ಭಾನುವಾರ, ಜೂಲೈ 5, 2020
24 °C

ಅನಧಿಕೃತ ಇಟ್ಟಿಗೆ ಘಟಕಗಳ ದರ್ಬಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಧಿಕೃತ ಇಟ್ಟಿಗೆ ಘಟಕಗಳ ದರ್ಬಾರು

ತುಮಕೂರು: ಜಿಲ್ಲೆಯಲ್ಲಿ ನೂರಾರು ಇಟ್ಟಿಗೆ ಕಾರ್ಖಾನೆಗಳು ನಡೆಯುತ್ತಿವೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ಇದೆ. ಆದರೆ ಕಾನೂನು ಪ್ರಕಾರ ಅನುಮತಿ ಪಡೆದಿಲ್ಲ. ಇಟ್ಟಿಗೆಗೂಡು ನಿರ್ಮಿಸುವ ಸ್ಥಳದಲ್ಲಿ ಕನಿಷ್ಠ ಮೂಲಸೌಲಭ್ಯ ಸಹ ಇರುವುದಿಲ್ಲ.ತಾಲ್ಲೂಕಿನ ಕುಪ್ಪೂರು ಗ್ರಾಮದಲ್ಲಿ ಐವರನ್ನು ಬಲಿ ಪಡೆದ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ. ಇದು ಈ ಒಂದೇ ಗ್ರಾಮದ ಪರಿಸ್ಥಿತಿಯಲ್ಲ. ಎಲ್ಲೆಡೆ ಇದೇ ಸ್ಥಿತಿ. ಇಟ್ಟಿಗೆ ನಿರ್ಮಾಣ ಘಟಕಗಳನ್ನು ನೋಂದಾಯಿಸುವ ಕೆಲಸಕ್ಕೆ ಯಾರೂ      ಮುಂದಾಗುತ್ತಿಲ್ಲ.ಗ್ರಾಮಾಂತರ ಪ್ರದೇಶದಲ್ಲಿ ಇಟ್ಟಿಗೆ ನಿರ್ಮಾಣ ಕೆಲಸ ಪಾರಂಪರಿಕವಾಗಿ ಬಂದಿದೆ. ಸ್ವತಃ ಮನೆ ನಿರ್ಮಾಣಕ್ಕೆ ತಾವೇ ಇಟ್ಟಿಗೆ ತಯಾರಿಸಿ ಕೊಳ್ಳುವುದು ಸಾಮಾನ್ಯ. ಜನವರಿಯಿಂದ ಮಾರ್ಚ್ ನಡುವೆ ಇಟ್ಟಿಗೆ ತಯಾರಿಕೆ ಚಾಲನೆಯಲ್ಲಿರುತ್ತದೆ.ಕಳೆದ ಹತ್ತು ವರ್ಷದ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ಜೋರಾಗಿದೆ. ನಿರ್ಮಾಣ ಸಾಮಗ್ರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಕೇವಲ ರೂ. 1500 ಇದ್ದ ಮಣ್ಣಿನ ಇಟ್ಟಿಗೆ ಬೆಲೆ ಮೂರ್ನಾಲ್ಕು ವರ್ಷದಲ್ಲಿ ಮೂರು ಪಟ್ಟು ಹೆಚ್ಚಳವಾಯಿತು. ಇದರಿಂದ ಇಟ್ಟಿಗೆ ನಿರ್ಮಾಣ ಕಸುಬು ವಾಣಿಜ್ಯ ರೂಪ ಪಡೆದಿದೆ. ಆಗ ಹುಟ್ಟುಕೊಂಡಿದ್ದೆ ಇಟ್ಟಿಗೆ ತಯಾರಿಕಾ ಅನಧಿಕೃತ ಘಟಕಗಳು.ಗ್ರಾಮೀಣ ಪ್ರದೇಶದಲ್ಲಿ ಇಟ್ಟಿಗೆ ತಯಾರಿಕೆ  ಅರೆಕಾಲಿಕ ಘಟಕಕ್ಕೆ ಸಹ ಗ್ರಾ.ಪಂ.ನಿಂದ ಅನುಮತಿ ಪಡೆಯಬೇಕು. ಆದರೆ ನಿಯಮ   ಪಾಲಿಸುವವರ ಸಂಖ್ಯೆ ವಿರಳ. ವಾಣಿಜ್ಯ  ಉದ್ದೇಶವಾದರೆ ಇಟ್ಟಿಗೆ ಮತ್ತು ಹೆಂಚು ಕಾರ್ಖಾನೆ ನಿಯಮದಡಿ ಅನುಮತಿ ಪಡೆಯಬೇಕು. ಇದಕ್ಕಾಗಿ ಕಾರ್ಮಿಕರ ನೋಂದಣಿ ಸೇರಿದಂತೆ ಹಲವು ನಿಯಮಗಳನ್ನು  ಪಾಲಿಸಬೇಕಾಗುತ್ತದೆ.ಕಾನೂನು ಪ್ರಕಾರ ನೋಂದಣಿ ಮಾಡಿಸಿದ್ದರೆ ಕಾರ್ಮಿಕರಿಗೂ ಭದ್ರತೆ ದೊರೆಯುತ್ತಿತ್ತು. ವಿಮೆ ಮತ್ತು ಕಾನೂನು ರೀತಿ ದೊರೆಯಬಹುದಾದ ಇತರೆ ಸೌಲಭ್ಯ ನೀಡಬೇಕಾಗುತ್ತದೆ. ಅಲ್ಲದೆ ಕಾರ್ಖಾನೆ ಹೆಸರಿನಲ್ಲಿ ನೋಂದಣಿ ಮಾಡಿಸಲು ಮುಂದಾದರೆ ಸರ್ಕಾರಿ ಕಚೇರಿಗಳಲ್ಲಿ ಸಹ ಇಲ್ಲದ ಕಿರಿಕಿರಿ ಆಗುತ್ತದೆ ಎಂಬ ಕಾರಣಕ್ಕೆ ಯಾರೂ ಈ ಗೋಜಿಗೆ ಕೈಹಾಕುತ್ತಿಲ್ಲ.ಕುಪ್ಪೂರು ದುರ್ಘಟನೆ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಅನಧಿಕೃತ ಇಟ್ಟಿಗೆ     ಕಾರ್ಖಾನೆಗಳನ್ನು ಮುಚ್ಚಿಸುವ ಕೆಲಸಕ್ಕೆ    ಮುಂದಾಗಿದೆ. ಅಲ್ಲದೆ ಅನಧಿಕೃತ ಇಟ್ಟಿಗೆ  ಕಾರ್ಖಾನೆಗಳ ಬಗ್ಗೆ ಸಮೀಕ್ಷೆ ನಡೆಸಿ ತಕ್ಷಣ ವರದಿ ನೀಡಬೇಕು ಮತ್ತು ಅವುಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕೆಂದು ಜಿಲ್ಲೆಯ ಎಲ್ಲ                  ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.ಈ ಘಟಕಗಳನ್ನು ಮುಚ್ಚಿಸುವುದೇ ಆದ್ಯತೆ     ಆಗಬೇಕಾಗಿಲ್ಲ. ಈ ವಹಿವಾಟನ್ನು ಸಾವಿರಾರು ಕಾರ್ಮಿಕರು ನಂಬಿ ಬದುಕುತ್ತಿದ್ದಾರೆ. ಸಾವಿರಾರು ಕುಟುಂಬಗಳ ಅನ್ನದ ಪ್ರಶ್ನೆ ಇದೆ. ಅನಧಿಕೃತ ಘಟಕಗಳನ್ನು ನಿಯಮದಂತೆ ನೋಂದಣಿ ಮಾಡಿ, ಮೂಲಸೌಲಭ್ಯ ಕಲ್ಪಿಸಲು ಸೂಚಿಸಬೇಕು. ಅಲ್ಲದೆ ಕಾರ್ಮಿಕರನ್ನು ನೋಂದಾಯಿಸಿ ಕಾನೂನು ಪ್ರಕಾರ ಅವರಿಗೆ ದೊರೆಯಬಹುದಾದ ಸೌಲಭ್ಯ ನೀಡುವಂತೆ ಸೂಚಿಸಬಹುದು. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.