ಶನಿವಾರ, ಮೇ 15, 2021
25 °C

`ಅನಿವಾಸಿ ಕನ್ನಡಿಗರಿಗೆ ವೇದಿಕೆ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲ್ಡೀವ್ಸ್: ಅನಿವಾಸಿ ಕನ್ನಡಿಗರು ರಾಜ್ಯದ ಕೆನೆ ಪದರವಿದ್ದಂತೆ. ಅವರೊಂದಿಗೆ ಕೊಡುಕೊಳ್ಳುವಿಕೆ ಸಮರ್ಪಕವಾಗಿದ್ದರೆ ಕರ್ನಾಟಕದ ಪ್ರಗತಿಗೆ ಸಹಾಯವಾಗುತ್ತದೆ ಎಂದು ಮಾಲ್ಡೀವ್ಸ್ ಕನ್ನಡ ಬಳಗದ ಪ್ರಥಮ ವಾರ್ಷಿಕೋತ್ಸವ ಮತ್ತು `ಸಾಂಸ್ಕೃತಿಕ ಸೌರಭ' ಜಂಟಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಿತಿಯ ಅಧ್ಯಕ್ಷ ಇಂ.ಕೆ.ಪಿ. ಮಂಜುನಾಥ್ ಸಾಗರ್ ಹೇಳಿದರು.ಈ ಕಾರ್ಯಕ್ರಮ ಮಾಲೆ ಸಮೀಪದ ಬಾಂಡೋಸ್ ದ್ವೀಪದ ರೆಜಾರ್ಟಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. `ವಿದೇಶಗಳಲ್ಲಿ ವಂಚನೆಗೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿರುವ ಕನ್ನಡಿಗರಿಗೆ ಸರಿಯಾದ ಮಾಹಿತಿ ಮತ್ತು ಸಹಾಯಹಸ್ತ ನೀಡುವ ಸಶಕ್ತ ವೇದಿಕೆ ಮಾಲ್ಡೀವ್ಸ್ ಕನ್ನಡ ಬಳಗ ಆಗಬೇಕು' ಎಂದು ಅವರು ಹೇಳಿದರು.ಮುಖ್ಯ ಅತಿಥಿ ಭಾರತ ರಾಯಭಾರಿ ಕಚೇರಿಯ ಸಾಂಸ್ಕೃತಿಕ ವಿಭಾಗದ ಅಧಿಕಾರಿ ಪ್ರವಾಸ್‌ಮಿಶ್ರಾ ಅವರು `ಕನ್ನಡಿಗರು ಸ್ನೇಹಶೀಲರು ಮತ್ತು ಸಂಘಟನಾಶೀಲರು. ಮುಂದಿನ ವರ್ಷ ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ಮಾಲ್ಡೀವ್ಸ್‌ನ ಭಾರತ ರಾಯಭಾರ ಕಚೇರಿ ಸಂಪೂರ್ಣ ಸಹಕಾರ ನೀಡಲಿದೆ' ಎಂದರು.ಇನ್ನೊಬ್ಬ ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿಯವರು `ವಿಶ್ವಮಟ್ಟದಲ್ಲಿ ಕನ್ನಡಿಗರನ್ನು ಒಂದು ಸೂರಿನಡಿ ತರುವ ಪ್ರಯತ್ನಕ್ಕೆ ಈ ಕಾರ್ಯಕ್ರಮವೂ ಒಂದು ಕೊಡುಗೆಯಾಗಲಿದೆ. ಸಾಹಿತ್ಯ ಪರಿಷತ್ತಿನ ಮುಂಬರುವ ವಿಶೇಷ ಕಾರ್ಯಕ್ರಮಗಳಿಗೆ ಮಾಲ್ಡೀವ್ಸ್‌ನ ಕನ್ನಡಿಗರನ್ನು ಆಮಂತ್ರಿಸಲಾಗುವುದು' ಎಂದರು.ಉ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೋಹಿದಾಸ್ ನಾಯಕ್ ಅವರು ಮಾತನಾಡಿ ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಸೌಹಾರ್ದತೆಗೆ ಪೂರಕವಾದ ಬಹುಮುಖ್ಯ ಅಂಶಗಳು. ದ್ವೀಪ ಗುಚ್ಛ ರಾಷ್ಟ್ರವಾದ ಮಾಲ್ಡೀವ್ಸ್‌ನಲ್ಲಿ ಇಂಥ ಒಂದು ಕಾರ್ಯಕ್ರಮದ ಅನಾವರಣ ಸಾಹಸ ಪ್ರವೃತ್ತಿಯವರಿಗೆ ಮಾತ್ರ ಸಾಧ್ಯ. ಹಾಗಾಗಿ ಸಂಘಟಕರನ್ನು ಅಭಿನಂದಿಸಬೇಕು ಎಂದರು.ಮಾಲ್ಡೀವ್ಸ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಬಸವರಾಜ್ ಮಾತನಾಡಿದರು. ಗೌರವಾಧ್ಯಕ್ಷರಾದ ಡಾ. ಪ್ರವೀಣ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಳಗದ ಉಪಾಧ್ಯಕ್ಷ ಪ್ರವೀಣ್ ಕುಲಕರ್ಣಿ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದರು.ಮೈಸೂರಿನ `ಕುಮಾರ್ ಪರ್ಫಾಮಿಂಗ್ ಆರ್ಟ್ಸ್' ವತಿಯಿಂದ ಭರತನಾಟ್ಯ ಕಾರ್ಯಕ್ರಮ ಮತ್ತು ಬೆಂಗಳೂರಿನ ವಿದ್ವಾಂಸ ಅನಂತರಾಂ ಅವರಿಂದ ಕೊಳಲುವಾದನ ಮತ್ತು ಗೊ. ನಾ. ಸ್ವಾಮಿಯವರಿಂದ ಜಾನಪದ ಗೀತೆ ಕಾರ್ಯಕ್ರಮಗಳು ನಡೆದವು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಈ. ಆಂಜನೇಯ ರಾಯಚೂರು, ಕೆ.ಪಿ. ಶಾಂತಕುಮಾರ್, ಚಾಮರಾಜನಗರ, ರಹೀಂ ಉಚ್ಚಿಲ್, ಮಂಗಳೂರು, ಮೊಹಮ್ಮದ್ ಮುನೀರ್, ಮಂಗಳೂರು ಮತ್ತು ಯಶೋಧ, ಮೈಸೂರು ಇವರಿಗೆ ವರ್ಷದ ವ್ಯಕ್ತಿ-2013 ಗೌರವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.ಹಿರಿಯ ಸಾಹಿತಿ ಬಿಂಡಿಗನವಿಲೆ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.