ಶನಿವಾರ, ಜೂನ್ 19, 2021
29 °C

ಅಧ್ಯಕ್ಷೆ, ಪೌರಾಯುಕ್ತರ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲಾ ಕೇಂದ್ರದ ವ್ಯಾಪ್ತಿ ನಾಗರಿಕರು ಪ್ರತಿನಿತ್ಯವೂ ಕುಡಿಯುವ ನೀರಿಗೆ ಅನುಭವಿಸುತ್ತಿರುವ ತೊಂದರೆ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.ಬೇಸಿಗೆ ಆರಂಭಗೊಂಡಿದ್ದರೂ ಮೋಟಾರ್ ದುರಸ್ತಿ, ಟ್ಯಾಂಕ್ ಸ್ವಚ್ಛತೆಗೆ ಹಿಂದೇಟು ಹಾಕಿರುವ ಅಧಿಕಾರಿಗಳ ವಿರುದ್ಧ ಸದಸ್ಯರು ಕಿಡಿಕಾರಿದರು. ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಪೌರಾಯುಕ್ತರ ವಿರುದ್ಧ ಆಕ್ರೋಶ ಮೊಳಗಿಸಿದರು. ಜನರಿಗೆ ಕುಡಿಯುವ ನೀರು ಪೂರೈಸಲು ಆಗದಿದ್ದರೆ ಹುದ್ದೆಗಳಿಗೆ ರಾಜೀನಾಮೆ ನೀಡುವುದು ಉತ್ತಮ ಎಂಬ ಧ್ವನಿಯೂ ಕೇಳಿಬಂದಿತು.`ನಗರದ ಎಲ್ಲ ವಾರ್ಡ್‌ಗಳಲ್ಲಿ ಕುಡಿ ಯುವ ನೀರಿಗೆ ತತ್ವಾರ ಉಂಟಾಗಿದೆ. ಮುಂಜಾಗ್ರತೆಯಾಗಿ ಸಮಸ್ಯೆ ನಿಭಾಯಿ ಸಲು ಅಧಿಕಾರಿಗಳು ವಿಫಲ ರಾಗಿದ್ದಾರೆ. ಅಭಿವೃದ್ಧಿ ಕೆಲಸಗಳಿಗೂ ಒತ್ತು ನೀಡುತ್ತಿಲ್ಲ~ ಎಂದು ಸದಸ್ಯರಾದ ಮಹದೇವಸ್ವಾಮಿ, ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.`ಚಂದಕವಾಡಿಯಲ್ಲಿರುವ ಕುಡಿ ಯುವ ನೀರು ಪೂರೈಕೆಯ ಮೋಟಾರ್ ದುರಸ್ತಿಯಾಗಿಲ್ಲ. ತಿ.ನರಸೀಪುರದಲ್ಲಿ ಎರಡು ಮೋಟಾರ್ ಅಳವಡಿಸಲಾಗಿದೆ. ಒಂದು ಕೆಟ್ಟುಹೋಗಿ ಮೂರ‌್ನಾಲ್ಕು ತಿಂಗಳು ಕಳೆದಿವೆ. ಬೇಸಿಗೆ ಹಿನ್ನೆಲೆಯಲ್ಲಿ ಮೋಟಾರ್ ದುರಸ್ತಿಪಡಿಸಿಲ್ಲ. ದುರಸ್ತಿಗೆ ಹಣದ ಕೊರತೆ ಮುಂದಿಡುತ್ತೀರಿ. ಹಲವು ವರ್ಷದಿಂದ ಬಾಕಿ ಇರುವ ತೆರಿಗೆ ವಸೂಲಿ ಮಾಡಿ ಅಭಿವೃದ್ಧಿಗೆ ಒತ್ತು ನೀಡುವಂತೆ ಸದಸ್ಯರು ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ~ ಸದಸ್ಯ ಶಿವ ನಂಜಯ್ಯ ತರಾಟೆ ತೆಗೆದು ಕೊಂಡರು.ಸದಸ್ಯ ರಘುನಾಥ್ ಮಾತನಾಡಿ, ಇಂದಿಗೂ ಟ್ಯಾಂಕ್‌ಗಳ ಸ್ವಚ್ಛತೆಗೆ ಗಮನಹರಿಸಿಲ್ಲ. ಟ್ಯಾಂಕ್ ಹಾಗೂ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿಲ್ಲ. ಬೇಸಿಗೆ ಹಿನ್ನೆಲೆಯಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಹೊಣೆ ಯಾರು? ಎಂದು ಪ್ರಶ್ನಿಸಿದರು.ಸದಸ್ಯರ ಆಕ್ರೋಶಭರಿತ ಮಾತಿಗೆ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ ಸಮರ್ಥ ಉತ್ತರ ನೀಡಲು ವಿಫಲರಾದರು. ಅಧೀನ ಅಧಿಕಾರಿಗಳಿಗೆ ನೋಟಿಸ್ ನೀಡಿದರೂ ಸ್ಪಂದಿಸುತ್ತಿಲ್ಲ ಎಂಬ ಅಸಹಾಯಕತೆ ತೋಡಿ ಕೊಂಡರು. ಜತೆಗೆ, ನಗರಸಭೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದನ್ನೂ ಒಪ್ಪಿಕೊಂಡರು.`ಮೋಟಾರ್ ದುರಸ್ತಿಪಡಿಸುವ ಗುತ್ತಿಗೆದಾರರಿಗೆ 4 ಲಕ್ಷ ರೂ ಬಾಕಿ ಪಾವತಿಸಿಲ್ಲ. ಹೀಗಾಗಿ, ದುರಸ್ತಿಗೆ ಅವರು ಒಪ್ಪುತ್ತಿಲ್ಲ. ಹಣ ಪಾವತಿಸುವ ಬಗ್ಗೆ ಭರವಸೆ ನೀಡಿದ್ದು, ಮೋಟಾರ್ ದುರಸ್ತಿಗೆ ಮನವೊಲಿಸಲಾಗುತ್ತಿದೆ. ವಾರದೊಳಗೆ ಪೌರ ಕಾರ್ಮಿಕರನ್ನು ಬಳಸಿಕೊಂಡು ಟ್ಯಾಂಕ್ ಸ್ವಚ್ಛತೆ ಮಾಡಲಾಗುವುದು. ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗು ವುದು~ ಎಂದು ಸಭೆಗೆ ತಿಳಿಸಿದರು.ಟ್ಯಾಂಕ್ ಶಿಥಿಲ: `ನನ್ನ ವಾರ್ಡ್ ನಲ್ಲಿರುವ ಟ್ಯಾಂಕ್ ಶಿಥಿಲಗೊಂಡಿದೆ. ಅದನ್ನು ಕೆಡವಿ ಹೊಸ ಟ್ಯಾಂಕ್ ನಿರ್ಮಾಣ ಮಾಡಬೇಕು. ಇಲ್ಲವಾದರೆ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು~ ಎಂದು ಸದಸ್ಯ ನಿಂಗರಾಜು ಎಚ್ಚರಿಸಿದರು.ಸದಸ್ಯ ನಂಜುಂಡಸ್ವಾಮಿ ಮಾತನಾಡಿ, `ವಿವಿಧ ವಾರ್ಡ್‌ಗಳಲ್ಲಿ ಕಳೆದ 10 ವರ್ಷದಿಂದ ನಗರಸಭೆ ಅನುಮತಿ ಇಲ್ಲದೆಯೇ ಹಲವು ಮನೆ ನಿರ್ಮಿಸಲಾಗಿದೆ. ಸಂಬಂಧಪಟ್ಟ ಮಾಲೀಕರಿಂದ ಕಂದಾಯ ವಸೂಲಿ ಮಾಡಿಲ್ಲ. ಕಾನೂನು ಪ್ರಕಾರ ಕಂದಾಯ ವಸೂಲಿ ಮಾಡಿದರೆ ನಗರಸಭೆಗೆ ಹಣ ಬರುತ್ತದೆ~ ಎಂದು ಸಲಹೆ ನೀಡಿದರು.ಪೌರಾಯುಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, `ನೀರಿನ ಟ್ಯಾಂಕ್‌ಗಳ ದುರಸ್ತಿಗೆ 50 ಲಕ್ಷ ಹಣದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಬಾಕಿ ಇರುವ ತೆರಿಗೆ ವಸೂಲಿಗೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.