ಭಾನುವಾರ, ಜೂನ್ 20, 2021
28 °C

ಅನಿಷ್ಟಕ್ಕೆಲ್ಲಾ ಒಂದೇ ವರ್ಗದವರನ್ನು ಹೊಣೆಯಾಗಿಸಿದರೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 2ರಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳು ಕಾನೂನು ಪಾಲಿಸುವ ಯಾವುದೇ ನಾಗರಿಕನನ್ನು ಘಾಸಿಗೊಳಿಸುವಂಥವು. ಅಂಥವರ ಕ್ಯಾಲೆಂಡರ್‌ನಲ್ಲಿ ಅದು ಕಪ್ಪುದಿನ.

 

ಆ ಘಟನಾವಳಿಗಳ ನಂತರದ ಬೆಳವಣಿಗೆಯಂತೂ ನಾಗರಿಕ ಸಮಾಜದ ಪ್ರಮುಖ ಸ್ತಂಭಗಳಾದ ಪೊಲೀಸ್, ಮಾಧ್ಯಮ ಹಾಗೂ ನ್ಯಾಯಿಕ ಸಮುದಾಯದವರ ಕುರಿತ ನಂಬಿಕೆಯನ್ನೇ ಅಲ್ಲಾಡಿಸಿತು. ಕಾನೂನು ಕಾಪಾಡಲೆಂದು ಇರುವ ಸಮುದಾಯದವರಲ್ಲೇ ಈಗ ಒಡಕು.

 

`ನಾವು, ಅವರು~ ಎಂಬ ಧೋರಣೆ. ಇದರಿಂದ ಟ್ರಯಲ್ ಕೋರ್ಟ್ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ನಡುವೆಯೂ ಬಿರುಕು ಮೂಡಿದೆ. ಜೂನಿಯರ್ಸ್‌, ಸೀನಿಯರ್ಸ್‌ ಎಂಬ ಇನ್ನೊಂದು ಬಿರುಕೂ ಎದ್ದು ಕಾಣುತ್ತಿದೆ. ಕೆಲವು ಪ್ರಕರಣಗಳಲ್ಲಿ ವಕೀಲರು, ನ್ಯಾಯಮೂರ್ತಿಗಳು ಎಂಬ ಭೇದವೂ ಕಾಣುತ್ತಿದೆ.ಇದು ನಮ್ಮ ಪಾಲಿಗೆ ಆತ್ಮಾನುಸಂಧಾನದ ಸಮಯ, ಹೌದು. ಆದರೆ, ಇತರರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ನಾವು ಬಯಸುವುದೂ ತರವೇ. ವಕೀಲರು ಅನಿರ್ದಿಷ್ಟ ಅವಧಿಯವರೆಗೆ ಕೋರ್ಟಿಗೆ ಹಾಜರಾಗದ ನಿರ್ಧಾರ ಸಮರ್ಥನೀಯವಲ್ಲ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಅವರು ಹೀಗೆ ಮಾಡಲು ಕಾರಣವಿದೆ.ತಮ್ಮದಲ್ಲದ ತಪ್ಪಿಗೆ ಅವರಲ್ಲಿ ಒದೆ ತಿಂದು, ನೋವು ಅನುಭವಿಸಿದವರಿದ್ದಾರೆ. ಕೋರ್ಟ್‌ಗೆ ನಿತ್ಯವೂ ಹಾಜರಾಗುವ ವಕೀಲನಿಗೆ ಗಲಾಟೆ ಮಾಡುವ ಉದ್ದೇಶ ಇರುವುದಿಲ್ಲ. ಜನರನ್ನು ನಿಂದಿಸುವುದು, ಹೊಡೆಯುವುದು ಕೂಡ ಗುರಿಯೇನೂ ಅಲ್ಲ.ವಕೀಲರು ತಮ್ಮ ಬಹುಪಾಲು ಅವಧಿಯಲ್ಲಿ ಅಥವಾ ನಿರಂತರವಾಗಿ ತಮ್ಮ ಕಕ್ಷಿದಾರರಿಗೆ ನ್ಯಾಯ ದಕ್ಕಿಸಿಕೊಡಲು ಶ್ರಮಿಸುತ್ತಾರೆ. ಶ್ರದ್ಧೆಯಿಂದ ಈ ಕೆಲಸ ಮಾಡುತ್ತಾ ಬಂದಿರುವ ವಕೀಲರು ಆ ದಿನ ಗಲಾಟೆ ನಡೆದ ಸ್ಥಳದಲ್ಲಿ ಇದ್ದದ್ದೇ ತಪ್ಪಾಯಿತು. ಇದು ನಗುವ ವಿಷಯವಲ್ಲ, ಪರಿಹಾರ ಕಂಡುಕೊಳ್ಳಬೇಕಾದ ಗಂಭೀರ ವಿಷಯ.ಮನುಷ್ಯ ಸುಳ್ಳು ಹೇಳಬಹುದು, ಆದರೆ ಲಭ್ಯ ಚಿತ್ರಗಳು ಸುಳ್ಳಲ್ಲ. ಮೊಬೈಲ್‌ನಿಂದ ತೆಗೆದ ಸಣ್ಣ ಸಣ್ಣ ವಿಡಿಯೊಗಳ ಸರಣಿ ತುಣುಕುಗಳು, ಚಿತ್ರಗಳೇ ಕೋರ್ಟ್ ಆವರಣದಲ್ಲಿ ಮುಗ್ಧರ ಮೇಲೆ ಎಂಥ ಅಮಾನವೀಯ ಹಲ್ಲೆ ನಡೆದಿದೆ ಎಂಬುದನ್ನು ಸಾಬೀತುಪಡಿಸುತ್ತವೆ.

 

ತಮ್ಮ ಸೀನಿಯರ್‌ಗಳಿಗೆ ಕೇಸ್‌ಗಳಲ್ಲಿ ಸಹಕರಿಸಲೆಂದು ಹೋದ ಜೂನಿಯರ್ ವಕೀಲರು ಬಹುತೇಕ ಚಿತ್ರಗಳನ್ನು, ವಿಡಿಯೋಗಳನ್ನು ತೆಗೆದಿದ್ದಾರೆ. ದಾಳಿಯಿಂದ ಕೆಲವು ವಕೀಲರ ತಲೆಗೆ ಗಂಭೀರ ಪೆಟ್ಟಾಯಿತು. ಇನ್ನು ಕೆಲವರ ಮೋಟಾರ್ ಬೈಕ್‌ಗಳು- ಕಾರುಗಳು ಸುಟ್ಟುಹೋದವು.

 

ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಮೇಲೆಯೇ ಕೈಮಾಡಲಾಯಿತು. ಬಹುತೇಕ ಮಾಧ್ಯಮಗಳಿಗೆ ಇದು ಪ್ರಕಟಣೆಗೆ ಅರ್ಹವಾದ ಸುದ್ದಿ ಎನ್ನಿಸಲೇ ಇಲ್ಲ. ಆದರ್ಶ ಇಟ್ಟುಕೊಂಡ ಯುವ ವಕೀಲರಿಗಂತೂ ಈ ಘಟನೆ ದೊಡ್ಡ ಪೆಟ್ಟು ಕೊಟ್ಟಿತು.

 

ನಮ್ಮ ವ್ಯವಸ್ಥೆಯ ಮೇಲೆ ಅವರಿಗೆ ನಂಬಿಕೆಯೇ ಇಲ್ಲವಾಗಿದ್ದರೂ ಅಚ್ಚರಿಯಿಲ್ಲ. ದುರಂತ, ವಿರೋಧಾಭಾಸಗಳನ್ನು ಕಂಡು ಇಡೀ ಕಾನೂನು ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿರುವ ಸಾಧ್ಯತೆಯೂ ಇದೆ.ಸಮಾಜದ ವಿವಿಧ ಕ್ಷೇತ್ರಗಳ ಜನ ತಾವಾಗಿಯೇ ನ್ಯಾಯಿಕ ಸಮುದಾಯದ ಕುರಿತು ನೈತಿಕ ತೀರ್ಪು ಕೊಡುತ್ತಿರುವುದು ವ್ಯಂಗ್ಯ. ನ್ಯಾಯಾಂಗ ವ್ಯವಸ್ಥೆಯೂ ಸುಧಾರಣೆಗೆ ಹೊರತಾದುದಲ್ಲವೆಂಬುದು ನಿಜವಾದರೂ, ಮಾರ್ಚ್ 2ರ ಘಟನಾವಳಿಗಳಲ್ಲಿ ಅರ್ಧ ಸತ್ಯವನ್ನೇ ವಾಸ್ತವ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ.ಇದರಿಂದ ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ. ಕಲ್ಲೆಸೆದ ವಕೀಲರನ್ನು ತೋರಿಸಿದ ಮಾಧ್ಯಮಗಳು ತಮ್ಮ ಕ್ಷೇತ್ರದವರೇ ತಪ್ಪಾಗಿ ವರ್ತಿಸಿದ್ದನ್ನು ಮುಚ್ಚಿ ಹಾಕಿಬಿಟ್ಟವು. ಸಾಮಾನ್ಯವಾಗಿ ಪೊಲೀಸರ ಹಿಂದೆ ಸಂತೋಷದಿಂದ ಹಿಂದೆ ಬೀಳುವ ವಿದ್ಯುನ್ಮಾನ ಮಾಧ್ಯಮ ಕೂಡ ಈ ಸಲ ಅವರಿಂದ ಮುಗ್ಧ ವಕೀಲರಿಗಾದ ತೊಂದರೆಗಳ ಚಿತ್ರಣವನ್ನು ತೋರಿಸಲೇ ಇಲ್ಲ.ಇಂಥ ವರದಿಗಳನ್ನು ಓದಿಯೋ, ನೋಡಿಯೋ ಸಾಮಾನ್ಯ ಜನ ವಕೀಲರನ್ನು ವಿರೋಧಿಸಲಾರಂಭಿಸಿದ್ದಾರೆ. ಕರ್ನಾಟಕ ಮಾಧ್ಯಮದ ಕೆಲವರು ನ್ಯಾಯಾಂಗದ ಮಹತ್ವದ ಕೊಡುಗೆಗಳನ್ನು ಮರೆತಂತಿದೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಬಿದ್ದಿತು.

 

ಅದರ ವಿರುದ್ಧ ಹೋರಾಡಿದ ಎಂ.ಸಿ. ಚಾಗ್ಲಾ ನ್ಯಾಯಾಂಗದವರು. ಪೊಲೀಸ್ ಪಡೆಗೆ ಸುಧಾರಣೆಯ ಅಗತ್ಯವಿದ್ದಾಗ, ಅದಕ್ಕೆ ಪುಷ್ಟಿ ಕೊಟ್ಟಿದ್ದು ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಪೊಲೀಸ್, ನ್ಯಾಯಾಂಗ ಹಾಗೂ ಮಾಧ್ಯಮ ಮೂರೂ ಕ್ಷೇತ್ರಗಳಿಗೆ ನ್ಯಾಯ ದಕ್ಕಿಸಿಕೊಡುವ ಜವಾಬ್ದಾರಿ ಇರುತ್ತದೆ.ಅದರಲ್ಲೂ `ಕ್ರಿಮಿನಲ್ ನ್ಯಾಯ~ದ ವಿಷಯದಲ್ಲಿ ಮೂರೂ ಕ್ಷೇತ್ರಗಳ ಪಾತ್ರ ಹಿರಿದು. ಹಾಗಾಗಿ ಮೂರೂ ಕ್ಷೇತ್ರಗಳವರು ಪಕ್ಷಪಾತಿಗಳಾಗುವುದಾಗಲಿ, ಸೇಡು ತೀರಿಸಿಕೊಳ್ಳಬೇಕೆಂಬ ಭಾವನೆ ಮೂಡಿಸಿಕೊಳ್ಳುವುದಾಗಲಿ ಸಲ್ಲದು. ಗಾಳಿಯಲ್ಲಿ ಬೆಂಕಿಯನ್ನು ಕೆದಕುವವರು ಬಿರುಗಾಳಿ ಬೀಸಿದರೆ ಬೆಂಕಿಯ ಕೆನ್ನಾಲಗೆ ಎಲ್ಲಿಯವರೆಗೆ ಚಾಚೀತು ಎಂದು ಯೋಚಿಸಬೇಕು.

 

ರಾಜಕೀಯ ವರ್ಗ ಕೂಡ ಕಾನೂನು ಪಾಲನೆಯು ಸಮಾಜದ ವಿವಿಧ ಅಂಗಗಳನ್ನು ಅವಲಂಬಿಸಿದೆ ಎಂಬುದನ್ನು ಮನಗಾಣಬೇಕು. ಇಡೀ ನ್ಯಾಯಾಂಗ ವ್ಯವಸ್ಥೆಯ ಎಲ್ಲರನ್ನೂ ಏಕಪ್ರಕಾರದಲ್ಲಿ ಟೀಕಿಸುತ್ತಾ ಹೋದರೆ ಅದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯೇ ಇಲ್ಲವಾಗಿ ಬಿಡುವ ಆತಂಕ ಸೃಷ್ಟಿಯಾಗುತ್ತದೆ.

 

ಪಾಕಿಸ್ತಾನ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ನಿವೃತ್ತ ಅಧ್ಯಕ್ಷರಾದ ಐತ್‌ಜಾಜ್ ಎಹ್ಸಾನ್ ಭಾರತ ಪ್ರಜಾಪ್ರಭುತ್ವದಲ್ಲಿನ ನ್ಯಾಯಿಕ ವ್ಯವಸ್ಥೆಯನ್ನು ಮಾದರಿ ಎಂದು ಶ್ಲಾಘಿಸಿದ್ದಾರೆ. ವಕೀಲರು ದೇಶ ನಿರ್ಮಾತೃಗಳು.ನಾವು, ನ್ಯಾಯಿಕ ಸಮುದಾಯದವರು ನ್ಯಾಯಾಂಗ ವ್ಯವಸ್ಥೆಯ ಗತವೈಭವ ಮರಳುವಂತೆ ಮಾಡಬೇಕು. ನಾಗರಿಕರ ಒಂದಿಷ್ಟು ಸಹಾಯದಿಂದ ಶಂಕೆಯನ್ನು ತಗ್ಗಿಸಿಕೊಂಡು, ವಿವೇಚನಾಶಕ್ತಿಯನ್ನು ಹಿಗ್ಗಿಸಿಕೊಂಡು ಅಪಾಯದ ಸಂದರ್ಭಗಳನ್ನು ಅರಿತು ತ್ಯಾಗಕ್ಕೆ ಸಿದ್ಧರಾಗಬೇಕು. ಅನಿಷ್ಟಕ್ಕೆಲ್ಲಾ ಒಂದೇ ವರ್ಗದವರನ್ನು ಹೊಣೆಯಾಗಿಸುವವರಿಗೆ ಮುಂದೆ ಎಂದಾದರೂ ಜ್ಞಾನೋದಯವಾಗುತ್ತದೆಯಾ? ನೋಡೋಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.