ಶನಿವಾರ, ಮೇ 28, 2022
26 °C

ಅಧ್ಯಕ್ಷರ ಚುನಾವಣೆ: ಅನಿರ್ದಿಷ್ಟ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಸೋಮವಾರ ಮುಂದೂಡಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣಾ ಸಭೆಗೆ ಮಂಗಳವಾರವೂ ಜೆಡಿಎಸ್ ಸದಸ್ಯರು ಬಹಿಷ್ಕಾರ ಹಾಕಿದ ಕಾರಣ; ಕೋರಂ ಇಲ್ಲದೆ ಚುನಾವಣಾಧಿಕಾರಿಗಳು ಮುಂದಿನ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಿಗದಿ ಪಡಿಸಿದ್ದ ಸಭೆಗೆ ಯಾವೊಬ್ಬ ಸದಸ್ಯರೂ ಹಾಜರಾಗಲಿಲ್ಲ. ಜೆಡಿಎಸ್ ಸದಸ್ಯರು ಈ ಮೊದಲೇ ನಿರ್ಧರಿಸಿದ್ದಂತೆ ಸಭೆಗೆ ಗೈರು ಹಾಜರಾದರು. ಆದರೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪದ್ಮಾವತಿ ಸೇರಿದಂತೆ ಇಬ್ಬರು ಬಿಜೆಪಿ ಸದಸ್ಯರೂ ಸಭೆಗೆ ಹಾಜರಾಗದಿದ್ದುದು ಅಚ್ಚರಿ ಮೂಡಿಸಿತು. ಅರ್ಧ ಗಂಟೆ ಕಾದ ಚುನಾವಣಾಧಿಕಾರಿ ವೈ.ಸಿ.ಪಾಟೀಲ್ ಸಭೆಯನ್ನು ಅನಿರ್ದಿಷ್ಟಕಾಲ ಮುಂದೂಡಿರುವುದಾಗಿ ಪ್ರಕಟಿಸಿದರು.ಇದರ ಬೆನ್ನಲ್ಲೇ ಜೆಡಿಎಸ್ ಸದಸ್ಯರು ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಂಚಾಯಿತಿ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಬಿಜೆಪಿ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ಆಡಳಿತಾಧಿಕಾರಿ ನೇಮಿಸುವ ಮೂಲಕ ಚುನಾಯಿತ ಜನಪ್ರತಿನಿಧಿಗಳನ್ನು ಅಧಿಕಾರದಿಂದ ದೂರವಿಡುವ ಹುನ್ನಾರ ನಡೆಸಿದೆ. ಇದನ್ನು ನಾವು ಸಹಿಸುವುದಿಲ್ಲ. ಮೀಸಲಾತಿ ಬದಲಾಯಿಸಿ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವವರೆಗೆ ಸಭೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಮಧ್ಯಾಹ್ನ ಜೆಡಿಎಸ್ ಸದಸ್ಯರ ಬಹಿಷ್ಕಾರ ಖಂಡಿಸಿ ಬಿಜೆಪಿ ಸದಸ್ಯೆಯರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯಲ್ಲಿ ಮಾತನಾಡಿದ ತಾ.ಪಂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪದ್ಮಾವತಿ ಪರಿಶಿಷ್ಟ ಜಾತಿ ಮಹಿಳೆಯೊಬ್ಬರನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಪ್ರಯತ್ನಿಸುವುದು ವಿಷಾದಕರ ಸಂಗತಿ ಎಂದು ದೂರಿದರು. ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಂದ ಎಲ್ಲ ಸದಸ್ಯರು ಸಹಕರಿಸಿ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಎನ್.ರಂಗಸ್ವಾಮಿ ಮಾತನಾಡಿ, ಶಾಸಕರ ವಿರುದ್ಧ ಹರಿಹಾಯ್ದರು. ಗೋಷ್ಠಿಯಲ್ಲಿ ಸಂಪಿಗೆ ಸದಸ್ಯೆ ಪಾರ್ವತಮ್ಮ, ಶಿವಯೋಗಿಸ್ವಾಮಿ, ಎಂ.ಪಿ.ಲೋಕೇಶ್, ಶಿವಸ್ವಾಮಿ, ಶಿವಶಂಕರ್, ಮಹಲಿಂಗಯ್ಯ, ರಾಜು, ಮೋಕ್ಷರಾಜ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.