿಕಾರದ ದರ್ಪ ಪ್ರದರ್ಶಿಸಿ ತೆರವುಗೊಳಿಸಿದ್ದಾರೆ’ ಎಂದು ಮನವಿಯಲ್ಲಿ ದೂರಲಾಗಿದೆ.‘ಯಜಮಾನರಿಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಮಹಿಳೆಯರಿಗೆ ಮಾನಸಿಕವಾಗಿ ಹಿಂಸೆಯಾಗುವಂತೆ ವರ್ತಿಸಿ ಜೆ.ಸಿ.ಬಿ.ಯಿಂದ ಸಂಪೂರ್ಣ ಕಟ್ಟಡಕ್ಕೆ ಹಾನಿಯಾಗುವಂತೆ ಖುಲ್ಲಾ ಪಡಿಸಲಾಗಿದೆ. ಅಧಿಕಾರಿಗಳಿಂದ ದಬ್ಬಾಳಿಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಡಾ.ಎಂ.ಎಸ್. ಕಟ್ಟಿಮನಿ, ಬಿ.ಎಫ್. ಬೆಂಡಿಗೇರಿ, ಕೆ.ಬಿ. ಕೊಳ್ಳಾನವರ, ಆರ್.ಜೆ. ಬೆಳ್ಳೆನವರ, ಉಮೇಶ ಗಾಣಿಗೇರ, ಎಸ್.ಎಸ್. ಇನಾಂದಾರ, ರಾಮಣ್ಣ ಉಪ್ಪುಂದ, ಹಜರತ್ ಬೇಗ್, ನಿಂಗಪ್ಪ ಹುದ್ಲಮನಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.