ಗುರುವಾರ , ಮೇ 13, 2021
34 °C

ಅನನ್ಯ ಕೋಟ್ಯಾಧಿಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕನ್ನಡದ ಕೋಟ್ಯಾಧಿಪತಿ~ ಕಾರ್ಯಕ್ರಮ ನಡೆಸಿಕೊಡುತ್ತಿರುವ ಪುನೀತ್ ರಾಜಕುಮಾರ್ ನಡೆನುಡಿಯಲ್ಲಿ ಪ್ರಬುದ್ಧತೆಯಿದೆ. ಸ್ವ-ಪ್ರದರ್ಶನದ ಗೀಳು ಮತ್ತು ತೋರಿಕೆಗಳ ತೃಣವೂ ಅವರ ಮಾತಿನಲ್ಲಿ, ಭಾವಭಂಗಿಗಳಲ್ಲಿ, ನಗುವಿನಲ್ಲಿ ಕಾಣುವುದಿಲ್ಲ. ಚಿಕ್ಕವಯಸ್ಸಿನಲ್ಲಿ ಇವು ಸಾಮಾನ್ಯ ರೀತಿಯ ಸಾಧನೆಗಳಲ್ಲ.`ಕನ್ನಡದ ಕೋಟ್ಯಾಧಿಪತಿ~ ಕಾರ್ಯಕ್ರಮ ಆರಂಭಕ್ಕೆ ಮೊದಲು ಸುವರ್ಣ ವಾಹಿನಿ ಬಹು ಜೋರಾದ ಪ್ರಚಾರ ನಡೆಸಿತ್ತು. ಪುನೀತ್ ರಾಜ್‌ಕುಮಾರ್ ಅವರು ಈ ಕಾರ್ಯಕ್ರಮದ ಮುಖ್ಯ ಪಾತ್ರ ಎಂಬುದೂ ಪ್ರಚಾರ ಪಡೆದಿತ್ತು.

 

ಅಮಿತಾಭ್ ಬಚ್ಚನ್ ಅವರ `ಕೌನ್ ಬನೇಗಾ ಕರೋಡ್‌ಪತಿ~ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದವರಿಗೆಲ್ಲ ಸಹಜವಾಗಿ `ಕನ್ನಡದ ಕೋಟ್ಯಾಧಿಪತಿ~ ಬಗ್ಗೆ ಕುತೂಹಲ. ಆದರೆ, ಮನಸ್ಸಿನಲ್ಲೇ `ಕನ್ನಡದ ಈ ಕಾರ್ಯಕ್ರಮ ಹಿಂದಿಯ ಕರೋಡ್‌ಪತಿಯಷ್ಟು ಜನಪ್ರಿಯ ಆಗುತ್ತದೆಯೇ? ಪುನೀತ್ ಅಮಿತಾಭ್‌ಗೆ ಸಾಟಿಯೆ? ಇಡೀ ರಾಷ್ಟ್ರದಲ್ಲಿಯೇ ಮಹಾನ್ ನಟನೆನಿಸಿಕೊಂಡ ಅಮಿತಾಭ್ ಎಲ್ಲಿ, ಅರಳುತ್ತಿರುವ ಈ ಯುವ ಕಲಾವಿದನೆಲ್ಲ?~ ಎನ್ನುವ ಪ್ರಶ್ನೆಗಳು ಕಾಡಿದ್ದರೆ ಆಶ್ಚರ್ಯವಿಲ್ಲ.ಅಮಿತಾಭ್ 65 ದಾಟಿದ್ದಾರೆ. ಈ ಹುಡುಗ 35 ದಾಟಿರಬಹುದು ಅಷ್ಟೇ. ಭಾರತೀಯ ಚಲನಚಿತ್ರ ಜಗತ್ತಿನ `ಡಾನ್~ ಅವರು, ನಿರರ್ಗಳ ಮಾತನಾಡುತ್ತಾರೆ. ನಮ್ಮ ಪುನೀತ್ ಈ ಮಟ್ಟಕ್ಕೆ ಏರಬಲ್ಲರೇ ಎಂಬೆಲ್ಲ ಸಂದೇಹಗಳು ಸುಳಿದಿದ್ದರೆ ಅದು ಸ್ವಾಭಾವಿಕವೇ.ಈಗ ತಿಂಗಳಾಯಿತು, ಈ ಕಾರ್ಯಕ್ರಮ ಆರಂಭವಾಗಿ. ನಾನೂ ಕೂಡ ಯಶಸ್ಸಿನ ಬಗ್ಗೆ ಅನುಮಾನಗಳನ್ನು ಇಟ್ಟುಕೊಂಡೇ ಕಾರ್ಯಕ್ರಮ ನೋಡಲಾರಂಭಿಸಿದೆ. ಈವರೆಗಿನ ನನ್ನ ಅನುಭವದ ಮೇರೆಗೆ ಮೊಟ್ಟಮೊದಲಿಗೆ ಹೇಳಬೇಕಾದ ಮಾತೆಂದರೆ- ಮೊದಲ ಕಂತಿನಿಂದ ಇಂದಿನವರೆವಿಗೆ ಪುನೀತ್ ಅತ್ಯಂತ ಸಮರ್ಥವಾಗಿ ಹಾಗೂ ಈ ಕಾರ್ಯಕ್ರಮವನ್ನು ತಾನು ಜನ್ಮವಿಡೀ ನಡೆಸುತ್ತಿರುವ ರೀತಿಯ ಆತ್ಮವಿಶ್ವಾಸದಲ್ಲಿ ನಡೆಸುತ್ತಿದ್ದಾರೆ.

 

ಮೊದಲ ದಿನವೇ ವೀಕ್ಷಕರಿಗೆ ಇರಬಹುದಾದ ಎಲ್ಲ ಸಂಶಯಗಳನ್ನೂ ಲವಲೇಶದ ಗುರುತೂ ಉಳಿಯದ ಹಾಗೆ ಅಳಿಸಿಹಾಕಿಬಿಟ್ಟಿದ್ದಾರೆ.`ಕೋಟ್ಯಾಧಿಪತಿ~ ಕಾರ್ಯಕ್ರಮದ ನಿರೂಪಕರಾಗಿ ಪುನೀತ್ ಪ್ರಧಾನ ಗುಣ ಸ್ವಚ್ಛಂದತೆ ಮತ್ತು ವಿನಯ.ಜನಪ್ರಿಯ ನಟನೊಬ್ಬನಿಗೆ ದುರದೃಷ್ಟವಶಾತ್ ಅಂಟಿಕೊಂಡುಬಿಡಬಹುದಾದ ಸ್ವ-ಪ್ರದರ್ಶನದ ಗೀಳು ಮತ್ತು ತೋರಿಕೆಗಳ ತೃಣವೂ ಇವರ ಮಾತಿನಲ್ಲಿ, ಭಾವಭಂಗಿಗಳಲ್ಲಿ, ನಗುವಿನಲ್ಲಿ, ಯಾವ ವಿವರಗಳಲ್ಲಿಯೂ ಕಾಣುವುದಿಲ್ಲ. ಚಿಕ್ಕವಯಸ್ಸಿನಲ್ಲಿ ಇವು ಸಾಮಾನ್ಯ ರೀತಿಯ ಸಾಧನೆಗಳಲ್ಲ.ಅಮಿತಾಭ್ ಅವರಿಗೂ ಬಹಳಷ್ಟು ಸಾಧಿಸಲಾಗದಿದ್ದ ಮತ್ತೂ ಒಂದು ಅಂಶ ಪುನೀತ್‌ರಲ್ಲಿ ಕಾಣಿಸುತ್ತದೆ. ಅದೆಂದರೆ ಅವರ ಹಾಸ್ಯಪ್ರಜ್ಞೆ ಮತ್ತು ಸಮಯ ಪ್ರಜ್ಞೆ. ಪ್ರತಿಯೊಂದು ಬ್ರೇಕ್ ಕೊಡುವಾಗಲೂ (ಈ ಬ್ರೇಕ್‌ಗಳು ಕೊಂಚ ಜಾಸ್ತಿ ಆಯಿತು ಎಂದು ವೀಕ್ಷಕರಿಗೆ ಅನ್ನಿಸುವುದು ನಿಜ) ಪುನೀತ್ ಅನ್ಯ ರೀತಿಗಳನ್ನು, ಮಾತುಗಳನ್ನು ಅಳವಡಿಸುತ್ತಾರೆ.ಪ್ರತಿಯೊಬ್ಬರೊಡನೆಯೂ, ವಿಶೇಷವಾಗಿ `ಹಾಟ್ ಸೀಟ್~ಗೆ ಬಂದವರೊಡನೆ, ಸರಳವಾಗಿ, ಸಹಜವಾಗಿ ನಡೆದುಕೊಳ್ಳುತ್ತಾರೆ. ಪ್ರತಿಯೊಬ್ಬ ಸ್ಪರ್ಧಿಯ ವಿಶಿಷ್ಟ ಗುಣ, ಪ್ರತಿಭೆ, ಉದ್ಯೋಗ, ಮನೆ, ಗಂಡ-ಹೆಂಡತಿ ಮಕ್ಕಳು- ಇವುಗಳ ಕುರಿತು ಅತ್ಯಂತ ಆಪ್ತವಾಗಿ ಮಾತನಾಡುತ್ತಾರೆ.

 

ಒಬ್ಬ ಮಹಾನ್ ಜನಪ್ರಿಯ, ಪ್ರತಿಭಾವಂತ ನಟನೆದುರಿಗೆ ಕುಳಿತಿದ್ದೇನೆ ಎಂಬ ಕಸಿವಿಸಿ, ಮುಜುಗರವನ್ನು ಎದುರಿಗೆ ಕೂತ ಸ್ಪರ್ಧಿಯಲ್ಲಿ ಕಿಂಚಿತ್ತೂ ಸೃಷ್ಟಿಸುವುದಿಲ್ಲ. ಈ ಗುಣಗಳನ್ನು ಪುನೀತ್ ಅಮಿತಾಭ್ ಅವರಿಂದಲೇ ಕಲಿತಿರಬೇಕು.ತಮ್ಮ ತಂದೆ-ತಾಯಿ ಹಾಗೂ ಅಣ್ಣಂದಿರ ಕುರಿತು ಮಾತನಾಡುವಾಗಲೂ ಅವರ ಮಾತುಗಳು ಪ್ರೀತಿ, ಗೌರವ, ಅಭಿಮಾನ, ವಿನಯದ ಲೇಪ ತೊಟ್ಟೇ ಹೊಮ್ಮುತ್ತವೆ. ಹೆಂಡತಿ-ಮಕ್ಕಳ ಕುರಿತಾಗಿಯೂ ಅಷ್ಟೇ. ಈಗ ಹಾಡುತ್ತಾರೆ, ಈಗ ಕುಣಿಯುತ್ತಾರೆ, ಮತ್ತೊಂದು ಕ್ಷಣ ಸಹನಟರನ್ನು ಅನುಕರಣೆ ಮಾಡಿ ಜನರನ್ನು ರಂಜಿಸುತ್ತಾರೆ.ಸ್ಪರ್ಧಿಗಳು ತಪ್ಪು ಉತ್ತರಗಳನ್ನು ಕೊಟ್ಟಾಗ, `ಇಂಥ ಸರಳ ಪ್ರಶ್ನೆಗೆ ಉತ್ತರ ಗೊತ್ತಿಲ್ಲವೇ~ ಎಂಬ ಮುಖಭಾವ ಪ್ರದರ್ಶಿಸದೇ, `ಎಂಥ ದುರದೃಷ್ಟ, ತಪ್ಪಾಯಿತಲ್ಲ~ ಎಂಬ ವಿಷಾದದಲ್ಲಿ ಹೇಳುತ್ತಾರೆ.

 

ಒಂದು ಮಾತಿನಲ್ಲಿ ಹೇಳುವುದಾದರೆ, ಈ `ಕೋಟ್ಯಾಧಿಪತಿ~ಯ ಕಾರ್ಯಕ್ರಮ ಹಲವು ರೀತಿಗಳಲ್ಲಿ ಆಕರ್ಷಕವಾಗಿರುವುದು ಎಷ್ಟು ನಿಜವೋ, ಪುನೀತ್ ರಾಜ್‌ಕುಮಾರ್ ಸಾರಥ್ಯ ಅತ್ಯಂತ ಶ್ಲಾಘನೀಯವೂ, ಅಭಿನಂದನಾರ್ಹವೂ ಆಗಿದೆ ಎಂಬುದೂ ಅಷ್ಟೇ ನಿಜ.ಈ ಕಾರ್ಯಕ್ರಮದಲ್ಲಿ ನನಗಿಷ್ಟವಾದ ಮತ್ತೊಂದು ಸಂಗತಿ, ಭಾಗವಹಿಸುವವರು ಎಲ್ಲ ವರ್ಗಗಳಿಂದ, ಎಲ್ಲ ಕೋಮುಗಳ, ಎಲ್ಲ ವಯಸ್ಸುಗಳ ಮತ್ತು ಎಲ್ಲ ಜಿಲ್ಲೆ ತಾಲ್ಲೂಕುಗಳಿಂದ ಬಂದವರಾಗಿದ್ದಾರೆ. ಇದು ಮುಂದುವರೆಯಬೇಕು ಎನ್ನುವುದು ನನ್ನ ಅಪೇಕ್ಷೆ.ಇಷ್ಟು ಹೇಳಿದ ಮೇಲೆ ಭಾಗವಹಿಸುವವರಿಗೆ ಒಂದು ಮಾತು ಹೇಳಲೇಬೇಕೆನಿಸುತ್ತದೆ. ವಾರದ ನಾಲ್ಕು ದಿನಗಳಲ್ಲಿ, ದಿನಕ್ಕೆ ಒಂದೂವರೆ ತಾಸಿನಂತೆ ಒಟ್ಟು ಆರು ಗಂಟೆಗಳ ಈ ಕಾರ್ಯಕ್ರಮದಲ್ಲಿ ಹತ್ತು ಜನ ಇರುತ್ತಾರೆ. ಪ್ರತಿಯೊಬ್ಬರಿಗೂ `ಹಾಟ್ ಸೀಟ್~ಗೆ ಬರುವ ಕಾತರ ಇದ್ದೇ ಇರುತ್ತದೆ.ಹೀಗಿರುವಾಗ ಆಯ್ಕೆಯಾಗಿ ಬಂದ ಸ್ಪರ್ಧಿ ತನಗೇ ತಾನು ವಿಧಿಸಿಕೊಳ್ಳಬೇಕಾದ ಒಂದು ಶಿಸ್ತಿದೆ. `ನಾನು ನನ್ನ ಅಚ್ಚುಮೆಚ್ಚಿನ ನಟನ ಎದುರಿಗೆ ಕೂತ ಈ ಅವಕಾಶವನ್ನು ಆದಷ್ಟು ಬಳಸಿಕೊಂಡುಬಿಡಬೇಕು~ ಎಂಬ ಬಯಕೆಯಲ್ಲಿ ವೀಕ್ಷಕರ ಸಹನೆ ಪರೀಕ್ಷಿಸುವಷ್ಟು ಪುನೀತರೊಡನೆ ಹರಟುವುದು, ಅವರನ್ನೇ ಪ್ರಶ್ನೆ ಕೇಳುತ್ತಿರುವುದು, ತೀರ ಅಪ್ರಸ್ತುತ ವಿಷಯಗಳ ಚರ್ಚೆ ಮಾಡುವುದು ತಪ್ಪಾಗುತ್ತದೆ.

 

ಮಾತನಾಡಲೇಬಾರದು, ಏನೂ ಪ್ರಶ್ನೆ ಕೇಳಬಾರದು, ಹಾಡಬಾರದು, ಕುಣಿಯಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಮಿತಿಯಿರಬೇಕು. `ನನ್ನ ಹಾಗೆ ಬೇರೆಯವರು ಕಾದಿದ್ದಾರೆ~ ಎಂಬ ಪ್ರಜ್ಞೆ ನಮ್ಮಲ್ಲಿ ಜಾಗ್ರತವಾಗಿರಬೇಕು.

 

ಹೀಗೆ ಸ್ಪರ್ಧಿಗಳನ್ನು ನಿಯಂತ್ರಿಸುವುದನ್ನು ಪುನೀತರು ಮಾಡಲು ಸಾಧ್ಯವಿಲ್ಲ. ಅದು ಸೌಜನ್ಯವೂ ಅಲ್ಲ ಸಜ್ಜನಿಕೆಯೂ ಅಲ್ಲ. ಹಾಗಾಗಿ, ಸ್ಪರ್ಧಿಗಳು ತಮಗೆ ತಾವೇ ಲಕ್ಷ್ಮಣರೇಖೆ ಹಾಕಿಕೊಳ್ಳಬೇಕಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.